ಯಾರೋ ರಶ್ಮಿಯಂತೆ, ಬಂದಿದ್ದಳು..

ಸ್ವಪ್ನದಲ್ಲಿ ಕಂಡದ್ದು

ಎಚ್.ಆರ್. ರಮೇಶ

‘ಏನಾದರೂ ಥಟ್ಟಂತ ನಿದ್ದೆಯಿಂದ ಎದ್ದು ಕೂತು, ಕೂಗಿಕೊಂಡಿದ್ದರೆ ಎನ್ಗತಿ!?’ ಎಂದು ಊರಬಾಗಿಲ ರಾಜಶೇಖರ ಮೂರ್ತಿ ನನ್ನನ್ನು ಕೇಳಿದ.

ಅಷ್ಟೊತ್ತಿಗೆ ಸಪ್ಲೈಯರ್ ಬಂದು ಎರಡು ಗ್ಲಾಸುಗಳಲ್ಲಿ ಕೆ.ಟಿ ಇಟ್ಟು ಹೋದ. ಅವನು ಆ ಪ್ರಶ್ನೆಯನ್ನು ಕೇಳುವ ಒಂದೈದು ನಿಮಿಷಕ್ಕೂ ಮುಂಚೆಯಿಂದ ಈ  ಕೆ.ಟಿ ಎನ್ನುವುದನ್ನು ಹೇಗೆ ಮಾಡ್ತಾರೆ ಎಂಬುದನ್ನು ಕುರಿತು ಯೋಚಿಸುತ್ತಿದ್ದೆ. ಟೀಯನ್ನು ಕೊಟ್ಟಾಗ ಅದು ಗ್ಲಾಸಿನಲ್ಲಿ ಯೋವುದೋ ಒಂದು ಹೂವಿನ ಥರ ಕಾಣುತ್ತಿತ್ತು. ಕೆಳ ಭಾಗದಲ್ಲಿ ಹಾಲು, ಅದರ ಮೇಲೆ ಟೀ ಮತ್ತು ಮೇಲ್ಭಾಗದಲ್ಲಿ ಪುಟ್ಟ ಮಂಜಿನ ಬೆಟ್ಟದಂಥೆ ಕಾಣುವ ಹಾಲಿನ ನೊರೆ. ಅವನ ಆ ಪ್ರಶ್ನೆಯನ್ನು ಪಕ್ಕದಲ್ಲಿದ್ದವರು ಕೇಳಿಸಿಕೊಂಡರು ಅನ್ನಿಸುತ್ತೆ. ಅವರು ನಮ್ಮ ಕಡೆ ನೋಡಿದರು. ನೋಡಿಯೂ ನೋಡದವರಂತೆ, ಕೇಳಿಸಿಕೊಂಡರೂ ಕೇಳಿಸಿಕೊಳ್ಳಲಿಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಏನೇನೋ ಮಾತಾಡಿಕೊಳ್ಳುತ್ತಿದ್ದರು.

ನಮ್ಮ ಮುಂದೆ ಹೊಸದಾಗಿ ಮದುವೆಯಾದಂತೆ ಕಾಣುವ ಒಂದು ಜೋಡಿ ಕುಳಿತಿತ್ತು. ಆ ಜೋಡಿ ಬಂದು ಕೂರುವಾಗ, ಗಂಡ ಕೇಳಿದ, ‘ಪಾರು ಯಾರ ಹತ್ತಿರ ರಾತ್ರಿ ಫೋನಲ್ಲಿ ಮಾತಾಡುತ್ತಿದ್ದೆಯಲ್ಲ?’ ಎಂದು. ಅದಕ್ಕೆ ಅವನ ಹೆಂಡತಿ, ‘ಸತೀಶನ ಹೆಂಡತಿಯಲ್ಲವಾ?’ ಎಂದಳು. ಮತ್ತೆ ಮುಂದುವರೆಸಿ, ‘ಅಯ್ಯೋ ಫಸ್ಟ್ ತಿಂಡಿ ಆರ್ಡರ್ ಮಾಡು, ಹೊಟ್ಟೆ ಹಸೀತಿದೆ, ನಿನ್ನ ಪ್ರಶ್ನೆಗಳನ್ನೆಲ್ಲ ಆಮೇಲೆ ಕೇಳುವಿಯಂಥೆ’ ಎಂದಳು. ‘ಏನು ಮಾಡಲಿ?’ ‘ಯಾವುದಾದರೂ ಎರಡು ಐಟಂ ಮಾಡು, ಎರಡನ್ನೂ ಶೇರ್ ಮಾಡಿಕೊಳ್ಳೋಣ.’ ‘ದೋಸೆ ಮತ್ತು ತಟ್ಟೆ ಇಡ್ಲಿ, ಓಕೆ ನಾ’ ಈ ಮಾತುಗಳು ಕೇಳುತ್ತಿದ್ದವು. ಆದರೆ ರಾಜಶೇಖರ್ ಈ ಯಾವು ಮಾತುಗಳನ್ನು ಕೇಳಿಸಿಕೊಂಡವನಂತೆ ಕಾಣಲಿಲ್ಲ.

ಸಂಜೆ ನಾಲ್ಕಾಗಿತ್ತು. ಹೋಟೆಲಿನಲ್ಲಿ ಅಷ್ಟೊಂದಾಗಿ ಜನನೂ ಇರಲಿಲ್ಲ. ದಿನಾಲು ಗಿಜಿಗುಡುವ ಹೋಟೆಲು ಆ ಸಮಯದಲ್ಲಿ ಪ್ರಶಾಂತವಾಗಿ ಇತ್ತು.  ಅವನ ಆ ‘ಏನಾದರೂ ಥಟ್ಟಂತ ನಿದ್ದೆಯಿಂದ ಎದ್ದು ಕೂತು ಕೂಗಿಕೊಂಡಿದ್ದರೆ ಎನ್ಗತಿ!?’ ಎನ್ನುವ ಪ್ರಶ್ನೆಗೆ ತಕ್ಷಣಕ್ಕೆ ಏನು ಹೇಳಬೇಕೆಂದು ಹೊಳೆಯಲಿಲ್ಲ. ತಕ್ಷಣಕ್ಕೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದ ಗೆಳೆಯ ರಾಜಶೇಖರ ಮೂರ್ತಿ, ’ಲೋ ಎಂ.ಎಂ ಯಾವಾಗಲೂ ಹೀಗೆ ಕಣೋ ನೀನು , ಆಬ್ಸೆಂಟ್ ಮೈಂಡೆಡ್ ಫೆಲೋ’ ಎಂದು ಬೈದ. ‘ಥಟ್ಟಂತ ಯಾರು ಎದ್ದರೆ? ಅಂದರೆ ಯಾರು? ಯಾರು ಕೂಗಿಕೊಂಡರೆ?’ ಎಂದು ಅವನನ್ನೇ ತರಾಟೆಗೆ ತೆಗೆದು ಕೊಳ್ಳುವವನಂತೆ ಪ್ರತಿಸವಾಲನ್ನು ಹಾಕಿದೆ. ‘ನಿನಗೆ ಅಕ್ಕಪಕ್ಕದವರ ಮಾತೇ ಕೇಳೋದು, ಹತ್ತಿರ ಇರೋರ ಮಾತು ಎಲ್ಲೆ ಕೇಳುತ್ತೆ’ ಎಂದದ್ದಕ್ಕೆ ಆಶ್ಚರ್ಯ ಆಯ್ತು. ನಾನು ಆ ದಂಪತಿಗಳು ಮಾತಾಡುವುದನ್ನು ಕೇಳಿಸಿಕೊಳ್ಳುತ್ತಿರುವುದು ಹೇಗೆ ಗೊತ್ತಾಯ್ತು ಅಂತ.

‘ಲೋ ಊರ ಬಾಗಿಲ ರಾಜಶೇಖರ, ಸ್ವಲ್ಪ ನೇರವಾಗಿ ಹೇಳು’ ಎಂದೆ. ನನಗ್ಯಾಕೋ ಮನಸ್ಸಿಗೆ ಕಸಿವಿಸಿ ಅನ್ನಿಸುತ್ತಿತ್ತು. ಹಾಗಾಗಿ, ‘ಇಲ್ಲಿ ಯಾಕೋ ಇವೋತ್ತು ಸರಿಯಾಗುತ್ತಿಲ್ಲ, ರೋಸ್ ಗಾರ್ಡನ್ ಗೆ ಹೋಗೋಣ ನಡೆ’ ಎಂದೆ. ಅದಕ್ಕೆ ಅವನು ‘ನನಗೆ ಕೋಪ ಬರುತ್ತೆ ನನ್ನ ಮೇಲೇನೆ. ನಮ್ಮ ಮನೆ ಯಾಕಾದರು ದಿಡ್ಡಿಬಾಗಿಲ ಹತ್ತಿರ ಐತೆ ಎಂದು. ಥೂ ಅವನವ್ವನ್ ಎಂದು ಬೈದು ಕೊಂಡ. ಎಲ್ಲರೂ ನನ್ನನ್ನು ಊರ ಬಾಗಿಲ ರಾಜಶೇಖರ ಊರ ಬಾಗಿಲ ರಾಜಶೇಖರ ಎಂದು ಕರೆಯುವುದನ್ನು ಕೇಳಿದರೆ ಕಿವಿಯಲ್ಲಿ ಬೆಂಕಿಯನ್ನೇ ಸುರಿದ ಹಾಗೆ ಆಗುತ್ತೆ’ ಎಂದು, ಆಯ್ತು ನಡೆಯಪ್ಪ ಅಲ್ಲಿಗೆ ಹೋಗೋಣ’ ‘ಎಂದು ತನ್ನ ಮಾತನ್ನು ಮುಂದುವರೆಸಿದ, ನನಗ್ಯಾಕೋ ಇತ್ತೀಚೆಗೆ ರಾತ್ರಿಗಳೇ ಖುಷಿಕೊಡೊಲ್ಲ, ಏನೇನೋ ಕನಸುಗಳು’ ಎಂದ. ‘ಮತ್ತೆ?’ ಎಂದು ತುಸು ಆಶ್ಚರ್ಯದಿಂದ ಕೇಳಿದೆ. ಕೇಳಿ, ಎಡಗಡೆಯ ಕೆಟಿಕಿಯಾಚೆ ನೋಡಿದೆ. ರೂಪ ಟಾಕೀಸು ಕಾಣಿಸುತ್ತಿತ್ತು.

ಮುಂದಿನ ಭಾಗ ಕಮಾನು ಆಕೃತಿಯಲ್ಲಿದ್ದು, ಎರಡು ಬೀದಿ ದೀಪದ ಕಂಬಗಳ ಎತ್ತರದಷ್ಟಿತ್ತು. ಸಾದಾ ಗೋಡೆಯಾಗಿದ್ದ ಅದರ ಮಧ್ಯದಲ್ಲಿ ರೂಪ ಟಾಕೀಸು ಮತ್ತು ಅದರ ಕೆಳಗೆ 1970 ಎಂದು ಗೋಡೆಯಲ್ಲಿ ಕೊರೆಸಲಾಗಿದ್ದ ಅಕ್ಷರಗಳು ಕಾಣುತ್ತಿದ್ದವು ಕೆಂಪು ಬಣ್ಣದಲ್ಲಿ. ಇಡೀ ಮುಂಬಾಗ ಗೋಪಿ ಬಣ್ಣದ್ದಾಗಿದ್ದುದರಿಂದ ಕೆಂಪು ಅಕ್ಷರಗಳಲ್ಲಿ ಅವು ಎದ್ದು ಹೊಡೆಯುತ್ತಿದ್ದವು. ನಗರದ ಮುಖ್ಯ ರಸ್ತೆಗೆ ಅಂಟಿಕೊಂಡಿದ್ದರಿಂದ ಅದರ ಮುಂದಿನ ರಸ್ತೆ ವಾಹನ ಸಂಚಾರ ದಟ್ಟವಾಗಿತ್ತು. ಹೊಸ ಸಿನಿಮಾ ಬಿಡುಗಡೆಯಾದ ದಿನವಂತೂ ಜನಗಳನ್ನು ಮತ್ತು ವಾಹನಗಳನ್ನು ತಹಬದಿಗೆ ತರುವುದು ಪೋಲಿಸಿನವರಿಗೆ ಸಾಕಾಗ್ತಿತ್ತು. ಟಾಕೀಸಿನ ಪಕ್ಕದ ಎಡ ರಸ್ತೆ ಮುಖ್ಯ ರಸ್ತೆಯಿಂದ ಸಂತೆ ಮೈದಾನಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಅದರ ಬಲ ಪಕ್ಕದ ರಸ್ತೆಯು ಕೋಟೆಗೆ ಸಂಪರ್ಕವಾಗಿತ್ತು.

ಶುಕ್ರವಾರದ ದಿನ ಹೊಸ ಸಿನಿಮಾದ ಪ್ರಯುಕ್ತ ರಸ್ತೆಯು ಗಿಜಿ ಗಿಜಿಯಾಗಿದ್ದರೆ, ಸೋಮವಾರ ಸಂತೆ ಪ್ರಯುಕ್ತ ಜನಸಾಗರದಿಂದ ದಟ್ಟೈಯಿಸುತ್ತಿತ್ತು. ಭಾನುವಾರ ಬಂದರೆ ಬೇರೆ ಊರಿನಿಂದ ಬರುವ ಪ್ರವಾಸಿಗರು ಕೋಟೆಗೆ ಹೋಗಲು ಈ ರಸ್ತೆಯನ್ನೇ ಬಳಸಿ ಹೋಗಬೇಕಾಗಿದ್ದುದರಿಂದ ಅಂದು ತುಂಬಾ ರಶ್ಶಾಗುತ್ತಿತ್ತು. ಸುತ್ತ ಮುತ್ತಲಿನ ಹಳ್ಳಿಯವರು, ನಗರದ ನಿವಾಸಿಗಳು, ಹೊರಗಿನ ಪ್ರಯಾಣಿಕರು, ಸಿನಿಮಾಗೆ ಹೋಗುವವರು, ಎಲ್ಲರೂ ಒಂದು ಕಡೆ ಬಂದು , ಸಂಧಿಸಿ, ಹೋಗುವ ಒಂದು ಕೇಂದ್ರಬಿಂದುವಿನ ಥರ ಆ ಟಾಕೀಸು ಇತ್ತು. ನಾನು ಟಾಕೀಸಿನ ಕಡೆ ನೋಡುವಾಗ ಇದೆಲ್ಲ ಮನಸ್ಸಿಗೆ ಬಂದಿತು. ಕವಲು ದಾರಿ ಸಿನಿಮಾದ ಪೋಸ್ಟರ್ ನ್ನು ಹಾಕಲಾಗಿದ್ದು, ಅದರಲ್ಲಿನ ಅನಂತನಾಗ್‍ನ ನೋಟ ನನ್ನನ್ನೇ ನೋಡುತ್ತ ನೀನು ಯಾವಾಗಯ್ಯ ಇನ್ನು ಸಿನಿಮಾ ನೋಡುವುದಕ್ಕೆ ಬರುವುದು ಎಂದು ಕೇಳುವಂತಿತ್ತು.

ಸಂತೆ ರಸ್ತೆಯ ಕಡೆಯಿಂದ ಒಂದು ಬಿಳಿ ಬಣ್ಣದ ಸ್ಕೂಟರ್ ನ್ನು ಒಬ್ಬ ಯುವತಿ ಚಲಾಯಿಸಿಕೊಂಡು ಬಂದಳು. ಕೆಂಪು ಚೂಡಿದಾರವನ್ನು ಧರಿಸಿದ್ದ ಅವಳು ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದಳು. ಬಲಗಡೆಯ ಭುಜಕ್ಕೆ ಒಂದು ಬ್ಯಾಗನ್ನು ನೇತುಹಾಕಿಕೊಂಡಿದ್ದಳು.  ಸ್ಕೂಟರಿನ ಎಡಭಾಗದ ಇಂಡಿಕೇಟರ್ ಮಿಣುಕುತ್ತ ಕೀಯ್ ಕೀಯ್ ಎಂದು ಸದ್ದು ಮಾಡುತ್ತಿತ್ತು. ಅದೇ ಹೊತ್ತಿಗೆ ಕೋಟೆ ರಸ್ತೆಯ ಕಡೆಯಿಂದ ಟಿ.ವಿ.ಎಸ್ ಸ್ಕೂಟರ್‍ನಲ್ಲಿ ದೊಡ್ಡದಾದ ಅಚ್ಚ ಹಸಿರಿನ ಹುಲ್ಲಿನ ಹೊರೆಯೊಂದನ್ನು ಸೀಟು ಮತ್ತು ಪೆಟ್ರೋಲ್ ಟ್ಯಾಂಕ್ ನಡುವೆ ಇಟ್ಟುಕೊಂಡು ಒಬ್ಬ ಬಂದ. ಅವನು ಹೆಲ್ಮೆಟನ್ನು ಧರಿಸಿರಲಿಲ್ಲ. ನೋಡುವುದಕ್ಕೆ ಸ್ಫುರದ್ರೂಪಿಯಾಗಿದ್ದ ಅವನು ಜೀನ್ಸ್ ಮತ್ತು ಟೀ ಶರ್ಟ್‍ನ್ನು ಧರಿಸಿದ್ದ. ಸುಮಾರು ಇಪ್ಪತ್ತರ ಆಸುಪಾಸಿನ ಯುವಕನಾಗಿದ್ದ. ಅವನು ಸವಾರಿ ಮಾಡಿಕೊಂಡು ಬರುವಾಗ ಅಷ್ಟು ದೊಡ್ಡದಾದ ಹುಲ್ಲಿನ ಹೊರೆಯಲ್ಲಿ ಅವನು ಕಳೆದೇ ಹೋಗಿರುವಂತೆ ಕಾಣುತ್ತಿದ್ದ. ಹಾಗೂ ಹುಲ್ಲಿನ ಹೊರೆಯೇ ಚಲಿಸಿಕೊಂಡು ಹೋಗುತ್ತಿದೆಯೇನೋ ಎಂದು ಕ್ಷಣ ಭಾಸವಾಗುವಂತಿತ್ತು.

ಅಷ್ಟೊಂದು ಹುಲ್ಲನ್ನು ಕುಯ್ದು, ಕಟ್ಟಕೊಂಡು ಪುಟ್ಟ ವಾಹನದಲ್ಲಿ ಅದು ಆ ಜನದಟ್ಟಣೆಯ ನಗರದ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ಅವನು ಎಲ್ಲರ ಕೇಂದ್ರಬಿಂದುವೇ ಆಗಿದ್ದ. ಕೋಟೆ ರಸ್ತೆಯ ಕಡೆಯಿಂದ ಬಂದು, ಮುಖ್ಯರಸ್ತೆಗೆ ಸೇರಿಕೊಂಡು, ಟಾಕೀಸಿನ ಮುಂದಗಡೆಯಿಂದ ಹಾದು ಎಡಕ್ಕೆ ತಿರುಗಿದ. ಅರೆ ಕ್ಷಣದಲ್ಲಿ  ಆ ಕಡೆಯಿಂದ ಬಿಳಿ ಸ್ಕೂಟರಿನಲ್ಲಿ ಬರುತ್ತಿದ್ದ ಯುವತಿಗೆ ಅವನ ಹುಲ್ಲಿನ ಹೊರೆ ತಾಗಿ ಅವಳು ಬಿದ್ದಳು. ಪಕ್ಕದ ಬಟ್ಟೆ ಅಂಗಡಿಯ ಮುಂಭಾಗದ ಗಾಜಿನ ಮೇಲೆ ರಕ್ತ ಚಿಲ್ಲೆಂದು ಚಿಮ್ಮಿತು. ಒಂದೇ ಒಂದು ಗುಟುಕು ಟೀಯನ್ನಷ್ಟೇ ಕುಡಿದಿದ್ದ ನಾನು ಅರೆರೆ , ಅಯ್ಯೋ ಎಂದು ಹೊರಗೆ ಓಡಿದೆ.  ನನ್ನನ್ನು ರಾಜಶೇಖರ ಮತ್ತೆ ಹೋಟೆಲಿನಲ್ಲಿದ್ದವರು ಹಿಂಬಾಲಿಸಿದರು. ಹೋಗಿ ನೋಡಿದಾಗ ಆ ಯುವತಿ ರಕ್ತದ ಮುಡುವಿನಲ್ಲಿ ಬಿದ್ದು ಕುತ್ತಿಗೆಯ ಸುತ್ತ ರಕ್ತ ಸುರಿಯುತ್ತಿತ್ತು. ನನಗೆ ಇದೆಲ್ಲ ಸಿನಿಮಾದ ದೃಶ್ಯದಂತೆ ಕಾಣುತ್ತಿತ್ತು. ಟಿ.ವಿ.ಎಸ್ ಚಾಲಕನ್ನು ಹಿಗ್ಗಾ ಮುಗ್ಗ ಥಳಿಸತ್ತಿದ್ದರು ಆಗಲೆ. ಅಷ್ಟೊಂದು ಜನಗಳ ನಡುವೆ ನಾನು ಅವನನ್ನು ನೋಡುವುದಕ್ಕೆ ಆಗಲಿಲ್ಲ. ಅಲ್ಲಿಯೇ ಕೆಲವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಆಟೋವೊಂದರಲ್ಲಿ ಹಾಕಿಕೊಂಡು ಹೋದರು. ಇದೆಲ್ಲ ಆಗಿದ್ದು ಐದು ನಿಮಿಷದ ಒಳಗೆ. ಒಬ್ಬೊಬ್ಬರು ಒಂದು ರೀತಿಯ ಮಾತು-

‘ಈ ಹುಡುಗಿದು ಏನು ತಪ್ಪಿಲ್ಲ, ಪಾಪ ಕರೆಕ್ಟಾಗಿಯೇ ಬರುತ್ತಿದ್ದಳು.’

‘ನಾನೇ ನೋಡಿದೆ, ಅವನು ನೇರವಾಗಿ ಹೋಗುವವನಿದ್ದ , ಯಾಕೆ ಸಡನ್ನಾಗಿ ಎಡಗಡೆ ತಿರುಗಿದನಪ್ಪಾ, ಥೋ’

‘ವಿಧಿಯಾಟ ಅನ್ನುವುದು ಇದನ್ನೇ, ಅವಳ ಮರಣ ಇವನ ಕೈಯಲ್ಲಿ.

‘ಮುಚ್ಚಿಕೊಂಡು ಇರ್ರಿ, ವಿಧಿಯಾಟ ಅಂತೆ, ತಿಕಾ ಕೊಬ್ಬು, ಸೂಳೇ ಮಕ್ಕಳಿಗೆ.’

‘ಆ ಹುಡುಗಿದು ಇಲ್ಲೇ ಪ್ರಾಣ ಹೋಗಿತ್ತು, ಎಷ್ಟೊಂದು ರಕ್ತ, ಅಯ್ಯೋ ದೇವ.’

‘ಅಲ್ಲ ಮಾರಾಯ ಯಾವನಾದರು ಕುಡುಗೋಲನ್ನು ಕೊನೆಗೆ ಇಟ್ಟುಕೊಂಡು ಬರುತ್ತಾರಾ?’

‘ಹೇಳಿ ಮತ್ತೆ?’

‘ಹುಲ್ಲಿನ ಹೊರೆ ಮೈಮೇಲೆ ಬಿದ್ದೇಟಿಗೆ ಯಾರು ಸತ್ತೋಗಲ್ಲ.’

ನನಗೆ ಇದನ್ನೆಲ್ಲ ಕಣ್ಣಮುಂದೆನೇ ಕೆಲವೇ ಕಲವು ಕ್ಷಣಗಳಲ್ಲಿ ಜರುಗಿಹೋಗಿದ್ದುದ ನೋಡಿ ಮೈಂಡೇ ಬ್ಲಾಂಕ್ ಆದಂಗೆ ಆಯ್ತು. ಹೋಟೆಲಿಗೆ ಮರಳಿ, ಬಿಲ್ಲನ್ನು ಪಾವತಿಸಿ ರೋಸ್ ಗಾರ್ಡನ್ ಕಡೆ ಬಂದೆವು. ಪಾರ್ಕ್ ನಡುವೆ ಇಟ್ಟಿದ್ದ ಎಚ್. ಎಂ.ಟಿ ಕಾಲದ ದೊಡ್ಡ ಗಡಿಯಾರ ಆರು ಗಂಟೆಯನ್ನು ತೋರಿಸುತ್ತಿತ್ತು. ಹೆಸರಿಗೆ ಮಾತ್ರ ರೋಸ್‍ಗಾರ್ಡನ್ ಆಗಿದ್ದ ಅಲ್ಲಿ ಒಂದೇ ಒಂದು ಹೂವಿನ ಗಿಡವೂ ಇರಲಿಲ್ಲ. ರಾಜಶೇಖರನಿಗೆ ತನ್ನ ತಲೆಯೊಳಗೆ ಕೊರೆಯುತ್ತಿದ್ದ ವಿಷಯವನ್ನು ಹೊರಗೆ ಹೇಳದೆ ಸಮಾಧಾನವಾಗುವಂತೆ ಇರಲಿಲ್ಲ.

‘ಹೇ, ಮನಮೋಹನ್, ಮೊನ್ನೆ ರಾತ್ರಿ, ಒಂದು ಕನಸು. ಭಾಗ್ಯ ಪಕ್ಕದಲ್ಲಿಯೇ ಮಲಗಿದ್ದಾಳೆ. ಪಾಪುನು ಪಕ್ಕದಲ್ಲಿ. ನಾನು ನನ್ನ ಸಂಸಾರದಲ್ಲಿಯೇ ಇಲ್ಲ. ಬೇರೆಯ ಹೆಂಗಸು. ಅವಳೇ ಹೆಂಡತಿಯಾಗಿದ್ದಾಳೆ. ಅವಳ ಜೊತೆ ಸಂಸಾರ. ನಾನು ಕೂಗಿಕೊಳ್ಳುತ್ತಿದ್ದೇನ. ರಶ್ಮಿ, ಬಿಟ್ಟು ಬಿಡು, ನಾನು ಹೋಗಬೇಕು. ನೀನ್ಯಾರೋ ಗೊತ್ತಿಲ್ಲ’ ಅಂದೆ. ‘ಅರೆ, ರಶ್ಮಿಯಂತ ಅಂದೆ  ಅಂತೀಯಾ, ಮತ್ತೆ ನೀನ್ಯಾರೋ ನನಗೆ ಗೊತ್ತಿಲ್ಲ ಎಂದೂ ಹೇಳ್ತೀಯಾ, ಏನಿದು ಅರ್ಥನೇ ಆಗೋಲ್ಲ’ ಎಂದೆ. ‘ನನಗೂ ಅರ್ಥ ಆಗೊಲ್ಲ’ ಎಂದ. ‘ಸರಿ ಇದಕ್ಕೇನು ಆಗಬೇಕು? ಇದ್ಯಾವ ಘನಂದಾರಿ ವಿಷಯ ಅಂತ ಹೇಳ್ತಾಇದಿಯಾ. ನಡೆ ಮಾರಾಯ ಮನೆಗೆ ಹೋಗೋಣ ಟೈಮಾಯ್ತು. ಇವೊತ್ತು ಸಂಜೆ ಇರಾನಿಯನ್ ಸಿನಿಮಾ ಶೋ ಇದೆ ನೋಡೋಕೆ ಹೋಗಬೇಕು. ಮಿಸಸ್ ಕಾಯ್ತಾ ಇರ್ತಾಳೆ’ ಎಂದೆ. ‘ನನ್ನ ಪ್ರಶ್ನೆ ಇರೋದು, ಒಂದು ಪಕ್ಷ ಜೋರಾಗಿ ನಾನು ಅವಳ ಹೆಸರನ್ನು ಕೂಗಿಕೊಂಡು, ಭಾಗ್ಯ ಏನಾದ್ರು ನನ್ನ ಕೂಗಿಗೆ ಎದ್ದು, ಯಾರ್ರೀ ಅದು ಎಂದು ಕೇಳಿದ್ದಿದ್ದರೆ ಏನು ಗತಿ? ಅಥವಾ ಕೇಳಿಸಿಕೊಂಡೂ ಇರಬಹುದು. ಯಾವಾಗಾದರೂ ಕೇಳಬಹುದು’ ಎಂದು ಆತಂಕದಿಂದ ಹೇಳಿದ.

‘ಒಂದು ಕೆಲಸ ಮಾಡ್ತೀಯಾ? ಮಾಡ್ತೀಯೇನು ಹೇಳು?’ ಎಂದೆ.

‘ಹೇಳಪ್ಪ ಅದೇನು’ ಎಂದ.

‘ಫ್ರಾಯ್ಡ್ ಹೆಸರಲ್ಲಿ ಒಂದು ಹರಕೆ ಕಟ್ಟಿಕೋ’ ಎಂದೆ

‘ನಿನಗೆ ಯಾವಾಗಲೂ ತಮಾಷೆ’ ಎಂದ.

‘ಇನ್ನೇನು ಮತ್ತೆ. ಕನಸಿಗೆ ತಳ ಇರೋಲ್ಲ, ಬುಡ ಇರೋಲ್ಲ, ಕನಸಿಗೆ ನಿನ್ನಷ್ಟು ತಲೆಕೆಡಿಸಿಕೊಳ್ಳೋರನ್ನು ನಾನು ನೋಡಿಲ್ಲ’ಎಂದು ಬೈದೆ.

‘ಈ ದೇಶ ಧರ್ಮ, ಧರ್ಮ ಅಂತ ಕೊತ ಕೊತ ಕುದಿತಿದೆ. ನೀನು ನೋಡಿದರೆ, ನಿದ್ರೆಯಲ್ಲಿ ಬೀಳುವ ಕನಸಿನ ಬಗ್ಗೆನೇ ಯೋಚನೆ’ ಎಂದು ಬೈದು, ‘ಸುಮ್ಮನೆ ಪೆಕರು ಪೆಕರನಾಗಿ ಆಡಬೇಡ, ಬೇರೆ ಯೇನಾದರೂ ಇದ್ದರೆ ಹೇಳು’ ಎಂದೆ.

‘ರಾತ್ರಿ ಕಟ್ಟೆಗೆ ಸಿಗ್ತೀನಿ, ಶೋ ಮುಗಿಸಿಕೊಂಡು ಬರುತ್ತೀನಿ ಎಂದು ಅವನಿಗೆ ಬೈ ಹೇಳಿ, ಮನೆಕಡೆ ಬೈಕನ್ನು ತಿರುಗಿಸಿಕೊಂಡು ಹೋದೆ. ಮನೆಗೆ ಬಂದಾಗ, ನನ್ನ ಹೆಂಡತಿ ಶೋಗೆ ಆಗಲೇ ರೆಡಿಯಾಗುತ್ತಿದ್ದಳು. ‘ಮೋಹನ್ ನೀನು ಹೊರಗೆ ಹೋಗಿ ಒಂದು ಹತ್ತು ನಿಮಿಷಕ್ಕೆ ಯಾರೋ ರಶ್ಮಿಯಂತೆ, ಬಂದಿದ್ದಳು. ಮನಮೋಹನ್ ಇದ್ದಾರಾ? ಎಂದು ಕೇಳಿದಳು. ಏನು ವಿಷಯ , ಅವರು ಬರೋದು ಸಂಜೆ ಆಗುತ್ತೆ. ಅಂದೆ. ಅವಳು,’ಇಲ್ಲ ಈ ವಿಷಯ ಅವರ ಹತ್ತಿರಾನೇ ಮಾತಾಡಬೇಕು, ಮತ್ತೆ ಬರುತ್ತೇನೆ., ಎಂದು ಮತ್ತೆ ಯಾವಾಗ ಬರುತ್ತೇನೆ ಎಂದೂ ಹೇಳದೆ ಹೋದಳು. ಅವಳನ್ನು ಈ ಹಿಂದೆ ಎಂದೂ ನೋಡಿದ ನೆನಪಿಲ್ಲ. ಯಾರು ಅದು’ ಎಂದು ಕೇಳಿದಳು.

‍ಲೇಖಕರು avadhi

April 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: