ಸಾವಿರ ವರ್ಷದ ಧರ್ಮಕ್ಕೆ ಬೆಂಕಿ ತನ್ನಿಂದ  ತಾನೇ ಹೊತ್ತಿಕೊಳ್ಳುತ್ತದೆ..

ಜೈನಮುನಿ ತರುಣಸಾಗರ್ ಅವರು ಇತ್ತೀಚಿಗೆ 

1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು’!

ಎಂದು ಭಾಷಣ ಮಾಡಿದ್ದರು. ಅದಕ್ಕೆ ರವಿರಾಜ ಅಜ್ರಿಯವರ  ಪ್ರತಿಕ್ರಿಯೆ ಅವಧಿಯಲ್ಲಿ ಪ್ರಕಟವಾಗಿತ್ತು. 

ಕವಯತ್ರಿ, ಮಾಧ್ಯಮ ಲೋಕದ ನೂತನ್ ದೋಶೆಟ್ಟಿ ಅವರು ಲೇಖನಕ್ಕೆನೀಡಿದ ಪ್ರತಿಕ್ರಿಯೆ ಇಲ್ಲಿದೆ

ನೂತನ ದೋಶೆಟ್ಟಿ

ಸಮಾಜೋ ಧಾರ್ಮಿಕ ವಿಚಾರಗಳ ಬಗ್ಗೆ ವಾಸ್ತವದ ನೆಲೆಯಲ್ಲಿ ಯಾರು ಮಾತಾಡಿದರೂ ಅದಕ್ಕೆ ಬೆಂಬಲ ಸಾರ್ವತ್ರಿಕವಾಗಿ ಸಿಗುತ್ತದೆ. ಅದರಿಂದಲೇ ಮುನಿ ತರುಣಸಾಗರ ಅವರಿಗೆ ಧರ್ಮಾತೀತವಾಗಿ ಅಪಾರ ಅಭಿಮಾನಿಗಳು ಇದ್ದಾರೆ.

ಅವರು ಧರ್ಮಕ್ಕೆ ಬೆಂಕಿ ಹಚ್ಚುವ ಮಾತಾಡಿದ್ದೂ ಕೂಡ ವಾಸ್ತವದ ಹಿನ್ನೆಲೆಯಲ್ಲೇ ಎಂದು ನಾನು ಅಂದುಕೊಳ್ಳುತ್ತೇನೆ. ಪ್ರಖರ ಅಭಿವ್ಯಕ್ತಿಗೆ ಹೆಸರಾಗಿರುವ  ಅವರ ಮಾತಿನ ಧಾಟಿಯಲ್ಲಿ  ಸುಡುವ  ಶಬ್ದಗಳು ಸಹಜವಾಗಿ ಹರಿಯುತ್ತವೆ ಎಂದು ನನ್ನ ಅನಿಸಿಕೆ.

ಹಾಗೆ ನೋಡಿದರೆ ಸಾವಿರ ವರ್ಷದ ಧರ್ಮಕ್ಕೆ ಬೆಂಕಿ ತನ್ನಿಂದ  ತಾನೇ ಹೊತ್ತಿಕೊಳ್ಳುತ್ತದೆ. ಈಗ ಅದೇ ಆಗಿರುವುದು. ಕಾಲ ಕಳೆದಂತೆ ಮೂಲಧರ್ಮದ  ಸ್ವರೂಪ, ಆಶಯಗಳೂ ಬದಲಾಗುತ್ತವೆ. ಅದರಿಂದಲೇ  ಗುಂಪುಗಾರಿಕೆ ತಲೆದೋರಿ ಧರ್ಮದಲ್ಲೇ ಆಂತರಿಕ ಅರಾಜಕತೆ ಮೆರೆದಾಡುತ್ತದೆ.

ಈ ಹಂತದಲ್ಲಿ ಬಹು ಸೂಕ್ಷ್ಮವಾಗುವ ಧಾರ್ಮಿಕ ಭಾವನೆಗಳನ್ನು ಯಾವ ಅವಕಾಶವಾದಿಗಳಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಇದರಲ್ಲಿ ರಾಜಕೀಯ ಬಹು ಮುಖ್ಯ ಭೂಮಿಕೆಯನ್ನು ವಹಿಸುವ ಸ್ಥಾನದಲ್ಲಿ ಇಂದು ನಿಂತಿದೆ. ಅದರಿಂದಲೇ ಕೆಲ ಧರ್ಮಗಳ ಬಗೆಗೆ ಹೆಚ್ಚು ಕಾದಾಟಗಳು ನಡೆಯುತ್ತವೆ.

ಇನ್ನು ಧರ್ಮದ ಮೂಲದ ಬಗ್ಗೆ ನಾವು ಆಗಾಗ ಮಾತಾಡುತ್ತೇವೆ. ಹಾಗೆ ನೋಡಿದರೆ ಮೂಲ ಧರ್ಮವೆಂದರೆ  ಪ್ರಕೃತಿ ಮಾತ್ರ. ಮೂಲತಃ ಮನುಷ್ಯ ಪ್ರಕೃತಿ ಆರಾಧಕ. ಆ ಪ್ರಕೃತಿ  ಮಡಿಲಲ್ಲಿ ಬದುಕು ಕಟ್ಟಿಕೊಂಡು ಗುಂಪಾಗಿ ವಾಸಿಸ ತೊಡಗಿದ ಜನ ಪಾಲಿಸಲು ಪ್ರಾರಂಭಿಸಿದ ಜೀವನ ಶೈಲಿಗೆ ಧಾರ್ಮಿಕ ಸ್ವರೂಪ ಬಂದು ಕಾಲಕ್ರಮೇಣ   ಅಂತಹ ಬೇರೆ ಬೇರೆ ಜೀವನ ವಿಧಾನಗಳನ್ನು ಅನುಸರಿಸುತ್ತಿದ್ದ ಗುಂಪು ಒಂದೊಂದು ಪಂಗಡವಾಗಿ , ಜಾತಿಗಳಾಗಿ ಇಂದಿನ ವಿರಾಟ್ ಸ್ವರೂಪಕ್ಕೆ ಬಂದು ನಿಂತಿದೆ.

ಮತಬೇಧಗಳಿಂದಾಗಿ ಹೊಸ ಆಲೋಚನೆ, ಹೊಸ ಆಚರಣೆ, ಅನುಸರಣೆಗಳನ್ನು ಹುಟ್ಟು ಹಾಕಿದ ಮಹಾನುಭಾವರು ತಮ್ಮ ಹೊಸ ಆಲೋಚನೆಗಳೇ ಧರ್ಮವಾಗಿಬಿಡಬಹುದು ಎಂದು ಊಹಿಸಿರಲಿಕ್ಕಿಲ್ಲ. ಹೊಸ-ಹಳೆ ಆಲೋಚನೆ, ಆಚರಣೆಗಳ ತಾಕಲಾಟ ಸದಾ ಇದ್ದದ್ದೇ. ಆದ್ದರಿಂದಲೇ ಹಳೆಯದನ್ನು ಮುಂದುವರೆಸಿಕೊಂಡು ಹೋಗುವ ಅದರಂತೇ ಹೊಸದನ್ನು ಸ್ವೀಕರಿಸುವ ಗುಂಪುಗಳೂ ಬೆಳೆದು, ಬಲಿತು, ಪ್ರತಿಷ್ಠೆಯ ಕಣದಲ್ಲಿ ನಿಲ್ಲುತ್ತವೆ.

ಅದರಿಂದಲೇ ನಾವು ಮೊದಲಿಗರು; ಇವುಗಳೆಲ್ಲ ನಮ್ಮ ಸ್ವತ್ತು. ಉಳಿದವರೆಲ್ಲ ಅದರಿಂದ ಎರವಲು ಪಡೆದುಕೊಂಡಿದ್ದಾರೆ ಎಂಬ ಧೋರಣೆಗಳು ಮುನ್ನೆಲೆಗೆ ಬರುತ್ತವೆ. ಸಧ್ಯ ಯುಗಾದಿಯ ಹಬ್ಬದ ಸಂದರ್ಭದಲ್ಲೂ ಇಂತಹದೊಂದು ಮಾತು ಕೇಳಿ ಬಂದಿದ್ದನ್ನು ಇಲ್ಲಿ ನೆನೆಯಬಹುದು.

ಯಾವುದು ಪುರಾತನವೋ, ಯಾವುದೂ ನವೀನವೋ ? ಆದರೆ ಧರ್ಮ ನಿರ್ದಾಕ್ಷಿಣ್ಯವಾಗಿರಲು ಸಾಧ್ಯವಿಲ್ಲ. ಹಾಗೊಮ್ಮೆ ಇದ್ದರೆ ಅದು ಧರ್ಮವೂ ಅಲ್ಲ. ದುರದೃಷ್ಟ ವಶಾತ್ ಈಗ  ಅಂತಹ ನಿರ್ದಾಕ್ಷಿಣ್ಯತೆಯನ್ನು ಎಲ್ಲೆಡೆ ಕಾಣುತ್ತಿದ್ದೇವೆ..!!

‍ಲೇಖಕರು Avadhi GK

March 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: