-ತಿರುಪತಿ ಭಂಗಿ
ಕುಳು ಕುಳು ಕುಳು ಆ ..ಆ..ಆ ಕುಳು ಕುಳು ಕುಳು ಆ.. ಆ.. ಆ.. ಮನಿ ಮುಂದಿನ ತಿಪ್ಪಿ ಕೆದರಿ ತಿನ್ನುತ್ತಿದ್ದ ಕೋಳಿಗಳನ್ನ ಯಂಕವ್ವ ಕೂಗಿ ಕೂಗಿ ಕರದ್ಳು. ಅವಳ ದನಿ ಕೇಳಿದ್ದ ತಡಾ ಬಂವ್ ಗುಡುತ್ತ ಎಲ್ಲ ಕೋಳಿಗಳು , ಕೋಳಿಪಿಳ್ಳಿಗಳು ಓಡೋಡಿ ಬಂದವು. ಸೇರಿನೊಳಗಿದ್ದ ಜ್ವಾಳದ ಕಾಳಗಳನ್ನು ಬೊಗಸೆಯಲ್ಲಿ ಹಿಡಿದು ಅಂಗಳ ತುಂಬಾ ಚಲ್ಲಿದಳು, ಮುಗಿಲಾಗಿದ್ದ ಚಿಕ್ಕಿಗಳಂತೆ ಅಂಗಳ ತುಂಬೆಲ್ಲ ಕಾಳುಗಳು ಬಿದ್ದಿದ್ದವು. ಕೋಳಿಗಳು “ಕೊರ್ ಕೊರ್ ಕೊಕ್ಕ ಕೊಕ್ಕ” ದನಿ ಮಾಡುತ್ತ , ಬಿದ್ದ ಕಾಳನ್ನು ಕುಕ್ಕಿ ಕುಕ್ಕಿ ತಿನ್ನತೊಡಗಿದವು. ಅಲ್ಯುಮಿನಿಯಂ ತಾಟಿನ ತುಂಬ ನೀರು ಸುರಿದಳು.ಎಲ್ಲಾ ಕಾಳುಗಳನ್ನು ತಿಂದ ಮೇಲೆ ಕೋಳಿಗಳು ನೀರು ಕುಡಿದು, ಗೋನು ಮೇಲೆತ್ತಿ, ಮತ್ತೆ ತಿಪ್ಪಿಯ ದಂಡಿ ಕಡೆ ನಡೆದವು, ಹುಂಜವೊಂದು “ಕುಕ್ಕೂ ಕೂ” ಎಂದು ಕೂಗಿ, ಮುಂದಿದ್ದ ಕೋಳಿಯ ಮೇಲೆ ಹತ್ತಿ, ಅದನ್ನು ಮೆಟ್ಟತೊಡಗಿತು. ಯಂಕವ್ವ ಅದನ್ನು ನೋಡಿ ಮುಳುಮುಳು ನಗುತ್ತ ಮನೆಯೊಳಗೆ ಹೋದಳು.
ಯಂಕವ್ವ ಕೋಳಿ ಮಾರಿದ ದುಡ್ಡು, ತತ್ತಿ ಮಾರಿದ ದುಡ್ಡು ಕೂಡಿಟ್ಟಿದ್ದಳು.ಹಿಂಡುವ ಒಂದು ಎಮ್ಮಿ ಕೂಡಾ ಇತ್ತು. ಅದರ ಹೈಣದ ದುಡ್ಡೂ ಒತ್ತಟ್ಟಿಗೆ ಕಾದಿಟ್ಟಿದ್ದಳು. ಎಲ್ಲ ದುಡ್ಡು ಸೇರಿಸಿ ಒಂದು ಸಾಂಗ್ಲಿ ಎಮ್ಮಿ ತರಬೇಕೆನ್ನುವ ಅವಳ ಬಹುದಿನದ ಕನಸು ಹಾಗೆ ಬಾಕಿ ಉಳದಿತ್ತು.
ಒಂದು ಸಾಂಗ್ಲಿ ಎಮ್ಮಿ ಖರೀದಿಸಿದ್ರ ಮುಗೀತಿ. ಅದು ಹಾಕುವ ಕರುವಿನಿಂದ ಅದರ ಸಂತತಿ ಬಳ್ಳಿಹಂಗ ಬೆಳದ್ರ, ನಾಂವ ಎಮ್ಮಿಗೆ ಹಾಕಿದ ಹಣ ವಾಪಸ್ ಬರತೈತಿ, ಅದು ಹಿಂಡುವ ಹಾಲಿನಿಂದ “ಕೈತುಂಬ ರೊಕ್ಕss ರೊಕ್ಕ. ಹೆಂಗಾರ ಗುದ್ದಾಡಿ ಸಾಂಗ್ಲಿ ಎಮ್ಮಿ ಖರೀದಸ್ಬೇಕೆಂದು ಯಂಕವ್ವಾ ದಿನಾ ಅದss ದ್ಯಾನದಾಗ ಮೂಳಗಿರ್ತಿದ್ಳು.
“ಈ ಬಡಮುಕಳಿ ಎಮ್ಮಿಗೆ ಎಷ್ಟ ಗುಗ್ಗರಿ ತಿನಿಸಿದ್ರೂ ಅಷ್ಟ.ಹೊರಿ ಹೊರಿ ಹಸಿ ಮೇವ ಅದರ ಮುಂದ ಉರಳಿಸದ್ರೂ ಅಷ್ಟ. ನಾಕ ಚರಗಿ ಮ್ಯಾಲ ಒಂದ ಕಪ್ಪಕೂಡಾ ಹೆಚ್ಚಿಗೆ ಹಿಂಡಾಂಗಿಲ್ಲೆಂದು” ಇದ್ದ ಜವಾರಿ ಎಮ್ಮಿನ ಯಂಕವ್ವ ಬೈದುಳು. ಅದನ್ನ ಕೇಳಿಸಿಕೊಂಡ ಜವಾರಿ ಎಮ್ಮಿ “ಇಷ್ಟದಿನಾ ನೀನss ಗೌರಿ, ನೀನss ಗಂಗೀ” ಎಂದು ಹೊಗಳತಿದ್ದಿ, ನನಗಿಂತ ಹೆಚ್ಚ ಹಾಲ ಹಿಂಡಾಕಿ ಬರಾಕತ್ಯಾಳಂತ ನನ್ನ ಮೂಲಿಗೆ ಅಟ್ಟಾಕತ್ತಿದೇನವ್ವಾ ಸಾಹುಕಾರ್ತಿ” ಎಂದು ಭಾವುಕಗೊಂಡು ಹಳಹಳಿಸಿತು.
ಯಂಕವ್ವ ಎಮ್ಮಿ ಮೇಸಾಕ ದಿನಾ ಪೂಜಾರ ಬೀಳಕ್ಕ ಬರ್ತಿದ್ಳು. ಜಗಮಲ್ಲನೂ ಅದ ಬೀಳ ಹೊಲಕ್ಕ ಎಮ್ಮಿ ಹೊಡ್ಕೊಂಡ ಬರಾಂವ. ಬೀಳದಾಗ ಎಮ್ಮಿ ಮೇಯಾಕ ಬಿಟ್ಟ ಇಬ್ಬರೂ ಬೇವಿನ ಗಿಡದ ನೆಳ್ಳಿಗೆ ಕುಂತ ಮಾತಿನ ಕುಂಡಿಗೆ ದಾರಾ ಪೋನಸ್ತಿದ್ರು.
“ಸಾಂಗ್ಲಿ ಎಮ್ಮಿ ರೇಟಾ ಒಂದರಿಂದ ಇಂದೂವರಿ ಲಕ್ಷತನಾ ಇರ್ತಾವ, ಮಾಲಿದ್ಹಂಗ ರೊಕ್ಕ ಹೆಚ್ಚಿಗಿ ಅಕೈತಿ, ನೀ ಭಾಳ ದುಬಾರಿದೂ ತಗೊಬ್ಯಾಡ, ಅತೀ ಕಮ್ಮೀದೂ ತಗೊಬ್ಯಾಡ ನಡುಮದ್ಯ ರೇಟಿಂದ ತಗೋರವ್ವಾ ಯಕ್ಕಾ” ಜಗಮಲ್ಲ ಯಂಕವ್ವಳಿಗೆ ಎಮ್ಮಿ ಖರೀದಿ ಕುರಿತು ಹೇಳಿದ.

“ಈ ನಮ್ಮ ಬಾತಿಗಬಾರ್ದ ಜವಾರಿ ಎಮ್ಮಿಗೆ ತಾಚಾರ ಮಾಡಿದ್ಹಂಗ, ಆ ಸಾಂಗ್ಲಿ ಎಮ್ಮಿಗೆ ತಾಚಾರ ಮಾಡಿದ್ರ ನೆಡಿಯಂಗಿಲ್ಲ. ಹೊತ್ತ ಹೊತ್ತಿಗೆ ಗಂಟ ಗಂಟ ಹಸಿ ಮೇವ ಸುರಿಬೇಕು, ಬುಟ್ಟಿಗಂಟ್ಲೆ, ಗುಗ್ಗರಿ ಹಾಕ್ಬೇಕು, ಹಿಂಡಿಕಣ್ಣಿ ಒಟ್ಟೊಟ್ಟss ತಪ್ಪಸಂಗಿಲ್ಲ, ದಿನಾ ಮೈ ತೊಳದ ಕೊಬ್ಬರಿ ಎಣ್ಣಿ ಮೈಗೆ ಸವರಬೇಕು, ಜವಾರಿ ಎಮ್ಮಿ ಗೊಡ್ಡಿನ ಗತೆ ಅದನ್ನ ಹರಗ್ಯಾಡಕ ಬಿಡಂಗಿಲ್ಲಾ. ನಿಂತ ಜಾಗದಾಗss ನಿಂದ್ರಿಸಿ ಉಪಚರಿಸಬೇಕು. ಕಾಲಾಗ ಹೆಂಡಿ ಉಚ್ಚಿ ಬಿದ್ದ ತಕ್ಷಣ ಹಿಂದಕ್ಕ ಸರಸಬೇಕು. ಒಂದ ರೀತಿ ಬಾನಂತಿ ಹೆಂಗಸರ್ನ ಜಾಗಜೂಗ ಮಾಡಿ ಆರೈಕೆ ಮಾಡಿದ್ಹಂಗ ಮಾಡಿದ್ರ ಗಡಗಿ ತುಂಬಾ ಹಾಲು.ನಿನ್ನ ಕೈ ತುಂಬ ರೊಕ್ಕ” ಜಗಮಲ್ಲ ಸಾಂಗ್ಲಿ ಎಮ್ಮಿ ಬಗ್ಗೆ ವಿವರಿಸಿ ಹೇಳಿದಾಗ ಯಂಕವ್ವನ ತಲಿಯಾಗ ಎಮ್ಮಿ ಆದಷ್ಟ ಲಗೂನ ತರಬೇಕೆನ್ನುವ ಹುಳು ಸೇರಿಕೊಂಡಿತು,.
ಗ್ವಾಳೆ ಮಾಡಿಟ್ಟ ರೊಕ್ಕಾ ಕೂಡಸಿದ್ರ ಬರೀ ಐವತ್ತ ಸಾವೀರ ಅಂಕಿ ಸಿಕ್ಕಿತು. ಇದ್ದ ಎರಡ ತ್ವಲಿ ಬಂಗಾರ ಅದ ಊರಾಗಿನ ಬ್ಯಾಂಕನ್ಯಾಗ ಒತ್ತಿ ಇಟ್ಟು ಅದರಮ್ಯಾಲ ಐವತ್ತ ಸಾವೀರ ತಕ್ಕೊಂದು, ಒಂದ ಲಕ್ಷ ಕೂಡಿಸಿ, ಹಿಂದ ಮುಂದ ಭಾಳ ಇಚಾರ ಮಾಡಲಾರ್ದ ಯಂಕವ್ವಾ ತನ್ನ ಸ್ವಾದರ ಮಾವನ ಕರ್ಕೊಂಡ ಸಾಂಗ್ಲಿ ಬಸ್ಸ ಹತ್ತಿದ್ಳು.
******
ಸಾಂಗ್ಲಿ ಬಜಾರ ನೋಡಿ ಯಂಕವ್ವಗ ದಂಗಾಗಿ ಬಾಯಮ್ಯಾಲ ಕೈ ಇಟಗೊಂದ್ಳು. ಅಲ್ಲಿ ಜನರಾಡುವ ಮರಾಠಿ ಭಾಷೆ ಅವಳಿಗೆ ಅರ್ಥ ಆಗದಿದ್ದಾಗ ಅಕಿ ಕಿವಿಗೆ ಅದು ಕರ್ಕಶವಾದಂತೆ ಅನಿಸಿತು. ಅಕಿ ಸ್ವಾದರ ಮಾವ ಅಮೀನಗಡ ಸಂತಿ, ಕೆರ್ ಸಂತಿ, ಜಮಖಂಡಿ ಸಂತಿ ತಿರಗಿದ್ದ. ಅಂವನೂ ದಲ್ಲಾಳಿ ದಂದೆ ಮಾಡಿದ್ರಿಂದ ಯಾವ ದನದ ಎಷ್ಟ ಕಿಮ್ಮತ್, ಯಾವ ದನಕ್ಕ ಎಷ್ಟ ಬೆಲೆ ಅನ್ನೂದು ಅಂವಗೇನು ಯಾರೂ ಕಲಸಿಕೊಡಬೇಕಿರಲಿಲ್ಲ.
ಎಲ್ಲರೂ ಅಲ್ಲಿ ಮರಾಠಿನೇ ಮಾತಾಡುತ್ತಿರಲಿಲ್ಲ, ಅಲ್ಲಲ್ಲಿ ಹಿಂದಿ, ಕನ್ನಡ ಮಾತಾಡುವ ದಲ್ಲಾಳಿಗಳೂ ಇದ್ರು.ಯಂಕವ್ವ ಕೈಯಾಗಿದ್ದ ರೊಕ್ಕದ ಚೀಲಾ ಬದ್ರವಾಗಿ ಹಿಡ್ಕೊಂಡ ಸೀರಿ ಸೆರಗನ್ಯಾಗ ಮರಿಮಾಡಿ ಮುಂದ ಇದ್ದವರಿಗೆ ಕಾಣದ್ಹಂಗ ಎಚ್ಚರವಹಿಸಿದ್ಳು. ಯಂಕವ್ವಗೊಂದ ಎಮ್ಮಿ ಮನಸ್ಸಿಗೆ ನಟ್ಟಿತು. ಅವಳ ಮಾವ ಅದರ ಬಗ್ಗೆ ಮಾತುಕತೆ ನಡಸಿದ. ಅಕಿ ರೇಟಿಗೆ ಅದು ಒಗ್ಗಲಿಲ್ಲ. ಮತ್ತೆ ಮುಂದೆ ಇಬ್ರೂ ನಡೆದ್ರು. ಅದೊಂದು ಎಮ್ಮೆಯ ಜಾತ್ರೆನೇ ಅನಿಸಿತು ಯಂಕವ್ವಳಿಗೆ. ಅವಳ ಸ್ವಾದರ ಮಾವ ಮತ್ತೊಂದು ಎಮ್ಮಿ ಚೌಕಾಸಿ ಮಾಡತೊಡಗಿದ. ಅದು ಯಂಕವ್ವಳಿ ಮನಸಿಗೆ ಹಿಡಿಸಿತ್ತು. ಅವಳ ಮಾಂವ “ಇದು ಬ್ಯಾಡ, ಇದರ ಎಡಗೊಂಬು ಮುಕ್ಕಾಗೈತಿ ಬ್ಯಾರೆ ನೋಡೂನು ನಡಿ” ಎಂದು ಮತ್ತೆ ಹುಡಕಾಟ ನಡಿಸಿದ್ರು.
ಕರ್ರಗೆ, ದುಂಡಗೆ, ಇಲಾದ ಎಮ್ಮೆಯೊಂದು ಯಂಕವ್ವನ ಕೈಯಲ್ಲಿರುವ ಚೀಲ ನೋಡಿ ಮೇವು ಮಿಡಚಿ ಇರಬಹುದೆಂದು ತಿಳಿದು “ಆಂಯ್ಕ್ ಆಂಯ್ಕ್” ಎಂದು ಒದರಿತು. ಯಂಕವ್ವ ಅದರ ಹತ್ತಿರ ಹೋಗಿ ಆ ಎಮ್ಮಿಮ್ಯಾಲೆ ಕೈಯಾಡಸಿದ್ಳು. ಅದರ ಮೈ ರೇಶ್ಮಿಯಂತೆ ನುಣುಪಾಗಿತ್ತು. ನಿಧಾನವಾಗಿ ಬಾಗಿ ಅದರ ಮೊಲೆಗಳತ್ತ ಕೈ ಹರಿಬಿಟ್ಟಳು. ಮುಟಗಿ ಅಳತಿ ಮೊಲೆಗಳನ್ನು ಹಿಡಿದಾಗ ಅವಳಲ್ಲಿ ನೂರೆಂಟು ಭಾವಗಳು ಮನದಲ್ಲಿ ಸಂಚರಿಸಿ ಹೋದವು. ಅವಳು ಮೊಲೆ ಮುಟ್ಟಿ ಮೈಥುನ ಮಾಡುವಾಗ ಎಮ್ಮೆ ಕಾಲು ಮತ್ತಷ್ಟು ಅಗಲಿಸಿ ಅವಳಿಗೆ ಅನವು ನೀಡಿತು. “ಮಾವಾ ಇದ ಎಮ್ಮಿ ಇರ್ಲಿ ಕೆಚ್ಚಲಕ್ಕ ಕೈ ಹಾಕಿದ್ರೂ ಗಪ್ಪನ ಐತಿ, ಬಾಳ ಸನ್ಮಂತ ಐತಿ” ಅಂದಾಗ ಅವಳ ಸ್ವಾದರ ಮಾವ ಎಮ್ಮೆ ರೇಟು ಜಮಾಯಿಸಿ ತೊಂಬತು ಸಾವಿರಿಗೆ ಬಗೆ ಹರಿಸಿ, ದುಡ್ಡು ಎಣಿಸಿದ. ಟಮ್ ಟಮ್ ಗಾಡಿ ಬಾಡಿಗಿ ಮಾಡಿಕೊಂಡು ಸಾಂಗ್ಲಿಯಿಂದ ಎಮ್ಮೆ ಹೇರಿಕೊಂಡು ಯಂಕವ್ವ ಊರು ಮುಟ್ಟಿದ್ಳು. ಅವಳ ಆನಂದಕ್ಕೆ ಆಗ ಎಲ್ಲೆ ಇರಲಿಲ್ಲ.
*******
ಮೊದಲಿದ್ದ ಜವಾರಿ ಎಮ್ಮೀನ ಬಿಚ್ಚಿ ಏರೂಪೇರು,ಕೊಟರಿ,ಕೊಣರಿ ಇದ್ದ ಜಾಗಕ್ಕ ದಬ್ಬಿದ್ಳು. ಹಂಗss ಅದರ ಜೋಡಿ ಇದ್ದ ಮನಕಾನೂ ಅಲ್ಲಿಗೆ ನೂಕಿದ್ಳು. ರೊಕ್ಕದ ಸಾಂಗ್ಲಿ ಎಮ್ಮಿನ ತಂದು ಕಾಂಕ್ರೇಟ್ ಕಾಕಿದ ನುಣುಪು ಜಾಗದಲ್ಲಿ ಕಟ್ಟಿ , ಅದರ ಮುಂದೆ ದಮ್ಮದನಿ ಒಂದು ಹೊರೆ ಹಸಿ ಮೇವು ಉರಳಿಸಿ, ಜವಾರಿ ಎಮ್ಮಿಗೆ ಜ್ವಾಳದ ಕನಕಿ,ಅದರ ಮಗ್ಗಲಿದ್ದ ಕರುವಿಗೂ ನಾಲ್ಕ ದಂಟ ಉದರಿಸಿ ಯಂಕವ್ವ ಅಡಗಿ ಮಾಡಾಕ ಅಡಗಿ ಮನಿ ಸೇರಿದ್ಳು.
“ಯವ್ವಾ ನಮ್ಮಗತಿ ಹಿಂಗ್ಯಾಕ ಆತ ಬೇ” ಎಂದು ಸಪ್ಪಮಾರಿ ಮಾಡ್ಕೊಂಡ ಕರು ತಾಯಿಕಡೆ ತಿರಗಿ ನಿಂತು ಕೇಳಿತು. “ಈ ಮನಷ್ಯಾರ ಬುದ್ದಿ ಇಷ್ಟ ಬೇ ಮಗಳ, ಯಾರ ಗುಂಡಿತುಂಬ ಹಾಲ ಹಿಂಡತಾರ ಅವ್ರಿಗೆ ಕುಂಡಿತುಂಬ ಮೇವ ಹಾಕ್ತಾರ, ಯಾರ ಹಾಲ ಹಿಂಡೂದ ಕಟ್ ಮಾಡ್ತಾರೋ ಅವರಿಗೆ ಅದೇ ವಣಾ ಕಣಕಿ, ತಿಪ್ಪಿ ಮ್ಯಾಲಿನ ದಂಟನss ಗತಿ” ಪಕ್ಕದಲ್ಲಿದ್ದ ಸಾಂಗ್ಲಿ ಎಮ್ಮಿಗೆ ಕೇಳುವಂಗ ಜವಾರಿ ಎಮ್ಮಿ “ಕಟಮ್ ಕುಟುಮ್” ದಂಟ್ ತಿನಕೋತ ಹೇಳಿತು.
“ನಾನು ನಿನಗತೆ ಎರ್ಡ ಮೂರ ಚರಗಿ ಹಿಂಡಾಕಿ ಅಲ್ಲ, ಹನ್ನೆರಡರಿಂದ ಹದಿಮೂರ ಚರಗಿ ಒಂದss ಹೊತ್ತಿಗಿ ಹಿಂಡತೀನಿ, ನಿನ್ನ ಯೋಗ್ಯತೆ ಏನು? ನನ್ನ ಯೋಗ್ಯತೆ ಏನು ತಿಳ್ಕೊಂಡ ಮಾತಾಡೆಂದು” ಸಾಂಗ್ಲಿ ಎಮ್ಮಿ ಆ ಜವಾರಿ ಎಮ್ಮಿ ಮ್ಯಾಲ ಅಬ್ಬರ್ಸಿತು.
“ಹಿಂಡೂದ ತಟಗss ಕಮ್ಮಿ ಮಾಡ ಆಗ ನಿನ್ನ ಬೆಳಕ ತಿಳಿತೈತಿ” ಜವಾರಿ ಎಮ್ಮಿ ಮರುಮಾತಾಡಿತು. ನಾನು ಹಿಂಡಿದ್ರೂ ಅಷ್ಟ ಬೆಲೆ, ಹಿಂಡಲೀಕೂ ಅಷ್ಟ ಕಿಮ್ಮತ್ತು, ನಮ್ಮ ಜಾತಿ ಎಮ್ಮಿ ಮಹತ್ವ ನಿನಗೇನು ತೀಳದೀತು? ಸಾಂಗ್ಲಿ ಎಮ್ಮಿ ತನ್ನ ಮಹತ್ವ ಕುರಿತು ಹಿಯಾಳಿಸಿ ಹಂಗಿಸಿ ನಕ್ಕಿತು.
“ನೀ ಯಾವ ಜಾತ್ಯಾಗ ಹುಟ್ಟಿದ್ರೂ ಎಮ್ಮಿ ಅನ್ನುದ ಮರಿಬ್ಯಾಡ” ಈ ಹಾಳಾದ ಜಾತಿ ಬೇದಾ ಮಾಡಿಟ್ಟ ದಿನಾನೂ ಈ ಮಂಕ ಬುದ್ದಿ ಮನುಷ್ಯಾರೂ ನನ್ನ ಕುಲಾ ದೊಡ್ಡದು,ನಿನ್ನಕುಲಾ ಹೀನಾ, ನನ್ನ ಜಾತಿ ಉನ್ನತ, ನಿಂದು ನಿಕೃಷ್ಟ, ಅನಕೊಂಡು, ಕಿತ್ತಾಡ್ಕೊಂಡ ಸಾಯಿತಾವು. ನಮ್ಮೊಳಗೂ ಬಿಟ್ಟಿಲ್ಲಾ, ನಮಗೂ ಬೇದಾ ತಂದಾವು. ಇದ ಮಂಗನ ಕುಲದ ಮನುಷ್ಯಾರ. ನಾಯಿ ಒಳಗೊಂದಿಷ್ಟ ಜಾತಿ, ಎತ್ತಿನೊಳಗೊಂದಿಷ್ಟ ಜಾತಿ, ಬೆಕ್ಕಿನೊಳಗೊಂದಿಷ್ಟ ಜಾತಿ, ಎಮ್ಮಿಗಳ ಒಳಗೂ ನೂರೆಂಟ ಜಾತಿ ಮಾಡಿ ಅವರವರ ತೆವಲಿಗೆ, ಅನಕೂಲಿಗೆ ಬೇರ್ಪಡಿಸಿಟ್ಟಾರ. ಸೂರ್ಯಾ ಚಂದ್ರ ಸತ್ತ ಸುಡಗಾಡ ಸೇರಿದ್ರೂ ಈ ಲೋಕದಾಗಿನ ಜಾತಿ ಬೇದಾ ಅಳಕಾಕ ಸಾದ್ಯವಿಲ್ಲ, ಅದರಾಗ ಈ ಮನಷ್ಯಾರಷ್ಟ ಧರ್ಮ ಬೇದಾ ಮಾಡಾವ್ರ ಈ ಭೂಮಿಮ್ಯಾಲ ಯಾವ ಜೀವಿನೂ ಇಲ್ಲ” ಎಂದು ಜವಾರಿ ಎಮ್ಮಿ ಮಾರುದ್ದದ ಭಾಷಣವೇ ಬಿಗಿಯಿತು. ಆಗ ಸಾಂಗ್ಲಿ ಎಮ್ಮಿ ಆ ಮಾತು ಕೇಳಿ ನಡುಗಿತು. “ಈ ದೌಳಾಕಿ ಅಂತಾ ರಾಡಿಯೊಳಗಿದ್ದು, ತಿಪ್ಪಿ ಮ್ಯಾಲಿನ ದಂಟ ತಿಂದು, ಬಾಳ ತಿಳ್ಕೊಂಡಾಳ,ನಾನು ಮೆತ್ತಂದ ತಿಂದ ಬರೀ ಮೈಯ್ ಬೆಳಸ್ಕೊಂಡಿನಿ, ನನಗ ಅಕಿಯಷ್ಟು ಬುದ್ದಿ, ಅಕಲಾ, ತಿಳವಳಿಕಿ, ಇಲ್ಲ” ಅನ್ನುವ ಮನವರಿಕೆ ಮೂಡಿದಾಗ ಸಾಂಗ್ಲಿ ಎಮ್ಮಿಗೆ ಒಣಾ ದಂಟು ತಿನಕೋತ ನಿಂತ್ತಿದ್ದ ಜವಾರಿ ಎಮ್ಮಿ ಮ್ಯಾಲೆ ಆಧರದ ಅಭಿಮಾನ ಮೂಡಿತು. “ಅಕ್ಕಾ ನನ್ನ ಕ್ಷಮಿಸವ್ವಾ ನಮ್ಮ ನಮ್ಮ ಒಳಗ್ಯಾಕ ಈ ಒಣಾ ಜಗಳಾ” ಎಂದು ಸಾಂಗ್ಲಿ ಎಮ್ಮಿ ದೈನದಿಂದ ನುಡಿಯಿತು. ಜವಾರಿ ಎಮ್ಮಿ ಮತ್ತೆ ಮಾತು ಪೋನಿಸಿತು.
“ನೋಡ ತಂಗಿ, ನಾನು ಮೊದಲ ಇಲಾದಾಗ ಈ ಮಾಲಕಿ ನನ್ನ ಭಾಳ ಜೀಂವ ಜೀಂವ ಮಾಡಿದ್ಳು. ಹೊತ್ತ ಹೊತ್ತಿಗೆ ಹಸಿ ಮೇವು, ಮುಸರಿ ನೀರು, ಮುಂಜಾನೆ ಸಂಜೀಕ ಗುಗ್ಗರಿ ಹಾಕಿ ಹೊಟ್ಟಿಲೆ ಹುಟ್ಟಿದ ಮಗಳ್ಹಂಗ ನೋಡ್ಕೊಂಡ್ಳು. ಆ ಜಗಮಲ್ಲ ಮೊನ್ನೆ ಈ ಜವಾರಿ ಎಮ್ಮಿ ಎಷ್ಟ ಮೇಸಿದ್ರೂ ಅಷ್ಟ. ಮೇಸಿ ಮೇಸಿ ಸತ್ತ ಹೋಗೂದು. ಆರಕ್ಕ ಎರಾಂಗಿಲ್ಲಾ ಮೂರಕ್ಕ ಇಳಿಯಂಗಿಲ್ಲ” ಎಂದು ಕಲಿಸಿದ. ಈ ಮಾಲಕಿ ಅಂವನ ಮಾತು ಭಾಳ ತಲಿಯಾಗ ತಗೊಂದ್ಳು. “ಕಲಕಿ ಮಾತ ಕಟ್ಟಿದ ಬುತ್ತಿ ಎಷ್ಟ ದಿನದ್ದೂ.!” ಅಕಿ ಅಂದನಿಂದ ನನ್ನ ಮ್ಯಾಲಿನ ಮನಸ್ಸ ತಗದ ಹಾಕಿದ್ಳು.
“ನನಗರಾ ಹೊಟ್ಟಿ ತುಂಬ ಹಾಕಿದ್ರ ಹಿಂಡತಿನವ್ವಾ, ತಂಗಿ, ಮಾಲಕಿ ತಿಳದಾಗ ನೀರ ಕುಡಸ್ತಿದ್ಳು, ನೆನಪಾದಾಗೊಮ್ಮೆ ಕಣಕಿ ಹಾಕ್ತಿದ್ಳು, ನಾನರ ಏನ್ ಮಾಡ್ಲಿ ಹೇಳು, ಅಕಿ ಎಷ್ಟ ಹಾಕ್ತಾಳೋ ಅದರ ತಕ್ಕಾ ಹಾಲ ಕೊಡತಿದ್ಯಾ. ಹೆಚ್ಚಿಗೆ ಕೇಳಿದ್ರ ನನ್ನ ಮಯ್ಯಾನ ರಕ್ತಾ ಬಸದ ಕೊಡಲೇನು?” ಜವಾರಿ ಎಮ್ಮಿ ತನ್ನ ಪರಸ್ಥಿತಿ ಹೇಳಿಕೊಂಡು ಮರಗಿತು. ಜವಾರಿ ಎಮ್ಮಿ ಮಾತು ಕೇಳಿಸಿಕೊಂಡ ಸಾಂಗ್ಲಿ ಎಮ್ಮಿಯ ಮನದಲ್ಲಿ ಅಳಕು ಹುಟ್ಟಿಕೊಂಡಿತು.
ʼತಂಗೀ ನೀನೀಗ ಭಯ ಪಡಬ್ಯಾಡ, ನಿನ್ನ ಮ್ಯಾಲ ಅಕಿ ಜೀವಾನ ಇಟ್ಟಾಳ. ಹೆಚ್ಚ ರೊಕ್ಕಾ ಕೊಟ್ಟ ನಿನ್ನ ಖರೀದಿ ಮಾಡ್ಯಾಳ.ನಿನಗ ಕೊಟ್ಟ ದುಡ್ಡ ವಾಪಸ್ ಆಗುವರೆಗೂ ನಿನ್ನ ಅಂಗೈಯಾನ ಬೆಣ್ಣಿಹಂಗ ನೋಡ್ತಾಳ. ರೊಕ್ಕ ಮುಟ್ಟಿದ ಮ್ಯಾಲ ಅಕಿ ಬುದ್ದಿ ನಾಯಿ ಬಾಲ!ʼ ಮುಂದ ಚಂದ್ಹಂಗೂ ನೋಡಬಹುದು. ಕಲಕಿ ಮಾತ ಕೇಳಿ ನನ್ನ ನಿನ್ನ ಮಾರೀದ್ರೂ ಮಾರಬಹುದು. ನಾಂವ ಎಲ್ಲದಕ್ಕೂ ಸಜ್ಜಾಗಿರ್ಬೇಕು. ʼಯಾರ ಕರಿತಾರೋ ಅವರ ಕೈಗುಂಟ ಹೋಗುದೊಂದ ನಮ್ಮ ಧರ್ಮʼ. ಹೆಣ್ಣಾಗಿ ಹುಟ್ಟಿ ನಾವು ಪುಣ್ಯಾ ಮಾಡಿವಿ, ಅದ ನಮ್ಮ ಕುಲದ ಗಂಡಗೊಳ ಕತಿ ನೆನಸ್ಕೊಂಡ್ರ ಜೀವಾ ಜಲ್ ಅಂತೈತಿ, ಅವನ್ನ್ಯಾರೂ ಸಾಕೂದಿಲ್ಲ, ಹುಟ್ಟಿದ ವರ್ಷ ಒಪ್ಪತ್ತನ್ಯಾಗ ಕಟಗರ ಮನಿ ಪಾಲ ಅಕ್ಕಾವ ಪಾಪ! ಜವಾರಿ ಎಮ್ಮಿ ಮಾತ ಚಿತ್ತಗೊಟ್ಟ ಕೇಳಿದ ಸಾಂಗ್ಲಿ ಎಮ್ಮಿಗೆ ಜೀವಾನುಭವ ಆಯಿತು. “ಯಕ್ಕಾ ನೀನss ನನಗ ದಾರೀ ದೀಪಾ” ನನಗ ತಿನ್ನುದು ಹಿಂಡುದು ಬಿಟ್ರ ಬ್ಯಾರೇನೂ ಗೊತ್ತಿರಲಿಲ್ಲ. ನನಗ ಈ ಮನುಷ್ಯಾರ ಬುದ್ದಿ ಈಗ ಅರ್ಥ ಆಯ್ತು. ಜೀವನದಾಗ ಬಂದದ್ದ ಧೈರ್ಯದಿಂದ ಎದರಿಸುವ ಶಕ್ತಿನಾ ನಾನು ನಿನ್ನಿಂದ ಈಗ ತಿಳಕೊಂಡೆ ಎಂದು ಜವಾರಿ ಎಮ್ಮಿಯನ್ನು ಪ್ರಶಂಶಿಸಿತು. ಇಬ್ಬರಾಡುವ ಮಾತು ಕೇಳಿದ ಕರು “ಮುಂದ ನನ್ನ ಗತಿ ಹೆಂಗೈತೋ ದೇವರೆ ಬಲ್ಲ” ಎಂದು ಚಿಂತಿಸತೊಡಗಿತು.
******
ಸಾಂಗ್ಲಿ ಎಮ್ಮಿ ಹೆಣ್ಣಗರು ಹಾಕಿತ್ತು. ಯಂಕವ್ವಾ ತನ್ನ ಮಗಳ ಬಾನಿತನಾ ಮಾಡಿದ್ಹಂಗ ಅಗದೀ ಜಾಗಜೂಗ ಮಾಡ್ತಿದ್ಳು. ಒಂದ ಹೊತ್ತಿಗೆ ಹನ್ನೆರಡು ಹದಿಮೂರು ಚರಗಿ ಹಾಲ ಹಿಂಡತಿತ್ತು. ಎರಡ ಹೊತ್ತೂ ಹಾಲ ಹಿಂಡಿ ಹಾಲಿನಂವಗ ಹಾಕತ್ತಿದ್ಳು. ಸಾಂಗ್ಲಿ ಎಮ್ಮಿಗೆ ಹಾಲ ಇನ್ನಷ್ಟ ಹೆಚ್ಚಿಗೆ ಹಿಂಡಲಿ ಅಂತ ಬಲ್ಲಂಗ ಮೇವು ಮೀಡಚಿ ಹಾಕ್ತಿದ್ಳು. ಜವಾರಿ ಎಮ್ಮಿ ಹಿಂಡಿದ ಎರಡ ಚರಗಿ ಹಾಲ ಬಿಟ್ಟಿಬ್ಯಾಸರ್ಕಿಲೇ ಹಿಂಡ್ಕೊಂದು ಒಂದ ಚರಗಿ ತನಗ ಇಟಗೊಂದ. ಇನ್ನೊಂದ ಚರಗಿ ಅಲ್ಲೇ ತನ್ನ ಓನ್ಯಾಗ ಮಾರಟಮಾಡ್ತಿದ್ಳು.
“ಏನ್ ಯಂಕವ್ವಾ ಎಮ್ಮಿ ಹೈಣ ಜೋರೈತೇನವ್ವಾ” ಮಗ್ಗಲ ಮನಿ ಕಮಲವ್ವ ಆಯಿ ಕೇಳಿದಾಗ ನಗುತ್ತಲೇ ಹಂಗೇನಿಲ್ಲ ಇಲ್ಲ, ಒಂದ ರೀತಿ ಐತೆಂದು, “ಆದ್ರೇನ ಆಯಿ ದನಕ ಮೇವ ಆಂಬ್ರವಲ್ದು” ಎಂದು ಹೇಳುತ್ತ,ಹೆಚ್ಚಿಗೆ ಮಾತಾಡಿದ್ರ ಮುದುಕಿ ಹಾಲು ಮೊಸರು ಕೇಳಿಗೀಳಿತೆಂದು ಅರ್ಧಮರ್ಧ ಮಾತಾಡುತ್ತ ಮತ್ತ ತನ್ನ ಹ್ವಾರೇದ ಕಡೆ ಲಕ್ಷ ಹರಸ್ತಿದ್ಳು.
“ಕುಡಕ ಕಲ್ಯಾ ಯಕ್ಕಾ ಇಷ್ಟ ಗಳಿಸಿ ಯಾರಿಗೆ ಮಾಡಿ ಹೊಕ್ಕಿ” ನಕಲಿ ಮಾಡುತ್ತ ಯಂಕವ್ವನ ಕೆಣಕುತ್ತಿದ್ದ. “ಯಾರಿಗ್ಯಾಕ ಮಾಡ್ಲಿ ನಂದ ಜೀಂವ ಇಲ್ಲೇನು? ಮೂಳಾ ಹಳೆಮೂಳಾ” ಎಂದು ಬೈದು ಅಂವನನ್ನು ಅಟ್ಟುತ್ತಿದ್ಳು. ಜೋಲಿ ಹೊಡಕೋತ ಕಲ್ಯಾ ವಟಗುಡುತ್ತಾ ನಶೆ ಹೆಚ್ಚಾಗಿ ಕಟ್ಟಿಮ್ಯಾಲ ಹೊಳ್ಳತಿದ್ದ.
ಕಲ್ಲನ ಮಾತಗಳು ಯಂಕವ್ವನ ಎದೆಯನ್ನು ಕೊರೆಯತೊಡಗಿತು. ಗಂಡ ಸತ್ತ ರಂಡಿಮುಂಡಿಯಾಗಿ ಬಾಳಬೇಕಾತಲ್ಲ. ಇದ್ದ ಒಂದ ಮಗಾನೂ ನನ್ನ ಕೈಯಿಂದ ಆ ದೇವ್ರ ಕಸಗೊಂದ. ಅಂದ ನಾನು ಅಂವ್ನ ಸಾಲಿ ಬಿಡಿಸಿ ಎಮ್ಮಿಗೆ ಕಳಸಿರಲಿಲ್ಲಂದ್ರ ನನ್ನ ಮಗನಿಗೆ ಏನೂ ಅಕ್ಕಿರಲಿಲ್ಲ. ಹ್ವಳಿಯಾಗ ಎಮ್ಮಿ ಬಾಲ ಹಿಡ್ಕೊಂಡ ಇಸ್ಗೋತ ಹ್ವಾದಾಂವ ಹೊಡಮರಳಿ ಮಾರಿ ತೋರಸಲಾರ್ದ ಹ್ವಾದಾ. ಮಗನ ಕಳಕೊಂಡ ನೋವು ಯಂಕವ್ವನ ಮನಸ್ಸನ್ನು ಮತ್ತೊಮ್ಮೆ ಗಾಯಗೊಳಿಸಿತು.
ಇಷ್ಟೆಲ್ಲ ಬಡಕೊಂದ ಮಾಡುದಾದ್ರೂ ಯಾರಿಗೆ? ಯಂಕವ್ವಗ ಈ ಪ್ರಶ್ನೆ ಸಾವಿರ ಸರತಿ ಕಾಡಿದ್ರೂ,ಕುಂತ್ರ ತನಗ ಯಾರ ಕೂಳ ಹಾಕ್ತಾರಾ? ನನಗ ಹಿಂದೂ ಇಲ್ಲ ಮುಂದು ಇಲ್ಲಾ. ಅವss ಎಮ್ಮಿಗಳ ನನ್ನ ಸಿರಿ ಸಂಪತ್ತು ಅನ್ನುತ್ತ ಯಂಕವ್ವ ಎಮ್ಮಿಗಳಿಗೆ ಮೇವು ಹಾಕಿ ಅಲ್ಲೇ ಇದ್ದ ಚಾಪಿಯ ಮೇಲೆ ಮೈಚಲ್ಲಿದ್ಳು. ಕಣ್ಣು ಮುಚ್ಚಿದಾಗ ಬ್ಯಾಂಕಿನಲ್ಲಿ ಒತ್ತೆ ಇಟ್ಟ ಬಂಗಾರ ನೆನಪಾಗಿ ಪಕ್ಕನೇ ಮ್ಯಾಲೆದ್ದು ಕುಳಿತಳು. ಮತ್ತೆ ಮಲಗಿದಳು ಕಣ್ಣು ಒತ್ತಿದರೂ ನಿದ್ದೆ ಬರಲಿಲ್ಲ.
ಎಮ್ಮಿ ಬಿಟಗೊಂದ ಪೂಜಾರ ಬೀಳದಕಡೆ ಹೋಗಾಕ ಸಜ್ಜಾದ್ಳು. ಸಾಂಗ್ಲಿ ಎಮ್ಮಿಗೆ ಒಂದ ಹೊರಿ ಹಸಿ ಮೇವು ಗ್ವಾದಾಲಿಯೊಳಗ ಸುರವಿ, ಜವಾರಿ ಎಮ್ಮಿ ಕೊಳ್ಳಗಣ್ಣಿ ಬಿಚ್ಚಿದ್ಳು, ಕರಾನೂ ಬಿಚ್ಚಿ, ಮೂಲ್ಯಾಗಿದ್ದ ಒಂದ ಬಡಗಿ ತಗೊಂದ ನಡದ್ಳು. ಸಾಂಗ್ಲಿ ಎಮ್ಮಿ ತಿನ್ನುವ ಗರಿಗರಿಯಾದ ಹುಲ್ಲು ಮೇವು ನೋಡಿ ಜವಾರಿ ಎಮ್ಮಿ ಬಾಯಿಯಲ್ಲಿ ನೀರೂರಿತು. “ತಿನ್ನವಾ ತಂಗಿ ತಿನ್ನು ನಿನ್ನ ನಶೀಬ ಚಲೋ ಐತಿ” ಎಂದು ನಕಲಿ ಮಾಡುತ್ತ ಜವಾರಿ ಎಮ್ಮಿ ಮುಂದೆ ಬಾಗಿಲ ದಾಟಿತು. ಸಾಂಗ್ಲಿ ಎಮ್ಮಿ ನಗುನಗುತ್ತ ಬಾಯಿ ಚಪ್ಪರಿಸುತ್ತಿತ್ತು.
ಜಗಮಲ್ಲ ಮೊದಲೇ ಬಂದು ಕುಂತಿದ್ದ. “ಯಾಕ ಯಕ್ಕಾ ತಡಾ ಮಾಡೀದೆಲ್ಲಾ? ಏನಂತೈತಿ ನಿನ್ನ ಸಾಂಗ್ಲಿ ಎಮ್ಮಿ?” ನಕ್ಕೋತ ಯಂಕವ್ವಾ “ಹಾಲ ನೀ ಹೇಳಿದ್ಹಂಗ ಬಲ್ಲಂಗ ಹಿಂಡತೈತಿ. ಆದ್ರ ಮೇವ ಬಾಳ ಬೇಕಪ್ಪಾ ಅದಕ್ಕ”. ಜಗಮಲ್ಲ ನಕ್ಕ. “ನಿಂದೊಳ್ಳೆ ಕತಿ ಯಕ್ಕಾ.. ಮೇವ ಹಾಕಲಾರ್ದ ಹಾಲ ಹಿಂಡು ಎಮ್ಮಿ ಸಾಲಿಗೆ ಹೋಗುವ ಮಕ್ಕಳ ಪುಸ್ತಾಕದಾಗ ಇರ್ತಾವನೋಡ, ಬೋಕಾದ್ರ ಅಂತದೊಂದ ತಗೋ” ಅಂದ. ಆಗ ಇಬ್ಬರೂ ಕೊಕ್ಕಾಡ್ಸಿ ನಕ್ಕರು.
ಮುಂಜಾನೆ ಒಂದ ಗಂಟ ಸಂಜಿಕ ಒಂದ ಗಂಟ ಊರ ಮಂದಿ ಹೊಲದಾಗ ಅಡ್ಡಾಡಿ, ರೈತರಿಂದ ಬೈಸ್ಕೊಂದ ,ಅನಸ್ಕೊಂದ ಮೇವ ತರಗೋಡ್ದ ರಗಡರದ್ದ ಅಕೈತಿ, “ಹೊತ್ತಿಗೆ ಸರಿಯಾಗಿ ಊಟಿಲ್ಲ , ಕಣ್ಣಿಗೆ ಸರಿಯಾಗಿ ನಿದ್ದಿಲ್ಲ” ಎಂದು ಯಂಕವ್ವ ಜಗಮಲ್ಲನ ಮುಂದೆ ತನ್ನ ಸಂಕಟಾ ತೋಡಿಕೊಂಡ್ಳು. “ರೊಕ್ಕ ಬರತೈತಂದ್ರ ಹೈರಾಣ ಆಗೂದ ಯಕ್ಕಾ ಮತ್ತ” ಅಂದ. “ಮೊದಲ ಆರಾಮ ಇದ್ನಿ ಬಿಡಪ್ಪಾ. ಈ ಎಮ್ಮಿ ತಂದಮ್ಯಾಲ ಒಂದ ತಟಗೂ ಸೌಡಿಲ್ಲ.ನೆಮ್ಮದಿ ಇಲ್ಲ” ಯಂಕವ್ವ ಹೇಳುಮಾತ ಕೇಳಿ ಜವಾರಿ ಎಮ್ಮಿ ತನ್ನ ಬಾಲಾ ಅಲ್ಲಾಡಿಸುತ್ತ “ಈಗೇನಾಗೇತಿ ಮುಂದ ಇನ್ನ ಗೊತ್ತ ಅಕ್ಕೈತಿ ತಡಿತಡಿ ಮಗಳ” ಎಂದು ನಕ್ಕಿತು.
“ನೀ ಒಂದೆರ್ಡ ತಿಂಗಳನ್ಯಾಗ ಹಿಂಗದ್ರ ಹೆಂಗ” ದಿನಾ ಸಾಂಗ್ಲಿ ಎಮ್ಮಿ, ಸಾಂಗ್ಲಿ ಎಮ್ಮಿ ಅಂತಾ ಜಪಾ ಮಾಡ್ತಿದ್ದಿ. ಕರ್ಚಿನ ಹಿಂದ ಅದರ ಲಾಭನೂ ಇರ್ತೈತಿ. “ಆನಿ ಬಾರಾ ಆನಿಗೆ ಇರವಿ ಬಾರ ಇರವಿಗೆ” ದೊಡ್ಡವ್ರ ಶಾಸ್ತ್ರಾ ಏನ್ ಚಂದಕ್ಕ ಮಾಡೇರೇನವ್ವಾ ಯಕ್ಕಾ? “ತೊಂಬತ್ತ ಸಾವಿರ ಹೊಡಮರಳಿ ಹೊಳಸ್ಗೊಳ್ಳಾಕ ಮೂರ ಸೂಲಾ ನೀ ಗುದ್ದಾಡ್ಬೇಕು. ಅಂದಾಗ ನಿನ್ನ ಗಂಟ ಕಿತ್ತ ನಿನ್ನ ಕೈ ಸೇರ್ತೈತಿ”, ಅದ ಬರು ತನಕಾ ನೀ ಇಡೀ ಊರ ಸುತ್ತಬೇಕು, ಹ್ವರಿ ಹ್ವರಿ ಮೇವ ತರಬೇಕು, ಮುಸರಿ, ಹಿಂಡಿಕಣ್ಣಿ ಹಾಕ್ಬೇಕು, ಅಂದಾಗ ಆ ಸಾಂಗ್ಲಿ ದೇವಿ ತೃಪ್ತಾಳಾಗತಾಳೆಂದು ಜಗಮಲ್ಲ ದೊಡ್ಡ ದನಿ ತಗಿದು ನಕ್ಕ. ಜಗಮಲ್ಲ ತನ್ನನ್ನು ನಿಂದಸ್ತಾನೋ, ದಾರಿತಪ್ಪಸ್ತಾನೋ ಗೊತ್ತಾಗದೆ ಯಂಕವ್ವ ಮೂಕಳಾಗಿ ಕುಂತ್ಳು.
ಈ ಸಾಂಗ್ಲಿ ಎಮ್ಮಿ ಉಸಾಬರಿ ಮಾಡಬಾರದಿತ್ತು, ಹಾಸಗಿ ಇದ್ದಷ್ಟ ಕಾಲ ಚಾಚಬೇಕಿತ್ತು. ಕೈಯಾಗಿದ್ದ ನಾಲ್ವತ್ತ ಸಾವಿರ, ಮೈಯಾಗಿದ್ದ ಎರ್ಡ ತ್ವಲಿ ಬಂಗಾರಾ ಎಮ್ಮಿ ಕುಂಡ್ಯಾಗ ಇಟ್ಟ ಕುಂತ್ಯಾ, ನೆನಸ್ಕೊಂಡ್ರ ಯಂಕವ್ವಗ ತಾನು ನಿರ್ಗತಿಕಳಾದನೆನೋ ಅನ್ನುವ ಭಾವ ಕಾಡ ತೊಡಗಿತು. ಎಮ್ಮಿ ಐತಲ್ಲಾ, “ಎಮ್ಮಿ ಇದ್ರ ಮನ್ಯಾಗ ರೊಕ್ಕದ ಗಂಟ ಇದ್ಹಂಗ” ಅನಕೊಂಡು ತನಗೆ ತಾನೆ ಸಮಾಧಾನ ಮಾಡ್ಕೊಂಡು ಮನಿ ಹಾದಿ ಹಿಡದ್ಳು.
*******
ಸಾಂಗ್ಲಿ ಎಮ್ಮಿ ಹಿಂಡೂದು ಕಮ್ಮಿ ಮಾಡಿತ್ತು. ಮರಳಿ ಗಬ್ಬಾಗಿತ್ತು. ಒಂದ ತಟಗ ಯಂಕವ್ವ ಮೇವು ಹಾಕೂದು ಅದಕ್ಕ ಕಮ್ಮಿ ಮಾಡಿದ್ಳು. ಜವಾರಿ ಎಮ್ಮಿ ಇಳಿಯಾಕ ಅನಿಯಾಗಿತ್ತು ಹಿಂಗಾಗಿ, ಹಸಿಮೇವು, ಗುಗ್ಗರಿ ಅದರ ಪಾಲಾಯಿತು.
ಸಾಂಗ್ಲಿ ಎಮ್ಮಿ ರಾತ್ರಿ ಬಿಕ್ಕಿಬಿಕ್ಕಿ ಅಳತ್ತಿತ್ತು. ಅದನ್ನ ಕಂಡ ಜವಾರಿ ಎಮ್ಮಿ “ಯಾಕ ತಂಗೀ ಏನಾತವ್ವಾ? ಹಂಗ್ಯಾಕ ಕಣ್ಣೀರ ತಗದಿ, ಸಮ್ನೀರು ಅಂಥಾದ್ದೇನಾತೀಗ” ಎಂದು ಕೇಳಿತು. “ಏನ್ ಹೇಳಲಿ ಯಕ್ಕಾ, ನೀ ಅಂದ ಮಾತ ಖರೇ ಐತಿ, ನೀ ಅಂದ್ಹಂಗ ಈ ಮನುಷ್ಯಾರ ಜಾತಿ ಭಾಳ ಕೆಟ್ಟೈತವ್ವಾ. ಇಷ್ಟ ದಿನಾ ನಾ ಗಡಗಿ ತುಂಬಾ ಹಾಲ ಹಿಂಡತಿದ್ದೆ ನನಗ ಆವಾಗ ಮೇವ ಹಾಕಿದ್ದ ಹಾಕಿದ್ದು, ಗುಗ್ಗರಿ ತಿನಿಸಿದ್ದ ತಿನಿಸಿದ್ದ, ಈಗ ನಾ ಗಬ್ಬ ಆಗೀನಿ, ನನಗೇನೂ ಇಲ್ಲಾ. ನನಗ ಸರಿಯಾಗಿ ಕೂಳ ಇಲ್ಲದ್ಕ ಹೊಟ್ಟಿ ತಳಾಮಳಾ ಅನ್ನಾಕತೈತಿ, ಕೈಕಾಲ ಸಗತಿ ಕಮ್ಮೀ ಆದಾಂಗ ಆಗೇತಿ”, ಸಾಂಗ್ಲಿ ಎಮ್ಮಿ ಬೋರಾಡಿ ಅಳತೊಡಗಿತು,
“ಸಮಾಧಾನ ತಗೊ ತಂಗಿ, ಈ ಬಿಸಲು ತಂಪತ್ತಾ ಬಾಳ ಹೊತ್ತ ನಿಲ್ಲಾಂಗಿಲ್ಲ. ಒಂದರ ಹಿಂದ ಒಂದ ಬೆನ್ಹತ್ತಿರ್ತಾವ” ನಾವು ದನಗಳು ನಾವು ತಾಳ್ಕೊಂಡ ಹೋಗಬೇಕ ತಂಗಿ. ನೀ ಚಿಂತಿ ಭಾಳ ಮಾಡಬ್ಯಾಡ. ಹಂಗೇನಾರ ಚಿಂತಿ ಹಚಗೊಂದ ನೆಲಾ ಹಿಡಿದಿ ಅಂದ್ರ ನಿನ್ನ ಕಟಗರ ಮನಿಗೆ ದಬ್ಬತಾರ ಈ ಬುದ್ದಿವಂತ ಮನಷ್ಯಾರು. “ಹಾಕಿದಷ್ಟ ತಿಂದ ಹಾಯಾಗಿ ಇರ್ಬೇಕವ್ವಾ ಹುಚ್ಚಿ” ಎಂದು ಸಮಾಧಾನದ ಮಾತಾಡಿತು.
ಮೊದಲಿದ್ದ ಮಾಲಕಿ ನಾ ಹಿಂಡಿದ್ರೂ ಅಷ್ಟ, ಗಬ್ಬಾದಾಗೂ ಅಷ್ಟ. ಅಕಿ ಯಾವ ಭೇದ ಬಾವ ಮಾಡ್ತಿರಲಿಲ್ಲ. ಪಾಪ ಅಕಿಗೆ ಕ್ಯಾನ್ಸರ್ ಆಗಿ ಹಾಸಗಿ ಹಿಡದ್ಳು. ಅಕಿ ಗಂಡ ನನ್ನ ತಂದು ಇಕಿಗೆ ಗಂಟ ಹಾಕಿದ. ನನ್ನ ಅಕ್ಕಾ, ನನ್ನ ದೊಡ್ಡ ಮಗಳು ಇನ್ನ ಅದ ಮನ್ಯಾಗ ಅದಾರ, ಆ ಮನಷ್ಯಾ ಅವರನ್ನೂ ಅಲ್ಲೇ ಉಳಸ್ಯಾನೋ ಬ್ಯಾರೇ ಕಡೆ ದಬ್ಯಾನೋ ಸಾಂಗ್ಲಿ ಎಮ್ಮಿ ತಾನು ಮೊದಲಿದ್ದ ಮನೆ ಕತಿ ಹಂಚಗೊಂಡಿತು.
“ನಾವ ಯಾರ್ಯಾರ ಮನ್ಯಾಗ ಎಷ್ಟೆಷ್ಟ ದಿನಾ ಇರ್ಬೇಕೋ, ಆ ದೇವ್ರ ಮೊದಲ ಬರ್ದ ಕಳಿಸಿರ್ತಾನ”, ಕೆಲವ್ರು ಹೊಟ್ಟಿ ತುಂಬ ಹಾಕವ್ರ ಇರ್ತಾರ, ಇನ್ನ ಕೆಲವ್ರು ತಾವು ಹೊಟ್ಟಿ ತುಂಬಾ ತಿಂದು ನಮ್ಮ ಹೊಟ್ಟಿ ಅರ್ಧಾ ಮಾಡವ್ರೂ ಇರ್ತಾರ, “ಹೊತ್ತ ಬಂದ್ಹಂಗ ಕೊಡಿ ಹಿಡಿಬೇಕವ್ವಾ ತಂಗಿ” ಎಂದು ಜವಾರಿ ಎಮ್ಮಿ ತಾತ್ವಿಕ ಮಾತು ಹೇಳಿತು.
“ಯಕ್ಕಾ ಮೊದಲಿಂದ ನೀ ಇದ ಮನಿಯಾಗ ಹುಟ್ಟಿ ಬೆಳದಿಯೋ ಬ್ಯಾರೆ ಮನಿಯಿಂದ ನೀನೂ ಬಂದಿಯೋ” ಎಂದು ಸಾಂಗ್ಲಿ ಎಮ್ಮಿ ಕೇಳಿತು. “ಅಯ್ಯೋ ದೌಳಾಕಿನ ನನ್ನ ಕತಿ ದೊಡ್ಡದೈತೆವ್ವಾ ಹೇಳಿದ್ರ ಇಡೀ ರಾತ್ರೀ ಮುಗಿಯಂಗಿಲ್ಲ” ಅಂದಿತು. ಯಕ್ಕಾ ಹೇಳವ್ವಾ ಇರ್ಲಿ ಕೇಳತೀನಿ ಎಂದು ದೈನಾಸಬಿಟ್ಟಿತು. ಆಗ ಜವಾರಿ ಎಮ್ಮಿ ಪೀಠಿಕೆ ಹಾಕಿತು.
ನಮ್ಮಜ್ಜಿ ಈ ಮನಿಗೆ ಮದಲ ಬಂದಾಕಿ. ಇದ ದೌಳಾಕಿ ಕೆರ್ ಸಂತಿಗೆ ಹೋಗಿ ತಂದಿದ್ಳಂತ. ನಮ್ಮಜಿ ಭಾಳ ಧಾಡಸಿ ಇದ್ದಳಂತ, ಅಕಿ ಚೊಚ್ಚಲ ಹೆರಿಗೆ ಇಲ್ಲೆ ಆಗೇತಿ, ಅಕಿ ಮೊದಲ ಹೆಣ್ಣ ಕರು ಹಾಕಿದ್ಳಂತ, ಅಕಿನss ನಮ್ಮ ದೊಡ್ಡವ್ವ.ನಮ್ಮಜ್ಜಿ ಬಾಳ ಚಲೋ ಹಾಲ ಹಿಂಡತಿದ್ಳಂತ, ನಮ್ಮಜ್ಜಿ ಹಾಲಿನ ರೊಕ್ಕದಾಗ ಈ ಮಾಲಕಿ ಒಂದ ತ್ವಲಿ ಬಂಗಾರ ತಗೊಂದಾಳ. ಎರಡನೇ ಸೂಲಕ್ಕ ನಮ್ಮವ್ವಗ ಜನ್ಮಾ ಕಟ್ಟಾಳ, ಆಗ ನಮ್ಮಜ್ಜಿ ಮ್ಯಾಲ ಈ ಮಾಲಕಿಗೆ ಭಾಳಂದ್ರ ಭಾಳ ಪ್ರೀತಿ..
ನಮ್ಮ ದೊಡ್ಡವ್ವ ತುಂಬೂ ಇಲಾಗಿದ್ಳು. ಈ ಮಾಲಕಿಗೆ ಬಂಗಾರ ಹುಚ್ಚು ಇತ್ತು. ದಡಗ್ನ ನಮ್ಮ ದೊಡ್ಡವ್ವನ ಕೆರ್ ಸಂತಿಗೆ ಹೆರ್ಕೊಂಡ ಹೋಗಾಕ ಒಂದ ಟಮ್ ಟಮ್ ಗಾಡಿ ತರಿಸಿ, ಮೂರನಾಕ ಮಂದಿ ಕೂಡಿ ನಮ್ಮ ದೊಡ್ಡವ್ವನ ಕರ್ಕೊಂಡ ಹೋಗುವಾಗ ನಮ್ಮಜ್ಜಿ ನಮ್ಮವ್ವ ಬೋರಾಡಿ ಅತ್ರೂ ಯಾರ ಕೇಳ್ಬೇಕು? ದನಗಳ ದುಃಖಾ! “ಅಕ್ಕಾ ನನ್ನ ಒಬ್ಬಕೀ ಬಿಟ್ಟ ಹೋಗಬ್ಯಾಡವ್ವೋ, ಇಷ್ಟದಿನ ಜಗಳಾಡಕೋತ, ಚಲ್ಲಾಟ ಮಾಡ್ಕೋತ ಕೂಡಿ ಆಡಿವಿ. ಈಗ ಒಬ್ಬಕಿನ ಬಿಟ್ಟ ಹೊಂಟ್ಯಾ” ಎಂದು ಅವ್ವ ಬಿಕ್ಕಿದಳಂತೆ. ಮಾಲಕಿ ನಮ್ಮ ದೊಡ್ಡವ್ವನ ಮಾರಿ, ಒಂದ ತ್ವಲಿ ಬೋರಮಳಾ ತಗೊಂದ ಡೌಲ ಮಾಡ್ಕೋತ ಮನಿಗೆ ಬಂದ್ಳಂತ.
ನಮ್ಮವ್ವ ಬಸುರಿ ಆದಾಗ ಅಕಿಗೂ ಚಿಂತಿ ಶುರು ಆತಂತ, ನನ್ನೂ ಹೋಗಿ ಈ ಮಾಲಕಿ ಮಾರಿಗೀರಿ ಬಂದಗಿಂದಾಳಂತ ಅಂಜಿದ್ದಳು. ಆಗವ್ವನ ಮಾರಲಿಲ್ಲಂತ, ಅವ್ವ ಒಂದ ಗಂಡ ಕರುವಿಗೆ ಜನ್ಮಾ ಕೊಟ್ಟಾಗ ಈ ಮಾಲಕಿ ಅವ್ವನ ನಮ್ಮ ಅಣ್ಣನ ಒಟೊಟ್ಟ ಸೇರಲಿಲ್ಲಂತ, ನಮ್ಮ ಅಣ್ಣನಂತು ಕಿವಿ ಗಡ್ಡಿ ಹಿಡದ ದರಾದರಾ ಎಳದಾಡಿ, ಕುಂಡಿಮ್ಯಾಲ ನಾಕ ರಪ್ಪ ರಪ್ಪ ಇಕ್ಕರಸುತ್ತಿದ್ದಳು. ಎರಡ ಮೂರ ತಿಂಗಳದಾಗ ನಮ್ಮ ಅಣ್ಣನ ಕಟಗರಾಂವಗ ಕೊಟ್ಟಳು. ಅವ್ವ ಮಗನ ಚಿಂತ್ಯಾಗ ಕೂಳಾ ನೀರಾ ಬಿಟ್ಟ ಮರಾಮರಾ ಮರಗಿದ್ಳು. ಮಾಲಕಿ ಹಿಂಡಾಕ ಬಂದ್ರ ನಮ್ಮ ಅವ್ವ ಜಾಡಿಸಿ ಒದ್ರ ಜರಗಿ ಪುಟಬಾಲ್ ಗತೆ ನಾಕ ಮಾರ ದೂರ ಹೋಗಿ ಬಿತ್ತಂತ, ಕರಾ ಕೊಟ್ಟ ಹೈಣಾ ಬಾದ ಮಾಡ್ಕೊಂಡೆ ಅಂತ ಮಾಲಕಿ ಮರಗಿದ್ಳು. ಈ ಕತಿ ನಮ್ಮವ್ವ ನನಗ ಹೇಳಿದ್ಳು.
ನಾ ಹುಟ್ಟಿದ ಮ್ಯಾಲ ನಮ್ಮಜ್ಜಿ ಸಾವು ಕಂಡೆ. ನಮ್ಮಜ್ಜಿ ಬ್ಯಾಸಗಿ ಬಿಸಲಿನ ಹೊಡತಕ್ಕ ಗುಂಡಿಶಲಿ ಆಗಿ ಸತ್ಳು. ನಾಕಾರ ಮಂದಿ ಬಂದು ನಮ್ಮಜ್ಜಿ ದೇಹಾ ಹೊತಗೊಂದ ಹೋಗಿ ಊರ ಹೊರಗ ಮುಳ್ಳ ಕಂಟ್ಯಾಗ ಎಸದ ಬಂದ್ರು, ಊರಾನ ಬೀದಿ ನಾಯಿಗೋಳು ನಮ್ಮಜ್ಜಿ ದೇಹಾ ಕಜೂರಿ ಹಣ್ಣ ತಿಂದ್ಹಂಗ ತಿಂದ ಖಾಲಿ ಮಾಡಿದ್ದವು.
ನಿಮ್ಮವ್ವಾ ಏನಾದ್ಳು ಯಕ್ಕಾ? ಸಾಂಗ್ಲಿ ಎಮ್ಮಿ ಮತ್ತ ಕೇಳಿತು. ಈ ಮಾಲಕಿ ನಮ್ಮವ್ವನ ಕಟಗರ ಮನಿಗೆ ಅಟ್ಟಿದ್ಳು. ನನಗೆ ಈಗಲೂ ಅದೆ ಚಿಂತೆ.
“ಕಟಗರ ಮನಿಗ್ಯಾಕ ಹ್ವಾದ್ಳು ನಿಮ್ಮವ್ವಾ?”
ನಮ್ಮವ್ವಗ ಇಡಕ ರೋಗ ತಗಲಿತ್ತು,ಕಾಲಾಗಿನ ನರಾ ಹಿಡ್ಕೊಂಡಿದ್ದವು, ಅಕಿಗೆ ಕಾಲ ಕಿತ್ತ ಮುಂದ ಇಡಾಕ ಅಕ್ಕಿದ್ದಿಲ್ಲ.ನಮ್ಮವ್ವಗ ಮಲಗಿದ್ರ ಏಳಾಕ ಬರಲಿಲ್ಲ. ಎದ್ರ ಮಲಗಾಕ ಆಗಲಿಲ್ಲ. ಆಗ ಈ ಮಾಲಕಿ ನಮ್ಮವ್ವನ ಕಟಗರ ಮನಿಗೆ ದಬ್ಬಿದ್ಳು.ಜವಾರಿ ಎಮ್ಮಿ ತನ್ನ ಕತೆಯನ್ನು ಹೇಳಿ ಗಳಗಳ ಕಣ್ಣೀರ ಹಾಕಿತು.
ಗುಡನ್ಯಾಗಿ ಹುಂಜ ಕುಕ್ಕೂ ಕೂ ಎಂದು ಕೂಗಿತು. ಅಕ್ಕನ ಕತಿ ಮುಗಿಗೊಡ್ದ ಬೆಳಕ ಹರಿಯಿತು.
“ಯಕ್ಕಾ ಮುಂದ ನಮ್ಮ ಇಬ್ಬರ ಕತಿ ಹೆಂಗವಾ” ಎಂದು ಅಳುಕಿನಿಂದ ಸಾಂಗ್ಲಿ ಎಮ್ಮಿ ಕೇಳಿತು.
ಜವಾರಿ ಎಮ್ಮಿ ನಕ್ಕಿತು.“ಯಾಕ ಯಕ್ಕಾ ನಗತೀ” ನಗದ ಏನ್ ಮಾಡ್ಲಿ ಹೇಳು. ಮುಂದಿನ ಭವಿಷ್ಯಾ ನಮ್ಮಂತಾ ದನಗೋಳಗೆ ತಿಳದಿದ್ರ ನಾವ್ಯಾಕ ಈ ಮನಷ್ಯಾರ ಕೈಯಾಗ ಸಿಕ್ಕ ಅನೂಲಿ ಅನುಭವಿಸುತ್ತಿದ್ದೀವಿ. ನಾಳೆ ಬರುವ ಕಷ್ಟಾ ನೆನಸಿ ಇಂದಿನ ನೆಮ್ಮದಿನೂ ಹಾಳ ಮಾಡ್ಕೋಬಾರ್ದವ್ವಾ.. ನನಗ ನಿದ್ದಿ ಬಂದ್ಹಂಗ ಆಗೇತೆವ್ವಾ ನಾನಟ ಮಲಗತೀನಿ ಎಂದು ಜವಾರಿ ಎಮ್ಮಿ ನಿದ್ದೆಗೆ ಜಾರಿತು. ಸಾಂಗ್ಲಿ ಎಮ್ಮಿ ತೆಲೆಯಲ್ಲಿ ಬೆಳಕಾದ್ರೂ ಮುಂದಿನ ಭವಿಷ್ಯದ ಚಿಂತೆ ಕಾಡತೊಡಗಿತು.
ಜಗಮಲ್ಲ ನಿನ್ನೆ ಆಡಿದ ಮಾತನ್ನೆ ಯಂಕವ್ವಾ ಮಲಗಿದಾಗ ಮೆಲಕು ಹಾಕಿದ್ಳು.
“ನೋಡ ಯಕ್ಕಾ ಈ ಜಾವರಿ ಎಮ್ಮಿ ಪೂರ್ತಿ ಇಲಾಗೇತಿ, ಇದನ ಮಾರಿ, ಬ್ಯಾಂಕಿನಂದು ಬಂಗಾರ ಬಿಡಸ್ಕೋ, ಹೆಂಗೂ ಈ ಜವಾರಿ ಎಮ್ಮಿ ಮನಕನೂ ಗಬ್ಬಾಗೇತಿ. ಅದ ಮನಿ ತಳಕ ಇರ್ಲಿ. ನಿನಗ ಮೇವಿನ ಚಿಂತಿನೂ ಇರಂಗಿಲ್ಲಾ, ಬಂಗಾರ ಚಿಂತಿನೂ ಬಗಿಹರಿತೈತಿ” ಯಂಕವ್ವಗ ಅಂವನ ಮಾತು ಬರೊಬ್ಬರಿ ಅನಿಸಿತು.
ಮರುದಿನ ಜವಾರಿ ಎಮ್ಮಿ ಯಾಪಾರ ಆಗೇ ಬಿಟ್ಟಿತು. ಮನಕಾ “ಯವ್ವಾ ಯವ್ವಾ” ಅಂತ ಗೋಳಿಟ್ಟಿತು. ಸಾಂಗ್ಲಿ ಎಮ್ಮಿ “ಯಕ್ಕಾ ಇನ್ಯಾರ ಮನಿಗೆವ್ವಾ ನಿನ್ನ ಪಯಣಾ?” ಅನ್ನುತ್ತ ಕಣ್ಣತುಂಬ ನೀರು ತಂತು.
“ನೋಡ ಮಗಳ ನೀ ಹೆದರಬ್ಯಾಡವ್ವಾ ಧೈರ್ಯಾ ಮಾಡ್ಕೋ. ನಮ್ಮ ದನದ ಜಾತ್ಯಾಗ ಇದೆಲ್ಲಾ ಸಾಮಾನ್ಯ. ಎಲ್ಲರೂ ಒತ್ತಟಿಗೆ ಕೂಡಿ ಬಾಳಾಕ ಇದೇನ ಕಾಡೇನು? ನಾಡೈತಿ. ಕಾಡಾದ್ರೂ ಅಲ್ಲಿ ಹುಲಿ,ಸಿಂಹಗಳೇ ನಮ್ಮ ವೈರಿ. ಅಲ್ಲಿ ನಮ್ಮನ್ನ ಸಿಕ್ಕ ಸಿಕ್ಕಲ್ಲಿ ಅವು ಬಗದ ತಿಂತಾವು. ಇಲ್ಲಿ ಈ ಮಂದಿ ಸಿಕ್ಕ ಸಿಕ್ಕದ್ದಕ್ಕ ನಮ್ಮನ್ನ ಮಾರಿ ಅವ್ರು ಬದಕ್ತಾರ. ಕಾಡ ಕಿಂತ ನಾಡ ಪಾಡವ್ವಾ ನಮ್ಮಂತವರಿಗೆ” ಮಗಳಿಗೆ ದೈರ್ಯ ತುಂಬಿತು.
ಅದ ಊರಿನ ಸಿದ್ದವ್ವಾ ಜವಾರಿ ಎಮ್ಮಿನ ಖರೀದಿ ಮಾಡಿದ್ಳು. “ಯವ್ವಾ ಮೆಯಾಕ ಬಂದಾಗ ಬೇಟಿ ಆಗೂನು ಉಷಾರ” ಎಂದು ಮಗಳಿಗೆ ಹೇಳಿತು. “ನಾನು ಹೋಗಿ ಬರ್ತಿನಿ ತಂಗೆವ್ವಾ ನನ್ನ ಮಗಳಿಗೆ ನೀನ ಒಂದ ತಟಗ ಸಮಾಧಾನ ಹೇಳು” ಅನ್ನುತ್ತ ಸಿದ್ದವ್ವನ ಹಿಂಬಾಲ ಹೆಜ್ಜೆ ಹಾಕಿತು.
ಯಂಕವ್ವಾ ಅಡವು ಇಟ್ಟ ಬಂಗಾರ ಬಿಡಿಸಿಕೊಂಡು ಬಂದಳು. ಅಕಿ ಮನಸಿಗೆ ಆಗಷ್ಟು ನೆಮ್ಮದಿ ಸಿಕ್ಕಿತು. ಈ ಮನಕ ಒಂದು ಮಾರಿದ್ರೆ ಕೈಯಲ್ಲಿ ನಾಕು ದುಡ್ಡು ಆದ್ರು ಸಿಗಬಹುದೆಂದು ತಾನೇ ವಿಚಾರಿಸಿದಳು. “ಕೊಡುದಾದ್ರ ಈ ಮನಕಾನೂ ನನಗ ಕೋಡವ್ವೋ ಯಂಕವ್ವಾ” ಅಂದು ಸಿದ್ದವ್ವಾ ಎಮ್ಮಿ ಹೊಡ್ಕೊಂಡ ಹೋಗುವಾಗ ಅಂದ ಮಾತು ನೆನಪಿಗೆ ಬಂತು. ಆಗ ಮನಕವನ್ನು ಯಂಕವ್ವಾ ಸಿದ್ದವ್ವಳಿಗೆ ಮಾರೇ ಬಿಟ್ಟಳು. ಜವಾರಿ ಎಮ್ಮಿಯ ಬೀಜ ಅವಳ ಮನೆಯಲ್ಲಿ ಉಳಿಯಲಿಲ್ಲ.
ಮಗಳು ತಾನಿದ್ದಲ್ಲಿಗೆ ಬಂದದ್ದು ಕಂಡು ಜವಾರಿ ಎಮ್ಮಿಗೆ ಖುಷಿಯೋ ಖುಷಿ. ಮತ್ತೆ ತಾಯಿ ಮಗಳಿಬ್ಬರೂ ಒಂದೆ ಮನೆಯಲ್ಲಿ ಜೋಡಾದರು. ತನ್ನವ್ವ ತಂಗಿಗೆ ಜನ್ಮ ಕೊಟ್ಟದ್ದಕ್ಕೆ ಮನಕ ಹಿಗ್ಗಾಯಿತು.
ಜವಾರಿ ಮನಕವೂ ಹ್ವಾದ ಮ್ಯಾಲ ಸಾಂಗ್ಲಿ ಎಮ್ಮಿ ಒಂದೇ ಆಯಿತು. ಅದೇ ಚಿಂತೆಯಲ್ಲಿ ಎರಡು ದಿನ ಸರಿಯಾಗಿ ಮೇವು ತಿನಲಿಲ್ಲ, ನಿದ್ದೆಮಾಡಲಿಲ್ಲ. “ಒಂದೆ ಮನೆಯಲ್ಲಿದ್ದ ಕಳ್ಳುಬಳ್ಳಿ ಕತ್ತರಿಸಿದ ನೋವು” ಅದರ ಮನವನ್ನು ಬಾದಿಸುತ್ತಿತ್ತು.
ಯಂಕವ್ವಳಿಗೆ ಎಮ್ಮೆ ಮೇಸಲು ಹೋಗುವ ಕೆಲಸ ತಪ್ಪಿತು. ಜಗಮಲ್ಲನ ಬೇಟಿಯೂ ದೂರಾಯಿತು.
ಸಾಂಗ್ಲಿ ಎಮ್ಮಿ ಈಗ್ಲೋ ಆಗ್ಲೋ ಇಳಿಯುವ ಸೂಚನೆ ಅವಳಿಗಿತ್ತು. ಹಿಂಗಾಗಿ ದಿನವೂ ಅದರ ಕುಂಡಿ ನೋಡುತ್ತ ಒಳಹೊರಗೆ ಅಡ್ಡಾಡುತ್ತಿದ್ದಳು. ಆ ರಾತ್ರಿ ಸಾಂಗ್ಲಿ ಎಮ್ಮಿ ಏಳುವುದು ಮಲಗುವುದು ಮಾಡುತ್ತಿತ್ತು. ಬ್ಯಾಟ್ರಿ ಹಿಚಗಿ ನೋಡಿದ್ಳು. ಉಚ್ಚಿ ಬುಡ್ಡಿ ಹೊರಗೆ ಬಂದಿತು. ಅದರೊಟ್ಟಿಗೆ ಕಾಲು ಕಾಣಬೇಕಿತ್ತು ಕಾಣಲಿಲ್ಲ. ಆಗ ಯಂಕವ್ವನ ಎದಿ ದಸಕ್ ಅಂದಿತು. ಎಮ್ಮಿ ಭಾಳ ತ್ರಾಸ್ ಮಾಡ್ಕೋತಿತ್ತು. ವಾಂ ವಾಂ ಒದರಾಕತ್ತಿತ್ತು. ಕರಾಗಿರಾ ಅಡ್ಡಗಿಡ್ಡ ಸಿಕ್ಕೈತೇನೋ ಅಂದ್ಕೊಂಡಾಕಿ, ಬ್ಯಾಟ್ರಿ ಹಿಚ್ಚಕ್ಕೊಂದು ತನ್ನ ಸ್ವಾದರ ಮಾವನ ಮನಿಗೆ ಓಡಿದ್ಳು. ಅಕಿ ಮಾವ ಮಲಗಿ “ಗೊರ್ ಗೊರ್” ನಿದ್ದಿ ಹೊಡಿತಿದ್ದ. “ಮಾವಾ ಮಾವಾ” ಎಂದು ಅಂವ್ನ ಅಲಾಗಡ್ಸಿ ನಿದ್ದಿಗೆಡಸಿದ್ಳು. ಅಂವ ಗಾಬರಿಯಾಗಿ ಎದ್ದು ಕುಂತು . “ಯಾಕವ್ವಾ ಇಷ್ಟೊತ್ತನ್ಯಾಗ” ಅನ್ನೂವ ಮಾತು ಬಾಯಿ ತೂದಿಗಿರುವಾಗ್ಲೇ “ಎಮ್ಮಿ ಭಾಳ ತ್ರಾಸ್ ಮಾಡ್ಕೊಳ್ಳಾಕ್ಹತ್ತೇತಿ, ಕರಾ ಅಡ್ಡ ಸಿಕ್ಕಾಂಗೈತಿ” ಅನ್ನುವ ಹೊತ್ತಿಗೆ ಇಬ್ಬರೂ ಅಂವಸ್ರಾ ಮಾಡಿ ಅರ್ಧಾ ದಾರಿ ಬಂದಿದ್ರು.
ಸಾಂಗ್ಲಿ ಎಮ್ಮಿ ಒಂದ ಸವ್ನ ವಾಂ ವಾಂ ಅಂತ ಒದರಿ ನೆಲದ ಮ್ಯಾಲ ಉಳ್ಳಾಡತಿತ್ತು. ತಾಯಿ ಪಡುವ ಕಷ್ಟಾ ನೋಡಿ “ಯಾಕವ್ವಾ ಹಿಂಗ್ಯಾಕ ಮಾಡಾಕತ್ತಿ” ಎಂದು ಸಾಂಗ್ಲಿ ಕರು ಭಯಗೊಂಡು ಅಳುತ್ತಳುತ್ತ ಅವರವ್ವನ ಸಂಕಟಾ ಕೇಳಿತು. “ಹೆಣ್ಣಾಗಿ ಹುಟ್ಟಬಾರ್ದ ಮಗಳಾ, ಈ ನೋವಾ ನನಗ ಸಹಿಸಾಕ ಆಗವಲ್ದು, ಮಗಳ ನಾನು ಉಳಿಯುದಿಲ್ಲವ್ವಾ. ನಿನ್ನ ಪರದೇಶಿ ಮಾಡಿ ಹೊಂಟಿನಿ” ಎಂದು ನರಳುತ್ತ ಕಣ್ಣಲ್ಲೇ ಸಾಂಗ್ಲಿ ಎಮ್ಮಿ ಜೀವಾ ಬಿಟ್ಟಿತು. ಯಂಕವ್ವಾ ಬರುವ ಹೊತ್ತಿಗೆ ಸಾಂಗ್ಲಿ ಎಮ್ಮಿಯ ಕರು ಒಂದೆ ಸವನೇ ಬೋರಿಟ್ಟು ಅಳುತ್ತಿತ್ತು. ಯಂಕವ್ವಾ ತಾನೂ ಅಳುತ್ತ ಆ ಕರುವಿನ ಹತ್ತಿರಕ್ಕೆ ಸರಿದು ಅದರ ಮೈ ಮೇಲೆ ಕೈಯಾಡಿಸುತ್ತ, ಬಿಕ್ಕತೊಡಗಿದಳು. ಮನೆತುಂಬ ಕತ್ತಲಾವರಿಸಿತು.






0 Comments