ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಾಧ್ವಿ' ಪ್ರಗ್ಯಾ ಸಿಂಗ್ ಸ್ಪರ್ಧೆ ಹಿಂದಿನ ಹುನ್ನಾರ..

ಬೇರೆಯವರನ್ನು ಕೊಂದು ಉಳಿಸಿಕೊಳ್ಳಬೇಕಾದ
ಧರ್ಮ ಯಾವುದಾದರೂ ಇದೆ ಏನಯ್ಯ?

ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದ್ದ ಮಾತು ಪದೇ ಪದೇ ನೆನಪಾಗುತ್ತಿದೆ.
ಪ್ರಸಕ್ತ ರಾಜಕಾರಣ ಸುಳ್ಳು, ನೀಚತನ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಂದಿ ಮಾಗಧತನ ಮೀರಿ ಮತ್ತೊಂದು ಘಟ್ಟಕ್ಕೆ ಸಾಗಿದೆ.
ರಕ್ತದೋಕುಳಿ ಹರಿಸಿದ ಮಾಲೆಗಾಂವ್ ಸ್ಫೋಟದ ರೂವಾರಿ, ‘ಸಾಧ್ವಿ’ ಪ್ರಗ್ಯಾ ಸಿಂಗ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಘೋಷಿಸುವ ಮೂಲಕ ಮುಂದಿನ ದಿನಗಳ ರಾಷ್ಟ್ರ ರಾಜಕಾರಣದ ದಿಕ್ಕು ಬದಲಾಗುವ ಸ್ಪಷ್ಟ ಸುಳಿವು ಸಿಕ್ಕಿದೆ.
ಮುಸ್ಲಿಂ ಸಮುದಾಯದ ಮೇಲಿನ ಸೇಡಿಗಾಗಿ ಮೋಟಾರ್ ಬೈಕ್ ವೊಂದರಲ್ಲಿ ಬಾಂಬ್ ಇಟ್ಟು ಏಳು ಮಂದಿ ಅಮಾಯಕರ ಹತ್ಯೆ ಮತ್ತು ನೂರಾರು ಮಂದಿಗೆ ತೀವ್ರ ಸ್ವರೂಪದ ಗಾಯಕ್ಕೆ ಕಾರಣವಾದವರು ಈ ಸಾಧ್ವಿ. ಭಯೋತ್ಪಾದನೆಯ ಆರೋಪ ಹೊತ್ತು ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾದ ಇಂತಹ ವ್ಯಕ್ತಿಗೆ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ಎಂದು ಅಖಾಡಕ್ಕೆ ಇಳಿಸಿರುವುದು, ಕೇವಲ ಒಂದು ಘಟನೆ ಆಗಿರದೆ ಅದು ಬರುವ ದಿನಗಳಲ್ಲಿ ಈ ಪಕ್ಷ ಹಿಂದುತ್ವದ ಹೆಸರಲ್ಲಿ ಪ್ರತಿಪಾದಿಸಲಿರುವ ಕಠೋರತೆಗೆ ಸಾಕ್ಷಿ ಎಂದೇ ಬಣ್ಣಿಸಲಾಗಿದೆ.
ಇತರರನ್ನು ಕೊಂದು ತನ್ನ ಧರ್ಮವನ್ನು ಉಳಿಸಿಕೊಳ್ಳಬೇಕಾದ ಕಠೋರ ಸಿದ್ದಾಂ ಕ್ಕೆ ಸಹಾನುಭೂತಿಯ ಮಣೆ ಹಾಕುವ ಮೂಲಕ ಭಾರತೀಯ ಜನತಾ ಪಕ್ಷ, ತನ್ನ ಉಳಿವಿಗಾಗಿ ಭಾರತದ ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಲು ಹೊರಟಿದೆ ಎಂಬ ಟೀಕೆಗೂ ಇಲ್ಲಿ ಗುರಿಯಾಗಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಯೋತ್ಪಾದನೆಯ ಆರೋಪ ಹೊತ್ತ ವ್ಯಕ್ತಿಯೊಬ್ಬರಿಗೆ ಯಾವುದೇ ರಾಷ್ಟ್ರೀಯ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಂತಹ ಕೆಲಸಕ್ಕೆ ಕೈಹಾಕಿದೆ. ಅಷ್ಟೆ ಅಲ್ಲ, ಖುದ್ದು ಪ್ರಧಾನಿಯವರೇ ಅದನ್ನು ಬಹಿರಂಗವಾಗಿ ಸಮರ್ಥಿಸಿ ದಿಗ್ಭ್ರಮೆ ಮೂಡಿಸಿದ್ದಾರೆ. ರಾಜಕಾರಣ ಈ ಮಟ್ಟಕ್ಕೂ ತಲುಪಬಹುದು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕಾರಣವಾಗಿದೆ.
ಇದನ್ನು ಅತ್ಯಂತ ಸರಳ ಪ್ರಕರಣ ಎಂಬಂತೆ ಸಮರ್ಥಿಸಿರುವ ಪ್ರಧಾನಿ, ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ಜಾಮೀನು ಪಡೆದಿರುವ ಸೋನಿಯಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವೆ? ಅದೇ ರೀತಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದಿರುವ ಪ್ರಗ್ಯಾ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಸಲೀಸಾಗಿ ಹೇಳಿದ್ದಾರೆ.
ಆದರೆ.. ಇದು ಪ್ರಧಾನಿ ಹೇಳಿದಷ್ಟು ಸಲೀಸೆ? ಸರಳವೆ?
ಭಯೋತ್ಪಾದನೆಯ ಆರೋಪ ಹೊತ್ತು ತನ್ನ ಕೈಗಳಿಗೆ ರಕ್ತದ ಕಲೆ ಮಾಡಿಕೊಂಡ ವ್ಯಕ್ತಿಗೂ, ಭಯೋತ್ಪಾದಕರಿಂದ ಹತ್ಯೆಗೀಡಾದ ನಾಯಕನ ಪತ್ನಿಗೂ ಹೋಲಿಕೆ ಮಾಡುವುದು ಎಷ್ಟು ಸರಿ?
ಅದು ಹಾಗಿರಲಿ, ಬಿಜೆಪಿ ತನ್ನ ಈವರೆಗಿನ ಒಲವು ನಿಲುವುಗಳಿಂದ ದೂರ ಸರಿಯುತ್ತಿದೆಯೆ? ರಾಜಕೀಯ ತಂತ್ರಗಳನ್ನು ಬದಲಾಯಿಸುತ್ತದೆಯೇ? ಲೋಕಸಭೆ ಚುನಾವಣೆಯಲ್ಲಿ ಏನೇ ಮಾಡಿದರೂ ತನ್ನ ಪರ ಯಾವುದೇ ಅಲೆ ಕಾಣದೆ ಕಂಗಾಲಾಗಿ ಉಗ್ರ ಹಿಂದುತ್ವದ ಪರ ಕೃತಕ ಅಲೆಯೆಬ್ಬಿಸಿ ಉತ್ತರ ಭಾರತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಯತ್ನಿಸಿದೆಯೆ? ಇತ್ಯಾದಿ ಪ್ರಶ್ನೆಗಳ ಮಹಾಪೂರವೇ ಹರಿದಿದೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಹಿಂದುತ್ವದ ಉಳಿವಿನ ಹೆಸರಲ್ಲಿ ರಕ್ತದೋಕುಳಿ ಹರಿಸಿ ಬಹುತ್ವವನ್ನು ಪ್ರತಿಪಾದಿಸುವ ಮೂಲಭೂತವಾದದ ರಕ್ತಸಿದ್ದಾಂತವನ್ನು ತನ್ನ ಮುಖ್ಯವಾಹಿನಿಗೆ ತರುವ ಮೂಲಕ ಭಾರತವನ್ನು ಕೋಮು ಆಧಾರದ ಮೇಲೆ ಒಡೆಯಲು ಯತ್ನಿಸಿದೆಯೇ? ಇಂತಹ ಹೀನ ಕೆಲಸವನ್ನು ರಾಜಕೀಯ ಧ್ರುವೀಕರಣ ದ ಹೆಸರಲ್ಲಿ ವಿಶ್ಲೇಷಿಸಬೇಕೆ?ಎನ್ನುವ ಪ್ರಶ್ನೆಗಳು ದಿಢೀರನೆ ಉದ್ಭವ ವಾಗಿದೆ.
ಎರಡನೇ ಹಂತದ ಲೋಕಸಭೆ ಚುನಾವಣೆ ನಡೆದು, ಮೂರನೇ ಹಂತ ಮುಗಿಯುತ್ತಿದ್ದಂತೆ ಬಿಜೆಪಿಗೆ ನಿಜವಾದ ಅಗ್ನಿಪರೀಕ್ಷೆ ಶುರುವಾಗುತ್ತದೆ.
ಉತ್ತರಪ್ರದೇಶ , ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಛತ್ತೀಸ್ ಘಡ, ಜಾರ್ಖಂಡ್ ನಲ್ಲಿ ಯಾವುದೇ ಅಲೆ ಬಹಿರಂಗವಾಗಿ ಕಾಣುತ್ತಿಲ್ಲ. ಮೋದಿ ಅಲೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ರಾಜ್ಯಗಳಲ್ಲಿ ಕೆಳೆದ ಬಾರಿಗೆ ಬಿಜೆಪಿ ಪರ ಬಂಪರ್ ಬೆಳೆ ತೆಗೆದಿದ್ದ ಮೋದಿಗೆ ಈ ಬಾರಿ ಅದು ಸಾಧ್ಯವಿಲ್ಲ ಎಂದು ಗೊತ್ತಾಗಿರುವುದೇ ಸಾಧ್ವಿ ಪ್ರಗ್ಯಾರಂತಹ ಮೂಲಭೂತವಾದಿಗಳ ಸಿದ್ದಾಂತವನ್ನು ಮುಖ್ಯವಾಹಿನಿಗೆ ತರಲು ಪ್ರಮುಖ ಕಾರಣ.
2014 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಇಲ್ಲಿ ಸೀಟುಗಳನ್ನು ಕೊಳ್ಳೆ ಹೊಡೆದರು. ಒಟ್ಟು 273ರಲ್ಲಿ 246 ಸೀಟು ಪಡೆದು ಸಾಮ್ರಾಜ್ಯ ಪ್ರತಿಷ್ಠಾಪನೆ ಮಾಡಿದರು. ಅಂದು ಮೋದಿ ಜಪಿಸಿದ್ದು ಹೊಸಭಾರತ ನಿರ್ಮಾಣದ ಮಂತ್ರ. ಅಭಿವೃದ್ದಿ ಮಂತ್ರ. ಯುವ ಸಮುದಾಯದಲ್ಲಿ ಹೊಸ ಹೊಸ ಕನಸುಗಳ ಭರವಸೆ.
ಆದರೆ ಈಗ ಅವುಗಳ ಬಗ್ಗೆ ಚಕಾರವಿಲ್ಲ.
ಆದರೆ ಈ ಬಾರಿ ಮಾರಾಟಕ್ಕೆ ಇಂತಹ ಆಕರ್ಷಕ ಸರಕುಗಳು ಬಿಜೆಪಿ ಬಳಿ ಇಲ್ಲ. ಪರಿಣಾಮ,
ಈ ಬಾರಿ ಬಿಜೆಪಿ ಸಂಖ್ಯೆ ಕನಿಷ್ಟ 146 ರಿಂದ 164 ಕ್ಕೆ ಕುಸಿಯುವುದು ನಿಶ್ಚಿತ ಎನ್ನುವುದು ಖುದ್ದು ಬಿಜೆಪಿ ಮಾಡಿಸಿರುವ ಆಂತರಿಕ ಸಮೀಕ್ಷೆಗಳಿಂದ ವ್ಯಕ್ತವಾಗಿದೆ. ಹೀಗಾಗಿಯೆ ಈ ಸಂಖ್ಯೆ ಹೆಚ್ಚಿಸಲು ಹಿಂದಿ ಪ್ರದೇಶಗಳಲ್ಲಿ ಕಠೋರ ಹಿಂದುತ್ವದ ಕೋಲಾಹಲಕಾರಿ ತಂತ್ರ ರೂಪಿಸಲಾಗುತ್ತಿದೆ. ಅದಕ್ಕಾಗಿಯೇ ಪ್ರಗ್ಯಾ ಅವರನ್ನು ಕಣಕ್ಕಿಳಿಸಲಾಗಿದೆ. ಪ್ರಗ್ಯಾ ಸ್ಪರ್ಧೆ ಬಿಜೆಪಿಯ ಭವಿಷ್ಯದ ರಾಜಕಾರಣ ಪಡೆಯಲಿರುವ ತಿರುವಿನ ಸಂಕೇತ.
ಪ್ರಪಂಚದ ದೊಡ್ಡ ಪ್ರಜಾಸತ್ತೆ ಎಂದೇ ಬಿಂಬಿಸಲ್ಪಟ್ಟ, ಜಾತ್ಯಾತೀತ ಬುನಾದಿಯ ಮೇಲೆ ಕಟ್ಟಲ್ಪಟ್ಟ ಭಾರತದಲ್ಲಿ ಹೀಗೂ ಆಗಬಹುದೆನ್ನುವ ದೊಡ್ಡ ಅಚ್ಚರಿ, ದಿಗ್ಭ್ರಮೆಯನ್ನು ಮೋದಿ, ಅಮಿತ್ ಶಾ ಜೋಡಿ ಹುಟ್ಟಿ ಹಾಕಿದೆ.
ಸರಳವಾಗಿ ಹೇಳಬೇಕೆಂದರೆ ಬಹುತ್ವವಾದಕ್ಕೆ ಮಣೆ ಹಾಕುವ ಹೆಸರಲ್ಲಿ ರಕ್ತ ರಾಜಕಾರಣವನ್ನು ಸಮರ್ಥಿಸಿಕೊಳ್ಳುವ ಈ ಸಿದ್ಧಾಂತ, ಬರುವ ದಿನಗಳಲ್ಲಿ ಭಾರತದಲ್ಲೂ ಹಿಂದುತ್ವದ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸುವುದಾಗಿದೆ. ಇದರಲ್ಲಿ ಕಿಂಚಿತ್ ಅನುಮಾನವೂ ಬೇಡ.
ಈ ವಿಚಾರಗಳ ನೆರಳಲ್ಲೇ ಇನ್ನಷ್ಟು ವ್ಯಕ್ತಿ ವಿಜೃಂಭಣೆಯ ಸಂಗತಿಗಳು ಭಾರತ ರಾಜಕಾರಣವನ್ನು ತತ್ತರಗೊಳಿಸುತ್ತಿರುವುದನ್ನು ನೋಡೋಣ.
ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಈ ಸಾದ್ವಿ, ದೇಶಕ್ಕಾಗಿ ಉಗ್ರರ ಗುಂಡಿಗೆ ಬಲಿಯಾದ ಧೀಮಂತ ಪೊಲೀಸ್ ಅಧಿಕಾರಿ ಕರ್ಕರೆಯವರನ್ನೆ ದೇಶದ್ರೋಹಿ ಎಂದು ಹೀಯಾಳಿಸುವುದು, ತನ್ನ ಶಾಪದಿಂದ ಅವರು ಸತ್ತರು ಎಂದು ಮೂದಲಿಸುವುದು.. ಇವೆಲ್ಲ ನೋಡಿದರೆ ಭಾರತ ರಾಜಕಾರಣದ ದೈನೇಸಿ ಸ್ಥಿತಿ ತಿಳಿಯುತ್ತೆ.
ಬಾಬರಿ ಮಸೀದಿ ಒಡೆಯಲು ನಾನು ಅದರ ಮೇಲೆ ಏರಿದ್ದೆ ಎಂದು ಎದೆಯುಬ್ಬಿಸಿ ಈ ಸಾದ್ವಿ ಹೇಳುವಾಗ ಬಿಜೆಪಿ ಪ್ರತಿಪಾದಿಸಲಿರುವ ಕಠೋರ ಹಿಂದುತ್ವದ ಅರಿವಾಗಲಿದೆ. ಮೋದಿಯನ್ನು ವಿರೋಧಿಸುವವರು ದೇಶದ್ರೋಹಿಗಳೆಂದು ಹೇಳುವ ಜನರೇ, ಪ್ರಗ್ಯಾ ವಿರೋಧಿಗಳನ್ನೂ ದೇಶದ್ರೋಹಿ ಎಂದರೆ ಅಚ್ಚರಿ ಏನಲ್ಲ.
ಇಷ್ಟೆ ಅಲ್ಲ, ಅಪಾಯದ ಇನ್ನೊಂದಿಷ್ಟು ಸಂಗತಿಗಳಿವೆ.
ಗೋಹತ್ಯೆ ಮಾಡಿದ ಆರೋಪಕ್ಕಾಗಿ ನಡೆದ ಅಲ್ಪಸಂಖ್ಯಾತರ ಹತ್ಯೆ ಮಾಡಿದ ಕೊಲೆಗಡುಕರು, ದಲಿತರ ಚರ್ಮ ಸುಲಿದ ಘಟನೆಗಳ ಆರೋಪಿಗಳು, ಈಗ ಹಿಂದುತ್ವದ ರಕ್ಷಣೆ ಪಡೆದು ಆಧುನಿಕ ಭಾರತದ ಹೀರೋಗಳಾದರೂ ಆಶ್ಚರ್ಯವೇನಿಲ್ಲ.
ಬಹುಸಂಖ್ಯಾತ ಮನೋಧರ್ಮವೆ ಸರಿ ಎನ್ನುವ ಈ ಸಿದ್ಧಾಂತ ಭಾರತದ ಸಂವಿಧಾನವನ್ನೇ ಪ್ರಶ್ನಿಸುವಂಥದ್ದು. ಜನಾಂಗೀಯ ತಾರತಮ್ಯ, ಹಿಂಸೆಯನ್ನು ಪ್ರತಿಪಾದಿಸುವ ಈ ಹೊಸ ಸಿದ್ಧಾಂತ ಅಪಾಯದ ಸಂಕೇತ.
ಪಾಕಿಸ್ತಾನ ತನ್ನ ನೆಲದಲ್ಲಿ ಮೂಲಭೂತವಾದಕ್ಕೆ ಮನ್ನಣೆ ಕೊಟ್ಟು ಹಫೀಸ್ ಸೈಯದ್ ರಂತ ಉಗ್ರಗಾಮಿ ರಾಕ್ಷಸರನ್ನು ಸೃಷ್ಟಿಸಿ ಮಾಡಿದ ಅಪಾಯಕಾರಿ ರಾಜಕಾರಣ ಎಲ್ಲರಿಗೂ ಗೊತ್ತಿದೆ. ಇಂದು ಪಾಕಿಸ್ತಾನದ ಎಲ್ಲರ ಜುಟ್ಟು ಈ ಮತಾಂಧರ ಕೈಯಲ್ಲಿದ್ದು, ಮಾನವೀಯತೆ ಸಂಪೂರ್ಣ ನಾಶವಾಗಿದೆ. ಇದರಿಂದ ಪಾಠ ಕಲಿಯದ , ಬಿಜೆಪಿ ಕೂಡಾ ಇಂಥದ್ದೇ ಕೆಲಸ ಮಾಡಲು ಹೊರಟಿರುವುದು ವಿಪರ್ಯಾಸ. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು, ನೈತಿಕ ಪ್ರಜ್ಞೆಗೆ ಇದು ಏಟು ನೀಡಲಿದೆ.
ಭವಿಷ್ಯದ ರಾಜಕಾರಣ ದಿಗಿಲು ಹುಟ್ಟಿಸುತ್ತಿದೆ.
ಕೊನೆಯದಾಗಿ ಒಂದು ಅನುಮಾನ. ಇಲ್ಲಿಯ ಎಲ್ಲ ವಿದ್ಯಮಾನಗಳು ಸಂವಿಧಾನದ ಮೂಲ ಸ್ವರೂಪವನ್ನೇ ಅಲ್ಲಾಡಿಸುವಂತಿವೆ. ಭಾವೈಕ್ಯತೆ, ವೈವಿಧ್ಯತೆಯಲ್ಲಿ ಏಕತೆ ಪ್ರತಿಪಾದಿಸುವ ನೆಲದಲ್ಲಿ ಬಹುತ್ವವೆ ಸರಿ ಎನ್ನುವ ವಾದ ಮಂಡನೆ ಸಂವಿಧಾನಕ್ಕೆ ಸವಾಲು ಹಾಕುವಂತೆ ಇದೆ.
ಯಾಕೋ ಮತ್ತೆ ತೇಜಸ್ವಿ ನೆನಪಾಗುತ್ತಿದ್ದಾರೆ.
2002 ಜುಲೈ ತಿಂಗಳಲ್ಲಿ ‘ಲಂಕೇಶ್ ಪತ್ರಿಕೆ’ಯಲ್ಲಿ ತೇಜಸ್ವಿ ಮಹತ್ವದ ವಿಚಾರವನ್ನು ಸರಳವಾಗಿ ಬರೆದರು.
“ಇವತ್ತು ನಮ್ಮ ದೇಶದಲ್ಲಿ ಜಾತ್ಯಾತೀತ ಸಂವಿಧಾನವಿದೆ. ಈ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು. ಅದರಲ್ಲಿರುವ ಜಾತ್ಯಾತೀತ ತತ್ವಗಳನ್ನು ನಾವು ಅವಲಂಬಿಸಿದರೆ, ಅದು ಜಾತಿ ವಿನಾಶಕ್ಕೂ, ಕೋಮು ದಳ್ಳುರಿ ನಾಶಕ್ಕೆ ಉತ್ತಮ ಪರಿಹಾರ ಆಗುತ್ತದೆ”
ಇದು ತೇಜಸ್ವಿ ಬರೆದದ್ದು.
ಆದರೆ.. ಎಲ್ಲವೂ ವಿರುದ್ದ ದಿಕ್ಕಲ್ಲಿ ಸಾಗುತ್ತಿರುವುದು ಕಂಡರೆ.. ಸಂವಿಧಾನ ಬದಲಾವಣೆಯ ಗುಮಾನಿ… ದಟ್ಟವಾಗುತ್ತಿದೆ..????!!!!!

‍ಲೇಖಕರು avadhi

22 April, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading