‘ಸಹಯಾನ ಸಾಹಿತ್ಯೋತ್ಸವ’ದಲ್ಲಿ

‘ಸಹಯಾನ ಸಾಹಿತ್ಯೋತ್ಸವ’
ಮಕ್ಕಳ ಸಾಹಿತ್ಯ: ಹೊಸ ತಲೆಮಾರು

ಚಿತ್ರಗಳು ಮತ್ತು ಬರಹ:

ಕಿರಣ್ ಭಟ್

**

ಪ್ರಗತಿಶೀಲ ಬರಹಗಾರ, ವಿಚಾರವಾದಿಯಾಗಿದ್ದ ಡಾ.ಆರ್. ವಿ.ಭಂಡಾರಿಯವರು ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ತುಂಬ ದೊಡ್ಡದು. ಮಕ್ಕಳ ಸಾಹಿತ್ಯ ಸೂರ್ಯ, ಚಂದ್ರ, ಹಕ್ಕಿಗಳ ನಡುವೆ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿ ಅವರು ನೆಲದ ಮಣ್ಣಿನ ಮಕ್ಕಳ ಕಥೆ ಬರೆದರು. ನಮ್ಮ ನಡುವೆ ಬದುಕಿರುವ ಮಕ್ಕಳ ಸಂವೇದನೆಗಳಿಗೆ ದನಿಯಾದರು.‌ ಕವಿತೆ, ಕತೆ, ನಾಟಕ, ಕಾದಂಬರಿ ಬರೆದರು. ಕನ್ನಡದ ಮಕ್ಕಳ ಸಾಹಿತ್ಯ ನಡೆದ ಹಾದಿಯನ್ನು ಆರ್.ವಿ ಯವರಿಲ್ಲದೇ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಇಂಥ ಆರ್ ವಿ ಯವರ ಮನೆಯಂಗಳದಲ್ಲಿ, ಅವರ ನೆನಪಿನ ಸಂಸ್ಕೃತಿ ಕೇಂದ್ರ ‘ಸಹಯಾನ’ ಇಡಿಯ ದಿನ ಮಕ್ಕಳ ಸಾಹಿತ್ಯದ ಕುರಿತು ಸಾಹಿತ್ಯೋತ್ಸವ ನಡೆಸಿತು. ಸಹಯಾನದ ಮನೆಯಂಗಳದಲ್ಲಿ ಪ್ರತಿ ವರ್ಷ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯೋತ್ಸವ ನಡೆಸಲಾಗುತ್ತದೆ.‌ಇದು ಹದಿಮೂರನೆಯ ಸಾಹಿತ್ಯೋತ್ಸವ.

ಉದ್ಘಾಟನೆ:

ಉದ್ಘಾಟಿಸಿದವರು ಹಿರಿಯ ಮಕ್ಕಳ‌ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡಮಿ‌ ಪ್ರಶಸ್ತಿ ‌ಪಡೆದ ತಮ್ಮಣ್ಣ ಬೀಗಾರ್. ಕನ್ನಡ ಮಕ್ಕಳ‌ ಸಾಹಿತ್ಯ ದ ನಡೆಯನ್ನು ಗುರುತಿಸುತ್ತ, ಮಕ್ಕಳ ಸಾಹಿತಿಗಳ ಕೊಡುಗೆಯನ್ನೂ ಆರ್.ವಿ ಭಂಡಾರಿಯವರ ಕೊಡುಗೆಯನ್ನೂ ನೆನಪಿಸಿಕೊಳ್ಳುತ್ತ ಅವರು ಮುಂದೆ ನಡೆಯಬೇಕಾದ ಚರ್ಚೆಗೆ ಬಾಗಿಲು ತೆರೆದರು.

ಕಾರ್ಯಕ್ರಮ ದ ಅತಿಥಿಗಳಾಗಿದ್ದ ಕವಿ, ಮಕ್ಕಳ ಸಾಹಿತಿ ವಿಜಯಶ್ರೀ ಹಾಲಾಡಿ, ಬಾಲ್ಯದ ಅನುಭವಗಳೇ ಸಾಹಿತ್ಯವಾಗುವ ಕುರಿತು ಹೇಳುತ್ತ, ತಮ್ಮ ಬಾಲ್ಯದ ಅನುಭವಗಳ ಹಿನ್ನೆಲೆಯಲ್ಲಿ ಮಕ್ಕಳ ಕವನಗಳು, ಕತೆಗಳು ಹುಟ್ಟಿಕೊಂಡ ಬಗೆಯನ್ನು ವಿವರಿಸಿದರು. ಸಾಹಿತ್ಯೋತ್ಸವದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ಮಕ್ಕಳ ಸಾಹಿತ್ಯ ತಜ್ಞ ಆನಂದ ಪಾಟೀಲ್ ಮಕ್ಕಳ ಸಾಹಿತ್ಯದ ಜಾಗತಿಕವಾದ ಕೃತಿಗಳನ್ನು ಉದಾಹರಿಸುತ್ತ ಮಕ್ಕಳ ಸಾಹಿತ್ಯವೆಂದರೆ ಏನು ಎನ್ನುವ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಿದರು.

‘ ಬಾಲ್ಯ ನನ್ನನ್ನು ತುಂಬ ಕಾಡಬೇಕು. ನಾನು ಮತ್ತೆ ಮತ್ತೆ ಬಾಲ್ಯಕ್ಕೆ ಹೋಗಬೇಕು. ಬಾಲ್ಯ ನನಗೆ ಏನೆಲ್ಲ ಕೊಟ್ಟಿದೆ ಎನ್ನೋದು ನನಗೆ ಗೊತ್ತಾಬೇಕು. ಅದಕ್ಕೇ ಬರೆಯಬೇಕು. ನಾನು ನನಗಾಗಿ ಬರೆಯಬೇಕು’ ಎಂದರು. ಕನ್ನಡದ ಮಕ್ಕಳ ಸಾಹತ್ಯ ಸಾಹಿತ್ಯ ದ ಪ್ರಮುಖ ಧಾರೆಯಲ್ಲಿ ಗುರುತಿಸಲ್ಪಡಬೇಕು. ಎಂದರು. ಮಕ್ಕಳ ಸಾಹಿತ್ಯದ ಈ ಮೂರನೆಯ ಹಂತ ದಲ್ಲಿ ಮಕ್ಕಳ ಸಾಹಿತ್ಯ ದ ಪ್ರಮುಖ ಕೃತಿಗಳು ಬರುತ್ತಿರುವದರ ಕುರಿತು ಸಂತಸಪಟ್ಟರು.

ಕವಿ, ಮಾಧವಿ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಭಟ್ ಆರ್. ವಿ ಯವರ ಕೃತಿಗಳನ್ನು ನೆನೆಸಿಕೊಂಡರು.
ಇಂದಿರಾ ಭಂಡಾರಿ ವೇದಿಕೆಯಲ್ಲಿದ್ದರು.

ಮಕ್ಕಳ ಕಾವ್ಯರಂಗ

ಮಕ್ಕಳ ಕಾವ್ಯರಂಗವೆಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಕ್ಕಳು ಕನ್ನಡದ ಆಯ್ದ ಹತ್ತು ಮಕ್ಕಳ ಕವನಗಳನ್ನ ಸಾಭಿನಯವಾಗಿ ವಾಚಿಸಿದರು. ಸಂಗೀತದೊಂದಿಗೆ ಮಕ್ಕಳು ಸೊಗಸಾಗಿ ಕವನಗಳನ್ನ ಓದಿದ ಈ ಕಾರ್ಯಕ್ರಮ ವಿಶಿಷ್ಟವಾದದ್ದು. ಶ್ರೀನಿವಾಸ ನಾಯ್ಕ ಕಾವ್ಯರಂಗ ದ ನಿರ್ದೇಶಕರು. ಖ್ಯಾತ ಸಂಗೀತಗಾರ ಶ್ರೀಧರ ಹೆಗಡೆ ಕಲಬಾಗ್ ಕಾರ್ಯಕ್ರಮಕ್ಕೆ ಸಂಗೀತ ನೀಡಿದರು.

ಚಿಂತಕರಾದ ವಾಣಿ ಪೆರಿಯೋಡಿ ಅತಿಥಿಗಳಾಗಿದ್ದರು. ಮಹಾಶ್ವೇತಾದೇವಿಯವರ ‘ ಯಾಕೆ ಯಾಕೆ ಹುಡುಗಿ’ ಕತೆಯಿಂದ ಪ್ರಾರಂಭಿಸಿ ಮಕ್ಕಳ ಜೊತೆಗಿನ ಸ್ವಾರಸ್ಯಕರ ಅನುಭವಗಳನ್ನ ಹೇಳಿದರು. ಮಕ್ಕಳ ಜೊತೆ ಕುಳಿತು ನಾವೂ ಓದುವದು ತುಂಬ ಮುಖ್ಯ’ ಎಂದರು. ಅನಂತ ನಾಯ್ಕ್ ಪುಸ್ತಕ ವಿತರಿಸಿದರು

  • ಮಕ್ಕಳ ಸಾಹಿತ್ಯ

ಈ ಗೋಷ್ಠಿಯಲ್ಲಿ ಡಾ. ಮಾಧುಪ್ರಸಾದ್ ಹುಣಸೂರು ‘ ಕನ್ನಡ ಮಕ್ಕಳ ಸಾಹಿತ್ಯ ಪರಂಪರೆ’ ಯ ಕುರಿತು ಮಾತನಾಡುತ್ತ ಅನುವಾದ ಸಾಹಿತ್ಯ ದಿಂದ ಮೊದಲುಗೊಂಡು ಇತ್ತೀಚಿನ ಸೃಜನಶೀಲ ಕನ್ನಡದ ಮಕ್ಕಳ ಸಾಹಿತ್ಯ ಬೆಳೆದು ಬಂದ ವಿವಿಧ ಘಟ್ಟಗಳನ್ನು ಗುರುತಿಸಿದರು. ಮಕ್ಕಳ ಸಾಹಿತ್ಯ ಮುಕ್ತತೆಯನ್ನು ಅನುಭವಿಸಬೇಕು’ ಎಂದರು.

‘ಮಕ್ಕಳ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳ ಮೇಲೆ ಬೆಳಕು ಚೆಲ್ಲಿದವರು ಸಾಹಿತಿ ರೇಣುಕಾಪ್ರಸಾದ್ ಕೆ. ಎಸ್. ‘ ಎಂಭತ್ತರ ಈಚೆಯ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ ಮಾದರಿಗಳಿಂದ ಬಿಡಿಸಿಕೊಂಡು ಹೊಸ ಮಾದರಿಗಳಿಗೆ ನೀರೆರೆಯುವ ಕೆಲಸವಾಗಿದೆ. ಭಾಷೆ ಮತ್ತು ವಿನ್ಯಾಸದಲ್ಲಿ ಬದಲಾವಣೆಗಳಾಗಿವೆ. ಮಕ್ಕಳ ಬಾಲ್ಯದ ಪರಿಸರದ, ಅವರ ಬಾಲ್ಯವೇ ಅನಾವರಣವಾಗುವ ಸಾಹಿತ್ಯ ಬರುತ್ತಿದೆ’ ಎಂದರು. ಛಾಯಾ ಐ ಕೆ. ನಿರೂಪಿಸಿದರು.

  • ಕವಿಸಮಯ

ಕವಿಸಮಯ ದಲ್ಲಿ ಕಲ್ಪನಾ ಸೋಮನಹಳ್ಳಿ, ಪಿ.ಆರ್ ನಾಯ್ಕ್, ಬೈಲೂರು ವೆಂಕಟೇಶ, ರೇಖಾ ಭಟ್, ರಾಜಾ ಎಂ.ಬಿ, ಸೋಮಲಿಂಗ ಬೇಡರ್ , ಸಾತು ಗೌಡ ಕೇಣಿ, ಲತಾ ಗೌಡ, ಅಶೋಕ ಬಳ್ಳ ಕವನಗಳನ್ನ ಓದಿದರು.

ಆಶಯದ ನುಡಿಗಳನ್ನಾಡಿದ ಕವಿ ವಿನಾಯಕ ಕಮತದ, ‘ಚೆಲ್ಲಾಪಿಲ್ಲಿಯಾದ ಪುಸ್ತಕಗಳು, ಚೆಲ್ಲಿದ ಇಂಕು, ಹೊರಗೆ ಬಂದ ಬಣ್ಣ ಗಳ ಜೊತೆ ಮಗು ಸ್ವಚ್ಛಂದವಾಗಿ ಆಡುತ್ತಿತ್ತು. ಹೊರಗಿನಿಂದ ಬಂದ ಅಪ್ಪ ಏನಿದು ಗಲೀಜು ಎಂದ. ಮಗು ಬರೆದ ಕಾವ್ಯ ಅಳಿಸಿಹೋಯಿತು. ಅಪ್ಪ ಹೊಸ ಕಾವ್ಯ ಬರೆದ. ಕಾವ್ಯವಾಗಲಿಲ್ಲ’ ಎನ್ನುವ ರೂಪಕದೊಂದಿಗೆ ಮಕ್ಕಳ ಕಾವ್ಯದ ಸ್ಥಿತಿ ಗತಿ ವಿವರಿಸಿದರು. ಕವಿ ಕಾವ್ಯ ಮನ್ಮನೆ ನಿರೂಪಿಸಿದರು.

ಸಮಾರೋಪ

ಕವಿ ಬಸು ಬೇವಿನಗಿಡದ ಸಮಾರೋಪ ಭಾಷಣ ಮಾಡಿದರು.’ ಮಕ್ಕಳಲ್ಲಿ ಸ್ವ ಕಲಿಕೆಯ ಗುಣವಿರುತ್ತದೆ. ಆ ಸ್ವ ಕಲಿಕೆಯ ಗುಣವನ್ನು ವೃದ್ಧಿಸುವ ಕೆಲಸವನ್ನು ಪಾಲಕರು, ಪೋಷಕರು, ಶಿಕ್ಷಕರು ಮಾಡಬೇಕಿದೆ. ಸಾಹಿತ್ಯ ವನ್ನೋದಿದ ಮಕ್ಕಳು ತಮ್ಮಲ್ಲೇ ಶೋಧನೆ ಮಾಡಿಕೊಳ್ಳುವಂತೆ ಮಾಡುವ ಅಗತ್ಯ ಕೂಡ ಇದೆ ಎಂದರು.

ಪ್ರತಿ ಗೋಷ್ಠಿಯ ಕೊನೆಯಲ್ಲೂ ಗೋಷ್ಠಿಯ ಕುರಿತು ತಮ್ಮ ವಿಚಾರಗಳನ್ನ ಸೇರಿಸುತ್ತ ಬಂದ ಸರ್ವಾಧ್ಯಕ್ಷ ಆನಂದ ಪಾಟೀಲ್ ಕೊನೆಯಲ್ಲಿ ಸರ್ವಾಧ್ಯಕ್ಷತೆಯ ಭಾಷಣ ಮಾಡಿದರು. ಯಮುನಾ ಗಾಂವ್ಕರ್ ನಿರ್ವಹಿಸಿದರು

  • ತಾಳಮದ್ದಳೆ

ಸುಗ್ರೀವ ಸಖ್ಯ
ದಿ. ಗಜಾನನ ಭಟ್ಟ ( ಧಾರೇಶ್ವರ ಮಾಸ್ತರ್) ರ ನೆನಪಿನ ತಾಳಮದ್ದಳೆ.

ಮಕ್ಕಳೆಲ್ಲ ಸೇರಿ ತಾಳಮದ್ದಳೆಯೊಂದನ್ನು ನಡೆಸಿಕೊಡುತ್ತಾರೆ ಎಂದಾಗ ನಿಜಕ್ಕೂ ಕುತೂಹಲವಿತ್ತು. ಮಾತುಗಳದೇ ಕಲೆಯಾಗಿರುವ ಈ ಪ್ರಕಾರವನ್ನು ಮಕ್ಕಳು ಹೇಗೆ ನಿರ್ವಹಿಸಿಯಾರು ಎನ್ನುವ ಕುತೂಹಲ.

ಇಂಥ ಕುತೂಹಲಕ್ಕೊಂದು ಚಂದದ ಉತ್ತರವೋ ಎಂಬಂತೆ ಅಳ್ಳಂಕಿಯ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ‘ ಸುಗ್ರೀವ ಸಖ್ಯ’ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಪದ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತ ಅಗತ್ಯವಿದ್ದಲ್ಲಿ ಹಸ್ತಾಭಿನಯವನ್ನೂ ಮಾಡುತ್ತ ಈ ಮಕ್ಕಳು ಪದಗಳಿಗೆ ಭಾವ ತುಂಬಿದರು. ಸಿದ್ಧವಾದ ಮಾತುಗಳ ಪಠ್ಯವಾದರೂ ಅವರು ಅದನ್ನ ನಿರರ್ಗಳವಾಗಿ, ತುಂಬ ಶಿಸ್ತಿನಿಂದ ನಿರೂಪಿಸಿದ ರೀತಿ ಮೆಚ್ಚುವಂತಿತ್ತು. ನಿಜಕ್ಕೂ ಒಂದು ಮಾದರಿ ತಾಳಮದ್ದಳೆಯಂತಿತ್ತು.

ಸುಗ್ರೀವ, ರಾಮ ರ ಪಾತ್ರವನ್ನು ಎರಡು ಹಂತಗಳಲ್ಲಿ ಇಬ್ಬರು ಬೇರೆ ಬೇರೆ ಮಕ್ಕಳು ನಿರ್ವಹಿಸಿದರು. ಹನುಮಂತನ ಮಾತುಗಳಲ್ಲಿನ ಚುರುಕುತನ, ಸುಗ್ರೀವ, ರಾಮ, ಹನುಮರ ಸಾಭಿನಯ ಮಾತುಗಾರಿಕೆ ಗಮನ ಸೆಳೆಯಿತು. ರಂಗಭೂಮಿ, ಯಕ್ಷಗಾನ ಕಲಾವಿದ ವಿನಾಯಕ ಎಂ.ಎಸ್ ಈ ತಾಳಮದ್ದಳೆಯನ್ನು ನಿರ್ದೇಶಿಸಿದವರು. ಶ್ರೀನಿವಾಸ ನಾಯ್ಕ್ ನಿರ್ವಹಿಸಿದರು. ಮಾರುತಿ ನಾಯ್ಕ್ ಬೈಲಗದ್ದೆ ಮಕ್ಕಳನ್ನ ಹುರಿದುಂಬಿಸುತ್ತ ಭಾಗವತಿಕೆ ಮಾಡಿದರು. ಮದ್ದಳೆಗಾರ ಮಂಜುನಾಥ ಭಂಡಾರಿ ಕಡತೋಕ ಬೆರಳ್ಚಳಕ ತೋರಿದರು. ನವೀನ್ ಹಾಸನ ಪುಸ್ತಕ ವಿತರಿಸಿದರು

*ಯಕ್ಷ ಹೆಜ್ಜೆ

ಹಿರಿಯ ಯಕ್ಷಗಾನ ಕಲಾವಿದ, ನೂರಾರು ಮಕ್ಕಳಿಗೆ ಯಕ್ಷಗಾನ ಕಲಿಸಿದ ಗಣೇಶ ಭಂಡಾರಿ ಯವರ ನಿರ್ದೇಶನದಲ್ಲಿ
ಅದಿತಿ ಭಂಡಾರಿ ಮತ್ತು ಶ್ವೇತಾ ಭಂಡಾರಿ. ಸುಧನ್ವ ಕಾಳಗ ದ ಕೆಲವು ಪದ್ಯಗಳಿಗೆ ತುಂಬ ಸೊಗಸಾಗಿ ಹೆಜ್ಜೆ ಹಾಗಿದರು. ಅಭಿನಯ ತುಂಬ ಚೆನ್ನಾಗಿತ್ತು.

ಬಹುಷ: ಕನ್ನಡದ ಮಕ್ಕಳ ಸಾಹಿತ್ಯದ ಕುರಿತು ವಿಸ್ತೃತವಾಗಿ ಚರ್ಚಿಸಿದ ಮೊದಲ ವಿಶಿಷ್ಟ ಕಾರ್ಯಕ್ರಮ ಇದು.

‍ಲೇಖಕರು avadhi

January 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: