ಸಾವಿನ ಮನೆಯಲ್ಲಿ ಸಿಗುವ ಸಾಸಿವೆ ಕಾಳುಗಳು

ಅಮರ್‌ದೀಪ್

ಸಾವು ಸಂಭವಿಸಿದ ಮನೆಯಲ್ಲಿ ನಡೆಯುವ ಪ್ರಸಂಗಗಳು ಒಂದೊಂದು ಬಗೆ. ಒಮ್ಮೊಮ್ಮೆ ಬಹಳ ಇಂಟೆರೆಸ್ಟಿಂಗ್ ಇರುತ್ತವೆ. ಶತಾಯುಷಿಯಾಗಿ ಮರಣ ಹೊಂದಿದವರನ್ನು ನಾವೆಲ್ಲಾ ಕಂಡು ಕೇಳಿದಂತೆ ಊರ ತುಂಬಾ ಮೆರವಣಿಗೆ ಮಾಡಿ ಪಟಾಕಿ ಹೊಡೆದು ನೂರು ವರ್ಷ ಬದುಕಿದ, ಮಕ್ಕಳು ಮೊಮ್ಮಕ್ಕಳು, ಮರಿ, ಗಿರಿ ಮೊಮ್ಮಕ್ಕಳು ಕಂಡು ಹಾಡು, ಹಸೆ, ಬಾಣಂತನ, ಜೋಪಾನ, ಕಷ್ಟ, ದುಃಖ ಸುಖ ನಗು ಎಲ್ಲಾ ಎಲ್ಲಾ ಕಂಡು ಪಯಣ ಮುಗಿಸಿದ ಹಿರಿಯ ಜೀವಿಗಳನ್ನು ಅತ್ತು ಕಣ್ಣೀರಲ್ಲಿ ತೋಯಿಸದೇ ಹೆಮ್ಮೆ ಪಟ್ಟುಕೊಂಡು ಮೌನವಾಗಿ ಕಳುಹಿಸಿಕೊಡುತ್ತಿದ್ದರು. ಕೆಲವೆಡೆ ಈಗಲೂ ನಡೆದೇ ಇದೆ. ಕೆಲವರು ದುಃಖವನ್ನು ಅತ್ತು ಗೋಳಾಡಿ, ಬಿದ್ದು ಎದೆ ಬಡಿದುಕೊಂಡು ಎಚ್ಚರ ತಪ್ಪುವುದು.. ಮಾಡಿದರೆ.. ಇನ್ನು ಕೆಲವರು ದುಃಖವನ್ನು ಹೊರಹಾಕಲೂ ಆಗದೇ ಒಳಗೊಳಗೇ ಕೊರಗುತ್ತಾರೆ. ಆಗಾದರೋ ಮನೆಯಲ್ಲಿ ಹತ್ತಾರು ಜನ ಆಳು ಕಾಳು, ಊರು ಕೇರಿ ಕೂಗಿದರೆ, ಒದರಿದರೆ, ಓಣಿ ಜನ ಊರ ಜನ ಬಂಧು ಬಳಗದವರು ಹೊಲ, ಗೇಯ್ಮೆ ಎಲ್ಲಾ ಬಿಟ್ಟು ಕಾಗೆ ಗುಂಪಿನಂತೆ ಸೇರಿ ಸತ್ತ ಮನೆಯವರ ದುಃಖ ತಮ್ಮದೇನೋ ಅನ್ನುವಂತೆ ಕಣ್ಣೀರು ಹಾಕುವುದು ನಡೆಯುತ್ತಿತ್ತು.
ಮದುವೆ ಮುಂಜಿ ಅಂದರೆ ಮುಹೂರ್ತ ನೋಡಿಕೊಂಡು, ಕಾಳಜಿ ವಹಿಸಿ ಮಾಡಿದರೆ ಸಾವಿನ ನಂತರ ಮಾಡುವುದು ಸಮಯ ನೋಡದೆಯೇ… ಒಬ್ಬ ಸತ್ತ ಅಂತ ಗೊತ್ತಾದರೆ ಸಾಕು ಹತ್ತಿರ, ದೂರವಿದ್ದ ತಿಳಿದ, ಪರಿಚಯಸ್ಥ, ಬಂಧುಗಳಿಗೆ ಸುದ್ದಿ ಮುಟ್ಟಿಸಿ ಗೂಟಕ್ಕೆ ದೇಹವನ್ನು ಆನಿಸಿ ಕೂಡಿಸಿದರೆ, ಆತು. ಇನ್ನು ಮಣ್ಣು ಕೊಡುವ ತನಕ ಮನೆಯಲ್ಲಿ ಕಡ್ಡಿ ಗೀರದೇ ಪಕ್ಕದ ಬಯಲಲ್ಲೇ ಬೆಳತಂಕ ಸಂಕಟ ಆಗಲಾರದಂತೆ ಉಪ್ಪಿಟ್ಟು ತಿರುವಿಟ್ಟು ಚಾ ಸೋಸುವುದೇ. ರಾತ್ರಿ ಆದರೆ ಸಂಭಂಧಿಕರು ಬಂದವರೊಂದಿಗೆ ಬದುಕಿನ ಜಂಜಡ, ರೋಗ ರುಜುನಿ, ದುಡಿಮೆ, ಮನೆ ಸಾಲ, ವ್ಯಾಪಾರ ನಷ್ಟ, ಮಕ್ಕಳ ಓದು, ರಿಟೈರ್ ಮೆಂಟ್ ಪೆನ್ಷನ್ನು, ಹೊಲದ ವ್ಯಾಜ್ಯ, ಪಾಲು ಪಂಚಾಯಿತಿ, ಅಣ್ಣ ತಮ್ಮಂದಿರ ಹಕ್ಕೀಕತ್ತು, ಅಕ್ಕ ತಂಗಿಯರ ಹರಕತ್ತು, ಅತ್ತೆ ಸೊಸೆ ಇರುಸು ಮುರುಸು, ಹಾಳು ಸಂಗ ಮಾಡಿದ ಮೊಂಡ ಮಕ್ಕಳು ಇವೆ ಮೊದಲಾದವುಗಳ ಬಗ್ಗೆ ಸಾಕಷ್ಟು ಮಾತಾಡಿ ಕೊನೆಗೆ “ಏನ್ ಮಾಡಿದ್ರ ಏನೈತಿ … ಕೊನೆಗೊಂದಿನ ಹೋಗೋದ್ ಇದ್ದದ್ದೇ” ಅಂದು ಎದ್ದು ಬಂದು ಒಂಚೂರು ದೂರದ ಕತ್ತಲಲ್ಲಿ ಸಿಗರೇಟಿಗೆ ಬೆಂಕಿ ತಾಕಿಸುವವರು, ಉಪ್ಪಿಟ್ಟು ಏನಾದ್ರೂ ಉಳಿದಿದ್ದರ ಚೂರ ತಿಂದ್ರಾತು ಬೆಳತನ ಸಂಕಟ ತಡಯಾಕಾಗಲ್ಲ, ಹಾಳಾದ್ದು ಸಕ್ಕರೆ ಖಾಯಿಲೆ ಬೇರೆ” ಅಂದು ಹೊರಡುವವರು ಒಂದಿಷ್ಟು. ಸೂತಕದ ಮನೆಯಲ್ಲಿ ಒಂದೆರಡು ಗಳಿಗೆ ಉಮ್ಮಳಿಸಿ ಬಂದರೂ ಸಾವರಿಸಿಕೊಂಡ ಮನಸ್ಸಿಗೆ ದುಃಖವೂ ಮುಗಿದು ಹೋಗುತ್ತದೆ.
ಇನ್ನು ಭಜನೆ ಮಾಡುವವರದ್ದು ಒಂದು ಟೀಮ್… ಒಂದು ತಪಾಲಿ ಟೀ ಕಾಯ್ತಾ ಇರಬೇಕು… ಬಂಡಲ್ ಬೀಡಿ ಕಡ್ಡಿ ಬುರ್ಜು ಸಮೇತ ” ಅಂಬಿಗ ನಾ ನಿನ್ನ ನಂಬಿದೆ …… ” ಶುರು ಹಚ್ಚಿಬಿಡುತ್ತಿದ್ದರು. ಅದೆಲ್ಲದರ ಮಧ್ಯೆ ಅತ್ತ ಸಂಭಂಧಿ ಎಂದರೆ ಹೌದು ಪರಿಚಯ ಎಂದರೂ ಹೌದು ಎಂಬಂತಿರುವವರು ಒಂದಿಷ್ಟು ಜನ ಇರುತ್ತಾರೆ. ಸತ್ತವರ ಗಂಡಸರಾ , ಹೆಂಗಸರಾ , ವಯಸ್ಸಾದವರಾ? ಹರೆಯದವರಾ, ದುಡಿಮೆ ಮಾಡಿಟ್ಟು ಗಳಿಸಿದ್ದನಾ? ಕುಡಿದು ಹಾಳು ಮಾಡಿದ್ದನಾ ಎಲ್ಲವನ್ನೂ ಕರೆಕ್ಟ್ ಆಗಿ ಮಾಹಿತಿ ಕಲೆ ಹಾಕಿ ಸತ್ತವರೊಂದಿಗೆ ಇದ್ದಿರಲೂಬಹುದಾದ ಸಲಿಗೆಯ ಹೆಸರಿಡಿದು ಕೂಗುವಷ್ಟು ಆತ್ಮಿಯತೆಯನ್ನೂ ಉಳಿಸಿಕೊಂಡಿದ್ದವರು ಬಂದು ಕುಂತರು ಅಂದರೆ ಅಲ್ಲೊಂದು ವೈಬ್ರೇಶನ್ ತಂದರೂ ಅಂತಲೇ ಅರ್ಥ.. ಅಂಥದ್ದೊಂದು ರಾಗಬದ್ಧವಾದ ಧ್ವನಿಯಿದ್ದ ಒಬ್ಬ ಎಕ್ಸ್ಪರ್ಟ್ ನೆನಪಾಗಿ ನನ್ನ ಸ್ನೇಹಿತನಿಗೆ ಇದೆಲ್ಲಾ ಹೇಳುತ್ತಿದ್ದೆ..
ನನ್ನ ಸ್ನೇಹಿತ ಒಬ್ಬ ಸೂಕ್ಷ್ಮ ವ್ಯಕ್ತಿ. ದೇಶೀಯ ಸಂಸ್ಕೃತಿ, ಆಹಾರ ಪದ್ಧತಿ,ಜೀವನ ಕ್ರಮ ಎಲ್ಲವನ್ನೂ ಇಷ್ಟಪಡುವ ಆತ ಹೊಸದಾಗಿ ಸೃಜಿಸಲಾಗಿರುವ ಜಾನಪದ ವಿಶ್ವ ವಿದ್ಯಾಲಯದಲ್ಲಿ ಒಂದು ಸಣ್ಣ ಅವಕಾಶ ಸಿಕ್ಕರೂ ರಾಜ್ಯಾದ್ಯಂತ ತಿರುಗಿ ಇನ್ನೂ ಕೆಲವೆಡೆ ಸಮಾಜದ ಮುಖ್ಯವಾಹಿನಿಯಿಂದ ದೂರ ಇರುವ, ಬೆಳಕಿಗೆ ಬಾರದಿರುವ ವ್ಯಕ್ತಿಗಳ ಚಿತ್ರಣ, ಸಂಸ್ಕೃತಿ ಎಲ್ಲದರ ಬಗ್ಗೆಯೂ ಸಾಧ್ಯಂತವಾಗಿ ಅಭ್ಯಸಿಸಿ ಒಂದು ರೂಪ ಕೊಟ್ಟು ಮಾಧ್ಯಮದ ಮುಂದೆ ತರಲು ಪ್ರಯತ್ನಿಸುತ್ತಲೇ ಆ ವಿಷಯದ ಬಗ್ಗೆ ಕಾಳಜಿಯಂತೂ ಇಟ್ಟುಕೊಂಡು ಅವಕಾಶ ಸಿಕ್ಕಾಗಲೆಲ್ಲಾ ಕ್ರಿಯಾತ್ಮಕವಾಗಿ ಪ್ರತಿಕ್ರಿಯಿಸುತ್ತಾನೆ. ಆತನ ಒಂದಂಶದ ಅಜೆಂಡಾ ಈ ವಿಷಯವನ್ನು ಹೇಳಲಿಕ್ಕನುವಾಯಿತು. ಕಥೆ ಎಂದರೂ ವಾಸ್ತವ ಎಂದರೂ ಯಾವುದಕ್ಕೂ ಒಗ್ಗುವ ಪ್ರಸಂಗ ಇದಾಗಿದೆ …
ಹೀಗೆ ಅತ್ತ ಹಳ್ಳಿಯಲ್ಲದ ಇತ್ತ ಪಟ್ಟಣ ವೆಂದು ಹೇಳಲೂ ಆಗದಂಥ ಒಂದೂರಲ್ಲಿ ಅಜಮಾಸು ಐವತ್ತರಿಂದ ಅರವತ್ತು ವಯಸ್ಸಿದ್ದ ಒಬ್ಬರಿದ್ದರು, ತಾಯವ್ವ ಅಂತ “ಹಾಲ್” ನಂಥ ಮನಸು. ಊರಲ್ಲಿ ಎಷ್ಟು ಜನ ಬೇಕಾದ್ರೂ ಸಾವಿಗೀಡಾಗಲಿ, ಅವರವರ ಬಯೋಡೇಟಾವನ್ನು ನಾಲಗೆ ಮೇಲೆ ಇಟ್ಟುಕೊಂಡು ಬಣ್ಣಿಸಲೋ ಅಣಿಯಾಗುತ್ತಿದ್ದಳು ..ಓಣಿ ಜನಕ್ಕೆ, ಸಂಭಂಧಿಕರಿಗೆ, ಪರಿಚಯಸ್ಥರಿಗೆ ಅಷ್ಟೇಕೆ ಅಕ್ಕಪಕ್ಕದ ಹಳ್ಳಿಗಳಲ್ಲೂ ಫೇಮಸ್….. ಯಾರಾದ್ರೂ “ಹೋಗ್ ಬಿಟ್ರು ” ಅಂದ್ರೆ ಸಾಕು ಮಣ್ಣು ಕೊಡೋದಿಕ್ಕೆ ಬರುವವರಿಗೆ ತಾಯವ್ವನ ಶಾಸ್ತ್ರೋಕ್ತ ಶೋಕ ಲಹರಿ ಅತ್ಯಂತ ಪರಿಚಿತ. ಅಕ್ಷತೆ ಹಾಕುವುದಿಕ್ಕೆ ಕರೆದೂ ಹೋಗದಿದ್ದರೂ ಪರವಾಗಿಲ್ಲ, ಹೆಣಕ್ಕೆ ಹೆಗಲು ಕೊಡಲು, ಹಿಡಿ ಮಣ್ಣು ಕೊಡಲು ಹೇಳಿಸಿಕೊಳ್ಳದೇನೇ ಹೋದರೆ ಮಾತ್ರ ಸೂಕ್ತವೆಂದು ತನ್ನ ತಿಳುವಳಿಕೆ ಮಟ್ಟಿಗೆ ಅಂದುಕೊಂಡಿದ್ದಳು ಆಕೆ. ಅಷ್ಟಕ್ಕೂ ಆಕೆಗೇನು ಗಂಡ ಬದುಕಿದ್ದನಾ? ಕಳಕೊಂಡೇ ಹತ್ತು ವರ್ಷ ಆಗಿತ್ತು. ಮಕ್ಕಳು ಓದಿ ಪೇಟೆ ಸೇರಿಕೊಂಡಿದ್ದರು.. ಹಳ್ಳಿಯಲ್ಲಿ ತನಗಿದ್ದದ್ದು ಕಂಪೌಂಡ್ ಇಲ್ಲದ ಆರ್ ಸಿ ಸಿ ಇಲ್ಲದ ಮನೆ, ಗದ್ದೆಯ ಕೂಲಿ ಕೆಲಸ, ದುಡಿಮೆಗೆ ಸಿಕ್ಕ ಅನ್ನದ ಋಣದಷ್ಟೇ ಆಸೆಯು ಸಹ .. ಒಂದು ಅನಾಥ ಹುಡುಗಿ ಸಾಕಿ ಮನೆ ಚಾಕರಿ ಮಾಡಿಸಿಕೊಂಡು ಹೊಟ್ಟೆ ತುಂಬಾ ಊಟ ಕೊಟ್ಟು ದೇಖರಿಕೆ ಮಾಡಿ ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಿಕೊಟ್ಟರಾಯಿತೆಂದು ಚೆಂದಗಿಟ್ಟಿದ್ದಳು.

ಆದರೆ ಊರಿನಲ್ಲಿ ಒಳ್ಳೇದು ಕೆಟ್ಟದ್ದು ಅಂತ ಬಂದರೆ ಹಿಂಡು ಜನಗಳ ಕಲೆಹಾಕಿ ಪಂಚಾಯಿತಿಗೆ ಎಳೆದು ಬಿಡುತ್ತಿದ್ದಳು. ಬಾಯಿ ಬಿಟ್ಟರೆ ಸಾಕು ಮಾತು ಭಲೇ ಬಿರುಸು ಹೌದು. ಕೆಲವು ಪಂಚೆ ಭದ್ರ ಹಿತಾಸಕ್ತಿ ಇಲ್ಲದವರ ಗೌಪ್ಯವನ್ನೂ ಅವರವರ ಹೆಂಡಿರ ಮುಂದೆ ಹೇಳಿ ಶಭಾಷ್ಗಿರಿ ಪಡೆದಿದ್ದಳು. ಪುಂಡು ಹುಡುಗರು ಕೆರೆ ದಂಡೆ ಮೇಲೆ ಬಟ್ಟೆ ತೊಳೆಯೋಕೆ ಬಂದ ನೆರಿಗೆ ಲಂಗದ ಹುಡುಗಿಯರನ್ನು ಆಗಾಗ ಕಾಡಿಸಿದ್ದರ ಪರಿಣಾಮವಾಗಿ ” ಅಯ್ಯ ನಿಮ್ ಹೆಣ ಎತ್ಲಿ….” ಅಂತಂದು ಗುಂಪಿನ್ಯಾಗಿನ ಒಬ್ಬನಿಗೆ ಊರ ಸೌಕಾರ ಗದರಿಸಿ ಎರಡು ಮೈಲಿ ದೂರ ಇರಿಸಿದ್ದ ಪಾರಿ ಮಗಳ ಕೈಲಿ ಊರ ಮಧ್ಯೆ ಇರುವ ಸುಂಕ್ಲಮ್ಮ ಗುಡಿಯಲ್ಲಿ ತಲಾಟಿ, ಖಾಕಿ, ಖಾವಿ, ಪಂಚರನ್ನ ನಿಂದಿರಿಸಿ ಅವರೆದುರಿಗೆ ರಾಖಿ ಕಟ್ಟಿಸಿ, “ಇನ್ನಾ ಏನಾರ ಗಾಂಚಾಲಿ ಮಾಡಿದ್ರ ಇನ್ನೊಬ್ಬನಿಗೆ ಗಂಟಾ ಹಾಕಿಸಿಬಿಟ್ಟೇನು” ಅಂದುಬಿಟ್ಟಿದ್ದಳು. ತಾಯವ್ವ ಅಂದ್ರೆ ಅಷ್ಟು ಕಡಕ್ಕು. ಊರ ಜನ ಮಾತ್ರ ಹಬ್ಬ ಹರಿದಿನ ಜಾತ್ರೆ ದೇವ್ರು ದಿಂಡಿರು ಏನೇ ಬರಲಿ ತಾಯವ್ವನ್ನ ಬಿಟ್ಟು ಆಚರಿಸಿದ್ದು ನೆನಪೇ ಇಲ್ಲ. ಅದರಾಗದರಾಗ ಯಾರಾದ್ರೂ ಸತ್ತರಂತೂ ಹೊಸದಾಗಿ ಲಗ್ನ ಮಾಡಿಕೊಂಡು ಶೋಭನಕ್ಕೆ ಮುಂಚೆ ಮಧು ಮಕ್ಕಳನ್ನು ನಿಲ್ಲಿಸಿ ಸೊ.. ಬಾನೆ ಗೀತೆ ಹಾಡೋಕೆ ಬರೋರಿಗೆ ಎಷ್ಟು ಪ್ರಾಮುಖ್ಯತೆ ಇತ್ತೋ ಸತ್ತಾಗ ಹೆಣದ ಮುಂದೆ ಶಾಸ್ತ್ರೋಕ್ತವಾಗಿ ಅಳೋದಿಕ್ಕೇ ಅಂತಲೇ ಅವರಜ್ಜಿ ಕಾಲದಿಂದಲೂ ಕರಗತ ಮಾಡಿಕೊಂಡು ನಾಲ್ಕಾರು ಜನರ ತಂಡ ಕಟ್ಟಿ ಯಾರಾದ್ರೂ ಸರಿ, ಕೋರಸ್ ಸಮೇತ ಶಾಸ್ತ್ರೋಕ್ತವಾಗಿ ಅತ್ತು ಪ್ರತಿಕ್ರಿಯೆಗೂ ಕಾಯದೇ, ಪ್ರತಿಫಲವನ್ನೂ ನಿರೀಕ್ಷಿಸದೇ ಮಣ್ಣು ಕೊಟ್ಟು ಬರುವುದನ್ನು ರೂಢಿಸಿಕೊಂಡು ಮುಂದುವರೆಸಿದಂಥ ತಾಯವ್ವನ ಉಸ್ತುವಾರಿ ಕಂಪಲ್ಸರಿ ಬೇಕು ಅನ್ನೋದು ಫೋರ್ಸಿಬಲಿ ಕಣ್ಣಲ್ಲಿ ತರಿಸಿಕೊಳ್ಳಲು ಮಣ್ಣಿಗೆ ಬಂದವರ ಅಲಿಖಿತ ಅಪೇಕ್ಷೆಯಾಗಿರುತ್ತಿತ್ತು.
ಹೀಗೆ ಆಕಸ್ಮಿಕವಾಗಿ ಊರಿನ-“ಗಣ್ಯ”ರ ಪೈಕಿ ಒಬ್ಬ ಸೌಕಾರ ಹಿಂದಿನ ರಾತ್ರಿ ನಿಧನರಾದ ಸುದ್ದಿ ಬಾಯಿಂದ ಬಾಯಿಗೆ ಹರಡಿದ್ದು ತಾಯವ್ವನ ಕಿವಿಗೆ ಮಾರನೇ ದಿನ ಮಧ್ಯಾನ್ಹ ಬಿದ್ದಿತ್ತು. ಲೋಕಲ್ ಚಾನಲ್ ನಲ್ಲಿ ಬಿಟ್ಟಿದ್ದ ಸುದ್ದಿ ಕಡೆ ಆಕೆಗೆ ಲಕ್ಷ್ಯ ಇದ್ದಿಲ್ಲ. ತಾಯವ್ವ ಟಿ.ವಿ. ನೋಡಿದರೆ ಸಂಸಾರ ಮುರಾಬಟ್ಟಿ ಮಾಡುವಂಥ ಸೀರಿಯಲ್ ಗಳನ್ನೇನು ನೋಡ್ತಿದ್ದಿಲ್ಲ. ಆದರೆ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸದಂಥ ಸಿನಿಮಾ ಬಂದರಂತೂ ಇದ್ದಬದ್ದ ಕೆಲಸ ಮರೆತು ಕುಂತುಬಿಡುತ್ತಿದ್ದಳು, ಅದೆಷ್ಟು ಬಾರಿ ಬಂದರೂ. ಆ ಸೌಕಾರನದ್ದೂ ಒಂದು ಕಥೆ, ಪಂಚಾಯತಿಯಿಂದ ಹಿಡಿದು ಎಮ್ಮೆಲ್ಲೆ ತನಕ ಸಖ್ಯ ಹೊಂದಿದ್ದ ಪ್ರಭಾವಿ, ಲೇವಾದೇವಿಯಿಂದ ಹಿಡಿದು ಕಂಡವರ ಆಸ್ತಿ ಬರೆಸಿಕೊಂಡು ಕೈ ಎತ್ತಲ್ಲಿವರೆಗೆ ಹಾಗೂ ಒಂದಲ್ಲ ಅಂತ ಮೂರನೇ ಮದುವೆ ಮಾಡಿಕೊಂಡಿದ್ದಲ್ಲದೇ ಆಗಾಗ ಹಗ್ಗವನ್ನು ಹಾವೆಂದು ಹೆದರಿಸಿ ಹರಿದಾಡುವಂಥ ಚಾಳಿ ಹೊಂದಿದ್ದ. ಆದರೂ ಒಂದಷ್ಟು ಒಳ್ಳೆ ಕೆಲಸ ಮಾಡಿ ಚೂರು ಗರ್ವಿಯೂ ಆಗಿದ್ದ. ಅಂದು ನ-“ಗಣ್ಯ”ರು ಹೋದ ಸುದ್ದಿ ಹೆಂಗೋ ತಿಳ್ಕಂಡು ಹೊರಟು ದಾರಿ ಮಧ್ಯೆ ಬೀದಿ ನಲ್ಲಿ ಎದುರಿಗಿದ್ದ ಮಾರಕ್ಕನ ಮನೆಯ ಪಡಸಾಲಿಗೆ ಬಂದು ಕುಂತು “ಮಾರಕ್ಕ, ಒಂದು ಸೇರಿನೇಸು ಒಣ ಮಂಡಾಳು, ಒಣ ಖಾರ ಹಚ್ಚಿ ಉಳ್ಳಾಗಡ್ಡಿ ಚೂರು ಕೊಡಾ ಯವ್ವ…. ಬಿಸಲಾಗ ಬಂದು ಥಾಮಸು ಬಂದಂಗಾತು… ಒಂಚೂರು ತಿಂತೇನಿ… ಅಮ್ಯಾಲ ಒಂದರ್ಧ ವಾಟೆ ಚಾ ಕುಡುದ್ನ್ಯಂದ್ರ ಮತ್ತ ಒದರಾಕ ದನಿ ಸುದ್ದ ಅಕೇತಿ” ಅಂದಳು. ತಾಯವ್ವನ್ನ ಮೂವತ್ತು ವರ್ಷದಿಂದ ನೋಡುತ್ತಿದ್ದ ಮಾರಕ್ಕನಿಗೆ ಆಶ್ಚರ್ಯವೂ ಆಗಲಿಲ್ಲ… ಬೇಜಾರೂ ಬರಲಿಲ್ಲ.. “ಸೌಕಾರ ಹೋದನಂತಲ್ಲಾ … ಅಲ್ಲೇ ಹೊಂಟಿಯೇನು? ಕೇಳಿದಳು. ಹ್ಞೂ.. ಅಂದಾಕೆ ಕೊಟ್ಟ ಮಂಡಾಳು ತಿಂದ ಚಾ ಕುಡಿದು, ತಾಯವ್ವ ಸರಬರ ನಡೆದೇ ಬಿಟ್ಟಳು… ಅದಕ್ಕೂ ಮುಂಚೆ ತಾಯವ್ವ ತನ್ನ ಮನೆಯಲ್ಲಿ ಗಡದ್ದಾಗಿ ತಿಂದು ಇನ್ನು ಎರಡು ತಾಸು ಆಗಿದ್ದಿಲ್ಲ..
ಗಣ್ಯನ ಮನೆ ಮುಂದ ದೊಡ್ಡ ಕ್ರೌಡು, ಗಾಡಿಗಳು, ಕಾರುಗಳು, ಜನ ಜಾತ್ರಿ ಆಗಿತ್ತು.ಮುಸಿ ಮುಸಿ ಸೆರಗು ಮುಚ್ಚಿಕೊಂಡು ಅಳುವವರ ಹೆಂಗಸರ ಗುಂಪು ಮನೆಯ ಒಳ ಕೋಣೆಗಳಲ್ಲಿ ಜಮೆ ಆಗಿದ್ದರೆ, ಹೊರಗೆ ಪಡಸಾಲಿಯಲ್ಲಿ ಹೆಣದ ಮುಂದೆ ಬೀಗರು ಬಿಜ್ಜರು, ವಯಸ್ಸಾದವರು, ಕುಳಿತಿದ್ದರು. ಮನೆ ಕಂಪೌಂಡ್ ಗೇಟಿನಲ್ಲಿ ನಿಂತಿದ್ದ ನಿಂಗಪ್ಪ, ದೂರದಿಂದ ಸರಬರ ಬರುತ್ತಿದ್ದ ತಾಯವ್ವನ್ನ ನೋಡಿದ್ದೇ ತಡ ಅಲ್ಲಿಂದಲೇ “ನೀ ಹೊದ್ಯಲ್ಲ ಅಂತಂದು ನೋಡಾಕ ತಾಯವ್ವ ಬಂದ್ಲು ನೋಡಾ …. ಯಪ್ಪಾ ….” ಶುರು ಹಚ್ಚಿಕೊಂಡ… ಅಸಲಿಗೆ ನಿಂಗಜ್ಜನಿಗೆ ಆ ಸೌಕಾರನ ಸಾವು ಅಂಥ ದುಃಖ ತರದಿದ್ದರೂ ತಾಯವ್ವನ ಬಾಯಿಂದ ಸೌಕಾರನ ಗ್ರಹಚಾರ ಬಿಡಿಸುವ ಲೆಕ್ಕಾಚಾರ ಇಟ್ಟುಕೊಂಡೇ ಶುರು ಹಚ್ಚಿಕೊಂಡಿದ್ದ…ಯಾಕೆಂದರೆ, ಇಪ್ಪತ್ತೆರಡು ವರ್ಷದ ಕೆಳಗೆ ಲಗ್ನ ಮಾಡ್ಕೊಂಡು ಊರ ಬಿಟ್ಟು ಓಡಿ ಹೋಗಲು ಹ್ಞೂ ಅಂದಿದ್ದ ಪಾರಿಯನ್ನು ಅಪವಾದ ಹೊರಿಸಿ ಈ ಸೌಕಾರ ಆಕೆಯನ್ನು ಊರಿಂದ ಆಚೆ ತಳ್ಳಿದ್ದರ ಸಿಟ್ಟಿನ್ನು ನಿಂಗಪ್ಪ ಮರೆತಿದ್ದಿಲ್ಲ. ಅಲ್ಲಿತನಕ ಇದ್ದ ಪರಿಸ್ಥಿತಿ ಒಂದಾದರೆ… ತಾಯವ್ವ ಬಂದ ನಂತರದ್ದೇ ಬದಲು.. ತಾಯವ್ವ ತನ್ನ ಚಪ್ಪಲಿ ಮನೆ ಗೇಟಿನಲ್ಲೇ ಬಿಟ್ಟು ಮುಖ ತಟಗು ಮಾಡಿ ಮೂಗು ಸೀಟುತ್ತಾ , “ಅಯ್ಯೋ ಸೌಕಾರ….. ಹಿಂಗ ಚೂರರ ಸುಳುವು ಕೊಡದ ಹೊಂಟರ ಮನ್ಯಾಗಿನ ಸಣ್ಣ ವಯಸ್ಸಿನ ಗೊಂಬಿ ಹಂಗ ಇರೋ ಮೂರನೇ ಹೆಂಡ್ರು ಗತಿ ಹೆಂಗೋ ಯಪ್ಪಾ ? ಅಂದಳು ನೋಡ್ರಿ… ಸೌಕಾರನ ಹೆಣದ ಮುಂದೆ ಕುಂತ ಮೂರು ಹೆಂಡ್ರು ನಡುವೆ ಉಳಿದಿದ್ದ ಒಬ್ಬರೇ ಬೀಗರಾಗಿದ್ದ ಭರಮಪ್ಪನ ಹೆಂಡತಿ ಎದೆ ದಸ್ಸಕ್ಕೆಂದಿತು. ತಾಯವ್ವ ಲಹರಿ ಮುಂದುವರಿಸಿದಳು. ಮೊದಲಾದರೆ ಅವರವರ ಬದುಕಿದ್ದಾಗಿನ ಬಾನಗಡಿಗಳನ್ನೂ ರಂಗು ರಂಗಾಗಿ ಕೋರಸ್ ಸಮೇತ ಹೇಳಿ ಸಿಟ್ಟು ತೀರಿಸಿಕೊಳ್ಳುತ್ತಿದ್ದಳು. ಬರುಬರುತ್ತಾ “ಇದ್ದಾಗಂತೂ ಎದುರಬದುರಾ ಹಣಿದದ್ದು ಖರೇನ ಐತಿ. ಸತ್ತಾಗ್ಲೂ ಹೇಳಿ ನಾನಾರ ಯಾಕ ಕೆಟ್ಟಾಕಿ ಆಗ್ಲಿ” ಅಂದು ಗುಣಗಾನ ಮಾಡಿ ಅತ್ತು ಎದ್ದು ಬಂದು ಬಿಡುತ್ತಿದ್ದಳು.
ಹೊಸದಾಗಿ ತಾಯವ್ವನ್ನ ಕಂಡ ಜನಕ್ಕೆ ಇದು ಕಿವಿ ಕಚ್ಚೋ ಚಾಳಿ ಅನ್ನಿಸಿದರೂ, ಗೊತ್ತಿದ್ದವರಲ್ಲಿ ಆಕೆಯ ನಿಷ್ಕಲ್ಮಶ ಮನಸ್ಸಿಗೆ ಮಾರು ಹೋಗಿದ್ದರು. ಒಳ್ಳೆದಿದ್ರ ಒಳ್ಳೇದು ಕೆಟ್ಟದಿದ್ರ ಕೆಟ್ಟದ್ದು ಯಾವುದನ್ನೂ ಮುಚ್ಚು ಮರೆ ಇಲ್ಲದೇ ಹೊರಹಾಕಿ ಬದುಕಿರೋವರೆಗೂ ಸತ್ತ ವ್ಯಕ್ತಿ ಇದ್ದಂಥ ಚಿತ್ರಣ ಸತ್ತು ಮಣ್ಣ ಸೇರುವುದರೊಳಗೆ ತಾಯವ್ವನ ಬಾಯಲ್ಲಿ ಕೊನೆ ದಿನ ವಿಮರ್ಶೆಗೆ ಒಳಗಾಗಿ ಬಿಡುವ ಸಂಭವವನ್ನು ಅರಗಿಸಿಕೊಳ್ಳುತ್ತಿದ್ದರು. ಅದುವರೆಗೆ ಅನತಿ ದೂರದಲ್ಲಿ ನಿಂತು ಕನ್ನಡಕದ ಎಪ್ಪತ್ತರ ಅಜ್ಜನೊಬ್ಬ ತಾಯವ್ವನನ್ನೇ ಬಹಳ ಹೊತ್ತಿನಿಂದ ನೋಡುತ್ತಿದ್ದ.. ಗೇಟಿನಲ್ಲಿ ಬರುವವರನ್ನು ತನ್ನ ಕೆಂಪು ಟವೆಲ್ನಿಂದ ಕಣ್ಣೊರೆಸಿಕೊಳ್ಳುವ ನಾಟಕವಾಡಿ ಬರಮಾಡಿಕೊಳ್ಳುತ್ತಿದ್ದ ನಿಂಗಪ್ಪನನ್ನು ಕರೆದು “ನಿಂಗ, ನಾ ಏನಾರ ಇವತ್ತು ನಾಳೆ ಸತ್ರ ಒಂತಾಸರ ನನ್ನ ಹೆಣದ ಮುಂದೆ ತಾಯವ್ವನ್ನ ಕರೆಸಲೆ” ಅಂದದ್ದು ಕೇಳಿ ಗೇಟಿನ ಮುಂದೆ ಪಟಾಕಿ ಆರಿಸುತ್ತಿದ್ದ ಸಣ್ಣ ಹುಡುಗರ ಗುಂಪಿನಲ್ಲಿದ್ದ ನಿಂಗಪ್ಪನ ಮಗ “ಯಜ್ಜ ನೀನ್ಯಾವಾಗ ಗೂಟಕ್ ಕುಂದ್ರಾದು” ಅಂದುಬಿಟ್ಟ… ಸೌಕಾರನಂತೆ ಅನಾಚಾರ ಮಾಡದೇ ಪಕ್ಕದೂರಿನಲ್ಲಿ ಮಾಸ್ತರಿಕೆಯಿಂದ ಬಂದ ಸಂಬಳವನ್ನು ಬಡ ಮಕ್ಕಳ ಓದಿಗೆ ಖರ್ಚು ಮಾಡಿದ್ದರೂ ಯಾರ ಮುಂದೂ ಏನೊಂದು ಬೇಡದೇ ಇದ್ದ ಅಜ್ಜನ ಎದೆಯೊಳಗಿನ ಕಫ ತಿರುಗದಂತಾಗಿ ಕೆಮ್ಮತೊಡಗಿದ. ಒಂದು ಮಧ್ಯಾಹ್ನದಿಂದ ಶುರು ಹಚ್ಚಿಕೊಂಡಿದ್ದ ತಾಯವ್ವ ಸಂಜೆ ನಾಲ್ಕರವರೆಗೂ ನಾನ್ -ಸ್ಟಾಪ್ ಶೋಕವನ್ನು ಇತರರಿಂದ ತೋಡಿಸುತ್ತಿದ್ದಳು, ತನ್ನ ಶಾಶ್ತ್ರೋಕ್ತ ಲಹರಿಯಿಂದ..
ಸಂಜೆ ಸೌಕಾರನ ಶವ ಸಂಸ್ಕಾರ ಮುಗಿಸಿ ವಾಪಾಸ್ಸು ಬರುತ್ತಾ ಕೆರೆಯಲ್ಲಿ ತಲೆ ಮೇಲೆ ನೀರು ಚುಮುಕಿಸಿಕೊಂಡು ಹೊರಟಿದ್ದ ಜನರ ಮಧ್ಯೆ ಇನ್ನೇನು ಮುಳುಗುವ “ಸೂರಪ್ಪ” ನನ್ನು ಪ್ರತಿ ದಿನದಂತೆ ಅವತ್ತೂ ಸೆರೆ ಹಿಡಿಯುತ್ತಿದ್ದ ಪಕ್ಕದೂರಿನ ಶಂಕ್ರಣ್ಣ ತಾಯವ್ವಳನ್ನು ನಿಲ್ಲಿಸಿ ಒಂದು ಫೋಟೋ ಕ್ಲಿಕ್ಕಿಸಿದ.. “ತಾಯವ್ವ, ಎಲ್ಲಿತನಕ ನಿನ್ನ ಸೂತಕದ ಮನೆಯ ಶಾಸ್ತ್ರೋಕ್ತ ಅಳುವಿನ ಪಯಣ?” ಕೇಳಿದ. ತಾಯವ್ವ ಓದಿದ್ದು ಸಹಿ ಮಾಡಲು ಬರುವಷ್ಟರ ಮಟ್ಟಿಗೆ ಮಾತ್ರ. ಆದರೆ ಆಕೆ ಯುನಿವೆರ್ಸಿಟಿ ಓದಿನವರಿಗೂ ಸಮಂಜಸವೆನಿಸುವಂಥ ಮಾತನ್ನು ಹೇಳಿದ್ದಳು. ” ತಮ್ಮಾ , ಈಗ ಸೌಕಾರ ಸತ್ತ, ನಾಕ್ ಮಂದಿ ಬಂದ್ರು, ನಾಕ್ ಊರಿಗ್ ಗೊತ್ತಾಯ್ತು. ನಮ್ಮಂಗ ಸೂತಕದ ಮನ್ಯಾಗ ನಾನು, ನನ್ನಿಂದೆ ನಾಕ್ ಜನ ಯಾರೂ ಕರೀದೆ ಇದ್ರೂ ಬಂದು ಸತ್ತವರ ಬಗ್ಗೆ ನಾಕ್ ಒಳ್ಳೆ ಮಾತಾಡಿ ನಮ್ ಪಾಲಿನ ಋಣ ಅಂದ್ಕೊಂಡು ಮಣ್ಣು ಕೊಟ್ಟು ಎದ್ದು ಬರ್ತೀವಲ್ಲಾ, ಒಬ್ಬರೂ ಬಂದು ನಿಮ್ ಮನೆ ಕಥೆ ಏನು ಹೆಂಗೆ ನಿಮ್ ಜೀವನ ಅಂತ ಯಾರೂ ಕೇಳಲ್ಲ.. ಅಲ್ಲಾ, ವಂಶಾವಳಿ ಗಂಟು ಕಟಿಗ್ಯಂಡು ವರ್ಷಕೊಂದ್ಸಲ ಮನಿ ಬಾಗ್ಲಾಗ ಬಂದು ನಿಂತ ಹೆಳವರನ್ನು ಹೊಸ್ತಿಲ ಪಕ್ಕಕ್ಕೆ ಕುಂದ್ರಿಸಿ, ಮನೆಯಲ್ಲಿದ್ದದ್ದು ಕಾಳೋ,ಬಟ್ಟೆ, ಭಾಂಡೆ ಸಾಮಾನೋ ಕೊಟ್ಟು ಕೈಯಾಗ ನೂರಿನ್ನೂರಿಟ್ಟು ಕಳಿಸೋ ನಮ್ಮಂದಿ ಮಧ್ಯೆ ಇದ್ದೂರಾಗ ಇದ್ದು ಸೂತಕದ ಮನ್ಯಾಗ ಅವರ ದುಃಖ ನಮ್ಮ ಗಂಟಲಿನ್ಯಾಗ ಹಾಕ್ಯಂಡು ಅತ್ತು ಬರ್ತೀವಲ್ಲಾ ಅದೂ …ನಾನಿರವರ್ಗೂ ಮತ್ತು ನನ್ನಿಂದ ನಾಕ್ ಮಂದಿ ಹಿಂಗ ಕುಂತು ಅಳಾವ್ರು ಇರೊವರ್ಗೂ ಅಷ್ಟೇನೇ. ಆಮೇಲಾಮೇಲೆ ನಾವು ಕೂಡ ಸಾವಿನಂತೆ ನೆಪ್ಪಿನ (ನೆನಪಿನ ) ಚೌಕಟ್ಟಿಂದ ಮರೆಯಾಗ್ತೀವಿ. ಕರೆದು ಹೊಟ್ಟೇಗ್ ಏನಾರ ಕೊಟ್ಟೇವೆಂದ್ರು ಇಸ್ಗಳ್ಳಾಕ ನಾವ ಇರಾದಿಲ್ಲ, ಏನೋ ಇದ್ದಾಗ ಇರಾಕ ನೆಲ್ಳು, ನೀರಡಿಕೆ ಅಂದ್ರ ತಂಬಿಗೆ ನೀರು ಕೊಟ್ರ ಅಷ್ಟಾ ಸಾಕ್ ನೋಡಪಾ ” ಅಂದಳು.
ಸಂದರ್ಶನ ಕೇವಲ ನಮ್ಮ ನಡುವಿನ ಜನಗಳ ಮಧ್ಯೆ ಇರುವ ಹಾಗೂ ನಮ್ಮ ನಡುವೆ ಬೆರೆಯದೇ “ಗುರುತಿಸಿಕೊಂಡ” ಜನಗಳಿಗೆ ಮಾತ್ರ ಸೀಮಿತವಾಗಿದೆ. ಎಲ್ಲೋ ಒಂದೊಂದು ಕಡೆ ಹಿತಾಸಕ್ತಿ ಇರುವ ಜನರ ಪ್ರಯತ್ನದ ಫಲವಾಗಿ ಹಲವರು ಬೆಳಕಿಗೆ ಬಂದಿದ್ದಾರೆ. ಬಾರದಿರುವವರು ಸಾಕಷ್ಟಿದ್ದಾರೆ… ಆದರೆ ನಮ್ಮ ನಡುವಿನ ಸಾಮಾನ್ಯನೊಬ್ಬನ ಸಂದರ್ಶನವೂ ಸೆಲೆಬ್ರಿಟಿಗಳ ಸಂದರ್ಶನದ ಜೊತೆ ನಿಲ್ಲುವಂತಾಗಬೇಕು ಮತ್ತದರಿಂದ ಅವರ ಬದುಕು ಹಸನಾಗಲು ಅನುವಾಗಬೇಕು ಅನ್ನುವುದು ಕುರುಚಲು ಗಡ್ಡದ ಈ ಗೆಳೆಯನ ದೂರಾಲೋಚನೆಯ ನಿಲುವಿದು.ಇದು ತಾಯವ್ವನ ಕುರಿತು ಮಾತ್ರವಾಗಿರದೇ ನಮ್ಮ ನಡುವೆ ಇರುವ ಹೂವಾಡಗಿತ್ತಿ, ತರಕಾರಿ ಮಾರುವ, ಬೀದಿ ಬದಿಯಲ್ಲಿ ರುಚಿಯಾಗಿ ಅಡುಗೆ ಮಾಡಿ ನಿಯತ್ತಾಗಿ ದುಡಿದು ಮಕ್ಕಳ ಸಾಕಿ ಹೆಚ್ಚಿನ ವಿಧ್ಯಾಬ್ಯಾಸಕ್ಕೆ ಕಷ್ಟ ಪಡುವ ತಂದೆ ತಾಯಿ, ಆಟೋ ಓಡಿಸಿ, ಬೇಸಾಯ ಮಾಡಿ, ಹಾಲು ಮಾರಿ,ಮಕ್ಕಳಿಗೆ ಸಮಾಜದಲ್ಲಿ ಕಷ್ಟ ಪಟ್ಟು ಉನ್ನತ ಸ್ಥಾನದಲ್ಲಿದ್ದವರನ್ನು ತೋರಿಸಿಯೇ ಅವರಷ್ಟು ಎತ್ತರಕ್ಕೆ ಮಕ್ಕಳೂ ಬೆಳೆಯುವಲ್ಲಿ ಶ್ರಮ ವಹಿಸಿದ ಸಾಮಾನ್ಯನೂ ಕೂಡ ಸೆಲೆಬ್ರಿಟಿಯಷ್ಟೇ ಸಂದರ್ಶನಕ್ಕೆ ಅರ್ಹರೆಂದು ಹೇಳಿದ ಶಂಕ್ರಣ್ಣ, ಸುಮ್ಮನೇ ಕೆರೆ ದಂಡೆಗುಂಟ ಕ್ಯಾಮೆರಾ ಬೆನ್ನು ತಟ್ಟುತ್ತಾ ಹೊರಟ, “ದಿಲ್ ಹ್ಞೂ ಹ್ಞೂ ಕರೇ …… ಘಬರಾಯೇ….. ಲತಾಜೀ ಹಾಡಿದ ಹಾಡು ಗುನುಗುತ್ತಾ . ಜೊತೆಗಿದ್ದ ನನಗೆ ಈ ಹಾಡು “ರುಢಾಲಿ” ಚಿತ್ರದೆಂದು ನೆನಪಿಗೆ ಬಂದರೂ ಆ ಸಿನಿಮಾವನ್ನು ಯಾಕಿನ್ನು ನೋಡಿಲ್ಲ ಅಂದುಕೊಂಡೆ….
 

‍ಲೇಖಕರು G

June 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಸಂಗಾಮಿತ್ರ ಡಿಗ್ಗಿ

    ಅದ್ಭುತ ಲೇಖನ ಸರ್. ತಾಯವ್ವನಂತ ಮನಸ್ಸು ! ಸಾವಿನ ಮನೆಯಲ್ಲಿಯೂ ಸಂಸಾರದ ಮಾತು-ಕಥೆ. ಇಷ್ಟವಾಯಿತು ಸರ್

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ ಸರ್ , ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: