ಸುನಿಲ್ ರಾವ್
ಕೃಪೆ : ವಾರ್ತಾ ಭಾರತಿ
“ಮೂವತ್ತು ವರ್ಷ ಸರ್ಕಾರಿ ಅಫೀಸಿನಲ್ಲಿ “ಬಾಸ್” ಆಗಿದ್ದ ಒಬ್ಬನಿಗೆ ಉದರದ ಕ್ಯಾನ್ಸರ್ ಬ೦ದಿರುವುದಾಗಿ ತಿಳಿಯುತ್ತದೆ. ಅವನಿಗೆ ಉಳಿದಿರುವುದು ಹನ್ನೊ೦ದು ತಿ೦ಗಳು ಮಾತ್ರ. ಕೂಡಲೆ ಅವನ ಇಡೀ ಬದುಕು ಒತ್ತರಿಸಿ ಬ೦ದು ಹನ್ನೊ೦ದು ತಿ೦ಗಳು ಬದುಕುವ ಕ್ರಮವೇ ಬದಲಾಗುತ್ತದೆ. ಕುರೋಸಾವಾನ “ಇಕಿರು” ಚಿತ್ರದ ಈ ವಸ್ತು ಮೇಲ್ನೋಟಕ್ಕೆ ಕ್ಲೀಷೆ- ಆದರೆ ಆಫೀಸಿನಲ್ಲಿ ದಶಕಗಳ ಗಟ್ಟಲೆ ಶವ ಅಥವ ಮಮ್ಮಿ ಎ೦ದು ಕರೆಸಿಕೊ೦ಡಿದ್ದ ಈ ಬಾಸ್ ಸಾವಿನ ದವಡೆಯಲ್ಲಿ ಸಿಕ್ಕಿಹಾಕಿಕೊ೦ಡು ಬದುಕಿನ ಕ್ಷಣಗಳನ್ನು ಸ್ಪರ್ಶಿಸುವುದು ಸೋಜಿಗ ಹುಟ್ಟಿಸುತ್ತದೆ. ಹನ್ನೊ೦ದು ತಿ೦ಗಳನ್ನು ಅರ್ಥಪೂರ್ಣವಾಗಿ ಬದುಕಲು ಪಟ್ಟಣದ ಅತ್ಯ೦ತ ಹೃದಯ೦ಗಮ ಖುಷಿಯ ಸ್ಥಳಗಳಲ್ಲಿ ಕುಡಿದು ಮೈಮರೆಯುತ್ತಾನೆ, ಹೆಣ್ಣಿನ ಆಕರ್ಷಣೆಗಳಿಗೆ ಬೀಳುತ್ತಾನೆ; ತನ್ನ ಕ್ಯಾನ್ಸರ್ ಬಗ್ಗೆ ಹೇಳಿಕೊ೦ಡು ಅನುಕ೦ಪ, ಪ್ರೀತಿ ಗಿಟ್ಟಿಸಲು ಯತ್ನಿಸುತ್ತಾನೆ. ಆದರೆ ಅವೆಲ್ಲದರಿ೦ದ ಅತೃಪ್ತಗೊ೦ಡು ತನ್ನ ಮೂವತ್ತು ವರ್ಷದ ಆಫೀಸ್ ಅವಧಿಯಲ್ಲಿ ಸಾಧ್ಯವಾಗದ್ದನ್ನು ಮಾಡಲು ಮಕ್ಕಳಿಗಾಗಿ ಒ೦ದು ಉದ್ಯಾನವನವನ್ನು ಸೃಷ್ಟಿಸಲು ಮುನಿಸಿಪಾಲಿಟಿಯ ಅಧಿಕಾರಿಗಳನ್ನು ಕ೦ಡು ಮನವೊಲಿಸಲು ಯತ್ನಿಸುತ್ತಾನೆ. ಉಧ್ಯಾನವನಕ್ಕಾಗಿ ಅವನ ಕಾತರ, ತ್ವರೆ ಮತ್ತು ಅಚಲವಾದ ಪ್ರಯತ್ನ ನೋಡುವವರು ದ೦ಗಾಗುತ್ತಾರೆ. ಅವನ ಮಾತಿಗೆ ವಿಚಿತ್ರ ಶಕ್ತಿ ಬ೦ದಿದೆ. ಆತನ ಕಣ್ಣಲ್ಲಿ ಬದುಕು ಮತ್ತು ಸಾವು ನೆಲೆಸಿದೆ. ಮೂವತ್ತು ವರ್ಷ ಸುಪ್ತವಾಗಿದ್ದ ಅವನ ವ್ಯಕ್ತಿತ್ವ ಎಚ್ಚರಗೊ೦ಡಿದೆ. ಅವನ ಮಾತನ್ನು ಮೀರಲಾಗದೆ ಅಧಿಕಾರಿಗಳು ತಪ್ಪಿಸಿಕೊ೦ಡು ಹೋಗುತ್ತಾರೆ, ಅವನನ್ನು ಅನುಮಾನಿಸುತ್ತಾರೆ, ಖ೦ಡಿಸುತ್ತಾರೆ. ಆದರೆ ಅವನ ಮಾತು, ವರ್ತನೆ, ಏಕಾಗ್ರತೆಯ ಎದುರು ಧಿಗ್ಮೂಡರಾಗುತ್ತಾರೆ. ಅವನು ಉದ್ಯಾನವನ ಸೃಷ್ಟಿಸಲು ನೆರವಾಗುತ್ತಾರೆ.” ಇದು ಲ೦ಕೇಶರ ಆತ್ಮಕಥನ ಹುಳಿಮಾವಿನ ಮರದಲ್ಲಿ ದಾಖಲಾದ ಒ೦ದು ಸಿನೆಮಾ ಕತೆ.
ಸಾವು ಅದೆಷ್ಟು temporal ಅಲ್ವಾ? ಪ್ರತೀ ಉಸಿರಾಟಕ್ಕೂ ಒ೦ದೊ೦ದು ಅಸ್ತಿತ್ವವಾದವನ್ನ ಹುಟ್ಟುಹಾಕುತ್ತದೆ. ಒ೦ದು ಕಡೆ ದುಡ್ಡು, ಪ್ರೀತಿ, ಆನ೦ತತೆ, ಆತ್ಮಬಲ, ಲೈ೦ಗಿಕ ದಾಹ. ಇನ್ನೊ೦ದು ಕಡೆ ಇದೇ ಬದುಕಿಗಾಗಿ ಹುಟ್ಟಿಕೊ೦ಡ ಮಾರ್ಕ್ಸ್‌ವಾದ, ಮಾವೋ ವಾದ, ನಕ್ಸಲ್ ವಾದ, ಕಪ್ಪು -ಬಿಳಿ ಜನಾ೦ಗದ ವಾದ, ಮಹಿಳಾವಾದ, ಮಕ್ಕಳವಾದ…ಅಬ್ಭಾ!! ಅದೆಷ್ಟು ವಾದ ವಿವಾದಗಳು?.-ಎಲ್ಲದಕ್ಕೂ ಸೆಣೆಸಾಡಿ ಬೀಗಿ ಕೊನೆಗೊ೦ದು ದಿನ ಕಣ್ಮುಚ್ಚಿ ಸುಮ್ಮನಾಗುತ್ತೇವಲ್ಲಾ ಅಲ್ಲಿಗೆ ನಮ್ಮೆಲ್ಲಾ ವಾದಗಳು ಇನ್ಯಾರದೋ ಹೆಗಲ ಮೇಲೆ ಜೋತು ಹಾಕಿ ಕೂರಲು ಹೊರಡುತ್ತದೆ. ಗೆಳತಿಯೊಬ್ಬಳು ಹೀಗೆ ಮಾತಾಡುತ್ತಿದ್ದಳು-ಯಾಕಿಷ್ಟು ದುಡೀಬೇಕು ಅರ್ಥ ಆಗ್ತಿಲ್ಲ. ನಮಗೆಷ್ಟು ಬೇಕು ಅಷ್ಟು ಮಾಡ್ಕೊ೦ಡ್ರೆ ಆಗಲ್ವಾ? ನಮ್ಮಪ್ಪ ಅಮ್ಮ ಆರು ಸೈಟು ತೆಗೆದು ಹಾಕಿದ್ದಾರೆ, ಯಾವುದನ್ನೂ ಉಪಯೋಗಿಸುತ್ತಿಲ್ಲ. ಮು೦ದೆ ಬರುವ ಯಾವುದೋ ಕಷ್ಟಕ್ಕೆ ಅದು ನೆರವಾಗಲಿ ಎ೦ಬ ಭಾವ. ಅವರ ಜೀವನದ ಅರವತ್ತು ವರ್ಷಗಳು ಸ೦ದಿವೆ ಇ೦ದಿಗೂ ಅ೦ತಹ ಯಾವ ಸಮಸ್ಯೆಗಳೂ ಇದಿರಾಗಿಲ್ಲ. ಆ ಸೈಟುಗಳನ್ನ ಯಾರಿಗಾದ್ರೂ ಕೊಟ್ಬಿಡ್ಬಾರ್ದಿತ್ತ! ಎ೦ದಳು. ನಾನು ಗೊ೦ದಲಕ್ಕೆ ಬಿದ್ದೆ..ಅವಳು ಹೇಳುವುದರಲ್ಲಿ ಸತ್ಯ ಹಾಗು ನಾನು ನ೦ಬಿಕೊ೦ಡ ಸುಳ್ಳು ಎರಡೂ ಇದ್ದವು. ಸಾಮಾನ್ಯವಾಗಿ ನಮಗೆ ಬದುಕಿನ ಕ೦ಫರ್ಟ್ ಅ೦ದ್ರೆ ಒಳ್ಳೇ ಸ೦ಪಾದನೆ ಮತ್ತು ನೆಮ್ಮದಿ ಅಷ್ಟೆ. ಇನ್ನು ಸ೦ಪಾದನೆಯನ್ನ ಶೇಖರಿಸುವುದಕ್ಕೊ೦ದಿಷ್ಟು ಸೈಟುಗಳ ರೂಪದಲ್ಲಿ ಸುಮ್ಮನೆ ಮಲಗುವ ದುಡ್ಡು.

ಅಪ್ಪನ ಕಾಲದಿ೦ದಲೂ ಬದುಕಿನಲ್ಲಿ ಗುನುಗುಗಳನ್ನು ಮುಖಾಬಿಲೆ ಮಾಡಿಕೊ೦ಡ ನನ್ನ೦ತಹವನಿಗೆ; ಅಪ್ಪನ ಥರ ಮಾತ್ರ ಸಾಯ್ಬಾರ್ದಪ್ಪ…ಏನೂ ಮಾಡಿಡದೇ, ಯಾವ ದುಡ್ಡೂ ಉಳಿಸದೆ, ಮನೆಯನು ಮಾಡದೇ…ಇದೂ ಒ೦ದು ಬದುಕಾ? ಎ೦ದು ಹೀಯಾಳಿಸಿದ್ದೆ ಆಗ. ಅಪ್ಪನ ಬಗೆಗಿನ ನೋವುಗಳು ನನ್ನಲ್ಲಿ ಕೆಲಭಾಗ ಉಳಿದರೂ, ಹಲವು ಭಾಗಗಳು ಪಾಠವಾಗಿ ಮಾರ್ಪಾಡಾಗಿದೆ. ನನ್ನ ಪಾಲಿಗೆ ಅಪ್ಪನೊಬ್ಬ ರೂಲು ದೊಣ್ಣೆ ಹಿಡಿದು ನಿ೦ತ ಮೇಷ್ಟ್ರಿದ್ದ೦ತೆ. ಅವನ ಭಯಕ್ಕಾದರೂ ಬದುಕಿನ ಪಾಠಗಳನ್ನ ಸರಿಯಾಗಿ ಕಲಿತಿದ್ದೇನೆ. ಆಗಿನ ಅಪ್ಪನ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳದೆ ಹೀಯಾಳಿಸಿದ ಪಶ್ಚಾತ್ತಾಪವಿದೆ. ಅದು ಸಹಜ ಸ್ವಾಭಾವಿಕ ಮನುಷ್ಯ ಪ್ರವೃತ್ತಿ. ಸುಮಾರು ಏಳು ತಿ೦ಗಳುಗಳ ಕಾಲ ಆಸ್ಪತ್ರೆಯಲಿ ಗ್ಯಾ೦ಗ್ರಿನ್ನಿಗೆ ತುತ್ತಾಗಿ ಕಾಲು ಗ೦ಟಿನ ಕೆಳಗೆ ಇದ್ದ ಬಲಿಷ್ಟ ಮಾ೦ಸ ಖ೦ಡವನ್ನ ಕೊಯ್ಸಿಕೊ೦ಡು, ಅದನ್ನ ಮುಚ್ಚಲು ತೊಡೆಯ ಚರ್ಮವನ್ನು ಗೀರಿ ಗೀರಿ ತೆಗೆದು ಹಾಕಿ ಆಪರೇಷನ್ ಮಾಡುವಾಗ ಆತ ಅದೆಷ್ಟು ಕೃಶನಾಗಿರಬೇಕಲ್ಲ. ನಿರ್ವಿಣ್ಣನಾಗಿ ಮಲಗಿರುತ್ತಿದ್ದ ಅಪ್ಪನ ಅಸಹಾಯಕತೆ ಈಗ ನೆನೆದರೆ ಕಣ್ಣಲ್ಲಿ ನೀರು ತರಿಸುತ್ತದೆ.
ನಾನು ನೋಡಿದ ಹದಿನೇಳು ವರ್ಷದಲ್ಲಿ ಆತ ಒ೦ದೇ ಒ೦ದು ದಿನಕ್ಕೆ ನೆಗಡಿ, ಕೆಮ್ಮು, ತಲೆ ನೋವು ಅ೦ತ ಮಲಗಿದ್ದು ಕ೦ಡೇ ಇರಲಿಲ್ಲ. ಏನೇ ಇದ್ದರೂ ಥಣ್ಣೀರು ಸ್ನಾನ ಮಾಡಿ ಗಾಯತ್ರಿ ಜಪಿಸಿ ಹೊರಟುಬಿಡುತ್ತಿದ್ದ ಗಟ್ಟಿಗ. ಈಗ ಸಾಯುವ ಕಾಲಕ್ಕೆ ನಿಸ್ಸಹಾಯಕನಾದರೂ ಮುಖದಲ್ಲಿ ಅವನ ಆಶಾಭಾವ ಕು೦ದಿರಲಿಲ್ಲ. ಸಗಣಿ ನೆಲದ ಅ೦ಗಳ ಮೂಲೆಯಲ್ಲಿ ಅ೦ಟಿಸಿಟ್ಟ ಬುಡ್ಡಿಯ೦ತೆ ಗಾಳಿಯಲ್ಲಿ ಅಲುಗಾಡಿದರೂ, ತನ್ನ ಕರ್ತವ್ಯಕ್ಕೆ ಭ೦ಗವಾದರೂ, ಧೃತಿಗೆಡದೆ ಉರಿಯುವ೦ತೆ ಬಾಳಿದವನು ಅಪ್ಪ. ಬಹುಶಃ ಇದರಲ್ಲಿ ವಿಶೇಷವೇನೂ ಇರಲಿಕ್ಕಿಲ್ಲ ಒಬ್ಬೊಬ್ಬರ ಅಪ್ಪ೦ದಿರು ಇದಕ್ಕಿ೦ತಲೂ ಘೋರ ಅಥವ ವಿಶೇಷವಾಗಿ ಬದುಕಿರುವ ಅಸ೦ಖ್ಯ ಉದಾಹರಣೆಗಳೂ ಇರಬಹುದು. ಆದರೆ ನಾನು ಮಾತಾಡುತ್ತಿರುವುದು ಅವನ ಸಾವಿನ ಬಗ್ಗೆ, ಆ ನರಳಾಟದ ಮಧ್ಯೆ ಅವನು ರೂಡಿಸಿಕೊ೦ಡ ಭ೦ಡ ಅಭ್ಯಾಸಗಳ ಬಗ್ಗೆ. ಕಾಲಿನ ಆಪರೇಷನ್ ಆಗಿ ಮರು ಗ೦ಟೆ ಬಾತ್ ರೂ೦ ಬಾಗಿಲು ಹಾಕಿಕೊ೦ಡು ಸಿಗರೇಟು ಸೇದಿದ ಒರಟು ಮನುಷ್ಯ. ನಾವು ಮಾಡುವ ಅಷ್ಟೂ ಪ್ರಯತ್ನಗಳನ್ನ ಒ೦ದು ಸಿಗರೇಟು ಹೊಗೆಯಲ್ಲಿ ಮುಚ್ಚಿ ಹಾಕಿ ಅನ್ಯಾಯ ಮಾಡಿಬಿಡುತ್ತಿದ್ದ. ಹಾಗೆ ವಿಫಲವಾದ ಏಳು ಆಪರೇಷನ್‌ಗಳೂ ತಮ್ಮ ಅದಮ್ಯ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ಮಾಡಿದ್ದರೂ, ಅದರ ನ೦ಬುಗೆಯನ್ನು ಅವನೇ ಉಳಿಸಿಕೊಳ್ಳಲ್ಲಿಲ್ಲ.
ಆ ದಿನ ಅಪ್ಪನಿಗೇನನಿಸಿತ್ತೋ ಅಕೌ೦ಟಿನಲ್ಲಿದ್ದ ಪುಡಿ ದುಡ್ಡೆಲ್ಲಾ ತರಿಸಿಕೊ೦ಡು ಮನೆಯವರಿಗೆ ಹ೦ಚಿದ್ದ. ಮಾರನೇ ದಿನ ಕೋಮಾ ಸೇರಿದವನ ಬುಸುಗುಡುವ ಉಸಿರಾಟ ಮೂರುದಿನವಾದ ಮೇಲೆ ಸುಮ್ಮನಾಗಿಬಿಟ್ಟಿತು. ಮಿಲಿಟರಿಯಲ್ಲಿ ಬಲಿಷ್ಟನಾಗಿ ಓಡಾಡಿಕೊ೦ಡಿದ್ದ ನನ್ನ ಅಪ್ಪ, ಆವತ್ತು ಹಾಸಿಗೆಗೆ ಅ೦ಟಿಕೊ೦ಡಿದ್ದ ತೆಳ್ಳನೆ ಮನುಷ್ಯನ೦ತೆ ಆ೦ಬ್ಯುಲೆನ್ಸಿನಲ್ಲಿ ಮನೆಗೆ ಹೆಣವಾಗಿ ವಾಪಸ್ಸು ಬ೦ದ. ಅವನ ಸುತ್ತಾ ನೆರೆದಿದ್ದ ನೂರಾರು ಜನ, ಸುಡಲು ಬ೦ದ ನೂರಾರು ಜನ ಅವನ ಸ೦ಬ೦ಧಗಳ ಬಗ್ಗೆ ಎಷ್ಟೊ೦ದು ಮಾತಾಡಿ ಹೋಗಿದ್ದರು. ಅದಾವುದೂ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಅಪ್ಪ ಸತ್ತ ಸುಮಾರು ದಿನಕ್ಕೆ ಯಾಕೋ ದುಃಖ ಒತ್ತರಿಸಿ ಗ೦ಟೆ ಗಟ್ಟಲೆ ಅತ್ತಿದ್ದೇನೆ. ಅಲ್ಲಿಗೆ ಸಾವು ಅನ್ನುವುದು ನಮ್ಮ ಮನೆಯ ಮುಖ್ಯ ಸದಸ್ಯನೊಬ್ಬನನ್ನು ಅವನ ಮನೆಗೆ ಸೇರಿಕೊ೦ಡುಬಿಟ್ಟಿತು. ಅನಿವಾರ್ಯವಾಗಿ ನಾವು ಕಳಿಸಿಕೊಡಲೇಬೇಕಾಯ್ತು.
ಇಲ್ಲಿ ನಾನು ಇವೆಲ್ಲದರ ಮೂಲಕ ಕೊಡಬೇಕಾದ ಸ೦ದೇಶ ಯಾವುದೂ ಇಲ್ಲ. ಆದರೆ ಸಾವು ನಮ್ಮನ್ನು ಅಧೀರಗೊಳಿಸುವ ಪ್ರಮಾಣ ಮಾತ್ರ ಭಯಾನಕ. ಕೆಲವರನ್ನ ಅಧೀರಗೊಳಿಸಿದರೆ ಕೆಲವರನ್ನು ಭಿನ್ನ ಭಾವಕ್ಕೆ ತ೦ದಿರುತ್ತದೆ. ಲ೦ಕೇಶರು ಅದರ ದ್ಯೋತಕವಾಗಿ ತಮ್ಮ ಆತ್ಮಕತೆಯನ್ನು ಮುಗಿಸುವ ಸ೦ದರ್ಭದಲ್ಲಿ ಹೀಗೆ ಬರೆಯುತ್ತಾರೆ- “ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ ಹತ್ತಿರ ಇದ್ದ೦ತಿದ್ದಾಗ ಮುತ್ಸದ್ದಿತನ, ಹೊ೦ದಾಣಿಕೆ, ಖ್ಯಾತಿ, ಪ್ರಶಸ್ತಿ, ಮು೦ತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣೆಗೆಯ ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅ೦ತ್ಯ ಎ೦ಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು. ಉಳಿದಿರುವ ಕಾಲ ಎಷ್ಟೋ ಗೊತ್ತಿಲ್ಲ. ಒ೦ದು ಕಣ್ಣು ಮುಚ್ಚಿಹೋಗಿರುವಾಗ, ಹೊರಗೆ ತು೦ತುರು ಹನಿ ಬೀಳುತ್ತಿರುವ ಈ ಆಗಸ್ಟ್ ತಿ೦ಗಳ ಕೊನೆಯಲ್ಲಿ ಯಾವ ಪ೦ಕ್ತಿಯೊ೦ದಿಗೆ ಇದನ್ನು ಮುಗಿಸಲಿ ಎ೦ದು ನೋಡುತ್ತಿದ್ದೇನೆ. ಆ ಪರಿಣಾಮಕಾರಿ ಮಾತುಗಳೂ ಅನಗತ್ಯ. ಇಷ್ಟಕ್ಕೆ ಸುಮ್ಮನಾಗುತ್ತಿದ್ದೇನೆ.”
ಇತ್ತೀಚೆಗೆ ನನ್ನ ಆಪ್ತ ಗೆಳತಿಯೊಬ್ಬಳು ಕ್ಯಾನ್ಸರ್ ಕಾಹಿಲೆಯಿ೦ದ ವಿಮೋಚನೆಗೊ೦ಡಿದ್ದಾಳೆ. ಬದುಕಿನ ಪ್ರತಿ ಹೆಜ್ಜೆಯನ್ನು ಬಾಳುವ ದಿವ್ಯವಾದ ಹುನ್ನಾರ ಅವಳಲ್ಲಿ ಸ್ಥಿರವಾಗಿ ಮತ್ತು ಜಾಗರೂಕವಾಗಿ ಇದೆ. ಬಹುಶಃ ಅದೇ ಸ೦ಕಲ್ಪ ಅವಳನ್ನ ಬದುಕಿಸಿರಬಹುದು. ಸಾವಿನ ಪರವಾದ ಯಾವ ನಿಲುವು ಅವಳಲ್ಲಿದೆ ನನಗೆ ಗೊತ್ತಿಲ್ಲ, ಮೊದ ಮೊದಲು ಗೆದ್ದು ಅಮೇಲಾಮೆಲೆ ಅದನ್ನ ಎದುರಿಸಿ, ಮತ್ಯಾವಾಗಲೋ ಅವಳನ್ನ ಅದು ಅಧೀರ ಮಾಡಬಹುದು. ಆದರೇ ಈಗ ಅದ್ಯಾವುದೂ ಅನಾವಷ್ಯಕ. ನಾನೂ ಅಷ್ಟೇ ಸಾವಿನ ಪರವಾದ ಯಾವ ನಿಲುವೂ ತಾಳದೆ, ಅದರ ವಿರೋದಾಭಾಸವಾಗಿ ಸಹ ಅ೦ದುಕೊಳ್ಳದೇ, ಅಲೌಕಿಕ ವ್ಯಾಖ್ಯಾನ ನೀಡದೆ ಸುಮ್ಮನಾಗುತ್ತೇನೆ. ಲ೦ಕೇಶರು ಹೇಳಿದ೦ತೆ ಈಗ ಯಾವ ಪರಿಣಾಮಕಾರಿ ಮಾತುಗಳೂ ಅನಗತ್ಯ….






ಒಳ್ಳೆಯ ಲೇಖನ. ಹೇಳದೇ ಕೇಳದೇ ಬರುವ ಅತಿಥಿಯೆಂದರೆ ಸಾವು. ಸಾವೆಂಬುದೊಂದು ಅಳಿಸಲಾಗದ ಸತ್ಯ, ಒಪ್ಪಿಕೊಳ್ಳಲೇ ಬೇಕು ಎಂದೆನಿಸಿದರೂ ಕೆಲವೊಮ್ಮೆ ಸಾವು ನಮ್ಮನ್ನು ತೀವ್ರ ವಿಚಲಿತಗೊಳಿಸಿಬಿಡುತ್ತದೆ. ಆಪ್ತರನ್ನು ಕಳೆದುಕೊಂಡ ಎಷ್ಟೋ ಜನ ನರಳಿ ನರಳಿ ಪೇಚಾಡುವುದನ್ನು ಕಂಡಿದ್ದೇನೆ. ತನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಾಗ ಅವಳನ್ನು ನೆನಪಿಸಿಕೊಂಡು ರಾತ್ರಿಯೆಲ್ಲಾ ಪೇಚಾಡುವ ಗೆಳೆಯನನ್ನು ಕಂಡಿದ್ದೇನೆ. ನನ್ನನ್ನು ಹಿಡಿದುಕೊಂಡು ‘ಅದು ಕನ್ಸು ಅಲ್ವಾ?’ ಎಂದು ಕೇಳುತ್ತಿದ್ದ. ಇದ್ದಕ್ಕಿದ್ದಂತೆ ಚೀರುತ್ತಿದ್ದ. ಅವಳು ಹೆಣವಾಗಿದ್ದ ಒಂದು ಫೋಟೋ ಇಟ್ಟುಕೊಂಡು – ‘ಈ ದೇಹ ನನ್ನನ್ನ ಎಷ್ಟು ಪ್ರೀತಿಸ್ತಾ ಇತ್ತು, ಅನ್ಯಾಯವಾಗಿ ಹೋಗ್ಬಿಡ್ತು’ ಎನ್ನುತ್ತಿದ್ದ. ಆದುದರಿಂದ ಸಾವಿನ ಆಘಾತ ಕೆಲವರಿಗೆ ತೀವ್ರ ತೆರನಾಗಿರುತ್ತದೆ. ಆ ಸಾವು ನೋವು ಅಕಾಲಿಕವಾಗಿ, ಅನಿರೀಕ್ಷಿತವಾಗಿ ಯಾರಿಗೂ ಬಾರದಿರಲಿ. ಈ ಪ್ರಪಂಚದ ಪ್ರತಿಯೊಬ್ಬರೂ ನಗುತ್ತಿರಲಿ…
ಓದಿ ಮುಗಿಸಿದಾಗ ಕಣ್ಣಂಚು ಒದ್ದೆ…ಜೊತೆಗೆ ನನ್ನಪ್ಪನ ನೆನಪು.
ಸಾವು ನಮ್ಮ ಬದುಕಿಗೆ ಅರ್ಥವನ್ನು, ಉದ್ದೇಶವನ್ನು ನೀಡುತ್ತದೆ.ಸಾವು ಎಂಬುದೊಂದು ಇಲ್ಲದಿರುತ್ತಿದ್ದರೆ ಬದುಕು ಎಷ್ಟೊಂದು ನಿರಸವಾಗಿರುತ್ತಿತ್ತು ಎಂದು ವಿವರಿಸಲಾಗದು. ನಮ್ಮ ಅಪ್ಪ ಕೂಡಾ ಕ್ಯಾನ್ಸರ್ ನಿಂದ ಸತ್ತ. ನಮಗೆ ಏನನ್ನು ಬಿಡದೆ. ಮನೆಯನ್ನು ಕಟ್ಟಿಸದೆ. ಅಕ್ಷರಶಃ ನಾವು ಬೀದಿ ಪಾಲಾಗಿದ್ದೆವು. ಒಮ್ಮೆ ಅಪ್ಪ ಮನೆ ಬಿಟ್ಟು ಓಡಿ ಹೋದಾಗ ನಾನು ತುಂಬಾ ಚಿಕ್ಕವನು. ಮತ್ತೆ ಅವನ ದರ್ಶನ ಅವನ ಸಾವು ಸಮೀಪಿಸಿದಾಗ. ನಾನು ಅಪ್ಪನನ್ನೂ ಕುರಿತು ಒಂದು ಕವನ ಬರೆದೆ. ಅಪ್ಪ ಬುದ್ಧನಂತೆ ಸಂಸಾರಕ್ಕೆ ಹೆದರಿ ಓಡಿ ಹೋದ. ಆದರೆ ಬುದ್ಧನನ್ನು ಓದಿಕೊಂಡ ಮೇಲೆ ನಾನು ಎಷ್ಟು ತಪ್ಪು ತಿಳಿದಿದ್ದೇ ಎಂದು ಅರಿವಾಯಿತು. ಅಂತೆಯೇ ನಮ್ಮಪ್ಪ ಸಾಯುವ ಮೊದಲೇ ಬರೆದಿಟ್ಟ ಲೇಖನಗಳ ರಾಶಿಯನ್ನು ನಮ್ಮಣ್ಣ ಮೋಹನ ಹಬ್ಬು ‘ಅನಾಮಿಕನ ಉಲುಹು’ ಎಂಬ ಟೈಟಲ್ಲಿನಿಂದ ಪ್ರಕಟಿಸಿದ. ಆಗ ನಮ್ಮಪ್ಪ ಎಷ್ಟೊಂದು ದೊಡ್ಡವನು ಎಂಬರಿವಾಯಿತು. ಅವನು ತನ್ನ ದೇಶಪ್ರೇಮವನ್ನು ಗಾಂಧಿಭಕ್ತಿಯನ್ನುತಾನೇ ಸ್ವತಃ ಬಡವವನಾದರೂ ಬಡವರ ಬಗ್ಗೆ ತುಂಬಾ ಕಳಕಳಿ ಇದ್ದಂತೆ ಬರೆದಿದ್ದ. ಮತ್ತು ಅವನು ದಲಿತಪರವಾಗಿದ್ದ ಎನ್ನುವುದು ನನಗೆ ತುಂಬಾ ಹೆಮ್ಮೆಯ ವಿಷಯವಾಗಿದೆ.ಉದಯಕುಮಾರ ಹಬ್ಬು, ಕಿನ್ನಿಗೋಳಿ
chandada baraha sunil. yaakO, yaavaglo odida ee quote nenpaytu
“Death is more universal than life; everyone dies but not everyone lives”
malathi S
ಹೀಗೆ ‘ಅಳಿಸು’ವಂಥ ಲೇಖನಗಳನ್ನು ಬರೆಯಬೇಡ ಕಣೋ ಸುನೀಲ… ನನ್ನ ಹಾರ್ಟು ವೀಕು…
ನನ್ನ ಹಾರ್ಟೂ ವೀಕು.. ಹೀಗೆ ಅಳಿಸಬೇಡ