ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮೂಹ ಚಳುವಳಿಗೆ ನಾಯಕತ್ವ ಅಗತ್ಯವೇ?

ನಾ ದಿವಾಕರ್

ದಲಿತ ಸಾಹಿತ್ಯ ಸಮ್ಮೇಳನದ ರೂಪು ರೇಷೆಗಳು ಏನೇ ಇರಲಿ ಐದನೆಯ ಬಾರಿಗೆ ಆಯೋಜಿಸಲಾದ ಸಮ್ಮೇಳನದಲ್ಲಿ ಮುಂದಿನ ಹೆಜ್ಜೆಗಳನ್ನು ಕುರಿತ ಗಂಭೀರ ಚರ್ಚೆ ವಿಭಿನ್ನ ರೀತಿಯಲ್ಲಿ ನಡೆಯಬೇಕಿತ್ತು. ಇಂದು ದಲಿತ ಸಾಹಿತ್ಯ ಮತ್ತು ದಲಿತ ಚಳುವಳಿಯನ್ನು ಕಾಡುತ್ತಿರುವ ಪ್ರಶ್ನೆಗಳು ಹಲವಾರು. ಜಾಗತೀಕರಣದ ಭ್ರಮಾಲೋಕ, ಶೋಷಕ ವರ್ಗಗಳ ಮನ್ವಂತರದ ಸೋಗು, ಬ್ರಾಹ್ಮಣ್ಯದ ಅಗೋಚರ ಅಧಿಪತ್ಯ, ಊಳಿಗಮಾನ್ಯ ವ್ಯವಸ್ಥೆಯ ಸುಪ್ತ ಸಮಾಲೋಚನೆ, ಪ್ರಭುತ್ವದ ಅಟ್ಟಹಾಸ, ಮತೀಯಾದದ ಛಾಯೆ, ಜಾತಿ ಪ್ರಜ್ಞೆಯ ಧೃವೀಕರಣ ಮತ್ತು ಸಾಮುದಾಯಿಕ ಪ್ರಜ್ಞೆಯ ಕ್ರೋಢೀಕರಣ, ನಗರೀಕೃತ ಅಗ್ರಹಾರ ಪದ್ಧತಿಯ ಮುನ್ನಡೆ ಮತ್ತು ಎಲ್ಲ ಜನಪರ ಚಳುವಳಿಗಳನ್ನೂ ತನ್ನ ಬಾಹುಗಳಲ್ಲಿ ಬಂಧಿಸಿ ನಿಷ್ಕ್ರಿಯಗೊಳಿಸುವ ಆಳುವ ವರ್ಗಗಳ ಹುನ್ನಾರ ಈ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕದೆ ಹೋದರೆ ದಲಿತ ಚಳುವಳಿಗಾಗಲಿ, ದಲಿತ ಸಾಹಿತ್ಯಕ್ಕಾಗಲಿ ಮುನ್ನಡೆ ಸಾಧ್ಯವಾಗಲಾರದು. ಆದರೆ ಮೈಸೂರು ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ.
ಬದಲಾಗಿ ಇಲ್ಲಿ ಕಂಡುಬಂದಿದ್ದು ಅದೇ ದೋಷಾರೋಪಣೆ, ಗುಂಪುಗಾರಿಕೆಯ ಸಂದೇಶ, ದಲಿತ ಚಳುವಳಿಯ ಸಂಸ್ಥಾಪಕರ ವಿರುದ್ಧ ಟೀಕಾಸ್ತ್ರಗಳು ಮತ್ತು ನಾಯಕತ್ವದ ಶೋಧ. ನಾಲ್ಕು ದಶಕಗಳ ದಲಿತ ಚಳುವಳಿ ಅಸಂಖ್ಯಾತ ನಾಯಕರನ್ನು ಸೃಷ್ಟಿಸಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಚಳುವಳಿ ನಾಯಕತ್ವದ ಕೊರತೆಯಿಂದ ಸೊರಗುತ್ತಿದೆ. ಇದಕ್ಕೆ ಮೂಲ ಕಾರಣ ಸಂಸ್ಥಾಪಕರಲ್ಲ, ದಲಿತ ಚಳುವಳಿ ನಡೆದು ಬಂದ ಹಾದಿ. 1970ರ ದಶಕದ ರೂವಾರಿಗಳು ಇಂದು ಎರಡು ಸ್ಪಷ್ಟ ನೆಲೆಗಳಲ್ಲಿ ಸ್ಥಾಪಿತಗೊಂಡಿದ್ದಾರೆ. ಒಂದು ವರ್ಗ ಪ್ರಭುತ್ವದ ಚೌಕಟ್ಟಿನಲ್ಲೇ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡು ಪ್ರಭುತ್ವವನ್ನು ಪ್ರಶ್ನಿಸದೆಯೇ ತಮ್ಮ ಹೋರಾಟದ ಹೆಜ್ಜೆಗುರುತುಗಳನ್ನು ಹುಡುಕುತ್ತಿದೆ. ಮತ್ತೊಂದು ವರ್ಗ ಪ್ರಭುತ್ವದ ಚೌಕಟ್ಟಿನಿಂದ ಹೊರತಾಗಿದ್ದರೂ ಪ್ರಭುತ್ವದ ಶೋಷಕ ನೆಲೆಗಳನ್ನು ಗುರುತಿಸಲಾಗದೆ ಅಲೆದಾಡುತ್ತಿದೆ. ಈ ಎರಡೂ ವರ್ಗಗಳು ಬ್ರಾಹ್ಮಣ್ಯದ ನೆಲೆಗಳನ್ನು ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಲು ವಿಫಲವಾಗಿರುವುದು ಸ್ಪಷ್ಟ. ಇತ್ತೀಚಿನ ಸಂದರ್ಭವೊಂದರಲ್ಲಿ ದಲಿತ ಸಂವೇದನೆಯನ್ನೇ ಹಾಸುಹೊದ್ದವರು ಗುರುಶಿಷ್ಯ ಪರಂಪರೆಯನ್ನು ವೈಭವೀಕರಿಸಿ ಮಾತನಾಡಿರುವುದೇ ಇದಕ್ಕೆ ಸಾಕ್ಷಿ.

ಕಂಬಾಲಪಲ್ಲಿಯ ಆರೋಪಿಗಳು ಏಕೆ ನಮ್ಮ ಸಮಾಜಕ್ಕೆ ನಿರಪರಾಧಿಗಳಾಗಿ ಕಾಣುತ್ತಾರೆ ? ಪ್ರಭುತ್ವದ ನೆಲೆಗಳು ಖೈಲಾಜಿಯ ಮೂಲ ಸೆಲೆಯನ್ನು ಏಕೆ ಗುರುತಿಸುವುದಿಲ್ಲ ? ಶೌಚಾಲಯ ಕ್ರಾಂತಿಯತ್ತ ಮುನ್ನಡೆಯುತ್ತಿರುವ ಪ್ರಬುದ್ಧ ಸಮಾಜ ಮಲ ಹೊರುವವರನ್ನು ಇನ್ನೂ ಏಕೆ ಶೌಚಾಲಯದ ಗೋಡೆಗಳ ನಡುವೆಯೇ ಬಂಧಿಸುತ್ತಿದೆ ? ಸಮಾನತೆ, ಶೋಷಣೆ, ಕ್ರಾಂತಿಯನ್ನು ಕುರಿತು ಪುಂಖಾನುಪುಂಖವಾಗಿ ಉಪನ್ಯಾಸ ನೀಡುವ ಪ್ರಭುತ್ವದ ಪ್ರತಿನಿಧಿಗಳೇಕೆ ದಲಿತ ಸಂವೇದನೆಯನ್ನು ಗ್ರಹಿಸುತ್ತಿಲ್ಲ ? ಹೀಗಿರುವಾಗಲೂ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಭುತ್ವದ ಪ್ರಾತಿನಿಧ್ಯಕ್ಕೇಕೆ ರತ್ನಗಂಬಳಿ ? ಈ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ಸಮ್ಮೇಳನದಲ್ಲಿ ಮೂಡಿದ ಕೆಲವು ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಸಿದ್ಧಲಿಂಗಯ್ಯ ಮೌನವಾಗಿದ್ದಾರೆ, ದೇವನೂರು ಹಿಂದೆ ಸರಿದಿದ್ದಾರೆ ಎಂಬ ಆರೋಪಗಳು ವ್ಯಕ್ತಿಗತ ನೆಲೆಯಲ್ಲಿ ಯಾವುದೇ ಅರ್ಥವನ್ನು ಹೊಂದಬಹುದು. ಆದರೆ ನಾಲ್ಕು ದಶಕಗಳ ಒಂದು ಚಳುವಳಿ ಅಪ್ಪನ ಆಲದ ಮರಕ್ಕೇ ಜೋತು ಬೀಳುವ ಅವಶ್ಯಕತೆ ಇದೆಯೇ ಎಂಬ ಮೂರ್ತ ಪ್ರಶ್ನೆಗೆ ಉತ್ತರ ಹುಡುಕುವವರಾರು ?
ಇಲ್ಲಿ ಪ್ರಶ್ನೆ ಉದ್ಭವಿಸುವುದು ಚಳುವಳಿಯ ಆಶಯಗಳಿಗಿಂತಲೂ ರಾಜ್ಯದ ಶೇ 20ಕ್ಕೂ ಹೆಚ್ಚು ಜನಸಮೂಹದ ಭವಿಷ್ಯದ ಹೆಜ್ಜೆಗಳ ಬಗ್ಗೆ. ದಲಿತ ಸಮುದಾಯದಲ್ಲಿ , ಜಾತಿ ಪ್ರಜ್ಞೆ ಮತ್ತು ಜಾತಿಯ ಸೂಕ್ಷ್ಮತೆಗಳನ್ನು ಯಥಾವತ್ತಾಗಿ ಉಳಿಸಿಕೊಂಡರೂ ಅಂಬೇಡ್ಕರ್ ಅವರ ದೂರದರ್ಶಿತ್ವ, ತನ್ಮೂಲಕ ದಲಿತ ಸಮುದಾಯಗಳಿಗೆ ಒದಗಿರುವ ಸಾಂವಿಧಾನಿಕ ಸವಲತ್ತುಗಳು ಹಾಗೂ ದಲಿತ ಚಳುವಳಿಯ ಸುದೀರ್ಘ ಹೋರಾಟಗಳ ಮೂಲಕ ಒದಗಿ ಬಂದಿರುವ ಅವಕಾಶಗಳನ್ನು ವಿಪುಲವಾಗಿ ಬಳಸಿಕೊಂಡು ಮೇಲ್ವರ್ಗಕ್ಕೆ ಮನ್ವಂತರ ಹೊಂದಿರುವ , ಸುಶಿಕ್ಷಿತ ದಲಿತರು ಇಂದು ಅಂಬೇಡ್ಕರ್ ಅವರನ್ನು ಆರಾಧಿಸುತ್ತಾರೆ ಆದರೆ ದಲಿತ ಸಂವೇದನೆಯನ್ನು ಕಳೆದುಕೊಂಡಿದ್ದಾರೆ. ಕಮ್ಯುನಿಸ್ಟ್ ಚಳುವಳಿಯಂತೆಯೇ ದಲಿತ ಚಳುವಳಿಯೂ ಸಹ ಸುಶಿಕ್ಷಿತ ಮಧ್ಯಮ-ಮೇಲ್ವರ್ಗದ ಸಮಾಜದಿಂದ ಆಂದೋಲನಗಳ ಮುಂಚೂಣಿ ಪಾತ್ರವನ್ನು ಅಪೇಕ್ಸಿಸುವುದು ಸಹಜವೂ ಹೌದು ಅನಿವಾರ್ಯವೂ ಹೌದು. ಆದರೆ ಎರಡೂ ಚಳುವಳಿಗಳಲ್ಲಿ ಈ ವರ್ಗ ವಿಫಲವಾಗಿದೆ. ವಿಫಲವಾಗಿದೆ ಎನ್ನುವುದಕ್ಕಿಂತಲೂ ವಿಶ್ವಾಸ ದ್ರೋಹ ಎಸಗಿದೆ ಎನ್ನುವುದು ಸೂಕ್ತ. ನಾಲ್ಕು ದಶಕಗಳ ನಂತರವೂ ದಲಿತ ಚಳುವಳಿಗೆ ಒಂದು ಪ್ರಾಮಾಣಿಕ, ಪ್ರಬುದ್ಧ ನಾಯಕತ್ವ ಒದಗಿಲ್ಲ ಎಂದರೆ ಮೂಲದಲ್ಲಿಯೇ ದೋಷ ಇರುವುದನ್ನು ಪರಾಮರ್ಶಿಸಬೇಕಾಗುತ್ತದೆ.
ಈ ಪರಾಮರ್ಶೆ ಮತ್ತು ಆತ್ಮವಿಮರ್ಶೆ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕಂಡುಬರದಿರುವುದು ಅಚ್ಷರಿ ಮೂಡಿಸುತ್ತದೆ. ಸಾಂವಿಧಾನಿಕ ಸವಲತ್ತುಗಳು, ಕಾನೂನಾತ್ಮಕ ರಕ್ಷಣೆ ಮತ್ತು ಮಾನವೀಯ ಸಂರಕ್ಷಣಾ ಕ್ರಿಯೆ ಇವೆಲ್ಲವೂ ದಲಿತ ಸಮುದಾಯದಲ್ಲಿ ಯಾವ ವರ್ಗವನ್ನು ತಲುಪುತ್ತಿವೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಇಂದು ಎದುರಾಗಿದೆ. ತಮ್ಮ ಸಮ್ಮೇಳನ, ಸಮಾವೇಶಗಳಿಗೆ, ವಿಚಾರ ಸಂಕಿರಣ , ಕಾರ್ಯಾಗಾರಗಳಿಗೆ ದಲಿತ ಶೋಷಣೆಗೆ ಅಗೋಚರ ಕುಮ್ಮಕ್ಕು ನೀಡುವ ಆಳುವ ವರ್ಗದ ಪ್ರತಿನಿಧಿಗಳನ್ನು ಆಮಂತ್ರಿಸಿ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸುವ ಮೂಲಕ ಆತ್ಮರತಿಯಲ್ಲಿ ತೊಡಗುವುದರಿಂದ ದಲಿತ ಚಳುವಳಿಗೆ ಕಾಯಕಲ್ಪ ಒದಗಲು ಸಾಧ್ಯವಿಲ್ಲ. ವಿಘಟನೆಯಿಂದ ಜರ್ಝರಿತವಾಗಿರುವ ದಲಿತ ಚಳುವಳಿಗಳು ಒಂದಾಗಬೇಕು ಎಂದು ಭಾವನಾತ್ಮಕವಾಗಿ ಬಯಸುವುದು ಬೇರೆ, ದಲಿತ ಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಗ್ರಹಿಸಿ ಅಲಕ್ಷಿತ ಜನಸಮುದಾಯಗಳ ಅಭ್ಯುದಯಕ್ಕಾಗಿ ಶ್ರಮಿಸಲು ಚಳುವಳಿಗಳನ್ನು ಕ್ರೋಢೀಕರಿಸಲು ಬಯಸುವುದು ಬೇರೆ. ಈ ವ್ಯತ್ಯಾಸವನ್ನು ಕುರಿತು ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಲೇ ಇಲ್ಲ.
ಹಾಗಾಗಿಯೇ ದೇವನೂರು-ಸಿದ್ಧಲಿಂಗಯ್ಯ ಸಮೀಕರಣವನ್ನು ದಾಟಿ ಆಲೋಚಿಸುವ ಲಕ್ಷಣಗಳು ಕಾಣುತ್ತಿಲ್ಲ. ನಿಜ, ಈ ನಾಯಕರಲ್ಲಿ ದಲಿತ ಚಳುವಳಿಗಳನ್ನು ಒಗ್ಗೂಡಿಸುವ ಸಾಮಥ್ರ್ಯ ದಾಷ್ಟ್ರ್ರತೆ ಇದೆ. ಆದರೆ ಒಗ್ಗೂಡಿದ ನಂತರ ಏನು ? ಕಾಂಗ್ರೆಸ್-ಬಿಜೆಪಿ-ಬಿಎಸ್ಪಿ-ಜನತಾದಳ ಹೀಗೆ ಸ್ಥಾಪಿತ ವ್ಯವಸ್ಥೆಯನ್ನು ಆರಾಧಿಸುವ ರಾಜಕೀಯ ಪಕ್ಷಗಳನ್ನು ಹಿಂಬಾಲಿಸುವುದರ ಬದಲು ದಲಿತ ರಾಜಕಾರಣದತ್ತ ಮುನ್ನಡೆಯಲು ಏಕೆ ಯೋಚಿಸಬಾರದು? ಈ ಯೋಜನೆಯ ನೀಲಿ ನಕ್ಷೆಯನ್ನು ಸಿದ್ಧಪಡಿಸುವವರಾರು ? ವಿವಿಧ ಬಣಗಳ ನಾಯಕರು ತಮ್ಮ ಸ್ವಪ್ರತಿಷ್ಠೆಯನ್ನು ಬದಿಗಿಟ್ಟು ಈ ಕುರಿತು ಆಲೋಚನೆ ನಡೆಸಲು ಸಾಧ್ಯವೇ ? ಸಾಂವಿಧಾನಿಕ ಹಕ್ಕುಗಳನ್ನು ಸಾರ್ಥಕಗೊಳಿಸುವ ಒತ್ತಡದ ಗುಂಪುಗಳಾಗಿಯೇ ಪರ್ಯವಸಾನ ಹೊಂದುವುದಕ್ಕೆ ಮುನ್ನ ರಾಜ್ಯ ರಾಜಕಾರಣದಲ್ಲಿ ದಲಿತ ಸಮುದಾಯದ ಒಂದು ಅಲೆಯನ್ನು ಸೃಷ್ಟಿಸಲು ಸಾಧ್ಯವೇ ? ಈ ನಿಟ್ಟಿನಲ್ಲಿ ಒಂದು ಸೈದ್ಧಾಂತಿಕ ಸ್ವಷ್ಟತೆ, ತಾತ್ವಿಕ ಬದ್ಧತೆ ಮತ್ತು ಸಾಮುದಾಯಿಕ ಕಾಳಜಿ ಅಗತ್ಯವಾಗಿರುತ್ತದೆ. ದಲಿತ ಚಳುವಳಿಯ ಹರಿಕಾರರಲ್ಲಿ ಮತ್ತು ವಿವಿಧ ಗುಂಪುಗಳಲ್ಲಿ ಇದನ್ನು ಕಾಣಲು ಸಾಧ್ಯವೇ ? ಇದು ಮೂರ್ತ ಪ್ರಶ್ನೆ..
 

‍ಲೇಖಕರು G

22 September, 2014

2 Comments

  1. chalam

    ತುಂಬಾ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದೀರಿ.ನಾಲ್ಕು ದಶಕಗಳ ನಂತರವೂ ದೇವನೂರು,ಸಿದ್ದಲಿಂಗಯ್ಯ ಅಂತ ಜೋತು ಬೀಳುತ್ತಾ ಹೊಸ ನಾಯಕತ್ವದ ಕೊರತೆಯನ್ನು ಗುರುತಿಸಿದ್ದೀರಿ..ಎಲ್ಲರೂ ಚಿಂತಿಸಬೇಕಾದ ಲೇಖನ.

  2. ನಾಗರಾಜ್ ಹೆತ್ತೂರ್

    ಒಳ್ಳೆಯ ಪ್ರಶ್ನೆ… ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಒಟ್ಟಾರೆಯಾಗಿ ಹೇಳುವುದಾದರೆ ನಾನು ದಸಾಪದ ಜಿಲ್ಲಾಧ್ಯಕ್ಷನಾಗಿದ್ದರೂ ಅದರ ಹೊರತಾಗಿ ಇಲ್ಲಿ ಭಾಗವಹಿಸಿದ್ದ 2 ದಿನಗಳಲ್ಲಿ ಪಡೆದುಯಕೊಂಡಿದ್ದು ಏನಿಲ್ಲ. ಸವಾಲುಗಳನ್ನು ಎಸುರಿಸಲುವ ಯಾವ ಉತ್ತರವೂ ನನಗೆ ಸಿಗೆ ಮೂಖನಾದೆ. ಮತ್ತದೇ 70 ರ ದಶಕ ದ ಮಾತುಗಳನ್ನು ಕೇಳಿ ಕೇಳಿ ಬೇಸತ್ತು ಹೋಗಿದ್ದೇವೆ. ಕೊನೆ ಪಕ್ಷ ಬಹುಜನ ಸಾಹಿತ್ಯ, ಚಳುವಳಿ, ಹೊಸ ಸಾಧ್ಯತೆಗಳು…ಸಾಮಾಜಿಕ ಮಾಧ್ಯಮ ಮತ್ತು ಹೊಣೆಗಾರಿಕೆ. ಇಂದಿನ ಚಳವಳಿಯ ದಿಕ್ಕು ದೆಸೆ ಇಂತಹವುಗಳಿಗೆ ಉತ್ತರ ಸಿಗದೆ ನಿರಾಶನಾದೆ… ಇರಲಿ ಆದರೂ ಎಲ್ಲವನಮ್ನೂ ಒಂದೆಡೆ ಸೇರಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮ ಯಶಸ್ವಿಯಾಗಿದೆ… ಬಂದವರೂ ಕೂಡ ಹೋರಾಟ ಮಾಡೋನ ಬನ್ನಿ ಎಂದು ದೇವನೂರರನ್ನು ಕರೆಯುತ್ತಾರೆ… ಸಿದ್ದಲಿಂಗಯ್ಯನವರನ್ನು ಕರೆಯುತ್ತಾರೆ…? ಬರೊಲ್ಲ ಎಂದವರನ್ನು ಮತ್ತೆ ಯಾಕೆ ಕರೆಯಬೇಕು…? ಹೊಸ ಸಾಧ್ಯತೆಗಳು ಯಾಕೆ ಇವರಿಗೆ ಅರ್ಥವಾಗುತ್ತಿಲ್ಲ. ಏನಾದರೂ ಹೊಸದನ್ನು ಹೇಳಿ ಎಂಧರೂ ಅದಕ್ಕೂ ಉತ್ತರ ಇಲ್ಲ. ಕೆಲವರಂತೂ ಇನ್ನೂ ಹಳ್ಳಗಳಿಗೆ ಇಂಟರ್ ನೆಟ್ ಇಲ್ಲ ಎಂದು ಹೇಳುತ್ತಾರೆ….ಇಡೀ ದಲಿತ ಸಾಹಿತ್ಯ ಮತ್ತು ಚಳುವಳಿಯಲ್ಲಿ ಮರುಶೋಧಿಸುವ ಅಗತ್ಯತೆ ಇದೆ….ಈ ನಿಟ್ಟಿನಲ್ಲಿ ಇನ್ನಷ್ಟು ಚರ್ಚೆ ಆಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading