“ಬಹುರಾಷ್ಟ್ರೀಯ ಕಂಪನಿಗಳ ಬಿಗಿ ಹಿಡಿತದಲ್ಲಿ ಕೃಷಿ”
-ಪಿ.ಸಾಯಿನಾಥ್
ರಮೇಶ್ ಹಿರೇಜಂಬೂರು
ಕೃಪೆ : ವಿಜಯವಾಣಿ
ಕೇವಲ ಭಾರತ ಮಾತ್ರವಲ್ಲ. ಇಡೀ ವಿಶ್ವದಲ್ಲಿ ಆಹಾರ ಭದ್ರತೆ ಹದಗೆಟ್ಟಿದೆ. ಕೇವಲ ಮೂರ್ನಾಲ್ಕು ಕಂಪನಿಗಳು ಇಡೀ ವಿಶ್ವದ ಕೃಷಿ ಹಾಗೂ ಆಹಾರದ ಹಿಡಿತವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಹಾರಕ್ಕಾಗಿ ಪರದಾಡಬೇಕಾಗುತ್ತದೆ. ಈ ರೀತಿ ಖಡಕ್ಕಾಗಿ ಕಡ್ಡಿ ಮುರಿದಂತೆ ಹೇಳಿದವರು `ರೇಮನ್ ಮ್ಯಾಗ್ಸೆಸೆ’ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಚಿಂತಕ ಹಾಗೂ ಲೇಖಕ ಪಿ.ಸಾಯಿನಾಥ್. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಅವರು `ವಿಜಯ ವಾಣಿ’ ಜತೆ ನಡೆಸಿದ ಸುದೀರ್ಘ ಸಂದರ್ಶನದಲ್ಲಿ ಈ ದೇಶದ ಆಹಾರ ಸ್ಥಿತಿಗತಿ ಹಾಗೂ ಕೃಷಿಯ ಆದೋಗತಿಗಳನ್ನು ಸವಿಸ್ಥಾರವಾಗಿ ಹರವಿಟ್ಟರು. ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟದ ವೇಳೆ ಹಳ್ಳಿ ಶಾಲೆಗಳಲ್ಲಿ ಹೊಗಿ ನಿಂತು ನೋಡಿದರೆ ಈ ದೇಶದ ಸ್ಥಿತಿ ಹೇಗಿದೆಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಡೀ ದೇಶದ ತುಂಬಾ ಹಳ್ಳಿಗಳಲ್ಲಿ ಶನಿವಾರ, ಭಾನುವಾರ ಉಪವಾಸವಿದ್ದು ಶಾಲೆಗೆ ಬರುವ ಮಕ್ಕಳು ಸೋಮವಾರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಹಾತೊರೆಯುತ್ತಿರುತ್ತವೆ. ಆದರೆ ಇದ್ಯಾವುದರ ಬಗ್ಗೆಯೂ ಸರಕಾರಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಖಾಸಗಿ ಕಂಪನಿಗಳು ಮುಂದಿನ ಭವಿಷ್ಯದಲ್ಲಿ ಜನಸಾಮಾನ್ಯರ ಬಗ್ಗೆ ಚಿಂತಿಸದೇ ತಮ್ಮ ಲಾಭವನ್ನು ಮಾತ್ರ ನೋಡಿಕೊಳ್ಳುತ್ತಿವೆ. ಆ ಕಾರಣಕ್ಕೇ ವಿಶ್ವದಲ್ಲಿ ಕೇವಲ ಮೂರ್ನಾಲ್ಕು ಖಾಸಗಿ ಕಂಪನಿಗಳು ಇಡೀ ಆಹಾರ ವ್ಯವಸ್ಥೆಯನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ ಎಂದು ಸಾಯಿನಾಥ್ ನುಡಿದರು.
*ಈ ದೇಶದ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣವೇನು?
ಈ ದೇಶ ಮಾತ್ರವಲ್ಲ ಇಡೀ ವಿಶ್ವದಲ್ಲಿ ಎಲ್ಲಿಯೂ ಹಳ್ಳಿಗಳಲ್ಲಿ ಯುವಕರು ಸಿಗುತ್ತಿಲ್ಲ. ಖಾಸಗಿ ಕಂಪನಿಗಳ ಸಂಬಳದ ಆಕರ್ಷಣೆಗೆ ತಮ್ಮ ಮೂಲ ವ್ಯವಸ್ಥೆ ಹಾಗೂ ಭದ್ರತೆಯನ್ನೇ ಮರೆತು ನಗರ ಸೇರುತ್ತಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಕೃಷಿ ಕೂಲಿ ಕಾರ್ಮಿಕರೆ ಸಿಗುತ್ತಿಲ್ಲ. ಕಾರ್ಪೋರೇಟ್ ಸಂಸ್ಕೃತಿಯು ರೈತರು, ರೈತರ ಕೃಷಿ ಪದ್ಧತಿ ಹಾಗೂ ಸಾಮಾನ್ಯ ಜನರ ಬದುಕು ಮತ್ತು ಅವರ ಸ್ವಂತಿಕೆಯನ್ನು ಅಷ್ಟರ ಮಟ್ಟಿಗೆ ಕೊಂದು ಹಾಕುತ್ತಿದೆ. ಇಡೀ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಕಾರ್ಪೋರೇಟ್ ಸಂಸ್ಕೃತಿಯ ಒನ್ ಲೈನ್ ಅಜೆಂಡಾ. ರೈತರ ಸಾವಿಗೆ ಕೇವಲ ಸಾಲ ಮಾತ್ರಕಾರಣವಲ್ಲ, ಸರ್ವನಾಶವಾಗಿರುವ ಕೃಷಿ ಪದ್ಧತಿ ಹಾಗೂ ಕಾರ್ಪೋರೇಟ್ ಸಂಸ್ಕೃತಿಯ ಕುತಂತ್ರಗಳು ಕೂಡ ಕಾರಣ. ಇದನ್ನು ಅರಿಯದೆ ರೈತರು ತಮ್ಮ ಮೂಲ ಕೃಷಿ ಪದ್ಧತಿಯನ್ನೇ ಖಾಸಗಿ ಕಂಪನಿಗಳಿಗೆ ಬಲಿಕೊಟ್ಟಂತಾಗಿದೆ.
*ಇತ್ತೀಚೆಗೆರೈತರು ಬೆಳೆಗೆ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿದ್ದಾರಲ್ಲ ಯಾಕೆ?
ಅನ್ನ ನೀಡುವ ರೈತರನ್ನು ಬ್ಲೇಮ್ ಮಾಡುವುದು ಸರಿಯಲ್ಲ. ಮಾನ್ಸಾಂಟೋದಂತ ಹಲವು ಕಂಪನಿಗಳು ಇಂದು ರೈತರ ಎಲ್ಲ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಬರಿಗೈಯ್ಯಲ್ಲಿ ನಿಲ್ಲಿಸಿವೆ. ಬೀಜ, ಗೊಬ್ಬರ, ಕೀಟನಾಶಕ ಹೀಗೆ ಯಾವುದರ ಮೇಲೂ ರೈತರ ಹಿಡಿತವಿಲ್ಲ. ಭೂಮಿಯೊಂದು ಮಾತ್ರ ರೈತರ ಕೈಲಿತ್ತು. ಆದರೆ ಇತ್ತೀಚೆಗೆ ನಮ್ಮ ಸರ್ಕಾರಗಳು ಎಸ್ ಇ ಝಡ್, ಕಾರ್ಖಾನೆಗಳು ಮತ್ತೊಂದು ಮಗದೊಂದು ಅಭಿವೃದ್ಧಿಯ ಹೆಸರಿನಲ್ಲಿ ರೈತರಲ್ಲಿದ್ದ ಭೂಮಿಯನ್ನೂ ಕಸಿದುಕೊಳ್ಳುತ್ತಿವೆ. ಹೀಗಾಗಿ ಕೃಷಿ ಮಾಡುವವರು ಕೂಡ ರೈತಾಪಿ ಜೀವದಿಂದ ದೂರ ಸರಿಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಎನ್ಎಸ್ಎಸ್ ಒಂದು ಸಮೀಕ್ಷೆ ನಡೆಸಿದ್ದು, ಅದರಲ್ಲಿ ಭಾರತದ ಶೇ.40 ರೈತರು ಕೃಷಿಯಿಂದ ದೂರ ಹೋಗುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಆದರೆ ಯುವಕರ ಬಗ್ಗೆ ಸಮೀಕ್ಷೆ ನಡೆಸಿದರೆ ಶೇ.80 ಮಂದಿ ಕೃಷಿಯನ್ನು ಬಿಟ್ಟುದೂರ ಸರಿದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
*ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಕೂಲಿ ಕಾರ್ಮಿಕರ ಗತಿಯೇನು?
ಇಂದು ಹಳ್ಳಿಗಳಲ್ಲಿ ಕೃಷಿ ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಎಲ್ಲರೂ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ, ಇನ್ನೂ ಹೋಗುತ್ತಿದ್ದಾರೆ.ಕೃಷಿಯನ್ನು ನಂಬಿದರೆ ನಾವು ಹೆಚ್ಚು ದಿನ ಬದುಕುತ್ತೇವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆರ್ಥಿಕ ಹಿಂಜರಿತದಿಂದ ಕೃಷಿ ಕೂಲಿ ಕಾರ್ಮಿಕರಿಗೆ ಏನೂ ಆಗದು. ಅವರು 200ವರ್ಷ ಬೇಕಾದರೂ ಬದುಕುತ್ತಾರೆ. ಆದರೆ ರೈತರಿಗೆ ಆ ಏರಿಳಿತವನ್ನು ತಡೆದುಕೊಳ್ಳುವ ಶಕ್ತಿ ಹಾಗೂ ತಂತ್ರಗಳು ತಿಳಿದಿಲ್ಲ. ಹೀಗಾಗಿಯೇ ಹೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಈಗಿಗ ಕೃಷಿ ಕಾರ್ಮಿಕರು ಕೂಡ ನಗರ ಸೇರುತ್ತಿರುವುದು ಕೃಷಿಯ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತಿದೆ.
*ಕೀಟನಾಶಕಗಳ ಹಾಗೂ ರಾಸಾಯನಿಕಗಳ ನಿಯಂತ್ರಣ ಹೇಗೆ?
ಕೆಲವು ಪ್ರತಿಷ್ಠಿತ ಕಂಪನಿಗಳು ಕೀಟನಾಶಕಗಳ ಸಂಪೂರ್ಣ ಹಿಡಿತವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿವೆ. ಆದರೆ ಇವೆಲ್ಲ ನೈಸರ್ಗಿಕವಾದ ಹಾಗೂ ರೈತಸ್ನೇಹಿ ಕೀಟಗಳನ್ನು ಸರ್ವನಾಶ ಮಾಡುವ ಕೀಟನಾಶಕಗಳನ್ನು ತಯಾರಿಸುತ್ತಿವೆ. ಹೀಗಾಗಿ ರೈತ ಸ್ನೇಹಿ ಕೀಟಗಳನ್ನು ಮೊದಲು ಉಳಿಸಲು ಪ್ರಯತ್ನಿಸಬೇಕು. ಜತೆಗೆ ರಾಸಾಯನಿಕ ಹಾಗೂ ನಿಸರ್ಗಕ್ಕೆ ಮಾರಕವಾಗುವ ಕೀಟನಾಶಕಗಳ ಬಳಕೆ ನಿಲ್ಲಿಸಬೇಕು. ಸಾಂಪ್ರದಾಯಿಕ ಕೃಷಿಕರಿಗೆ ಈ ಎಲ್ಲ ಸತ್ಯಗಳ ಅರಿವಿದೆ. ಆದರೆ ಅವರು ಕೃಷಿ ಮಾಡುವ ಸ್ಥಿತಿಯಲ್ಲಿಲ್ಲ. ಕೃಷಿ ಮಾಡಬೇಕಿದ್ದ ಯುವಕರು ಹಳ್ಳಿ ತೊರೆದಿದ್ದಾರೆ. ಹೀಗಾಗಿ ಹಂತ ಹಂತವಾಗಿ ಎಲ್ಲವೂ ಸರ್ವನಾಶವಾಗುತ್ತಿವೆ. ಈ ವ್ಯವಸ್ಥೆ ಸರಿ ಹೋಗಬೇಕಾದರೆ ಹಿಂದಿನ ಕೃಷಿ ಪದ್ಧತಿಗೆ ಮರಳಲೇಬೇಕು. ಇದೂ ಕೂಡ ಒಂದೇ ದಿನದಲ್ಲಿ ಆಗುವ ಕೆಲಸವಲ್ಲ, ಕ್ರಮೇಣ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುತ್ತಾ ತಮ್ಮ ಮೂಲ ಕೃಷಿಗೆ ಬಂದು ನಿಲ್ಲಬೇಕು.
*ಈ ನಡುವೆ ಬಿಟಿ ಬೀಜಗಳು ಕೂಡ ನುಸುಳುತ್ತಿವೆಯಲ್ಲ?
ಅದು ಕಾರ್ಪೋರೇಟ್ ಕಂಪನಿಗಳ ಕುತಂತ್ರ. 2001-05ರಲ್ಲಿ ಶೇ.12ಮಾತ್ರ ಬಳಕೆ ಇತ್ತು. ಆಗ ಹೈಬ್ರೀಡ್ ಹತ್ತಿಯ ಪ್ರಭಾವದಿಂದ ಇಳುವರಿ ಹೆಚ್ಚಾಗಿತ್ತು. ಎಕರೆಗೆ 471 ಕಿ.ಗ್ರಾಂ ಇಳುವರಿ ಇತ್ತು. 2006-10ರ ಸಮಯದಲ್ಲಿ ಬಿಟಿ ಶೇ.90 ವ್ಯಾಪಿಸಿತು. ಆನಂತರ ಒಟ್ಟಾರೆ ಇಳುವರಿ ಎಕರೆಗೆ ಕೇವಲ 481ಕಿ.ಗ್ರಾಂ ಮಾತ್ರ. ಇದ್ಯಾವುದನ್ನೂ ಲೆಕ್ಕಿಸದೆ ಕೆಲವು ಕಂಪನಿಗಳು ಬಿಟಿ ಬೀಜಗಳನ್ನು ತಂದು ಹೆಚ್ಚು ಇಳುವರಿ ಬರುತ್ತದೆಎಂದು ನಂಬಿಸಿ ರೈತರನ್ನು ದಿವಾಳಿ ಎಬ್ಬಿಸುತ್ತಿವೆ. ರೈತರ ದೇಸಿ ಬೀಜಗಳನ್ನು ಕಿತ್ತುಕೊಂಡಿರುವ ಇವು ರೈತರ ಮುಂದಿನ ಆಯ್ಕೆಗಳನ್ನೇ ಸರ್ವನಾಶ ಮಾಡಿ, ಅವರನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುತ್ತಿವೆ.
]]>





ಸಾಯಿನಾಥರ ವಿಚಾರ ಲಹರಿಯನ್ನು ನಾನು ತಕ್ಕಮಟ್ಟಿಗೆ ಬಲ್ಲೆ. ‘ಈ ವ್ಯವಸ್ಥೆ ಸರಿ ಹೋಗಬೇಕಾದರೆ ಹಿಂದಿನ ಕೃಷಿ ಪದ್ಧತಿಗಳಿಗೆ ಮರಳಬೇಕು’ ಎಂಬುದು ಸಾಯಿನಾಥರ ವಿಚಾರ ಲಹರಿ ಅಲ್ಲ ಎಂದೇ ನನ್ನ ತಿಳುವಳಿಕೆ. ‘ಹಿಂದಿನ ಕೃಷಿ ಪದ್ಧತಿಗಳು’ ಅಂದರೆ ಏನು ಎನ್ನುವುದೇ ಜಿಜ್ನಾಸೆಯ ವಿಚಾರವಾಗಿರುವಾಗ, ಸಾಯಿನಾಥರಂಥ ಗಂಭೀರ ಚಿಂತಕರು ಇಂಥ sweeping statement ಕೊಡುತ್ತಾರೆಂದರೆ ನಂಬಲೇ ಆಗುತ್ತಿಲ್ಲ. ರಾಸಾಯನಿಕದ ಮೇಲಿನ ಅವಲಂಬನೆ ತ್ಯಜಿಸಿ, ಕಂಪನಿಗಳ ಹಿಡಿತದಿಂದ ಮುಕ್ತರಾಗಿ ಇಂದು ಸಾವಯವ/ಸಹಜ ಕೃಷಿಗಳನ್ನು ಅನುಸರಿಸುತ್ತಿರುವ ರೈತರಾರೂ ಕೇವಲ ‘ಹಿಂದಿನ ಪದ್ಧತಿ’ಗಳಿಗೆ ಮರಳಿದವರಲ್ಲ. ಹಿಂದಿನದರ ವಿವೇಕದ ತಳಹದಿಯ ಮೇಲೆ ನಿರಂತರ ಅನುಶೋಧನೆಗಳನ್ನು ಮಾಡುತ್ತಾ ತಮ್ಮ ಕೃಷಿಯನ್ನು ಶ್ರೀಮಂತಗೊಳಿಸಿಕೊಂಡವರು.
ದಯವಿಟ್ಟು ಸಾಯಿನಾಥರು ಯಾವ ಹಿನ್ನೆಲೆಯಲ್ಲಿ ಇಂಥ ಮಾತುಗಳನ್ನು ಹೇಳಿದ್ದಾರೆ ಎಂದು ಮತ್ತೊಮ್ಮೆ ಪರಿಶೀಲಿಸಬೇಕೆಂದು ಅವದಿಯ ಮಿತ್ರರಿಗೂ ಲೇಖಕರಿಗೂ ವಿನಂತಿ.
ವಿ ಗಾಯತ್ರಿ
ಖಂಡಿತಾ, ಗಾಯತ್ರಿ ಅವರೇ ನಿಮ್ಮ ಆಲೋಚನೆ ಸರಿ. ಹಿಂದಿನ ಕೃಷಿಗೆ ಮರಳಬೇಕು ಎಂದರೆ ಅದರರ್ಥ ಹಿಂದಿನ ಅದೇ ಪದ್ದತಿಗಳನ್ನು ಅನುಸರಿಸಬೇಕು ಎಂದಲ್ಲ. ಹಿಂದಿನ ಸಹಜ ಕೃಷಿಯ ಜೊತೆಗೆ ರಾಸಾಯನಿಕ ಮುಕ್ತ ಹೊಸ ಕೃಷಿ ಕ್ರಾಂತಿಯನ್ನು ಮಾಡಬೇಕು ಎಂಬುದು. ಈಗ ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿರುವ ಕೃಷಿ ವ್ಯವಸ್ತೆಯನ್ನು ಮತ್ತೆ ರೈತರು ತಮ್ಮ ಸುಪರ್ಧಿಗೆ ತೆಗೆದುಕೊಳ್ಳಬೇಕು. ಆಗ ಮಾತ್ರ ರೈತರು ತಮಗೆ ಏನು ಬೇಕೋ ಆ ಬೆಲೆಯನ್ನು ಬೆಳೆದುಕೊಳ್ಳಬಹುದು ಎನ್ನುವುದು ಪಿ. ಸಾಯಿನಾಥ್ ಅವರ ಆಶಯ…