ಸರೋಜಿನಿ ಪಡಸಲಗಿ ಸರಣಿ 5: ಆ ಮಳೆಯೂರಿನ ಸಾರಿಗೆ ಸಂಚಾರ

ಯೋಚಿಸುತ್ತಾ ಹೋದಂತೆ ಏಸೋಂದು ಮುಖಗಳು ಒಂದು ವಿಷಯಕ್ಕೆ, ವಸ್ತುವಿಗೆ! ಅಚ್ಚರಿಯಿಂದ ತುಂಬಿ ಹೋಗಿ ಮೂಕ ವಿಸ್ಮಿತ ಈ ಜೀವ ಆಗ. ಅದೇ ಈ ಸೃಷ್ಟಿಯ ವೈಶಿಷ್ಟ್ಯ, ಅದರ ಪ್ರತಿಬಿಂಬ ಈ ಜೀವನ. ಎಲ್ಲವೂ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗೋದು ಸೃಷ್ಟಿಯ ಇನ್ನೊಂದು ವಿಶೇಷ ಅನಕೋತೀನಿ ನಾ.

ಅಂತೆಯೇ ನಮಗೂ ಆ ಬಾಡಿಗೆ ಮನೆಯಿಂದ ಮುಕ್ತಿ ಸಿಕ್ತು ಎರಡು ವರ್ಷಗಳ ನಂತರ. ಆಸ್ಪತ್ರೆ ಕಟ್ಟಡ, ಕ್ವಾರ್ಟರ್ಸ್ ಎಲ್ಲಾ ರೆಡಿಯಾಗಿ, ನಾವು ಆ ಅನಾಹ್ವಾನಿತ ಅತಿಥಿಗಳಿಗೇ ಆ ಮನೆ ಬಿಟ್ಟು ಕ್ವಾರ್ಟರ್ಸ್ ಗೆ ಬಂದೆವು. ಅಥವಾ ನಾವೇ ಅನಾಹ್ವಾನಿತ ಅತಿಥಿಗಳೋ? ಒಟ್ಟಿನಲ್ಲಿ ಒಂದು ಸಮಾಧಾನದ ಉಸಿರು ಬಿಡುವಂತಾಯ್ತು.

ತಿಳವಳ್ಳಿಯ ಚೆಲುವು, ಮಳೆ, ಜೊತೆಗೇ ಸಾರಿಗೆ ವ್ಯವಸ್ಥೆಯ ಬಗ್ಗೆ ಹೇಳದಿದ್ದರೆ ಈ ಸರಣಿ ಅಪೂರ್ಣ. ಮಲೆನಾಡಿನ ಮಡಿಲಲ್ಲಿ ಹುದುಗಿ ನಿಂತ ಆ ಪುಟ್ಟ ಗ್ರಾಮ ಸುಂದರ ಊರು. ಎತ್ತ ನೋಡಿದತ್ತ ಕಣ್ಣು ತುಂಬುವ ಹಸಿರು. ಪ್ರತಿಯೊಬ್ಬರ ಹಿತ್ತಿಲಲ್ಲೂ ಕಾಶ್ಮೀರವೇ ‌ಇಳಿದು ಬಂದಂತೆ. ನನ್ನ ನಿಸರ್ಗ ಪ್ರೇಮ ಇಲ್ಲಿ ಫಲದುಂಬಿ ನಿಂತಂತೆ ಭಾಸವಾಗುತ್ತಿತ್ತು ನನಗೆ. ಮಲ್ಲಿಗೆಯ ರಾಶಿ ಮನೆ ತುಂಬ ‌ಅರ್ಧ ರೂಪಾಯಿಗೆ. ತಲೆ ತುಂಬಾ ಮಲ್ಲಿಗೆ ಮುಡಿದು ಸಂತೃಪ್ತ ವಾಯ್ತು ಈ ಜೀವ.

ಹೂವು-ಹಾಡು-ಮಳೆ ‌ಅಂದರೆ ನನಗೆ ಹುಚ್ಚು ಪ್ರೀತಿ. ಅಲ್ಲಿನ ಮಳೆಯ ಸೊಬಗು ನನಗೆ ತನ್ನ ವಿಧ ವಿಧವಾದ ರೂಪ, ಭಂಗಿ, ಹಾವಭಾವ ತೋರಿಸ್ತು. ಅಲ್ಲಿನ ಮಳೆಯ ಅಬ್ಬರಕ್ಕೆ ಮನೆ ಅದುರಿ ಹೋಗಬೇಕು. ಆ ಥರ ರಭಸದಿಂದ, ಬಾನಿಗೆ ರಂಧ್ರಗಳಾಗಿ ಸೋರಿದಂತೆ ಧಾರೆ ಧಾರೆಯಾಗಿ, ಚಿಮ್ಮಿ ಚಿಮ್ಮಿ ಸುರಿದು ನನಗೆ ನನ್ನ ತೌರನ್ನು ನೆನಪಿಸುತ್ತಿತ್ತು ಅದು, ಅಲ್ಲಿನ ಪ್ರಮಾಣ ಕೊಂಚ ‌ಕಡಮೆಯೋ ಏನೋ ಅನಿಸಿದ್ರೂ. ಅದೇ ಕೆಸರು ಸಿಡಿದ ಯುನಿಫಾರ್ಮ್, ಕೊಡೆ, ರೇನ್ ಕೋಟ ಇದ್ರೂ ಒದ್ದೆ ಮುದ್ದೆ ಕೂದಲು, ಪಾಟೀಚೀಲ ಹೆಗಲಿಗೇರಿಸಿ ಬರುವ ಮಗಳು ನನ್ನ ಬಾಲ್ಯವನ್ನು ನೆನಪಿಸುತ್ತಿದ್ದಳು ನನಗೆ.

ಆಕೆಯ ಶಾಲೆ ತುಂಬ ದೂರ. ಹೀಗಾಗಿ ಆಕೆಗೆ ತುಂಬಾ ಕಷ್ಟವಾಗೋದು. ಮಗನ ಸ್ಕೂಲ್ ಹತ್ರ ಇದ್ರೂ ಆತನಿಗೂ ಕಷ್ಟವೇ. ನಾವು ಕ್ವಾರ್ಟರ್ಸ್ ಗೆ ಬಂದ ಮೇಲೆ ಆ ದೂರ ಇನ್ನೂ ಹೆಚ್ಚು ಆಗಿ ಮಕ್ಕಳು ಕಷ್ಟ ಪಡಬೇಕಾಯಿತು. ಏನೇ ಆಗಲಿ ಸುತ್ತಲೂ ಚೆಲುವು ಹಾಸಿ ಹರಡಿ ಏನೋ ಒಂಥರಾ ಖುಷಿ ಆಗ್ತಿತ್ತು.

ಈ ಸೌಂದರ್ಯಕ್ಕೆ ದೃಷ್ಟಿ ಬೊಟ್ಟು ಅಲ್ಲಿನ ಸಾರಿಗೆ ವ್ಯವಸ್ಥೆಯ ದುಸ್ಥಿತಿ. ಹೌದು ಪರಿಸ್ಥಿತಿ ಬಹಳೇ ಅಸ್ತವ್ಯಸ್ತ. ಆ ಊರಿಗೆ ಬಸ್ ಗಳೇ ಇಲ್ಲವೇನೋ ಎಂಬಂತೆ. ಇದ್ದ ನಾಲ್ಕಾರು ಬಸ್ಸುಗಳು ದಾರಿಯಲ್ಲಿ ಸಿಗುವ ಎಲ್ಲಾ ಹಳ್ಳಿಗಳಿಗೂ ಭೇಟಿಕೊಟ್ಟು ಹೊರಬಂದು ಪ್ರಯಾಣ ಮುಂದುವರಿಸ್ತಿದ್ವು. ಹೀಗಾಗಿ ಬಸ್ಸು ಹತ್ತಿ ಕಣ್ಣು ಮುಚ್ಚಿ ಕುಳಿತು ಬಿಡೋದೇ ವಾಸಿ ಅನಿಸ್ತಿತ್ತು. ರಸ್ತೆಗಳ ಪರಿಸ್ಥಿತಿ ಅಂತೂ ಊಹೆಗೂ ನಿಲುಕದ್ದು, ಅಷ್ಟು ಕೆಟ್ಟ ರಸ್ತೆಗಳು. ರಾತ್ರಿ 9 ಗಂಟೆಗೆ ಬೆಳಗಾವಿಯಿಂದ ಬಂದು ಹಿರೇಕೆರೂರು ಗೆ ಹೋಗೋ ಬಸ್ಸು ಹೋಯ್ತು ಅಂದ್ರೆ ತಿಳವಳ್ಳಿ ಬಿಟ್ಟು ಆಚೆ ಹೋಗೋ ದಾರಿ ಎಲ್ಲಾ ಬಂದ್ ಆದಂತೆಯೇ ಲೆಕ್ಕ. ನಮಗೆ ನನ್ನ ತೌರು, ಹುಕ್ಕೇರಿಗೆ ಹೋಗಬೇಕಾದ್ರೆ ಇದೇ ಒಂದೇ ಬಸ್ಸು.

ಮುಂಜಾನೆ ಎಂಟು ಗಂಟೆಗೆ ಇಲ್ಲಿಂದ ಹೊರಟು 2.30ಕ್ಕೆ ಬೆಳಗಾವಿ, ನಾನು ಅಲ್ಲಿಂದ ಬೇರೊಂದು ಬಸ್ ಹಿಡಿದು ಹೋಗಬೇಕು ನನ್ನೂರಿಗೆ. ತಿರುಗಿ ಬರುವಾಗ ಬೆಳಗಾವಿ ಯಿಂದ ಮಧ್ಯಾಹ್ನ ನಾಲ್ಕು ಗಂಟೆಗೆ ಹೊರಟು ರಾತ್ರಿ 9 ಗಂಟೆಗೆ ತಿಳವಳ್ಳಿ ಸೇರುತ್ತಿತ್ತು. ಹುಬ್ಬಳ್ಳಿಯಿಂದ ತಡಸ ಮಾರ್ಗದಲ್ಲಿ ಬರೋದು ಅದು- ಪೂರ್ತಿ ದಟ್ಟ ಕಾಡು. ಕಾಡಿನ ಪಯಣ ಛಂದ, ಆದರೆ ಮಳೆ ಇದ್ದಾಗ ಬಹಳೇ ತ್ರಾಸದಾಯಕ. ಆ ಅನುಭವಗಳಲ್ಲಿ ಒಂದೇ ಒಂದು ‌ಹೇಳ್ತೀನಿ ಇಲ್ಲಿ. 

ಎಂದಿನಂತೆ ಆ ಸಲವೂ ಅಲ್ಲಿ ನನ್ನ ತೌರಲ್ಲಿರುವ ನನ್ನ ಮಗನ ಭೆಟ್ಟಿಗೆ ಹೋಗಿದ್ದೆ  ಇಬ್ಬರೂ ಮಕ್ಕಳೊಡನೆ. 2-3 ದಿನ ಇದ್ದು ಮರುಪಯಣ. ಬಸ್ಸು ಬೆಳಗಾವಿಯಿಂದ ನಾಲ್ಕು ಗಂಟೆಗೆ ಹೊರಟರೂ ಹುಬ್ಬಳ್ಳಿಗೆ ಬರೋದು ತಡವೇ ಆತು ಮಳೆ ಇದ್ದಿದ್ರಿಂದ. ಹುಬ್ಬಳ್ಳಿಗೆ  ಬಂದಾಗ ‌ಏಳು ಗಂಟೆ. ಇಲ್ಲಿನ ಮಳೆ ಆಕಾರ ಯಾಕೋ ಭಯಂಕರ ಅನಿಸ್ತು. ಇಲ್ಲಿ ಈಗ ಗಾಳಿ ಶುರು ಆಗಿ ಮೋಡ ಕವೀತಿತ್ತು ಅದು ಅಡ್ಡಮಳೆ ದಿವಸಗಳು. ಗಾಳಿ ಬಲು ಬಿರುಸಾಗಿ ಬೀಸೋಕೆ ಶುರು ಆಯ್ತು. ಬಸ್ ಹುಬ್ಬಳ್ಳಿ ಬಿಡ್ತು, ಮಳೆ ಶುರುವಾಯಿತು.

ತಡಸಕ್ಕೆ ಏಳು ಗಂಟೆಗೆ ಬರಬೇಕಾದ ‌ಬಸ್ಸು 7.45 ಕ್ಕೆ ಬಂತು. ಟೀಗೆ ಆದಿನ ಅಲ್ಲಿ ನಿಲ್ಲದೇ ಹೊರಟು ಬಿಟ್ಟ ಡ್ರೈವರ್. “ಜಂಗಲ್ ಸಹವಾಸೋ ಮಾರಾಯಾ ಇನ್ನ. ಮಳೀ ಗಾಳಿ ಬ್ಯಾರೆ  ಭಾಳ ಜೋರ ಕಾಣಾಕ್ಹತ್ತೇತಿ” ಅಂತ ಹೊರಟೇಬಿಟ್ಟ. ಪೂರ್ತಿ ಕಗ್ಗತ್ತಲು. ದಟ್ಟಡವಿ, ಅದರ ಮಧ್ಯೆ ಒಂದು ಬಸ್ಸು ಹೋಗುವಷ್ಟು ‌ದಾರಿ, ಅದೂ ಪೂರ್ತಿ ಖಾಲಿ. ಬೇರೆ ವಾಹನಗಳ ಸಂಚಾರವೇ ಇಲ್ಲವೇನೋ ಎಂಬಂತೆ. ಗುಡುಗು ಮಿಂಚು ಮಳೆ ಗಾಳಿ ಆರ್ಭಟ ಭಯಾನಕ ಅನ್ನಿಸ್ತಿತ್ತು. ಮಿಂಚಿದಾಗ ಫಳಕ್ಕನೇ ಬೆಳಕು ಹೊಳೆದು ಮತ್ತೆ ಕಪ್ಪು ಕತ್ತಲು.

ಮಳೆ ಅಂದ್ರೆ ಹುಚ್ಚು ಪ್ರೀತಿ ಇದ್ದ ನಾನೂ ಯಾಕೋ ಸ್ವಲ್ಪ ಹೆದರಿದ್ದೆ. ಜೊತೆಗೆ ಪುಟ್ಟ ಮಕ್ಕಳು, ಒಬ್ಬಳೇ ಇದ್ದೆ, ದಟ್ಟ ಕಾಡಿನ ನಡುವೆ ಪಯಣ, ಸ್ವಲ್ಪ ಅಭವ ಅನಿಸ್ತು. ಮೆಲ್ಲಗೆ ಚಲಿಸುತ್ತಿದ್ದ ಬಸ್ಸು ಗಕ್ಕನೇ ನಿಂತು. ಎಲ್ರೂ ಯಾಕೆ ಯಾಕೆ ಏನಾಯ್ತು ಅಂತ ಕೇಳಿದಾಗ, ಡ್ರೈವರ್ ಹೇಳಿದ- ನೋಡ್ರಿ ಅಲ್ಲಿ, ಅಡ್ಡ ಮರಾ ಬಿದ್ದತಿ. ಬರ್ರಿ ಒಂದನಾಕ ಜನಾ ಆ ಮರಾ ಸರಸಬೇಕು” ಗದ್ದಲೋ ಗದ್ದಲ ಕೋಲಾಹಲ! ಸರಿ, ಸ್ವಲ್ಪ ಜನ ಕೆಳಗಿಳಿದ್ರು ಆ ಸುರಿಯೋ ಮಳೆಯಲ್ಲೇ! ಕಷ್ಟಪಟ್ಟು ಆ ಬಿದ್ದ ಮರವನ್ನ ಪಕ್ಕಕ್ಕೆ ಸರಿಸಿ, ಬಸ್ಸೇರಿದ್ರು. ಹೊರಟಿತು  ಸವಾರಿ.

ಕೊಂಚ ದೂರ ಸಾಗಿದ ಬಸ್ಸು ಮತ್ತೆ ನಿಂತಿತು. ಅದೇ ಪುನರಾವರ್ತನೆ! ಹೀಗೇ ದಾರಿಗುಂಟ ಬಿದ್ದ ಮರಗಳನ್ನು ಸರಿಸಿ ದಾರಿ ಮಾಡಿಕೊಳ್ಳುತ್ತ ಸಾಗಿತು ನಮ್ಮ ಪಯಣ. ಮಕ್ಕಳು ಪೂರ್ತಿ ಹೆದರಿ ಕಂಗಾಲಾಗಿದ್ರು. ಹಸಿವೂ ಆಗಿತ್ತು. ಆದರೆ ಹೆದರಿಕೆ, ಗದ್ದಲದಲ್ಲಿ ತಿನ್ನೋದು ಅಸಾಧ್ಯದ ಮಾತೇ ಆಗಿತ್ತು. “ಅಮ್ಮಾ ಇನ್ನೂ ಎಷ್ಟೊತ್ತು ಅಮ್ಮಾ” ಅಂತ ಕೇಳೋರು. ಆಯ್ತು ಇನ್ನು ಸ್ವಲ್ಪ ದೂರ ಅಷ್ಟೇ. ನೀವು ಮಲಕೋರಿ. ತಿಳವಳ್ಳಿ ಬಂದ ಮೇಲೆ ನಾ ಎಬ್ಬಸ್ತೀನಿ” ಅಂದೆ. ಆ ಗಾಳಿ ಮಳೆ, ಗುಡುಗು ಸಿಡಿಲಿನ ಅಬ್ಬರ, ಮರ ಎತ್ತೋ ಗಲಾಟೆ ಇದರಲ್ಲಿ ಹೇಗೆ ಮಲಗಿಯಾವು ಅವು? ಹಾಗೇ ಕೂತಿದ್ರು ಮುದುರಿ.

ಯಾವ ಗಳಿಗೆಯಲ್ಲಿ ಮತ್ತೆ ಏನೋ ಅಂತ ಅನಕೋತಿದ್ದ ಹಾಗೇನೇ ಮತ್ತೇ ಬಸ್ಸನ್ನು ಜೋರು ಬ್ರೆಕ್ ಹಾಕಿ ನಿಲ್ಲಿಸಿದ ಡ್ರೈವರ್. ನೋಡ ನೋಡುತ್ತಿದ್ದಂತೆಯೇ, ನಮ್ಮ ಕಣ್ಮುಂದೆಯೇ ದೊಡ್ಡ ಮರವೊಂದು ಧಡಾಡ್ ಅಂತ ಉರುಳಿ ಬಿತ್ತು. ಒಂದೇ ಒಂದು ಸೆಕೆಂಡ್ ನ ಅಂತರದಲ್ಲಿ ದೊಡ್ಡ ಅನಾಹುತ ಒಂದರಿಂದ ಬಚಾವಾಗಿದ್ವಿ‌, ಚಾಲಕನ ಚಾಣಾಕ್ಷತೆಯಿಂದ. ಇಲ್ಲವಾದರೆ ಬಸ್ಸಿನ ಮೇಲೆಯೇ ಆ ಮರ ಬಿದ್ದಿರೋದು. ಎಲ್ಲಾ ಒಂದು ಕ್ಷಣ ಏಕದಂ ಸ್ತಬ್ಧ ಆಯ್ತು. ಆ ಮರ ಅಂತೂ ಎತ್ತಬೇಕಲ್ಲಾ? ಹಾನಗಲ್ಲ  ಸ್ವಲ್ಪವೇ ದೂರ ಇತ್ತು. ಮತ್ತೆ ಕೆಲ ಜನ ಇಳಿದು ಆ ಮರ ಎತ್ತಿದ್ರು. ಹುಷ್ ಅನ್ನೋಷ್ಟ್ರಲ್ಲಿ ಯಾರೋ ಕೆಳಗಿಳಿದವರಲ್ಲಿ ಒಬ್ಬರು ಭಯಂಕರವಾಗಿ ಚೀರಿದ್ರು. ಏನೂಂತ ಕೇಳೋದ್ರಲ್ಲಿ ಗೊತ್ತಾಯ್ತು.

ಮರ ಎತ್ತುವಾಗ ಆ ಮನುಷ್ಯನಿಗೆ ದೊಡ್ಡ, ಕಪ್ಪಾದ ರೆಕ್ಕೆ ಚೇಳು ಕಚ್ಚಿತಂತೆ. ಅದಕ್ಕೆ ಹಾವಿನ ಜೊತೆ ಆಡುವ ಚೇಳು ಅಂತಲೂ ಹೇಳ್ತಾರೆ. ತುಂಬಾ ವಿಷಕಾರಿ ಚೇಳು ಅದು. ಅಲ್ಲಿ ಆ  ಕಾಡಲ್ಲಿ ಕಗ್ಗತ್ತಲಲ್ಲಿ ಏನು ಮಾಡಬೇಕು? ಹೇಗೆ ಮಾಡೋದು? ಅವನನ್ನು ಎತ್ತಿಕೊಂಡು ಬಂದು ಮಲಗಿಸಿದ್ರು. ಕಾಲು ಆಗಲೇ ನೀಲಿಗಟ್ಟತೊಡಗಿತ್ತು. ಯಾರೋ ಒಂದು ಟವೆಲ್ ಬಿಗಿದು ಕಟ್ಟಿದರು ಚೇಳು ಕಚ್ಚಿದ ಜಾಗ ಬಿಟ್ಟು ಸ್ವಲ್ಪ ಮೇಲೆ, ವಿಷ ಏರದಂತೆ. ಹೀಗೇ ಮುಕ್ಕಾಲು ಗಂಟೆ ಕಳೀತು. ಬಸ್ಸು ಹಾನಗಲ್ಲು ತಲುಪಿತು.

ಆತ ಎಚ್ಚರತಪ್ಪಿದಂತೆ ಮಲಗಿದ್ದ. ಬಸ್ಸನ್ನು ನೇರವಾಗಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ದು ಆತನನ್ನು ಅಲ್ಲಿಯ ಡಾಕ್ಟರ್ ಗೆ ಒಪ್ಪಿಸಿ, ಎಲ್ಲಾ ವಿಷಯ ಹೇಳಿ ನಮ್ಮ ಪಯಣ ಮುಂದುವರಿಯಿತು. ಆಗ ಟೈಂ ನೋಡಿದ್ರೆ 12.30. ನಾವು ಹುಬ್ಬಳ್ಳಿ ಬಿಟ್ಟು ಐದೂವರೆ ತಾಸು ಆಗಿತ್ತು. ಇಲ್ಲೂ ಕರೆಂಟ್ ಇರಲಿಲ್ಲ. ಕಗ್ಗತ್ತಲು. ಆದರೆ ಮಳೆ ಕಡಿಮೆ ಆಗಿತ್ತು. ಮುಂದೆ ಯಾವ ತೊಂದರೆ ಆಗಲಿಲ್ಲ. ಆದರೆ  ನಿಧಾನವಾಗಿ ಹೋಗಬೇಕಾಯ್ತು.

ನನಗೆ ಈಗ ಸುರೇಶ ಗಾಬರಿಯಾಗಿ ಕಾಯುತ್ತಿರಬಹುದು ಎನಿಸಿದ್ರೂ ಏನೂ ಮಾಡುವಂತಿರಲಿಲ್ಲ. ಮೊಬೈಲ್ ಫೋನ್ ಬಂದೇ ಇರಲಿಲ್ಲ ಆಗ. ತಿಳಿಸೋದು ಹೇಗೆ ಅವರಿಗೆ? ಸುಮ್ಮನೇ ಕುಳಿತೆ. ಮಕ್ಕಳೂ ಪಾಪ ಒಂದೂ ಪ್ರಶ್ನೆ ಕೇಳದೇ, ಮಾತೂ ಆಡದೆ ಗಪ್ ಚುಪ್ ಆಗಿದ್ರು,‌ ಕಣ್ಣು ಕೊಂಚವೂ ಮುಚ್ಚದೇ. ಕೊನೆಗೊಮ್ಮೆ ಮಳೆ ಶಾಂತವಾಯ್ತು, ನಮ್ಮ ಬಸ್ಸೂ ತಿಳವಳ್ಳಿ ತಲುಪಿತು 1.45 ಕ್ಕೆ.

ಈ ಬಸ್ಸು ಹಾನಗಲ್ಲಿನಿಂದ ನೇರವಾಗಿ ತಿಳವಳ್ಳಿಗೆ ಹೋಗ್ತಿದ್ರೂ ಒಂದೂಕಾಲು ತಾಸು ಬೇಕಾಯ್ತು ಅಲ್ಲಿ ಬಸ್ ನಿಲ್ದಾಣ ಇರಲಿಲ್ಲ. ರೋಡ್ ಮೇಲೇ ಒಂದು ಅಂಗಡಿಯ ಮುಂದೆ ನಿಲ್ಲುತ್ತಿತ್ತು. ಅಲ್ಲಿ ಸುರೇಶ ಕಾಯ್ತಾ ಕೂತಿದ್ರು ಆ ಬಾಗಿಲು ಮುಚ್ಚಿದ ಅಂಗಡಿಯ ಮುಂದಿನ ಬೆಂಚಿನ ಮೇಲೆ ಕತ್ತಲಲ್ಲಿ. ಅವರ ಜೊತೆಗೆ ಒಬ್ಬ ಅಟೆಂಡರ್ ದೀಪಕ್ ಇದ್ದ. ಅಲ್ಲೂ ಕರೆಂಟ್ ಇರಲಿಲ್ಲ. ಅಂತೂ ಇಂತೂ ನಮ್ಮ ಕ್ವಾರ್ಟರ್ಸ್ ಮುಟ್ಟಿದಾಗ ರಾತ್ರಿ 2 ಗಂಟೆ! ಹುಕ್ಕೇರಿ ಬಿಟ್ಟು ಬರೋಬ್ಬರಿ ಹನ್ನೆರಡೂವರೆ ತಾಸಾಗಿತ್ತು!

ಈ  ಅವ್ಯವಸ್ಥೆಯ ಸಾರಿಗೆ ವ್ಯವಸ್ಥೆ ಮಾಡಿದ ಇನ್ನೊಂದು ಫಜೀತಿಯ ಅನುಭವ ಹೇಳ್ತೀನಿ-

ಆಗ ದೊಡ್ಡ ಊರುಗಳಿಗೇ ಅಷ್ಟೊಂದು ಅನುಕೂಲ ಇಲ್ಲದಿದ್ದಾಗ, ಈ ಹಳ್ಳಿಗಳ ಬಗ್ಗೆ ಹೇಳೋದೇ ಬೇಕಿಲ್ಲ. ಸವಣೂರಿನಿಂದ ಹಾನಗಲ್ಲ ಇಲ್ಲಾ ಹಾವೇರಿಗೆ ಬಂದು ತಿಳವಳ್ಳಿ ಬಸ್ಸು ಹಿಡೀಬೇಕಿತ್ತು. ಎಲ್ಲೇ ಹೋದ್ರೂ ತಿಳವಳ್ಳಿಗೆ ಇಡೀ ದಿನದಲ್ಲಿ ಎರಡೋ ಮೂರೋ ಬಸ್ಸುಗಳು, ಅಷ್ಟೇ.ಅದೂ ಬಿಟ್ರೆ ಉಂಟು. ಮಳೆಗಿಳೆ ಏನಾದರೂ ಶುರು ಆದ್ರೆ ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿ ಬಿಡ್ತಿದ್ರು, ರಸ್ತೆ ಸರಿ ಇಲ್ಲದ್ದಕ್ಕೆ. ಆ ದಿನ ಅದೇ ಆಯ್ತು.

ನಾವು ಗಣೇಶ ಚತುರ್ಥಿ ಗೆ ನನ್ನ ಗಂಡನ ಊರಾದ ಸವಣೂರಿಗೆ ಬಂದಿದ್ವಿ. ಹಬ್ಬಕ್ಕೇಂತ ನನ್ನ ದೊಡ್ಡ  ಮಗನೂ ಬಂದಿದ್ದ. ಸುರೇಶ ಆ ದಿನವೇ ವಾಪಸ್ಸು ಹೋಗಿದ್ರು. ನಾನು ಮಕ್ಕಳೊಂದಿಗೆ ಅಲ್ಲೇ ಇದ್ದು, ಅಷ್ಟಮಿ ಹಬ್ಬ ಮುಗಿಸಿಕೊಂಡು ಹೊರಟೆ ಮಧ್ಯಾಹ್ನ 4.30ಕ್ಕೆ. ಐದು ಗಂಟೆಗೆ ಸಿರ್ಸಿ ಬಸ್ಸಿನಲ್ಲಿ ಹಾನಗಲ್ಲ ಗೆ ಹೋಗಿ ಅಲ್ಲಿಂದ 6.30ಕ್ಕಿದ್ದ ತಿಳವಳ್ಳಿ ಬಸ್ಸು ಹಿಡಿಯೋ ವಿಚಾರ ಇತ್ತು. ಆದರೆ ಆ ದಿನ ಆ ಬಸ್ಸು ಬರಲೇ ಇಲ್ಲ. ಹಾನಗಲ್ಲಿಗೆ ಮತ್ಯಾವ ಬಸ್ಸೂ ಇರಲಿಲ್ಲ. ಅದಕ್ಕೇ ಹಾವೇರಿಯಿಂದ ತಿಳವಳ್ಳಿಗೆ ಏಳು ಗಂಟೆಗೆ ಹೊರಡೋ ಕೊನೇ ಬಸ್ಸು ಹಿಡಿಯೋಣಾಂತ ಹಾವೇರಿಗೆ ಹೊರಟಿದ್ದ ಬಸ್ಸು ಹತ್ತಿದೆ ಮಕ್ಕಳೊಂದಿಗೆ. ಆಗ ಐದೂ ಮುಕ್ಕಾಲು.

ಬಸ್ಸು ಹಾವೇರಿ ‌ಸಮೀಪ ಹೋದ ಹಾಗೆ ಜೋರದಾರ ಮಳೆ ಶುರುವಾಯಿತು. ಅಂಥ ಮಳೆಯಲ್ಲೇ ಹಾವೇರಿ ಬಸ್ಸ್ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಇಳಿದು ತಿಳವಳ್ಳಿ ಬಸ್ಸಿಗೆ ಕಾಯುತ್ತಾ ನಿಂತಿದ್ದೆ. ಮಳೆ ಜೋರಾಗಿದ್ದರಿಂದ ಬಸ್ಸ್ ಸ್ಟ್ಯಾಂಡ್ ತುಂಬ ಗಿಜಿ ಗಿಜಿ ಜನ. ಏಳು, ಏಳೂವರೆ, ಎಂಟು ಗಂಟೆಯಾದ್ರೂ ತಿಳವಳ್ಳಿ ಬಸ್ಸಿನ ಸುದ್ದೀನೇ ಇಲ್ಲ! ಜೋರು ಮಳೆ, ವಿಪರೀತ ಗದ್ದಲು, ಕತ್ತಲು, ಒಬ್ಬಳೇ ಮಕ್ಕಳೊಡನೆ! ಹುಚ್ಚು ಹಿಡಿದ ಹಾಗಾಗಿತ್ತು ನನಗೆ.

ಕಂಟ್ರೋಲರ್ ಹತ್ರ ಬಸ್ಸಿನ ಬಗ್ಗೆ ವಿಚಾರಿಸಬೇಕಾದ್ರೂ, ಎಲ್ಲಾ ಸಾಮಾನು, ಮಕ್ಕಳನ್ನೂ ಕರೆದುಕೊಂಡೇ ಹೋಗಬೇಕು. ಆ ಗದ್ದಲು, ಕತ್ತಲಲ್ಲಿ ಎಲ್ಲಿ ಹೇಗೆ ಬಿಡಲಿ ಮಕ್ಕಳನ್ನು? ಯಾವಾಗ 8.15 ಆಯ್ತೋ ಆಗ ಎಲ್ಲಾ ತಗೊಂಡು ಹೋಗಿ ಆಫೀಸ್ ನಲ್ಲಿ ವಿಚಾರಿಸಿದಾಗ ಆತ” ಇಲ್ರೀ ಅಕ್ಕಾರ ಈ ಹೊತ್ತು ತಿಳವಳ್ಳಿ ಬಸ್ಸು ಬಹುಶಃ ಬಿಡೂದಿಲ್ರೀ. ಆಲ್ಲೂ ಮಳಿ ಭಾಳಂತ್ರೀ. ಮೊದಲ ಕಚ್ಚಾ ರೋಡ್ರೀ. ಬಸ್ಸು ಕೆಸರಿನ್ಯಾಗ ಸಿಕ್ಕೊಂಡ್ರ ಕಷ್ಟರೀ” ಅಂದಾ ಕೂಲಾಗಿ. ಏನು ಮಾಡೋದು ಅಂತ ಯೋಚಿಸಿ ವಾಪಸ್ಸು ಸವಣೂರೀಗೇ ಹೋಗೋದು ಛಲೋ ಅನಿಸ್ತು.

ಆಫೀಸಿನಲ್ಲಿ ವಿಚಾರಿಸಿದಾಗ, ಒಂದೇ ಕೊನೇ ಬಸ್ಸು ಅದ. ಬರಬಹುದು ಈಗ, ಅಂದ್ರು. ಆಯ್ತು ಅಂತ ಮತ್ತೆ ಕಾಯ್ತಾ ನಿಂತಂತೆ ಆ ಬಸ್ಸು ಬಂತು. ಆ ಗದ್ದಲ ನೋಡಿ ಎದೆ ಧಸ್ ಅಂತು. ಆದರೆ ಬೇರೆ ದಾರಿ ಇರಲಿಲ್ಲ. ಗುದ್ದಾಡಿ ಮಕ್ಕಳು, ಲಗೇಜ್ ನೊಡನೆ ಬಸ್ಸು ಹತ್ತಿ ಆಯ್ತು. ಹಾಗೂ ಹೀಗೂ ಸವಣೂರು ತಲುಪಿದೆ ಮಕ್ಕಳೊಡನೆ ರಾತ್ರಿ 10.15 ಕ್ಕೆ. ಒಂದೂ ಜಟಕಾ ಇಲ್ಲ, ಕೂಲಿ ಇಲ್ಲ. ಆಟೋ ಅಂತೂ ಇರಲೇ ಇಲ್ಲ ಆಗ ಅಲ್ಲಿ. ಮನೆ ಸ್ವಲ್ಪ ದೂರಾನೇ ಇತ್ತು. ಒಟ್ಟಲ್ಲಿ ಮನೆ ಮುಟ್ಟಿ ಹುಷ್! ಅಂದೆ. ಅಲ್ಲಿ ಎಲ್ಲರಿಗೂ ಅಚ್ಚರಿ, ಗಾಬರಿ. ನಮ್ಮ ಭಾವನವರು ಹೇಗೋ ಸುರೇಶ ಗೆ ಸುದ್ದಿ ಮುಟ್ಟಿಸಿದರು. ತಿಳವಳ್ಳಿ ಆಸ್ಪತ್ರೆಲಿ ಫೋನ್ ಬಂದಿತ್ತು ಆಗ.

ಮಾರನೇ ದಿನ ಮುಂಜಾನೆ 7.30 ಕ್ಕೇ ಹೊರಟು ಹಾವೇರಿಯಿಂದ ತಿಳವಳ್ಳಿಗೆ 9 ಗಂಟೆಗೆ ಹೊರಡುವ ಬಸ್ಸು ಹತ್ತಿ ಕುಳಿತೆ ಮಕ್ಕಳ ಜೊತೆ. ಈ ಬಸ್ಸು ಚಿಕ್ಕಬಾಸೂರು ದಾರೀಲಿ ಹೋಗುತ್ತಿತ್ತು. ಅಲ್ಲೊಂದು ದೊಡ್ಡ ಆಳ, ವಿಸ್ತಾರ ಇರೋ ಕೆರೆ. ಅದಕ್ಕೊಂದು ಕಚ್ಚಾ ಬ್ರಿಡ್ಜ್, ಸುಮಾರು ಮೂರು ಕಿಮೀ ಉದ್ದದ್ದು. ಅದರ ಮೇಲೆ ಒಂದೇ ಬಸ್ಸು ಹೋಗೋ ಅಷ್ಟು ಸ್ಥಳ. ಇದಿರಿಗೇನಾದ್ರೂ ವೆಹಿಕಲ್ ಬಂದ್ರೆ ಗೋವಿಂದ! ನಾ ಯಾವಾಗಲೂ ಸವಣೂರಿನಿಂದ ತಿಳವಳ್ಳಿಗೆ ಇದೇ ಬಸ್ಸಲ್ಲಿ ಹೋಗ್ತಿದ್ದೆ ಬೆಳಕಿನಲ್ಲಿ ಹೋಗ್ತೀನಿ ಅಂತ. ಆಗ ಪ್ರತೀ ಸಲಾನೂ ಇದೇ ಪ್ರಶ್ನೆ ನನ್ನ ಕಾಡೋದು.

ಈ ಸಲ ಹಿಂದಿನ ದಿನದ ಅನುಭವ ನನ್ನ ಗೊಂದಲಕ್ಕೀಡು ಮಾಡಿದ್ದಕ್ಕೋ ಏನೋ ಕೇಳಿಯೇ ಬಿಟ್ಟೆ ಚಾಲಕನನ್ನು. ಆತ ಹೇಳಿದ್ದು – “ಏನೂ ಮಾಡಾಂಗಿಲ್ರೀ ಅಕ್ಕಾರ ಒಬ್ಬರನ್ನು ಮಲಗಿಸಿ ಹೋಗಿ ಬಿಡೋದ್ರೀ” ಅಂತ.ಅಬ್ಬಾ! ಹೀಗೂ ಉಂಟೆ ಅಂತ ಸುಮ್ಮನೆ ಕುಳಿತೆ ಕಮಕ್ ಕಿಮಕ್ ಎನ್ನದೇ, ಒಮ್ಮೆ ತಿಳವಳ್ಳಿ ಮುಟ್ಟಿದ್ರೆ ಸಾಕು ಅಂತ. “ಅಮ್ಮಾ ಬಂತು ಊರು” . ಮಕ್ಕಳ ಕೂಗಿಗೆ ಗಡಬಡಿಸಿ ಎದ್ದೆ.

ಬಿಡುಗಡೆಗೊಂಡಂತೆ  ಮಕ್ಕಳು ಖುಷಿಯಿಂದ ಬಸ್ಸಿನಿಂದ ಇಳಿದ್ರು. ನಾನೂ ಕೆಳಗೆ ಇಳಿದೆ. ಯಾಕೋ ಏನೋ ನನಗೇ ಗೊತ್ತಿಲ್ಲದಂತೆ ನನ್ನ ಕಣ್ಣು ಕೋಡಿಯೊಡಿತು- ಆ ಮುಗ್ಧ ಮಕ್ಕಳನ್ನು , ನಿನ್ನೆಯಿಂದ ಗದ್ದಲ ಗೊಂದಲದಲ್ಲಿ ಹೈರಾಣಾಗಿ ಹೋದ ಎಳೆ ಜೀವಗಳನ್ನು ನೋಡಿ. ಎಲ್ಲಾ ಮಸುಕು ಮಸುಕಾಯ್ತು ಏನೂ ಕಾಣದಂತೆ!

‍ಲೇಖಕರು Avadhi

December 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vasanti Prabhakar Naik

    ಅವಧಿಯಲ್ಲಿ ಅರ್ಥಪೂರ್ಣ ಲೇಖನಗಳು ಬರುತ್ತಿವೆ

    ಪ್ರತಿಕ್ರಿಯೆ
  2. Vasanti Prabhakar Naik

    ಮತ್ತೆ ಮೂಡಿಬರುತ್ತಿರುವ ಸರೋಜಿನಿ ಪಡಸಲ ಗಿ ಯವರ ನೆನಪಿನ ಅಂಗಳದ ಸರಣಿ ಬರಹ ಗಳುಮನಮುಟ್ಟು ವಂತಿ ವೆ ವಾಸ್ತವಿಕ ಸಂ ಗತಿ
    ಗಳುಇಂದು ಅಚ್ಚರಿ ಗೊಳಿಸುತ್ತವೆ ಬರಹ ಗಳ ಪಯಣ!
    . ಮನೋಹರ್ ವಾಗಿದೆ ಇದು ಹೀಗೆ ಮುಂದೆ ಸಾಗಲಿ

    ಪ್ರತಿಕ್ರಿಯೆ
  3. Sarojini Padasalgi

    ಅನೇಕ ಧನ್ಯವಾದಗಳು ಹಾಗೂ ವಂದನೆಗಳು ಶ್ರವಣಕುಮಾರಿಯವರೇ.

    ವಾಸಂತಿ ಯವರೇ, ನಿಮ್ಮ ಛಂದದ ಅನಿಸಿಕೆ ಇನ್ನೂ ಮತ್ತೂ ಬರೀಯುವತ್ತ ಒಯ್ತದೆ ನನ್ನ.ಈ ಅನುಭವ ಗಳ ನೆನಪು ಗಳು ಖಜಾನೆ ಮುಗಿಯಲಾರದಷ್ಟು ಭರ್ತಿ.ಅದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಅನುವು ಮಾಡಿ ಕೊಟ್ಟ ಅವಧಿಗೂ ಧನ್ಯವಾದಗಳು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sarojini PadasalgiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: