ತುಳಸಿಯ ಪತ್ರೆ
ಅನಿಂದಿತ ಬಸು ಅವರ ‘ತುಲ್ ಸಿ ಕ ಪೇಡ್’ ನ ಕನ್ನಡಾನುವಾದ
ಸರಳಾ ಪ್ರಕಾಶ್
“ಅಮ್ಮಾ, ಮಾಸ್ತರ್ ಜಿ ಬಂದ್ರು” ಮುನ್ನಿ ಕುಣಿಯುತ್ತ ಬಂದು ಹೇಳಿದಳು. ಸುಮಿತ್ರ ರಾಂ ಬಹಾದ್ದೂರ್ ನನ್ನು ಬಯ್ಯುತ್ತಿದ್ದಳು, ಮುನ್ನಿಗೆ ‘ಹೋಗು ಮಾಸ್ತರ್ ಜಿ ಹತ್ತಿರ ಹೋಗಿ ಕೂತುಕೋ , ನಾನೀಗಲೇ ಬರ್ತೀನಿ’ ಮತ್ತೆ ರಾಂ ಬಹಾದ್ದೂರ್ ನ ಕಡೆಗೆ ತಿರುಗಿ, ಬೈಗುಳನ್ನ ಜೋರು ಮಾಡಿದ್ಲು. “ಹಂಗಂದ್ರೆ ಹೆಂಗೆ? ಎಲ್ಲೂ ತುಳಸಿ ಪತ್ರೆ ಸಿಗಲೇ ಇಲ್ಲ ಅಂದ್ರೆ? ಇಡೀ ಊರಲ್ಲಿ ಎಲ್ಲೂ ನಿನಗೆ ತುಳಸಿ ಸಿಗಲಿಲ್ವ? ಹೋಗು,ದೊಡ್ಡ ಆಂಜನೇಯನ ಗುಡಿ ಹತ್ತಿರ ಹೋಗಿ ನೋಡು, ಸಿಕ್ಕೇ ಸಿಗತ್ತೆ ‘ ಅಂದಳು
ರಾಂ ಬಹಾದ್ದೂರ್ ಅಳುಕಿನಿಂದಲೇ “ಅಮ್ಮಾ, ಅದು ಕೆರೆ ತಾವ ಇದೆ. ತುಂಬಾ ದೂರ… ” ‘ಸರಿ ಹಾಗಾದ್ರೆ, ಚಿಕ್ಕವನ ಸೈಕಲ್ ತೊಗೊಂಡು ಹೋಗು’ ಸುಮಿತ್ರ ಮಾಸ್ತರರನ್ನು ವಿಚಾರಿಸಲು ಹೊರಟವಳು ‘ಮತ್ತೆ ಬರ್ತಾ ಹಾಗೆ ಮಾಸ್ತರರಿಗೆ ವೀಳೆದಲೆ ತೊಗೊಂಡ್ ಬಾ’ ಅಂದಳು.
ಮುನ್ನಿ ಮಾಸ್ತರರ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಕರೆದಿದ್ದಳು.
‘ನೀವು ಯಾಕೆ ನಡಕೊಂಡು ಹೋದ್ರಿ? ಗಾಡಿ ಇರಲಿಲ್ವ? ಮಾಸ್ತರರು ನಗುತ್ತ, ‘ಇಲ್ಲಮ್ಮ, ಪಾದಯಾತ್ರೆ ಮಾಡ್ ಬೇಕಾದ್ರೆ ಕಾರಲ್ಲಿ ಹೋಗ್ತಾರ? ಅದೂ ಅಲ್ಲದೆ ಗಾಂಧೀಜಿ ‘ಮಾಡು ಅಥವಾ ಮಡಿ’ ಅಂತ ಹೇಳ್ ಬಿಟ್ಟಿದ್ರಲ್ಲ? ಇಡೀ ಊರಲ್ಲಿ ಎಲ್ಲರಿಗೂ ಅಸಹಕಾರ ಆಂದೋಲನದ ಹುಚ್ಚು ಏರಿ ಬಿಟ್ಟಿತ್ತು . ನಾವು ಕೂಡ ಸಾಯೋಕ್ಕೆ ತಯಾ ರಾಗೆ ಇದ್ವಿ.
‘ಅಸಹಕಾರ ಆಂದೋಲನ ಅಂದರೆ?’ ಮುನ್ನಿಯ ಪ್ರಶ್ನೆ. ಸುಮಿತ್ರ ಒಳಬರುತ್ತ ‘ನಮಸ್ತೆ ಮಾಸ್ತರ್ ಜಿ ” ಅಂದಳು.
“ಒಳ್ಳೇದಾಗಲಿ ತಾಯಿ. ಏನಾಯಿತು? ಏನೋ ಚಿಂತೆಯಲ್ಲಿ ಇದ್ದ ಹಾಗಿದೆ? ಎಲ್ಲ ಸರಿಯಾಗಿದೆ ತಾನೇ” ಮಾಸ್ತರ್
ಸುಮಿತ್ರಳ ಮುಖವನ್ನೇ ಗಮನಿಸುತ್ತ ಕೇಳಿದರು. ಒಂದು ದೀರ್ಘ ಉಸಿರನ್ನು ಎಳೆದುಕೊಂಡ ಸುಮಿತ್ರ , “ಏನ್ ಹೇಳಲಿ ಮಾಸ್ತರ್ ಜಿ? ನಾಳೆ ನಮ್ಮನೆಯಲ್ಲಿ ಸತ್ಯನಾರಾಯಣ ವ್ರತ ಇದೆ. ತುಳಸಿಪತ್ರೆ ತೊಗೊಂಡ್ ಬಾ ಅಂತ ರಾಂ ಬಹಾದ್ದೂರ್ ನ ಕಳಿಸಿದರೆ ಎಲ್ಲೂ ಸಿಕ್ಕಲಿಲ್ಲ ಅಂತ ವಾಪಸ್ ಬಂದಿದಾನೆ. ನಾಳೆ ಪೂಜೆಗೆ ಏನು ಮಾಡೋದು?ಈ ವರ್ಷ ಇಲ್ಲಿ ಬಹಳ ಚಳಿ ಅಲ್ವ? ಬೆಳೆಯಲ್ಲ ಹಾಳಾಗಿದೆ, ಅದರ ಜೊತೆಗೆ ಮಾವು, ನಿಂಬೆ, ನೆಲ್ಲಿ ಎಲ್ಲ ಗಿಡಗಳು ಒಣಗಿ ಬರಿದಾಗಿದೆ. ರಾಂ ಬಹಾದ್ದೂರ್ ನ ನನ್ನ ತೌರಿಗೆ ಕೂಡ ಕಳಿಸಿದ್ದೆ , ಅಲ್ಲೂ ಎಲ್ಲಾ ಗಿಡಗಳು ಸತ್ತಿವೆಯಂತೆ’.
ಒಂದು ಒಳ್ಳೆ ದಿನ ನೋಡಿ ಸತ್ಯ ನಾರಾಯಣ ವ್ರತವನ್ನು ಸುಮಿತ್ರ ಇಟ್ಟುಕೊಂಡಿದ್ಲು. ಬೇರೆ ಎಲ್ಲ ತಯಾರಿ ಮುಗಿದಿತ್ತು, ತುಳಸಿ ಪತ್ರೆ ಒಂದನ್ನು ಬಿಟ್ಟು. ಅಕ್ಕ-ಪಕ್ಕದ ಮನೆಯಲ್ಲಿ ಸಹ ತುಳಸಿ ಗಿಡದ ಸ್ಥಿತಿ ಹಾಗೇ ಇತ್ತು. ಪಕ್ಕದ ಮನೆಯ ವಿಮಲಾಳ ಸಂಪ್ರದಾಯ ಸ್ಥ ತಾಯಿ ಅವಳ ಪತಿಯನ್ನು ಗೌರ್ಮೆಂಟ್ ನರ್ಸರಿ ಇಂದ ತುಳಸಿ ತೊಗೊಂಡ್ ಬಾ ಅಂತ ತಾಕೀತು ಮಾಡ್ತಿದ್ಲು. ಅಲ್ಲಿಯೂ ಸಹ ಸಿಗದೇ ಸುತ್ತಲ ಗ್ರಾಮಗಳಲ್ಲಿಯೂ ಇರದೇ ಪರದಾಡುವಂತಾಗಿತ್ತು . ಅದಕ್ಕೆ ಅವರು ಲಕ್ನೋ ನರ್ಸರಿ ಇಂದ ತರಿಸಿ ಕೊಳ್ಳಲಿಕ್ಕೆ ಆರ್ಡರ್ ಕಳಿಸಿದ್ರು. ಅದು ಬರಲಿಕ್ಕೆ ಒಂದು ತಿಂಗಳೇ ಹಿಡಿಯಬಹುದು. ಪೂಜೆಗೆ ಬೆಳ್ಳಿಯ ತುಳಸಿ ಪತ್ರೆ ಮಾಡಿಸು ಅಂತ ಹೇಳ್ತಾನೆ ಇದ್ರು.
ಆದರೆ ಸುಮಿತ್ರಾಗೆ ಮಾರನೇ ದಿನಕ್ಕೆ ಬೇಕಾಗಿತ್ತಲ್ಲ – ಗುರುವಾರ, ಹುಣ್ಣಿಮೆ ಬೇರೆ. ಯಾವುದೇ ಕಾರಣಕ್ಕೂ ಮುಂದೆ ಹಾಕಲು ಅವಳಿಗೆ ಮನಸ್ಸಿರಲಿಲ್ಲ,
ಅಷ್ಟರಲ್ಲಿ ರಾಂ ಬಹಾದ್ದೂರ್ ಬಂದು ‘ಅಮ್ಮಾ, ಆ ಆಂಜನೇಯನ ಗುಡಿ ಹತ್ತಿರಾನೂ ಸಿಕ್ಕಲಿಲ್ಲ. ಈಗ ಹದಿನೈದು ದಿನದಿಂದ ದೇವರಿಗೆ ತುಳಸಿ ಇಲ್ಲದೇನೆ ಪೂಜೆ ಮಾಡ್ತಾ ಇದ್ದಾರಂತೆ’
ಈ ಮಾತು ಕೇಳಿ ಮಾಸ್ತರರು ‘ನೀವೇನು ತಪ್ಪು ತಿಳಿಯಲ್ಲ ಅಂದ್ರೆ ನಾನೊಂದು ಮಾತು ಹೇಳಲೇ? ನಮ್ಮ ಮನೆಯಲ್ಲಿ ತುಳಸಿ ಗಿಡ ಇದೆ. ಬಹದ್ದೂರ್ ನ ಕಳಿಸಿ ಎಲೆ ತರಿಸಿ’
‘ಅರೇ, ನಿಮ್ಮ ಮನೆಯಲ್ಲಿ ತುಳಸಿ ಗಿಡವೇ?’ ಆಶ್ಚರ್ಯಚಕಿತಳಾಗಿ ಸುಮಿತ್ರ ಕೇಳಿದಳು
‘ಯಾಕೆ, ನಮ್ಮಮನೆಯಲ್ಲಿ ಬರಿ ದಾಳಿಂಬೆ ಗಿಡ ಮಾತ್ರ ಇರಬೇಕೇನು?’ ಮಾಸ್ತರರು ನಗುತ್ತ ‘ ನಿಮಗೆ ಗೊತ್ತೇ ಇದೆ, ನನಗೆ ಆಗಾಗ ನೆಗಡಿ, ಕೆಮ್ಮು ಬರ್ತಾನೆ ಇರತ್ತಲ್ಲ? ಅದಕ್ಕೆ ತುಳಸಿ ಕಷಾಯನೇ ಒಳ್ಳೆ ಔಷದಿ ಅಂತ ತುಳಸಿ ಗಿಡ ಬೆಳಸಿ ಕಷಾಯ ಮಾಡಿಕೊಂಡು ಕುಡೀತ ಇರ್ತೇನೆ. ಗಿಡ ತಂದು ತುಂಬಾ ದಿನ ಆಗಿಲ್ಲ . ನೀವು ಗಮನಿಸಿಲ್ಲ ಅನ್ಸತ್ತೆ ನನಗೆ ಕಷಾಯದಿಂದ ತುಂಬಾ ಆರಾಮ ಸಿಕ್ಕಿದೆ. ಈಗ ಚಳಿ ಜಾಸ್ತಿ ಆಗ್ತಾ ಇರೋದನ್ನ ನೋಡಿ ತುಳಸಿಯನ್ನ ಕೋಣೆಯೊಳಗೆ ಇಟ್ಟು ಕಾಪಾಡಿದ್ದೇನೆ.
ಮಾರನೆ ದಿನ ಬೆಳ್ಳಂಬೆಳಗ್ಗೆ ರಾಂ ಬಹಾದ್ದೂರ್ ಹಾಜಿ ಇಕ್ಬಾಲ್ ಅಹಮದ್ ಸಿದ್ದೀಕಿ ಅವರ ಮನೆಯಿಂದ ಸತ್ಯನಾರಾಯಣ ಪೂಜೆಗೆ ಬೇಕಾದ ತುಳಸಿ ಪತ್ರೆ ತಂದ. ಜನ ಕೇಳಿದ್ದಕ್ಕೆ ಸುಮಿತ್ರ, ಪಾಟ್ನಾದ ತನ್ನ ಚಿಕ್ಕಪ್ಪನ ಮಗ ಬರ್ತಾ ತಂದಿದ್ದ ಅಂತ ಹೇಳಿದಳು. ನಂಬಿಕಸ್ತ ಮನೆಯಾಳು ರಾಂ ಬಹಾದ್ದೂರ್ ಸುಮ್ಮನಿದ್ದ.







Sarala, thumba chennagi translate maddidiya. Good job Keep it up!
very good sarala
Sarala, I wish I could read your translation and appreciate it. Let me read the English version at least. Please share.
I realized its in Hindi. Pls share the Hindi version.
All the best Sarala. Keep up the spirit.
congrats sral very good attempt
Short value based story. Good translation. Congrats. Keep it up.
Very nice. All the best
Krisnana tulasige ikbal’r maane hidisittu nodi.
ಚೆನ್ನಾಗಿದೆ ಸರಳಾ .. ಕೊನೆವರೆಗೆ ಕುತೂಹಲ ಕಾಯ್ದುಕೊಳ್ಳತ್ತೆ