ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಹಯಾನ ಸಾಹಿತ್ಯೋತ್ಸವ: ಅಲ್ಲಿ ಅರಿವಿನ ಬೀಜವಿತ್ತು

ನಾಗರಾಜ್ ಹರಪನಹಳ್ಳಿ

ಅಲ್ಲಿಂದ ಕಾಂತ್ರಿಯ ಬೀಜಗಳನ್ನ ತರಲಾಯಿತು. ವೈಚಾರಿಕತೆಯ ಭೂಮಿಯಲ್ಲಿ ಬಿತ್ತಲು. ಜಾಗತೀಕರಣ ,ಖಾಸಗೀಕರಣ ಮತ್ತು ಜಾಹೀರಾತಿಕರಣದ ಅಪಾಯಗಳನ್ನು ಚರ್ಚಿಸುತ್ತಲೇ, ಕೋಮುವಾದವನ್ನು ಸದಾ ಪ್ರತಿಭಟಿಸುವ, ಅಸಮಾನತೆಯ ವಿರುದ್ಧ ಸದಾ ಸೆಣಸುವ , ಹೋರಾಟದ ಕಾವನ್ನು ಉಳಿಸಿಕೊಳ್ಳುವ ಪಣ ತೊಡಲಾಯಿತು. ಕರ್ನಾಟಕದ ಮನಸುಗಳು ಎಂದಿಗೂ ಜನಪರ ಮತ್ತು ಜೀವಪರ ಎಂಬ ತತ್ವದಡಿ ಅಲ್ಲೊಂದು ಅನುಭವ ಮಂಟಪವೇ ಹೊಸರೂಪ ತಳೆಯಿತು.

ಹೊನ್ನಾವರದಿಂದ 10 ಕಿಲೋಮೀಟರ್  ದೂರದಲ್ಲಿರುವ ಪುಟ್ಟಗ್ರಾಮ ಕೆರೆಕೋಣ ಮೇ.26 ರಂದು ಸುದ್ದಿಯಾಯಿತು. ಅಂದು ಮಹತ್ವದ ದಿನವಾಗಿ ಕರ್ನಾಟಕದ ಚರಿತ್ರೆಯಲ್ಲಿ ದಾಖಲಾಯಿತು. ಕೆರೆಕೋಣ ದಿವಂಗತ ಸಾಹಿತಿ ಆರ್.ವಿ.ಭಂಡಾರಿ ಅವರು ಬದುಕಿದ್ದಗ್ರಾಮ. ಅವರ ನಂತರವೂ ಅಲ್ಲಿ ವೈಚಾರಿಕ ಬೀಜಗಳನ್ನು ಬಿತ್ತಲು ಮತ್ತು ರಾಜ್ಯದ ವಿವಿದೆಡೆಗೆ ಭಂಡಾರಿ ಅವರ ಕನಸುಗಳನ್ನು ಕಳುಹಿಸಲು ಸಹಯಾನ ಸಾಂಸ್ಕೃತಿ ಉತ್ಸವ ಅವರ ನೆನಪಿನಲ್ಲಿ ನಡೆಯಿತು. ಅಲ್ಲಿ ಹಾಡು, ಕಾಂತ್ರಿಗೀತೆ, ವೈಚಾರಿಕಚರ್ಚೆ, ಬದುಕಿನ ಮುನ್ನೋಟದ ಹೊಳಹು ನೀಡುವ ಭಾಷಣ, ಕವಿಗೋಷ್ಠಿ, ಪುಸ್ತಕ ವಿತರಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು..

ಪುಟ್ಟಗ್ರಾಮ ಕೆರೆಕೋಣಕ್ಕೆ ಕರ್ನಾಟಕದ ಗುಲ್ಬರ್ಗಾ. ಮಂಗಳೂರು, ಮೈಸೂರು, ಬೆಂಗಳೂರು, ಬೆಳಗಾವಿ, ಕಾರವಾರ, ಶಿವಮೊಗ್ಗ ಹೀಗೆ ನಾನಾ ಭಾಗಗಳಿಂದ ಸಾಹಿತಿಗಳು, ಬರಹಗಾರರು, ಎಡಪಂಥೀಯರು, ಚಿಂತಕರು ಆಗಮಿಸಿ, ಕರ್ನಾಟಕದಲ್ಲಿ ಹೊಸ ತಲೆಮಾರಿಗೆ ಚಳುವಳಿಯ ಹಾದಿಯನ್ನುತೋರಿಸುವುದು ಹೇಗೆ? ಚಳುವಳಿಗಳನ್ನು ಜೀವಂತ ಇಡುವುದು ಹೇಗೆ? ಚಳುವಳಿಗಳ ಸೈದ್ಧಾಂತಿಕ ಸ್ವರೂಪ ಕುರಿತು ಚರ್ಚಿಸಲಾಯಿತು. ಮಹಿಳಾ ಹೋರಾಟಗಾರ್ತಿಯರಾದ ಕೆ.ನೀಲಾ, ಸಿಐಟಿಯು ಸಂಘಟನೆಯ ಲಕ್ಷ್ಮಿ, ಕಾಮ್ರೆಡ್ ಮುನಾಗಾಂವ್ಕರ್ , ಕೆ,ಎಸ್.ವಿಮಲಾ, ಸಂವೇದನಾಶೀಲ ಬರಹಗಾರ್ತಿ ಅನುಪಮ, ಕವಯತ್ರಿ ಸಬಿತಾ ಬನ್ನಾಡಿ, ಎಚ್.ಎನ್. ಆರತಿ, ಹಿರಿಯರಾದ ವಿಷ್ಣು ನಾಯ್ಕ, ಬರಗೂರು ರಾಮಚಂದ್ರಪ್ಪ, ಸತೀಶ್ ಕುಲಕರ್ಣಿ, ವಸಂತರಾಜ್ ಹೀಗೆ ಹತ್ತು ಹಲವು ಜನ ಪ್ರಗತಿಪರರು ವಿಚಾರ ಮಂಡಿಸಿ ಹೊಸ ದಿಕ್ಕು ತೋರಿಸುವ ಕಾರ್ಯ ಮಾಡಿದರು. ಸಮುದಾಯದಿಂದ ಬಂದ ಹಾಡುಗಾರ ಮೈಸೂರಿನ ಜನ್ನಿ ಕ್ರಾಂತಿಗೀತೆ ಹಾಡಿ ಸಮಾವೇಶದಲ್ಲಿದ್ದ ಪ್ರಗತಿಪರ ಮನಸ್ಸುಗಳನ್ನು ಎಚ್ಚರಿಸಿದರು.

ಆರ್.ವಿ. ಭಂಡಾರಿ ತಣ್ಣಗೆಯ ಊರಲ್ಲಿ ಉರಿವ ನಿಗಿ ನಿಗಿ ಕೆಂಡದಂತೆ ಬದುಕಿದ್ದರು ಎಂಬುದನ್ನು ಸೂಕ್ಷ್ಮವಾಗಿ ವಿವರಿಸಲಾಯಿತು. ಅವರ ಮನಸ್ಸು ವೈಚಾರಿಕತೆಗೆತುಡಿಯುತ್ತಿದ್ದ ಬಗೆಯನ್ನು ಸ್ಮರಿಸಲಾಯಿತು.

ಬಿಸಿ ಬಿಸಿ ಚರ್ಚೆಗೆ ಮುನ್ನುಡಿ:

ಆರಂಭದಲ್ಲಿ ವಿಮರ್ಶಕ ಎಂ.ಜಿ.ಹೆಗಡೆ ಕರ್ನಾಟಕದಲ್ಲಿ ಚಳುವಳಿಗಳು ವಿಘಟನೆಗೊಳ್ಳುತ್ತಿರುವುದು ಉದ್ಯಮಿಗಳಿಗೆ, ಖಾಸಗೀಕರಣಕ್ಕೆ ಭೂಮಿ ಹಾಗೂ ವಾತಾವರಣ ಫಲವತ್ತಾಗುತ್ತಿದೆಎಂದು ನುಡಿದ ಮಾತು ತಣ್ಣಗೆ ಹರಿವ ನದಿಯಲ್ಲಿ ಕಲ್ಲು ಎಸೆದಂತಾಯಿತು. ಸಹಯಾನದ ಚಿಂತನೆಯ ವಿಷಯದಲ್ಲಿ ಕೀ ನೋಟ್ ಆಡ್ರೆಸ್ ಸ್ವರೂಪದಲ್ಲಿ ಮಾತನಾಡಿದ ಡಾ.ಬರಗೂರು ರಾಮಚಂದ್ರಪ್ಪ ಚಳುವಳಿಗಳೇ ಇಲ್ಲದ ಸಮಯ ಬರೆಯಲು ಹೆಚ್ಚು ಸೂಕ್ತ ಎಂದು ಕೆಲವರು ಭಾವಿಸಿದಂತಿದೆ. ಅದು ಭ್ರಮೆ. ಚಳುವಳಿಗಳು ಮುಗಿದೇ ಹೋದವು ಎಂಬುದರ ಮರಣೋತ್ತರ ಪರೀಕ್ಷೆ ಮಾಡಲು ವಿಮರ್ಶಕರು ಶಸ್ತ್ರಸಜ್ಜಿತರಾಗಿ ನಿಂತಿದ್ದಾರೆ. ಆದರೆ ಚಳುವಳಿಗಳು ಸತ್ತಿಲ್ಲ. ಚಳುವಳಿಗಳು ಇಲ್ಲದ ಸನ್ನಿವೇಶ ಕಲ್ಪಿಸಲು ಅಸಾಧ್ಯ. ಆದರೆ ಚಳುವಳಿಗಳು ಸೈದ್ಧಾಂತಿಕ ಸವಾಲು ಎದುರಿಸುತ್ತವೆ. ವಿಘಟನೆ ಮಾಡುವ ಶಕ್ತಿಗಳನ್ನು ಅರಿತು ಮತ್ತಷ್ಟು ಸಂಘಟಿತರಾಗಬೇಕಿದೆ ಎಂದರು. ಜಾಹೀರಾತಿಕರಣದ ಮೂಲಕ ಆದರ್ಶಗಳ ಕಲ್ಪನೆ ಬದಲಾಗುತ್ತಿದೆ. ಮಾನವೀಯ ನೆಲೆ ಮತ್ತು ಎಚ್ಚರದ ಹೋರಾಟಗಳನ್ನು ಮರಳಿ ಕಟ್ಟಿಕೊಳ್ಳಬೇಕಿದೆ. ಧರ್ಮದ ಅಪವ್ಯಾಖ್ಯಾನಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಹಸಿದ ಭಾರತ :

ಹಸಿದ ಭಾರತ ಮತ್ತು ಹೊಟ್ಟೆತುಂಬಿದವರ ಇಂಡಿಯಾ ನಮ್ಮೆದುರು ಇದೆ. ಆರ್ಥಿಕ ನಾಯಕತ್ವದ ಎದುರು ರಾಜಕೀಯ ನಾಯಕತ್ವ ಮಂಡಿಯೂರಿ ಕುಳಿತ ಸ್ಥಿತಿ ಸನ್ನಿವೇಶವನ್ನು ನಾವು ಎದುರಿಸಬೇಕಾಗಿದೆ. ಭೂಮಿ ಮತ್ತು ಕೃಷಿಯನ್ನು ಉಳಿಸಿಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಬೇಕಿದೆ. ಕೃಷಿಯ ಜಾಗವನ್ನು ಕೈಗಾರಿಕೆಗಳು ಆವರಿಸಿದಾಗ ಎಲ್ಲಾ ವರ್ಗದ ಜನ ಕಾರ್ಮಿಕರ ರೂಪದಲ್ಲಿ ಸಂಘಟಿತರಾಗಿ ಹೊಸ ರೀತಿಯ ಹೋರಾಟ ರೂಪಿಸಿಕೊಂಡಿದ್ದರು. ಸರ್ಕಾರಿ ಕೈಗಾರಿಕೆಗಳ ಜಾಗವನ್ನು ಖಾಸಗೀಕರಣ ಮತ್ತು ಏಕಮುಖಿ ಉದ್ಯಮಿಗಳು ಮತ್ತು ಏಕ ಧರ್ಮ, ಏಕ ಸಂಸ್ಕೃತಿ ಪ್ರತಿಪಾದಕರು ಆಕ್ರಮಿಸಿಕೊಂಡಾಗ ಬಹುಮುಖಿ ಭಾರತ ಎದುರಿಸುವ ಅಪಾಯವನ್ನುಅರ್ಥಪೂರ್ಣವಾಗಿ ಬರಗೂರು ವಿವರಿಸಿದರು. ಬೇಡರಕಣ್ಣಪ್ಪ ಮತ್ತು ಶಬರಿ ಅಂಥವರ ಭಕ್ತಿಯ ಮಾದರಿಗಳು ನಮ್ಮ ಆದರ್ಶಗಳಾಗಬೇಕು. ಶಿಕ್ಷಕರಿಗೆ ಮನೆ ಕಟ್ಟಿಕೊಡುತ್ತಿದ್ದ ವಿದ್ಯಾರ್ಥಿಗಳು (ಸೂಲ್ಕ ಮಾಸ್ಟರ್ ಸಿನಿಮಾದ) ಆದರ್ಶ. ಆದರೆ ಇಂದು ಈ ಆದರ್ಶವನ್ನ ಮನೆಯೊಂದರ ಮೇಲೆ ಬಾಂಬ್ ಬೀಳುವಾಗ ಸಿಳ್ಳೆ ಹಾಕುವ ಮನೋಧರ್ಮ ಆದರ್ಶವಾಗಿ ಬಿಟ್ಟಿದೆ. ಈ ಅಪಾಯಗಳನ್ನು ಯುವಜನತೆಗೆ ತಿಳಿಸಿಕೊಡಬೇಕಿದೆ. ಹಣವೇ ಆದರ್ಶ ಎಂಬ ಅವಿವೇಕಿತನವನ್ನುದೂರಮಾಡಬೇಕಿದೆಎಂದು ಬರಗೂರು ನುಡಿದರು.

ಕರ್ನಾಟಕದ ಚಳುವಳಿಗಳು ನಡೆದು ಬಂದ ದಾರಿ, ಅವುಗಳ ವೈಫಲ್ಯತೆ ಮತ್ತು ಮುಂದಿನ ಹೋರಾಟದ ಸ್ವರೂಪಗಳ ಕುರಿತು ಎಂ.ಡಿ.ವಕ್ಕುಂದ ಮಾತನಾಡಿದರು. ಅವರ ಮಾತಿನಲ್ಲಿ ವಚನ ಸಾಹಿತ್ಯದ ಮಾದರಿಯನ್ನು ಮರಳಿ ಕಟ್ಟುವ ಹೊಳಹು ಇತ್ತು. ಬರಹಗಾರ್ತಿ ಡಾ.ಎಚ್.ಎಸ್. ಅನುಪಮಾ ಸಂಶೋಧನೆಯ ಹೆಸರಲ್ಲಿ ವಚನ ಸಾಹಿತ್ಯದ ಅಪವ್ಯಾಖ್ಯಾನವನ್ನು ಟೀಕಿಸಿದರು. ಯುವಜನರನ್ನು ಚಳುವಳಿಯತ್ತ ತರಬೇಕಾದ ಭಾಷೆ ಮತ್ತು ಅವರನ್ನುಜನಪರ ಹೋರಾಟಗಳತ್ತ ಸೆಳೆಯುವ ಬಗೆ ಹೇಗೆ ಎಂಬ ಪ್ರಶ್ನೆಎತ್ತಿದರು. ಹೋರಾಟಗಾರ್ತಿ ಲಕ್ಷ್ಮಿಆಧುನಿಕ ಕುಟುಂಬಗಳ ವಿಘಟನೆಕುರಿತು, ಮಕ್ಕಳ ಸಮಸ್ಯೆಕುರಿತು ಬಹುಮುಖ್ಯ ಪ್ರಶ್ನೆಗಳನ್ನ ಎತ್ತಿದರು. ಇದಕ್ಕೆಕಾರಣ ಮಾದ್ಯಮಗಳಲ್ಲಿನ ಜಾಹೀರಾತು ಹುಸಿ ಜಗತ್ತು ಮತ್ತು ಸಮಾಜಮುಖಿ ಅಲ್ಲದ ದೃಶ್ಯ ಮಾದ್ಯಮಗಳ ಹೊಣೆಯತ್ತ ಬೆರಳು ತೋರಿಸಿದರು. ಜನವಾದಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ಕೆ.ನೀಲಾ ` ದುಡಿವ ಮಹಿಳೆಯರ ಸಮಸ್ಯೆ, ಕಟ್ಟಡಕಾರ್ಮಿಕರ ಬದುಕು ಮತ್ತು ಹಸಿ ಕಡಲೆ ಬೀಜ ಬೆಳೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಗುಲ್ಬರ್ಗಾದ ಮಹಿಳೆಯರು ಸಾಧಿಸಿದ ಯಶಸ್ಸು ಉದಾರೀಕರಣದ ಮಾರುಕಟ್ಟೆಗೆ ಹೇಗೆ ಪ್ರತಿಸ್ಪರ್ಧಿಯಾಗಬಲ್ಲದು’ ಎಂದು ವಿವರಿಸಿದರು. ಬರಗೂರು ಬೀಜ, ಕೆ.ನೀಲಾ ಅವರ ಬೆಳಕಿನ ಮಾತುಗಳು ಸಹಯಾನದಲ್ಲಿ ನೆನಪಿನಲ್ಲಿ ಉಳಿಯುವಂತಿದ್ದವು. ಸಂವಾದದಲ್ಲಿ ಕವಿ ಬಸವರಾಜ ಸೂಳೆಬಾವಿ, ಶ್ರೀಪಾದ ಭಟ್ ಸೇರಿದಂತೆ ಹಲವರು ಗಮನಸೆಳೆದರು.

ಸಹಯಾನ ಸಂಘಟಿಸಿದ್ದ ಉಪನ್ಯಾಸಕ ವಿಠ್ಠಲ ಭಂಡಾರಿ ಕರ್ನಾಟಕದ ವಿವಿಧ ಮೂಲೆಗಳಿಗೆ ವೈಚಾರಿಕ ಬೀಜಗಳನ್ನು ಹಂಚಿದರು. ಕವಿತೆ ಓದು ದೃಶ್ಯಕಾವ್ಯ ಕಾರ್ಯಕ್ರಮದಲ್ಲಿ ಕೊನೆಯ ನೆನಪಿನ ಕೊಂಡಿಯಾಯಿತು.ಕೆರೆಕೋಣದ ನೆನಪುಗಳ ಮಾಲೆಹೊತ್ತು ಹೊಸ ಕರ್ನಾಟಕದ ಕನಸು ಕಾಣುತ್ತಾ ನಾವು (ಕವಿ ಮಿತ್ರರಾದಗಣೇಶ್ ಹೆಗಡೆ ಹೊಸ್ಮನೆ , ಹನುಮಂತ ಹಾಲಗೇರಿ) ಕಾರವಾರಕ್ಕೆ ಮರಳಿದ್ದೆವು.

 
 
 
 

‍ಲೇಖಕರು avadhi

4 June, 2013

4 Comments

  1. ಹನುಮಂತ ಹಾಲಿಗೇರಿ

    ಇತ್ತೀಚೆಗೆ ಅಟೆಂಡ್‍ ಮಾಡಿದ ಕಾರ್ಯಕ್ರಮಗಳಲ್ಲಿ ಎದೆಗಿಳಿದ ಕಾರ್ಯಕ್ರಮ, ಅರಿವಿನ ಬೀಜಗಳು ಮೊಳಕೆಯೊಡೆಯುತ್ತವೆ. ಥ್ಯಾಂಕ್ಸ್ ಹರಪನಹಳ್ಳಿ ಸರ್, ಕಾರ್ಯಕ್ರಮವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದ್ದಿರಿ.

  2. ಉದಯಕುಮಾರ್ ಹಬ್ಬು

    ಕಾರ್ಯಕ್ರಮದ ವರದಿ ಚೆನ್ನಾಗಿ ಮೂಡಿ ಬಂದಿದೆ. ಪ್ರಸ್ತುತ ಸಂದರ್ಭದಲ್ಲಿ ವಚನಸಾಹಿತ್ಯದ ಆಶಯಗಳನ್ನು , ಮತ್ತೊಮ್ಮೆ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆ ಎಂದು ನಮಗನಿಸುವುದಿಲ್ಲವೇ? ಕಾಲ ಮತ್ತೊಬ್ಬ ಬಸವಣ್ಣನಿಗೆ ಪರಿಪಕ್ವವಾಗಿದೆ. ಕಾಲ ಅವನ ಬರವನ್ನೆ ಕಾಯುತ್ತಿದೆ.ಅಥವಾ ಇನ್ನೊಬ್ಬ ದಯಾನಂದ ಸರಸ್ವತಿಯವರೋ, ನಾರಾಯಣ ಗುರುಗಳೋ ಮತ್ತೊಮ್ಮೆ ಹುಟ್ಟಿ ಬರಲಿ.ಬಸವಣ್ಣ ಸೋತಲ್ಲಿ ನಾವು ಗೆಲ್ಲಿಸುವಾ.

  3. mallikarjuna kalamarahalli

    ARTHAPUURNA KARYAKRAMA. ARTHAPUURNA BARAHA. ABHINANDANE. NIMMA VILASA TILISI.

    • nagraj harapanahalli

      nagraj harapanahalli
      etv reporter
      new khb colony
      a-11 roda
      karwar -6
      9448408633

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading