ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರ್ದಾರ್ ಪಟೇಲ್ ಅವರೊಡನೆ ಒಂದೆರಡು ಕ್ಷಣ..

ನಾ. ದಿವಾಕರ 

ಸರ್ದಾರ್ ವಲ್ಲಭಾಯಿ ಪಟೇಲ್, ಆಹಾ ನಿಮ್ಮ ಈ ಹೆಸರು ಕೇಳಿದಾಕ್ಷಣ ನಮ್ಮ ನೆನಪುಗಳು ಬಾಲ್ಯಕ್ಕೆ ಮರಳುತ್ತವೆ ಪಟೇಲರೇ. ಸರ್ದಾರ್ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಏಕೆ ಕರೆಯುತ್ತಿದ್ದರು ? ಎಂದು ಪ್ರಶ್ನೆ ಕೇಳಿ ಉತ್ತರಿಸದಿದ್ದರೆ ಬೆತ್ತದ ರುಚಿ ತೋರಿಸುತ್ತಿದ್ದ ಪ್ರಾಥಮಿಕ ಶಾಲೆಯ ಶಿಕ್ಷಕರೂ ನೆನಪಾಗುತ್ತಾರೆ. ನಾವೂ ಬಾಯಿಪಾಠ ಮಾಡಿದ ಉತ್ತರವನ್ನು ಕೈಕಟ್ಟಿ ನಿಂತು ಹೇಳುತ್ತಿದ್ದೆವು. ಉತ್ತರ ತಿಳಿಯದವರು ಬೆತ್ತದ ರುಚಿ ಕಾಣುತ್ತಿದ್ದರು. ಪಠ್ಯದಿಂದಾಚೆಗೆ ಇತಿಹಾಸವನ್ನು ನೋಡುವ ಪರಿಪಾಠ ಇರಲಿಲ್ಲವೆನ್ನಿ. ಪಠ್ಯದಲ್ಲಿರುವುದೇ ಅಂತಿಮ ಸತ್ಯವೂ ಆಗಿತ್ತು. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಮ್ಮ ಪಾತ್ರ, ಗಾಂಧಿ, ನೆಹರೂ, ಸರೋಜಿನಿ ನಾಯ್ಡು, ಸುಭಾಷ್ ಬೋಸ್ ಮುಂತಾದವರೊಡನೆ ನಿಮ್ಮ ಒಡನಾಟ, ತ್ಯಾಗ ಬಲಿದಾನಗಳು ಮತ್ತು ಸ್ವಾತಂತ್ರ್ಯಾನಂತರದಲ್ಲಿ ರಾಜಪ್ರಭುತ್ವಕ್ಕೆ ಒಳಪಟ್ಟಿದ್ದ ಪ್ರಾಂತ್ಯಗಳ ರಾಜರುಗಳ ಮನವೊಲಿಸಿ ಭಾರತದೊಡನೆ ವಿಲೀನವಾಗುವಂತೆ ಮಾಡಿದ ನಿಮ್ಮ ಚಾಣಾಕ್ಷತೆ ಇವೆಲ್ಲವೂ ನಿಮ್ಮನ್ನು ಉಕ್ಕಿನ ಮನುಷ್ಯನನ್ನಾಗಿ ಮಾಡಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ , ಅಂದರೆ ಸಮಸ್ತ ಭಾರತೀಯರ, ಮನದಲ್ಲಿ ನಿಮ್ಮ ಚಿತ್ರಣ ಹಾಗೆಯೇ ಇದೆ.
ಭಾರತದ ಪ್ರಜೆಗಳಿಗೆ ನಿಮ್ಮ ಬಗ್ಗೆ ಯಾವುದೇ ಪೂರ್ವಗ್ರಹಗಳಿಲ್ಲ ಏಕೆಂದರೆ ನೀವು ಆ ಕಾಲಘಟ್ಟದಲ್ಲೇ ವಿವಾದಾತೀತರಾಗಿದ್ದಿರಿ. ದೇಶದ ಒಳಿತಿಗಾಗಿ ಸ್ವಹಿತಾಸಕ್ತಿಯನ್ನು ತ್ಯಾಗ ಮಾಡುವ ಔದಾರ್ಯ ಮತ್ತು ಉನ್ನತ ಧ್ಯೇಯ ನಿಮ್ಮದಾಗಿತ್ತು. ಗಾಂಧಿ, ನೆಹರೂ, ಸುಭಾಷ್, ತಿಲಕ್, ಲಜಪತರಾಯ್, ಭಗತ್‍ಸಿಂಗ್, ಮೌಲಾನ ಅಜಾದ್, ಅಂಬೇಡ್ಕರ್, ಸರೋಜಿನಿ ನಾಯ್ಡು ಹೀಗೆ ಸ್ವಾತಂತ್ರ್ಯ ಸಂಗ್ರಾಮಿಗಳ ಪಟ್ಟಿಯಲ್ಲಿ ನಿಮಗೂ ಅಗ್ರಸ್ಥಾನ ಸದಾ ಲಭಿಸಿತ್ತು. ಇದು ಪ್ರಶ್ನಾತೀತವೂ ಆಗಿತ್ತು. ಏಕೆಂದರೆ ನಿಮ್ಮ ಪೀಳಿಗೆಯ ನಾಯಕರಲ್ಲಿ ರಾಜಕಾರಣ ಹಾಸುಹೊಕ್ಕಾಗಿದ್ದರೂ, ಸ್ವಾರ್ಥ ರಾಜಕಾರಣ, ದ್ವೇಷ ರಾಜಕಾರಣ ಇರಲಿಲ್ಲ. ಅಧಿಪತ್ಯ ಸಾಧಿಸಲು ಮತ್ತೊಬ್ಬರನ್ನು ಹತ್ತಿಕ್ಕುವ ಕ್ಷುದ್ರ ರಾಜಕಾರಣ ನಿಮ್ಮದಾಗಿರಲಿಲ್ಲ, ನಿಮ್ಮ ಪೀಳಿಗೆಯವರದೂ ಆಗಿರಲಿಲ್ಲ. ದುರಂತ ಎಂದರೆ ಸ್ವಾತಂತ್ರ್ಯ ಗಳಿಸಿದ ನಾಲ್ಕು ದಶಕಗಳಲ್ಲಿ ನಿಮ್ಮ ಭಾರತಾಂಬೆಯ ಒಡಲಲ್ಲಿ ಸುಪ್ತವಾಗಿದ್ದ ಎಲ್ಲ ಕ್ಷುದ್ರ ಶಕ್ತಿಗಳೂ ಒಮ್ಮೆಲೇ ಹೊರಹೊಮ್ಮಿದ್ದವು. ಬಹುಶಃ ನೀವೆಲ್ಲರೂ ಸ್ವತಂತ್ರ ಭಾರತದ (ಅ)ಪ್ರಬುದ್ಧ ರಾಜಕಾರಣದ ಪಗಡೆಯಾಟದಲ್ಲಿ ದಾಳಗಳಾಗಿಬಿಟ್ಟಿರಿ. ನೀವೆಲ್ಲರೂ ಭಾರತದ ರತ್ನಗಳೇ ಆದರೂ ಈ ರತ್ನಗಳ ಒಡೆತನಕ್ಕಾಗಿ ಹಾತೊರೆಯುವ ಸ್ವಾರ್ಥಪರ ಶಕ್ತಿಗಳು ಮೇಳೈಸಲಾರಂಭಿಸಿದವು. ಹಾಗಾಗಿಯೇ ನಿಮಗೆ ದಯಪಾಲಿಸಲಾದ ಭಾರತರತ್ನ ಪ್ರಶಸ್ತಿಯೂ ಸಹ “ ಒಂದು ಆಡಳಿತಾರೂಢ ಪಕ್ಷದ ” ಸಾಧನೆಯಾಗಿ ಪರಿಣಮಿಸಿತು. ದೇಶದ ಅಸ್ತಿತ್ವ ಕಾಪಾಡಲು ತಮ್ಮ ಸ್ವಂತ ಅಸ್ತಿತ್ವವನ್ನೂ ಬದಿಗೊತ್ತಿದ ನಿಮ್ಮಂತಹ ಮಹಾನ್ ನಾಯಕರು ಅಸ್ಮಿತೆಯ ರಾಜಕಾರಣಕ್ಕೆ ಬಲಿಯಾಗಿಬಿಟ್ಟರು. ಈಗ ದ್ವೇಷ ರಾಜಕಾರಣದಲ್ಲಿ ಚದುರಂಗದ ಕಾಯಿಗಳಂತೆ ಕಾಣುತ್ತಿದ್ದೀರಿ.

ನಮ್ಮ ದೇಶದ ಸ್ಥಿತಿಯನ್ನು ಒಮ್ಮೆ ನೋಡಿ ಸರ್ದಾರ್ ಪಟೇಲರೇ. ನಿಮ್ಮ ದೃಷ್ಟಿ ಭಾರತದ ಮೂಲೆ ಮೂಲೆಗಳ ಮೇಲೂ ಬೀಳಲಿ ಎಂದೇ ನಿಮ್ಮನ್ನು ಗಗನದೆತ್ತರಕ್ಕೆ ಏರಿಸಿ ನಿಲ್ಲಿಸಿದ್ದಾರೆ ಎನಿಸುತ್ತದೆ. ನಿಮ್ಮ ಉಕ್ಕಿನ ವ್ಯಕ್ತಿತ್ವಕ್ಕೆ ತುಕ್ಕು ಹಿಡಿಯುವವರೆಗೂ ಬಹುಶಃ ನಿಮ್ಮನ್ನು ನಮ್ಮ ರಾಜಕೀಯ ಬಿಗ್‍ಬಾಸ್ ಪಾತ್ರಧಾರಿಗಳು ಬಳಸುತ್ತಲೇ ಇರುತ್ತಾರೆ. ಕೊಂಚ ಹಿಂದಿರುಗಿ ನೋಡಿ, ಇತಿಹಾಸದತ್ತ ಅಲ್ಲ, ಪ್ರಸ್ತುತ ಸಂದರ್ಭವನ್ನು ಒಮ್ಮೆ ನೋಡಿ. ಏಕೋ ನಿಮ್ಮನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇ ಅಲ್ಲದೆ, ಕೃಷಿಕರ ಏಳಿಗೆಗೆ ಅವಿಶ್ರಾಂತ ದುಡಿದು, ಛಿದ್ರವಾಗಿದ್ದ ದೇಶವನ್ನು ಒಂದು ಮಾಡಲು ಹೆಣಗಾಡಿದ ನಿಮ್ಮಂತಹ ಉನ್ನತ ವ್ಯಕ್ತಿಯನ್ನು ಒಂದು ಪ್ರವಾಸೋದ್ಯಮ ಕೇಂದ್ರದ ವಾಣಿಜ್ಯ ಬಿಂದುವನ್ನಾಗಿ ಮಾಡಿಬಿಟ್ಟಿದ್ದಾರೆ. ಜೀವಿತ ಕಾಲದಲ್ಲಿ ನೀವು ಎಷ್ಟು ಎತ್ತರದ ವ್ಯಕ್ತಿಯಾಗಿದ್ದಿರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಈಗ ನಿಮ್ಮನ್ನು ಎಷ್ಟು ಎತ್ತರಕ್ಕೆ ಏರಿಸಿಬಿಟ್ಟಿದ್ದಾರೆ ಎಂದರೆ ನಿಮ್ಮ ಕಿವಿಗೊಂದು ಹೂವು ಇಡಲೂ ಸಹ ಹೆಲಿಕಾಪ್ಟರ್ ಬಳಸಬೇಕು. ಜನಸಾಮಾನ್ಯರಿಗೆ ಇದು ಸಾಧ್ಯವೇ ಪಟೇಲರೇ ನೀವೇ ಹೇಳಿ.
ಅದಿರಲಿ, ನಿಮ್ಮ ಪ್ರತಿಮೆ ಚಿಕ್ಕದೇ ಆಗಿದ್ದರೂ ದೇಶದ ಪ್ರತಿಷ್ಟೆ ಮತ್ತು ಗೌರವದ ಸಂಕೇತವಾಗುವಂತಿರಬೇಕಿತ್ತು. ಆದರೆ ಅದು ಒಂದು ರಾಜಕೀಯ ಪಕ್ಷದ ಪ್ರತಿಷ್ಟೆಯ ಸಂಕೇತವಾದಂತೆ ತೋರುತ್ತಿದೆ. ನೀವು, ಗಾಂಧಿ, ನೆಹರೂ, ಆಜಾದ್, ಬೋಸ್ ಎಲ್ಲರೂ ಈ ದೇಶವನ್ನು ಹಂತ ಹಂತವಾಗಿ ಕಟ್ಟಲು ಬಯಸಿದವರು. ಎಲ್ಲಿಯೂ, ಯಾವುದನ್ನೂ ಕೆಡವಲು ಬಯಸಿದವರಲ್ಲ. ನೀವು ಬಳಸಿದ ಇಟ್ಟಿಗೆಗಳು ಮಲಿನವಾಗಿರಲಿಲ್ಲ. ಪರಿಶುದ್ಧ ಮನಸ್ಸಿನ ಸಂಕೇತವಾಗಿದ್ದವು. ನಿಜ, ನಿಮಗೆ ನಿಮ್ಮದೇ ಆದ ತಾತ್ವಿಕ ನಿಲುವುಗಳಿದ್ದವು, ನೆಹರೂ ಅವರಿಗಿಂತ ಭಿನ್ನವಾಗಿ ನೀವು ಯೋಚಿಸಿದ್ದಿರಿ. ಆದರೆ ಅಧಿಕಾರ ಪೀಠಕ್ಕಾಗಿ ವಾಮ ಮಾರ್ಗ ಹಿಡಿಯಲಿಲ್ಲ. ದುರಂತ ಎಂದರೆ ನಿಮ್ಮ ನಿರ್ಗಮನದ ಹಲವು ವರ್ಷಗಳ ನಂತರ ನಿಮಗೂ ಪ್ರಧಾನಮಂತ್ರಿಯ ಪೀಠಕ್ಕೂ ಪಾಣಿಗ್ರಹಣ ಮಾಡಿಸಲು ಇಂದಿನ ರಾಜಕಾರಣಿಗಳು ಯತ್ನಿಸುತ್ತಿದ್ದಾರೆ. ನಿಮ್ಮ ವ್ಯಕ್ತಿತ್ವದ ಮೇಲೆ ಅವರ ಅಧಿಪತ್ಯ ಸಾಧಿಸಿ ಅವರ ರಾಜಕೀಯ ಲಾಭಕ್ಕಾಗಿ ನಿಮ್ಮ ಮನದಾಳದಲ್ಲಿ ಕಾಣಲಾಗದ ಬಯಕೆಗಳನ್ನು ತಾವೇ ಸೃಷ್ಟಿಸುತ್ತಿದ್ದಾರೆ. ನಿಮ್ಮ ಬೃಹತ್ ಪ್ರತಿಮೆ ಈ ವಿಕೃತ ಚಿಂತನೆಗಳಿಗೆ ಕೇಂದ್ರವಾಗಿದೆ.

ಒಮ್ಮೆ ನಿಮ್ಮ ದೃಷ್ಟಿ ಹಾಯಿಸಿ ನೋಡಿ ಪಟೇಲರೇ. ನಿಮ್ಮ ವ್ಯಕ್ತಿತ್ವವನ್ನು ಅರಿಯದೆಯೇ ನಿಮ್ಮನ್ನು ಆರಾಧನೆಯ ಮೂರ್ತಿಯನ್ನಾಗಿಸುತ್ತಿರುವ ಮತಾಂಧರು ನೀವು ಕಟ್ಟಬಯಸಿದ ಸೌಹಾರ್ದಯುತ ಹೂದೋಟವನ್ನು ಮಸಣವನ್ನಾಗಿಸುತ್ತಿರುವುದು ಕಾಣುತ್ತದೆ. ನಿಮ್ಮ ಕನಸಿನ ಭಾರತಾಂಬೆ ಸ್ಥಾವರ ರೂಪದಲ್ಲಿರಲಿಲ್ಲ. ನೀವು ನಿರ್ಮಿಸಿದ ಸ್ಥಾವರಗಳಿಗೆ ಯಾವುದೇ ಸೀಮಿತ ಚೌಕಟ್ಟು ಇರಲಿಲ್ಲ. ಉಜ್ವಲ ಭಾರತದ ಕನಸು ಕಂಡ ನೀವು ಬಯಸಿದ್ದು ಪರಿಪೂರ್ಣ ಪ್ರಜಾತಂತ್ರವನ್ನು, ಮಾನವೀಯ ಮೌಲ್ಯಗಳನ್ನು , ಸಂವೇದನಾಶೀಲ ಸಮಾಜವನ್ನು ,ಸಮಸ್ತ ಭಾರತದ ಪ್ರಜೆಗಳೂ ಸೌಹಾರ್ದತೆ ಮತ್ತು ಭ್ರಾತೃತ್ವದಿಂದ ಬಾಳುವ ಸಮಾಜವನ್ನು. ನಿಮ್ಮ ಒಡನಾಡಿಗಳಾದ ನೆಹರೂ ಮತ್ತು ಅವರ ಪರಂಪರೆಯ ನಾಯಕರು ಈ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲ, ನೀವುಗಳೇ ಹಾಕಿಕೊಂಡ ಚೌಕಟ್ಟಿನ ಗೆರೆಗಳನ್ನು ದಾಟದೆ ಒಂದು ಉತ್ತಮ ಸಮಾಜದ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ಪೇರಿಸಿ ಹೋಗಿದ್ದಾರೆ. ಈ ಕಟ್ಟಡವನ್ನು ಭವ್ಯ ಸೌಧವನ್ನಾಗಿ ಪರಿವರ್ತಿಸುವ ಹೊಣೆಗಾರಿಕೆ ನಿಮ್ಮ ಮುಂದಿನ ಪೀಳಿಗೆಯ ನಾಯಕರ ಮೇಲಿತ್ತು ಎನ್ನುವುದನ್ನು ಬಹುಶಃ ನೀವು ಒಪ್ಪುತ್ತೀರಿ.
ಆದರೆ ನಿಮ್ಮನ್ನು ಸ್ಥಾವರ ರೂಪದಲ್ಲಿ ನಿಲ್ಲಿಸಿರುವ ಸಾಮ್ರಾಜ್ಯದಲ್ಲೇ ಸಾವಿರಾರು ಹತಭಾಗ್ಯರನ್ನು ನೀವು ಕಾಣಲು ಸಾಧ್ಯ. ನಿಮ್ಮ ಹೆಸರಿನಲ್ಲೇ ನಿರ್ಮಾಣವಾಗಿರುವ ಅಣೆಕಟ್ಟು ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ಜನರ ಬಾಳನ್ನು ಮೂರಾಬಟ್ಟೆ ಮಾಡಿದೆ. ಇನ್ನು ನಿಮ್ಮನ್ನು ಆರಾಧಿಸುವ ಕ್ಷುದ್ರ ಮನಸುಗಳ ದ್ವೇಷ ರಾಜಕಾರಣಕ್ಕೆ ಸಾವಿರಾರು ಅಮಾಯಕರು ನೊಂದು ಬೆಂದು ಹೋಗಿದ್ದಾರೆ. ಸಾವಿರಾರು ಕುಟುಂಬಗಳು ವಿನಾಶದ ಅಂಚು ತಲುಪಿವೆ. ಸೌಹಾರ್ದತೆ ಮತ್ತು ಭ್ರಾತೃತ್ವ ಬಯಸಿದ ನಿಮ್ಮನ್ನು ನಿಮ್ಮ ಒಡನಾಡಿಗಳೊಡನೆ ಮುಖಾಮುಖಿಯಾಗಿಸುವ ಮತಾಂಧರೇ ಅಲ್ಲಿ ದೂರದಲ್ಲೊಂದು ಮಂದಿರ ನಿರ್ಮಿಸಲು ದೇಶದ ಭವಿಷ್ಯವನ್ನೇ ಪಣಕ್ಕಿಡುತ್ತಿದ್ದಾರೆ. ಈ ದೇಶದ ಸಾಮಾಜಿಕ ಚೌಕಟ್ಟನ್ನೇ ಛಿದ್ರಗೊಳಿಸಲು ಮುಂದಾಗಿದ್ದಾರೆ. ನಮ್ಮಿಂದ ಭಾರತ ರತ್ನ ಪಡೆದ ಸರ್ದಾರ್ ಪಟೇಲ್ ನಮ್ಮ ಎಲ್ಲ ಕೃತ್ಯಗಳನ್ನೂ ಕ್ಷಮಿಸುತ್ತಾರೆ ಎನ್ನುವ ದುರಹಂಕಾರದ ಭಾವನೆ ಅಲ್ಲಿ ಕಾಣುತ್ತಿದೆ. ಆದರೆ ಭಾರತದ ಜನಸಾಮಾನ್ಯರಿಗೆ ತಿಳಿದಿದೆ, ನೀವೂ ಅಸಹಾಯಕರೆಂದು. ಭಾರತ ರತ್ನ ನಿಮ್ಮ ಅಪೇಕ್ಷೆ ಆಗಿರಲಿಲ್ಲ ಎಂದು.
ನೀವು ಜೀವನ ಪರ್ಯಂತ ಬ್ರಿಟೀಷರ ವಿರುದ್ಧ ಹೋರಾಡಿದಿರಿ. ಸ್ವಾತಂತ್ರ್ಯಾನಂತರ ಅಧಿಕಾರಸ್ಥರಾದಾಗ ಇಲ್ಲಿಯೂ ಸಹ ವಿರೋಧವನ್ನು ಎದುರಿಸಿದಿರಿ. ಆದರೆ ನೀವಾಗಲೀ, ನಿಮ್ಮ ಪೀಳಿಗೆಯ ನಾಯಕರಾಗಲೀ ಎಂದಿಗೂ ಅಸಭ್ಯ ಭಾಷೆಯನ್ನು ಬಳಸಿದ್ದಿಲ್ಲ. ಬ್ರಿಟೀಷ್ ಅಧಿಕಾರಿಗಳ ವಿರುದ್ಧವೂ ಸಹ ನಿಮ್ಮ ಆಕ್ರೋಶ ಸಾತ್ವಿಕವಾಗಿರುತ್ತಿತ್ತು , ನಿಮ್ಮ ಕಿಡಿನುಡಿಗಳು ಸಭ್ಯತೆಯಿಂದ ಕೂಡಿರುತ್ತಿದ್ದವು. ನೀವು ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸುವ ಮಹತ್ವದ ತೀರ್ಮಾನ ಕೈಗೊಂಡಾಗಲೂ ನಿಮ್ಮಿಂದ ದ್ವೇಷ ಕಾರುವ ಮಾತುಗಳು ಹೊರಬರಲಿಲ್ಲ. ಭಾರತದ ಅಖಂಡತೆ, ಜಾತ್ಯತೀತತೆ ಮತ್ತು ಐಕ್ಯ ಮತ್ಯದ ದೃಷ್ಟಿಯಿಂದ ಮತಾಂಧತೆಯನ್ನು ವಿರೋಧಿಸಿದ ನೀವು ಕಠಿಣ ನಿರ್ಧಾರಗಳಿಗೆ ಹೆಸರಾಂತರಾಗಿದ್ದರೂ ನಿಮ್ಮ ಮಾತುಗಳಲ್ಲಿ ದ್ವೇಷ, ಅಸೂಯೆ ಕಂಡುಬರುತ್ತಿರಲಿಲ್ಲ. ಆದರೆ ಇಂದಿನ ರಾಜಕಾರಣವನ್ನು ನೋಡಿ. ಬಹುಶಃ ನಿಮ್ಮ ನೆಚ್ಚಿನ ಬಾಪೂ ಕಳೆದುಹೋಗಿದ್ದಾರೆ. ನಿಮ್ಮ ಒಡನಾಡಿ ನೆಹರೂ ಅವರ ಚಾರಿತ್ರ್ಯವಧೆ ಅವ್ಯಾಹತವಾಗಿ ನಡೆಯುತ್ತಿದೆ. ಅವರ ಕುಟುಂಬದ ಮೂಲ ಅಸ್ತಿತ್ವವನ್ನೇ ಪ್ರಶ್ನಿಸುವಂತಹ ಅಸಭ್ಯತೆಯನ್ನು ಇಂದಿನ ಅಧಿಕಾರಸ್ಥ ರಾಜಕಾರಣಿಗಳು ಪ್ರದರ್ಶಿಸುತ್ತಿದ್ದಾರೆ.

ನೀವು ಮತ್ತು ನಿಮ್ಮ ಪೀಳಿಗೆಯ ನಾಯಕರು ಸ್ವತಂತ್ರ ಭಾರತದಲ್ಲಿ ಬಯಸಿದ್ದು ಮುಕ್ತ ಸ್ವಾತಂತ್ರ್ಯವನ್ನು. ಅನ್ನಾಹಾರವೇ ಇಲ್ಲದೆ ಬಳಲುತ್ತಿದ್ದ ಕಟ್ಟಕಡೆಯ ಪ್ರಜೆಯೂ ತನ್ನ ಆಹಾರವನ್ನು ತಾನೇ ಪಡೆಯುವಂತಾಗಬೇಕು ಎಂಬ ಸದಾಶಯ ನಿಮ್ಮೊಳಗಿತ್ತು, ನಿಮ್ಮ ಒಡನಾಡಿಗಳಲ್ಲಿತ್ತು. ಇದು ಸ್ವಾತಂತ್ರ್ಯ ಸಂಗ್ರಾಮದ ಆಶಯವೂ ಆಗಿತ್ತು. ಆದರೆ ಇಂದು ನೀವು ಬಿಟ್ಟು ಹೋದ ಮಾರ್ಗದಲ್ಲೇ ನಡೆಯುತ್ತಿರುವ ಅಧಿಕಾರಸ್ಥರು, ನಿಮ್ಮನ್ನು ಆರಾಧಿಸುವವರು, ಜನರ ಆಹಾರದ ಹಕ್ಕನ್ನೇ ಕಸಿದುಕೊಳ್ಳುತ್ತಿದ್ದಾರೆ. ಭಿನ್ನ ಮಾರ್ಗಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಭಿನ್ನ ಅಭಿಪ್ರಾಯಗಳನ್ನು ದಮನಿಸಲಾಗುತ್ತಿದೆ. ಭಿನ್ನ ಆಹಾರ ಸೇವಿಸುವವರನ್ನು ಕೊಲ್ಲಲಾಗುತ್ತಿದೆ. ಇವೆಲ್ಲವೂ ನೀವು ಮತ್ತು ನಿಮ್ಮ ಒಡನಾಡಿಗಳು ಬಿಟ್ಟುಹೋದ ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತಿದೆ. ಮಹಿಳೆಯರ ಮಾನ ಸಮ್ಮಾನಗಳನ್ನು ಕಾಪಾಡಲು ಶ್ರಮಿಸಿದ ನಿಮ್ಮ ಆದರ್ಶಗಳನ್ನು ಗಾಳಿಗೆ ತೂರಿ ಮಹಿಳೆಯರ ಅಸ್ತಿತ್ವವನ್ನೇ ನಿರಾಕರಿಸಲಾಗುತ್ತಿದೆ. ನಿಮಗೆ ಭಾರತಾಂಬೆ ಮಾತೆಯಾಗಿದ್ದಳು. ಇಂದು ಗೋವಿನ ರೂಪದಲ್ಲಿ ಮಲತಾಯಿ ಜನಿಸಿದ್ದಾಳೆ. ಭಾರತ ಮಾತೆಯನ್ನು ತಾತ್ವಿಕ ನೆಲೆಯಲ್ಲಿ ಅಪಮಾನಿಸುತ್ತಲೇ ಗೋಮಾತೆಯನ್ನು ವೈಭವೀಕರಿಸುತ್ತಾ ನಿಮ್ಮ ಭಾರತಾಂಬೆಯ ಮಕ್ಕಳನ್ನು ಹತ್ಯೆ ಮಾಡಲಾಗುತ್ತಿದೆ. ಬಹುಶಃ ನಿಮಗೆ ಕಾಣಿಸಿರಬಹುದು ಮುಂದೆಯೂ ಕಾಣಿಸಬಹುದು.
ನೀವು ನೆಹರೂ ಮತ್ತು ನಿಮ್ಮ ಒಡನಾಡಿಗಳು ಭಾರತದ ಜನಸಾಮಾನ್ಯರಿಗಾಗಿ ನಿರ್ಮಿಸಿದ ಬೆವರಿನ ಗೂಡುಗಳು ಭಾರತದ ಸಾರ್ವಭೌಮ ಪ್ರಜೆಗಳ ಪಾಲಿಗೆ ಮಂದಿರಗಳಾಗಿ ಪರಿಣಮಿಸಿದವು. ನಿಮ್ಮ ಕಾಲಘಟ್ಟದಲ್ಲಿ ನಿರ್ಮಿತವಾದ ಸಂಸ್ಥೆಗಳು ಇಂದಿಗೂ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡು ಜನಸಾಮಾನ್ಯರಿಗೆ ಆಶ್ರಯ ನೀಡುತ್ತಿವೆ. ಆದರೆ ನಿಮ್ಮನ್ನು ಗಗನದೆತ್ತರದ ಪ್ರತಿಮೆಯ ಮೂಲಕವೇ ನೋಡುವ ಇಂದಿನ ಆಳ್ವಿಕರು ನೀವು ನಿರ್ಮಿಸಿದ ಎಲ್ಲ ಸಂಸ್ಥೆಗಳನ್ನೂ ನಾಶ ಮಾಡುತ್ತಿದ್ದಾರೆ. ಸಂವಿಧಾನ ಮಾತ್ರವೇ ಬಾಕಿ ಉಳಿದಿದೆ. ನಿಮ್ಮ ಗಗನಚುಂಬಿ ಪ್ರತಿಮೆ ಆ ದುರಂತವನ್ನೂ ನೋಡಬೇಕಾಗಬಹುದೇನೋ ಎನ್ನುವ ಆತಂಕ ಪ್ರಜ್ಞಾವಂತ ಭಾರತೀಯರನ್ನು ಕಾಡುತ್ತಿದೆ. ಈ ಆತಂಕಗಳ ನಡುವೆಯೇ ನೀವು ಮತ್ತು ನಿಮ್ಮ ಒಡನಾಡಿಗಳು ಕಟ್ಟಿದ ಅಡಿಪಾಯ ಭದ್ರವಾಗಿರುತ್ತದೆ ಎಂಬ ಆಶಯವೂ ಇದೆ. ನಿಮ್ಮ ಪ್ರತಿಮೆ ನಿರ್ಜೀವ ಆದರೆ ನಿಮ್ಮ ಚಿಂತನೆಗಳು ಸಜೀವ. ನಿಮ್ಮ ಉದಾತ್ತ ಚಿಂತನೆಗಳು ಅಪಹರಣವಾಗದಿರಲಿ ಎನ್ನುವುದಷ್ಟೇ ನಮ್ಮ ಆಶಯ. ಈ ಆಶಯ ನಿಮ್ಮದೂ ಸಹ ಎಂಬ ಭರವಸೆಯೊಂದಿಗೇ ಮುನ್ನಡೆಯುತ್ತೇವೆ. ನಮಸ್ಕಾರ ಪಟೇಲರೇ .

‍ಲೇಖಕರು Avadhi

21 December, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading