ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಾಂತ್ವನ' ತರುವ ಸಂತೃಪ್ತಿ

ಎಚ್ ಜಿ ಮಳಗಿ

ಪ್ರಿಯ ಅವಧಿ ಓದುಗರೆ, ಈಗ ನಾನು ಬರೆಯ ಹೊರಟಿರುವುದು ಒಂದು ಅಪರೂಪದ ಕಾರ್ಯಕ್ರಮದ ಕುರಿತು. ಅಪರೂಪ ಅನ್ನುವುದಕ್ಕಿಂತ ಅಂತಃಕರಣ ಕಲಕುವ ಹೃದಯ ಮಿಡಿವ ಸಾಂಸ್ಕೃತಿಕ ಕಾರ್ಯಕ್ರಮ ಅಂತ ಅನ್ನುವುದೇ ಹೆಚ್ಚು ಸೂಕ್ತ. ನಮ್ಮ ನಿಮ್ಮ ನಡುವೆ ನಮ್ಮ ಗಮನಕ್ಕೆ ಬಾರದೆಯೋ ಅಥವಾ ಅಲಕ್ಷ ನಿರ್ಲಕ್ಷ ತಾತ್ಸಾರಕ್ಕೊಳಗಾಗಿಯೋ ಅಥವಾ ಮೌಢ್ಯದಿಂದಾಗಿಯೋ ಸಾವಿರಾರು ಭಿನ್ನ ಸಾಮಥ್ರ್ಯದ ವಿಕಲಚೇತನ ಮಕ್ಕಳು ವಯಸ್ಕರು ವೃದ್ಧರು ನಮ್ಮೊಳಗಿದ್ದೂ ನಮ್ಮವರಲ್ಲದವರಂತೆ ಜೀವಿಸುತ್ತಿದ್ದಾರೆ. ಒಂದು ಅಂದಾಜಿನಂತೆ ಜನಸಂಖ್ಯೆಯ ಶೇ 2-3 ರಷ್ಟು ಇಂತಹ ಜನರಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಕಠಿಣತರವಾದ ಜೀವನವನ್ನು ನಡೆಸುವವರು ಬುದ್ಧಿಮಾಂದ್ಯ ಅಥವಾ ಭಿನ್ನ ಸಾಮಥ್ರ್ಯದ ಮಕ್ಕಳದ್ದು. 20-25 ವರ್ಷದವರಾಗಿದ್ದರೂ ಇವರ ಬುದ್ಧಿಯ ಪ್ರಮಾಣ ಒಂದೋ ಎರಡೋ ವಯಸ್ಸಿನ ಮಕ್ಕಳಷ್ಟೂ ಇರುವುದಿಲ್ಲ. ಪಾಲಕರಿಗೆ ಇವರನ್ನು ಬೆಳೆಸುವುದು ಸವಾಲಿನ ಕೆಲಸ. ಅದರಲ್ಲೂ ಬುದ್ಧಿಮಾಂದ್ಯ ಹೆಣ್ಣು ಮಕ್ಕಳನ್ನು ಸಾಕುವುದು ಅತ್ಯಂತ ಕಠಿಣ ಕೆಲಸ. ಅವರು ದೈಹಿಕವಾಗಿ ಬೆಳೆದು ವಯಸ್ಕರಾದಾಗಲಂತೂ ಅವರ ನಿರ್ವಹಣೆ ಅತ್ಯಂತ ತ್ರಾಸದಾಯಕ ಮತ್ತು ಮನ ಕಲಕುವಂತಹುದು.
ಅದರಲ್ಲಿಯೂ ತಾಯಿಯಿಲ್ಲದ ಇಂತಹ ಹೆಣ್ಣು ಮಕ್ಕಳನ್ನು ಅವರ ‘ಪಿರಿಯಡ್ಸ್’ ಶೌಚ ಮುಂತಾದ ಸಂದರ್ಭಗಳಲ್ಲಿ ತಂದೆಯೇ ಮಾಡಬೇಕಾಗಿಬರುತ್ತದೆ. ಆ ಸನ್ನಿವೇಶವನ್ನು ನೆನೆಸಿಕೊಂಡರೇ ಮನಸ್ಸು ಮುದುಡಿ ಹೋಗುತ್ತದೆ, ಅಂತಹ ತಂದೆಯ ಬಗ್ಗೆ ಅನುಕಂಪ ತಾನೇ ತಾನಾಗಿ ಸುರಿಯುತ್ತದೆ. ಬುದ್ಧಿಮಾಂದ್ಯವನ್ನು ಹುಚ್ಚೆಂದು ತಿಳಿದುಕೊಂಡವರೇ ನಮ್ಮಲ್ಲಿ ಶೇ. 99 ಜನರಿದ್ದಾರೆ. ಆದರೆ ಅದು ಹುಚ್ಚಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಅದೊಂದು ಜೀವಕೋಶಗಳ ವಿಕಾರದಿಂದಾಗಿ ಬರುವ ನ್ಯೂನತೆ. ಕೆಲವೊಮ್ಮೆ ಮಾರಣಾಂತಿಕ ಜ್ವರ ಮುಂತಾದ ಕಾಯಿಲೆಗಳ ಸಂದರ್ಭದಲ್ಲಿಯೂ ಅಡ್ಡಪರಿಣಾಮವಾಗಿ ಈ ಅವಸ್ಥೆ ತಲೆದೋರಬಹುದು. ಇನ್ನೂ ಬಹಳಷ್ಟು ಕಾರಣಗಳಿವೆ.

ಸಾಮಾನ್ಯವಾಗಿ ಎಲ್ಲ ದೊಡ್ಡ ನಗರ ಪಟ್ಟಣಗಳಲ್ಲಿ ಇಂತಹವರ ಕುರಿತು ಕಾಳಜಿ ತೋರುವ ಅವರಿಗೆ ತರಬೇತಿ, ಶಿಕ್ಷಣ ನೀಡುವ ಶಾಲೆಗಳಿವೆ. ಅವುಗಳು ಅಕೆಡೆಮಿಕ್ ಆಗಿ ಎಷ್ಟು ತರಬೇತಿ ನೀಡಬೇಕೊ ಅಷ್ಟು ಕೆಲಸಗಳನ್ನು ಖಂಡಿತವಾಗಿಯೂ ಮಾಡುತ್ತಿವೆ.
ಆದರೆ ನಾನು ಇಲ್ಲಿ ಹೇಳಲು ಹೊರಟಿರುವುದು ಬಹಳ ಅದ್ಭುತವಾದ ಪರಿಕಲ್ಪನೆಯನ್ನು ಹೊಂದಿದ ಈ ಮಕ್ಕಳ ಬಗ್ಗೆ ಅಪರೂಪವೆನ್ನಿಸುವಂತಹ ಕಾಳಜಿ ಹೊಂದಿದ ಹಲವಾರು ಕಾಲೇಜು ವಿದ್ಯಾರ್ಥಿಗಳ ಒಂದು ತಂಡದ ಕುರಿತು. ಈ ತಂಡವು ಕಳೆದ ಐದು ವರ್ಷಗಳಿಂದ ಸದ್ದಿಲ್ಲದೇ ಒಂದು ಕಾರ್ಯಕ್ರಮವನ್ನು ಮಾಡುತ್ತ ಬಂದಿದೆ. ಧಾರವಾಡದಲ್ಲಿಯ ಐದಾರು ಕಾಲೇಜು ವಿದ್ಯಾರ್ಥಿಗಳು ‘ಸಾಂತ್ವನ’ ಅಂತ ಒಂದು ತಂಡವನ್ನು ಮಾಡಿಕೊಂಡು ಪ್ರತಿವರ್ಷವೂ ಹುಬ್ಬಳ್ಳಿ-ಧಾರವಾಡ ನಗರದಲ್ಲಿನ ಇಂತಹ ಶಾಲಾ ಮಕ್ಕಳಿಗಾಗಿ ಒದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾರ್ವಜನಿಕರು ನೀಡುವ ಉದಾರ ಸಹಾಯದಿಂದ ಆಯೋಜಿಸಿಕೊಂಡು ಬರುತ್ತಿದ್ದಾರೆ. ಮುಂಜಾನೆಯಿಂದ ಸಾಯಂಕಾಲದವರೆಗೂ ಆ ಮಕ್ಕಳಿಗಾಗಿ ಪಾಲಕ/ಪೋಷಕರಿಗಾಗಿ ಆಟೋಟಗಳನ್ನು ಸಂಗೀತ ನೃತ್ಯಗಳನ್ನೂ ಹಮ್ಮಿಕೊಂಡು ಊಟ ತಿಂಡಿಯನ್ನು ನೀಡಿ ಆಕರ್ಷಕ ಉಡುಗೊರೆಗಳನ್ನು ನೀಡಿ, ಆ ಮಕ್ಕಳೊಂಡಿಗೆ ತಾವೂ ಹಾಡಿ ಕುಣಿಯುತ್ತಾರೆ. ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಪಾಲಕರಿಗಾಗಿ ಸಂವಾದಗಳನ್ನು ನಡೆಸುತ್ತಾರೆ. ನೊಂದಿರುವ ಆ ಪಾಲಕರ ಮನಸ್ಸಿಗೆ, ಹೃದಯಕ್ಕೆ ಸಾಧ್ಯವಾದಷ್ಟು ಸಾಂತ್ವನ ಹೇಳುತ್ತಾರೆ. ನಿಮ್ಮೊಂದಿಗೆ ನಾವಿದ್ದೇವೆ ಅನ್ನುವ ಭರವಸೆ ನೀಡುತ್ತಾರೆ.
ಮೊಬೈಲು, ಕಂಪೈಟರು, ಪಿಜ್ಜಾ ಬರ್ಗರ್ ಬೈಕು ಸಿನಿಮಾಗಳಲ್ಲಿಯೇ ವ್ಯರ್ಥವಾಗಿ ಸಮಯವನ್ನು ಪೋಲು ಮಾಡುವ, ಪ್ರೀತಿ ಪ್ರೇಮಗಳ ಸುಳಿಯಲ್ಲಿ ಬಿದ್ದು ತೇಲಾಡುವ ಮುಳುಗುವ ಇಂದಿನ ಯುವಪೀಳಿಗೆಯ ಮಧ್ಯೆ ಈ ತಂಡದ ಸದಸ್ಯರು ಭಿನ್ನರಾಗಿ ನಿಲ್ಲುತ್ತಾರೆ ಹಾಗೂ ತಾವೂ ಭಿನ್ನ ಸಾಮಥ್ರ್ಯದ ಮಕ್ಕಳೆಂದು ಹೆಮ್ಮೆಯಿಂದ ಹೇಳುತ್ತಾರೆ.
ಧಾರವಾಡದ ಪ್ರತಿಷ್ಠಿತ ಜೆಎಸ್ಎಸ್ ವಿದ್ಯಾಸಂಸ್ಥೆಯು ಈ ಮಕ್ಕಳ ಕನಸಿನ ಹಕ್ಕಿಗೆ ರೆಕ್ಕೆಗಳಂತೆ ಬಲನೀಡುತ್ತಿದೆ. ಕಳೆದೆರಡು ವರ್ಷಗಳಿಂದ ಈ ವಿದ್ಯಾಸಂಸ್ಥೆಯ ಸಹಯೋಗ ಹಾಗೂ ಅದರ ಪ್ರಾಚಾರ್ಯರಾದ ಡಾ. ಅಜಿತಪ್ರಸಾದರ ಆಶೀವರ್ಾದ ಮಾರ್ಗದರ್ಶನದಲ್ಲಿ ಹೆಚ್ಚು ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ. ‘ಸಾಂತ್ವನದ’ ಹಿರಿಮೆ ಈಗ ಅಂತಾರಾಷ್ಟ್ರೀಯವಾಗಿದೆ ಎಂದರೂ ಅತಿಶಯೋಕ್ತಿಯಲ್ಲ. ಯಾಕೆಂದರೆ ಇಂಗೆಂಡ್ ಕತಾರ್ ಯುಎಇ ದೇಶಗಳಲ್ಲಿರುವ ನಮ್ಮವರೂ ಈ ಕೆಲಸದಲ್ಲಿ ಈ ಬಾರಿ ಕೈಜೋಡಿಸಿ ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬಿದ್ದಾರೆ. ಮಾರ್ಚ 1 2015ರ ಭಾನುವಾರದಂದು ಈ ತಂಡವು ಇಂತಹ ಒಂದು ಅದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಭಿನ್ನಸಾಮಥ್ರ್ಯದ ಮಕ್ಕಳಿಗಾಗಿ ವಿಭಿನ್ನ ವಿಚಾರಧಾರೆಯನ್ನು ಹೊಂದಿದ ಮಕ್ಕಳು ನಡೆಸುತ್ತಿರುವ ಈ ಚಳುವಳಿಯಲ್ಲಿ ನಾನೂ ಭಾಗಿಯಾಗಿದ್ದೇನೆಂಬುವುದೇ ಹೆಮ್ಮೆಯ ವಿಚಾರ.
 
 

‍ಲೇಖಕರು G

1 March, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading