ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಸರಣಿ 3 – ಪೇಚಾಟ..ಪೇಚಾಟ..

ಪೇಚಾಟಗಳ ನೆರಳಿನಲ್ಲಿ ಖುಷಿ- ಬೇಜಾರುಗಳ ಆಟ

|ಕಳೆದ ಸಂಚಿಕೆಯಿಂದ|

ಯಾವಾಗಲೂ ನನ್ನ ಮನೆ  ಮದುವೆ  ಮನೆಯೇ. ಅತಿಥಿ ಅಭ್ಯಾಗತರ, ಬರೋ ಹೋಗೋ ಜನಗಳ, ನೆಂಟರ ಗದ್ದಲ  ಇವುಗಳಲ್ಲಿ ಮುಳುಗೆದ್ದ  ನನಗೆ  ನಾವಿರುವುದು ಒಂದು ಚಿಕ್ಕ ಹಳ್ಳಿ – ಯಾವ  ಐಷಾರಾಮಿ  ಸಾಧನ ಸೌಲಭ್ಯ ಇಲ್ಲಿ ಇಲ್ಲ ಎಂಬುದು ಲಕ್ಷ್ಯಕ್ಕೂ  ಬರ್ತಿರ್ಲಿಲ್ಲ. ಆಸ್ಪತ್ರೆ ಆವರಣದಲ್ಲಿಯೇ ಸುಮಾರು 15  ಮನೆಗಳು,  ನಮ್ಮದೇ  ಒಂದು ವಿಶಿಷ್ಟ ಲೋಕ ಅಲ್ಲಿ. ಮಕ್ಕಳದೇ ಒಂದು ದೊಡ್ಡ ಗುಂಪಿತ್ತು.

ತಮ್ಮ ಮಾಯಕದ  ಲೋಕದಲ್ಲಿ  ಅವರು. ಮಕ್ಕಳ  ಶಾಲೆಯ  ವಿಚಾರ ಮುಂದೆ ಬರೀತೀನಿ. ಈಗ  ಸಧ್ಯ ಇನ್ನೂ ‘ ಅತಿಥಿ ದೇವೋ ಭವ’ ಗುಂಗು ನನಗೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಒಮ್ಮೊಮ್ಮೆ ಪೇಚಾಟಕ್ಕಿಟ್ಟು ಫಜೀತಿಯಾಗಿದ್ದೂ ಇದೆ. ಆಗ ಹೇಗೆ ನಿಭಾಯಿಸಿದೇನೋ ಆ ದೇವರೇ ಬಲ್ಲ. ಈಗ  ಸಣ್ಣ ನಗುವಿನೆಳೆಯೊಂದು ಮೂಡ್ತದೆ ತುಟಿಯಂಚಿನಲ್ಲಿ  ಅವುಗಳನ್ನು ನೆನೆದು.

ಟ್ಯೂಬೆಕ್ಟಮಿ  ಆಪರೇಷನ್ ನನ್ನ ಗಂಡನೇ ಮಾಡ್ತಿದ್ರು. ಅದರದೂ ಕ್ಯಾಂಪ್ ಆಗಲೇ ಬೇಕಿತ್ತು ತಿಂಗಳಿಗೆ  ಒಂದೆರಡಾದರೂ. ನೋಡಬೇಕು ಆಗ ಆ ಗದ್ದಲ ಗೌಜಿ, ಗಡಿಬಿಡಿ, ಸಂಭ್ರಮ! ದಿಬ್ಬಣದ ಮನೆಯ ಸಂಭ್ರಮ ಯಾವ ಲೆಕ್ಕ ಅದರ‌ ಮುಂದೆ! ಕಡಿಮೆ ಕಡಿಮೆ  ಅಂದ್ರೂ ಒಂದು 25 ಮಂದಿಯ ಊಟವಾದ್ರೂ ಆಗ್ತಿತ್ತು  ಮನೆಯಲ್ಲಿ.

ಊರಿನ ಮುಖಂಡರು, ಸ್ಟಾಫ್ ನವರು, ಲೇಡಿ ಡಾಕ್ಟರ್, ಇನ್ನೊಬ್ಬ ಡಾಕ್ಟರ್- ICDS MO ಎಲ್ಲ ಸೇರಿಸಿ. ಸ್ಟಾಫ್ ನವರು ಎಲ್ಲರೂ ಬರ್ತಿರ್ಲಿಲ್ಲ. ಪರ ಊರಿನವರಷ್ಟೇ.ಅಲ್ಲೇ ಇರುವವರು ತಮ್ಮ ತಮ್ಮ ಮನೆಗೇ ಹೋಗ್ತಿದ್ರು. ಊಟಕ್ಕೆ ಬಡಿಸಲು, ಸ್ವಚ್ಛ ಮಾಡಲು ಸೀತವ್ವ, ಆಕೀ ಮಗಳು ಗಿರಿಜಾ ಇದ್ದೇ ಇರತಿದ್ರು.ಆದರೆ ಅಡಿಗೆ ಮಾತ್ರ ಪೂರ್ತಿ ನಂದೇ. ಬೆಳಗ್ಗೆ ಬೇಗ ಎದ್ದು ಚಪಾತಿ ಮುಗಿಸಿ ಬಿಡ್ತಿದ್ದೆ. ಹಾಗೇ ಏನಾದರೂ ಸ್ವೀಟ್ ನೂ ಆಗಲೇ ಮುಗಿಸೋದು. ಇನ್ನುಳಿದದ್ದು ಆಮೇಲೆ ಮಾಡೋದು.

ಒಮ್ಮೊಮ್ಮೆ ಜನ ಹೆಚ್ಚು , ಒಮ್ಮೊಮ್ಮೆ ಕಡಿಮೆ. ಆದರೂ ಕಮಿತ ಕಮಿ ಅಂದರೆ ‌45-50 ಚಪಾತಿ ಆದರೂ  ಬೇಕಾಗ್ತಿತ್ತು. ಒಂದ ಸಲ ನನ್ನ  ತಂಗಿ ಇದ್ಲು ಈ ಕ್ಯಾಂಪ್ ದಿನ. ನಾ ಚಪಾತಿ ಮಾಡೋದು ನೋಡಿ ಅಳು ಅವಳಿಗೆ. ‘ಯಾಕ, ಏನಾತು’ ಅಂತ ಕೇಳಿದ್ರೆ ‘ ಎಷ್ಟ ಮಾಡ್ತಿ, ಬಿಡ ಇನ್ನ’ ಅಂತ ಒಂದೇ ಹಟ ಆಕೀದು. ಸೀತವ್ವಗ ಹೇಳು ಅಂತ ಬಲವಂತ ಅವಳದು.’ಬ್ಯಾಡವಾ. ಆಕಿ ಚಪಾತಿ ಅಷ್ಟು ಸರಿ ಆಗೂದಿಲ್ಲ’ ಅಂದೆ. ಈಗಲೂ ಆಕೆ ಅದನ್ನ ನೆನಪಿಸಿಕೊಂಡು ಕಣ್ಣು ತುಂಬ್ತಾಳೆ. ನನಗೂ ಈಗ ಅಚ್ಚರಿ  ಆಗ್ತದೆ ಒಮ್ಮೊಮ್ಮೆ. ಹೇಗೆ  ನಿಭಾಯಿಸ್ತಿದ್ದೆ ಅದನ್ನೆಲ್ಲಾ ಅಂತ.

ಬಂಕಾಪುರದಲ್ಲಿ  ನೀರಿನ ತಾಪತ್ರಯವೂ ಬಹಳ ,ಹಿಂದೆ ಬರೆದಂತೆ. ಒಮ್ಮೆ ಈ ಕ್ಯಾಂಪ್ ಇದ್ದಾಗ 2-3  ದಿನಗಳಿಂದ  ನೀರೇ ಬಂದಿರಲಿಲ್ಲ. ಆ ದಿನವಂತೂ  ಪೂರ್ತಿ ಖಾಲಿ  ನೀರಿನ stock! ಬಳಕೆಗೆ  ಬಾವಿಯ  ನೀರಿತ್ತು. ಆದರೆ ಅಡಿಗೆಗೆ, ಕುಡಿಯಲು  ಆ ನೀರನ್ನು ಬಳಸಲಾಗುತ್ತಿರಲಿಲ್ಲ. ತುಂಬ ಸವುಳು  ಆ ನೀರು.

ಅಲ್ಲೇ ಸ್ವಲ್ಪ ದೂರದಲ್ಲಿ ಕೃಷಿ ಹಾಗೂ ಪಶುಸಂಗೋಪನಾ ಇಲಾಖೆಯ  ಒಂದು ಫಾರ್ಮ್ ಇತ್ತು ,ಬಹಳ ದೊಡ್ಡದು. ಅದಕ್ಕೆ ಕೋಟೆ ಅಂತಿದ್ರು. ಅಂದರೆ ಬಂಕಾಪುರ ಐತಿಹಾಸಿಕ ಸ್ಥಳ, ನಾ ಹೇಳಲು ಮರೆತೆ.ಅಲ್ಲಿ ಅಂದರೆ ಆ ಕೋಟೆಯಲ್ಲಿ ಒಂದು ಈಶ್ವರ ದೇವಸ್ಥಾನ ಇದೆ.ನಗರೇಶ್ವರ ಗುಡಿ ಅಂತಾರೆ ಅದಕ್ಕೆ. 60 ಕಂಬಗಳ ಗುಡಿನೂ ಅಂತ ಹೆಸರು ಅದಕ್ಕೆ. ಜಕಣಾಚಾರಿ ಕಟ್ಟಡ ಅದು.

ಶ್ರೇಷ್ಠ ಶಿಲ್ಪಕಲಾ ಕೃತಿ ಅಲ್ಲಿ ಕಾಣಬಹುದು.ಬನವಾಸಿ ಮಧುಕೇಶ್ವರ ದೇವಾಲಯದ ಥರಾನೇ. ಓ ವಿಷಯ ಎಲ್ಲೋ ಹೋಯ್ತು.ಈಗ ಮತ್ತೆ ನೀರಿನ ವಿಷಯಕ್ಕೆ ಬರ್ತೀನಿ. ಆ ಕೋಟೆ ಅಂದರೆ ಫಾರ್ಮ್ ನಲ್ಲಿ ಬೇಕಾದಷ್ಟು ಸಿಹಿ ನೀರು ಸಿಗ್ತಿತ್ತು. ತರೋದು ಹೇಗೆ ಎಂಬುದು ದೊಡ್ಡ ಪ್ರಶ್ನೆ! ಡ್ರೈವರ್ ಬಿಸ್ತಿ ಇಂಥ ವಿಷಯಗಳಲ್ಲಿ ತುಂಬಾ ಸಹಾಯಕಾರಿ.

ನಮ್ಮ ಹತ್ರ ಇದ್ದ ದೊಡ್ಡ ತಾಮ್ರದ ಹಂಡೆಯನ್ನೇ ಜೀಪ್ ನಲ್ಲಿಟ್ಟು ಕೊಂಡು ಹೋಗಿ ಅದನ್ನೂ, ಅದರ ಜೊತೆಗೆ ದೊಡ್ಡ ದೊಡ್ಡ ತಪ್ಪೇಲಿ, ಕೊಡಗಳನ್ನೂ ತುಂಬಿಸಿಕೊಂಡು ಬಂದ. ಆಮೇಲೆ ನನ್ನ ಕೆಲಸ  ಶುರು ಆಯ್ತು. ನಮಗೆ ಪೇಚಾಟ. ಅಳೋದೊಂದೇ ಬಾಕಿ ಇತ್ತು. ನಮ್ಮ ಈ ಪೇಚಾಟ ಮಕ್ಕಳಿಗೆ  ಮೋಜಿನಾಟ!

ಒಂದು ಸಲ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ ಆಗಿತ್ತು. ಮಕ್ಕಳು ಸ್ಕೂಲ್ ಗೆ ಹೋಗಿದ್ರು.ನನ್ನ ಪತಿ ಇನ್ನೂ ಊಟಕ್ಕೆ ಬಂದಿರಲಿಲ್ಲ. ಅದೆಲ್ಲಾ ಮಾಮೂಲು.ನಾನು  ಓದ್ತಾ ಕೂತಿದ್ದೆ. ಊಟಕ್ಕೆ ಸುರೇಶ ಅವರ ದಾರಿ ಕಾಯ್ತಿದ್ದೆ. ಅಷ್ಟ್ರಲ್ಲಿ ರಾಮಣ್ಣ ‘ಬಾಯರ’ ಅಂತ ಬಂದ. ಗಂಗಮ್ಮ ರಜೆಲಿದ್ಲು ಆ ಹೊತ್ತು. ‘ಏನ ರಾಮಣ್ಣಾ’ ಅಂದೆ. ಮತ್ತೆ ಯಾರಾದರೂ ಊಟಕ್ಕೆ ಬರತಾರೇನೋ ಎಂಬ ಸಂದೇಹದಿಂದ.

ಅದು ನಿಜಾನೇ ಆಗಬೇಕಾ? ಆತ ಹೇಳಿದ- “ಬಾಯರ ಅದ್ಯಾರ್ಯಾರೋ ಬೆಂಗಳೂರಿನಿಂದ  ಬಂದಾರ್ರಿ. 5-6 ಜನ. ಒಟ್ಟು 10 ಜನ ಊಟಕ್ಕೆ ಬರತಾರಂತ್ರಿ, ಇನ್ನೊಂದ ತಾಸು ಬಿಟ್ಟು.” ‘10 ಜನ ಯಾರೋ ಮತ್ತ’ ಅಂದೆ. ‘ಲೇಡಿ ಡಾಕ್ಟರ್,  ICDS MO ಸಾಹೇಬ್ರು ಎಲ್ಲಾ ಸೇರಿರಿ ಬಾಯರ ‘ ಅಂದ ಆತ. ‘ ಈಗ ಇಷ್ಟೊತ್ತಿನಾಗ ಹತ್ತು ಮಂದಿ ಅಡಿಗಿ ಅಂದ್ರ ಏನೋಪಾ ಮಾರಾಯಾ’ ಅಂದೆ.

ಪಾಪ ಆತ ಏನು ಹೇಳಿಯಾನು? ಹೌದೆನ್ನುವಂತೆ  ತಲೆ  ಅಲ್ಲಾಡಿಸಿದ. ನಂತಲೆ ಕೆಟ್ಟು ಮೊಸರು ಗಡಿಗೆ ಆತು. ಅವನಿಗೆ ಹೋಗು ಅಂತ ಹೇಳಿ ಧಪ್ಪಂತ ಚೇರ್ ಮೇಲೆ ಕುಳಿತೆ. ಅಷ್ಟ್ರಲ್ಲಿ ಲೇಡಿ ಡಾಕ್ಟರ್ ಬಂದು, ‘ವೈನೀ ನೀವು ಚಪಾತಿ ಅಷ್ಟ ಮಾಡ್ರಿ. ನಾ ನಮ್ಮನಿಯೊಳಗ  ಪಲ್ಯಾ ಮತ್ತ ಮಸಾಲಾ ಭಾತ್ ಮಾಡ್ಲಿಕ್ಕೆ ಹೇಳ್ತೀನಿ’ ಅಂದ್ರು. ಅವರ ಮನೇಲೂ ಮೂರು ಜನ ಮಕ್ಕಳು, ವಯಸ್ಸಾದ ತಾಯಿ, ಒಬ್ಬ ಕೆಲಸದ ಹುಡುಗಿ ಇದ್ರು.’ ಸರಿ’ ಅಂತ ಎದ್ದೆ.

ಪರಾತಿನಲ್ಲಿ ಸುಮಾರು ಒಂದೂಮುಕ್ಕಾಲು ಕೆ.ಜಿ. ಗೋಧಿ ಹಿಟ್ಟು, ಉಪ್ಪು, ಎಣ್ಣೆ ಹಾಕಿ ಕಲಿಸಲು ನೀರು ಹಾಕಿದ್ದೆ. ಮತ್ತೆ ರಾಮಣ್ಣ ‘ಬಾಯರ’ ಅಂತ ಬಂದ. ‘ ಏನಪಾ ರಾಮಣ್ಣಾ ಮತ್ತೇನು’ ಅಂದೆ. ನನಗೆ  ಆ ದಿನ ಮೈಕೈ ನೋವು ಜೋರಿತ್ತು. ಸಣ್ಣಗೆ ತಲೆ ನೋವು.ಅದಕೇ ಏನೋ ಸ್ವಲ್ಪ ಬೇಜಾರು, ಸಿಟ್ಟು ಎಲ್ಲಾ ಮೇಳೈಸಿತ್ತು. ಆತ ‘ ಏನಿಲ್ರಿ ಬಾಯರ, ಅವರು ಹುಬ್ಬಳ್ಯಾಗ ಊಟಾ ಮುಗಿಸಿ ಕೊಂಡ ಬಂದಾರಂತ್ರಿ. ಮತ್ತ ಈಗ ಗಡಾನ ಶಿಗ್ಗಾಂವಿ ಗೆ ಹೋಗಬೇಕಂತ್ರಿ. ಅದಕ ಬರೀ ಕಾಫಿ ಮಾಡಬೇಕಂತ್ರಿ ಬಾಯರ ‘ ಅಂದಾ.

ಹುಚ್ಚು ಹಿಡಿದ ಹಾಗಾಯ್ತು ನಂಗೆ. ಆ ನೀರು ಹಾಕಿಟ್ಟ ಹಿಟ್ಟು ಏನು ಮಾಡಬೇಕು ಹೇಳಿ. ಎತ್ತಿಡೋ ಹಾಗಿಲ್ಲ. ಅಲ್ಲಿನ ಗೊತ್ತು ಗುರಿಯಿಲ್ಲದ ಕರೆಂಟ್ ಲಿ ಫ್ರಿಡ್ಜ್ ನಡೀಯೋ ಸಾಧ್ಯತೆ ಇಲ್ಲಾಂತ ತಗೊಂಡದ್ದೇ ಇಲ್ಲ. ಬೇರೆ ದಾರಿ ಕಾಣದೇ ತಲೆ ಕೊಡವಿ ಮೊದಲು ಕಾಫೀ- ಬಿಸ್ಕತ್ತು ಕೊಟ್ಟು ರಾಮಣ್ಣನ್ನ ಕಳಿಸ್ದೆ. ಆ ನೀರು ಹಾಕಿಟ್ಟ ಹಿಟ್ಟು ಕಲಿಸ್ದೆ! ಇಷ್ಟು ದೊಡ್ಡ ಗಾತ್ರದ ಮುದ್ದೆ ಹಿಟ್ಟು ನೋಡಿ ಎದೆ ಧಸ್ ಅಂತು, ಏನು ಮಾಡೋದೀಗ ಅಂತ. ಒಂದು ಝಕಾಸ್ ಐಡಿಯಾ ಹೊಳೀತು.

ಸೀತವ್ವನ ಕೈಲಿ  ಎಲ್ಲರ  ಮನೆಗೂ ಇಷ್ಟಿಷ್ಟು ಹಿಟ್ಟಿನ ಮುದ್ದೆ ಕಳಿಸಿ ‘ಸಂಜೆಗೆ ಚಪಾತಿ ಮಾಡಿಕೋರಿ’ ಅಂತ  ಹೇಳಿ ಕಳಿಸಿ ಕೈ ತೊಳಕೊಂಡೆ. ಹೊರಗೆ  ಲೇಡಿ ಡಾಕ್ಟರ್ ‘ವೈನೀ’ ಅಂತ ಕೂಗಿದ್ದು ಕೇಳಿ ಬಾರದ ನಗು ಮೋರೆ ಮೇಲೆ ಎಳಕೊಂಡು ತಂದು ಅವರ ಜೊತೆ ಮಾತಾಡಿ ಕಳಿಸಿ ಉಸಿರು ಬಿಟ್ಟೆ ನೀಳವಾಗಿ! ಹೇಗಿದೆ ಹೇಳಿ ಈಗ  ನಗು ಉಕ್ಕಿಸೋ ಈ ಪೇಚಾಟ? ಈ ಗಲಾಟೇಲಿ ವೇಳೆ ಸರಿದದ್ದೇ ತಿಳೀಲಿಲ್ಲ.ಮಕ್ಕಳು ಬರೋ ಟೈಂ ಆಯ್ತು ಅಂತ ಹಾಲು ಕಾಯಲಿಟ್ಟೆ ನನ್ನ ಊಟದ ಸುದ್ದಿ ಮರೆತೇ ಹೋಯ್ತು!

ಇನ್ನೊಂದು  ಪೇಚಾಟ  ಹೊಸ  ರೆಸಿಪಿ ಹುಟ್ಟು ಹಾಕಿದ ಕತೆ ಕೇಳ್ರಿ ಈಗ. ಲ್ಯಾಪ್ರೋಸ್ಕೋಪಿಕ್ ಆಪರೇಷನ್ ಕ್ಯಾಂಪ್ ನೂ ಅಲ್ಲೇ ಅಂದರೆ  ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಶುರು ಮಾಡ್ಕೊಂಡಿದ್ರು  ಆಗ. ಹಾವೇರಿಯಿಂದ  ಒಬ್ಬ ಸರ್ಜನ್  ಅವರು ಬರ್ತಿದ್ರು ಆ ಸರ್ಜರಿ ಮಾಡಲು.ಒಂದೇ ದಿನ ಹಾನಗಲ್, ಶಿಗ್ಗಾಂವಿ ಮತ್ತು ಬಂಕಾಪುರ ಮೂರೂ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಕ್ಯಾಂಪ್  ಆಯೋಜಿಸಿ  ಆ ಪ್ರಕಾರ  ನಡೀತಿತ್ತು.

ಹಾನಗಲ್ಲು, ಶಿಗ್ಗಾಂವಿ ಮುಗಿಸಿ ಕೊನೆಗೆ  ಬಂಕಾಪುರಕ್ಕೆ ಬರೋರು  ಅವರು. ಹೀಗಾಗಿ ರಾತ್ರಿ ಊಟ ನಮ್ಮಲ್ಲೇ. ಅವರು ಹೇಳೇ ಬಿಟ್ಟಿದ್ರು ,’ನನ್ನ ರಾತ್ರಿ ಊಟ ನಿಮ್ಮಲ್ಲೇ ಭಾಭಿ. ಎಷ್ಟೇ ತಡ ಆದ್ರೂ ನಡೀತದ. ‘ಹಾಗೇ ಅವರು ಬರೋದಿಕ್ಕೆ ಒಂದು ನಕ್ಕಿ ಟೈಂ ಇದ್ದಿದ್ದಿಲ್ಲ. ಮಧ್ಯಾಹ್ನದ ಊಟ ಮುಗಿಸಿ ಹಾವೇರಿಯಿಂದ ಹೊರಟು ಎಲ್ಲ ಕಡೆ ಆಪರೇಷನ್ ಮುಗಿಸಿ ನಮ್ಮಲ್ಲಿ ಬರೋವಾಗ ರಾತ್ರಿ 11,12,1 ಹೀಗೇ. ಆ ದಿನದ  ಕ್ಯಾಂಪ್ ನಲ್ಲಿ ಒಂದು ಬದಲಾವಣೆ ಆತು ನನಗೆ ಖುಷಿ ತರೋ ಅಂಥದು.

ಸುರೇಶ ಬಂದು ಹೇಳಿ ಹೋದ್ರು’ ಈ ಸಲ  ಸರ್ಜನ್ ಅವರು  ಶಿಗ್ಗಾಂವಿ ಯಲ್ಲೇ ಊಟ ಮುಗಿಸಿ ಕೊಂಡು ಬರ್ತಾರೆ’ ಅಂತ. ನಾ ಹುಷ್ ಅಂತ ಸ್ವಲ್ಪ  ನಿರಾಳ ಆದೆ.ಏನು ಮಾಡ್ಲಿ , ಪರಿಸ್ಥಿತಿ ಹಾಗಿತ್ತು. ಎಷ್ಟೇ  ಎಚ್ಚರಿಕೆ  ವಹಿಸಿದ್ರೂ ದಿನಸಿ  ಖಾಲಿ  ಆಗಿತ್ತು. ಅಂದರೆ  ಅಕ್ಕಿ, ಬೇಳೆ ರವೆ, ಸ್ವಲ್ಪ ಸಕ್ಕರೆ ,ತುಪ್ಪ ಇತ್ತು. ಆದರೂ ಏನಾದರೂ ಸ್ಪೆಷಲ್ ಮಾಡೋದು ಸಾಧ್ಯ ಇರಲಿಲ್ಲ. ಒಂದು ಹತ್ತು ನಿಮಿಷ ನಿರಾಳ ಆಗಿರಬೇಕು ಅಷ್ಟೇ. ನಮ್ಮ ಗಂಗಮ್ಮನ ಆಗಮನ ಆಗೇ ಬಿಟ್ತು.ನಂಗೆ ಗಾಬರಿ, ಎದೆ ಡವ ಡವ.’ ಏನ ಗಂಗಮ್ಮಾ’ ಅಂದೆ.

‘ಬಾಯರ ಸರ್ಜನ್  ಸಾಹೇಬ್ರು ಇಲ್ಲೇ ಊಟಕ್ಕ ಬರತಾರಂತ್ರಿ’ ಅಂದ್ಲು. ಏನು ಅಂದೆ. ‘ಹೂಂ ನ್ರೀ ಬಾಯರ . ಅವರು ಅವರ ಅಸಿಸ್ಟೆಂಟ್ ಗಳು, ಅವರ ಡ್ರೈವರ್ ಮತ್ತ ಡಾಕ್ಟರ್ ಬಾಯಾರ್ರಿ ಅಷ್ಟರೀ’ ಅಂದು ಗಡಿಬಿಡಿ ಲೆ ಹೊರಟಳು. ನಾ‌ ‘ಎಷ್ಟೊತ್ತಿಗೆ ಗಂಗಮ್ಮಾ’ ಅಂದೆ.’ಒಂದೂವರಿ ತಾಸ ಆಕ್ಕತ್ರಿ’ ಅಂತ ಹೋದಳು.

ಈ ಸಲ 5-6 ಜನ ಅಷ್ಟೇ. ಗಡಿಯಾರ ನೋಡಿದೆ, ರಾತ್ರಿ 10.45! ಇಷ್ಟೊತ್ನಲ್ಲಿ  ಏನು ಮಾಡೋದು, ಹೇಗೆ ಮಾಡೋದು ಗೊಂದಲ ನನಗೆ. ಪೇಚಾಟವೋ ಪೇಚಾಟ!  ಮಕ್ಕಳು ಮಲಗಿ ಆಗಿತ್ತು. ತಲೆ ಓಡಿಸಿ, ಬಿಸಿಬೇಳೆಬಾತ್, ಮೊಸರನ್ನ ಅಂತೂ ಮಾಡೋಣ ಅಂತ ಎದ್ದು ಒಳಗೆ ಹೋಗಿ ಕುಕ್ಕರ್ ಇಟ್ಟು ಬಂದೆ.

ಸರಿ ಸ್ವೀಟ್  ಏನು ಮಾಡಲಿ ಅಂತ ಒಂದೇ ವಿಚಾರ. ಬೇಗ ಆಗೋದು ಅಂದ್ರೆ ಶಿರಾ ಒಂದೇ.ಎಲ್ಲಾ ಡಬ್ಬಿ ಕಿತ್ತಾಡಿದೆ.ಸಣ್ಣ ರವೆ ಇರಲಿಲ್ಲ, ಉಪ್ಪಿಟ್ಟಿನ ಬನ್ಸೀ ರವೆ ಇತ್ತು.ಒಂದೇ ಒಂದು ಯಾಲಕ್ಕಿ ಡಬ್ಬಿ ತಳಕ್ಕೆ ಮೆತ್ತಿಕೊಂಡಿತ್ತು, ಎರಡೇ ಎರಡು ಲವಂಗ, ಒಂಚೂರು ಜಾಜಿಕಾಯಿ ಇತ್ತು. ಒಣಕೊಬ್ರಿ, ತುಪ್ಪ ಇತ್ತು.ಸಕ್ರೆ ಯಾಕೋ ಕಣ್ಣಲ್ಲಿ ಉಲುಕಿದಂತಾಯ್ತು.

ಬೆಳಗಾದ ಕೂಡಲೇ ಮತ್ತೆ ಚಹಾ ಕಾಫಿ ಗದ್ದಲ ಹೇಗೆ ಅನ್ಕೊಂಡೆ. ಥಟ್ಟನೇ ಮನೇಲಿದ್ದ ಕೊಲ್ಹಾಪುರ ಬೆಲ್ಲದ ನೆನಪಾಯ್ತು.ಸರಿ.ತುಪ್ಪ ಅಂತೂ ಬೇಕಾದಷ್ಟಿತ್ತು. ಗೋಡಂಬಿ ದ್ರಾಕ್ಷಿ, ಬಾದಾಮಿ ಎಲ್ಲಾ ಖಾಲಿ ! ಸರಿ ಒಂದೂವರೆ ಎರಡು ಬಟ್ಟಲಿನಷ್ಟು ಒಣ ಕೊಬ್ಬರಿ ತುರಿ ರೆಡಿ ಆಯ್ತು. ಜಾಸ್ತಿ ತುಪ್ಪ ಹಾಕಿ ರವಾನ ಖಮ್ಮಗೆ ಹುರಿದಿಟ್ಟುಕೊಂಡೆ. ನಂತರ ತುಪ್ಪದ ಒಗ್ಗರಣೆ ಅಂದರೆ ತುಪ್ಪ ಕಾಯಿಸಿ  ಅದರಲ್ಲಿ, ಇದ್ದ ಒಂದೇ ಒಂದು ಯಾಲಕ್ಕಿ ಸುಲಿದು ಕಾಳು ಸಿಪ್ಪೆ ಎರಡನ್ನೂ ಹಾಕಿ, ಇದ್ದ ಎರಡು ಲವಂಗ , ಚೂರು ಜಾಜಿಕಾಯಿ (ಜಾಕಾಯಿ), ಕೊಬ್ಬರಿ ತುರಿ ಹಾಕಿ ಹುರಿದು ರವೆ, ಹಾಲು, ನೀರು ಸೇರಿಸಿ ಕೈಬಿಟ್ಟು ತುಪ್ಪ ಹಾಕಿ, ಕೊಲ್ಹಾಪುರ ಬೆಲ್ಲದ ಪುಡಿ ಸೇರಿಸಿ ಬೇಯಿಸಿದಾಗ ….ವಾವ್! ಘಮ್ಮೆನ್ನುವ  ರೆಸಿಪಿ ತಯಾರಾಯ್ತು. ಮೇಲೆ ಸ್ವಲ್ಪ ಗಸಗಸೆ ಹುರಿದು ಸೇರಿಸಿ ಕೈಯಾಡಿಸಿ ಮುಚ್ಚಿಟ್ಟೆ.

ಅದರ ಪರಿಮಳ ಹೊರಬಾಗಿಲವರೆಗೂ!  ಹಾವೇರಿಯ ಸರ್ಜನ್ ಅವರು “ಭಾಳ ಹಸಿವಾಗೇದ್ರಿ ಭಾಭಿ! ಮಸ್ತ್ ವಾಸನೆ!”  ಅನಕೋತ ಚಪ್ಪರಿಸಿ ತಿಂದು ‘ ಏನ್ರೀ ಭಾಭೀ ಈ ಸ್ಪೇಷಲ್? ‘ ಅಂದ್ರು. ನನಗೇ ಹೊಳೆದಿರಲಿಲ್ಲ ಏನಿದರ ಹೆಸರು ಅಂತ! ಪಟ್ಟನೇ ನನ್ನ ಬಾಯಿ ಉಸಿರಿತು – ” ರವಾದ ನಾರಳೀ ಭಾತ್” ಅಂತ. ನಾರಳ ಅಂದರೆ ತೆಂಗಿನ ಕಾಯಿ.

ಹಸಿ ಕೊಬ್ಬರಿ ತುರಿ ಹಾಕಿ ಸಣ್ಣ ಭಂಗಾರಕಡ್ಡಿ ಅಕ್ಕಿದು ನಾರಳೀಭಾತ ಮಾಡ್ತೀವಿ ಬೆಲ್ಲಾ ಹಾಕಿ. ಆದರೆ  ತೆಂಗಿನ ಕಾಯಿ ನೂ ಇರ್ಲಿಲ್ಲ ಮನೇಲಿ. ಆದ್ರ ಈ ಕೈಬಿಟ್ಟು ಹಾಕಿದ ಒಣಕೊಬ್ಬರಿ  ಪೂರಾ ಮಾಟಾ ಮಾಡಿ ಸಕತ್ ರುಚಿ ಕೊಟ್ಟಿತ್ತು.ಹೊಸಾ ರೆಸಿಪಿ ಜನ್ಮ ತಾಳಿ ನನ್ನ ಮಾನಾ ಉಳಿಸಿತ್ತು.  

‘ಭಾಭೀ  ರೆಸಿಪಿ  ಕೊಡ್ರಿ. ಮಾಧುರಿಗೂ ( ಅವರ ಪತ್ನಿ) ಹೇಳ್ತೀನಿ. ನಾ ತಿಂದೇ ಇರಲಿಲ್ಲ ಈ ನಾರಳೀ ಭಾತ್! ಆಕೀಗೂ ಮಾಡು ಅಂತ ಹೇಳ್ತೀನಿ’ ಅಂತ ಅಂದ್ರು ಡಾಕ್ಟರ್.  ಸರಿ ಅಂದೆ ನಸು ನಕ್ಕು ಉಕ್ಕಿ ಬಂದ ಖುಷಿಯಲ್ಲಿ.

ಹೆಂಗಿದೆ  ಪೇಚಾಟ  ಹುಟ್ಟಿಸಿದ  ಹೊಸ ರುಚಿಯ ಕಥೆ? ನಮ್ಮನೆಯಲ್ಲಿ ಈಗಿದು ಎಲ್ಲರ ಪ್ರೀತಿ ಮೆನು!  ಮಾಡಿ ರುಚಿ ನೋಡ್ತಿರೇನು ನೀವೂ?

|ಮುಂದಿನ ಸಂಚಿಕೆಯಲ್ಲಿ |

‍ಲೇಖಕರು Avadhi

19 November, 2020

4 Comments

  1. Shrivatsa Desai

    ಪೇಚಾಟ, ಪೇಚಾಟ! ಈ ಗಂಡಸರು (ನನ್ನನ್ನೂ ಸೇರಿಸಿ) ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೊಡುವ ತ್ರಾಸು, ಕಾಟಕ್ಕೆ ಏನಂತೀರಿ? ಪಾಹುಣೆಗಳು, ’ಬರ್ತಾರ, ಇಲ್ಲ ಬರೋದಿಲ್ಲ, ಕೊನೆಗೆ. ಹೇಲದೇ ಕೇಳದೇ ಬಂದೇ ಬಿಟ್ರು!’ಸಮತೋಲ ಕಾಯುವವರು, ಸಂಭಾಳಿಸುವವರು, ಆಕೆ! ವಿಪರ್ಯಾಸವೆಂದರೆ ಇದನ್ನು ಓದುತ್ತಿರುವ ಇಂದು ’ವಿಶ್ವ ಪುರುಷರ ದಿನ!’. ನೀವು ಹಿಂದೆ ಬರೆದ ಘೋಟಾಳ ಖೀರು ಮತ್ತು ಸುನಂದಾ ಬೆಳಗಾಂವ್ಕರ್ ಬರೆದ ತತ್ಕಾಲ್ ಬೀಗರ ಕುಂಬಳಕಾಯಿ ಹುಳಿ ಔತಣವನ್ನು ನೆನಪಿಸಿತು! ಮುಂದಿನ ಕಂತನ್ನು ಎದುರು ನೋಡುವೆ. ಇನ್ನೇನು ಧಿಡೀರ್ ರೆಸಿಪಿ ಕಾಯ್ದಿದೆಯೋ! ಶ್ರೀವತ್ಸ ದೇಸಾಯಿ

  2. ಡಾ.ಮಿರ್ಜಾ ಬಷೀರ್.ತುಮಕೂರು

    ಬರೆಹ ಚನಾಗಿದೆ.
    ನಾನೂ ಸಹ ಹಳ್ಳಿಯಲ್ಲಿ ಹೆಂಡತಿ ಮಕ್ಕಳೊಡನೆ ಏಗುತ್ತ ಕಾಲ ಕಳೆದವನು,ಸಂಭ್ರಮಿಸಿದವನು.ಈಗ ನಿಮ್ಮ ಲೇಖನ ಓದಿದಾಗ ಎಲ್ಲವೂ ನೆನಪಾಗುತ್ತದೆ

  3. Vasanti Prabhakar Naik

    ಬಹಳ ಸುಂದರವಾದ ಲೇಖನ.

  4. Sarojini Padasalgi

    ತುಂಬಾ ಧನ್ಯವಾದಗಳು ಶ್ರೀವತ್ಸ ದೇಸಾಯಿ ಯವರೇ! ಇನ್ನು ಧಿಡೀರ್ ರೆಸಿಪಿ ಬರೋದಿಲ್ಲ.ನನ್ನ ಹೆದರಿಸಿದ ಘಟನೆಗಳು ಬರತಾವೆ. ನಿಮ್ಮ ಆಸಕ್ತಿಯ ಓದಿಗೆ ಇನ್ನೊಮ್ಮೆ ಧನ್ಯವಾದಗಳು!
    ‌‌ ಹೌದು ಡಾಕ್ಟ್ರೇ.ನಾನೂ ಇದೀನಿ ನಿಮ್ಮ ಲೇಖನಗಳನ್ನು.ನನ್ನ ಅನುಭವಗಳು ನಿಮ್ಮ ನೆನಪುಗಳನ್ನು ತಾಜಾ ಮಾಡಿದ್ರೆ ನಾ ಬರೆದದ್ದು ಸಾರ್ಥಕ ಅನಕೋತೀನಿ.ಧನ್ಯವಾದಗಳು ಸರ್!
    ವಾಸಂತಿ ಯವರೇ ನಿಮಗೆ ಧನ್ಯವಾದ ಹೇಳೋಕೆ ಖುಷಿ ನಂಗೆ. ತುಂಬ ಧನ್ಯವಾದಗಳು ನಿಮಗೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading