ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿತ್ರಿಯೆಡೆಗೆ ಹೊಸನೋಟ..

ಗ ನಾ ಭಟ್ಟ ಅವರ ಕಾದಂಬರಿ ‘ಸತೀ ಸಾವಿತ್ರೀ’

‘ದ್ವಾರಕಾ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ನಿವೇದಿತಾ ಎಚ್‌ ಅವರ ಅನಿಸಿಕೆ ಇಲ್ಲಿದೆ.

-ನಿವೇದಿತಾ ಎಚ್‌

ಪುರಾಣ ಕಥೆಗಳನ್ನು ಮತ್ತೆ ಓದುವ, ಅವುಗಳನ್ನು ಹೊಸ ದೃಷ್ಟಿಯಲ್ಲಿ ನೋಡಿ ಅವುಗಳನ್ನು ಕಾದಂಬರಿಯಾಗಿಸಿ ಓದುಗರನ್ನು ಹೊಸ ಹೊಳಹನ್ನು ಕೊಟ್ಟು ಚಿಂತನೆಗೆ ಹಚ್ಚುವ ಪರಿಪಾಠ ಹೊಸತೇನಲ್ಲ. ಮಹಾಭಾರತ ರಾಮಾಯಣಗಳಲ್ಲಿ ಬರುವ ಅನೇಕಾನೇಕ ಪಾತ್ರಗಳು ಸಮಕಾಲೀನತೆಯ ಭೂತಗನ್ನಡಿಯಲ್ಲಿ ನೋಡಲ್ಪಟ್ಟು ಮರುಚಿಂತನೆಗಳಿಗೆ ಒಡ್ಡಿಕೊಂಡಿವೆ. 

ಇದೀಗ ಪಂಚ ಮಹಾ ಪತಿವ್ರತೆಯರಲ್ಲಿ ಒಬ್ಬಳಾದ ಸಾವಿತ್ರಿಯ ಬಗೆಗೆ ಒಂದು ಪುಟ್ಟ ಆದರೆ ಸತ್ವಯುತ ಕಾದಂಬರಿ ಓದುಗರ ಕೈ ಸೇರಿದೆ. ಗ ನಾ ಭಟ್ಟ ಅವರ ʻಸತೀ ಸಾವಿತ್ರಿʼ ಕೇವಲ ೬೦ ಪುಟಗಳ ಪುಟ್ಟ ಕಾದಂಬರಿ. ಕಾದಂಬರೀ ಎನ್ನುವುದಕ್ಕಿಂತಾ ನೀಳ್ಗಥೆ ಎನ್ನಬಹುದೇನೋ. 

ಸಾವಿತ್ರಿಯೇ ತನ್ನ ಕಥೆ ಹೇಳುವ ಈ ನಿರೂಪಣೆ ನೇರಾನೇರ ಮಾತುಕತೆಯಂತಿದೆ. ಸಾವಿತ್ರಿ ಎಂದರೆ ಗಂಡನ ಪ್ರಾಣʻಭಿಕ್ಷೆʼ ಪಡೆದವಳೆಂಬ ಜನಜನಿತ ನಂಬಿಕೆಯನ್ನು ತೊಡೆದು, ಕೇವಲ ಪತಿವ್ರತೆಯ ಪತಿಪ್ರೇಮ ಮಾತ್ರವಲ್ಲ, ಅವಳ ವ್ಯಕ್ತಿತ್ವ, ಗಾಂಭೀರ್ಯ, ಪಾಂಡಿತ್ಯ, ನಿಷ್ಠೆ, ಬುದ್ಧಿವಂತಿಕೆ ಜಾಗರೂಕತೆ ಎಲ್ಲವೂ ಸೇರಿ ಅವಳನ್ನು ಬಲಿಷ್ಠವಾಗಿಸಿ ಯಮನನ್ನೇ ಸೋಲುವಂತೆ ಮಾಡಿತು ಎಂಬುದನ್ನು ಲೇಖಕರು ಬಿಂಬಿಸಿದ್ದಾರೆ.

ಕುರ್ತಕೋಟಿ ಅವರ ಲೇಖನವೇ ಸಾವಿತ್ರಿಯೆಡೆಗೆ ನನಗೆ ಹೊಸನೋಟವನ್ನು ನೀಡಿತು, ಕಾದಂಬರಿ ರಚನೆಗೆ ಪ್ರೇರೇಪಣೆ ನೀಡಿತು ಎಂದು ಲೇಖಕರು ಸ್ಮರಿಸುತ್ತಾರೆ.

ಈ ಕಾದಂಬರಿ ವಿಶಿಷ್ಠವೆನಿಸುವುದು ಸಾವಿತ್ರಿಯನ್ನು ಅವರು ಚಿತ್ರಿಸಿರುವ ಬಗೆಯಿಂದಾಗಿ. ಸವಿತೃವಿನ ವರಪ್ರಸಾದದಿಂದ ಹುಟ್ಟಿದ ಸಾವಿತ್ರಿಯ ಅಪೂರ್ವ ತೇಜಸ್ಸು ಮಾನವಮಾತ್ರರಲ್ಲಿ ಕೀಳರಿಮೆಯನ್ನುಂಟು ಮಾಡಿ ಅವಳನ್ನು ಅವಿವಾಹಿತಳನ್ನಾಗಿ ಮಾಡಿರುತ್ತದೆ. ಸ್ವತಃ ತಂದೆ ಅಶ್ವಪತಿಯೂ ಕೈಚೆಲ್ಲಿ, ನಿಜಾರ್ಥದಲ್ಲಿ ʻಸ್ವಯಂವರಕ್ಕೆʼ ಆಕೆಯನ್ನು ಪ್ರೇರೇಪಿಸುವುದನ್ನು ಓದಿದಾಗ ಅತೀವ ಅಚ್ಚರಿಯೆನಿಸುತ್ತದೆ. ನಿರಾಶೆಗೀಡಾಗದೆ ಅಕ್ಷರಶಃ ʻವರಬೇಟೆʼಗೆ ಸಪರಿವಾರ ಸಮೇತಳಾಗಿ ಹೊರಡುವ ಸಾವಿತ್ರಿಯ ಧೈರ್ಯ ಈಗಿನ ಕಾಲದ ಓದುಗರಿಗೂ ಅತೀವ ಅಚ್ಚರಿಯ ಸಂಗತಿಯೇ. ಎಲ್ಲಿಯೂ ತನ್ನ ಕೈಹಿಡಿಯುವ ಯೋಗ್ಯ ವರ ದೊರೆಯದೆ ಸ್ವಲ್ಪಮಟ್ಟಿಗೆ ನಿರಾಶಳಾದಾಗ, ಅವಳ ಭೇಟಿ ಸತ್ಯವಾನನೊಡನೆ ಆಗುತ್ತೆ. ದೇಶಭ್ರಷ್ಠ ರಾಜಕುಮಾರನಾದ ಅವನ ತೇಜಸ್ಸನ್ನು ನೋಡಿ ಸಾವಿತ್ರಿ ಮನಸೋತು ತಾನೇ ಅವನಲ್ಲಿ ಮದುವೆಯ ಬೇಡಿಕೆ ಇಡುತ್ತಾಳೆ. ಸಾವಿತ್ರಿಯ ಅಪೂರ್ವ ತೇಜಸ್ಸನ್ನು ಕಂಡು ಸತ್ಯವಾನ ಹಿಂಜರಿದಾಗ ಸಾವಿತ್ರಿ ಅವನ ಮನವೊಲಿಸುವ ಪರಿ ಅನನ್ಯ. ಅವಳ ಧೈರ್ಯ ಅನುಪಮವೆನಿಸುತ್ತದೆ. ಸತ್ಯವಾನನ ಅಲ್ಪಾಯುಷ್ಯತ್ವವನ್ನೂ ತಿಳಿದೂ ವಿವಾಹವಾಗಲು ಒಪ್ಪುವ ಸಾವಿತ್ರಿಯ ನಡೆ ನಂಬಲಾಗುವುದಿಲ್ಲ. ವರುಷ ಕಳೆದು ಸತ್ಯವಾನ ಸಾವಿನ ದವಡೆಗೆ ಸಿಲುಕುತ್ತಾನೆ. 

ಆಗ ಯಮನೊಡನೆ ವಾದಕ್ಕೆ ನಿಂತು, ತನಗೆ ಗಂಡನನ್ನು ಮಾತ್ರವಲ್ಲದೆ, ಅತ್ತೆ ಮಾವನಿಗೆ ಆರೋಗ್ಯ ಧನ ರಾಜ್ಯಗಳನ್ನೂ, ತನ್ನ ತಂದೆಗೆ ಪುತ್ರ ಸಂತಾನವನ್ನು ವರವಾಗಿ ಪಡೆವ ಸಾವಿತ್ರಿಯ ಜಾಣ್ಮೆ ಅನುಕರಣೀಯ.

ಯಥಾವತ್ ಸಾವಿತ್ರಿಯ‌ ಕಥೆಯನ್ನೇ ತೆಗೆದುಕೊಂಡು, ಸಾವಿತ್ರಿಯನ್ನು ಅಬಲೆಯಾಗಿಸದೆ ಸಬಲೆ ವಿವೇಕಿ ಧೈರ್ಯವಂತಳಾಗಿ ಚಿತ್ರಿಸಿರುವುದು ಕಾದಂಬರೀಕಾರರ ನೈಪುಣ್ಯ.. ಮೂಲ ಶ್ಲೋಕಗಳನ್ನು ಅಲ್ಲಲ್ಲಿ ಉದ್ಧರಿಸುತ್ತಾ ಸಾಗಿರುವುದು ಓದುವಾಗ ಚಂದವೆನಿಸುತ್ತದೆ. 

ಕಾದಂಬರಿಯು ಪುರಾಣ-ಪುಣ್ಯಪುರುಷರು, ಋಷಿಮುನಿಗಳು, ಆಶ್ರಮಗಳು, ಅಂದಿನ ಸ್ತ್ರೀ ಸಮೂಹದ ಬಗ್ಗೆ ಇರುವ ಕೆಲವು ಚರ್ವಿತಚರ್ವಣವೆನಿಸುವ ತಪ್ಪು ಅಭಿಪ್ರಾಯಗಳನ್ನೂ ತೊಡೆಯುವ ಯತ್ನ ಮಾಡುತ್ತದೆ. 

ಹೆಚ್ಚು ಸಮಯ ಬೇಡದ ಈ ಪುಟ್ಟ ಕಾದಂಬರಿ ಒಂದೇ ಏಟಿಗೆ ಓದಿಸಿಕೊಂಡು ಬಿಡುವ ಗುಣವುಳ್ಳದ್ದು. 

‍ಲೇಖಕರು Admin

15 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading