ಸಾವಿರದ ಶರಣವ್ವ ಕರಿಮಾಯಿ ತಾಯೆ…

ಡಾ ಎಂ ಎಸ್ ವಿದ್ಯಾ

ಸಾವಿರದ ಶರಣವ್ವ ಕರಿಮಾಯಿ ತಾಯೆ…ತಾಯೇ…

ಈ ಹಾಡು ಕೇಳುತ್ತಲೇ ನೃತ್ಯ ಬಲ್ಲದವರಿಗೂ ಕುಣಿಯುವಂತಾಗುತ್ತದೆ, ಉತ್ಸಾಹ, ಸ್ಫೂರ್ತಿ ತುಂಬಿದಂತಾಗುತ್ತದೆ. ಕರಿಮಾಯಿ ನಾಟಕದ ಈ ಹಾಡು ವಿಪರೀತ ಪ್ರಸಿದ್ಧವಾಗಿದೆ. ಈ ಹಾಡಿನ ಹಿಂದಿನ ಕಂಚಿನ ಕಂಠ (ಕ್ಲೀಷೆ ಆದರೂ ನಿಜ), ಉತ್ತಮ ಕಲಾವಿದೆ, ನಿರ್ದೇಶಕಿ… ಡಾ.ಬಿ. ಜಯಶ್ರೀ.

ಅವರ ಪರಿಚಯ ನನಗೆ ಆದದ್ದು ೧೯೮೭ ರಲ್ಲಿ. ೧೯೮೫ ರಲ್ಲಿ ಅವರು ಸ್ಪಂದನ ತಂಡಕ್ಕಾಗಿ ನಿರ್ದೇಶಿಸಿದ್ದ ‘ಲಕ್ಷಾಪತಿ ರಾಜನ’ ಕಥೆಯ ಪ್ರದರ್ಶನ ನೋಡಿದಾಗ ಮಂತ್ರ ಮುಗ್ಧಳಾಗಿದ್ದೆ. ರಂಗದ ಮೇಲಿನ ಆ ದೃಶ್ಯ ವೈಭವ, ಜನಪದ ಕತೆಯನ್ನು ರಂಗದ ಮೇಲೆ ಭೂಮಿಯ ಪ್ರತಿಬಿಂಬಿಸಿದ ರೀತಿ, ಅಭಿನಯ ಹಾಡು, ಎಲ್ಲವೂ ಮನಸೆಳದವು.

ರಂಗದ ಮೇಲೆ ಒಂದು ಸಿನಿಮಾ ನೋಡಿದಂತೆ ಆಯಿತು. ಅವರ ಕಟ್ಟಾ ಅಭಿಮಾನಿ ಆದೆ. ವೇದಿಕೆಯ ಮೇಲಿನ ಅವರ ಮಿಂಚಿನ ವೇಗ, ಚಾಕಚಕ್ಯತೆ, ಕೌಶಲ್ಯ… ಒಂದೇ ಎರಡೇ – ಹೇಗೆ ಆ ರೀತಿ ಹಾಡುತ್ತಾ ಕುಣಿಯುತ್ತಾ ಅಭಿನಯಿಸುತ್ತಾರೆ. ಅವರಂತೆ ನಾನೂ ಅಭಿನಯಿಸಬೇಕು ಎನ್ನುವ ಹಂಬಲ ನನ್ನಲ್ಲಿ ಬಲಿಯಿತು. ಆದಾಗಿ ಸುಮಾರು ವರುಷದ ನಂತರ ನನಗೆ ಅವರ ಸ್ಪಂದನ ತಂಡದಲ್ಲಿ ನಟಿಸಬೇಕು ಎಂದು ಕರೆ ಬಂದಾಗ ಆಶ್ಚರ್ಯ, ಆನಂದ ಎರಡೂ ಆದವು.

ಮುಂಗೋಳಿ ಕೂಗ್ಯಾವೂ ಮೂಡಾಣ ಬೆಳಗಿ… ಎನ್ನುವಂತೆಯೇ ನನಗೆ ರಂಗಭೂಮಿಯ ಮತ್ತೊಂದು ಆಯಾಮದ ತೆರೆ ತೆರೆದುಕೊಂಡಿತು. ೧೯೮೭ ಮಾರ್ಚ್ನಲ್ಲಿ ಹೈದ್ರಾಬಾದಿನಲ್ಲಿ ಕರಿಮಾಯಿ ಮತ್ತು ಲಕ್ಷಾಪತಿ ರಾಜನ ಕಥೆ ನಾಟಕಗಳ ಪ್ರದರ್ಶನ. ಫೆಬ್ರವರಿಯಲ್ಲಿ ರಂಗ ತಾಲೀಮು. ನನಗೆ ಕರಿಮಾಯಿ ನಾಟಕದಲ್ಲಿ ‘ಚಿಮಣಾ’ಳ ಪಾತ್ರ ಕೊಟ್ಟಾಗ ಸ್ವರ್ಗಕ್ಕೆ ಮೂರೇ ಗೇಣು. ಅದಕ್ಕೆ ಮೊದಲು ಆ ನಾಟಕ ನೋಡಿರಲಿಲ್ಲ. ಎಂಥಾ ಪಾತ್ರ!! ಹೆದರಿಕೆಯೂ ಆಯಿತು. ಆದರೆ ಅವರು ನನಗೆ ಭರವಸೆ, ಸ್ಫೂರ್ತಿ ತುಂಬಿ ಹೇಳಿಕೊಟ್ಟ ರೀತಿಯನ್ನುಇಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಅದಕ್ಕೂ ಮೊದಲು ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಿದ್ದರೂ ಚಿಮಣಾ ಪಾತ್ರ ವಿಶಿಷ್ಟ ರೀತಿಯದು. ಆ ಘೋರ ನೃತ್ಯ, ನಟನೆ… ಗುಡಿಸೀಕರನ ಜೊತೆ, ದೇವರಸಿ ಜೊತೆಗಿನ ಅವಳ ಸಂಬಂಧ ಅದನ್ನು ರಂಗದ ಮೇಲೆ ತೋರುಪಡಿಸುವ ವಿಧಾನ… ಎಲ್ಲವೂ ಹೊಸ ಅನುಭವ.

ನನ್ನ ಮೊದಲ ಪ್ರದರ್ಶನ ಮುಗಿದ ಮೇಲೆ ನಿರ್ದೇಶಕರು ಎನನ್ನುತ್ತಾರೇ ಎನ್ನುವ ಕಾತರ. ಆದರೆ ಅವರಿಂದ ನನಗೊಂದು ಸಿಹಿಮುತ್ತು ಕಾಣಿಕೆ ಸಿಕ್ಕಿದಾಗ ದೊರೆತ ಸಂತಸ ಅಷ್ಟಿಷ್ಟಲ್ಲ. ಈಗಲೂ ಚಿಮಣಾಳ ಮೇಲೆ ಎಷ್ಟು ಮೋಹ ಎಂದರೆ, ಬೇರೆಯವರು ಆ ಪಾತ್ರ ಮಾಡುವುದನ್ನು ನೋಡಲಾರದೆ ಆ ನಾಟಕವನ್ನು ಇದುವರೆಗೂ ನೋಡಿಲ್ಲ. ಇತ್ತೀಚೆಗೆ ಜಯಶ್ರೀ ಅವರು ಚಿಮಣಾ ಪಾತ್ರ ಮಾಡುತ್ತೀಯಾ ಎಂದಾಗ, ಖುಷಿಯಿಂದ ಅವಳಂತೆಯೇ ಕುಣಿಯುತ್ತ ಗುಬ್ಬಿಯವರೆಗೂ ಬರುತ್ತೇನೆ ಎಂದೆ.

‘ಚಿಮಣಾ’ ನನ್ನ ಮನಸಿನಲ್ಲಿ ಸದಾ ನಿಲ್ಲುವ ಪಾತ್ರ.

ಲಕ್ಷಾಪತಿ ರಾಜನ ಕಥೆ

ಮೊದಲಿಗೆ ಪ್ರಾರಂಭಿಸಿದ್ದು ಈ ನಾಟಕದ ತಾಲೀಮು, ಪ್ರಾಯಶಃ ಅದರಲ್ಲಿ ನಾನು ಭಾಗವಹಿಸಿದ ರೀತಿ ನೋಡಿ ಚಿಮಣಾ ಮಾಡುಬಹುದು ಎನ್ನುವ ವಿಶ್ವಾಸ ಜಯಶ್ರೀ ಅವರಿಗೆ ಬಂದಿರಬಹುದು.

ಲಕ್ಷಾಪತಿಯಲ್ಲಿ ಮೊದಲ ಬಾರಿಗೆ ಎರಡು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ. ಕುಲಾವತಿ (ಲಕ್ಷಾ ಪತಿಯ ತಾಯಿ) ಮತ್ತು ಶಾಂಭವಿ (ದೇವಿ). ಕುಲಾವತಿ ರಾಜನಿಂದ ಪರಿತ್ಯಕ್ತಳಾದವಳು, ಮಮತಾಮಯಿ ತಾಯಿ ಸಾಧು ಸ್ವಭಾವ ಆ ಪಾತ್ರ ಬೇಡುವಂತಹ ಅಭಿನಯವೇ ಬೇರೆ ರೀತಿಯದು ಇದು ಕರುಣಾರಸ ಮುಖ್ಯ ಪಾತ್ರವಹಿಸುತ್ತದೆ. ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸುವಂಥ ನಟನೆಯನ್ನು ಬಿ.ಜಯಶ್ರೀ ಎಷ್ಟು ಮನದಟ್ಟಾಗುವಂತೆ ಹೇಳಿಕೊಟ್ಟರು ಎಂದರೆ ಸಣ್ಣ ಪಾತ್ರವಾದರೂ ಜನರ ಮನಸ್ಸಿನಲ್ಲಿ ನಿಲ್ಲುವಂತೆ ಮಾಡಿತು.

ಇನ್ನು ಶಾಂಭವಿ ನಾಟಕದ ಕೊನೆಯಲ್ಲಿ ಬರುವ ರೌದ್ರಾವತಾರದ ದೇವಿ. ರುದ್ರ ನೃತ್ಯ ಮತ್ತು ಗಡಸು ದನಿ – ಕುಲಾವತಿಗಿಂತ ಸಂಪೂರ್ಣ ವಿಭಿನ್ನ. ಆದರೆ ದೇವಿ ಕರುಣಾಮಯಿಯೂ ಹೌದು. ನಾನು ಮೊದಲ ಬಾರಿಗೆ ಅಂಥ ರೌದ್ರಾವತಾರದ ನೃತ್ಯವನ್ನು ರಂಗದ ಮೇಲೆ ಮಾಡಿದ್ದು. ಮನದಲ್ಲಿ ಎಷ್ಟೇ ಆತಂಕವಿದ್ದರೂ ರಂಗಪ್ರವೇಶವಾದ ಕೂಡಲೇ ಎಲ್ಲವೂ ಮಾಯ. ಈಗಲೂ ಆ ಸಂಭಾಷಣೆಗಳನ್ನು ನಾನು ಮರೆತಿಲ್ಲ. ಈ ಪಾತ್ರವನ್ನು ಮೊದಲು ಅದ್ಭುತವಾಗಿ ಅಭಿನಯಿಸಿದ್ದವರು ಶ್ರೀಮತಿ. ಹರ್ಷ್ಆನಂದರಾಜ್ ಅವರು. ‘ಕರಿಮಾಯಿ’ಯಲ್ಲಿ ಚಿಮಣಾ ಮೊದಲು ಮಾಡಿದ್ದು ಅವರೇ!! ಒಟ್ಟಿನಲ್ಲಿ ಎರಡು ದಿನಗಳೂ ಸವಾಲು ಎಸೆಯುವಂತಹ ಪಾತ್ರಗಳು. ಹೆದರಿಕೆ, ಆತಂಕ, ಸಂತೋಷ ಎಲ್ಲವೂ ನನಗೆ. ಮರುಪ್ರದರ್ಶನಗಳಲ್ಲಿ ‘ಲಕ್ಷಾಪತಿ ರಾಜನ ಕಥೆಯಲ್ಲಿ’ ‘ಜೋಗಿ’ಯ ಪಾತ್ರವನ್ನೂ ನಿರ್ವಹಿಸಿದೆ. ಬಹಳ ಒಳ್ಳೆಯ ಅನುಭವ.

ಅಭಿನಯದ ಸೂಕ್ಷ್ಮತೆಗಳನ್ನು, ತೀಕ್ಷ್ಣತೆಗಳನ್ನು ಬಿ.ಜಯಶ್ರೀ ಅವರಿಂದ ಕಲಿಯಬೇಕು. ರಂಗಭೂಮಿಯ ಎಲ್ಲಾ ಪ್ರಕಾರಗಳಲ್ಲಿ ಅವರು ತೊಡಗಿಕೊಳ್ಳುವ ಪರಿಯನ್ನು, ಅವರ ಶಕ್ತಿ, ಸಾಮರ್ಥ್ಯ ಎಲ್ಲವೂ ಅವರ್ಣನೀಯ. ನನ್ನಂತಹವಳನ್ನು ರಂಗಸಂಗೀತದಲ್ಲಿ ಪಾಲ್ಗೊಳುವಂತೆ ಮಾಡಿದ್ದೂ ಆಶ್ಚರ್ಯವೇ.

ಅಗ್ನಿಪಥ

ಲಕ್ಷಾಪತಿರಾಜನ ಕಥೆಯನ್ನು ಜೋಗಿಯಾಟದ ಸ್ವರೂಪದಲ್ಲಿ ಮಾಡಿಸಿದ್ದರೆ, ‘ಅಗ್ನಿಪಥ’ವನ್ನು ಗೊಂದಲಿಗರ ಮೇಳದ ಫಾರ್ಮಾಟ್‌ನಲ್ಲಿ ಮಾಡಿಸಿದ್ದರೂ. ಸುಮಾರು ಮೂರು ತಿಂಗಳ ತಾಲೀಮು. ಇದೊಂದು ವಿಶಿಷ್ಟ ಅನುಭವ. ನಾಟಕದ ಹುಟ್ಟಿನಿಂದ ಹಿಡಿದು ವೇದಿಕೆಯ ಮೇಲೆ ಪ್ರದರ್ಶನವಾಗುವ ತನಕ ಭಾಗಿಯಾಗಿದ್ದು ರೋಚಕದ ಸಂಗತಿ. ನನ್ನದು ಇದರಲ್ಲಿ ಗಾಂಧಾರಿಯ ಪಾತ್ರ. ಈ ನಾಟಕದಲ್ಲಿ ದೇಹ ಮತ್ತು ಮನಸ್ಸುಗಳ ಮುಖಾಂತರ ಎರಡು ಪಾತಳಿಗಳಲ್ಲಿ ಆ ಪಾತ್ರ ರೂಪಿಸಿದ್ದರು. ನಾನು ದೇಹವಾದರೆ, ಶಿಲ್ಪಾ ಆನಂದರಾಜು ಮನಸ್ಸು, ನಂದಿಕಾರ್ ಉತ್ಸವದಲ್ಲಿ ಭಾಗಿಯಾಗುವ, ಭಾಷೆ ಬರದವರಿಂದಲೂ ‘Standing Ovation’ ಪಡೆದಂತಹ ಅದ್ಭುತ ನಾಟಕವದು.

ಕಾಡಿತ್ತು ಮಾಯೆ

ಡಾ. ಮಮತಾ ಜಿ ಸಾಗರ್ ರಚಿಸಿದ ಕಾಡಿತ್ತು ಮಾಯೆ ನಾಟಕವನ್ನು ಮಹಿಳಾ ನಿರ್ದೇಶಕರ ಉತ್ಸವದ ಸಂದರ್ಭದಲ್ಲಿ ಮುಂಬೈಯ ‘ಪೃಥ್ವಿ’ ರಂಗಮಂದಿರದಲ್ಲಿ ಅಭಿನಯಸಿದ್ದು ಮತ್ತೊಂದು ಅನನ್ಯ ಅನುಭವ. ಅಲ್ಲಿ ವಿಶಿಷ್ಟವಾದ ಪ್ರೇಕ್ಷಕರು. ‘ಪೃಥ್ವಿ’ಯಲ್ಲಿ ನಾಟಕ ಮಾಡುವುದು ಪ್ರತಿಯೊಬ್ಬ ರಂಗ ಕಲಾವಿದನಿಗೂ ಇರುವ ಅಪೇಕ್ಷೆ. ನನಗೆ ಅಷ್ಟು ಬೇಗ ಅದು ಪೂರ್ಣಗೋಂಡಿತೆಂಬ ನಿರೀಕ್ಷೆ ಇರಲಿಲ್ಲ.

ಕೆ. ಬಾಲಚಂದರ್ ವಿರಚಿತ ಜಿ.ವಿ. ಶಿವಾನಂದ ಅನುವಾದಿಸಿದ, ‘ಬ್ಲಾಕ್ ಔಟ್ ಎನ್ನುವ ಹಾಸ್ಯ ನಾಟಕ, ಮೈಕೋ ಕಲಾ ಸಂಘಕ್ಕಾಗಿ ಜಯಶ್ರೀ ಅವರ ಆಹ್ವಾನದ ಮೇರೆಗೆ ‘ಸಂತ ಶಿಶುನಾಳ ಷರೀಫ’ದಲ್ಲಿ ನಟಿಸಿದ್ದು, ಹಾಗೆಯೇ ಕಲಾಗಂಗೋತ್ರಿಯಲ್ಲಿ ಡಾ. ಬಿ.ವಿ.ರಾಜಾರಾಂ ನಿರ್ದೇಶನದಲ್ಲಿ ಮೂಕಜ್ಜಿಯ ಕನಸುಗಳಲ್ಲಿ ಅವರ ಜೊತೆ ಅಭಿನಯಿಸಿದ್ದು, ಹೀಗೆ ನಾನಾ ರೀತಿಯ ನೆನಪುಗಳು ಕಾಡುತ್ತವೆ. ಬರೆಯುತ್ತಾ ಹೋದಂತೆ ನೆನಪಿನ ಪುಟಗಳಿಂದ ಒಂದೊಂದೇ ಹಾಳೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಜಯಶ್ರೀ ಅವರ ಜೊತೆಯಲ್ಲಿ ಅಭಿನಯಿಸುತ್ತಿದ್ದಾಗ ದೇಶ ವಿದೇಶಗಳ ಪ್ರತಿಷ್ಠಿತ ಉತ್ಸವಗಳಲ್ಲಿ ಭಾಗವಹಿಸುವ ಹೆಮ್ಮೆ ನನ್ನದಾಗಿತ್ತು. ದ್ವಿತೀಯ ಎಂ.ಎಯಲ್ಲಿ ಇದ್ದಾಗಲೇ ICCR ಮುಖಾಂತರ ಈಜಿಪ್ಟ್, ತಾಷ್ಕೆಂಟ್‌ಗೆ ಭೇಟಿ ನೀಡಿದ್ದು ಮರೆಯಲಾರದ ಅನುಭವ. ಹಾಗೆಯೇ ಕಲ್ಕತ್ತಾದ ನಂದಿಕಾರ ಉತ್ಸವ, ಮುಂಬೈಯ ಆವಿಷ್ಕಾರ ಉತ್ಸವ, ಚಂಡಿಗಢದಲ್ಲಿ ‘ರಾಕ್ ಗಾರ್ಡನ್ಸ್’ನಲ್ಲಿ ನಾಟಕ ಪ್ರದರ್ಶನ ಪ್ರಪಂಚಾದ್ಯಾಂತ ಪರ್ಯಟನ.

ಈ ಸಂದರ್ಭದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಕವನದ ಈ ಸಾಲುಗಳು ಅವರ ರಂಗ-ಸೃಜನಶೀಲತೆಗೆ ಉತ್ತಮ ಉದಾಹರಣೆ.

ಪ್ರೀತಿ ಇಲ್ಲದ ಮೇಲೆ

ಹೂ ಅರಳೀತು ಹೇಗೇ?

ಪ್ರೀತಿ ಇಲ್ಲದ ಮೇಲೆ

ಮಾತಿಗೆ ಮಾತು ಕೂಡೀತು ಹೇಗೆ?

ಅರ್ಥ ಹುಟ್ಟೀತು ಹೇಗೆ?

ಬರಿ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ

ಪದ್ಯವಾದೀತು ಹೇಗೆ?

ರಂಗಭೂಮಿಯ ಬಗ್ಗೆ ಶಿಸ್ತು, ಬದ್ಧತೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಇವುಗಳು ಇಲ್ಲದಿದ್ದರೆ ಇತಿಹಾಸ ಸೃಷ್ಟಿಸುವಂತಹ ನಾಟಕದ ಕೊಡುಗೆಗಳನ್ನು ಕೊಡಲು ಅಸಾಧ್ಯ. ಅವರೊಂದು ರಂಗಶಾಲೆ ಅವರ ಮಾರ್ಗದರ್ಶನ ಉತ್ತಮ ಕೈದೀವಿಗೆ.

‘ಕರಿಮಾಯಿ’ ನಾಟಕದಲ್ಲಿ ಒಂದು ಸನ್ನಿವೇಶದಲ್ಲಿ ಗೌಡ ಮತ್ತು ದತ್ತುವಿನ ಸಂಭಾಷಣೆ ಮಧ್ಯೆ ಜಯಶ್ರೀಯವರು ‘ಮೌನ, ಮೌನ ಮಾತಾಡಬೇಕು’ ಎಂದು ಹೇಳುತ್ತಿದ್ದುದು ಇನ್ನೂ ಕಿವಿ ಕೊರೆಯುತ್ತಲಿದೆ. Silence speaks more than words ಇಂದಿನ ಅಬ್ಬರಗಳ ನಡುವೆ ಮೌನದ ಮುಖಾಂತರ ಅಭಿವ್ಯಕ್ತಿಸುವ ಸಾಮರ್ಥ್ಯ ರಂಗಭೂಮಿಗೆ ಮಾತ್ರ ಸಾಧ್ಯ ಎನಿಸುತ್ತದೆ.

‍ಲೇಖಕರು Avadhi

March 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Kiran Bhat

    ತುಂಬ ಒಳ್ಳೆಯ ರಂಗನೆನಪುಗಳು. ಮೊನ್ನೆ ಮೊನ್ನೆ ‘ ಮೂಕಜ್ಜಿ…’ ಯಲ್ಲಿ ನಿಮ್ಮ ಪಾತ್ರ ನೋಡಿದ್ದೆ. ಚೆನ್ನಾಗಿ ಅಭಿನಯಿಸಿದ್ರಿ.

    ಪ್ರತಿಕ್ರಿಯೆ
  2. Rudresh Adarangi

    ಲೇಖನ ಚೆನ್ನಾಗಿದೆ. ವಿದ್ಯಾ ಅವರು ತಮ್ಮ ಅನುಭವಕ್ಕೆ ಬಂದ ಬಿ ಜ ಯಶ್ರೀ ಅವರನ್ನು ಕುರಿತು ಮನದಾಳದ ಮಾತುಗಳಲ್ಲಿ ಹೇಳಿದ್ದಾರೆ. ಅಭಿನಂದನೆಗಳು

    ಪ್ರತಿಕ್ರಿಯೆ
  3. ಡಾ. ರಾಮಲಿಂಗಪ್ಪ ಟಿ. ಬೇಗೂರು.

    ವಿದ್ಯಾ
    ಜಯಶ್ರೀ ಅವರ ಕುರಿತ ನೆನಪಿನ ಬರಹ ‘ಒಡನಾಟ ಕಥನ’ದ ಧಾಟಿಯಲ್ಲಿ ಆಪ್ತವಾಗಿದೆ.
    ಇನ್ನಷ್ಟು ಇಂತಹ ನಿಮ್ಮ ಅನುಭವಗಳನ್ನು
    ಕಂತುಗಳಾಗಿ ಬರೆಯಿರಿ.

    ಪ್ರತಿಕ್ರಿಯೆ
  4. ಡಾ.ಎಂ.ಎಸ್.ವಿದ್ಯಾ

    ಬರವಣಿಗೆಗೆ ಈಗ ತಾನೇ ಹೆಜ್ಜೆ ಇಡುತ್ತಿರುವ ನನ್ನನ್ನು ಕೈಹಿಡಿದು ನಡೆಸುತ್ತಿರುವುದಕ್ಕೆ ಎಲ್ಲಾ ರಂಗಮಿತ್ರರಿಗೂ ಧನ್ಯವಾದಗಳು

    ಪ್ರತಿಕ್ರಿಯೆ
  5. ವನಜ ಪಿ

    ವಿದ್ಯಾ,
    ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ನೀನು ಬರಹಲೋಕಕ್ಕೆ ಬಂದಿರುವುದು ಸಂತೋಷ. ನಿನ್ನಿಂದ ಇನ್ನಷ್ಟು ಬರಹಗಳ ನಿರೀಕ್ಷೆಯಲ್ಲಿ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: