ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಭಾರತದ ಪ್ರಾಚೀನ ಸಾಹಿತ್ಯ ಪ್ರಕಾರಗಳಲ್ಲಿ ಒಂದು. ದ್ರಾವಿಡ ಭಾಷಾವರ್ಗಕ್ಕೆ ಸೇರಿರುವ ಕನ್ನಡ ಸಾಹಿತ್ಯ ಪರಂಪರೆ ಸಂಸ್ಕೃತದ ಜೊತೆ ಜೊತೆಗೆಯೇ ಪರ್ಯಾಯವಾಗಿ ಬೆಳೆದು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮೇರು ಕೃತಿಗಳನ್ನು ನೀಡಿತು. ಹತ್ತನೆಯ ಶತಮಾನದ ಹೊತ್ತಿಗೆ ಕನ್ನಡವು ಪರಿಪಕ್ವವಾದ ಭಾಷೆಯಾಗಿ ಬೆಳೆದು ಅತ್ಯುತ್ತಮ ಕೃತಿಗಳನ್ನು ನೀಡಿದ್ದರೂ ಇದ್ದಕ್ಕಿಂತಲೂ ಮೊದಲಿನ ಶತಕಗಳಲ್ಲಿ ಸಾಹಿತ್ಯ ನಿಮರ್ಿತಿಯಾದುದನ್ನು ಮರೆಯುವಂತಿಲ್ಲ. ಆ ಕಾಲದ ಕೃತಿಗಳು ಲಭ್ಯವಾಗದಿದ್ದರೂ ಅವುಗಳ ಬಗ್ಗೆ ವಿವರಣೆ ಅನೇಕ ರೀತಿಗಳಲ್ಲಿ ಲಭ್ಯವಾಗಿದ್ದುಂಟು. ಶಾಸನಗಳಲ್ಲಿ ಅಥವಾ ಬೇರೆ ಬೇರೆಯಾದ ಪ್ರಕಾರಗಳಲ್ಲಿ ಈ ಕೃತಿಗಳ ವಿವರಣೆ ಇದೆ. ಚಕ್ರವರ್ತಿ ನೃಪತುಂಗನು ಸ್ವತಃ ಕವಿಯಾಗಿದ್ದನೆಂಬುದು ದಾಖಲೆಯಾಗಿದೆ. ‘ಕವಿರಾಜಮಾರ್ಗ’ದಲ್ಲಿ ಸಾಹಿತ್ಯದ ಗುಣಲಕ್ಷಣಗಳ ಚರ್ಚೆಯಾಗಿರುವುದು ವಿಶೇಷವಾಗಿದೆ. ‘ಕವಿರಾಜಮಾರ್ಗ’ದ ಕಾಲ ಒಂಬತ್ತನೆಯ ಶತಮಾನ ಎಂಬುದು ಗಮನಾರ್ಹ. ಕೃತಿಯಲ್ಲಿ ತನಗಿಂತ ಮೊದಲು ಸಾಹಿತ್ಯ ನಿರ್ಮಿಸಿದ ಕವಿಗಳ ಹೆಸರುಗಳು ಉದ್ಧರಣೆಗೊಂಡಿದ್ದು ಕನ್ನಡ ಸಾಹಿತ್ಯದ ಬೇರುಗಳು ಎಷ್ಟು ಆಳವಾಗಿ ಬೇರೂರಿತ್ತೆಂಬುದು ವೇದ್ಯವಾಗುತ್ತದೆ.
ಅಂತಹ ಸಿರಿವಂತ ಪರಂಪರೆ ಇರುವ ಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಅಚ್ಚರಿಯ ವಿಷಯವೇನಲ್ಲ. ಒಂದು ಸಂದರ್ಭದಲ್ಲಿ ಖ್ಯಾತ ಸಂಶೋಧಕರಾದ ಡಾ. ಹಂಪ ನಾಗರಾಜಯ್ಯನವರು ತಮ್ಮದೊಂದು ಭಾಷಣದಲ್ಲಿ ‘ಕನ್ನಡಕ್ಕೆ ಕನಿಷ್ಠ ಇಪ್ಪತ್ತು ಜ್ಞಾನಪೀಠ ಪ್ರಶಸ್ತಿಗಳಾದರೂ ಸಿಗಬೇಕು; ಅಂತಹ ವಿದ್ವತ್ಪರಂಪರೆ ಕನ್ನಡಕ್ಕಿದೆ’ ಎಂದು ಹೇಳಿದ್ದರು. ಇಂದು ಅತಿಶಯೋಕ್ತಿಯ ಮಾತೆಂದು ನನಗೆ ಅನ್ನಿಸಿಲ್ಲ. ನಿರಂಜನ, ಬಸವರಾಜ ಕಟ್ಟೀಮನಿ, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ದೇ.ಜವರೇಗೌಡ, ಎಸ್.ಎಲ್.ಭೈರಪ್ಪ, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಮುಂತಾದವರು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಬೇಕಾದ ಹೆಸರುಗಳೇ; ತೇಜಸ್ವಿ, ಭೈರಪ್ಪ, ಕಂಬಾರ ನಸು ಅಂತರದಲ್ಲಿ ಈ ಪ್ರಶಸ್ತಿಯಿಂದ ವಂಚಿತರಾಗಿದ್ದವರು. ಕನ್ನಡ ಸಾಹಿತ್ಯದ ಸತ್ತ್ವ ಮತ್ತು ಶಕ್ತಿಯ ಬಗ್ಗೆ ಅರಿವಿರುವವರಿಗೆ ಡಾ. ಹಂಪನಾ ಅವರ ಮಾತು ಎಷ್ಟು ಮಹತ್ವದ್ದೆಂದು ಅರಿವಾಗದೇ ಇರದು.
ಜ್ಞಾನಪೀಠ ಪ್ರಶಸ್ತಿ ಭಾರತದ ಸರ್ವೋಚ್ಛ ಸಾಹಿತ್ಯ ಪ್ರಶಸ್ತಿ. ಇದು ಅಂತಾರಾಷ್ಟ್ರೀಯ ಖ್ಯಾತಿಯ ನೋಬೆಲ್ ಪ್ರಶಸ್ತಿಗೆ ಸಮ. ನೋಬೆಲ್ ಪ್ರಶಸ್ತಿ ಬದುಕಿನ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳಿಗೂ ನೀಡಲಾಗುತ್ತಿದ್ದರೆ ಜ್ಞಾನಪೀಠ ಪ್ರಶಸ್ತಿ ಕೇವಲ ಸಾಹಿತ್ಯ ಕ್ಷೇತ್ರಕ್ಕೇ ಮೀಸಲು; ಇದೇ ಅದರ ವೈಶಿಷ್ಟ್ಯ. ಜ್ಞಾನಪೀಠ ಪ್ರಶಸ್ತಿಯು ಸಾಹಿತ್ಯದ ಸರ್ವಶ್ರೇಷ್ಠ ಮಾನದಂಡವೆಂದೇ ಪರಿಗಣಿಸಲಾಗುತ್ತದೆ.
ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಿದವರು ಸಾಹು ಜೈನ್ ಕುಟುಂಬದವರು. ಜೈನ್ ಕುಟುಂಬ ಭಾರತದ ನಂಬರ್ ಒನ್ ಇಂಗ್ಲಿಷ್ ಪತ್ರಿಕೆಯೆಂಬ ಹೆಗ್ಗಳಿಕೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹಾಗೂ ಉಳಿದ ಅನೇಕ ಭಾಷಾ ಪತ್ರಿಕೆಗಳನ್ನು ನಡೆಸುತ್ತಿದೆ. ಈ ಪ್ರಶಸ್ತಿ ಸ್ಥಾಪನೆಯ ಬಗ್ಗೆ 1960ರಲ್ಲಿಯೇ ಸಾಹು ಜೈನ್ರವರು ಆಸಕ್ತಿಯನ್ನು ತೋರಿಸಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ನೋಬೆಲ್ ಪ್ರಶಸ್ತಿಯಂತೆಯೇ ಈ ಪ್ರಶಸ್ತಿಯು ಸ್ಥಾಪಿಸಲ್ಪಟಬೇಕೆಂದು ಜೈನ್ ಬಯಸಿದ್ದರು. 1961ರಲ್ಲಿ ಭಾರತೀಯ ಜ್ಞಾನಪೀಠ ಟ್ರಸ್ಟ್ ಎಂಬ ಟ್ರಸ್ಟ್ನ ಸ್ಥಾಪಿಸಿ ಜೈನ್ರವರು ತಮ್ಮ ಕನಸಿಗೆ ಬಣ್ಣ ನೀಡಿದರು. ಸಂಸ್ಕೃತದ ‘ಜ್ಞಾನ’ ಮತ್ತು ‘ಪೀಠ’ ಶಬ್ದಗಳನ್ನು ಒಂದಾಗಿಸಿ ‘ಅರಿವಿನ ಮೇರುಸ್ಥಾನ’ ಎಂಬರ್ಥದಲ್ಲಿ ಈ ಟ್ರಸ್ಟ್ನ್ನು ಸ್ಥಾಪಿಸಲಾಯಿತು. ಏಳು ಲಕ್ಷ ರೂಪಾಯಿ ನಗದು, ಸರಸ್ವತಿಯ ಕಂಚಿನ ಮೂರ್ತಿ ಮತ್ತು ಪ್ರಶಸ್ತಿ ಇವು ಜ್ಞಾನಪೀಠ ಪ್ರಶಸ್ತಿಯ ಸ್ವರೂಪ. ಭಾರತದ ಯಾವುದೇ ನಾಗರಿಕನು ಭಾರತದ ಯಾವುದೇ ಅಧಿಕೃತ ಭಾಷೆಯಲ್ಲಿ ಬರೆದ ಸಾಹಿತ್ಯಕ್ಕೆ ಈ ಪ್ರಶಸ್ತಿ ಮೀಸಲು. 1982ಕ್ಕಿಂತ ಮೊದಲು ಲೇಖಕನ ಒಂದು ಶ್ರೇಷ್ಠ ಕೃತಿಯನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. 1982ರ ನಂತರ ಅದನ್ನು ಲೇಖಕನ ಜೀವಮಾನದ ಸಾಧನೆಗೆ ಸಲ್ಲುವ ಪ್ರಶಸ್ತಿಯೆಂದು ಬದಲಾಯಿಸಿಕೊಳ್ಳಲಾಯಿತು.
ಟ್ರಸ್ಟ್ 1961ರಲ್ಲಿ ಸ್ಥಾಪಿಸಲ್ಪಟ್ಟಿದ್ದರೂ ಮೊದಲ ಜ್ಞಾನಪೀಠ ಪ್ರಶಸ್ತಿ 1965ರಲ್ಲಿ ಕೊಡಮಾಡಲಾಯಿತು. ಮಲಯಾಳಿಯ ಪ್ರಸಿದ್ಧ ಲೇಖಕರಾದ ಜಿ. ಶಂಕರ ಕುರೂಪರವರು ‘ಓಡಕ್ಕುಝಲ್’ ಎಂಬ ಕೃತಿಗೆ ಈ ಪ್ರಶಸ್ತಿಯನ್ನು ಪಡೆದು ಜ್ಞಾನಪೀಠದ ಮೊದಲ ಪುರಸ್ಕೃತರೆಂಬ ಗೌರವಕ್ಕೆ ಪಾತ್ರರಾದರು.
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡಕ್ಕೆ ಸಲ್ಲುತ್ತದೆ. ಇಲ್ಲಿಯವರೆಗೆ ನೀಡಲಾದ ಒಟ್ಟು 49 ಪ್ರಶಸ್ತಿಗಳಲ್ಲಿ ಕನ್ನಡವು ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಹಿಂದೀಗೂ ಏಳು ಪ್ರಶಸ್ತಿಗಳು ಬಂದಿವೆ. ಬಂಗಾಲಿ ಮತ್ತು ಮಲಯಾಳಂ ಭಾಷೆಗಳಿಗೆ ತಲಾ ಐದು, ಉರ್ದುಗೆ ನಾಲ್ಕು, ಗುಜರಾತಿ, ಓರಿಯಾ ಮತ್ತು ಮರಾಠಿಗೆ ತಲಾ ಮೂರು ಪ್ರಶಸ್ತಿಗಳು ದೊರೆತಿವೆ; ಇತ್ತೀಚಿಗಷ್ಟೇ ಕೊಂಕಣಿ ಹಾಗೂ ಸಂಸ್ಕೃತ ಭಾಷೆಗಳಿಗೂ ಪ್ರಶಸ್ತಿ ಸಂದಿದೆ. ರವೀಂದ್ರ ಕೇಳ್ಕರ್ ಕೊಂಕಣಿಯ ಹಾಗು ಸತ್ಯವಿರಾಟ್ ಶಾಸ್ತ್ರೀಯವರು ಸಂಸ್ಕೃತದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರೆಂಬ ಮನ್ನಣೆಗೆ ಪಾತ್ರರಾಗಿದ್ದಾರೆ.
ಕುವೆಂಪು (1967), ದ.ರಾ.ಬೇಂದ್ರೆ (1973), ಶಿವರಾಮ ಕಾರಂತ(1977), ಮಾಸ್ತಿ ವೆಂಕಟೇಶ ಐಯ್ಯಂಗಾರ(1983) ವಿನಾಯಕ ಕೃಷ್ಣ ಗೋಕಾಕ(1990), ಯು.ಆರ್.ಅನಂತಮೂರ್ತಿ(1994) ಹಾಗೂ ಗಿರೀಶ ಕಾರ್ನಾಡ (1998) ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯದ ಚೇತನಗಳು. ಈ ಎಲ್ಲ ಮಹನೀಯರೂ ಕನ್ನಡ ಸಾಹಿತ್ಯವನ್ನು ತಮ್ಮ ಬರವಣಿಗೆಯಿಂದ ಸಿರಿವಂತಗೊಳಿಸಿದ್ದಾರೆ. ಹಾಗೆ ನೋಡಿದರೆ ಜ್ಞಾನಪೀಠ ಪ್ರಶಸ್ತಿ ಪಡೆಯುವ ಕನಿಷ್ಠ ಒಂದು ಡಜನ್ ಸಾಹಿತಿಗಳಾದರೂ ಕನ್ನಡದಲ್ಲಿ ಇದ್ದಾರೆನ್ನುವುದು ನನ್ನ ಅಭುಪ್ರಾಯವಾಗಿದೆ.
1967ರಲ್ಲಿ ಕುವೆಂಪು ಅವರಿಗೆ ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಕನ್ನಡ ಸಾಹಿತ್ಯಕ್ಕೆ ಕ್ರಾಂತಿಕಾರಿಯಾದ ತಿರುವನ್ನು ನೀಡಿದ ಕುವೆಂಪು ಕಾವ್ಯ, ಕಾದಂಬರಿ, ಲೇಖನ, ನಾಟಕ, ಸಣ್ಣಕಥೆ, ವಚನ, ಸಾಹಿತ್ಯ ವಿಮರ್ಶೆ ಹೀಗೆ ನಾನಾ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಈ ಕಾದಂಬರಿಗಳಲ್ಲಿ ಕುವೆಂಪುರವರು ಮಲೆನಾಡಿನ ನಿಸರ್ಗದ ದಟ್ಟ ಚಿತ್ರಣವನ್ನು ನೀಡಿದ್ದಾರೆ. ಅಲ್ಲಿಯವರೆಗೆ ಚರ್ವಿತಚರ್ವಣವಾಗಿದ್ದ ಸಾಹಿತ್ಯವು ಕುವೆಂಪುರಿಂದಾಗಿ ಹೊಸ ಚೈತನ್ಯವನ್ನು ಪಡೆಯಿತು. ಕುವೆಂಪು ಸಾವಿರಾರು ಕವಿತೆಗಳನ್ನು ರಚಿಸಿದ್ದಾರೆ. ಷೇಕ್ಸ್ಪಿಯರ್ನ ಎರಡು ನಾಟಕಗಳನ್ನು ರೂಪಾಂತರಗೊಳಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ವಾಲ್ಮೀಕಿ ಬರೆದ ‘ರಾಮಾಯಣ’ಕ್ಕಿಂತಲೂ ಹೆಚ್ಚು ಒಳನೋಟಗಳನ್ನು ಒಳಗೊಂಡಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ‘ರಾಮಾಯಣ ದರ್ಶನಂ’ವನ್ನು ಸ್ವತಂತ್ರ ಕಥೆಯೆಂದು ಮುಕ್ತಕಂಠದಿಂದ ಹೊಗಳಿದ್ದಾರೆ. ವಾಲ್ಮೀಕಿ ನಗಣ್ಯವಾಗಿಸಿದ್ದ ಊರ್ಮಿಳೆ ಪಾತ್ರದ ವಿಸ್ತರಣೆ, ರಾವಣ, ಮಂಥರೆ ಮುಂತಾದ ಪಾತ್ರಗಳ ಉದಾತ್ತೀಕರಣ, ತನ್ನನ್ನು ತಾನು ವಿಮರ್ಶೆಗೆ ಒಳಪಡಿಸಿಕೊಳ್ಳುವ ರಾಮ ಮುಂತಾದ ಹೊಸ ನೋಟಗಳನ್ನು ಕುವೆಂಪು ತಮ್ಮ ಮಹಾಕಾವ್ಯದಲ್ಲಿ ಸಾಧ್ಯವಾಗಿ ಮಾಡಿ ತೋರಿಸಿದ್ದಾರೆ. ಆ ಕಾಲದ ಸಾಮಾಜಿಕ ಸಾಂಸ್ಕೃತಿಕ ಸಂಘರ್ಷಗಳನ್ನೂ, ವೈರುಧ್ಯಗಳನ್ನೂ ಇಲ್ಲಿ ಚರ್ಚಿಸಿದ್ದಾರೆ. ಕುವೆಂಪು ಮೂಲತಃ ಒಬ್ಬ ಬಂಡಾಯಗಾರ. ಅವರ ಕೃತಿಯಲ್ಲಿಯೂ ಅವರ ಸ್ವಭಾವ ಹಣಕಿ ಹಾಕುತ್ತದೆ. ಸಾಮಾಜಿಕ ಅಸಮಾನತೆಯನ್ನು ಆರಂಭದಿಂದಲೇ ವಿರೋಧಿಸುತ್ತ ಬಂದಿರುವ ಕುವೆಂಪು ‘ರಾಮಾಯಣ ದರ್ಶನಂ’ದಲ್ಲಿಯೂ ಅದನ್ನು ಪ್ರತಿಪಾದಿಸುತ್ತಾರೆ.
ಕುವೆಂಪು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಚಿಂತನಶೀಲ ಕವಿ. ಪುರೋಹಿತಶಾಹಿಯನ್ನು ವಿರೋಧಿಸುತ್ತ ಸಮಾನತೆಯ ಆಶಯಗಳ ಕನಸುಗಳನ್ನು ಹೊತ್ತುಕೊಂಡಿರುವ ಅವರ ಸಾಹಿತ್ಯ ಇತರ ಭಾಷೆಗಳಿಗೂ ಒಂದು ದಿಕ್ಸೂಚಿಯಾಗಿದೆ. ಅವರು ಯುಗದ ಕವಿಯೂ ಹೌದು; ಜಗದ ಕವಿಯೂ ಹೌದು.
ಕುವೆಂಪುರಷ್ಟೇ ಪ್ರತಿಭಾಶಾಲಿಯಾಗಿರುವ ದ.ರಾ.ಬೇಂದ್ರೆಯವರಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. ಕುವೆಂಪು ‘ಯುಗದ ಕವಿ ಜಗದ ಕವಿ’ಯಾಗಿದ್ದರೆ ಬೇಂದ್ರೆ ವರಕವಿಗಳು. ಶಬ್ದಗಳನ್ನು ಮುರಿದು ಕಟ್ಟಿ ಅವುಗಳನ್ನು ತಮ್ಮ ಭಾವಕ್ಕೆ ತಕ್ಕಂತೆ ಮಣಿಸುವ ಪ್ರತಿಭೆ ಬೇಂದ್ರೆ ಕಾವ್ಯಕ್ಕಿದೆ. ಬೇಂದ್ರೆಯವರಿಗೆ ತಾಯಿ ಅಂಬೂತಾಯಿ ಪ್ರೇರಕಶಕ್ತಿಯಾಗಿ ನಿಂತವರು. ಅದರ ಸಂಕೇತವಾಗಿಯೇ ಬೇಂದ್ರೆ ತಮ್ಮ ಕಾವ್ಯನಾಮವನ್ನು ‘ಅಂಬಿಕಾತನಯದತ್ತ’ ಎಂದು ಮಾಡಿಕೊಂಡರು. ಕಾವ್ಯ, ನಾಟಕ, ವಿಮರ್ಶೆ, ಕಾವ್ಯಮೀಮಾಂಸೆಗಳನ್ನು ಬೇಂದ್ರೆ ಬರೆದರು. ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಸಮಾನ ಅಧಿಕಾರವನ್ನು ಹೊಂದಿದ ಬೇಂದ್ರೆ ಮರಾಠಿಯಲ್ಲಿಯೂ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ. ಹಲವು ಗ್ರಂಥಗಳನ್ನು ಕನ್ನಡದಿಂದ ಮರಾಠಿಗೆ, ಇನ್ನು ಕೆಲವು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
‘ನಾಕು ತಂತಿ’ ಕಾವ್ಯ ಸಂಕಲನಕ್ಕೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವಧೂತ ಕವಿ, ರಸೃಷಿ, ವರಕವಿ, ಶ್ರೇಷ್ಠ ಕವಿ ಹೀಗೆ ಮುಂತಾಗಿ ಗೌರವಿಸಲ್ಪಟ್ಟ ಕವಿ ಬೇಂದ್ರೆ ಸಾಮಾನ್ಯರ ಜೊತೆಗೆ ಅತ್ಯಂತ ಸಾಮಾನ್ಯರಾಗಿರುತ್ತಿದ್ದರು. ಜೀವನವನ್ನು ನೋಡುವ ಆಸ್ವಾದಿಸುವ, ಅನುಭವಿಸುವ ಅದ್ಭುತವಾದ ಆಸಕ್ತಿ ಅವರಲ್ಲಿತ್ತು. ಅವರ ಬಾಯಿಯಿಂದ ಹೊರ ಬಂದ ಮಾತುಗಳೆಲ್ಲ ಕವಿತೆಗಳೇ ಆಗಿರುತ್ತಿದ್ದವು. ಶಬ್ದಗಳಿಗೆ ವೇಷ ತೊಡಿಸಿಸ, ಆಭರಣಗಳಿಂದ ಸಿಂಗರಿಸಿ ಅವುಗಳನ್ನು ಕುಣಿಸಿ ಆ ಆನಂದವನ್ನು ತಾವು ಪಡೆಯುತ್ತಲೇ ಓದುಗರಿಗೂ ಹಂಚುವ ಔದಾರ್ಯ ಅವರಲ್ಲಿತ್ತು. ಬೇಂದ್ರೆ ಭಾಷಣಕ್ಕೆ ನಿಂತರೆ ಅದು ಜೋಗದ ಜಲಪಾತದಂತೆ ಧೋ ಧೋ ಎಂದು ಸುರಿಯುತ್ತಿತ್ತು. ಉತ್ತರ ಕರ್ನಾಟಕದ ಭಾಷೆಯನ್ನೇ ತಮ್ಮ ಭಾಷಣಗಳ ಅಭಿವ್ಯಕ್ತಿಯನ್ನಾಗಿಸಿದ ಬೇಂದ್ರೆ ಆ ಮಾತುಗಳಿಂದ ಎದುರಿಗೆ ಕುಳಿತವರಸ ಹೃದಯವನ್ನೇ ನೇರವಾಗಿ ಪ್ರವೇಶಿಸುತ್ತಿದ್ದರು.
ಬೇಂದ್ರೆ ಹುಟ್ಟಿದ್ದು 1896 ಜನೇವರಿ 31 ರಂದು ಧಾರವಾಡದಲ್ಲಿ ಎಂ.ಎ. ಪದವಿ ಪಡೆದ ನಂತರ ಹೈಸ್ಕೂಲು ಅಧ್ಯಾಪಕರಾಗಿ ಕೆಲಸ ಆರಂಭಿಸಿದರು. ನಂತರ ‘ಜಯಕರ್ನಾಟಕ’ ಹಾಗೂ ‘ಜೀವನ’ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಮೊದಲ ಕವನ ಸಂಕಲನ ‘ಕೃಷ್ಣಾಕುಮಾರಿ’ 1922ರಲ್ಲಿ ಪ್ರಕಟವಾಯಿತು. ಅನಂತರ ಪುಂಖಾನುಪುಂಖವಾಗಿ ಅವರ ಕೃತಿಗಳು ಬರುತ್ತಲೇ ಇದ್ದವು.
ಬೇಂದ್ರೆಯವರ ಕಾವ್ಯದ ಬಗ್ಗೆ ಬರೆಯುವುದೆಂದರೆ ‘ಕರಿಯ ಕನ್ನಡಿಯೊಳಗೆ ಹಿಡಿದಂತೆ’ ಅವರ ಎಲ್ಲ ಕವಿತೆಗಳೂ ಮಲ್ಟಿಡೈಮೆನ್ಶನಲ್ ಇವೆ. ನಾಡಿನ ಸತ್ವವನ್ನೇ ಹಾಡಿನ ಸತ್ವವನ್ನಾಗಿಸಿದ ಬೇಂದ್ರೆ ವಿಲಕ್ಷಣ ಭಾವದ ಕವಿ.
ಜ್ಞಾನಪೀಠ ಪ್ರಶಸ್ತಿ ಪಡೆದ ‘ನಾಕುತಂತಿ’ ಒಂದು ಮಿಸ್ಟಿಕ್ ಅನುಭವವನ್ನು ನೀಡುವ ಕಾವ್ಯ ಸಂಕಲನ. ‘ನಾಕುತಂತಿ’ ಕವಿತೆ ಸುಲಭವಾಗಿ ಅರ್ಥವಾಗದಿದ್ದರೂ ಅದನ್ನು ಅನಂತಸ್ವಾಮಿಯವರು ಸ್ವರ ಸಂಯೋಜನೆ ಮಾಡಿ ಹಾಡಿದಾಗ ಅದು ಕೇಳುವವರ ಮೇಲೆ ಅದ್ಭುತವಾದ ಪರಿಣಾಮವನ್ನುಂಟು ಮಾಡಿತು. ಬೇಂದ್ರೆಯವರ ಶಬ್ದಗಳು ವಾಣಿಯ ಚತುರ ಸ್ತರಗಳಿಂದ ಬಂದಿರುವುದರಿಂದ ಅವುಗಳಲ್ಲಿ ಒಂದು ವಿಲಕ್ಷಣ ಮಂತ್ರಶಕ್ತಿ ಇದೆ.
ಬೇಂದ್ರೆಯವರು ‘ಔದುಂಬರ ಗಾಥೆ’ಯೆಂಬ ಮಹಾಕಾವ್ಯವನ್ನು ಬರೆದಿದ್ದಾರೆ. ಸಂಖ್ಯಾಶಾಸ್ತ್ರದ ಬಗ್ಗೆ ಅತೀವ ಆಸಕ್ತಿಯನ್ನು ಬೆಳೆಯಿಸಿಕೊಂಡ ಬೇಂದ್ರೆ ಸಂಖ್ಯೆಗಳ ಮೂಲಕ ಜೀವನದ ಜಟಿಲ ಸಮಸ್ಯೆಗಳನ್ನು ಬಿಡಿಸಲು ಯತ್ನಿಸಿದರು. ಬೇಂದ್ರೆ 1981 ಅಕ್ಟೋಬರ್ 26 ರಂದು ಮುಂಬೈಯಲ್ಲಿ ನಿಧನರಾದರು.
1977ರಲ್ಲಿ ಕನ್ನಡಕ್ಕೆ ಮೂರನೆಯ ಜ್ಞಾನಪೀಠ ಪ್ರಶಸ್ತಿ ಬಂದಿತು. ‘ಆಡು ಮುಟ್ಟದ ಗಿಡವಿಲ್ಲ; ಕಾರಂತ ಬರೆಯದ ಸಾಹಿತ್ಯ ಪ್ರಕಾರವಿಲ್ಲ’ವೆಂಬ ಗಾದೆ ಮಾತಿಗೆ ಸಾಕ್ಷಿಯಾಗಿರುವ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿತು. ಹಾಗೆ ನೋಡಿದರೆ ಕಾರಂತರ ಇಡೀ ಜೀವನಕ್ಕೆ ಸಂದ ಪ್ರಶಸ್ತಿ ಇದಾಗಿದೆ. ಕಾರಂತರು ಎಷ್ಟು ಬರೆದಿದ್ದಾರೆಂದು ಲೆಕ್ಕ ಹಾಕುವುದು ಅಸಾಧ್ಯ. ಕಾದಂಬರಿ, ಕಥೆ, ನಾಟಕ, ವಿಮರ್ಶೆ, ಆತ್ಮಚರಿತ್ರೆ, ಪ್ರವಾಸ ಕಥನ-ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕಾರಂತರು ಸಾಹಿತ್ಯ ರಚಿಸಿದ್ದಾರೆ. ಖಚಿತವಾದ ಮಾತು, ನಿರ್ಧಾರಗಳಿಗೆ ಪ್ರಸಿದ್ಧರಾದ ಕಾರಂತರು ಕಾಲಿಗೆ ಗೆಜ್ಜೆಕಟ್ಟಿ ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದವರು. ಒಂದು ಜೀವಿತದ ಅವಧಿಯಲ್ಲಿ ಒಬ್ಬ ವ್ಯಕ್ತಿ ಇಷ್ಟೆಲ್ಲ ಸಾಧಿಸಲು ಸಾಧ್ಯವೇ? ಎಂಬ ವಿಸ್ಮಯವನ್ನು ಹುಟ್ಟಿಸುವಷ್ಟರ ಮಟ್ಟಿಗೆ ಕಾರಂತರು ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರಿಗೆ ಬದುಕೇ ಒಂದು ವಿಶ್ವವಿದ್ಯಾಲಯವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಸಹಿತವಾಗಿ ಅವರಿಗೆ ಅನೇಕ ಪ್ರಶಸ್ತಿಗಳು, ಮಾನ ಸನ್ಮಾನಗಳು ಹುಡುಕಿಕೊಂಡು ಬಂದವು. ತುರ್ತುಪರಿಸ್ಥಿತಿಯಲ್ಲಿ ಅವರು ಇಂದಿರಾಗಾಂಧೀಯವರ ಸರ್ವಾಧಿಕಾರವನ್ನು ಧಿಕ್ಕರಿಸಿ ಕೇಂದ್ರ ಸರ್ಕಾರವು ತಮಗೆ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ಸು ಮಾಡಿದರು.
ಬದುಕಿನ ವಿವಿಧ ಕ್ಷೇತ್ರಗಳಾದ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ-ಸಂಸ್ಕೃತಿ ಚಿಂತನೆ ಇವುಗಳಲ್ಲಿ ಗಾಢವಾದ ಆಸಕ್ತಿಯನ್ನು ಇಟ್ಟುಕೊಂಡು ಅವುಗಳಿಗೆ ಮರುಜನ್ಮ ನೀಡಿದವರು ಕಾರಂತರು. ಅವರು ‘ಬಾಲಪ್ರಪಂಚ’ ‘ವಿಜ್ಞಾನ ಪ್ರಪಂಚ’ಗಳನ್ನು ಬರೆದಿದ್ದಾರೆ. ಸಿರಿಗನ್ನಡ ಅರ್ಥಕೋಶವನ್ನು ತಯಾರಿಸಿದ್ದಾರೆ. ಯಕ್ಷಗಾನ ಕುರಿತು ಅನೇಕ ಕೃತಿಗಳನ್ನು ಬರೆದಿದ್ದಾರೆ; ಶಿಲ್ಪಕಲೆ, ಚಿತ್ರಕಲೆ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಚಲನಚಿತ್ರವನ್ನೂ ನಿರ್ಮಿಸಿದ್ದರು. ನಾಟಕಗಳನ್ನು ಬರೆದಿದ್ದಾರೆ. ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಾರಂತರು ಚುನಾವಣೆಗೂ ಸ್ಪರ್ಧಿಸಿದ್ದರು. ಪರಿಸರದ ಬಗ್ಗೆ ಅಪಾರವಾದ ಕಾಳಜಿ ಇರುವ ಕಾರಂತರು ಪರಿಸರ ಚಳುವಳಿಯಲ್ಲಿಯೂ ಧುಮುಕಿದವರು.
ತಮ್ಮ ಕಾದಂಬರಿಗಳಲ್ಲಿ ಅವರು ನಿರೂಪಕ ಅಥವಾ ವೀಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸಕ ದೃಷ್ಟಿಯಿಂದ ಮನುಷ್ಯ ಸಂಬಂಧಗಳನ್ನು ಪರಿಶೀಲಿಸುವುದು ಅವರ ಕಾದಂಬರಿಯ ವೈಶಿಷ್ಟ್ಯ. ‘ಚೋಮನದುಡಿ’, ‘ಬೆಟ್ಟದ ಜೀವ’, ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಕನ್ನಡಿಯಲ್ಲಿ ಕಂಡಾತ’, ‘ಮೈಮನಗಳ ಸುಳಿಯಲ್ಲಿ’, ‘ಮೂಕಜ್ಜಿಯ ಕನಸುಗಳು’ ಇವು ಕಾರಂತರ ಉತ್ಕೃಷ್ಟವಾದ ಕಾದಂಬರಿಗಳೆಂದು ಗುರುತಿಸಲ್ಪಟ್ಟಿವೆ. ಭಾರತದ ಎಲ್ಲ ಭಾಷೆಗಳಲ್ಲಿಯೂ ಕಾರಂತರ ಸಾಹಿತ್ಯ ಅನುವಾದಗೊಂಡಿದೆ.
ಕಾರಂತರ ಸೃಜನಶೀಲ ಕೃತಿಗಳೇ ನೂರು ಮಿಕ್ಕಿವೆ. ಬಿಡಿಬರಹಗಳು, ಭಾಷಣಗಳು ಲೆಕ್ಕಕ್ಕೆ ಸಿಗುವುದಿಲ್ಲ. ಕಾರಂತರು ಡಿಸೆಂಬರ್ 9, 1997ರಂದು ನಮ್ಮನ್ನು ಅಗಲಿದರು.
ಕನ್ನಡಕ್ಕೆ ನಾಲ್ಕನೆಯ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿಕೊಟ್ಟವರು ಕನ್ನಡದ ಆಸ್ತಿಯೆಂದೇ ಖ್ಯಾತರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರರು. 1891 ರ ಜೂನ್ 6 ರಂದು ಕೋಲಾರ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿ ಹುಟ್ಟಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿಪುಲವಾಗಿ ಸಾಹಿತ್ಯವನ್ನು ರಚಿಸಿದ್ದಾರೆ. ನವೋದಯ ಕಾಲದ ಕಥೆಗಳ ಜನಕರೆಂದು ಖ್ಯಾತರಾಗಿರುವ ಮಾಸ್ತಿಯವರ ಕಥೆಗಳು ಸರಳ, ಸಹಜ ಶೈಲಿಯವು. ಒಂದು ಸಾದಾ ಘಟನೆಯನ್ನು ಕಥೆಯನ್ನಾಗಿಸುವ ಪ್ರತಿಭೆ ಅವರದ್ದು. ಸರ್ಕಾರದ ಹಲವು ಉನ್ನತ ಹುದ್ದೆಗಳನ್ನು ಅವರು ಅಲಂಕರಿಸಿದವರು.
ಮಾಸ್ತಿ ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿತರಾದವರು. 1910-11ರ ಸುಮಾರಿನಲ್ಲಿ ‘ರಂಗನ ಮದುವೆ’ ಎಂಬ ಸಣ್ಣ ಕಥೆಯನ್ನು ಬರೆದು ಸಾಹಿತ್ಯಲೋಕವನ್ನು ಪ್ರವೇಶಿಸಿದರು. ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ.
ಮಾಸ್ತಿಯವರ ಕಥೆಗಳಲ್ಲಿ ಕಥಾ ಸಾಹಿತ್ಯದ ಅತ್ಯುತ್ತಮವಾದ ಅಂಶಗಳಿವೆಯೆಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅವರ ಕಥೆಗಳ ವಿನ್ಯಾಸ ವಿಸ್ತಾರವಾದುದು. ಅವರ ಕಥೆಗಳಲ್ಲಿ ಮನುಷ್ಯತ್ವದ ಹುಟುಕಾಟವಿದೆ. ಮಾಸ್ತಿಯವರು ಅನೇಕ ಕವಿತೆಗಳನ್ನೂ ಬರೆದಿದ್ದಾರೆ. ಕನ್ನಡವು ನವೋದಯದ ಕಡೆಗೆ ಹೊರಳುತ್ತಿರುವ ಸಂದರ್ಭದಲ್ಲಿ ಪ್ರಕಟವಾದ ಮಾಸ್ತಿಯವರ ಕವಿತೆಗಳು ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನು ತೋರಿಸಲು ಸಹಾಯಕಾರಿಯಾದವು. ಮಾಸ್ತಿ ಅನೇಕ ಕಥನಗೀತೆಗಳನ್ನು ಬರೆದಿದ್ದಾರೆ. ನಾಟಕ ರಚನೆಯಲ್ಲಿಯೂ ಮಾಸ್ತಿ ಆಸಕ್ತಿ ವಹಿಸಿದರು. ‘ಭಾವ’ ಎಂಬ ಅವರ ಆತ್ಮಕಥೆ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ.
ಮಾಸ್ತಿಯವರು ಪತ್ರಿಕಾಕ್ಷೇತ್ರದಲ್ಲಿಯೂ ದುಡಿದಿದ್ದಾರೆ. 1944ರಿಂದ 1965ರ ವರೆಗೆ ‘ಜೀವನ’ ಪತ್ರಿಕೆಯನ್ನು ಬಲು ಯಶಸ್ವಿಯಾಗಿ ನಡೆಸಿದರು. ತಮ್ಮ ಪತ್ರಿಕೆಯ ಮೂಲಕ ಅವರು ಅನೇಕ ಬರಹಗಾರರನ್ನು ತಯಾರಿಸಿದರು. ಅವರ ಕಾದಂಬರಿ ‘ಚಿಕವೀರರಾಜೇಂದ್ರ’ಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. ಈ ಕಾದಂಬರಿಯ ಶಿಲ್ಪ, ಆರಂಭ, ಬೆಳವಣಿಗೆ, ಮುಕ್ತಾಯ ಇವು ಅದ್ಭುತವಾಗಿವೆ. ಕೊಡಗಿನ ರಾಜ ಚಿಕವೀರರಾಜೇಂದ್ರನ ಕಥೆ ಇದು. ಕೊಡಗಿನ ರಾಜಕೀಯ ದುರವಸ್ಥೆ, ರಾಜನ ದುರಂತ, ಆತನ ಲಂಪಟತನ, ದುಷ್ಟಸ್ನೇಹ, ಅಧಿಕಾರ ಲಾಲಸೆ, ಕಾಮುಕತನ, ಪ್ರಜಾಹಿತ ನಿರ್ಲಕ್ಷ್ಯ, ಸ್ವೇಚ್ಛಾ ಪ್ರವೃತ್ತಿ ಇವುಗಳೆಲ್ಲ ಇಲ್ಲಿ ದಾಖಲಾಗಿವೆ. ಇತಿಹಾಸ ಮತ್ತು ವರ್ತಮಾನ ಇವೆರಡೂ ಒಂದೇ ಗತಿಯಲ್ಲಿ ಸಮಾಂತರವಾಗಿ ಇಲ್ಲಿ ಚಲಿಸಲಾರಂಭಿಸುವುದು ಕಾದಂಬರಿಯ ವೈಶಿಷ್ಟ್ಯವಾಗಿದೆ. ಕೊಡಗಿನ ಅಂದಿನ ಕತೆ ಇಂದಿನ ರಾಜಕೀಯಕ್ಕೆ ಕನ್ನಡಿ ಹಿಡಿದಂತಿದೆ.
ಮಾಸ್ತಿ 120ಕ್ಕಿಂತಲೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇಂಗ್ಲಿಷನಲ್ಲಿ 17 ಕೃತಿಗಳು ಪ್ರಕಟವಾಗಿವೆ. ಮಾಸ್ತಿಯವರು ತಾವು ಬೆಳೆಯುತ್ತ, ಅನೇಕ ಪ್ರತಿಭಾವಂತ ಲೇಖಕರು ಬೆಳೆಯಲು ಕಾರಣರಾಗಿದ್ದಾರೆ. ಅವರ ಮನೆಮಾತು ತಮಿಳು ಆಗಿದ್ದರೂ ಅವರು ಕನ್ನಡದ ಆಸ್ತಿಯೆನ್ನುವಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದವರು. ಮಾಸ್ತಿಯವರು ತಮ್ಮ 95ನೇ ವರ್ಷದಲ್ಲಿ 1986 ಜೂನ್ 6 ರಂದು ಬೆಂಗಳೂರಿನಲ್ಲಿ ನಿಧನರಾದರು.
ಆಗಸ್ಟ್ 9, 1909 ರಂದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದ ವಿನಾಯಕ ಕೃಷ್ಣ ಗೋಕಾಕರು ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿಕೊಟ್ಟರು. ‘ಭಾರತ ಸಿಂಧುರಶ್ಮಿ’ಯೆಂಬ ಅವರ ಮಹಾಕಾವ್ಯಕ್ಕೆ 1990ರಲ್ಲಿ ಜ್ಞಾನಪೀಠ ಪ್ರಶಸ್ತಿಯು ಬಂದಿತು. ಕಾವ್ಯ, ನಾಟಕ, ಪ್ರವಾಸ ಸಾಹಿತ್ಯ, ವಿಮರ್ಶೆ, ಅನುವಾದ ಮುಂತಾದ ಪ್ರಕಾರಗಳಲ್ಲದೇ, ಇಂಗ್ಲಿಷನಲ್ಲಿಯೂ ಗೋಕಾಕರು ಕೃತಿಗಳನ್ನು ರಚಿಸಿದ್ದಾರೆ. ಸರ್ಕಾರದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದರೂ ಅವರ ಸರಳ ಮತ್ತು ಸಹಜವಾದ ಕವಿಯ ವ್ಯಕ್ತಿತ್ವ ಅವರಿಂದ ದೂರವಾಗಲಿಲ್ಲ. ಗೋಕಾಕರ ಕಾವ್ಯನಾಮ ವಿನಾಯಕ.
‘ಸಂಕೀರ್ಣತೆ ವಿನಾಯಕರ ಬದುಕು-ಬರಹಗಳ ಗುರುತು ಗುರಿಗಳೆನ್ನಬಹುದು’ ಎಂದು ವಿ.ಕೃ.ಗೋಕಾಕ್ರ ಬಗ್ಗೆ ಎನ್ಕೆ ಬರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಿನಾಯಕರು ಪರಂಪರೆಗಳ ಪ್ರವರ್ತಕರಾಗಿದ್ದಾರೆ. ಚಂಪೂ ಕಾವ್ಯ ಪರಂಪರೆಗೆ ಅವರು ಆಧುನಿಕತೆಯ ಒಪ್ಪನಿತ್ತರು. ಆಧುನಿಕ ಯುಗದಲ್ಲಿಯೂ ಚಂಪೂ ಕಾವ್ಯ ಪರಂಪರೆಯನ್ನು ಉಪಯೋಗಿಸಿದವರು. ಗೋಕಾಕ್ರೊಬ್ಬರೇ ಎಂದು ಹೇಳಬೇಕಾಗುತ್ತದೆ. ಅದೇ ಕಾಲಕ್ಕೆ ಗೋಕಾಕರು ಸಾಹಿತ್ಯದ ಹೊಸಗಾಳಿಯನ್ನೂ ಕನ್ನಡ ಸಾಹಿತ್ಯಕ್ಕೆ ತಂದರು. ಅರವಿಂದರ ಅಧ್ಯಾತ್ಮವನ್ನೂ ಅವರು ಕನ್ನಡಕ್ಕೆ ಪರಿಚಯಿಸಿದರು.
ಗದ್ಯ ಪದ್ಯ ಎರಡೂ ಪ್ರಕಾರಗಳಲ್ಲಿ ಗೋಕಾಕ್ 66 ಕೃತಿಗಳನ್ನು ಬರೆದಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಕುಲಪತಿಯಾಗಿ ಅವರು ಕೆಲಸ ಮಾಡಿದ್ದಾರೆ. ರಾಜ್ಯದ ಆಡಳಿತ ಭಾಷೆ ಕನ್ನಡವಾಗಿ ಸ್ವೀಕೃತವಾಗಲು ಗೋಕಾಕರು ನೀಡಿದ ‘ಗೋಕಾಕ ವರದಿ’ಯೇ ಕಾರಣ. ಗೋಕಾಕರು ತಮ್ಮ ವರದಿಯಲ್ಲಿ ಕನ್ನಡ ಭಾಷೆಯನ್ನು ಸರ್ವೋಚ್ಛ ಸಿಂಹಾಸನದ ಮೇಲೆ ವಿರಾಜಮಾನಗೊಳಿಸಿದರು.
ಗೋಕಾಕರ ‘ಭಾರತ ಸಿಂಧು ರಶ್ಮಿ’ ಮೂವತ್ತೈದು ಸಾವಿರ ಸಾಲುಗಳ ಮಹಾಕಾವ್ಯ. ವೈದಿಕ ವಸ್ತುವನ್ನು ಆಯ್ದುಕೊಂಡು ಮಹಾಕಾವ್ಯವನ್ನಾಗಿಸಿದ ಯತ್ನ ಭಾರತೀಯ ಸಾಹಿತ್ಯದಲ್ಲಿ ಇದೇ ಪ್ರಥಮ. ಭಾರತ, ಸಿಂಧು, ರಶ್ಮಿ ಎಂಬ ಮೂರು ಪದಗಳಿಗೆ ಇಲ್ಲಿ ಹೊಸ ಅರ್ಥ ಬಂದಿದೆ. ಈ ಮಹಾಕಾವ್ಯದ ವಸ್ತು ಪುರಾತನ ಆದರೆ ಅದರ ವ್ಯಂಜನ ಸಮಕಾಲೀನ. ವೈದಿಕ ಪ್ರಜ್ಞೆಯಲ್ಲಿ ಆಧುನಿಕತೆಯನ್ನು ಗೋಕಾಕ್ ಈ ಮಹಾಕಾವ್ಯದಲ್ಲಿ ಸಮ್ಮಿಳಿತಗೊಳಿಸಿದ್ದಾರೆ. ಈ ಮಹಾಕಾವ್ಯದ ಹಿಂದಿನ ಅಧ್ಯಾತ್ಮಶಕ್ತಿ ವಿಶ್ವಾಮಿತ್ರ. ಇಲ್ಲಿ ಆತನೇ ನಾಯಕ. ವಿಶ್ವಾಮಿತ್ರನು ವಿಶ್ವಮಾನವನಾಗಿ ಬೆಳೆಯುವ ಕಥೆಯೇ ‘ಭಾರತ ಸಿಂಧು ರಶ್ಮಿ’. ವಿಶ್ವಾಮಿತ್ರನು ವಿಶ್ವಪ್ರಜ್ಞೆಯ ವಿಶ್ವಕುಟುಂಬಿಯಾಗುವುದನ್ನು ಗೋಕಾಕ್ ಇಲ್ಲಿ ಆಕರ್ಷಕ ಶೈಲಿಯಲ್ಲಿ ಚಿತ್ರಿಸಿದ್ದಾರೆ.
ಗೋಕಾಕರು ಬೇಂದ್ರೆಯವರ ಅನೇಕ ಕವಿತೆಗಳನ್ನು ಇಂಗ್ಲಿಷಿಗೆ ಅನುವಾದಿಸಿದರು. ನವ್ಯಕಾವ್ಯದ ಜನಕರೆಂಬ ಗೌರವಕ್ಕೆ ಭಾಜನರಾಗಿರುವ ಗೋಕಾಕ್ರು ‘ನವ್ಯತೆ’ ಎಂಬ ವಿಮರ್ಶಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಪ್ರತಿಪಾದಿಸಿದ ಮಾತು, ವಿಚಾರಗಳು ಪ್ರಶ್ನಾತೀತವಾದವುಗಳಾಗಿವೆ. ಗೋಕಾಕ್ರು 1992ರ ಏಪ್ರಿಲ್ 28 ರಂದು ನಿಧನರಾದರು.
ಡಾ. ಯು.ಆರ್.ಅನಂತಮೂರ್ತಿ ಕನ್ನಡದ ಶ್ರೇಷ್ಠ ಸೃಜನಶೀಲ ಲೇಖಕ; ಚಿಂತಕ. ತಮ್ಮ ಕೃತಿಗಳ ಮೂಲಕ ನಮ್ಮನ್ನು ನಾವೇ ಒಳಹೊಕ್ಕು ನೋಡುವಂತೆ ಮಾಡುವ ಚಮತ್ಕಾರಿ ಪ್ರತಿಭೆ ಅವರ ಸಾಹಿತ್ಯಕ್ಕಿದೆ. ಆರಂಭದಲ್ಲಿ ಕವಿಯಾಗಿ ಕವಿತೆಗಳನ್ನು ಬರೆಯುತ್ತಿದ್ದ ಯು.ಆರ್. ಅನಂತಮೂರ್ತಿ ಅನಂತರ ತಿರುಗಿದ್ದು ಗದ್ಯ ಸಾಹಿತ್ಯದೆಡೆಗೆ. ಕಾದಂಬರಿ, ನಾಟಕ, ವಿಮರ್ಶೆಗಳಿಗೆ ಹೊಸ ಸ್ಪರ್ಶ ನೀಡಿದವರು ಅನಂತಮೂರ್ತಿ.
1932 ಡಿಸೆಂಬರ್ 21 ರಂದು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ ಹುಟ್ಟಿರುವ ಅನಂತಮೂರ್ತಿ ಜಡಸಂಪ್ರದಾಯದ ನಡುವೆಯೇ ಕ್ರಾಂತಿಕಾರಕ ಮತ್ತು ವೈಚಾರಿಕ ಮನೋಭೂಮಿಕೆಯನ್ನು ಬೆಳೆಸಿಕೊಂಡವರು. ವಿದ್ಯಾರ್ಥಿಯಾಗಿದ್ದಾಗಲೇ ಕೋಣಂದೂರು ಸತ್ಯಾಗ್ರಹದಲ್ಲಿ ಭಾಗಿಯಾಗಿ, ಲೋಹಿಯಾರ ರಾಜಕೀಯ ಪ್ರಣಾಲಿಕೆಯೆಡೆಗೆ ವಾಲಿದರು. ಶಿವಮೊಗ್ಗದ ಶಾಂತವೇರಿ ಗೋಪಾಲಗೌಡರ ಆತ್ಮೀಯ ಒಡನಾಟ. ರಮಾನಂದ ಮಿಶ್ರ ಎಂಬ ಬಿಹಾರದ ರೈತ ನಾಯಕನ ಭಾಷಣ ವಿಚಾರಗಳಿಂದ ಪ್ರಭಾವಿತರಾದವರು. ಈ ವೈಚಾರಿಕ ಒರತೆ ಭವಿಷ್ಯಕಾಲದ ಪ್ರಖರ ಪ್ರತಿಭೆಯನ್ನು ರೂಪಿಸುತ್ತಿತ್ತು.
ಅನಂತಮೂರ್ತಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ಉಪನ್ಯಾಸಕರಾಗಿ, ರೀಡರ್ರಾಗಿ, ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ನ್ಯಾಶನಲ್ ಬುಕ್ ಟ್ರಸ್ಟ್ನ ಅಧ್ಯಕ್ಷರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅನಂತಮೂರ್ತಿ ಕೆಲಸ ಮಾಡಿದ್ದಾರೆ.
ಅನಂತಮೂರ್ತಿಯವರ ಎಲ್ಲ ಕತೆ, ಕಾದಂಬರಿಗಳಲ್ಲಿ ಬಂಡಾಯದ ಧ್ವನಿಯನ್ನು ಗುರುತಿಸಬಹುದು. ಸಮಾಜದ ಇನ್ನೊಂದು ಮುಖದ ದರ್ಶನವನ್ನು ಅವರ ಸಾಹಿತ್ಯ ತೋರಿಸಿಕೊಡುತ್ತದೆ. ಅವರ ಮೊದಲ ಕಥಾ ಸಂಕಲನ ಎಂದೆಂದೂ ಮುಗಿಯದ ಕಥೆಗೆ ಅಡಿಗರು ಮುನ್ನುಡಿ ಬರೆದಿದ್ದಾರೆ. ಅದಾಗಲೇ ಅಡಿಗರು ಅನಂತಮೂರ್ತಿಯವರ ಪ್ರತಿಭೆಯನ್ನು ಗುರುತಿಸಿದ್ದರು. ತಮ್ಮ ಮೊದಲ ಕಥೆಯಾದ ‘ಎಂದೆಂದೂ ಮುಗಿಯದ ಕಥೆ’ಯಲ್ಲಿಯೇ ಅನಂತಮೂರ್ತಿ ತಮ್ಮ ಸೃಜನಶೀಲತೆಯ ಸ್ವರೂಪದ ಹುಡುಕಾಟವನ್ನುಸ ಆರಂಭಿಸಿದಂತೆ ತೋರುತ್ತದೆ. ಪರಂಪರಾಗತ ಮೌಲ್ಯಗಳನ್ನು ಒಡೆಯುತ್ತ ಅವುಗಳ ಬದಲು ಆಧುನಿಕ ಮತ್ತು ವೈಜ್ಞಾನಿಕ ತಳಹದಿಯ ವಿಚಾರಗಳನ್ನು ಪ್ರತಿಷ್ಠಾಪಿಸುವುದು ಅನಂತಮೂರ್ತಿ ಸಾಹಿತ್ಯದ ಒಟ್ಟು ಆಶಯವಾಗಿದೆ.
ಅನಂತಮೂರ್ತಿ ಬರೆಯುತ್ತಿದ್ದ ಕಾಲದಲ್ಲಿ ಸಾಹಿತ್ಯಕ್ಕೆ ಹೊಸ ಸಂವೇದನೆಯ ಅವಶ್ಯಕತೆ ಇತ್ತು. ಈ ಕಡೆ ಮಾಸ್ತಿಯವರ ಪ್ರಭಾವ ಆ ಕಡೆ ಪ್ರಗತಿಶೀಲ ಸಾಹಿತ್ಯ ಚಳುವಳಿಯ ಪ್ರಭಾವ ಇನ್ನೊಂದೆಡೆ ಅಡಿಗರ ನವ್ಯ ಪ್ರವಾಹ-ಇವೆಲ್ಲವುಗಳಿಂದ ಭಿನ್ನವಾದ ಸಾಹಿತ್ಯವನ್ನು ಓದುಗರು ನಿರೀಕ್ಷಿಸುತ್ತಿದ್ದರು. ಬದುಕಿನ ಭಾವಪೂರ್ಣ ಘಟನೆಗಳು ಮನುಷ್ಯ ಮತ್ತು ಪರಿಸರದ ಸಂಬಂಧದ ಸಂಕೀರ್ಣತೆ, ಜಡಸಂಪ್ರದಾಯ ವಿರುದ್ಧ ಸೃಜನಶೀಲತೆಯ ಮೌಲ್ಯಗಳು-ಹೀಗೆ ಅನಂತಮೂರ್ತಿ ಸಾಹಿತ್ಯದಲ್ಲಿ ಹೊಸಗಾಳಿಯನ್ನು ತಂದರು. ಭಿನ್ನ ಸಂಸ್ಕೃತಿಗಳ ಘರ್ಷಣೆಯ ಜೊತೆಗೆಯೇ ಭಿನ್ನ ಸಂಸ್ಕೃತಿಗಳ ಮಧ್ಯೆ ಸಂಬಂಧಗಳನ್ನು ಏರ್ಪಡಿಸಿ ಕಥೆಗಳಲ್ಲಿ ಬಂಡಾಯವನ್ನು ಅರಳಿಸಿದರು.
ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಬಿರುಗಾಳಿಯನ್ನೇ ಬೀಸಿತು. ಬಾಲ್ಯದಲ್ಲಿ ತಾವು ಕಂಡಿದ್ದ ಪರಂಪರಾಗತ ವೈದಿಕ ಮೌಲ್ಯಗಳಿಗೆ ಅನಂತಮೂರ್ತಿ ಬೆಂಕಿ ಹಚ್ಚಿದ್ದರು. ವೈದಿಕ ಮೌಲ್ಯಗಳ ಭಂಜಕತೆಗಾಗಿ ಬ್ರಾಹ್ಮಣ ಸಮಾಜ ಅವರನ್ನು ಬಹಿಷ್ಕರಿಸಿತು. ಈ ಸಂಪ್ರದಾಯಗಳಿಂದ ಈ ಮೊದಲೇ ಪಾರಾಗಿದ್ದ ಅನಂತಮೂರ್ತಿ ಧರ್ಮವನ್ನು ಮೀರಿ ವಿವಾಹವಾಗಿದ್ದರು. ತಮ್ಮ ಬರಹ ಹಾಗೂ ತಮ್ಮ ನಡೆ ಬೇರೆ ಬೇರೆ ಅಲ್ಲವೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.
ಪಟ್ಟಾಭಿರಾಮ ರೆಡ್ಡಿಯವರು ‘ಸಂಸ್ಕಾರ’ವನ್ನು ಚಲನಚಿತ್ರವಾಗಿಸಿದರು. 1970ರಲ್ಲಿ ಬಂದ ಈ ಸಿನೇಮಾ ರಾಷ್ಟ್ರಪತಿಯವರ ಸ್ವರ್ಣಪದಕವನ್ನುಸ ಪಡೆಯಿತು. ‘ಸಂಸ್ಕಾರ’ ಚಲನಚಿತ್ರ, ಚಿತ್ರರಂಗದಲ್ಲಿ ವಿಚಾರಕ್ರಾಂತಿಗೆ ಚಾಲನೆ ನೀಡಿತು.
‘ಸಂಸ್ಕಾರ’ದ ನಂತರ ‘ಭಾರತೀಪುರ’, ‘ಅವಸ್ಥೆ’ ‘ಭವ’ ಕಾದಂಬರಿಗಳು ಬಂದವು. ಆದರೆ ‘ಸಂಸ್ಕಾರ’ದಸ ನಂತರ ಬಂದ ಅವರ ಕಾದಂಬರಿಗಳು ಅಷ್ಟೇನೂ ಯಶಸ್ವಿಯಾಗಿಲ್ಲವೆಂಬ ಅಭಿಪ್ರಾಯ ರೂಪುಗೊಂಡಿದೆ. ಆದರೆ ಅವರ ಕಾದಂಬರಿಗಳು ಸಮಕಾಲೀನ ವೈಯಕ್ತಿಕ ಹಗೂ ಸಾಮಾಜಿಕ ಸಮಸ್ಯೆಗಳನ್ನು ಸೃಜನಶೀಲ ನೆಲೆಯಲ್ಲಿ ಚರ್ಚಿಸುವ ಮಹತ್ವದ ಪ್ರಯತ್ನಗಳಾಗಿ ಕಾಣುತ್ತವೆ.
ಅನಂತಮೂರ್ತಿಯವರದ್ದು ರೂಪಕಶೈಲಿ. ಅವರೇ ಹೇಳುವಂತೆ ಅವರ ಕಾದಂಬರಿ ಬೇರೆ ಬೇರೆ ನೆಲೆಯಲ್ಲಿರುವವರಿಗೆ ಬೇರೆ ಬೇರೆಯಾಗಿ ಕಾಣಿಸುತ್ತದೆ. ಧ್ವನಿಶಕ್ತಿಯಿಲ್ಲದ ಗದ್ಯದ ಬಗ್ಗೆ ಅವರಿಗೆ ಮೆಚ್ಚುಗೆ ಇಲ್ಲ.
ಅನಂತಮೂರ್ತಿಯವರ ಮೊದಲ ಕವನ ಸಂಕಲನ ‘ಬಾವಲಿ’ 1963ರಲ್ಲಿ ಪ್ರಕಟವಾಯಿತು. ಅದರಲ್ಲಿದ್ದ ಹತ್ತು ಕವಿತೆಗಳ ಜೊತೆಗೆ ಮತ್ತೈದು ಕವಿತೆಗಳನ್ನು ಸೇರಿಸಿ ‘ಹದಿನೈದು ಪದ್ಯಗಳು’ ಎಂಬ ಸಂಕಲನವನ್ನು 1970ರಲ್ಲಿ ಪ್ರಕಟಿಸಿದರು. ಅನಂತರ 1989ರಲ್ಲಿ ಅವರ ‘ಅಜ್ಜನ ಹೆಗಲ ಸುಕ್ಕುಗಳು’ ಸಂಕಲನ ಬಂತು. ‘ಮಿಥುನ’ 1992ರಲ್ಲಿ ಪ್ರಕಟವಾದ ಕವನ ಸಂಕಲನ. ‘ಆವಾಹನೆ’ ನಾಟಕ 1968ರಲ್ಲಿ ಪ್ರಕಟವಾಯಿತು.
ತಮ್ಮ ಹೊಸ ರೀತಿಯ ಆಲೋಚನೆಗಳಿಂದ ವಿಚಾರಗಳಿಂದ ಕನ್ನಡ ಸಾಹಿತ್ಯವನ್ನು ಸದಾಕಾಲ ಜೀವಂತವಾಗಿಟ್ಟ ಅನಂತಮೂರ್ತಿಯವರು ಏಳು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ವಾಗ್ವಾದಗಳನ್ನು ಹುಟ್ಟು ಹಾಕುವ ಮೂಲಕವೂ ಅವರು ಜನರ ಜಡ ಸಂವೇದನೆಗಳನ್ನು ಕೆಣಕಿದ್ದಾರೆ. ಅಕಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಅವರಾಗಿದ್ದರು. 1994ರಲ್ಲಿ ಅವರ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವವು ಲಭಿಸಿತು.
1994ರ ನಂತರ ನಾಲ್ಕೆ ವರ್ಷಗಳಲ್ಲಿ 1998ರಲ್ಲಿ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠ ಪ್ರಶಸ್ತಿಯು ಬಂದಿತು. ಅದು ಗಿರೀಶ ಕಾರ್ನಾಡ ಅವರಿಗೆ. ಕರ್ನಾಟಕದ ಹೊರಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಕಾರ್ನಾಡರ ಹೆಸರು ಅತ್ಯಂತ ಜನಪ್ರಿಯವಾಗಿದೆ. ತಮ್ಮ ನಾಟಕಗಳ ಮೂಲಕ ನಟನೆಯ ಮೂಲಕ ಕಾರ್ನಾಡ ಜನರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ಬರೆದು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದವರಲ್ಲಿ ಗಿರೀಶ ಕಾರ್ನಾಡ ಮೊದಲಿಗರು. ಅಲ್ಲಿಯವರೆಗೂ ಕಥೆ, ಕವಿತೆ, ಕಾದಂಬರಿ ಹೀಗೆ ಬರೆದ ಸಾಹಿತಿಗಳಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಕಾರ್ನಾಡರಿಗೆ ಸಂದ ಜ್ಞಾನಪೀಠ ಪ್ರಶಸ್ತಿಯು ಇಡಿ ರಂಗಭೂಮಿಗೆ ಸಂದ ಪ್ರಶಸ್ತಿಯೆಂದೇ ಪರಿಗಣಿತವಾಗಿದೆ.
ಮೇ 19, 1938ರಂದು ಗಿರೀಶ ಕಾರ್ನಾಡ ಮಹಾರಾಷ್ಟ್ರದ ಮಾಥೆರಾನ್ದಲ್ಲಿ ಹುಟ್ಟಿದರು. ಆರಂಭದಲ್ಲಿ ಕಾರ್ನಾಡರು ಕವಿಯಾಗಲು ಯತ್ನಿಸಿದರಂತೆ! ಆದರೆ 1961ರಲ್ಲಿ ಅವರು ‘ಯಯಾತಿ’ ನಾಟಕ ಬರೆದ ಮೇಲೆ ಅವರಿಗೆ ತಮ್ಮ ಅಭಿವ್ಯಕ್ತಿಯ ಮಾಧ್ಯಮ ನಾಟಕವೆಂದೇ ಅನ್ನಿಸಿತು. ಆಗಿನಿಂದ ಇಲ್ಲಿಯವರೆಗೆ ಕಾರ್ನಾಡ ಹತ್ತಾರು ನಾಟಕಗಳನ್ನು ಬರೆದಿದ್ದಾರೆ. ಇಂಗ್ಲೆಂಡಿನಲ್ಲಿದ್ದಾಗ ‘ತುಘಲಕ್’ ಬರೆದರು. ಈ ನಾಟಕ ಭಾರತೀಯ ರಂಗಭೂಮಿಯಲ್ಲಿ ಅದ್ಭುತವಾದ ಕ್ರಾಂತಿಯನ್ನೇ ಸಾಧಿಸಿತು.
ಪುರಾಣ ಮತ್ತು ಇತಿಹಾಸ ಇವೆರಡೂ ಕಾರ್ನಾಡರ ಸಾಹಿತ್ಯ ನಿರ್ಮಾಣದ ಕಚ್ಚಾವಸ್ತುಗಳು. ಇವುಗಳನ್ನೇ ಉಪಯೋಗಿಸಿಕೊಂಡು ಕಾರ್ನಾಡ ತಮ್ಮ ಕೃತಿಗಳನ್ನು ರಚಿಸಿದರು. ಅವರ ಕೃತಿಗಳು ಇಂಗ್ಲಿಷಿಗೆ ಅನುವಾದಗೊಂಡು ವಿದೇಶಗಳಲ್ಲಿಯೂ ಪ್ರದರ್ಶಿತವಾದವು. ವಿದೇಶಗಳಲ್ಲಿಯ ಸಾಹಿತ್ಯವಲಯದಲ್ಲಿ ಗಿರೀಶ ಕಾರ್ನಾಡ ಒಂದು ಆಪ್ತವಾದ ಹೆಸರು.
ಕಾರ್ನಾಡರ ರಚನಾ ಕೌಶಲ್ಯ ವಿಶಿಷ್ಟವಾದುದು. ಅವರ ನಾಟಕಗಳಲ್ಲಿ ಕಂಡು ಬರುವ ಸಂಘರ್ಷ ಬದುಕಿನಲ್ಲೂ ಕಾಣುವ ಸಂಘರ್ಷದಂತೆಯೇ ಇದೆ. ಅವರ ನಾಟಕಗಳು ಭೂತ, ವರ್ತಮಾನ ಹಾಗೂ ಭವಿಷ್ಯ ಕಾಲದಲ್ಲಿ ಏಕಕಾಲದಲ್ಲಿ ಚಲಿಸುತ್ತವೆ. ಈ ಚಲನೆಯೇ ಬದುಕಿನ ‘ವೇಗ’ವಾಗುತ್ತದೆ. ತಲೆದಂಡ, ಹಯವದನ, ನಾಗಮಂಡಲ, ತುಘಲಕ ಮುಂತಾದ ನಾಟಕಗಳಲ್ಲಿ ಕಾರ್ನಾಡರ ಪ್ರಖರ ಪ್ರತಿಭೆಯನ್ನು ಗುರುತಿಸಬಹುದು.
ಕಾರ್ನಾಡ ಚಲನಚಿತ್ರರಂಗವನ್ನೂ ಪ್ರವೇಶಿಸಿದರು. ಅವರು ಅಭಿನಯಿಸಿದ ‘ಸಂಸ್ಕಾರ’ ರಾಷ್ಟ್ರಪತಿಯವರ ಪದಕವನ್ನು ಪಡೆಯಿತು. ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ಹುಟ್ಟು ಹಾಕಲು ಕಾರ್ನಾಡ ಕಾರಣರಾದರು. ‘ವಂಶವೃಕ್ಷ’ ಮತ್ತು ‘ತಬ್ಬಲಿಯು ನೀನಾದೆ ಮಗನೆ’ ಚಲನಚಿತ್ರಗಳನ್ನು ಬಿ.ವಿ.ಕಾರಂತರ ಜೊತೆಗೆ ನಿರ್ದೇಶಿಸಿದರು. ತಾವೇ ಸ್ವತಂತ್ರರಾಗಿ ‘ಒಂದಾನೊಂದು ಕಾಲದಲ್ಲಿ’, ‘ಕಾಡು’ ಹಿಂದಿಯಲ್ಲಿಸ ‘ಉತ್ಸವ’, ‘ಚೆಲ್ವಿ’, ‘ಕಾನೂರು ಹೆಗ್ಗಡತಿ’ ನಿರ್ದೇಶಿಸಿದ್ದಾರೆ. ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಕಾರ್ನಾಡ ಪಡೆದಿದ್ದಾರೆ.






0 Comments