ಸುಮಂಗಲಾ
ಕಾಶ್ಮೀರದ ಕುನನ್ಪೊಸ್ಪೊರ ಗ್ರಾಮದಲ್ಲಿ ಸುಮಾರು 60 ಮಹಿಳೆಯರ ಮೇಲೆ ಸೇನೆಯ ಸಿಬ್ಬಂದಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಮೊನ್ನೆ ಫೆಬ್ರವರಿ 23 ಕ್ಕೆ ಬರೋಬ್ಬರಿ 22 ವರ್ಷಗಳಾದವು, ನಮಗ್ಯಾರಿಗೂ ಅವರ ಎರಡು ದಶಕಗಳಿಗೂ ಮೀರಿದ ನಿಟ್ಟುಸಿರು ನೆನಪಾಗಲಿಲ್ಲ … ಅವರ ಸಂಕಟ ತಟ್ಟಿದ್ದರೆ ತಾನೆ ನೆನಪಾಗುವ ಮಾತು…
ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕುನನ್ಪೊಸ್ಪೊರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು 1991 ಫೆಬ್ರವರಿ 23 ರಂದು. ರಾಜಾಸ್ತಾನ್ ರೈಫಲ್ಸ್‌ನ ಸೈನಿಕರು ಫೆಬ್ರವರಿ 23 ರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕುನನ್ಪೊಸ್ಪೊರ ಹಳ್ಳಿಗೆ ಉಗ್ರಗಾಮಿಗಳ ಹುಡುಕಾಟಕ್ಕೆಂದು ಬಂದರು. ಮನೆಗಳಲ್ಲಿದ್ದ ಎಲ್ಲ ಗಂಡಸರನ್ನೂ ವಿಚಾರಣೆಗೆಂದು ಹತ್ತಿರದ ಬಸ್‌ಸ್ಟ್ಯಾಂಡ್‌ಗೆ ಕರೆದೊಯ್ದು, ಅಲ್ಲಿಯೇ ಕೂಡಿ ಹಾಕಿದರು. ಒಂದು ಗುಂಪು ಸೈನಿಕರು ಈ ಗಂಡಸರಿಗೆ ಹಿಂಸೆ ಕೊಡುವ ಕಾಯಕದಲ್ಲಿ ನಿರತರಾದರೆ, ಇನ್ನೊಂದು ಗುಂಪು ಊರೊಳಗೆ ಬಂದು ಮನೆಗಳಲ್ಲಿದ್ದ ಹೆಂಗಸರ ಮೇಲೆ ಬೆಳಗ್ಗೆಯವರೆಗೂ ಸಾಮೂಹಿಕ ಅತ್ಯಾಚಾರ ನಡೆಸಿದರು. ವಯಸ್ಸನ್ನೂ ಲೆಕ್ಕಿಸದೇ, ಅಪ್ರಾಪ್ತ ಬಾಲಕಿಯರು, ಗರ್ಭಿಣಿಯರು, ಮಾತ್ರವಲ್ಲ, 60-70 ವಯಸ್ಸಿನ ಮಹಿಳೆಯರ ಮೇಲೂ ಅತ್ಯಂತ ಕ್ರೂರ ರೀತಿಯಲ್ಲಿ ಅತ್ಯಾಚಾರ ನಡೆಸಿದರು. ಬೆಳಗ್ಗೆ 9 ಗಂಟೆಗೆ ಗಂಡಸರನ್ನು ಕೂಡಿ ಹಾಕಿದ್ದ ಜಾಗಕ್ಕೆ ಹೋಗಿ ಅವರಿಗೆ ಮನೆಗೆ ಮರಳಿ ಹೋಗುವಂತೆ ಹೇಳಿದರು.
ಮನೆಗೆ ಓಡಿ ಬಂದ ಗಂಡಸರು ನೋಡಿದ್ದೇನು… ಅರ್ಧಕ್ಕರ್ಧ ಮಹಿಳೆಯರು ಅರೆಬೆತ್ತಲಾಗಿ, ಪ್ರಜ್ಞಾಶೂನ್ಯರಾಗಿ ಬಿದ್ದಿದ್ದಾರೆ, ಅರೆ ಬರೆ ಎಚ್ಚರವಿರುವ ಮಹಿಳೆಯರು ರಾತ್ರಿಯ ಬರ್ಬರತೆಯನ್ನು ನೆನೆಯುತ್ತ ಅಳುತ್ತ ಮೂಲೆ ಸೇರಿದ್ದಾರೆ. ಎಲ್ಲರ ಮೈ ತುಂಬ ಗಾಯದ ಕಲೆಗಳು, ಮನಸ್ಸಿನ ಮೇಲೆ ಎಂದೂ ಗುಣವಾಗದ ಗಾಯಗಳು.
ಫೆಬ್ರವರಿ 27 ರಂದು ಊರಿನ ಮುಖಂಡರು ಸೇನೆಯ ಅಧಿಕಾರಿಗಳಿಗೆ ಈ ಕುರಿತು ಹೇಳಿದರೆ ಅವರು ಈ ಎಲ್ಲ ಅಪಾದನೆಗಳೂ ನಿರಾಧಾರ ಎಂದು ಅಲ್ಲ ಗೆಳೆದರು. ಕೊನೆಗೆ ಮಾರ್ಚ್ 5 ರಂದು ಕುಪ್ವಾರಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಿದಾಗ, ಮಾರ್ಚ್ 7 ತನಿಖೆ ನಡೆಸಿದ ಅವರು ಸೇನೆಯವರು ಕಾಡು ಮೃಗಗಳ ಹಾಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದು ನಿಜವೆಂದು ವರದಿ ನೀಡಿದರು. ನಂತರ ಈ ಘಟನೆಗೆ ಮಾಧ್ಯಮಗಳಲ್ಲಿಯೂ ಪ್ರಚಾರ ಸಿಕ್ಕಿತು. ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಸತ್ಯ ಶೋಧನಾ ತನಿಖೆ ನಡೆಸಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದರೆಂದು ಹೇಳಲಾದ 53 ಮಹಿಳೆಯರನ್ನು ಸಂದರ್ಶನ ನಡೆಸಿದರು. ಸ್ವಾಭಾವಿಕವಾದ ತನಿಖೆಯನ್ನು ಮೊದಲೇ ಮಾಡದೇ, ತನಿಖೆಯಲ್ಲಿ ಲೋಪವಾಗಿದೆ ಎಂಬ ಅಂಶವನ್ನು ಎತ್ತಿಹಿಡಿದರು. ನಂತರ ಪುನಾ ಹಳ್ಳಿಗೆ ಭೇಟಿ ನೀಡಿದ ವಿಭಾಗೀಯ ಆಯುಕ್ತರು ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕಿದೆ. ದೂರಿನ ಸತ್ಯಾ ಸತ್ಯತೆ ಕುರಿತು ಅನುಮಾನಗಳಿದ್ದರೂ, ಈ ಹಳ್ಳಿಯ ಸರಳ ಸ್ವಭಾವದ, ಸದಾ ಸೇನೆಗೆ ಸಹಕಾರ ನೀಡುತ್ತಿದ್ದ ಜನರು ಏಕೆ ಇಂತಹ ಆರೋಪಗಳನ್ನು ಮಾಡಿದ್ದಾರೆಂದು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿದ್ದರು.

ಎಲ್ಲೆಡೆಯಿಂದ ಟೀಕೆಗಳು ಬರಲಾರಂಭಿಸಿದಾಗ ಸೇನೆಯು ಪ್ರೆಸ್ಕೌನ್ಸಿಲ್ ಆಫ್ ಇಂಡಿಯಾಗೆ ತನಿಖೆ ಮಾಡುವಂತೆ ಹೇಳಿತು. ಘಟನೆ ನಡೆದು ಮೂರು ತಿಂಗಳ ನಂತರ ತನಿಖೆ ಮಾಡಲು ಬಂದ ಪ್ರೆಸ್ಕೌನ್ಸಿಲ್ ಆಫ್ ಇಂಡಿಯಾದ ತಂಡವು ಮಹಿಳೆಯರ ಸಾಕ್ಷ್ಯಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿದ್ದು, ಅತ್ಯಾಚಾರ ಪ್ರಕರಣವೇ ’ಆಧಾರರಹಿತ’, ಉಗ್ರ ಗಾಮಿಗಳ ಜೊತೆ ಕೈ ಜೋಡಿಸಿ ಹೆಣೆದ ’ಸುಳ್ಳಿನಕಂತೆ’ ಎಂದು ಹೇಳಿತು. ಒಂದು ತಿಂಗಳಿನ ನಂತರ ಮಾಡಿದ ವೈದ್ಯಕೀಯ ಪರೀಕ್ಷೆಯು 32 ಮಹಿಳೆಯರ ಎದೆ, ಹೊಟ್ಟೆಯ ಮೇಲೆ ಅನೇಕ ಗಾಯಗಳಿದ್ದುದ್ದನ್ನು, ಮದುವೆಯಾಗದ ಮೂವರು ಹುಡುಗಿಯರ ಯೋನಿ ಪೊರೆ ಹರಿದಿದ್ದನ್ನು ವರದಿಮಾಡಿದೆ. ಆದರೆ ಪ್ರೆಸ್‌ಕೌನ್ಸಿಲ್‌ನ ತಂಡ ಅಷ್ಟು ತಡವಾಗಿ ಮಾಡಿದ ವೈದ್ಯಕೀಯ ವರದಿ ನಂಬಲು ಅನರ್ಹವೆಂದು ಹೇಳಿಬಿಟ್ಟಿತು. ಪ್ರೆಸ್ಕೌನ್ಸಿಲ್ ಅತ್ಯಾಚಾರ ನಡೆದೇ ಇಲ್ಲ ಎಂದು ತಳ್ಳಿ ಹಾಕಿದ ನಂತರ ವಿಚಾರಣೆ ಎಂಬ ಪ್ರಹಸನ ಅಲ್ಲಿಗೇ ಕೊನೆಗೊಂಡಿತು. ವಿಶ್ವದೆಲ್ಲೆಡೆಯಿಂದ ಮಾನವ ಹಕ್ಕುಗಳ ಪ್ರತಿಪಾದಕರಿಂದ ಟೀಕೆ ಬಂದರೂ ಪ್ರಭುತ್ವ ಒಂದಿಷ್ಟೂ ಅಲುಗಾಡಲಿಲ್ಲ. ಇಲ್ಲಿ ನಿಜಕ್ಕೂ ಆತಂಕ ಹುಟ್ಟಿಸುವಂಥದ್ದು ಎಂದರೆ ಪ್ರೆಸ್ಕೌನ್ಸಿಲ್ ತಂಡವೂ ಪ್ರಭುತ್ವದ ಜೊತೆ ಕೈ ಜೋಡಿಸಿಬಿಟ್ಟಿದ್ದು!
ಆ ಘಟನೆ ನಂತರ ಕುನನ್ ಊರಿನ ಹುಡುಗಿಯರನ್ನು ಮದುವೆಯಾಗಲು ಹೊರಗಿನವರಾರೂ ಬರುತ್ತಿಲ್ಲ, ತಮ್ಮ ತಮ್ಮೊಳಗೇ ಮದುವೆ ಮಾಡಿಕೊಡುತ್ತಿದ್ದಾರೆ. ಎಷ್ಟೋ ಮನೆಗಳಲ್ಲಿ ಗಂಡಂದಿರಿಗೆ ಹೆಂಡತಿ ಅತ್ಯಾಚಾರಕ್ಕೆ ಒಳಗಾದ ನಂತರ ಅನುಕಂಪವಿದ್ದರೂ ಮೊದಲಿನ ಪ್ರೀತಿ, ವಿಶ್ವಾಸದ ಬದುಕು ಸಾಧ್ಯವಾಗಿಲ್ಲ, ಎಷ್ಟೇ ಆಗಲಿ ಪುರುಷರಲ್ಲವೇ! ಕೆಲಮಹಿಳೆಯರುಅಪಮಾನ, ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ದಶಕದಿಂದ ಆ ಊರಿನಲ್ಲಿ ಬದುಕು ಎಂದಿನಂತೆ ನಗುತ್ತಿಲ್ಲ.

ಒಬ್ಬರಲ್ಲ, ಇಬ್ಬರಲ್ಲ, ಸುಮಾರು 60 ಮಹಿಳೆಯರು ಅತ್ಯಾಚಾರ ನಡೆದಿದೆ ಎಂದು ಹಸೀ ಸುಳ್ಳು ಹೇಳುತ್ತಾರೆಯೇ? ಆ ಸಾಮೂಹಿಕ ಅತ್ಯಾಚಾರದ ನಂತರ ಆ ಊರಿನ ಬಹುತೇಕ ಮಹಿಳೆಯರು ನರಕ ಸದೃಶ ಬಾಳುವೆ ನಡೆಸಿದ್ದು ನಂತರವಾದರೂ ಯಾರ ಗಮನಕ್ಕೂ ಬರಲೇಇಲ್ಲವೇ?
ಇರೋಮ್ ಶರ್ಮಿಳಾಳ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಇದೆಲ್ಲ ನೆನಪಾಗುತ್ತಿದೆ. ಅರುಣಾ ಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಸಂಘರ್ಷ ಪೀಡಿತ ಪ್ರದೇಶಗಳ ರಕ್ಷಣೆಗೆ ಎಂದು 1958ರಲ್ಲಿ ಜಾರಿಯಾದ ಸಶಸ್ತ್ರಪಡೆಗಳ (ವಿಶೇಷಾಧಿಕಾರ) ಕಾಯಿದೆಯನ್ನು 1990 ರಲ್ಲಿ ಜಮ್ಮು ಕಾಶ್ಮೀರಕ್ಕೂ ವಿಸ್ತರಿಸಲಾಗಿದೆ. ಸಶಸ್ತ್ರ ಪಡೆಗಳಿಂದ ವಿಶೇಷಾಧಿಕಾರದ ಹೆಸರಿನಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆ ಮತ್ತು ಮುಗ್ಧ ನಾಗರೀಕರ ಮೇಲೆ ಹಿಂಸೆ, ನಕಲಿಎನ್ಕೌಂಟರ್ಗಳು, ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹಿಂಸೆಯಂತಹ ನೂರಾರು ಪ್ರಕರಣಗಳು ನಡೆಯುತ್ತಲೇ ಇವೆ. ಮಾನವ ಹಕ್ಕುಗಳ ಸಮಿತಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾಯಿದೆಯನ್ನು ಪುನರ್ಪರಿಶೀಲಿಸುವಂತೆ ಕೇಳಿ ಕೊಳ್ಳುತ್ತಲೇ ಇವೆ. ಭಾರತೀಯ ಪ್ರಜಾಸತ್ತೆಯಲ್ಲಿ ಇಂತಹ ಕಾಯಿದೆಗೆ ಆಸ್ಪದ ವಿರಕೂಡದು ಎಂದು ಈ ಕಾಯಿದೆಯನ್ನು ಹಿಂದೆ ತೆಗೆದು ಕೊಳ್ಳುವಂತೆ ಮಾರ್ಚ್ 2012 ರಲ್ಲಿ ವಿಶ್ವಸಂಸ್ಥೆಯೂ ಆಗ್ರಹಿಸಿದೆ. ಆದರೆ ಹಿಂಸೆ ಮತ್ತು ದಮನದ ರುಚಿ ಕಂಡಿರುವ ಪ್ರಭುತ್ವ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.
ಮಣಿಪುರದಲ್ಲಿ ಸಶಸ್ತ್ರ ಪಡೆಗಳಿಂದಾಗಿ ಪ್ರತಿವರ್ಷ 300ಕ್ಕೂ ಹೆಚ್ಚು ಮಹಿಳೆಯರು ವಿಧವೆಯರಾಗುತಿದ್ದಾರೆ ಎಂದು ಅಂಕೆ ಸಂಖ್ಯೆಗಳೊಡನೆ ಹೇಳುವ ಕಂಟ್ರೋಲ್ ಆರ್ಮ್ಸ್ ಫೌಂಡೇಶನ್ ಆಫ್ ಇಂಡಿಯಾದ ಬಿನಾಲಕ್ಷ್ಮಿನೇ ಸೇನೆಯಿಂದ ಎಷ್ಟೋ ಮಹಿಳೆಯರು, ಎಳೆ ಹುಡುಗಿಯರು ಅತ್ಯಾಚಾರಕ್ಕೀಡಾಗುವುದು ಇಲ್ಲಿ ಸರ್ವೇ ಸಾಮಾನ್ಯ ಎನ್ನುತ್ತಾರೆ.
ಇರೋಮ್ ಶರ್ಮಿಳಾ ಎತ್ತಿರುವ ಮೂಲ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಲು ಜನಾಂದೋಳನ ರೂಪು ಗೊಳ್ಳಬೇಕಿದೆ. ಸಂಘರ್ಷ ಪೀಡಿತ ಪ್ರದೇಶಗಳ ರಕ್ಷಣೆಗೆ ಸೇನೆ ಬೇಕು ಎನ್ನುವುದು ನಿಜ, ಆದರೆ ಇಂತಹ ವಿಶೇಷಾಧಿಕಾರ ಎನ್ನುವುದು ಎಲ್ಲಿಗೆ ಸೀಮಿತಗೊಳ್ಳಬೇಕು ಎಂಬ ಪ್ರಶ್ನೆಗೆ ನಿಖರ ಉತ್ತರ ಬೇಕಿದೆ. ಸೇನೆ ಇರುವುದು ಯಾರ ರಕ್ಷಣೆಗೆ?ಸಶಸ್ತ್ರ ಪಡೆಗೆ ವಿಶೇಷಾಧಿಕಾರ ಎಂದರೆ ನಾಗರಿಕರ ಹಕ್ಕುಗಳ ಉಲ್ಲಂಘನೆ, ನಾಗರಿಕರ ಮೇಲೆ ಹಿಂಸೆ, ಅತ್ಯಾಚಾರದಂತಹ ಕ್ರೌರ್ಯ ಎಸಗ ಬೇಕೆಂದು ಅರ್ಥವೇ? ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯಿದೆಯನ್ನು ಹಿಂತೆಗೆದುಕೊಳ್ಳುವ ಕುರಿತು ಆಲೋಚಿಸುವಂತೆ ಆಗ್ರಹಿಸಲು ನಾಗರಿಕ ಸಮಾಜವು ಹೋರಾಟವನ್ನು ಆರಂಭಿಸಬೇಕಿದೆ.







ನೀಚ ಕಾರ್ಯ ಎಸಗಿದ ಇಂತಹ ಸೈನಿಕರಿಗೆ ಶಿಕ್ಷೆ ನೀಡಬೇಕು. ವಿಶೇಷಾಧಿಕಾರ ರದ್ದಾಗಬೇಕು. ನಾಗರಿಕ ರಕ್ಷಣೆಗೆ ನೀಡಿದ ಶಸ್ತ್ರಗಳನ್ನು ಆಧಾರವಾಗಿಸಿ ಬಲಾತ್ಕಾರ ಎಸಗುತ್ತಿರುವ ನೀಚ ಸೈನಿಕರನ್ನ ಬಿಡಬಾರದು. ಬಲತ್ಕಾರಿಗಳ ಮರ್ಮಾಂಗ ಕತ್ತರಿಸಿ ಅವರನ್ನು ಗಲ್ಲಿಗೇರಿಸಬೇಕು.