'ಸರ್ಜರಿಯ ಆ ಸುಖ!'

ಗುಂಡುರಾವ್ ದೇಸಾಯಿ

ಹೆಣ್ಮಕ್ಕಳಿಗೆ ಕೆಲವು ದಿನ ನಿರಾಳತೆಯಿಂದ ರೆಸ್ಟು ತೋಗೊಳೊಕೆ, ಹಲವರ ಅನುಕಂಪ ಪಡಕೊಳ್ಳೋಕೆ ಪ್ರಕೃತಿನೆ ಬಾಣಂತನದ ಭಾಗ್ಯನ ಕರುಣಿಸಿದೆ. ಆದೇ ಅಂತಹ ವಿಶ್ರಾಂತಿ, ಅನುಕಂಪ ಪಡಿಯೋ ಭಾಗ್ಯ ಪಾಪಿ ಈ ಗಂಡು ಜನ್ಮಕ್ಕ ಇಲ್ವೇ! ಆದರೆ ಅಂತಹ ಸ್ವಲ್ಪ ಭಾಗ್ಯ ಸಿಗೋದು ಕಾಯಿಲೇ ಕಸಾಯಿ ಬಂದಾಗ, ಯಾವುದೊ ಸರ್ಜರಿಗೆ ಒಳಗಾದಾಗ ಅನ್ನೋದು ನನ್ನ ಅಂದಾಜು. ಆದರ ಸುಡುಗಾಡು ಜಡ್ಡು,ಸರ್ಜರಿಯಿಂದ ಯಾವಾಗ ಗುಣವಾಗುವುದೋ, ಏನಾಗುವುದೋ ಎನ್ನುವ ಆತಂಕದಲ್ಲಿ ಬಾಣಂತಿಯಲ್ಲಿರುವಂತಹ ನಿರಮ್ಮಳತೆ ಇರುತ್ತೆ ಅಂತಿರಾ? ಆದ್ರು ಬಹಳಷ್ಟು ಜನ ಇಂತಹ ಕಾಯಿಲೆ ಬಂದಾಗ, ಸರ್ಜರಿಗೆ ಒಳಗಾದಾಗ ನೋವಿನಲ್ಲೂ ಸಿಗುವ ಸಾಂತ್ವಾನ, ಅನುಕಂಪದಿಂದ ಎಂಜಾಯ್ ಮಾಡ್ತಾರೆ. ನಾನು ಇತ್ತಿಚಿಗೆ ಸಣ್ಣ ಹನರ್ಿಯಾ ಸರ್ಜರಿಗೆ ಒಳಗಾದಾಗ ಅಂತಹದನ್ನು ಅನುಭವಿಸಬೇಕಂದರೂ ಇರಿಸು ಮುರಿಸು ಹಿಡಿಸಿದ್ದೆ ಹೆಚ್ಚು.
ಕೆಲ ತಿಂಗಳು ಹಿಂದೆ ನನ್ನ ಗುರುಗಳೊಬ್ಬರಿಗೆ ಅಪಘಾತವಾದಾಗ ಅವರನ್ನು ಮಾತನಾಡಿಸಲು ಬರವವರದು ಕ್ಯೂವು ಹತ್ತಿತ್ತು. ಎಲ್ಲರ ಅಚ್ಚುಮೆಚ್ಚಿನ ಗುರುಗಳಾಗಿದ್ದ ಅವರನ್ನು ಮಾತಾಡಿಸಲು ಬರುವ ಶಿಷ್ಯವರ್ಗ, ಸ್ನೇಹಿತ, ಆತ್ಮಿಯ, ಅಭಿಮಾನದ ಬಳಗ, ಅದು ತಂಡೋಪತಂಡವಾಗಿ ಬರುವ ಜನಗಳನ್ನು ನೋಡಿ ಆಸ್ಪತ್ರೆಯ ವೈದ್ಯರು ನನ್ನ ಮೂವತ್ತು ವರ್ಷದ ಅನುಭವದಲ್ಲಿ ನಿಮ್ಮಂತ ಪೇಷಂಟಗಳನ್ನ ನೋಡೆ ಇಲ್ಲ ಅಂತ ಉದ್ಗಾರ ತೆಗೆದಿದ್ದರು. ಗುರುಗಳಷ್ಟು ಸಾಧ್ಯವಾಗದಿದ್ದರೂ ತಕ್ಕ ಮಟ್ಟಿಗೆ ಅಂತಹ ಅನುಭವ ಪಡೆದರಾಯಿತು ಅಂತ ಬಯಸಿದ್ದೆ. ಸರ್ಜರಿಗಾಗಿ ಅಂತ ಆಸ್ಪತ್ರೆಗೆ ಅಡ್ಮಿಟ ಆದಾಗ ಖಾಲಿ ಮಲಗಿದಾಗ ಬಂದ ಆಲೋಚನೆಯಂತೆ `ಯಾಕ್ಸಿಡೆಂಟಾಗಿದ್ದರೆ ಹಿಂಗಿಂಗ ಆಯ್ತು ಅಂತ, ಹಾರ್ಟ ಅಥವಾ ಅಪೆಂಡಿಕ್ಸೋ, ಇನ್ನಾವುದೋ ಆಪರೆಷನ್ನೋ ಆಗಿದ್ದರೆ ಹಿಂಗ ಆಗಿತ್ತು ಅಂತ ಹೇಳಬಹುದು ಆದರೆ ಈ ಹನರ್ಿಯಾ, ಪೈಲ್ಸು, ಪಿಸ್ತುಲಾ ಹಾಂಗ ಹೇಳುವಂತಹವುವೇ?’ ಮುಂದಿನ ಘಟನೆಗಳನ್ನು ಆಲೋಚಿಸಿ ನಾಚಿಕೆ ಎನಿಸಿ, ಯಾರಿಗೂ ಹೇಳದೆ ಇರುವದೇ ಲೇಸೆನಿಸಿ ಆ ಬಗ್ಗ ಜೊತೆಗಿದ್ದ ಅಕ್ಕಳಿಗೂ ‘ದಯವಿಟ್ಟು ಯಾರಿಗೂ ತಿಳಿಸ ಬೇಡ ತಾಯಿ’ ಎಂದು ಸರ್ಜರಿಗೆ ಒಳಗಾದೆ.

ಒಂದು ಸೂಜಿ ಮಾಡಿಸಿಕೊಳ್ಳದ ಹತ್ತುವರ್ಷವಾಗಿತ್ತು, ಬಾಟಲಿಗಳನ್ನಂತೂ ಜೀವಮಾನದಲ್ಲೇ ಕಂಡಿರಲಿಲ್ಲ. ಸುಮಾರು ನಾಲ್ಕು ಸಾವಿರ ರೂಪಾಯಿಗಳಷ್ಟು ಬಾಟಲ್, ಸರ್ಜರಿಗೆ ಬೇಕಾದ ಸಾಮಾನು, ಚಾಕಲೇಟುಗಳಂತೆ ಕೊಟ್ಟ ಇಪ್ಪತ್ತು ಮೂವತ್ತು ಸಿರಂಜುಗಳನ್ನು ನೋಡಿ ನನ್ನ ಜಂಗಿಬಲವೇ ಉಡುಗಿ ಹೋಯಿತು. ಆದರೆ ಆತ್ಮಿಯರಾಗಿದ್ದ ಅರವಳಿಕೆ ತಜ್ಞರಾದ ಡಾ||ಸಿದ್ದಣ್ಣನವರು ‘`ಮೇಷ್ಟ್ರೆ ನೀವು ಚಿಂತೆಮಾಡಬೇಡಿ ನಿಮಗ ಯಾವುದೆ ನೋವು ಅಗಲಾರದಂಗ ನಮ್ಮ ಸ್ನೇಹಿತ್ರು ಮಾಡ್ತರೆ. ನೀವು ಆಪರೆಷನ್ನೆಲ್ಲ ನೋಡುವಾಂಗ ಅರವಳಿಕೆ ನೀಡುತ್ತೇನೆ” ಎಂದು ನೋವಾಗದ ರೀತಿಯಲ್ಲಿ ಬೆನ್ನಿಗೆ ನೀಡಿದರು. ಕೊಯ್ದ ಭಾಗದಲ್ಲಿ ಬರುವಂತಹ ಅಂಗಾಂಗಗಳನ್ನೆಲ್ಲ ತೋರಿಸುತ್ತ ನನ್ನೊಂದಿಗೆ ಆತ್ಮಿಯವಾಗಿ ಸಂಭಾಷಿಸುತ್ತ ‘`ನೀವು ಮೇಷ್ಟ್ರು,ನಾಲ್ಕು ಮಂದಿಗೆ ನಮ್ಮ ಹೆಸರು ಪ್ರಚಾರ ಮಾಡ್ತಿರಿ” ಅಂತ ಇಷ್ಟು ಕೇರ್ ತೊಂಡು ಮಾಡಕತಿವಿ ಎಂಬುದನ್ನು ಸರ್ಜರಿ ವೈದ್ಯರು ಹೇಳಲು ಮರೆಯಲಿಲ್ಲ. ಸೂಜಿಗೆ ಹೆದರುತ್ತಿದ್ದ ನನಗೆ ಸರ್ಜರಿ ಒಂದು ತರಹದ ಆತ್ಮ ಬಲ ಹೆಚ್ಚಿಸಿತು. ಆಪರೇಷನ್ ಅಂದ್ರನೆ ಫಿಫ್ಟಿ-ಫಿಫ್ಟಿ ಅಂತ ತಿಳಿದಿದ್ದೆ; ಆಪರೇಷನ್ನ ಮುಂಚೆ ಕಾಗದ ಪತ್ರಗಳೊಂದಿಗೆ ಆಗುವ ಒಡಂಬಡಿಕೆ ನೋಡಿ!
ಆಪರೇಷನ್ನ್ ಥೇಟರಿನಿಂದ ಹೊರಬರುತ್ತಿದ್ದಂತೆ ಸಹಜವಾಗಿ ದುಗುಡದ ಛಾಯೆ ಹೊರಗಿದ್ದವರಲ್ಲಿ ಮೂಡಿತ್ತು. ನಾನು ಹೊರಬರುತ್ತಲೇ ಅವರನ್ನು ಮಾತಾಡಿಸಿದಾಗ ದುಗುಡದ ಜೊತೆಗೆ ತಲಿತುರಿಸಿಕೊಳ್ಳ ಹತ್ತಿದರು. ಅವರು ಅದು ಇದು ಅಂತ ತರಲಿಕ್ಕೆ ಹೊರ ಹೋದ ಮೇಲೆ ನನ್ನ ಅಕ್ಕ `ಸ್ವಲ್ಪ ಸಿರಿಯಸ್ಸಾಗಿರೋ ಮಹರಾಯ, ಸ್ವಲ್ಪ ಯಾಕ್ಟಿಂಗೂ ಮಾಡು, ಈ ಪರಿ ನಕ್ಕೋತ ಮಾತಾಡಿದ್ರ ಎಲ್ಲರೂ ಕಣ್ಣುಬಿಟ್ಟು ಏನರ ಆದಿತು’ ಅಂತ ಉಗದ್ಲು. ಅವಳ ಮಾತಿಗೆ ನಗು ಬಂದಿತಾದರೂ ಮೌನ ವಹಿಸಿದೆ. ಅರವಳಿಕೆ ಪವರ್ ಹೋದ ಮೇಲೆ ಸ್ವಲ್ಪ ನೋವು ಉಂಟಾಯಿತು. ನಾನು ನಕ್ಕೋತ ಇದ್ದುದ್ದನ್ನು ನೋಡಿ ಬಂಧುಗಳು, ಸ್ನೇಹಿತರು ಊರಿಗೆ, ಮನೆಗೆ ತೆರಳಿದ್ದರು. ಮಲಗಿದ್ದ ಸಹೋದರಿಗೆ ತೊಂದರೆ ಯಾಕೆ ಕೊಡಬೇಕು ಎಂದು ನೋವನ್ನು ತಡೆದು ಕೊಳ್ಳಲೆತ್ನಿಸಿದರೂ….. ನಾನು ಮಲಗದೇ ಚಡಪಡಿಸುತ್ತಿರುವದನ್ನು ಸ್ವಲ್ಪ ಎಚ್ಚರವಾದಾಗ ನೋಡಿದ ಅಕ್ಕ ‘ಬಡಕೊಂಡೆ, ಸಿರಿಯಸ್ಸಾಗಿರು ಅಂತ……. ಈಗ ನೋಡು ಕಣ್ಣು ಬಿಟ್ಟದಕ ಹ್ಯಾಗ ಒದ್ದಾಡಕತಿದಿ’ ಅಂತ ಎಂತದೋ ದೃಷ್ಟಿ ತೆಗೆದು ಮನಸಿಗೆ ಸಮಾಧಾನ ಮಾಡಿಕೊಂಡು ಮಲಗಿದಳು. ನಾನು ಆರಾಮಾದಂತೆ ಅವಳ ಕಿಟಿ ಕಿಟಿಯಿಂದ ತಪ್ಪಿಸಿಕೊಳ್ಳಲು ನಟಿಸಿ, ಮಲಗಿದೆ ನಂತರ.
ಮರುದಿನ ಸುದ್ದಿ ತಿಳಿದ ಕೆಲ ಆತ್ಮಿಯರು, ಪರಿಚಿತರು ಭೇಟಿಯಾಗಲಿಕ್ಕ ಬಂದರು. ಬಂದವರೆಲ್ಲರೊಂದಿಗೆ ಸಾಯಂಕಾಲದವರೆಗೆ ಮಾತಾಡತ ಮಾತಾಡತ ತಲಿಸೂಲೆ ಅದು ಬದುಕಿನಲ್ಲೆ ಕಂಡರಿಯದಂತದ್ದು ಸ್ಟಾರ್ಟ ಆಯ್ತು. ಸಹಜವಾಗಿ ಸಹೋದರಿಯಿಂದ ಮಂಗಳಾರತಿನೂ ಆಯ್ತು. ಸದಾ ಮೌನ ಇಷ್ಟಪಡುವ ನನಗೆ ಮಾತುಗಳು ಚಿಟ್ಟು ಹಿಡಿಸಿ ಯಮ ಯಾತನೆ ಅನಿಸಿದವು. ಅವರಿಗೆಲ್ಲ ಹೋಗುವಾಗ ದಯವಿಟ್ಟು ಯಾರಿಗೂ ಹೇಳಬೇಡಿ ಅಂತ ನನ್ನ ಪರಿಸ್ಥಿತಿ ಹೇಳಿ ತಿಳಿಸಿ ಕಳುಹಿಸಿದೆ. ಒಂದ ದಿನಕ್ಕ ಕೆಲವೆ ಜನರಿಂದ ತತ್ತರಿಸಿ ಹೋದವ ಅದೇ ನನ್ನ ಗುರುಗಳು ಆ ಜನಸಾಗರವನ್ನು ಹೇಗೆ ತಡೆದು ಕೊಂಡರೋ ಅನ್ನುವುದು ವಿಸ್ಮಯ ಅನಿಸಿತು. ಬಿಡದ ಕರ್ಮವೆಂದು ಭಾವಿಸಿಯೋ ಅಥವಾ ಬೇಸತ್ತೋ ಏನೋ ಆ ಗುರುಗಳು ಒಂದೆರಡು ದಿನಗಳಲ್ಲಿ ಯಾರಾದ್ರೂ ಮಾತಾಡಿಸಲಿಕ್ಕ ಬಂದಕೂಡಲೇ ಅವರು ವಿಚಾರಿಸುವ ಮೋದಲೇ `’ಏನಿಲ್ಲರಿ ಗಾಡಿ ಮೇಲೆ ಕಾರ್ಯಕ್ರಮಕ್ಕಂತ ಬರಕತಿದ್ದೆನ್ರಿ, ಕಣ್ಣಿಗೆ ಚಕ್ರಬಂದಂಗಾತು, ಎದುರಿಗೆ ಜೀಪೋಂದು ಬಂತು ಅದಕ್ಕ ಡಿಕ್ಕಿ ಹೊಡದೆ ಹಿಂಗಾತು. ಇಲ್ಲಿ ಆಪರೇಷನ್ ಆಗ್ಯಾದ, ಆರಾಮ ಇದ್ದಿನಿ” ಅಂತ ವರದಿ ಒಪ್ಪಿಸಿ ಬಿಡೋರು. ಇಷ್ಟೇಲ್ಲ ಹೇಳಿದ ಮೇಲೆ ಮುಂದುವರಸಲಿಕ್ಕೆ ಮಾತು ಎಲ್ಲಿ ಉಳದಿರುತಾವ ಹೇಳಿ. ಹೀಗೆ ಜನರನ್ನ ಸಾಗಹಾಕತಿದ್ರು. ಆದರೂ ಅವರು ಅದ್ಹೇಗೆ ಮಾತುಗಳ ಪ್ರವಾಹವನ್ನು ಎದುರಿಸಿದ್ದರೋ ನಾನು ಒಂದೆ ದಿನಕ್ಕೆ ಬೋಲ್ಡ ಆದೆ.
ಮೂರದಿನಕ್ಕ ಡಿಸ್ಚಾರ್ಜ ಆಗಿ ಊರಿಗೆ ಬಂದ ಮೇಲೆ ಯಾರಿಗೂ ತಿಳಿಸಿರದಿದ್ದರೂ ಮನೆ ಸುತ್ತಮುತ್ತಿನವರು,ಆತ್ಮಿಯರು,ಸ್ನೇಹಿತರೂ ಕುಶಲ ವಿಚಾರಕ್ಕೆ ಬರ ಹತ್ತಿದರೂ. ಹೆಣ್ಮಕ್ಕಳು ಬಂದರೆ ಬಲು ಮುಜುಗರವಾಗತ್ತಿದ್ದರಿಂದ ಅಂತಹ ಸೂಚನೆ ಕಂಡುಬಂದರೆ ಮಲಗಿದಂತೆ ನಟಿಸಿಬಿಡುತ್ತಿದ್ದೆ. ಫೋನ ಮಾಡಿ ವಿಚಾರಿಸುತ್ತಿದ್ದವರಿಗೆ ಎಲ್ಲ ಆರಾಮ ಆಗಿದೆ ಬರುವ ಅವಶ್ಯಕತೆನೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಿದ್ದೆ. ಬಂದವರಲ್ಲಿ ಕೆಲವರದು ಸಹಜ ಕೂತುಹಲ ಆಪರೇಷನ್ನ ಆದ ಜಾಗ ನೋಡಬೇಕೆನ್ನುವುದು. ಒತ್ತಾಯಪೂರ್ವಕವಾಗಿ ತೋರ್ಸಿ ತೋರ್ಸಿ ಜಿಗುಪ್ಸೆ ಬಂದು, ಎಲ್ಲೇರ ಅಜ್ಞಾತದಲ್ಲಿದ್ರೆ ಚೆನ್ನಾಗಿರತ್ತಿತು ಎನಿಸುತ್ತಿತ್ತು. ಬಂದವರಲ್ಲಿ ಎಲ್ಲರೂ ಅನುಕಂಪ ಪಡುವವರು ಇರಲ್ಲ. ಆಕ್ಸಿಡೆಂಟ್ ಆಗಿದ್ದರೆ `ಅಬಾಬಬ……. ಇವ ಗಾಡಿ ಮ್ಯಾಲೆ ಇಷ್ಟು ಉರಿತ್ತಿದ್ದನಪ’ ಎಂದೋ `ಇಲ್ಲ ಇವನಿಗೆ ಗಾಡಿ ಮ್ಯಾಲೆ ಕೂತ್ರ ಕಣ್ಣ ಕಾಣತಿರಲಿಲ್ಲ’ ಎಂದೋ ಬಯ್ಯುವ ಜನಕ್ಕ ನೆವ ಸಿಗತಿತ್ತು. ಆದರ ನನ್ನ ವಿಷಯಕ್ಕ ಅಂತಹ ನೆವ ಇರಲಿಲ್ಲಲ. ನನ್ನ ಮಾವ ಮಾತಾಡಿಸಲು ಬಂದಾಗ ಸದಾ ಬಯ್ಯುವ ಆತನಿಗೆ ನೆಪ ಸಿಗಲ್ಲ ಅಂತ ಮಾಡಿದ್ದೆ. ಯಾಕಂದ್ರ ಸಣ್ಣೋನಿದ್ದಾ ಕೈ ಮುರುಕೊಂಡಾಗ, ಪಟಾಕಿ ಸಿಡಿಸಲು ಹೋಗಿ ಕೈ ಸುಟ್ಟು ಕೊಂಡಾಗ ಎಲ್ಲರೂ ಅನುಕಂಪ ಪಟ್ಟು ಧೈರ್ಯ ತುಂಬಿದ್ದರು. ಆದರೆ ಇವ ಬಂದವನೆ ಕಪಾಳಕ್ಕ `ಪಟಾರ್’ಅಂತ ಹೊಡೆದು `ಹುಡುಗರು ಎಷ್ಟು ಸೂಕ್ಷ್ಮ ಇರಬೇಕೆಂಬುದು ಗೊತ್ತಿಲ್ಲೆನಲೇ? ಕೆತ್ತಕ ಹೋಗಿದ್ದೆನಪ’ ಎಂದು ಬಾರಿಸಿದ್ದ, ಪೇಷಂಟು ಅನ್ನೋದು ಖಬರಿರದೆ! ವೈದ್ಯರ ಬಳಿ ಎಲ್ಲಾ ವಿಚಾರ ಮಾಡಿ ಬಂದಿದ್ದ ಅವ `’ಅಲ್ಲ ಮೋದಲಾ ಕೈಲಾಗಲ್ಲ ಏನು ಕಿಸ್ಯಾಕ ಹೋಗಿದ್ದೆಪ, ಏನ್ ಎತ್ತಿ ಕಮಾಯ ಮಾಡಿ ಹರ್ನಿಯಾ ಆಗೋಂಗ ಮಾಡಿಕೊಂಡಿ?”ಎಂದು ಒದರ್ಯಾಡಿ, ಬಡಿಯೋ ವಯಸ್ಸಲ್ಲ ನೋಡಿ! ಮನೆಯವರಿಗೆ ಹಕಿಕತ್ತು ಗೊತ್ತಾಗೊ ಹಾಂಗ ಮಾಡಿದ್ದರ ಫಲ ಇಂದು ಮನ್ಯಾಗ ತಂಬಿಗಿ ಕೂಡಾ ಎತ್ತಕ ಸ್ವತಂತ್ರ ಇಲ್ಲದಾಂಗ ಮಾಡ್ಯಾನ.
ಎಲ್ಲಾರು ಒಂದು ರೀತಿಯಿದ್ರ ನಮ್ಮವ್ವನದೊಂದು. ಅವಳ ಮುಗ್ಧ ಭಕ್ತಿ ಮುಂದ ಎಲ್ಲಾರ ಶ್ಯಾಣೇತನ ಬಾರಲು ಬಿಳತಾವ. ಆಕಿದೂ ಒಂದೇ ಹಠ, ಪ್ರಳಯ ಆದ್ರೂ ಚಿಂತಿಲ್ಲ ದೇವ್ರ ಪೂಜ ಬಿಡಬಾರದು ಅನ್ನೋದು.ನಾನು ಅತಿಯಾಗಿ ಮಾಡುವ ಮಡಿವಂತಿಕೆಗೆ ಬಯ್ಯತಿದ್ರ `ಸನ್ಯಾಸಿ,ನೀ ಈ ಮಟ್ಟಕ್ಕ ಇರಬೇಕಾದ್ರೆ ನನ್ನ ಪೂಜ ಕಾರಣ ರಂಡೆಗಂಡ, ಮೊನ್ನ ಚಿಕನ್ ಗುನ್ಯಾ ಇಡೀ ಊರಿಗೆ ಬಂತು, ನಮಗ ಬಂದ್ರೂ ನಿನಗ ಯಾಕ ಬರಲಿಲ್ಲ ಹೇಳು? ಅದು ನಾನು ಮಾಡಿದ ಪೂಜಾಫಲ’ಎಂದು ಪ್ರೀತಿಯಿಂದ ಬಯ್ಯುವಾಗ ನಾನು ಮೌನ ವಹಿಸಿಬಿಡತಿನಿ. ಅದೂ ನಾನು ಸರ್ಜರಿಗೆ ಒಳಗಾಗಿದ್ದು ದೀಪಾವಳಿ ಟೈಮಿನ್ಯಾಗ. ನನ್ನ ಸರ್ಜರಿಗಿಂತಲೂ ದೇವ್ರ ಪೂಜಾದ ಚಿಂತಿ ಅವ್ವಳದು. ಪೂಜೆ ಅಪ್ಪಿ ತಪ್ಪಿ ಮಾಡಲಿಲ್ಲ ಅಂದ್ರ ವಾರತನ ಮನಿ ವಾತವರಣನ ಬ್ಯಾರೆ ಇರುತ್ತೆ. ಮುಖಗಂಟಾಕಿಕೊಂಡು ಊಟ ಬಿಟ್ಟು ಮೂಲಿ ಸೇರಿ ಬಿಟ್ರ ಮುಗಿದೋತು. ನನ್ನ ಆದರ್ಶಗಳೆಲ್ಲ ಗೆದ್ದಲು ತಿಂದಂಗ. ಪುಣ್ಯಕ್ಕ ಆಸ್ತಿಕ ಹಾಗೂ ನಾಸ್ತಿಕತೆಗಳೆರಡರ ಒಳ್ಳೆ ವಿಚಾರಗಳನ್ನು ಒಪ್ಪಿಕೊಳ್ಳುವ ನಡಸ್ತಿಕ ನಾನಾಗಿರುವುದರಿಂದ ಎರಡು ಮಾತಿಲ್ಲದ ಅವಳ ಮಾತಿಗೆಲ್ಲ ಒಪ್ಪಿಗೋತಿನಿ. ಒಂದು ವೇಳೆ ನಾನು ಎಡಪಂಥೀಯನಾಗಿದ್ದರೆ ಏನಾಗುತ್ತಿತ್ತೋ…? ಇರಲಿ ವಿಷಯಾಂತರವೇಕೆ, ನಾನು ಮನೆಗೆ ಬರುತ್ತಿದ್ದಂತೆ ಅವ್ವ ಮೊದಲು ಕೇಳಿದ್ದು ‘`ಚತುರ್ದದಶಿಗೆ ಪೂಜಾ ಮಾಡ್ತಿಲ್ಲ?” ಅಂತ.ಸ್ನಾನ ಹದಿನೈದು ದಿನಗಳವರೆಗೆ ಮಾಡಬಾರದು ಎಂದು ಹೇಳಿರುವ ವಿಷಯ ಗೊತ್ತಾದ ಮೇಲೆ ಹಲುಬಿದ್ದೆ ಹಲುಬಿದ್ದು `’ಎಂತಹ ಟೈಮಿನ್ಯಾಗ ಆಪರೇಷನ್ ಮಾಡಿಸಿಕೊಂಡ ಇವ ಭಂಡ, ನನ್ನ ದೇವ್ರ ಗತಿ ಏನು?” ಅಂತ. ನಾನು ಯಾಕಾದ್ರೂ ಮಾಡಿಸಿಕೊಂಡೆನೋ ಅನ್ನೋ ಹಾಗೆ ಮಾಡಿದ್ಲು.ಪುಣ್ಯಕ್ಕ ದೀಪಾವಳಿಗೆ ನಾಲ್ಕುದಿನ ರಜೆ ಹಾಕಿ ಹಾಯಾಗಿರೋಣ ಅಂತ ಬಂದ ಭಾವಗ ಬಿತ್ತು ಪೂಜಾದ ಭಾರ.ನಾನು ಉಳಕೊಂಡೆ ಅನ್ನಿ.
ಬಂದವರೆಲ್ಲ ಬ್ರಡ್ಡು,ಬಿಸ್ಕಟ್ಟು,ಹಣ್ಣು ತಂದು ತಂದು ಮನೆ ತುಂಬಿದ್ದವು.ಅಕ್ಕನ ಮಗ ರಾಜು ಒಂದಿನ ಮಾಮ ಈ ಬ್ರೇಡ್ಡು, ಬಿಸ್ಕಟ್ಟು, ಹಣ್ಣು ತಿಂದು ತಿಂದು ಸಾಕಾಗಿ ಹೋಗ್ಯಾದ, ಸ್ವಲ್ಪ ವೆರೆಟಿ ವೆರೆಟಿ ತೊಂಡು ಬಾ ಅಂತ ಹೇಳಪ ನೀನು ಎಂದಾಗ ”ಕೇಕು,ಖಾರ ಡಾಣಿ ತೊಂಡು ಬಾ ಅಂತ ಹೇಳು ಅಂತ ಕೇಳಲು ಮಗಳು ಮರಿಲಿಲ್ಲ. ಹಾಗೆ ಮನೆಯಲ್ಲಿ ಬಿಸ್ಕಟ್, ಬ್ರೆಡ್ಡು ಪಾಕೇಟು ಹೆಚ್ಚಾದದಕ ಅಕ್ಕ ಪಕ್ಕದ ಮನೆಯ ಮಕ್ಕಳಿಗೆ ಕೊಡಲು ಹೇಳಿದ್ದೆ. ಒಂದು ದಿನ ಪಕ್ಕದ ಮನೆಯ ಮಗು ಬಂದಿದ್ದೆ ಬ್ರಡ್ಡು ಬಿಸ್ಕಟ್ಟು ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಅಂಕಲ್. ಯಾವಾಗಲೂ ನಿಮಗೆ ಹೀಗೆ ಆಗತಿರಲಿ ಅಂತ ತೊದಲು ನುಡಿಗಳಾಡಬೇಕೆ! ಈ ಮಕ್ಕಳ ಮಾತುಗಳಿಗೆ ಏನು ಉತ್ತರಿಸಬೇಕು ಹೇಳಿ?
ವಾರ ಕಳಿತು. ಸ್ಟಿಚಸ್ ಉಚ್ಚಿದರು, ಎರಡು ದಿನ ರೆಸ್ಟು ತೊಂಡು ನಿಧಾನವಾಗಿ ಅಡ್ಡಾಡಿ ಎಂದು ಗ್ರೀನ ಸಿಗ್ನಲ್ ನೀಡಿದರು. ಬದುಕಿದೆ ಬಡ ಜೀವವೇ ಎಂದುಕೊಂಡೆ. ವೈದ್ಯರು ಬೇಕಾದ್ದು ತಿನ್ನಿ ಎಂದಿದ್ದರೂ ಮನೆಯಲ್ಲಿ ಉಣಬಡಿಸುತ್ತಿದ್ದ ಪತ್ಯದ ಊಟಕ್ಕೆ ಮೆತ್ತಗಾಗಿದ್ದೆ. ನಿಂತ್ರು, ಕೂತ್ರು, ಮಲಗಿದ್ರೂ, ಮಾತಾಡಿದ್ರೂ ಪ್ರತಿಯೊಂದಕ್ಕೂ ಎಚ್ಚರಿಸುತ್ತಿದ್ದ ಮಾತುಗಳಿಗೆ ನಿತ್ರಾಣನಾಗಿದ್ದೆ. ಶಾಲೆ ಆರಂಭವಾಗುವ ದಿನಗಳು ಹತ್ತರ ಬಂದಿತ್ತು. ವಿಷಯ ಗೊತ್ತಾಗಿ ಸಹುದ್ಯೋಗಿ ಕಾಗಿ ಬಳಗ ಬಂದಿತೆಂದು ಅಂಜಿ ಮೆಡಿಕಲ್ ರಜೆ ಹಾಕೆಂದು ಹಠ ಹಿಡಿದ ಮನೆಯವರ ಮಾತುಗಳನ್ನು ಲೆಕ್ಕಿಸದೆ ಹೋಗಲಾರಂಭಿಸಿದೆ.
ದಾರಿಯಲ್ಲಿ ಹೊರಟಾಗ ಕೇರಿ ಮಂದಿ ಸಹಜವಾಗಿ ತಮ್ಮ ಮಾತಿನ ಪರಿಭಾಷೆಯಲ್ಲಿ ಯಾಕಪ ಮಾಸ್ತರ… ಇಟು ದಿನ ಛಲೋ ಇದ್ದಿ ಯಾವ ಕೆಟ್ಟಬ್ಯಾನಿ ಬಡಕೊಂತು ಅಂತ, ಭೇಟಿಯಾದ ಚಡ್ಡಿದೋಸ್ತರು ಯಾಕೋ? ಏನಾಯ್ತು ಎಷ್ಟು ಇಳಿದು ಹೋಗಿದಿ, ನಿನಗೂ ಅದ ಬಡಕೊಂತನೂ,ನಮ್ಮ ಬ್ಯಾಚಿನಾ ಇಪ್ಪತ್ತೊಂದನೆ ದುರಂತ ನಾಯಕರ ಲಿಸ್ಟಿನ್ಯಾಗ ಸೇರಕ ಹೊಂಟೇನು? ಎಂದು ಕೇಳಲಾರಂಭಿಸಿದರು. ಆ ಜನರ ಮಾತುಗಳನ್ನು ಅರಗಿಸಿಕೊಂಡರೂ ಗೆಳೆಯರ ಮಾತುಗಳಿಗೆ ಎದಿ ಝಲ್ ಅಂತು. ಕಾಲ ಈಗ ಇಷ್ಟು ಸುಮಾರಾಗ್ಯಾದ ಅಂದ್ರ ಕೆಲ ದಿನ ಹಾಸಿಗಿಡಿದು ಮಲಗಿದ್ವಿ, ಸೊರಗಿದಿವಿ ಅಂದ್ರ ಮೊದಲು ಸಸ್ಪೆಕ್ಟು ಮಾಡೋದು `ಅದ,ಅವನಿಗೆ ಅದ ಏಡ್ಸ ಬಂದೈತಲೇ ‘ಅಂತ ವೈದ್ಯರಿಗಿಂತಲೂ ಮೊದಲ ರಿಪೊರ್ಟ ಕೊಟ್ಟು ಬಿಡತಾರೆ. ಇರಲಿ ನಮ್ಮ ಶಾಲಾ ಅವಧಿಯ ಬ್ಯಾಚು ಎಂತಹ ದುರದೃಷ್ಟದಂದ್ರ ಹಾದಿಗೆ ಹತ್ತಿಕೊಂಡೋರು, ಒಳ್ಳೆ ಸ್ಥಾನದಲ್ಲಿರೋರು ಬಹು ವಿರಳ. ಮದನಗೋಪಾಲರು ನಮ್ಮ ಜಿಲ್ಲೆಗೆ ತೊಂಬತ್ತೆರಡರಲ್ಲಿ ಡಿಸಿ ಯಾಗಿದ್ದಾಗ ಮೆಟ್ರಿಕಿ ಪರೀಕ್ಷೆಯಲ್ಲಿ ಹಿಗ್ಗಾಮುಗ್ಗಾ ಕೈಗೊಂಡ ಕಠಿಣ ಕ್ರಮಗಳಿಂದಾಗಿ ನೂರು ಜನರಲ್ಲಿ ಇಪ್ಪತ್ತೆ ಹುಡುಗರು ಪಾಸಾಗಿದ್ವಿ. ಇಲ್ಲಿ ಕಾಟ ತಾಳಲಾರದೆ ಫೇಲಾದ ಹುಡುಗರು ಪಾಸಾಗಲು ಮರುವರ್ಷ ಬಿಜಾಪುರು ಜಿಲ್ಲೆಯ ಕೆಲ ಕುಪ್ರಸಿದ್ದ ಸೆಂಟರುಗಳಲ್ಲಿ ದಾಖಲಾದರು. ಅದೇ ವರ್ಷ ನಮ್ಮ ಜಿಲ್ಲೆ ಡಿಸಿಯವರು ಆ ಜಿಲ್ಲೆಗೆ ಒಕ್ಕರಿಸಬೇಕೆ? ಅಲ್ಲಿ ಡುಮುಕಿ ಹೊಡೆದು ಹೊಡೆದು ನಿತ್ರಾಣಕ್ಕ ಬಿದ್ದು ಪ್ರಯತ್ನ ಮಾಡಿ ಮಾಡಿ ತಕ್ಕೋಳ್ಳಲಾಗದೆ ಕೈಚೆಲ್ಲಿ ಕುಳಿತು ಅದು ಇದು ಅಂತ ಸಿಕ್ಕ ದಾರಿ ಹಿಡಿದಾರ. ನಮ್ಮ ಬ್ಯಾಚಿಗೆ ಯಾರ ಶಾಪನೋ ಕಾಣೆ ಈಗಾಗಲೇ ಇಪ್ಪತ್ತು ಜನ ಏಡ್ಸ ಬಂದು ಮಸಣ ಸೇರ್ಯಾರ. ನಮ್ಮ ಬ್ಯಾಚಿನ ಹುಡುಗಿಯರಲ್ಲಿ ಹದಿನೈದಕ್ಕಿನ ಹೆಚ್ಚಿನವರು ವಿಡೋ ಆಗ್ಯಾರ ಸದು ಸಣ್ಣ ವಯಸ್ಸಿನಲ್ಲಿ! ಎಂತಹ ಕಾಕತಾಳಿಯಲ್ಲವೆ?
ಹಾಗೆ ನನ್ನನ್ನು ಆ ಲಿಸ್ಟಿಗೆ ಸೇರಿಸಲು ಹೊರಟ ಗೆಳೆಯರಿಗೆ ವಿಷಯ ತಿಳಿಸಿದಾಗ `ಅದಕಲೇ ನಮ್ಮಂಗ ಕುಡಿದು ತಿಂದು ಮಜಾ ಮಾಡತಿದ್ರ ಯಾವ ರೋಗ ಬರಲ್ಲ. ಇಲ್ಲಿಕ್ರ ಇದಕ್ಕ ದಂಡ ಬಡಿಬೇಕು ನೋಡು. ಛಲೋ ಆಯ್ತು ಮಗನ ನೌಕರಿ ಸೇರಿದಾಗನಿಂದ ಒಂದು ಸಾರಿ ಗುಂಡು ಪಾಟರ್ಿ ಕೊಟ್ಟಿದ್ದ್ದಿಲ್ಲ’ ಅನ್ನಬೇಕೆ? ಈ ಕಿರಿಕಿರಿನ ಬ್ಯಾಡ ಎಂದು ಸಹುದ್ಯೋಗಿಯ ಗಾಡಿಯ ಒಂದೆ ಸೈಡಿನಲ್ಲಿ ಕುಳಿತು ಹೋಗತೋಡಗಿದೆ. ಹಾಗೆ ಕುಳಿತು ಹೋಗುತ್ತಿದ್ದ ನನ್ನನ್ನು ಎಲ್ಲರೂ ದುರಾಯಿಸಿಕೊಂಡು ನೋಡುತ್ತಿದ್ದರು. ಅಂಗಡಿಯಲ್ಲಿ ಒಬ್ಬರು ಕೇಳಿಯೇ ಬಿಟ್ರು `ಯಾಕ್ರಿ ಮೇಷ್ಟ್ರೆ,ಆಕ್ಸಿಡೆಂಟು ಆಗಿತ್ತೋ ಏನೋ, ಒಂದೆ ಸೈಡಿನಲ್ಲಿ ಹೆಂಗಸರು ಕುತುಗೊಂಡು ಹೋದಂಗ ಹೋಗುತಿದ್ರಿ’ ಎಂದು ಕೇಳಿದಾಗ ಅದೇ ಕತೆ ಹೇಳಬೇಕಾಯಿತು.ಮನೆಗಿನಗಿಂತಲೂ ಹೊರೆಗಿನವರ ಮಾತುಗಳು ಮುಜುಗರ ನೀಡಕತಿದ್ವು. ವೈದ್ಯರ ಮರುಭೇಟಿಗೆ ಹೋದಾಗ `ನನಗೆ ಸರ್ಜರಿ ಮಾಡಿಸಿಕೊಂಡಿದ್ದ ತಪ್ಪಾದಂಗ ಆಗ್ಯಾದ’ ಎಂದು ವಿಷಯ ತಿಳಿಸಿ `ನನಗ ನಿರ್ಭಯದಿಂದ ಅಡ್ಡಾಡುವದಕ್ಕ ಚೆಕ್ ಮಾಡಿ ಟ್ರೀಟ್ ಮೆಂಟ ನೀಡ್ರಿ’ ಎಂದೆ. ಅವರು ಪರೀಶಿಲಿಸಿ ಓ.ಕೆ ರಿಪೋರ್ಟ ನೀಡಿದಾಗ ನಿಟ್ಟುಸಿರು ಬಿಟ್ಟೆ. ಕಡಿಮೆ ಅವಧಿಯಲ್ಲಿ ಗುಣವಾಗುವ ಹಾಗೆ ಮಾಡಿದಕ್ಕೆ ಥ್ಯಾಂಕ್ಸ ಹೇಳಿ, ಬರ್ತಿನ್ರಿ ಎಂದಾಗ `ಮತ್ಯಾವಗ ಬರ್ತಿರಿ?’ ಅಂತ ಅಪಶಕುನ ನುಡಿಬೇಕೆ!
 

‍ಲೇಖಕರು G

April 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Harsha

    ಬಹಳ ಅತ್ಯುತ್ತಮ ಹಾಸ್ಯ ಬರಹ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ತುಂಬಾ ಚೆನ್ನಾಗಿ ಬರ್ದಿದ್ದೀರಿ.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಸನ್ಮಾನ್ಯ ದೇಸಾಯರೆ , ಬಾಣಂತನದ ನಿರುಮ್ಮಳತೆಗೆ ಮೊದಲು ಹೆರಿಗಿ ಬ್ಯಾನಿ ಕೂಡ ಇರ್ತದ ! ಬಟ್ ಬೆಟರ್ ದೆನ್ ಹರ್ನಿಯಾ (: (:

    ಪ್ರತಿಕ್ರಿಯೆ
  3. mallikarjun talwar

    haasyada honalu harisuva barahagalu kadime agtive. dyavittu hige barita iri sir.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: