ಸಾಕು ಹಾಗೂ ಬೇಕುಗಳ ನಡುವೆ ಎರಡು ನೆನಪುಗಳು

h r sujatha2

ಹೆಚ್.ಆರ್.ಸುಜಾತಾ

” ಸಾಕಪ್ಪಾ,ದೇವರೆ! ಇದೊಂದು ಸಲ ಪಾರು ಮಾಡು. ಇನ್ಯಾವತ್ತೂ ಅವನು ಕರದ್ರೆ ಹೋಗದಿಲ್ಲ.” ಆ ಹುಡುಗಿಯ ಅಳಲು.

“ನೋಡೆ, ಪತಿವ್ರತೆ ಹೆರಿಗೆ ಆಸ್ಪತ್ರೇಲಿ ಪ್ರತಿಗ್ನೆ ಮಾಡತಾವಳೆ! ಏ ಅಗಲ ಮಾಡೆ ಕಾಲ. ನಿನ್ನೊಂಥ ಗರತೀರ ನನ್ನ ಸರ್ವೀಸಲ್ಲಿ ಬೇಕಾದಂಗೆ ಕಂಡಿದಿನಿ. ಏ ನಿರ್ಮಲ, ಹೋಗಿ ಆ ರಾಧಾ ಸಿಸ್ಟರನ್ನ ಕರಯೆ. ಸುಲಭವಾಗಿ ಹೆರಿಗೆ ಆಗದಿಲ್ಲ. ಡಾಕ್ಟ್ರು ಎಷ್ಟೊತ್ತಿಗೆ ಬರ್ತಾರೋ ಏನೋ?” ಆಯಮ್ಮನ ಮಾತನ್ನ ಕೇಳಿದ್ದೆ ಇನ್ನೂ ತುಂಬ ಹೊತ್ತು ನೋವು ತಿನ್ಬೇಕಾಗುತ್ತೆ ಅಂತ ಖಾತ್ರಿಯಾಗಿ ಮತ್ತೆ ಆ ಹುಡುಗಿಯ ಬೊಂಬಡಿ ಶುರು. ಅವಳ ಅರಚಾಟ ನೋಡಿದ್ದೆ

pregnency1“ಏ, ಮುಚ್ಚೆ ಬಾಯಿ. ಆವತ್ತು ಹಿಂಗೆ ಬಾಯ್ಬಾಯ್ ಬುಡುವಾಗ ಚೆನಾಗಿತ್ತಾ? ಬೇಕು,ಬೇಕು ಅಂತ. ಈಗ ಗರತಿಗಂಗಮ್ಮನಂಗೆ ಸಾಕು ಅಂತಿದೀಯ.”

“ಆಯಮ್ಮರೆ, ರಾಧಮ್ಮ ಸಿಸ್ಟೆರ್ರು ಇಲ್ಲ ಅಲ್ಲಿ….” ನಿರ್ಮಲ ಬರಿಕೈಯಲ್ಲಿ ವಾಪಾಸ್ ಬಂದಿದ್ದ ಕಂಡು ಆಯಮ್ಮ ರೇಗಿದಳು.

“ಏ, ಹೋಗ್ ನೋಡು, ಅಲ್ಲೆ ಬಲಮಕೆ ಕಾರಿಡಾರಲ್ಲಿ ತಿರುಗು. ಸೊಣ್ಣಪ್ಪ ಅನ್ನ ಮೂಳೆ ಡಾಕ್ಟ್ರು ರೂಮಲ್ಲಿರ್ತಾಳೆ ರಾಧಮ್ಮ. ಹೋಗು ಕರ್ಕಬರೋಗು.”

“ಅಲ್ಲಿ ಡ್ಯುಟಿನಾ ಅವ್ರಿಗೆ.” ರಾಗಾ ಎಳ್ಕೋಂಡು ಆಚೆಗ್ ಹೋಗತಿದ್ದ ಹೊಸದಾಗಿ ಆಯಾ ಆಗಿ ಬಂದಿದ್ದ, ನಿರ್ಮಲ ಅನ್ನೋ ಹುಡುಗಿ ಹಿಂದೆನೆ ಮುಖ ಸಿಂಡರಿಸಿ ಹಿರಿಯಳಾದ ಈ ಆಯಾ ಆಚೇಗೆ ಬಂದ್ಲು.

“ಅಲ್ಲಿ ಅವಳ ರವಿಕೆ ವಳಕ್ಕೆ ಕೈ ಇಳೆ ಬುಡ್ತಿರ್ತನೆ ಆ ಸೊಣ್ಣಪ್ಪ. ಆ ಯಪ್ಪಂಗೆ ಒಂಥರ ಚಟ ಅದು. ಈ ರಾಧಮ್ಮಂಗೂ ಹಂಗೆ. ಅದಕ್ಕೆ ಓಡೋಗ್ತಾಳೆ ಹಲ್ಲು ಬಿಟ್ಕಂಡು. ಗಳಿಗೆಗ್ಗೊಂದ್ಸಲ. ಶ್ರಿ ಕ್ರಿಷ್ಣಂಥಕೆ ಗೋಪಿರು ನೆವ ಮಾಡಕಂಡು ಹಾಲು  ಮಾರಕೆ ಓಡೋದಂಗೆ” ಹೊಸ ಕಥೆ ಕೇಳಿ ಹೊಸ ಹುಡುಗಿ ನಗ್ತಾ ಹೋದ್ಲು.

ಈ ಸೀನಿಯರ್ ಆಯಂಗೆ ಹತ್ತು ವರ್ಷದ ಅನುಭವ ತಲೆ ಮೇಲಿತ್ತು. ಹಂಗೆ ಸಿಡಿಯೋ ಅಂಥ ಕೋಪನೂ. ಎದೇಲಿ ಹಾಲು ಕಟ್ಟತಾ ಕಟ್ಟತಾ ಎದೆ ಭಾರ ಆಗೋದು. ಅಲ್ಲಿ ಐದು ತಿಂಗಳ ಮಗು ಮನೇಲಿ ಹಾಲಿಗೇಂಥ ಬಾಯ್ಬಾಯ್ ಬಿಡ್ತಿದ್ರೆ ಇವಳಿಗೆ ಇಲ್ಲಿ ಬಿಳಿ ರವಿಕೆ ವದ್ದೆ ಆಗ್ತಾ ಹೋಗೋದು. ಪ್ಯಾಡ್ ಇಟ್ಕಂಡು ಅದನ್ನ ಹದ್ದಿನಕಣ್ಣಿಗೆ ಕಾಣಿಸದ ಹಾಗೆ ಇಂಗಿಸ್ತಾ, ಇವಳಿಗೆ ಡ್ಯೂಟಿ ಮಾಡೊವಾಗ ಹೆರಿಗೆಗೆ ಬಂದ ಹೆಂಗಸ್ರು ಕಿರಚುತಿದ್ದಂಗೆ ಕೋಪ ನೆತ್ತಿಗೆ ಹೋಗದು.

ಎರಡು ಹೆರಿಗೆ ಕಂಡ ಇವಳು, ಕಂಡವರ ಕೈಲಿ ಮಕ್ಕಳನ್ನ ಬಿಟ್ಟು ಬರಲೇಬೇಕಾದ ಮನೆ ಪರಿಸ್ಥಿತಿ. ಅಸಹಾಯಕತೆ ಅನಿವಾರ್ಯತೆಯ ದುಡಿಮೆ ಹಾಗೂ ಅವಳ ಅನುಭವ ಎಲ್ಲಾ  ಸೇರಿ ಅನುಭವವಿಲ್ಲದ ಹುಡುಗಿಯರ ಮೇಲೆ ಹೀಗೆ ಹರಿಹಾಯುತಿದ್ದ ಈ ಆಯಮ್ಮ ಮೂಲತಃ ಒಳ್ಳೆಯವಳೆ. ಆದರೆ ಸೈರಣೆ ಇಲ್ಲ. ಡಾಕ್ಟ್ರು ಹಾಗೂ ನರ್ಸಗಳನ್ನ ದೀರ್ಘ ಕಾಲದ ಟ್ರೈನಿಂಗ್ ಹಾಗೂ ಶಿಕ್ಷಣದ ಮೂಲಕ ರೋಗಿಗಳ ಸೇವೆಗೆಂದೆ ಪಳಗಿಸಿರುತ್ತಾರೆ. ಹಾಗಾಗಿ ಒಂದು ಕಾರ್ಯನಿರ್ಲಿಪ್ತತೆ ಅವರಲ್ಲಿ ಮನೆ ಮಾಡಿರುತ್ತೆ. ಆದರೆ ಈ ಆಯಮ್ಮಗಳ ಕಸುಬುದಾರಿಕೆ ಹಾಗೂ ಮನೆಯ ಪರಿಸ್ಥಿತಿಗಳು ಕೂಡಾ ಇವರನ್ನು ಸಿಡುಕುವಂತೆ ಮಾಡುತ್ತವೇನೋ?…..

ಇದೊಂದು ಸರಕಾರಿ ಆಸ್ಪತ್ರೆಯ ದೃಶ್ಯ. ಒಂದಿಪ್ಪತ್ತು ವರುಶಗಳ ಹಿಂದೆ ಯಾವಾಗಲೋ ಒಮ್ಮೆ ಕಂಡಿದ್ದು. ನಿರ್ಮಲ ರಾಧಾ ಸಿಸ್ಟರ್ ಜೊತೆ ನಗ್ತಾ ವಾರ್ಡ್ ಗೆ ಬಂದ್ಲು. ಹೆರಿಗೆ ಆಯಿತು. ಹೆರಿಗೆ ಮುಂಚೆ ಕೂಗುತಿದ್ದ ಆ ಹುಡುಗಿಯ ಬಾಯಿ ಬಂದ್ ಆಯ್ತು. ಈ ನೋವು ಸಾಕಪ್ಪ ಅಂತ ಬಳಲಿ ಬೆಂಡಾಗಿ ನಿದ್ದೆ ಹೋಗಿದ್ದಳು. ಮಗು ದಪ್ಪಗಿತ್ತು ಎಂದು ಯೋನಿ ಹರಿದು ಸ್ವಲ್ಪ ತಾವನ್ನು ಹೆಚ್ಚಿಸಿ ಹೆರಿಗೆ ಮಾಡಿಸಿದ್ದರು. ಯೋನಿ ಬಾಯಿಗೆ ಮೂರು ಹೊಲಿಗೆ ಬಿದ್ದು, ಕೊಟ್ಟ ಅರೆವಳಿಕೆಯ ನಡುವೆ ಆ ತಾಯಿ ನಿದ್ದೆಗೆ ಜಾರಿದರೆ ಹೊಸ ಜಗತ್ತಿಗೆ ಹೊಸ ಗಾಳಿಗೆ ಮೈ ತೆರೆದ ಮಗು ಇನ್ನೂ ಏನೋ ಬೇಕು ಬೇಕು ಎಂದು ಅಳುತ್ತಿತ್ತು. ಹತ್ತಿಯಲ್ಲಿ ಬಾಯಿಗಿಟ್ಟ ಸಕ್ಕರೆ ನೀರು ಸೀಪಿ ಗಳಿಗೆ ನಿದ್ದೆ ಹೋದ ಮಗು ಬಟ್ಟೆ ಒದ್ದೆಯಾದ ಕೂಡಲೇ ಮತ್ತೆ ಬೇಕು ಬೇಕು ಎನ್ನುತ್ತಿತ್ತು. ಬಾಯ್ಬಾಯ್ ಬಿಡುತಿತ್ತು.

ಮುಷ್ಟಿ ಹಿಡಿದ ಕೈಯನ್ನು ರೆಕ್ಕೆಯಂತೆ ಅಗಲಿಸಿ ಹುಡುಕಾಟವನ್ನು ಶುರು ಮಾಡಿತ್ತು. ಮಗುವಿನ ಬಾಯಿಗೆ ಮೊಲೆತೊಟ್ಟು ಇಟ್ಟ ಗಳಿಗೆಗೆ ಹಕ್ಕಿ ಮರಿಯಂತೆ ಅತ್ತಿತ್ತಲಾಗಿ ಪುಟ್ಟ ಬಾಯಿ ತೆರೆದು ಹುಡುಕಾಡುತ್ತಲೆ ತುಟಿ ಬಿಗಿದ ಮಗು ಅನಾದಿ ಕಾಲದ ಈ ಜಗತ್ತಿನ ಬೇಡಿಕೆಯೊಂದನ್ನು ಇಂದಿಗೂ ತಡಕುತ್ತಾ,  ಹಾಲು ಹೀರುತ್ತಾ ಹೊರ ಜಗತ್ತಿನ ಇಷ್ಟಿಷ್ಟೇ ಆಸೆಯನ್ನು ಸಣ್ಣಗೆ ಗುಟುಕರಿಸಿತ್ತಾ ಸಾಕು ಮಾಡಿಕೊಳ್ಳತೊಡಗಿತು.  ಎರಡು ಮೂರು ದಿನದಲ್ಲಿ ತಾಯೆದೆಯಲ್ಲಿ ಜಿನುಗಿದ ಹಾಲು ಝರಿಯಂತೆ ಉಕ್ಕಿ ತೊರೆಯಾಗಿ ಹರಿಯತೊಡಗಿತು.

ಅದನ್ನು ಹೀರುತ್ತಲೇ ಮಗು ಮೊಲೆಯಿಂದ ಬೇರಾಯಿತು. ತಾಯಿಗೆ ಇನ್ನೂ ಕುಡಿಸುವ ತವಕ. ಮಗು ನಿದ್ದೆ ಹೋಗಿತ್ತು. ಇನಿತು ಜೀವಕೆ ಇನಿತು ಹಾಲೆ ಸಾಕಾಗುತಿತ್ತು. ಆದರೂ ಅದು ಎಚ್ಚರಾಗುವುದನ್ನೇ ಕಾಯುತ್ತಾ ಮಲಗಿದಳು.  ಮಗು ನಿದ್ದೆ ಹೋದರೂ ಆ ತಾಯಿ ತನ್ನೊಂದು ಎಚ್ಚರಿಕೆಯಲ್ಲೇ ಆ ಕರೆಗೆ ಮೊರೆಯುತ್ತಾ… ಕಾದರೆ, ಮಗು ಬೆಳೆಯುತ್ತಾ ಬೆಳೆಯುತ್ತಾ ಮಗುವಿಗೆ ಇನ್ನೂ ಬೇಕು ಎನ್ನುವ ತವಕವನ್ನು ಹೆಚ್ಚಿಸಿತು. ಇವಳಿಗೆ ಕೊಟ್ಟು ಕೊಟ್ಟೂ ಸಂತೃಪ್ತಿಯ ಮಟ್ಟ ಏರಿತು. ಮಗು ಬೆಳೆದು ದೊಡ್ಡದಾಗುತ್ತಲೇ ತನಗೂ ಸಂತೃಪ್ತಿಯ ಮಟ್ಟ ತಾಗಿ ಸಾಕೆಂದಿತು. ಮಗುವಿನಲ್ಲಿ, ಬೇರೆ ಇನ್ನೂ ಇರುವುದೇನೋ ಬೇಕು ಬೇಕೆನ್ನುವ ಸರಮಾಲೆಯೇ ಜಗತ್ತಿಗೆ ತೆರೆದುಕೊಂಡಿತ್ತು.

spermಕರುಳು ತುಂಡರಿಸಿ  ಮಗು ಬೇರೆಯಾದಾಗ ಆದಷ್ಟೇ ನೋವು ಹಾಲು ಬಿಡಿಸಿದಾಗ ಆಗುವ ಮೊಲೆ ಹಾಲಿನ ಬಾವು. ಆ ಬಾವಿನ ನೋವು. ಎರಡು ಜೀವಗಳಿಗೆ ಸಾಕು ಎಂದಾದಾಗ ಆ ಕ್ಷಣದ ಸಂತೃಪ್ತಿಯ ಚಣ ಎನ್ನುವುದು ಒಂದೇ ಬಿಂದುವಿನಲ್ಲಿ ನಿಂತಿರುತ್ತದೆ. ಅಲ್ಲಿ ಆಳವಿಲ್ಲದ ಉದ್ದವಿಲ್ಲದ ಅಗಲವೂ ಇಲ್ಲದ ಅಲುಗಾಡದ ಆ ಸಾಕು ಎನ್ನುವ ಕ್ಷಣ ಎನ್ನುವುದು ಎಂಥ ಕ್ಷಣಿಕ ಹಾಗೂ ಎಷ್ಟು ಗಾಢವೂ ಆಗಿರುತ್ತದೆಂದರೆ ಹೊಡೆದ ಗೂಟದಲ್ಲಿ ಬಿಡುಗಡೆಯ ದಾರಿ ಹುಡುಕಿ ಹಸು ಪರದಾಡುವಂತೆ ಥೇಟ್! ಆ ಬಿಂದು ಅಗಲುವ ಕಾಲದ ಚಲನೆಯಲ್ಲಿ ನಿಂತಿರುತ್ತದೆ. ನೋವಿನ ಒಂದು ಎಳೆಯೂ ಅದರಲ್ಲಿ ಹೆಣೆದುಕೊಂಡೇ ಇರುತ್ತದೆ.

ಸ್ವತಂತ್ರವಾದ ಚಲನೆಯಾದ ಕೂಡಲೇ ಆ ಬೇಕು ತಿರುಗಿ ಸಾಕು ಎಂಬ ಗೂಟಕ್ಕೆ ಕೊರೊಳೊಡ್ಡಿ ಬಂದು ನಿಲ್ಲುತ್ತದೆ. ಇದು ಕೇವಲ ಅಭ್ಯಾಸ ಅಲ್ಲ. ಚಲಿಸುವ ಕಾಲದ ನಿಯಮ. ಸಾಕು ಎನ್ನುವ ಬಿಂದುವಿನಲ್ಲಿ ಬಂದು ನಿಲ್ಲುವುದು.

ಬೇಕು ಎನ್ನುವ ಚಲನೆಯಲ್ಲಿ ಹೊರಡುವುದು. ತಾಯಿ ಮಗು, ಗಂಡ ಹೆಂಡತಿ, ಪ್ರೇಮಿಗಳು, ವಿಶ್ವ ಕುಟುಂಬ ಎಲ್ಲರಲ್ಲೂ ಜನ್ಮಜನ್ಮಾಂತರದ ಬೇಕು ಹಾಗೂ ಸಾಕುವಿನ ನಡುವೆ ಇರುವುದು ಬದುಕು ಹಾಗೂ ಸಾವಿನ ನಡುವಿನ ಭಂಗ.  ಭಂಗದ ಬಾಳಿನೊಳಗೆ ಎಷ್ಟೊಂದು ಹರಿಯುವ  ತೊರೆಗಳು, ಕಾಡು ಮೇಡುಗಳು. ಬಿದ್ದ ಕೋಟೆಕೊತ್ತಲಗಳು, ರಕ್ತಪಾತಗಳು, ಯಾವುದೋ ಭ್ರಮೆಯಲ್ಲಿ ಹಪಹಪಿಸುವ ಹುಚ್ಚರ ಸಾಲು, ದೊಂಬರಾಟಗಳು. ಬರೆದಿಟ್ಟ ಕಾವ್ಯದ ಸಾಲು, ಕುಣಿದು ಸೋಲುವ ಕಾಲ್ಗೆಜ್ಜೆ, ಹಾಡು ಕರೆವ ಕೊಳಲು. ನುಡಿಸಿ ಹೋದ ಭೋಗಿ, ಎಸೆದು ಸಾಗಿದ ಯೋಗಿ. ಅಳಿಸಿದರೂ ಅಳಿಯದ ಕಣ್ಣೀರ ಕರೆಗಳು. ಉಕ್ಕಿ ಹರಿದ ಪನ್ನೀರ ಚಿಲುಮೆಗಳು.

ತೇಲಿ ಬಂದ ಕೊಳಲು, ಹರಿದು ಬಂದು ನದಿಯ ನೀರಲ್ಲಿ ಬೊಗಸೆಯಲ್ಲಿ ನೀರೆತ್ತಿ ಕುಡಿವ ಕುರುಬನ ಕೈಗೆ ಸಿಕ್ಕಿ ಅವನ ಬಾಯಲ್ಲಿ ಅರಳಿದ್ದು ಮಹಾಕಾವ್ಯ. ಕಥೆಯಲ್ಲಿ ಎದ್ದು ಹೋದ ಬುದ್ಧನ ನೆನಪಲ್ಲಿ ನಲುಗುವ ಯಶೋಧೆ. ಹಾಗೆ ಕೃಷ್ಣನ ಕಾವ್ಯದಲ್ಲಿ ಕಾಯುವ ರಾಧೆ. ತನಗೆ ಬೇಕಾದದ್ದನ್ನು ಪಡೆದ ಬುದ್ಧ, ಕೃಷ್ಣ ಇಬ್ಬರೂ ಭಾಗವತರಂತೆ ಜನರನ್ನು ಎಚ್ಚರಿಸುತ್ತಾ ನಡೆಯುತ್ತಾರೆ. ಆದರೆ ಸಾಕು ಬೇಕುಗಳ ನಡುವೆ ಪ್ರಕೃತಿ ತನ್ನ ತಲೆಮಾರುಗಳ ಮುಂದುವರಿಕೆಗಾಗಿ ಬೇಕೆಂದೇ ಆಕರ್ಷಣೆಯನ್ನಿಟ್ಟು ಬೇಡವೆನ್ನುವ ವಿಷಾದವನ್ನೂ ಅದರೊಳಗಿಟ್ಟು ಅದು ತನಗೆ ಬೇಕಾದ್ದನ್ನೇ ಮಾಡಿಕೊಳ್ಳುತ್ತಿರುತ್ತದೆ. ಆದರೆ ಜ್ಞಾನದ ನೆರಳಲ್ಲಿ  ಏಕತಾರಿಯ ನಾದದಲ್ಲಿ ಇಂಥ ಸಂತರ ಬಾಯಲ್ಲಿ ಬರುವ ಅನುಭಾವದ ಮಾತುಗಳಲ್ಲಿ ಪೂರ್ವಾಶ್ರಮದ ನಾದ ಹರಿಯುತ್ತಿರುತ್ತದೆ. ಸಾಮ್ರಾಜ್ಯದ ಕತ್ತಿ ರಾಜನ ತಲೆಯ ಮೇಲೆ ತೂಗು ಬಿದ್ದಿರುತ್ತದೆ.

ಹರಿವ ಹಾಲಿನ ಮೊಲೆಯನಿಟ್ಟು, ನೀರ ತೇವದ ತೊರೆಯನಿಟ್ಟು ಬೇಕು ಬೇಕು ಎಂದು ಹಂಬಲಿಸುವ ಆ ತಾಯಂದಿರ ಕರುಳು ಸಾಕು! ಎಂದ ದಿನ, ಸಾಕು ಎನ್ನುವಂತೆ ನೋಡಿಕೊಂಡ ದಿನ ಇಂದಿನವರೆಗೂ ಪುನಾರಾವರ್ತನೆಯಾಗಿ ನಿಂತಲ್ಲೇ ನಿಂತ ಚರಿತ್ರೆಯ ಪುಟಗಳು ಮರೆತು ಹೋಗಬಹುದು. ಹೊಸ ಭವಿಷ್ಯ ಭಾಷೆ ಬರೆಯಬಹುದು. ಅಲ್ಲಿಯವರೆಗೂ ಎಲ್ಲರಿಗೂ ಸಿಕ್ಕುವುದು ಇದೇ ಏಕಮುಖ ಚರಿತ್ರೆಯ ಪುನಾರಾವ್ರುತ್ತಿಗಳು.

ಗಂಡು ಸಾಕು ಎಂದಾಗ ಹೆಣ್ಣಿನ ಬೇಡಿಕೆ ಇನ್ನೂ ಮೊದಲನೆಯ ಮೆಟ್ಟಿಲಿನಲ್ಲೇ ಇರುತ್ತದೆ. ಎರಡೂ ಜೀವಗಳು ಇಂಥ ಆಕರ್ಷಕ ತುಲಾಭಾರದ ಗಳಿಗೆಗಳನ್ನು ಎಣಿಸುವ ತಕ್ಕಡಿ ಎಸೆದು ಪರಸ್ಪರ ಹೊಂದಾಣಿಕೆಯ ಅಂಗಸಂಗ

ಅಂತೆಯೇ ಅನುಭವ ಹಾಗೂ ಅನುಭಾವಗಳ ಪೂರೈಕೆಯ ಸಂಸ್ಕರಣೆಗಾಗಿ ಸಾಕು ಬೇಕು ನಡುವೆ ಕೈ ಜೋಡಿಸಿ  ದುಡಿಯುವ  ದೀರ್ಘಕ್ಷಣಗಳಿರುತ್ತವೆ. ಒಬ್ಬರನ್ನೊಬ್ಬರು ಸೈರಿಸುವ ಅಂತಃಕರಣವಿರುತ್ತದೆ. ಕಾಯುವ ತಾಳ್ಮೆಯಿರುತ್ತದೆ.  ಆಕರ್ಷಣೆಯೂ ಇರುತ್ತದೆ. ಈ ಜಗತ್ತನ್ನು ಮುಂದೆ ನಮ್ಮವರಿಗೆ ಬಿಟ್ಟು ಹೋಗುವ ಅನಿವಾರ್ಯತೆ ಹಾಗೂ ಜವಾಬ್ದಾರಿಯೂ ಸಾವಿನೊಂದಿಗೆ ಇರುತ್ತದೆ. ಒಂದೇ ಗರ್ಭದಲ್ಲಿ ಸಿಡಿದ ಎರಡು ಹೋಳುಗಳಿಗೆ ಸೇರಿಕೊಳ್ಳುವ ಗುಣವು ತಾನೆತಾನಾಗಿ ಮೈಗೂಡಿರುತ್ತದೆ. ಮರ ಹಾಗೂ ಬೀಜದ ನಡುವೆ ಬಿಚ್ಚಿಕೊಳ್ಳುವ ಮುಚ್ಚಿಕೊಳ್ಳುವ ನವಿಲ ಗರಿಯ ಚಿತ್ತಾಕರ್ಶದ ಹೊರೆಯಿರುತ್ತದೆ. ಪ್ರಕ್ರುತಿಯ ಆಶಯವನ್ನು ಈಡೇರಿಸುವ ಹುಲುಮಾನವನ ಬದುಕಿನ ದಾರಿಯಲ್ಲಿ ತಾಯಿತಂದೆ ಇಬ್ಬರೂ ಸಾಕೂಬೇಕಾಗಿ ಇರುತ್ತಾರೆ.

ಅತ್ತೆಮ್ಮನ ಅಳು. “ಆಗಲ್ಲಾ…. ಆಗಾಕುಲ್ಲಾ….ತಡೆಯಾಕೆ ಆಗಕುಲ್ಲಾ….ಅವ್ವೇ.. ಈ ಜನ್ಮ ಸಾಕು.” ಅನ್ನುವ ಒದ್ದಾಟ. ಆಗ ತಡರಾತ್ರಿಯಾಗಿತ್ತು. ಬಾನಂಗಳದಲ್ಲಿ ಎಲ್ಲಾ ಚಿಕ್ಕಿಗಳು ಎಚ್ಚರವಾಗಿ ಕಣ್ ಬಿಟ್ಟಿದ್ದವು. ಆದರೂ ಬಂದು ಸೇರಿರುವ ಆಚೆ ಮನೆ ಚಿಗವ್ವಾ, ಈಚೆ ಮನೆ ದೊಡ್ಡವ್ವಾ, ಹಿಂದಕ್ಕೆ ಮುಂದಕ್ಕೆ ಓಡಾಡುವ ಅಪ್ಪ. ಆತಂಕದ ಮುಖ ಹೊತ್ತ ಅಣ್ಣತಮ್ಮರು. ಬಚ್ಚಲ ಮನೆಯಲ್ಲಿ ಉರಿವ ಹರಳೆಣ್ಣೆ ದೀಪ. ಹೊಸ ಮಗುವಿನ ಸಿದ್ಧತೆಗೆಂದೇ ತಂದಿದ್ದ ಹೊಸ ಮೊರ.

” ಬೆಳಗ್ಗೆ ಎದ್ದೋಳೆ ಹಲಸ್ನಣ್ಣು ಹೊಟ್ಟೆಭರ್ತಿ ತಿಂದ್ಲು ಕನೆ, ಹೆರಿಗೆ ಆದ ಮೇಲೆ ತಿನ್ನಕೆ ಅಕ್ಕುಲ್ಲಾ ಕನಿ ಅತ್ತಿಗೆ ಅನ್ನಕಂದು. ಕುಚ್ಚಲು ಮೀನು ತಂದು ಎಣ್ಣೆಮೀನು ಮಾಡು ಅಂದಿದ್ಲು. ಮಾಡಿದ್ದೆ. ಅರ್ಧ ಊಟ ತಟ್ಟೇಲೆ ಬುಟ್ಟೆದ್ಲು ಕಣೆ. ಛೇ ಪಾಪಾ! ” ಮೀನ ಆಸೆಪಟ್ಟು ತಿನ್ನದೆ ನಾದಿನಿ ಎದ್ದಿದ್ದನ್ನ ನೆನೆದು ಒದ್ದಾಡುವ ಅವ್ವ. ದೇವರ ಮುಖಕ್ಕೆ ಕೈ ಮುಗ್ದು ಕೂತರೂವೆ ಗಳಿಗ್ಗೊಂದಪ ಇಣುಕು ಹಾಕಿ ಹೋಗೊ ಅಜ್ಜಯ್ಯ.” ನಮ್ಮೂರು ಮಾರವ್ವ… ಕಾಪಾಡೆ ತಾಯಿ, ಸಕನಿ ರಂಗ ಕಾಪಾಡಪ್ಪಾ, ಮೆಣೆಯಮ್ಮ ನಿನ್ನ ಮೊರೆ ಬಿದ್ದಿದೀವಿ ಕೈ ಬುಡಬೇಡ ಕನವ್ವಾ” ಅನ್ನಕಂದು ಆತಂಕಕ್ಕೆ ಬರೋ ಉಬ್ಬುಸ್ರ ಆಚೆಗೆ ದಬ್ಬಿ, ಇದ್ದಬದ್ದ ದೇವ್ರನೆಲ್ಲಾ ಕರ್ದು ನಂಜೊತಿಗೆ ಇರಿ ಅಂತವ ಆಚೀಚೆಗೆ ಪರದಾಡುವ ಅಜ್ಜಮ್ಮ.

“ಎಂಗೋ ಹೆರಿಗೆ ನಿಸೂರಾಗಲಿ ಬಾ. ಎಣ್ಣ್ ಮೀನ ಮಾಡಕೊಟ್ರಾಯ್ತು. ಅದೇನು ಅಪರುಪವಾ? ನಮ್ಮೂರಲ್ಲಿ ಕೆರೆ ಮೀನಿಗೇನು ಬರವಾ?” ದ್ಯಾಮ ಚಿಗವ್ವ ಅವ್ವನಿಗೆ ಹೇಳೊ ಮಾತು. ಅಲ್ಲಿ ಸಡಗರ ಆತಂಕ ಎರಡೂವೆ ಒಟ್ಟೊಟ್ಟಿಗೆ ಬಿಸಲು ಮಳೆ ಹಂಗೆ ಒಲದಾಡತಿದ್ದವು.

child-delivery-in-sculptureಹಸಿ ಬಾಳೆ ಎಲೆ ಹಿಡಕಂದ ಜಡ್ಡಣ್ಣನ ಹೆಂಡತಿ ಊರ ದೇವತೆ ಹಂಗೆ ಅರ್ಧರಾತ್ರೀಲಿ ಹೊರಗಿದ್ದ ಕತ್ತಲ ಸೀಳಿಕೊಂಡು ನಡುವಿಗೆ ಎಲಡಿಕೆ ಚೀಲ ಸಿಕ್ಕಿಸ್ಕಂತಾ ಮನೆಯೊಳಗೆ ಬಂತು. ಬಾಯತುಂಬ ಎಲೆ ಅಡಿಕೆ, ಹೊಗೆಸೊಪ್ಪು, ಕಾಚು ಸುಣ್ಣವ ಜೊಲ್ಲರಸದಲ್ಲಿ ಕಲಸ್ಕಂತ ಮೆಲಕಾಡತಾಲೆ ಆ ರಸ ಹೆಚ್ಚಾಗಿ ತುಟಿಯಂಚಿಗೆ ಬಂದು ನಿಂತು ಊರ ಕಾಯೋ ದೇವತೆ ರೂಪನ ಆ ಮಿಣುಕು ದೀಪ ಅನ್ನದು ಅವಳಿಗೆ ದಯಪಾಲಿಸಿಬಿಟ್ಟಿತ್ತು. “ಇತ್ಲಾಗೆ ಬನ್ರೆ. ಎಲ್ರೂವೆ. ಗಾಳಿ ಆಡಲಿ. ಹೊರಗಿಂದ ಗಾಳಿ ಬರದು ಬೇಡವಾ?ತಲಾ ಒಂದೊಂದು ಮಾತಾಡಿ ದಿಗಲು ಬೀಳುಸ್ಬೇಡಿ ಆ ಜೀವಕ್ಕೆ” ಅಂತ ಸಣ್ಣಗೆ ಗದರಿದ ಅವಳ ದನಿ ಕೇಳಿ ಅದೂವರೆಗೂ ನರಳಾಡುತಿದ್ದ ಅತ್ತೆ ಸೊಲ್ಪ ಹೊತ್ತು ಸುಮ್ಮನಾದ್ರೂ ಆಮೇಲೆ ಸತತವಾಗಿ ಕಿಟ್ಟನೆ ಕಿರ್ಚ್ಕಂತ್ತಿತ್ತು.

ಊಂ…ಊಂ…. ಅನ್ನೋ ದೀರ್ಘವಾಗಿ ಎಳೆಯೋ ಅದರ ಅಳುವಿನ ರಾಗದ ಎಳೆಗೆ ಹಿಂದಿನ ಅರಿಯಲ್ಲಿ ಮಲಗಿದ್ದ ಜೀತದಾಳುಗಳೆಲ್ಲ ಎದ್ದು ಚಾವಡಿಗೆ ಬಂದು ಊರು ಅನ್ನ ಊರನ್ನೆ ನಡುಗುಸ್ತಿದ್ದ ಚಳಿಗೆ ಮೈ ತುಂಬ ರಗ್ಗನ್ನು ಹೊದ್ದುಕೊಂಡು ಎಲ್ರೂ ಕುಕ್ಕರಗಾಲಲ್ಲಿ ಕುಂತಿದ್ರು. ಊರು ಅತ್ತೆಯ ಬಾಯಿಂದ ಬರೋ ಅಂಥ ಹಸುಮಗುವಿನ ಆಲಾಪನಕ್ಕೆ”ಇನ್ನೆಷ್ಟೊತ್ತು ನೋವು ತಿನ್ಬೇಕೊ ಪಾಯಿ” ಅಂದು ಲೊಚ್ಚಗುರಿತಿತ್ತು. ಹಿಂಗೆ

ಪ್ರತಿ ಕ್ಷಣದಲ್ಲೂ ಹುಟ್ಟು- ಸಾವು, ನೋವು-ನಲಿವು ಅನ್ನುವ ಊರಿನ ಕಷ್ಟಗಳು ಎಲ್ಲರಲ್ಲೂ ಮಿಡಿಯುತ್ತಾ, ಊರು ತನ್ನನ್ನು ತಾನೆ ಸಂತೈಸಿಕೊಳ್ಳುತ್ತಾ ಇರೋದನ್ನ ಕಲಿತಿತ್ತು. ಈಗ ಅದು ಮತ್ತೆ ಚಿಗುರೊಡೆಯುವ ಹಂತಕ್ಕೆ ಬಂದು

ತನ್ನ ಹೊಕ್ಕುಳಿಂದ ಎಳೆ ಮೋತೆಯ ಆಚಿಗೆ ನೂಕೋ ಅಂಥ ರಾತ್ರಿಯ ರಾಗದ  ಆ ಕಾಣದ ಕಾಲಕ್ಕೆ ಕಣ್ಣು ತೆರೆದು ಕಾಯ್ತಾ ಕೂತುಕೊಂಡಿತ್ತು.

ಅಷ್ಟೊತ್ತಿಗೆ ಊರಿನ ಹೊಲಗೇರಿ ಕಡಿಂದ ಚಿಕ್ಕೀರಿನ ಹೆಂಡತಿ ಲಾಟೀನು ಹಿಡಿದ ಕುರುಬ ಅನ್ನೋ ಆಳು ಮಗನ ಹಿಂದೆ ಬಂದು ಹೆರಿಗೆ ಮನೆಯ ಬೆಳಕಿಗೆ ಜೊತೆಯಾದ್ಲು. ಜಡ್ಡಣ್ಣನ ಹೆಂಡತಿ ಹಾಗೂ ಚಿಕ್ಕೀರನ ಹೆಂಡತಿ ಇಬ್ಬರೂ ಊರಿನ ಹೆಣ್ಣುಮಕ್ಕಳ ಪಾಲಿಗೆ, ಸಾಲಾಗಿ ಬರೋ ಅಂಥ ಸಂತಾನ ಲಕ್ಷ್ಮಿಯರನ್ನೇ ಸಲಹುವ ಆದಿ ಕಾಲದ ತಾಯಂದಿರಾಗಿದ್ದರು. ಹೆಸರು ಅರಿಯದೆ ಬಸುರಿಗೆ ಕೊಡುವ ಹಸಿರೌಷಧಿಗಳಿಂದಲೇ ತಾಯ ಹೊಟ್ಟೆಯನ್ನು ಸಲಹುವ, ಕೇವಲ ಸ್ಥಳದಲ್ಲೇ ಸಿಗುವ ಬಿಸಿನೀರು, ಎಣ್ಣೆ, ಹಾಗೂ ಮನೆಯಲ್ಲಿದ್ದ ಕುಡುಗೋಲುಗಳನ್ನು ಉಪಯೋಗಿಸಿ, ತಾಳ್ಮೆಯೇ ತಾಯೆಂದು ಮೆಲು ಮಾತನ್ನಾಡುತ್ತಾ, ಗೋಡೆಗೆ ಕಿವಿಯಾಗಿ ಢವಗುಟ್ಟುವ ಎದೆ ಹಿಡಿದು ನಿಂತವರಿಗೆ, ಹಳೆ ಸೀರೆ ಪಂಚೆ ಬಟ್ಟೆಗಳಲ್ಲಿ ಸುತ್ತಿ ಹೊಸ ಮರದ ಮೇಲೆ ಮಲಗಿಸಿದ ಎಳೇ ಬೊಂಬಟೆಯನ್ನು ಇಷ್ಟೇ ಅಗಲ ಬಾಗಿಲನ್ನು ತೆಗೆದು ತೋರುತಿದ್ದ ಮಾಯಕಾತಿಯರಾಗಿದ್ದರು.

ವಳಗೆ ರಣರಂಗದಂತೆ ಕಾಣುತಿದ್ದ ಬಸಿರಿನ ಅಂಟು ಕೊಳೆ ರಕ್ತವನ್ನು ತಮ್ಮ ಹೊಟ್ಟೆಯಲಿ ಬಚ್ಚಿಟ್ಟು ತೆಗೆದುಕೊಂಡು ಹೋಗಿ, ನಾಯಿ ನರಿ ಮೂಗಿಗೂ ತಾಗದಂತೆ, ಮಾರಿ ಕಣ್ಣಿಗೆ ಕಾಣದಂತೆ ತಿಪ್ಪಮ್ಮನ ಹೊಟ್ಟೆಯೊಳಗೆ ಹೂತಿಟ್ಟು ಕೇವಲ ತೊಳೆದ ಮುತ್ತನ್ನಷ್ಟೆ ಎತ್ತಿ ಊರ ಕಣ್ಣಿಗೆ ಅವರು ತೋರುತ್ತಿದ್ದರು.

ಊರವರಿಗೆ ಗೊತ್ತಿರುವಂತೆ ಇವರ ಕರ ಸ್ಪರ್ಶದಿಂದ ಎಂಥಾ ಕಠಿಣವಾದ ಎಲ್ಲಾ ಹೆರಿಗೆಗೆಳು ಸುಸೂತ್ರವಾಗಿಯೇ ಆಗುತ್ತಿದ್ದವು. ಅವರ ನಿರ್ಧೇಶನದಲ್ಲಿ ಬಸುರಿ ಬಾಣಂತಿಯರು ಮಕ್ಕಳೊಂದಿಗೆ ಆರೋಗ್ಯವಾಗಿ ಇರುತ್ತಿದ್ದರು. ಕೊಂಚ ತೊಂದರೆಯಿದ್ದ ಮಕ್ಕಳು ಸೈತಾ ಇವರ ಅನುಭವದ ಮೂಸೆಯಲ್ಲಿ  ಬೆಳೀತಾ ಮೈ ಹೊರಳುತಿದ್ದರು. ಇವರಿಗೆ ಬಂದ ಪಾರಂಪರಿಕ ಜ್ಗ್ನಾನ ಅನ್ನೋದು ಊರನ್ನೇ ಸಲುಹುತ್ತಾ, ವಂಶದ ಮುಂದುವರಿಕೆಯನ್ನು ಕಾಪಾಡುತ್ತಾ, ಊರಿನ ಬುಡಕಟ್ಟಿಗೇ ಇವರಿಬ್ಬರ ಅನುಭವವನ್ನು ಹಿರಿದುಗೊಳಿಸಿತ್ತು.

ಇಂಥಾ ಜೀವವರಳಿಸಿ ಉಳಿಸುವ ವಿದ್ಯೆಯನ್ನು ಮಾಂತ್ರಿಕರಂತೆ ಕೇವಲ ಅನುಭವದಿಂದ ಆಸಕ್ತಿಯಿಟ್ಟು ಕಲಿತಿದ್ದೂ ಅಲ್ಲದೆ ಯಾವುದೇ ಅಪೇಕ್ಷೆಯಿಲ್ಲದೆ ಅನುರಾಗದಿಂದ ಘನಗಂಭೀರವಾಗಿ ಎಂಥಾ ವೇಳೆಯಲ್ಲೂ ಅಭಯ ಹಸ್ತ ನೀಡಿ, ಊರಿನ ಹೆರಿಗೆಯನ್ನು ಭೇದಭಾವವಿಲ್ಲದೆ ನಿರ್ವಹಿಸುತಿದ್ದರು. ಮಹಡಿಮನೆ, ಗುಡಿಸಲು ಎರಡೂ  ತಕ್ಕಡಿಯಿಲ್ಲದ ಅವರ ಕಣ್ಣಲ್ಲಿ ಒಂದೇ ಆಗಿದ್ದವು.

ಹೀಗೆ ಹೆರಿಗೆ ನೋವನ್ನು ಎಲ್ಲರಿಗು ಹಂಚಿ ರಾತ್ರಿಯಲ್ಲಿ ಊರಾನು ಊರಿಗೆ ಉಸಿರು ಸಿಕ್ಕಹಾಕಿಸಿದ್ದ ಉಸಿರು ಅನ್ನೋದು ಬೆಳಿಗ್ಗೆ ಎದ್ದಾಗ, ಸುಡುಸುಡು ನೀರ ಹುಯ್ಯಕೊಂಡು ನೆಮ್ಮದಿಯಾಗಿ ಮಲಗಿದ್ದ ಅತ್ತೆ ಹಾಗೂ ಮನೆ ಜಂತಿಯ ಕಬ್ಬಿಣದ ಬಳೆಯಲ್ಲಿ, ಆಕರ್ಷಕ ಹೆಣಿಗೆ ಮಾಡಿದ್ದ ದಪ್ಪನೆಯ ನೆರಿಕೆ ಹಗ್ಗದಲ್ಲಿ ತೂಗಿಬಿದ್ದಿದ್ದ ಗಂಜಲದಲ್ಲಿ ತಾರಿಸಿದ ಬಿದಿರು ತೊಟ್ಟಿಲ ಸುತ್ತಾ,  ನಗುನಗುತ್ತಾ ಬಂದು ನಿಲ್ಲುತಿತ್ತು.

pregnency2ಎಳೆ ಮಕ್ಕಳು ಅಂತಂದ್ರೆ ಮಲ್ಲಿಗೆ ಹೂವಿನಂಗೆ ಮುಟ್ಟಬೇಡಿ ಅಂತಲೆ ಮುಟ್ಟತ್ತಾ, ಜೋಗುಳದ ದನಿಯಲ್ಲಿ ತೊಟ್ಟಿಲನ್ನಲ್ಲದೇ ತನ್ನ ಊರನ್ನೂ ತೂಗುತ್ತಾ, ಮಂಪರು ಬರಿಸುವ ಅಜ್ಜಮ್ಮನ  ಛೂ… ಮಲಿಕ್ಕಾಳೋ ಕಂದಾ… ಜೋ ಜೋ ಎನ್ನೀರೆ…..ಅನ್ನೋ ಲಾಲಿಯಲ್ಲಿ ಮೊಸರು ಕಡೆವ ಸದ್ದಿಗೂ ಒಂದು ಲಯ ಬಂದು,  ಮಜ್ಜಿಗೆ ಮಡಿಕೆಯಲ್ಲಿ ಸೊರ್ರ್ ಬರ್ರ್ ಅನ್ನೋ ಸದ್ದುಮಾಡುತ್ತಾ, ಅವ್ವನ ಕೈಯೆಳೆವ ಹಗ್ಗದ ಸುರುಳಿಯೊಳಗೆ ಮಂತು ಸುತ್ತುತ್ತಾ, ನೊರೆಯಲ್ಲಿ ತೇಲುತ್ತಾ ಬಿಳಿ ಮೋಡದಂಗೆ ಬೆಣ್ಣೆ ಅರಳಿ ಹಂಗೆ ತೇಲುತಿತ್ತು. ಆಗ ಅವ್ವನ ಜೋಲಾಟ ನಿಲ್ಲುತ್ತಿತ್ತು.

ಆ ಬೆಣ್ಣೆಯ ಸುತ್ತ ಸುಳಿವ ಬೆಕ್ಕಿಗೆ ಅಜ್ಜಮ್ಮನ ಉದ್ದನೆಯ ಕೋಲಿನ ಕಣ್ಣು ಕಾವಲಿರುತ್ತಿತ್ತು. ತೊಟ್ಟಿಲ ಮಗುವಿನ ಅಲುಗಾಟಕ್ಕೆ ಕುಣಿವ ತೊಟ್ಟಿಲ ಕಂಡು ಊರ ಗುಬ್ಬಿಯಂತೆ ಮಕ್ಕಳು ಹಾರುತ್ತಾ ಬಂದು ಸುತ್ತು ಹಾಕಿ ನಗುತ್ತಿದ್ದವು. ಮಗು ಅರಗಿಳಿಯಂತೆ ಎಲ್ಲರ ಅಂಗೈ ಮೇಲೆ ಆಡುತ್ತಿತ್ತು.  ಚೊಂಬಲ್ಲಿ ಕೈ ಅಡ್ಡಇಟ್ಟು ಹುಯ್ಯುವ ಬಿಸಿನೀರಿಗೆ ದುಖಿಃಸುತ್ತಾ ಕೆಂಪನೆ ಮೈಯ್ಯಾಗಿ ಬಚ್ಚಲಲ್ಲಿ ಮೀನಂತೆ ನುಲಿಯುವ ಎಳೆ ಮಕ್ಕಳು, ತಾಯಂದಿರ ಬೆತ್ತಲೆ

ಕಾಲ ಮೇಲೆ ತುಪ್ಪ ಎಣ್ಣೆಯ ಮಾಲೀಶಿಗೆ ಮಿಂದು, ಎಣ್ಣೆಬಟ್ಟೆಯ ಮೇಲೆ ಎಳೆ ಬಿಸಿಲಿಗೆ ಮೈ ತೆರದು ಕೈಕಾಲಲ್ಲಿ ಗಾಳಿ ಜೊತೆಗೆ ಗರಿಗೆದುರುತ್ತಿದ್ದ ಅಂದಿನ ದ್ರುಷ್ಯ ಎಲ್ಲಿ ಮಾಯವಾದವು? ಕಾಲನ ಹೊಳೆಯಲ್ಲಿ ಕೊಚ್ಚಿಹೋದ ಇದು ನಲವತ್ತು ವರ್ಶದ ಹಿಂದಿನ ಕಥೆ. ಹೊರ ಸಂಪರ್ಕವಿಲ್ಲದೆ ಊರನ್ನೇ ಸಲಹುತಿದ್ದ ಪಾರಂಪರಿಕ ಸಮಾಧಾನದ ತಿಳುವಳಿಕೆ. ಅಕ್ಷರದ ಹಂಗಿಲ್ಲದೆ ನಮ್ಮ ಎದೆಯಲ್ಲಿ ಇಂದೂ ದಾಖಲಾಗಿ ಉಳಿದದ್ದು ಇದು. ಆ ಜಾಗದಲ್ಲಿ, ಕ್ರಮೇಣ ಆಧುನಿಕತೆಯ ಅಕ್ಕರೆಯಿಲ್ಲದ ಕರ್ತವ್ಯ ಮಾತ್ರ ಬಂದು ನಿಂತಿದ್ದು ಸುಳ್ಳಲ್ಲ. ಇಂಥ ಅಳಿದು ಹೋದ ಒಂದು ನೆನಪಿನ ಕೊಂಡಿಯಾಗಿ ನಾವಿನ್ನೂ ಉಳಿದಿದ್ದೇವೆ.

‍ಲೇಖಕರು Admin

November 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ಗೀತಾ ಮೋಂಟಡ್ಕ. ಮೈಸೂರು

    ಸುಜಾತ ಮೇಡಂ ಸಕತ್ತಾಗಿದೆ ಕಥೆ. ಓದಿನ ಜೊತೆಗೆ ಆ ವಾತಾವರಣ ನನ್ನ ಕಣ್ಣ ಮುಂದೆ ಬರುತ್ತಿತ್ತು! ಚಿತ್ರ ಕಾಣಿಸುತ್ತಿತ್ತು. ವಂದನೆಗಳು ಮೇಡಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: