ನೇಮಕಕ್ಕೆ ಮೊದಲೇ ‘ಸುಧಾ’ ಸೇರಿರುವುದಾಗಿ ಸುದ್ದಿ ಮಾಡಿದ್ದ ರವಿ ಬೆಳಗೆರೆ

ನವ ಮನ್ವಂತರ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

|ಕಳೆದ ವಾರದಿಂದ|

ಎಂಬತ್ತು ತೊಂಬತ್ತರ ದಶಕಗಳು ಪ್ರಜಾವಾಣಿಗೆ ನಿಜಕ್ಕೂ ಆಭಿವೃದ್ಧಿಯ ಪರ್ವಕಾಲ. ಬಹಿರಂಗ ಬಿಂಬ ಮತ್ತು ಅಂತ:ಸತ್ತ್ವ ಎರಡರಲ್ಲೂ ತೀವ್ರ ಸ್ವರೂಪದ ಬದಲಾವಣೆಗಳನ್ನು ತಂದ ಪರ್ವ. ಎಪ್ಪತ್ತರ ದಶಕದ ಕೊನೆಯಲ್ಲೇ ಪ್ರಿಂಟರ್ಸ್ ಮೈಸೂರು ಸಂಸ್ಥೆಯ ಆಡಳಿತ ಸೂತ್ರಗಳು ಹೊಸ ಪೀಳಿಗೆಯ ನವತಾರುಣ್ಯದ ಯುವಕರಿಗೆ ಬಹುತೇಕ ಹಸ್ತಾಂತರಗೊಂಡವು.

ಶ್ರೀ ಹರಿಕುಮಾರ್, ಶ್ರೀ ತಿಲಕ್ ಕುಮಾರ್ ಮತ್ತು ಶ್ರೀ ಶಾಂತ ಕುಮಾರ್ ಅವರುಗಳು ಎಕ್ಸುಕ್ಯುಟಿವ್ ಡೈರೆಕ್ಟರ್, ಮತ್ತು ಡೈರೆಕ್ಟರುಗಳಾಗಿ ಅಧಿಕಾರ ವಹಿಸಿಕೊಂಡರು. ಮುಂದೆ ಶ್ರೀ ಹರಿಕುಮಾರ್, ಮ್ಯಾನೇಜಿಂಗ್ ಡೈರೆಕ್ಟರ್ ಆದರು. ಶ್ರೀ ತಿಲಕ್ ಕುಮಾರ್ ಎಕ್ಸುಕ್ಯುಟಿವ್ ಡೈರೆಕ್ಟರ್ ಆದರು. ಇವರ ಬೆನ್ನಿಗೆ ಮಾರ್ಗದರ್ಶಕರಾಗಿ ಗೌರ್ನಿಂಗ್ ಡೈರೆಕ್ಟರ್ ಶ್ರೀ ಗುರುಸ್ವಾಮಿಗಳಿದ್ದರು.

ಈ ಸೋದರರು ಒಬ್ಬೊಬ್ಬರೂ ಒಂದೊಂದು ಇಲಾಖೆಯ ಹೊಣೆಗಾರಿಕೆ ವಹಿಸಿಕೊಂಡು ಸಾಂಸ್ಥಿಕವಾಗಿ ಆಮೂಲಾಗ್ರ ಬದಲಾವಣೆ ತರುವ, ಪತ್ರಿಕೆಗಳ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ನಿರ್ಮಿಸುವ ಕಾಯಕದಲ್ಲಿ ತೊಡಗಿಕೊಂಡು ಪತ್ರಿಕೋದ್ಯಮದ ಹೊಸ ದಿಗಂತಗಳನ್ನು ಅನ್ವೇಷಿಸಲಾರಂಭಿಸಿದರು. ಇದು ಸಂಸ್ಥೆಯ ಉದ್ಯೋಗಿಗಳಲ್ಲಿ ನವಚೈತನ್ಯವನ್ನು ಮೂಡಿಸಿತು.

ಸೃಜನಶೀಲತೆ, ದಕ್ಷತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಸಂಪಾದಕೀಯ ವಿಭಾಗದ ಬಲಸಂವರ್ಧನೆಗೆ ಆದ್ಯತೆ ದೊರೆಯಿತು. ಸುದ್ದಿಜಾಲದ ವಿಸ್ತರಣೆ ಮತ್ತು ಹೊಸ ಪ್ರತಿಭೆಗಳನ್ನು ಸೆಳೆಯುವ, ಹೊಸ ರಕ್ತ ತುಂಬುವ ಪ್ರಕ್ರಿಯೆ ಎಪ್ಪತ್ತರ ದಶಕದ ಕೊನೆಯಲ್ಲೇ ಶುರುವಾಯಿತು. 1951ರಷ್ಟು ಹಿಂದೆಯೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪ್ರಾರಂಭವಾಯಿತಾದರೂ ಅಲ್ಲಿಂದ ತೇರ್ಗಡೆ ಹೊಂದಿದ ಯುವಕರನ್ನು ಕನ್ನಡ ಪತ್ರಿಕೋದ್ಯಮ ಅಷ್ಟಾಗಿ  ಆಕರ್ಷಿಸಿದಂತೆ ಕಾಣುವುದಿಲ್ಲ.

ಅಂತೆಯೇ ಅಲ್ಲಿಯವರೆಗೂ ಉಪಸಂಪಾದಕರು/ವರದಿಗಾರರಿಗೆ ಕನಿಷ್ಟ ವಿದ್ಯಾರ್ಹತೆಯನ್ನೂ ಉದ್ಯಮ ನಿಗದಿಪಡಿಸಿರಲಿಲ್ಲ. ಭಾಷಾಜ್ಞಾನ ಮತ್ತು ಬರೆಯುವ ಪ್ರತಿಭೆ ಇವೇ ಕನಿಷ್ಟ ಅರ್ಹತೆಗಳಾಗಿದ್ದವು. ವರದಿಗಾರಿಕೆ, ಸುದ್ದಿ/ಲೇಖನಗಳ ಪ್ರಕಟಣೆ, ಮುದ್ರಣ ಎಲ್ಲ ಸೇರಿದಂತೆ ಪತ್ರಿಕೆಯ ಗುಣಮಟ್ಟ ಉತ್ಕೃಷ್ಟವಾಗಿರಬೇಕೆಂಬ ಆಧುನಿಕ ಚಿಂತನೆಗನುಗುಣವಾಗಿ ಪತ್ರಕರ್ತರ ನೇಮಕದ ಮಾನದಂಡಗಳಲ್ಲೂ ಬದಲಾವಣೆಯಾಯಿತು.

ಪತ್ರಿಕಾ ವೃತ್ತಿಗೆ ಭಾಷಾ ಜ್ಞಾನ, ಸೃಜನಶೀಲ ಬರವಣಿಗೆಯ ಪ್ರತಿಭೆ, ರಾಜಕೀಯ ಪ್ರಜ್ಞೆ ಇವುಗಳ ಜೊತೆಗೆ ಇಂಗ್ಲಿಷ್/ಕನ್ನಡ/ಪತ್ರಿಕೊದ್ಯಮದಲ್ಲಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯಂಥ ಕನಿಷ್ಟ ಶೈಕ್ಷಣಿಕ ಅರ್ಹತೆ ಇರಬೇಕೆಂಬ ಆಲೋಚನೆ ಚಾಲ್ತಿಗೆ ಬಂತು. 1949ರ ಪೀಳಿಗೆಯ ಪತ್ರಕರ್ತರು ಕ್ರಮೇಣ ನಿವೃತ್ತರಾದಂತೆ ಹೊಸ ಪೀಳಿಗೆಯ ಪತ್ರಕರ್ತರು ಪ್ರಜಾವಾಣಿ ಸೇರಿದರು.

ಡಿ.ವಿ. ರಾಜಶೇಖರ, ಇಂದೂಧರ ಹೊನ್ನಾಪುರ, ಲಕ್ಷ್ಮಣ ಕೊಡಸೆ, ಇ.ವಿ. ಸತ್ಯನಾರಾಯಣ, ಶಿವಾಜಿ ಗಣೇಶನ್ ಇವರುಗಳು ಹೊಸ ಪೀಳಿಗೆಯ ಪತ್ರಕರ್ತರ ಮೊದಲ ತಂಡ ಎನ್ನಬಹುದು. ಮುಂದೆ ಎನ್.ಎಸ್.ಶಂಕರ್, ಮಹಾಬಲೇಶ್ವರ ಕಾಟ್ರಳ್ಳಿ, ಪ್ರೇಮಕುಮಾರ್ ಹರಿಯಬ್ಬೆ, ಪೂರ್ಣಿಮಾ, ಪದ್ಮರಾಜ ದಂಡಾವತಿ, ರಂಜಾನ್ ದರ್ಗಾ, ಜಿ.ಎನ್. ಮೋಹನ್, ದಿನೇಶ್ ಅಮೀನ್‍ಮಟ್ಟು, ಸತೀಶ್ ಚಪ್ಪರಿಕೆ  ಮೊದಲಾದವರ ನೇಮಕವಾಯಿತು.

ಈ ಹೊಸ ಪೀಳಿಗೆಯ ಪತ್ರಕರ್ತರು ಸ್ನಾತಕೋತ್ತರ ಪದವೀಧರರಷ್ಟೇ ಅಲ್ಲದೆ ಕವಿಗಳೂ, ಕತೆಗಾರರೂ ಆಗಿದ್ದರು. ನವೋದಯ, ನವ್ಯ ಸಾಹಿತ್ಯಗಳ ಅಧ್ಯಯನದ ಜೊತೆಗೆ ದಲಿತ, ಬಂಡಾಯ ಸಾಹಿತ್ಯ ಚಳವಳಿಗಳಿಂದ ಪ್ರಭಾವಿತರಾದವರು. ಪ್ರತಿಭಾವಂತರನ್ನು, ವಿಚಾರಶೀಲರನ್ನು ಸೆಳೆದುಕೊಳ್ಳುವ  ಪ್ರಜಾವಾಣಿ ಪರಂಪರೆ ಹೀಗೆ ಮುಂದುವರಿಯಿತು. ಪ್ರತಿವರ್ಷವೂ ತರಬೇತಿ ಪತ್ರಕರ್ತರ (ಟ್ರೈನೀಸ್) ನೇಮಕದ ಪದ್ಧತಿ ಪ್ರಾರಂಭವಾಯಿತು. ನೇಮಕಾತಿ ಪ್ರಕ್ರಿಯೆಯಲ್ಲೂ ಬದಲಾವಣೆಯಾಯಿತು.

ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಿಬ್ಬಂದಿ ವಿಭಾಗ ಅರ್ಜಿಗಳನ್ನು ಆಹ್ವಾನಿಸುತ್ತಿತ್ತು. ಕನಿಷ್ಟ ಅರ್ಹತೆಯುಳ್ಳವರನ್ನು ಲಿಖಿತ ಪರೀಕ್ಷೆಗಾಗಿ ಕರೆಯಲಾಗುತ್ತಿತ್ತು. ಲಿಖಿತ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಸಂಪಾದಕೀಯ ವಿಭಾಗದ ಹಿರಿಯ ಪತ್ರಕರ್ತರು ಸಿದ್ಧಪಡಿಸುತ್ತಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಅವರಿಂದಲೇ ಆಗುತ್ತಿತ್ತು. ಸಿಬ್ಬಂದಿ ವಿಭಾಗ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ಮೌಖಿಕ ಪರೀಕ್ಷಗೆ ಕರೆಯುತ್ತಿತ್ತು.

ಸಂಪಾದಕರೂ ಆಗಿದ್ದ ಎಕ್ಸುಕ್ಯುಟಿವ್ ಡೈರೆಕ್ಟರ್/ಮ್ಯಾನೇಜಿಂಗ್ ಡೈರೆಕ್ಟರ್ ಅವರು ಮೌಖಿಕ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡುತ್ತಿದ್ದರು. ಇದರಿಂದಾಗಿ ಭಾಷೆ, ಸಾಹಿತ್ಯ ಜ್ಞಾನವಷ್ಟೇ ಅಲ್ಲದೆ, ರಾಜಕೀಯ, ವಿಜ್ಞಾನ, ಸಾಮಾಜ ವಿಜ್ಞಾನ, ಕ್ರೀಡೆ, ವಾಣಿಜ್ಯ ಮೊದಲಾದ ವಿಷಯಗಳ ಜ್ಞಾನ ಹೊಂದಿದ ಪ್ರತಿಭಾವಂತರನ್ನು ಆಯ್ಕೆ ಮಾಡುವುದು ಸಾಧ್ಯವಾಯಿತು.

ಸುದ್ದಿಜಾಲ ವಿಸ್ತರಣೆಯೂ ಇಷ್ಟೇ ವಿವೇಚನಾಯುತವಾಗಿ ನಡೆಯಿತು. ಕರ್ನಾಟಕದ ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ಪ್ರಜಾವಾಣಿಗೆ ವರದಿಗಾರರು ಇದ್ದರೂ ಅವರೆಲ್ಲ ಪೂರ್ಣಾವಧಿ ವರದಿಗಾರರಾಗಿರಲಿಲ್ಲ. ಕೆಲವು ಜಿಲ್ಲೆಗಳು ಹೊರತು, ಉಳಿದೆಡೆ ಮತ್ತು ತಾಲೂಕುಗಳಲ್ಲಿ ಸ್ಟ್ರಿಂಜರ್ ಗಳಿದ್ದರು (ಅರೆಕಾಲಿಕ ವರದಿಗಾರರು). ಎಲ್ಲಾ ಜಿಲ್ಲೆಗಳಲ್ಲಿ ಪೂರ್ಣಾವಧಿ ವರದಿಗಾರರನ್ನು ನೇಮಿಸಲು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಚೇರಿಗಳನ್ನು ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿತು.

ಬೆಂಗಳೂರು ಕಚೇರಿಯಲ್ಲಿನ ಅನುಭವಿ ವರದಿಗಾರರು/ಉಪಸಂಪಾದಕರನ್ನು ಜಿಲ್ಲೆಗಳಿಗೆ ವರ್ಗಮಾಡುವ ಪರಿಪಾಠ ಶುರುವಾಯಿತು. ದೆಹಲಿ ನ್ಯೂಸ್ ಬ್ಯುರೋದಲ್ಲಿ `ಪ್ರಜಾವಾಣಿ’ಗಾಗಿಯೇ ಪ್ರತ್ಯೇಕ ವರದಿಗಾರರನ್ನು ನೇಮಿಸಲಾಯಿತು. ಅಲ್ಲಿಯವರೆಗೆ ಡೆಕ್ಕನ್ ಹೆರಾಲ್ಡ್ ವರದಿಗಾರರರು ಕಳಹಿಸಿದ ವರದಿಯನ್ನೇ `ಪ್ರವಾ’ ತೆಗೆದುಕೊಳ್ಳುವ ರೂಢಿಯಿತ್ತು.

ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ ಮಂಗಳೂರು ಮೊದಲಾದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ನ್ಯೂಸ್ ಬ್ಯೂರೋ ಸ್ಥಾಪಿಸಿ, ಹೆಚ್ಚಿನ ವರದಿಗಾರರನ್ನು ನೇಮಿಸಿ ಈ ಪ್ರದೇಶಗಳ ಸುದ್ದಿಗಳ ವ್ಯಾಪಕ ಪ್ರಕಟಣೆಗೆ ಅನುವು ಮಾಡಿಕೊಡಲಾಯಿತು. ಸಚಿತ್ರ ವರದಿಗಳ ಪ್ರಕಟಣೆಗೆ ಅನುಕೂಲವಾಗುವಂತೆ ಜಿಲ್ಲಾ ವರದಿಗಾರರಿಗೆ ಕ್ಯಾಮೆರಾಗಳನ್ನು ನೀಡಲಾಯಿತು. ಇವೆಲ್ಲದರಿಂದ ಜಿಲ್ಲೆ ಮತ್ತು ಗ್ರಾಮಾಂತರ ಸುದ್ದಿಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದವು, ಸುದ್ದಿ ನಿರ್ವಹಣೆಯಲ್ಲಿ ದಕ್ಷತೆ, ಸಾಮರ್ಥ್ಯಗಳು ಹೆಚ್ಚಿದವು. ಜನರ ವಿಶ್ವಾಸಾರ್ಹತೆಯೂ ಹೆಚ್ಚಿತು.

ಜಾಹಿರಾತು ಮತ್ತು ಪ್ರಸರಣ ವಿಭಾಗಗಳನ್ನೂ ಆಧುನೀಕರಣಗೊಳಿಸಿ ಬಲಪಡಿಸಲಾಯಿತು. ಮುಂಬಯಿ, ಚೆನ್ನೈ, ಕಲ್ಕತ್ತ ಮೊದಲಾದ ಪ್ರಮುಖ ಕೇಂದ್ರಗಳಲ್ಲಿ ನ್ಯೂಸ್ ಬ್ಯೂರೋ ಜೊತೆಗೆ ಜಾಹಿರಾತು ವಿಭಾಗವನ್ನು ಪ್ರಾರಂಭಿಸಿ ಪೂರ್ಣ ಕಾಲದ ಪ್ರಾದೇಶಿಕ ಜಾಹಿರಾತು ಮ್ಯಾನೇಜರುಗಳನ್ನು ನೇಮಿಸಲಾಯಿತು.

ಎಪ್ಪತ್ತರ ದಶಕದಲ್ಲಿ ಈ ಪರಿ ನವಚೈತನ್ಯವನ್ನು ಮೈಗೂಡಿಸಿಕೊಂಡು ನಾವು ಎಂಬತ್ತರ ದಶಕಕ್ಕೆ ಕಾಲಿಟ್ಟಿದ್ದೆವು. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್  ಸಂಪಾದಕೀಯ ವಿಭಾಗಗಳು, ಮಹಾತ್ಮ ಗಾಂಧಿ ರಸ್ತೆಯ ಹಳೆಯ ಕಟ್ಟಡದಿಂದ ಹಿಂಭಾಗದಲ್ಲಿ ಚರ್ಚ್ ಸ್ಟ್ರೀಟಿಗೆ ಹೊಂದಿಕೊಂಡಿದ್ದ ಮುದ್ರಣ ವಿಭಾಗದ ಕಟ್ಟಡದ ಮೇಲೆ ಹೊಸದಾಗಿ ನಿರ್ಮಿಸಲಾದ ಮೊದಲ ಮತ್ತು ಎರಡನೇ ಅಂತಸ್ತಿಗೆ ಸ್ಥಳಾಂತರಗೊಂಡವು. ಆದರೆ ಪ್ರವೇಶ ಮಹಾತ್ಮಗಾಂಧಿ ರಸ್ತೆಯಲಿಂದಲೇ.

ಈ ಸಮಯಕ್ಕೆ ನಾನು `ಪ್ರವಾ’ ಸೇರಿ ಹದಿನಾಲ್ಕು ವರ್ಷಗಳಾಗಿದ್ದವು. ವೃತ್ತಿಯಲ್ಲಿ ತೃಪ್ತಿ, ಸಮಾಧಾನಗಳು ಸಿಕ್ಕಿತ್ತಾದರೂ  ಮನಸ್ಸಿನಲ್ಲಿ ಕೊಂಚ ತಾಕಲಾಟ ಶುರುವಾಗಿತ್ತು. `ಪ್ರವಾ’ದಲ್ಲಿ ನಾನು `ಪರಿತ್ಯಕ್ತ’ನಾಗುತ್ತಿದೇನೆಯೇ ಎಂಬ ಶಂಕೆ ಕಾಡಲಾರಂಭಿಸಿತ್ತು. ನನ್ನ ಜೊತೆಯಲ್ಲಿ ಸೇರಿದ ಇಬ್ಬರಿಗೆ ಬಡ್ತಿಗಳು ದೊರೆತಿದ್ದವು. ಆದರೆ ನನಗೆ ಸಿಕ್ಕಿರಲಿಲ್ಲ. ಆಗ ಪ್ರಿಂಟರ್ಸ್ ಸಂಸ್ಥೆಯಲ್ಲಿ ಒಂದು ಸತ್ಸಂಪ್ರದಾಯವಿತ್ತು. ಬಡ್ತಿ ಇಲ್ಲದಿದ್ದರೂ ದಕ್ಷರನ್ನು ಪ್ರೋತ್ಸಾಹಿಸುವ ಸಲುವಾಗೀ ಮಾಮೂಲಿನ ವಾರ್ಷಿಕ ಇನ್‍ಕ್ರಿಮೆಂಟ್ ಜೊತೆ ಒಂದೆರಡು ಹೆಚ್ಚುವರಿ  ಪ್ರೋತ್ಸಾಹದಾಯಕ ಇನ್‍ಕ್ರಿಮೆಂಟುಗಳನ್ನು ನೀಡುವ ಪದ್ದತಿ ಇತ್ತು.

ಈ ಹದಿನಾಲ್ಕು ವರ್ಷಗಳಲ್ಲಿ ಒಮ್ಮೆಯೂ ನನಗೆ ಈ ಭಾಗ್ಯ ದೊರೆತಿರಲಿಲ್ಲ. ಮುಂದಿನ ಹುದ್ದೆಗೆ ಬಡ್ತಿಯೂ ಸಿಗಲಿಲ್ಲ, ಪ್ರೋತ್ಸಾಹದಾಯಕ ಹೆಚ್ಚುವರಿ ಇನ್‍ಕ್ರಿಮೆಂಟೂ ಇಲ್ಲ. ಹೀಗಾಗಿ ನನ್ನಲ್ಲಿ ನಿರಾಶೆ ಕವಿಯತೊಡಗಿತು. ನಾನು ಇಲ್ಲಿ ಪರ್ಸೊನಾ ನಾನ್ ಗ್ರಾಟ, ಅಂದರೆ, ಬೇಡವಾದ ವ್ಯಕ್ತಿ ಆಗುತ್ತಿದ್ದೇನೆಯೇ ಎನ್ನುವ ಭಾವನೆ ಹಿಂಸಿಸತೊಡಗಿತು. ಹೀಗಾಗುವುದಕ್ಕೂ ಮುಂಚೆಯೇ ಇಲ್ಲಿಂದ ಕಳಚಿಕೊಳ್ಳಬೇಕೆನ್ನಿಸಿತು. ಆದರೆ ಅಂದು ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿ ಹಿಮಾಲಯದ ಗೌರೀಶಂಕರ ಸದೃಶವಾಗಿತ್ತು. ಅಲ್ಲಿಂದ ಮುಂದಕ್ಕೆ ಬೇರಾವ ಶೃಂಗವೂ  ಕಾಣಿಸುತ್ತಿರಲಿಲ್ಲ. ಇದೇ ಸಮಯದಲ್ಲಿ ಹೈದರಾಬಾದಿನಲ್ಲಿ ಶುರುವಾಗಿದ್ದ ಕನ್ನಡ ಉಪಗ್ರಹ ದೂರದರ್ಶನದ ಸುದ್ದಿ ವಿಭಾಗಕ್ಕೆ ನುರಿತ ಪತ್ರಕರ್ತರ ಅಗತ್ಯವಿದೆ ಎನ್ನುವ ಸುಳಿವು ಸಿಕ್ಕಿತು. ಅರ್ಜಿ ಹಾಕಿದೆ. ಅನಂತಮೂರ್ತಿಯವರೂ ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ ಗೃಹಕೃತ್ಯದ  ಒತ್ತಡಗಳಿಂದಾಗಿ ನಾನು ದೂರದರ್ಶನಕ್ಕೆ ಹೋಗಲಾಗಲಿಲ್ಲ.

ರವಿ ಬೆಳಗೆರೆ

ಹೀಗೆ ಬರೆಯುತ್ತಿರುವಾಗ ವೃತ್ತಿ ಬಾಂಧವ ರವಿ ಬೆಳಗೆರೆಯ ನಿಧನದ ಸುದ್ದಿ ತಾಕುತ್ತಿದೆ. ಸೃಜನಶೀಲ ಪ್ರತಿಭೆ, ಧೈರ್ಯ ಮತ್ತು ಸಾಹಸೀ ಕೋಲಾಹಲ ಪ್ರವೃತ್ತಿಯ ಸಂಯೋಗ ರವಿ ಬೆಳಗೆರೆ. ರವಿ ಬೆಳಗೆರೆಯವರ ಒಂದೆರಡು ಸಣ್ಣ ಕಥೆಗಳು ಅವರು ಬರವಣಿಗೆ ಪ್ರಾರಂಭಿಸಿದ ತರುಣದಲ್ಲೇ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದದ್ದುಂಟು.

ಅವರು `ಹಾಯ್ ಬೆಂಗಳೂರು’ ಶುರುಮಾಡುವುದಕ್ಕೆ ಮೊದಲಿನ ಪ್ರಸಂಗ. `ಕರ್ಮವೀರ’ದಲ್ಲಿ ಇದ್ದರು. `ಸುಧಾ’ ಸೇರುವ ಆಸೆ ಅವರಲ್ಲಿತ್ತು. ಅರ್ಜಿ ಹಾಕಿದರು. ಆ ವರ್ಷ (1994) ಎಲ್ಲರ ಜೊತೆ ಅವರನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಕರೆಯಲಾಯಿತು. ಬಂದವರೇ, “ಸರ್, ನಿಮ್ಮ, ಹತ್ತಿರ ಸ್ವಲ್ಪ ಮಾತಾಡಬೇಕು'” ಎಂದರು.

“ಏನು ಹೇಳಿ?”

“ಸರ್, ನಾನೂ ಈ ರಿಟನ್ ಟೆಸ್ಟ್ ತಗೊಬೇಕಾ? ನೀವು ನೇರವಾಗಿ ನನ್ನನ್ನ ನೇಮಕ ಮಾಡಿಕೋ ಬೇಕು” ಎಂದು ತಮ್ಮ ಅರ್ಹತೆಯನ್ನು ಸಮರ್ಥನೆ ಮಾಡಿಕೊಳ್ಳುವ ರೀತಿಯಲ್ಲಿ, ಹಕ್ಕೊತ್ತಾಯದ ದನಿಯಲ್ಲಿ ಹೇಳಿದರು.

“ಹೌದು ನೀವು ಲಿಖಿತ ಪರೀಕ್ಷೆ ಬರೆಯಬೇಕು. ನಮ್ಮ ಸಂಸ್ಥೆಯ ನಿಯಮ ಹಾಗಿದೆ. ಅದರಿಂದ ನಿಮಗೆ ವಿನಾಯಿತಿ ತೋರಲಾಗದು”

“ಇದು ನನ್ನ ಅರ್ಹತೆ ಮತ್ತು ಅನುಭವವನ್ನು ಅಗೌರವಿಸಿದ ಹಾಗೆ ಸರ್”

“ಇಲ್ಲ. ನಾವು ಅರ್ಹತೆ, ಅನುಭವಗಳನ್ನು ಗೌರವಿಸುವ ಪರಿ ಇದು. ನೀವು ನಮ್ಮ ಸಂಸ್ಥೆಯ ನಿಯಮದಂತೆ ಪರೀಕ್ಷೆ ಬರೆಯಬೇಕು.  ನಿಮ್ಮ ಅನುಭವವನ್ನು ಖಂಡಿತವಾಗಿಯೂ ಪರಿಗಣಿಸಲಾಗುವುದು”.

ರವಿ ಬೆಳಗೆರೆಯವರು ಒಲ್ಲದ ಮನಸ್ಸಿನಿಂದಲೇ ಲಿಖಿತ ಪರೀಕ್ಷೆ ಬರೆದರು. ಮುಂದೆ ಅವರನ್ನು ಮೌಖಿಕ ಸಂದರ್ಶನಕ್ಕೂ ಕರೆಯಲಾಯಿತು. ಈ ಮಧ್ಯೆ `ಸುಧಾ’ ಸಂಪಾದಕೀಯ ವಿಭಾಗಕ್ಕೆ ಟೆಲಿಫೋನ್ ಕರೆಗಳು ಬರಲಾರಂಭಿಸಿದವು.

“ಸಹಾಯಕ ಸಂಪಾದಕ ರವಿ ಬೆಳಗೆರೆಯವರಿಗೆ ಕೊಡಿ” ಎನ್ನುವಂಥ ಕರೆಗಳು.

ರವಿ ಬೆಳಗೆರೆಯವರು `ಸುಧಾ’ ಸೇರಿದ್ದಾರೆ ಎಂಬ ವದಂತಿಗೆ ರೆಕ್ಕೆಪುಕ್ಕ ಬಂದಿತ್ತು. ಈ ಕರೆಗಳನ್ನು ಗಮನಿಸಿದ `ಸುಧಾ’ ಸಹೋದ್ಯೋಗಿಗಳು ನನ್ನ ಬಳಿ ಬಂದು “ಏನ್ ಸಾರ್, ರವಿ ಬೆಳಗೆರೆ ಬರ್ತಾರ, ಏನಾಗಿ ಬರ್ತಾರೆ. ಮೇಲಿಂದ ಮೇಲೆ `ರವಿ ಬೆಳಗೆರೆ, ಸುಧಾ ಅಸಿಸ್ಟೆಂಟ್ ಎಡಿಟರ್ ಬೇಕು’ ಎನ್ನುವ  ಫೋನ್ ಕರೆಗಳು ಬರುತ್ತಿವೆ. ಅವರ ನೇಮಕವಾಗಿದೆಯೇ? ಅವರು ಬಂದರೆ ನಮ್ಮ ಸ್ಥಾನಮಾನ ಏನು?” ಎಂದು ಆತಂಕ ತೋಡಿಕೊಂಡರು.

ಕೊನೆಗೆ ನಾನೂ ಟೆಲಿಫೋನ್ ಆಪರೇಟರಿಗೆ, “ರವಿ ಬೆಳಗೆರೆ ಅಂತ ಯಾರೂ `ಸುಧಾ’ದಲ್ಲಿ ಇಲ್ಲ, ಯಾರಾದರೂ ಫೋನ್ ಮಾಡಿದರೆ ಹಾಗೆ ಹೇಳಿ, ನಮಗೆ ಕನೆಕ್ಟ್ ಮಾಡಬೇಡಿ” ಎಂದು ಹೇಳಬೇಕಾಯಿತು. ನೇಮಕಕ್ಕೆ ಮೊದಲೇ ತಾನು ಸುಧಾ ಸೇರಿರುವುದಾಗಿ ಸುದ್ದಿ ಮಾಡಿದ್ದು ರವಿ ಬೆಳಗೆರೆ ಅವರ ಕೋಲಾಹಲಕಾರಿ`ಅಹಂ’ಗೆ ಒಂದು ನಿದರ್ಶನ.

“ರವಿಯವರೇ ನೀವು `ಕರ್ಮವೀರ’ ಬಿಡುವುದೇಕೆ?” ಎಂದು ಮೌಖಿಕ ಸಂದರ್ಶನದಲ್ಲಿ ಕೇಳಿದಾಗ “ಶ್ಯಾಮ ರಾಯರೊಂದಿಗೆ ನಿಭಾಯಿಸಿಕೊಂಡು ಹೋಗುವುದು ನನ್ನಿಂದ ಆಗುತ್ತಿಲ್ಲ  ಅದರಿಂದಾಗಿ”

“ಹಾಗಿದ್ದಲ್ಲಿ ಇಲ್ಲೂ ರಂಗನಾಥ ರಾಯರೊಂದಿಗೆ ನಿಭಾಯಿಸುವುದು ನಿಮಗೆ ಸಾಧ್ಯವಾಗದೇ ಹೋಗಬಹುದಲ್ಲವೆ?”

ಅಲ್ಲಿಗೆ ರವಿ ಬೆಳಗೆರೆಯವರ ಸಂದರ್ಶನ ಮುಗಿದಿತ್ತು.

ರವಿ, ಸಲಗ ನಡೆದದ್ದೇ ದಾರಿ ಎಂಬಂತೆ ತಮ್ಮ ಮಾರ್ಗ ಕಂಡುಕೊಂಡರು.

|ಮುಂದಿನ ಸಂಚಿಕೆಯಲ್ಲಿ|

November 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: