ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಾವಿಗೇ ಟಾಂಗ್ ಕೊಡದೂ ಅಂದ್ರೇನು?' ಸೂರಿ ಹೇಳ್ತಾರೆ

ಸೂರಿ

ಸಾವು ಅಂದರೇನು ಅಂತ ಒಬ್ಬ ವೈದ್ಯನ್ನ ಕೇಳಿ, ಸುಮ್ಮನೆ. ಒಂದು ಜೀವದ ಉಸಿರು ನಿಂತಾಗ, ಒಂದು ಶರೀರ ನಿಷ್ಕ್ರಿಯವಾದಾಗ ಅದನ್ನು ಸಾವು ಅನ್ನಬಹುದು ಅಂದುಬಿಡುತ್ತಾನೆ. (ನಾವು ಬದುಕ್ಕಿದ್ದೂ ಅನೇಕ ಸಲ ನಮ್ಮ ಉಸಿರು ಒಮ್ಮೊಮ್ಮೆ ನಿಂತುಬಿಡುತ್ತದೆ, ಬದುಕ್ಕಿದ್ದೂ ನಮ್ಮ ಶರೀರ ಒಮ್ಮೊಮ್ಮೆ ನಿಷ್ಕ್ರಿಯವಾಗಿಬಿಡುತ್ತದೆ, ಅದರ ಬಗ್ಗೆ ಹೇಳಿದ್ದಲ್ಲ ನಾನು) ಸತ್ತರೆ ಆ ಮನುಷ್ಯನ ಕಥೆ ಮುಗಿದಂತೆ. ಅಲ್ಲಿಗೆ ಒಂದು ಅಧ್ಯಾಯ ಮುಗಿದು ಬಿಡತ್ತೆ. ಆ ವ್ಯಕ್ತಿ ಒಂದು ಫೋಟೋದಲ್ಲಿ ನಿಶ್ಚಲನಾಗಿ, ನೆನಪಿಗೆ ಸರಿದುಬಿಡುತ್ತಾನೆ. ಒಂದು ಜೀವ ಸಾಯೋದೂ ಅಂದ್ರೇನು. ಇನ್ನೂ ಬದುಕಬೇಕಲ್ಲಾ? ಮಾಡೋದು ಇನ್ನೂ ಸಾಕಷ್ಟು ಇರಬೇಕಾದಲ್ಲಿ, ಹೋಗೂ ಅಂದ್ರೆ ಹೆಂಗೆ? ಯಾರಿಗೆ ಬೇಕ್ರೀ ಈ ಸಾವು? ಸಾಯದೇ ಇರೋಕೆ ಆಗಲ್ವಾ? ಸಾವಿನ ಬಗ್ಗೆ ಒಂದು ಅವ್ಯಕ್ತ ಹೆದರಿಕೆ, ನಿಷ್ಕಾರಣ ಅವಹೆಳನ, ವಿವರಿಸಲಾಗದ ನಿಗೂಢತೆ ಕವಿದುಕೊಂಡು ಬಿಡುತ್ತದೆ. ಮುಟ್ಟಿ ಬಂದು ಬಿಡಬಹುದು ಎಂದರೆ ಸಮಾಧಾನ, ಹಿಂತಿರುಗಿ ಬರಲಾರೆ ಎಂದರೆ ಯಾಕೋ ಕಸಿವಿಸಿ, ತಲ್ಲಣ. ಗೊತ್ತಿಲ್ಲದ, ಪರಿಚಯವೇ ಇಲ್ಲದ ಜಾಗಕ್ಕೆ ಹೋಗಲು ನಮಗೆ ಹೇಗೆ ಆಳುಕೋ, ಹಿಂತಿರುಗಿ ಬರಲಾರದ ಯಾವುದೇ ಸಂಗತಿಯ ಬಗ್ಗೆಯೂ ನಮಗೆ ಹೆದರಿಕೆ.
ಹೈಸ್ಕೂಲಲ್ಲಿ ನಮಗೊಬ್ಬ ಮೇಷ್ಟ್ರಿದ್ದರು. ಸಾವನ್ನೇ ಜಯಿಸಿದ ಸತ್ಯವಾನ-ಸಾವಿತ್ರಿಯ ಪಾಠ ಮಾಡುತ್ತಾ, ಸಾವು ಅಂದರೆ ಏನು ಅಂತ ಒಂದು ಉದಾಹರಣೆಯ ಸಮೇತ ವಿವರಿಸಿದರು. ‘ಕೆಲಸಕ್ಕೆ ಬಾರದ ಚೀಲಾನ್ನ ಬಿಸಾಕ್ದಂಗೆ ವಳಗಿನ ಆತ್ಮ ಅನ್ನದು ನಮ್ಮ ದೇಹಾನ್ನ ಬಿಟ್ಟು ಹೋಗಿಬಿಡ್ತದೆ. ಅದು ಸಾಯದು ಅಂದ್ರೆ. ಆ ಆತ್ಮ ಇನ್ನೊಂದು ಚೀಲಾನ್ನ ಹುಡುಕ್ಕೆಂತ ಅಲೀತದೆ. ಇನ್ನೊಂದು ಚೀಲ ಸಿಗ್ತಿದ್ದಂಗೇ ಬುಡುಕ್ಕೆಂತ ಅದ್ರಗೆ ಸೇರ್ಕೆಂಡು ಬಿಡ್ತದೆ.’ ಈ ವಿವರಣೆ ಕೇಳಿದ ಕೂಡಲೇ ಸಾವು ಸಹ್ಯವಾಗಿ ಬಿಡುತ್ತದೆ. ಮತ್ತೆ ಹಿಂತಿರುಗಿ ಬರುವ ಸಾಧ್ಯತೆಯೇ ಸಾವನ್ನು ಸಹ್ಯವಾಗಿಸಿಬಿಡುತ್ತದೆ.
ಸಾವು ಅನಿವಾರ್ಯವೇಕಾಯಿತು, ಒಂದು ಕತೆಯಿದೆ. ಸೃಷ್ಟಿ ಕ್ರಿಯೆಯೆಲ್ಲಾ ಮುಗಿಸಿದ ಮೇಲೆ ಭಗವಂತ ಊಸರವಳ್ಳಿಯನ್ನು ಕರೆದು ‘ಒನ್ಸಲ ಸತ್ತ ಮೇಲೆ ಮತ್ತೆ ಅವರನ್ನ ವಾಪಸ್ಸು ಕಳುಸ್ತೀನಿ ಅಂತ ಮನುಷ್ಯರಿಗೆ ಹೇಳಿ ಬಾ’ ಅಂತ ಹೇಳಿದ. ಅದೇ ಹೊತ್ತಿನಲ್ಲಿ ಅದೇ ರೂಮಿನ ಒಂದು ಮೂಲೆಯ ಕತ್ತಲಲ್ಲಿ ಕೂತಿದ್ದ ಒಂದು ಹಲ್ಲಿ ಇದನ್ನು ಕೇಳಿಸಿಕೊಂಡುಬಿಡ್ತು. ಊಸರವಳ್ಳಿಯ ವೇಗ ಗೊತ್ತಲ್ಲ ನಿಮಗೆ, ಒಂದು ಹೆಜ್ಜೆ ಮುಂದಿಡುವುದು, ತಲೆ ಹಾಕುವುದು, ಹಿಂದಕ್ಕೂ ಮುಂದಕ್ಕೂ ಜೂಗರಿಸಿವುದು, ಹೆಜ್ಜೆಗೆ ಬಲ ಸಿಕ್ಕ ಮೇಲೆ, ಅಳೆದೂ ಸುರಿದೂ ಮತ್ತೆ ಮುಂದಿನ ಹೆಜ್ಜೆ, ಮತ್ತೆ ತಲೆ ಹಾಕುವುದು, ಜೂಗರಿಸುವುದು…ಹಲ್ಲಿ ಹಾಗಲ್ಲ. ಒಂದೇ ಓಟ. ಹಾಗಾಗಿ ಹಲ್ಲಿ ಬೇಗ ಭೂಮಿಯನ್ನು ಮುಟ್ಟಿ ಮನುಷ್ಯರನ್ನು ತಲುಪಿತು. ಸಮಸ್ಯೆಯೇನಪಾ ಅಂದ್ರೆ, ಭಗವಂತ ಹೇಳಿದ್ದನ್ನ ಹಲ್ಲಿ ಕೇಳಿಸಿಕೊಂಡಿತ್ತೇನೋ ಸರಿ, ಆದರೆ ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಅದಕ್ಕೇ ಹುಲು ಮನುಜರಿಗೆ ಅದು ಹೇಳಿದ್ದು ಇಷ್ಟೇ, ‘ಸತ್ತ ಮೇಲೆ ತಿರುಗಿ ಹೋಗಂಗಿಲ್ಲ.’ ಹುಲು ಮಾನವರು ಒಪ್ಪಿಕೊಂಡರು. ಅದೆಷ್ಟೋ ತಿಂಗಳುಗಳ ತರುವಾಯ ಊಸರವಳ್ಳಿ ಅಲ್ಲಿಗೆ ಬಂತು. ‘ಭಗವಂತ ನಿಮಗೆ ಒಂದು ಸುದ್ದಿ ಕೊಟ್ಟಿದ್ದಾನೆ’ ಅಂತ ಹೇಳ್ತಿದ್ದ ಹಾಗೇ ಹುಲು ಮಾನವರು ಹೇಳಿದರು, ‘ಅದೇನೂ ಅಂತ ನಮಗೆ ಗೊತ್ತು ತಗಿ. ನಾವು ಸಾಯ್ತೀವಿ ಅದೇ ಕೊನೆ.’ ಭಗವಂತನ ಆರ್ಡರ್ ಅಲ್ವಾ ಅದು, ಮನುಷ್ಯರು ನಂಬಿದರು, ಅಂತೇ ಬದುಕಿ ಸಾಯಲು ಆರಂಭಿಸಿದರು. ಸಾವು ಖಾಯಮ್ಮಾಗಿದ್ದು ಹೀಗೆ.

ವಿಚಿತ್ರ ನೋಡಿ, ಸಾವು ಅನಿವಾರ್ಯ. ಅದು ಎಲ್ಲರಿಗೂ ಗೊತ್ತಿರುವುದೇ. ಆದರೂ ಅದನ್ನು ತಡಾಯಿಸಲು, ಮುಂದೂಡಲು, ಸಾವಿಗೇ ಟಾಂಗ್ ಕೊಡಲು ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಪ್ರಯತ್ನಿಸುತ್ತಾನೆ. ಇಂದು ಸಾವು ಬೇಡ, ನಾಳೆ ಬರಲಿ, ಅದನ್ನು ಸ್ವೀಕರಿಸುತ್ತೇನೆ ಎಂದು ತಯಾರಾದವರೂ ನಾಳೆ ಬಂದರೆ ಮತ್ತೆ ಅದೇ ರಾಗ ಹಾಡುತ್ತಾರೆ. ಇಂದು ಬೇಡ, ನಾಳೆ ಬರಲಿ, ರೆಡಿಯಾಗಿತರ್ಿನಿ ಆಂತ. (ಈ ಆಯುರ್ವರ್ಧಕ ಔಷಧಿಗಳು ಪ್ರಮಾಣ ಸಮೇತ ಹೇಳುವುದು ಇದನ್ನೇ ತಾನೇ, ನಿಮ್ಮನ್ನು ಸುಲಭಕ್ಕೆ ಸಾಯಲು ಬಿಡುವುದಿಲ್ಲ ಅಂತ.) ಬರುವ ನಾಳೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯವಿಲ್ಲವೋ ಸಾವಿನಿಂದಲೂ ಮುಕ್ತಿಯಿಲ್ಲ ಅಂತ ತಿಳಿದೂ ತಿಳಿದೂ ಸಾವಿನಿಂದ ತಪ್ಪಿಸಿಕೊಳ್ಳುವ ಮನುಷ್ಯನ ಪ್ರಯತ್ನಗಳು ಎಷ್ಟು ಹಾಸ್ಯಾಸ್ಪದವಾಗಿಬಿಡುತ್ತವೆ. ಈ ಸಾವಿಗೇ ಮೋಸ ಮಾಡೋಕೆ ಪುರಾಣ ಕಾಲದಿಂದಲೂ ಬಹಳ ಜನ ಪ್ರಯತ್ನ ಪಟ್ಟಿದಾರೆ.
ಸಿಸಿಫಸ್ ಕೇವಲ ಬಂಡೆ ಹೊತ್ತು ಜೀವಮಾನದ ಬದುಕು ಕಳೆಯಲು ಪ್ರಯತ್ನಿಸುತ್ತಿರುವ ಸಂಗತಿ ಮಾತ್ರ ನಮಗೆ ಗೊತ್ತು. ಅಯ್ಯೋ ಪಾಪ ಅನಿಸತ್ತೆ ಅವನ ಬಗ್ಗೆ. ಆದರೆ ಆತ ಮಹಾ ಪ್ರಚಂಡ. ಚಾಲಾಕಿ. ಸಿಸಿಫಸ್ ಒಬ್ಬ ರಾಜ. ಜಗದೇಕ ಸುಂದರಿ ಮೆರೋಪೆಯನ್ನು ಮದುವೆಯಾಗಿದ್ದ. ದೇಶಕ್ಕೆ ಸಿಕ್ಕಾಪಟ್ಟೆ ದುಡ್ಡು, ಸಂಪತ್ತು ಸುರಿದು ಕೊಟ್ಟ. ಆದರೆ ಮಹಾ ವಿಕೃತಿ ಈತ. ತನ್ನ ದೇಶಕ್ಕೆ ಬಂದ ಪ್ರಯಾಣಿಕರನ್ನ, ಅತಿಥಿಗಳನ್ನ, ಬಡಪಾಯಿಗಳನ್ನ ರಾತ್ರೋರಾತ್ರಿ ಕೊಂದು ಹಾಕಿಬಿಡತಿದ್ದ. ಅದ್ಯಾಕೋ ಏನೋ. ತಾನು ಈ ದೇಶದ ಅತ್ಯಂತ ಶಕ್ತಿಶಾಲಿ ಅಂತ ತೋರಿಸ್ಕೋಬೇಕಿತ್ತೇನೋ. ಇರಲಿ, ಆದರೆ ಈ ವಿಕೃತಿಗೂ ಒಂದು ಕಾಲ ಬಂದೇ ಬರತ್ತೆ ಅಲ್ಲವೇ. ದೇವಾಧಿದೇವ ಝೀಯಸ್ ನೋಡೋ ತನಕ ನೋಡಿ ಕೊನೆಗೆ ಜವರಾಯಂಗೆ ಹೇಳಿದ, ಈ ಸಿಸಿಫಸನ್ನ ಹಿಡಿದು ಪಾತಾಳಕ್ಕೆ ಕಳಿಸು ಅಂತ. ಪಾತಾಳ ಸೇರದೂ ಅಂದ್ರೆ ಸಾಯೋದು. ಪಾತಾಳ ಸೇರಿದ ಮೇಲೆ ಮುಕ್ತಿಯಿಲ್ಲ. ಸರಿ, ಕೈಲಿ ಒಂದು ಸರಪಳಿ ಹಿಡಿದು ಜವರಾಯ ಹೊರಟ, ಸಿಸಿಫಸನ್ನ ಹಿಡಿಯಕೆ. ಸಿಸಿಫಸ್ ಅಂತಿಂತೋನಲ್ಲ ಅಂತ ಮೊದಲೇ ಹೇಳಿದೆ. ಜವರಾಯ ಬರ್ತಿದ್ದಂಗೇ, ಈ ಸರಪಳಿ ಹೊಸದು, ಹೆಂಗೆ ಕೆಲಸ ಮಾಡತ್ತೆ ತೋರೀಸೂ ಅಂತ ಸಿಸಿಫಸ್ ಕೇಳಿಕೊಂಡ. ಭಾಳಾ ಶಕ್ತಿಯಿರೋರಿಗೆ ಬುದ್ಧಿ ಕಮ್ಮಿ ಅಂತ ಒಂದು ಮಾತಿದೆ. ಜವರಾಯಂಗೆ ಶಕ್ತಿಯಿತ್ತು ಬುದ್ಧಿಯಿರಲಿಲ್ಲ. ತಾನು ತಂದ ಸರಪಳಿಯನ್ನ ತನ್ನ ಸುತ್ತ ಹೆಣೆದುಕೊಂಡು ಆದಕ್ಕೆ ಒಂದು ಬೀಗಾ ಸೈತ ಹಾಕ್ಕೊಂಡು ನೋಡು ಹಿಂಗೆ ಕೆಲಸ ಮಾಡತ್ತೆ ಇದೂ ಅಂದ.
ಸಿಸಿಫಸನಿಗೆ ಅಷ್ಟೇ ಬೇಕಿದ್ದು. ಜವರಾಯ ತನ್ನ ಕಟ್ಟಿನಲ್ಲಿ ತಾನೇ ಸಿಗಾಕ್ಕೊಂಡ ಮೇಲೆ ಅವನನ್ನೇ ಪಾತಾಳಕ್ಕೆ ಕಳಿಸಿ ಸಾವನ್ನೇ ಗೆದ್ದ. ಅವತ್ತಿಂದ ಜಗತ್ತಿನಲ್ಲಿ ಸಾವೇ ಇಲ್ಲದ ಹಾಗಾಯಿತು. ಯಾರೂ ಸಾಯ್ತಾಯಿಲ್ಲ. ಯಾರೂ ಸಾಯಲ್ಲ ಅಂದ ಮೇಲೆ ಯಾರಿಗೂ ಸೋಲಿಲ್ಲ. ಯಾರೂ ಸಾಯಲ್ಲ ಯಾರೂ ಸೋಲಲ್ಲ ಆಂದ ಮೇಲೆ ಮಾಡೋ ಯುದ್ಧಗಳಿಗೆ ಅರ್ಥವಿಲ್ಲದಂತಾಯಿತು. ಯುದ್ಧಗಳೇ ಇಲ್ಲದ ಜಗತ್ತು ನೀರಸವಾಯಿತು. ದೇವಾಧಿದೇವಂಗೆ ಮತ್ತೆ ಸಿಟ್ಟು ಬಂತು. ಜವರಾಯನ್ನ ಬಿಡಿಸಿ ಸಿಸಿಫಸನ್ನ ಹಿಡ್ಕಂಡು ಬಾ ಅಂತ ಮತ್ತೆ ಕಳಿಸಿದ. ಜವರಾಯ ಮತ್ತೆ ಬರ್ತಿದಾನೆ ಅಂತ ಸಿಸಿಫಸನಿಗೆ ಗೊತ್ತಾಯಿತು. ತನ್ನ ಹೆಂಡತಿಗೆ ಹೇಳಿದ, ತನ್ನ ದೇಹದಿಂದ ಪ್ರಾಣ ಹೋದ ಮೇಲೆ ತನ್ನ ದೇಹಾನ್ನ ಅಲ್ಲೇ ಮಾರ್ಕೆಟ್ಟು ಚೌಕದಲ್ಲಿ ಬಿಸಾಕಿಬಿಡೂ ಅಂತ. ಜವರಾಯ ಬಂದ ಸಿಸಿಫಸನ ಪ್ರಾಣವನ್ನ ಸರಪಳಿಯಲ್ಲಿ ಕಟ್ಟಿ ಹಾಕಿ ಅದನ್ನು ಜೊತೆಗೆ ತಗಂಡು ಹೊರಟ. ಅವನ ಪ್ರಾಣ ಅತ್ಲಗೆ ಹೋಗ್ತಿದ್ದಂಗೇ ಇತ್ಲಗೆ ಅವನ ಹೆಂಡತಿ ಅವನ ದೇಹಾನ್ನ ಮಾರ್ಕೆಟ್ ಚೌಕದಲ್ಲಿ ಬಿಸಾಕಿದ್ಲು. ಸಿಸಿಫಸ್ ನೆಟ್ಟಗೆ ಪಾತಾಳದ ಅಧಿದೇವತೆ ಹೇಡ್ಸನ ಹೆಂಡತಿ ಬಳಿ ಹೋದ. ಫಿರ್ಯಾದು ಮಾಡ್ಕಂಡ. ನನ್ನ ಹೆಂಡತಿ ನನ್ನ ದೇಹಕ್ಕೆ ಅವಮಾನ ಮಾಡಿದಾಳೆ, ಅದಕ್ಕೆ ಶವಸಂಸ್ಕಾರ ಮಾಡಿಲ್ಲ. ಅವಳಿಗೆ ಒದ್ದು ದೇಹಕ್ಕೆ ಸರಿಯಾಗಿ ಸಂಸ್ಕಾರ ಮಾಡಿಸ್ಕಂಡು ಮತ್ತೆ ಇಲ್ಲಿಗೇ ಬರ್ತೀನಿ, ಪರ್ಮಿಶನ್ ಬೇಕೂ ಅಂತ. ಹೇಡ್ಸನ ಹೆಂಡತಿ ಹೂಂ ಅಂದು ಸಿಸಿಫಸನ ಪ್ರಾಣವನ್ನು ಮತ್ತೆ ಕಳಿಸಿಕೊಟ್ಲು.
ಇವನು ಇಲ್ಲಿಗೆ ಬಂದವನೇ, ಪ್ರಾಣವನ್ನು ತನ್ನ ದೇಹದಲ್ಲಿಟ್ಕಂಡು ದೇಶ ಆಳಕೆ ಶುರುಮಾಡಿದ. ಯಾರು ಹೇಳಿದ್ರೂ, ಅಂಗಲಾಚಿದರೂ ಇವನು ಪಾತಾಳಕ್ಕೆ ಹೋಗಕೆ ತಯಾರಿಲ್ಲ. ಝೀಯಸ್ಸಿಗೆ ಸಿಟ್ಟು ಬಂತು. ಹರ್ಮಿಸ್ ಅನ್ನೋ ಸಾವಿನ ದೇವತೇನ್ನ ಕಳಿಸಿದ, ಸಿಸಿಫಸನ್ನ ಹಿಡ್ಕಂಡು ಬರಕೆ. ಈ ಹರ್ಮಿಸ್ ಎಂಥಾ ದೇವತೆ ಅಂದ್ರೆ ಬಹಳ ಹಗೂರಾಗಿ ಜೀವ ತಗೊತಾಯಿದ್ದ. ಹರ್ಮಿಸ್ (ಅಂದ್ರೆ ಸಾವು) ಅಲ್ಲಿಗೆ ಬಂದ ಅನ್ನದೂ ಯಾರಿಗೂ ಗೊತ್ತಾಗ್ತಾಯಿರಲಿಲ್ಲ, ಅಲ್ಲದೇ ಸಾಯೋರಿಗೆ ತಾವು ಸತ್ತಿದೀವಿ ಅಂತ ಗೊತ್ತೇ ಆಗ್ತಾಯಿರಲಿಲ್ಲ. ಕೊನೆಗೂ ಸಿಸಿಫಸ್ ಪಾತಾಳ ಸೇರಿದ. ಅಲ್ಲಿ ಅವನಿಗೆ ಒಂದು ಶಿಕ್ಷೆಯಾಯಿತು. ಒಂದು ಬಂಡೆ ಕಲ್ಲನ್ನ ಬೆನ್ನ ಮೇಲೆ ಹೊತ್ಗಂಡು ಬೆಟ್ಟದ ತುದಿಗೆ ತಗಂಡು ಹೋಗಿ ನಿಲ್ಲಿಸಿ ಬರಬೇಕು. ಅವನು ಹೊತ್ಗಂಡು ಬೆಟ್ಟದ ತುದೀಲಿ ಆ ಬಂಡೇನ್ನ ಇಟ್ಟು ಕೆಳಗೆ ಬರೋದ್ರೊಳಗೆ ಬಂಡೆ ಅವನ ಹಿಂದೇ ಜಾರಿ ಬರ್ತಾಯಿತ್ತು. ಸಿಸಿಫಸ್ ಇನ್ನೂ ಬಂಡೇನ್ನ ಹೊತ್ಗಂಡು ಬೆಟ್ಟ ಹತ್ತತಾಯಿರಬೇಕು. ಸಾವನ್ನು ಎರಡು ಸಾರಿ ಗೆದ್ದೋನಿಗೆ ಹಣೇಬರಾನ್ನ ಗೆಲ್ಲಕೆ ಆಗಲಿಲ್ಲ.
ಇನ್ನೊಂದು ಕತೆಯಿದೆ. ಶಾನ್ ಕುಕ್ತೂ (ಖ್ಯಾತ ಫ್ರೆಂಚ್ ಲೇಖಕ, ನಿರ್ದೇಶಕ) ಬರೆದದ್ದು. ತೋಟದಲ್ಲಿ ಗುಲಾಬಿ ಹೂ ಕೀಳ್ತಾಯಿದ್ದ ಮಾಲೀ ಹತ್ರ ಹೋಗಿ ಸಾವು ಅವನ ಬೆನ್ನು ತಟ್ಟಿತು. ಸಾವನ್ನು ನೋಡಿದೇಟಿಗೇ ಮಾಲಿಗೆ ಗೊತ್ತಾಯ್ತು ಅದು ಯಾರು ಅಂತ, ತನ್ನ ಕತೆ ಮುಗೀತು ಅಂತ. ಒಂದೇ ಉಸಿರಿಗೆ ಓಡಿದ ರಾಜನ ಹತ್ರ. ದೊರೇ, ನಂಗೊಂದು ಕುದುರೆ ಬೇಕು, ಭಾಳಾ ಸ್ಪೀಡಾಗಿ ಓಡಾ ಅಂಥಾದ್ದು, ಸಾಯಂಕಾಲದೊಳಗೆ ಕಾಶೀನ್ನ ಮುಟ್ಟಬೇಕೂ ಅಂಥಾ ಕುದುರೆ ಅಂತ ಕೇಳಿಕೊಂಡ. ಯಾಕೆ ಅಂಥಾ ಅವಸರವೇನು ಅಂತ ದೊರೆ ಕೇಳಿದ. ಗುಲಾಬಿ ತೋಟದಲ್ಲಿ ಸಾವು ಕೂತಿದೆ, ಅದ್ರಿಂದ ತಪ್ಪುಸ್ಕೋ ಬೇಕು, ಅದಕ್ಕೆ ಕುದುರೆ ಬೇಕೂ ಅಂತ. ದೊರೆ ತನ್ನದೇ ಪರ್ಸನಲ್ ಕಾಠೇವಾಡದ ಕುದುರೆ ಕೊಟ್ಟ, ಮಾಲಿ ಕುದುರೆ ಹತ್ತಿ ಒಂದೇ ಓಟ, ಕಾಶಿಯ ದಿಕ್ಕಿಗೆ ಓಡಿದ. ಒಂದೆರಡು ಗಂಟೆಯಾದ ಮೇಲೆ ದೊರೆ ಗುಲಾಬಿ ತೋಟಕ್ಕೆ ಬಂದ. ಸಾವು ಇನ್ನೂ ಅಲ್ಲಿ ಬೆಂಚಿನ ಮೇಲೇ ಕೂತಿತ್ತು. ದೊರೆ ಕೇಳಿದ, ಯಾಕೆ ನನ್ನ ಮಾಲೀನ್ನ ಹೆದರಿಸಿದ್ದು ನೀನು. ಅವನೀಗ ನಿಂಗೆ ಸಿಗಲ್ಲ. ಕಾಶಿಗೆ ಹೋದ. ನೀನಿನ್ನ ವಾಪಸ್ಸು ಹೋಗ ಬಹುದು ಅಂತ. ಸಾವು ಎದ್ದು ಕುಂಡೆಯ ಮೇಲಿದ್ದ ಧೂಳನ್ನು ಒರೆಸಿಕೊಳ್ಳುತ್ತಾ ಹೇಳಿತು, ಅಯ್ಯೋ ಧಡ್ಡ ಅವನು, ಸಾಯಂಕಾಲ ಕಾಶೀಲಿ ಸಿಗ್ತೀನಿ ನಿಂಗೆ ಅಂತ ಹೇಳೋಕೆ ಬಂದಿದ್ದೆ, ನನ್ನ ಮಾತೇ ಕೇಳದೆ ಹಂಗೇ ಓಡಿ ಹೋದ, ಪಾಪ, ಅಂದದ್ದೇ ಸಾವು ತನ್ನ ಕುದುರೆಯೇರಿತು. ದೊರೆ ಸಾವಿನ ಬೆನ್ನನ್ನೇ ನೋಡುತ್ತಾ ನಿಂತ.
ಈಗ ಹೇಳಿ ಮುಕ್ತಿ ಅಂತ ಇದ್ರೆ ಅದು ಸಾವಿನಿಂದಲೇ ಅಲ್ವಾ? ಸಾವಿನಿಂದ ಮುಕ್ತಿ ಇದೆಯಾ?
(ಉದಯವಾಣಿಯಲ್ಲಿ ಪ್ರಕಟವಾಗಿದ್ದ ಬರಹ)

‍ಲೇಖಕರು G

23 June, 2014

1 Comment

  1. ಜೆ.ವಿ.ಕಾರ್ಲೊ

    ಸಾವಿನ ಬಗ್ಗೆ ಅಮೆರಿಕನ್ ಲೇಖಕ ಮಾರ್ಕ್ ಟ್ವೇಯ್ನ್ ಹೀಗೆ ಹೇಳುತ್ತಾನೆ:
    “I do not fear death. I had been dead for billions and billions of years before I was born, and had not suffered the slightest inconvenience from it!..”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading