ಒಂದು ಭಾಷೆಯ ಲೇಖಕನ ಕೃತಿಗಳಲ್ಲಿ ಅತ್ಯುತ್ತಮವಾದುದನ್ನು ಗುರುತಿಸಿ, ಅವುಗಳ ಬೆಲೆಕಟ್ಟಿ, ಮುಂದಿನ ಪೀಳಿಗೆಯ ಓದುಗರಿಗೆ ಪರಿಚಯಿಸುವ ಜವಾಬ್ದಾರಿಯುಳ್ಳವರು ವಿಮರ್ಶಕರು. ಅವರು ಸಾಂಸ್ಕೃತಿಕ ಮಹತ್ವವುಳ್ಳ ಇಂಥ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿರುವ ಅನೇಕ ನಿದರ್ಶನಗಳುಂಟು. ಉದಾಹರಣೆಗೆ ಅಮೆರಿಕದ ಶ್ರೇಷ್ಠ ಲೇಖಕ ವಿಲಿಯಂ ಫಾಕ್ನರನನ್ನೇ ತೆಗೆದುಕೊಳ್ಳಿ. ಅವನು ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲೇ ತನ್ನ ಅತ್ಯುತ್ತಮ ಕಾದಂಬರಿಗಳನ್ನು ಬರೆದ. ವಿಪರ್ಯಾಸವೆಂದರೆ ಆ ಕಾಲದಲ್ಲಿ ಓದುಗರು, ಅಷ್ಟೇಕೆ ವಿಮರ್ಶಕರು ಕೂಡ, ಆ ಕಾದಂಬರಿಗಳ ಮಹತ್ವವನ್ನು ಅರಿಯಲಾಗದೆ ಹೋದದ್ದು. ಕಾಲಕ್ರಮದಲ್ಲಿ ಆ ಕಾದಂಬರಿಗಳ ಪುನಮರ್ುದ್ರಣವಾಗದೆ ಓದುಗರ, ಹೊಸ ವಿಮರ್ಶಕರ ದೃಷ್ಟಿಯಿಂದಲೂ ಮರೆಯಾದವು. ಅಂಥ ಪರಿಸ್ಥಿತಿಯಲ್ಲಿ ಮಾಲ್ಕಂ ಕೌಲಿ ಎಂಬ ಪ್ರಸಿದ್ಧ ವಿಮರ್ಶಕ ‘ದಿ ಪೋರ್ಟಬಲ್ ಫಾಕ್ನರ್’ ಎಂಬ ಶೀರ್ಷಿಕೆಯಲ್ಲಿ ಫಾಕ್ನರನ ಕೆಲವು ಅತ್ಯುತ್ತಮ ಕತೆಗಳನ್ನೂ ಕಾದಂಬರಿಗಳ ಕೆಲವು ಭಾಗಗಳನ್ನೂ ಸಂಪಾದಿಸಿ ಅದಕ್ಕೊಂದು ಅಭ್ಯಾಸಪೂರ್ಣ ಪ್ರಸ್ತಾವನೆಯನ್ನು ಬರೆಯುವ ಮೂಲಕ ಅವನೆಂಥ ಶ್ರೇಷ್ಠ ಲೇಖಕನೆಂಬುದನ್ನು ತೋರಿಸಿಕೊಟ್ಟ; ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದ ಫಾಕ್ನರನ ‘ಯಾಕ್ನಾಫಟಾಫ’ ಎಂಬ ಕಾಲ್ಪನಿಕ ಕ್ರಿಯಾಕ್ಷೇತ್ರದ ನಕಾಶೆಯೊಂದನ್ನು ರಚಿಸಿಕೊಂಡು, ಅದರೊಳಗೆ ಆ ಲೇಖಕ ಸೃಷ್ಟಿಸಿರುವ ‘ಮಾನವ ವಿಶ್ವದ ಅನುಭವ’ ಎಷ್ಟೆಲ್ಲ ವ್ಯಾಪಕವೂ ಗಾಢವೂ ಅನನ್ಯವೂ ಆಗಿದೆಯೆಂದು ವಿಶ್ಲೇಷಿಸಿದ. ಇದರ ಪರಿಣಾಮವಾಗಿ ಫಾಕ್ನರ್ಗೆ ಅದುವರೆಗೂ ಮರೀಚಿಕೆಯಾಗಿದ್ದ ಖ್ಯಾತಿಯೂ ವಿಮಶರ್ಾ ಮನ್ನಣೆಯೂ ದೊರೆಯಿತು; ಕಾಲಕ್ರಮದಲ್ಲಿ ನೊಬೆಲ್ ಪ್ರಶಸ್ತಿಯೂ ಲಭ್ಯವಾಯಿತು. ಹೀಗೆ ಮಾಲ್ಕಂ ಕೌಲಿ ಅಮೆರಿಕದ ಆ ಬಹುಮುಖ್ಯ ಲೇಖಕನನ್ನು ಓದುಗರ ಗಮನಕ್ಕೆ, ಅಷ್ಟೇಕೆ ವಿಮರ್ಶಕರ ಗಮನಕ್ಕೆ ಕೂಡ, ತಂದುಕೊಡುವ ಮೂಲಕ ಸಮರ್ಥ ವಿಮರ್ಶಕನೊಬ್ಬನ ಮೂಲಭೂತ ಕರ್ತವ್ಯವನ್ನು ನಿರ್ವಹಿಸಿದನೆನ್ನಬೇಕು.
ಲೇಖಕನೊಬ್ಬನ ಒಟ್ಟು ಸಾಹಿತ್ಯದಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿ, ಅದಕ್ಕೊಂದು ವಿಮಶರ್ಾತ್ಮಕ ಪ್ರಸ್ತಾವನೆ ಬರೆದು ಪ್ರಕಟಿಸುವ ಸಂಕಲನಕ್ಕೆ ಇಂಗ್ಲಿಷಿನಲ್ಲಿ ‘ಎಸೆನ್ಷಿಯಲ್ ವಕ್ಸರ್್’ (ಸಾರರೂಪಿ ಸಾಹಿತ್ಯ ಅಥವಾ ಬೆಲೆಬಾಳುವ ಬರಹಗಳು) ಎನ್ನುತ್ತಾರೆ. ‘ಪೋರ್ಟಬಲ್’ ಎಂಬ ಇನ್ನೊಂದು ಹೆಸರೂ ಇದೆ. ಇವು ಹೊಸ ಪೀಳಿಗೆಯ ಓದುಗರಿಗೆಂದೇ ಸಿದ್ಧಪಡಿಸಿದ ಸಂಕಲನಗಳು.
ನಮ್ಮಲ್ಲಿ ಬರಗೂರು ರಾಮಚಂದ್ರಪ್ಪನವರು ಕನರ್ಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನೊಬೆಲ್ ಪ್ರಶಸ್ತಿ ವಿಜೇತರು ಕೆಲವರ ‘ವಾಚಿಕೆ’ಗಳನ್ನು ಹೊರತಂದಿದ್ದರು. ಈಚೆಗೆ ನುಡಿ ಪ್ರಕಾಶನ ಪ್ರಕಟಿಸಿದ, ಈಗಲೂ ನಮ್ಮ ಜೊತೆ ಇರುವ ಕೆಲವರು ಲೇಖಕ-ಲೇಖಕಿಯರ ಆಯ್ದ ಬರಹಗಳಿಗೂ ಇದೇ ಹೆಸರಿದೆ. ಇಂಗ್ಲಿಷಿನ ‘ರೀಡರ್’ ಎಂಬುದಕ್ಕೆ ಕನ್ನಡದ ಪರ್ಯಾಯ ಪದ ಇದು. ಸಂಧ್ಯಾರಾಣಿಯವರು ಸಂಪಾದಿಸಿರುವ ಜೋಗಿ ಅವರ ಸಂಕಲನವೊಂದಕ್ಕೆ ‘ರೀಡರ್’ ಎಂದೇ ಹೆಸರು.

1974ರ ಅಂತ್ಯದಲ್ಲಿ ನಮ್ಮ ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ಅದುವರೆಗಿನ ಕಾವ್ಯವನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿ ಅದನ್ನು ಕೊಳ್ಳುವವರಿಗೆಲ್ಲ ಪ್ರಕಟನಪೂರ್ವ ರಿಯಾಯಿತಿ ಬೆಲೆಗೆ ಒದಗಿಸಬೇಕೆಂದು ನಿರ್ಧರಿಸಿದರು. ಅದುವರೆಗೂ ಕನ್ನಡದಲ್ಲಿ ಯಾವುದೇ ಕವಿಯ ಕವನಗಳು ಒಂದೇ ಸಂಪುಟದಲ್ಲಿ ಒಟ್ಟುಗೂಡಿದ ಉದಾಹರಣೆ ಇರಲಿಲ್ಲ. ಪುಸ್ತಕಕ್ಕೆ ಏನು ಹೆಸರಿಡಬೇಕು? ಅಡಿಗರು ಮೊದಲು ‘ಅಷ್ಟೂ ಕವನಗಳು’ ಎಂದು ಹೆಸರಿಸಬಯಸಿದ್ದರು. ಅದು ಅಷ್ಟೇನೂ ಆಕರ್ಷಕವೆನಿಸದ ಕಾರಣ ಕೊನೆಗೆ ‘ಸಮಗ್ರ ಕಾವ್ಯ’ ಎಂಬ ಶೀರ್ಷಿಕೆ ಆಯ್ಕೆಗೊಂಡಿತು. ಅದು ಮುಂದೆ ಅನೇಕಾನೇಕ ಕವಿಗಳ, ಕತೆಗಾರರ ಒಟ್ಟು ಕೃತಿಗಳಿಗೆ ಶೀರ್ಷಿಕೆಯಾದದ್ದು, ಇಂದು ಕೂಡ ಶೀರ್ಷಿಕೆಯಾಗುತ್ತಿರುವುದು ಸರ್ವವಿದಿತ.
ಸಮಗ್ರ ಎಂದರೆ ಎಲ್ಲವೂ ಎಂದಲ್ಲವೆ? ಲೇಖಕ ಇನ್ನೂ ಜೀವಂತವಿರುವಾಗ, ಅವನು ಮುಂದೆಯೂ ಬರೆಯುವ ಸಂಭವವಿರುವಾಗ ಎಲ್ಲವೂ ಹೇಗೆ ಸೇರೀತು? ಇಂಗ್ಲಿಷಿನಲ್ಲಿ ಕವಿಯೊಬ್ಬ ಬದುಕಿರುವಾಗಲೇ ಅವನ ಒಟ್ಟು ಕವನಗಳನ್ನು ಪ್ರಕಟಿಸುವಾಗ ಅದಕ್ಕೆ ‘ಕಲೆಕ್ಟೆಡ್ ಪೊಯೆಮ್ಸ್’ ಎಂದು ಹೆಸರಿಸುವುದುಂಟು. ಕನ್ನಡದಲ್ಲಾದರೆ ಅದನ್ನು ‘ಸಂಕಲಿತ ಕವನಗಳು’ ಎಂದು ಕರೆಯಬಹುದೇನೊ. ಆದರೆ ಅದೇಕೋ ನಮ್ಮವರನ್ನು ಈ ಹೆಸರು ಆಕರ್ಷಿಸಿದಂತಿಲ್ಲ. ಬಹುಶಃ ಈ ಕಾರಣದಿಂದಲೇ ‘ಸಂಕಲಿತ’ ಎನ್ನುವುದಕ್ಕೆ ಬದಲಾಗಿ ಕೆಲವರು ತಮ್ಮ ಕೃತಿಸಂಚಯವನ್ನು ‘ಸಮಗ್ರ’ವೆಂದು ಕರೆದಿಲಿಕ್ಕೆ ಸಾಕು. ಇನ್ನು ಕೆಲವರು ಬೇರೆ ಹೆಸರುಗಳನ್ನು ಕೊಟ್ಟಿರುವುದೂ ಉಂಟು. ಉದಾಹರಣೆಗೆ ‘ಮಲ್ಲಿಗೆಯ ಮಾಲೆ’ (ಕೆ.ಎಸ್.ನ, ಅವರ ಕಾವ್ಯ), ‘ಚಿತ್ತಾಲರ ಕತೆಗಳು’ (ಯಶವಂತ ಚಿತ್ತಾಲ), ‘ನಾಲ್ಕು ದಶಕದ ಕತೆಗಳು’ (ಯು.ಆರ್. ಅನಂತಮೂತರ್ಿ), ‘ಇದುವರೆಗಿನ ಕತೆಗಳು’ (ಜಿ.ಎಸ್. ಸದಾಶಿವ), ‘ಇದುವರೆಗಿನ ಹೇಳತೇನ ಕೇಳ’ (ಚಂದ್ರಶೇಖರ ಕಂಬಾರರ ಕಾವ್ಯ), ‘ಅಂತರಂಗದ ಅಲೆಗಳು’ (ವೈದೇಹಿಯವರ ಕತೆಗಳು), ‘ತುದಿಯೆಂಬೋ ತುದಿಯಿಲ್ಲ’ (ರಾಘವೇಂದ್ರ ಪಾಟೀಲರ ಕತೆಗಳು), ‘ಕವಿತೆ: ಇಂದಿನ ತನಕ’ (ಎಚ್.ಎಸ್. ಶಿವಪ್ರಕಾಶರ ಕಾವ್ಯ).
ಸಂಕಲಿತ, ಸಮಗ್ರ ಎಂಬ ಶಬ್ದಗಳ ನಡುವೆ ಒಂದಷ್ಟು ವ್ಯತ್ಯಾಸವಂತೂ ಇದೆ. ಉದಾಹರಣೆಗೆ ನೀವೊಬ್ಬ ನಿರ್ದಿಷ್ಟ ಲೇಖಕನ/ಲೇಖಕಿಯ ಸಂಕಲಿತ ಕೃತಿಯೊಂದನ್ನು ಕೊಂಡುಕೊಂಡರೆ ಅದರಲ್ಲಿ ನೀವು ಹಿಂದೊಮ್ಮೆ ಮೆಚ್ಚಿಕೊಂಡಿದ್ದ ಒಂದು ಕವನವೋ ಕತೆಯೋ ನಾಪತ್ತೆಯಾಗಿರಬಹುದಲ್ಲ. ಅಂದರೆ ಸಂಕಲಿತ ಎಂದರೂ ಒಂದು ರೀತಿಯಲ್ಲಿ ಆಯ್ದ ಎಂದೇ ಅರ್ಥ. ಅದು ಲೇಖಕನ/ಲೇಖಕಿಯ ಆಯ್ಕೆಯಾಗಿರಬಹುದು ಅಥವಾ ಒಬ್ಬ ಪರಿಣತ ವಿಮರ್ಶಕನ ಆಯ್ಕೆಯಾಗಿರಬಹುದು.
ಸಮಗ್ರ ಎಂದರೆ ಲೇಖಕನೊಬ್ಬನ ಎಲ್ಲ ಕೃತಿಗಳೂ ಸೇರಿರುವ ಕೃತಿ. ಇಲ್ಲೂ ಕೆಲವು ಪ್ರಶ್ನೆಗಳಿವೆ. ಲೇಖಕ ಬರೆದದ್ದೆಲ್ಲವೋ ಅಥವಾ ಅವನು ಪ್ರಕಟಿಸಿದ್ದೆಲ್ಲವೋ? ಅವನು ಸ್ವತಃ ಪ್ರಕಟಿಸಿದ್ದೋ, ಅವನ ಪರವಾಗಿ ಇತರರು ಪ್ರಕಟಿಸಿದ್ದೋ? ಅವನು ಬರೆದದ್ದೆಲ್ಲವೂ ಎಂದರೆ ಅವನ ಮೊದಲ ಡ್ರಾಫ್ಟುಗಳು, ಅವನ ತಿದ್ದುಪಡಿಗಳು, ಅವನು ಮಾಡಿಕೊಂಡ ಟಿಪ್ಪಣಿಗಳು, ಸಂಬಂಧಪಟ್ಟ ಕಾಗದ ಪತ್ರಗಳು, ಅವನ ಕೃತಿಗಳ ಮೊದಲ ಹಾಗೂ ಪರಿಷ್ಕೃತ ಆವೃತ್ತಿಗಳು, ಹೀಗೆ ಎಲ್ಲವೂ? ಕೆಲವು ವಿದ್ವಾಂಸರ ಪ್ರಕಾರ ಸಮಗ್ರದ ಅರ್ಥ ಇದೇ. ಹಾಗಿದ್ದರೆ ಅಂಥ ಸಮಗ್ರ ಕೃತಿಗಳು ಹೇಗಿರುತ್ತವೆ?
1930ರ ದಶಕದಲ್ಲಿ ಜಾಕೆ ಶಿಫ್ರಿನ್ ಎಂಬ ಸಂಪಾದಕ ಅಭಿಜಾತ ಫ್ರೆಂಚ್ ಲೇಖಕರ ಸಂಪೂರ್ಣ ಕೃತಿಗಳನ್ನು ವಿಮಶರ್ಾತ್ಮಕ ಟಿಪ್ಪಣಿಗಳೊಡನೆ ಓದುಗರಿಗೆ ಒದಗಿಸಬಯಸಿದ. ಅದನ್ನು ತಿಳಿದ ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ಲೇಖಕ ಆಂದ್ರ್ರೆ ಜೀದ್ ಅವನ ಯೋಜನೆಯನ್ನು ಗಾಲಿಮಾ ಪ್ರಕಾಶನಕ್ಕೆ ಪರಿಚಯಿಸಿದ. ಮುಂದೆ ಗಾಲಿಮಾ ಪ್ರಕಾಶನ ಪ್ರಾರಂಭಿಸಿದ ಒಂದು ವಿಶಿಷ್ಟ ಗ್ರ್ರಂಥಮಾಲೆ ‘ಬಿಬ್ಲಿಯೋಥೆಕ್ ದ ಲ ಪ್ಲೀಯುದ್’. ಈ ಮಾಲೆಯಲ್ಲಿ ಫ್ರೆಂಚ್ ಲೇಖಕರ ಸಮಗ್ರ ಕೃತಿಗಳ ಜೊತೆಗೆ ಜಗತ್ಸಾಹಿತ್ಯ ನಿಮರ್ಾಪಕರ ಸಮಗ್ರ ಕೃತಿಗಳೂ (ಫ್ರೆಂಚ್ ಭಾಷಾಂತರದಲ್ಲಿ) ಸೇರಿವೆ. ಇದುವರೆಗೆ ಪ್ರಕಟವಾಗಿರುವ ಪುಸ್ತಕಗಳ ಸಂಖ್ಯೆ 600ಕ್ಕೂ ಹೆಚ್ಚು. ಪ್ರತಿಯೊಂದು ಪ್ರಸ್ತಕಕ್ಕೂ ತೀರ ತೆಳುವಾದ, ದೀರ್ಘಕಾಲ ಬಾಳಬಲ್ಲ ಕಾಗದ, ಸೊಗಸಾದ ಮುದ್ರಣ, ಚರ್ಮದ ರಟ್ಟು, ಬೆನ್ನಿನ ಮೇಲೆ ಚಿನ್ನದ ಅಕ್ಷರಗಳಲ್ಲಿರುವ ಶೀಷರ್ಿಕೆ. ಒಟ್ಟಿನಲ್ಲಿ ಅದ್ದೂರಿಯಾಗಿ ಕಾಣುವ ಪುಸ್ತಕ. ಮತ್ತೆ ಒಂದೊಂದು ಶತಮಾನದ ಪುಸ್ತಕ ಶ್ರೇಣಿಗೂ ಒಂದೊಂದು ಬಣ್ಣ. ಉದಾಹರಣೆಗೆ 20ನೆಯ ಶತಮಾನದ ಪುಸ್ತಕಗಳಾದರೆ ಕಂದು ಬಣ್ಣದ ರಟ್ಟು. ಅವುಗಳಿಗೆ ಹೊಳೆಯುವ ಜಾಕೆಟ್ ಅಥವಾ ಹೊದಿಕೆ. ಪ್ರತಿಯೊಂದು ಪುಸ್ತಕಕ್ಕೂ ಬಿಳಿ ಬಣ್ಣದ ಒಂದೊಂದು ಕೇಸ್.
ಈ ಪುಸ್ತಕಗಳೆಂದರೆ ವಿಮರ್ಶಾತ್ಮಕ ಆವೃತ್ತಿಗಳು. ಇವುಗಳಲ್ಲಿ ಟಿಪ್ಪಣಿಗಳು, ವ್ಯಾಖ್ಯಾನಗಳು, ಪಾಠಾಂತರಗಳು, ಹಸ್ತಪ್ರತಿಗೂ ಮುದ್ರಿತ ಪ್ರತಿಗೂ ಇರುವ ವ್ಯತ್ಯಾಸಗಳು, ಕೆಲವು ಆವೃತ್ತಿಗಳಲ್ಲಿರುವ ಮುದ್ರಣ ದೋಷಗಳ ತಿದ್ದುಪಡಿ, ಎಲ್ಲವೂ ಸೇರಿರುತ್ತವೆ. ಇಂಥವನ್ನು ಸಂಪಾದಿಸಿ ಪ್ರಕಟಿಸಬೇಕೆಂದರೆ ವಿಶೇಷ ಪರಿಣತರ ಒಂದು ತಂಡವೇ ಅಗತ್ಯವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇಂದು ಲೇಖಕನೊಬ್ಬ ಬಿಬ್ಲಿಯೋಥೆಕ್ ದ ಲ ಪ್ಲೀಯುದ್ ಗ್ರಂಥಮಾಲೆಿಯಲ್ಲಿ ಕಾಣಿಸಿಕೊಳ್ಳುವುದೆಂದರೆ ಅದ್ವಿತೀಯ ಮನ್ನಣೆಗೆ ಪಾತ್ರನಾದಂತೆ. ಈಚೆಗೆ ಸಮಕಾಲೀನ ಲೇಖಕರಲ್ಲಿ ಕೆಲವರು ಕೂಡ ಈ ಮಾಲೆಯಲ್ಲಿ ಕಾಣಿಸಿಕೊಂಡಿರುವುದುಂಟು. ಅರ್ಜಂಟೀನಾದ ಲೇಖಕ ಹೋಹರ್ೆ ಲೂಯಿಸ್ ಬೋರ್ಹೆಸ್ಗೆ ಅವನ ಕೃತಿಗಳನ್ನು ಈ ಪ್ಲೀಯುದ್ ಆವೃತ್ತಿಗಾಗಿ ಅನುವಾದಿಸಲಾಗುತ್ತಿದೆಯೆಂದು ತಿಳಿಸಿದಾಗ ಅವನು ಆಶ್ಚರ್ಯದಿಂದ ‘ಹೌದೆ? ಅದು ನೊಬೆಲ್ ಬಹುಮಾನಕ್ಕಿಂತ ಮಿಗಿಲಾದ ಗೌರವವಲ್ಲವೆ?’ ಎಂದು ಕೇಳಿದನಂತೆ. ಹೌದು, ಪ್ಲೀಯುದ್ ಆವೃತ್ತಿಯ ಲೇಖಕನಾಗುವುದೆಂದರೆ ಅದು ವಜರ್ಲ್, ಸವರ್ಟಿಸ್, ಶೇಕ್ಸ್ಪಿಯರ್, ಗೇಠೆ, ಡಿಕನ್ಸ್, ಟಾಲ್ಸ್ಟಾಯ್ ಮೊದಲಾದ ಸಾಹಿತ್ಯ ದಿಗ್ಗಜಗಳ ಜೊತೆ ಸ್ಥಾನ ಗಿಟ್ಟಿಸಿಕೊಂಡಂತೆ. ರಾಷ್ಟ್ರೀಯ ಅಥವಾ ರಾಜಕೀಯ ಒತ್ತಡವಾಗಲೀ ವ್ವವಸ್ಥೆಯ ಮರ್ಜಿಯಾಗಲೀ ವ್ಯವಸ್ಥಿತ ಲಾಬಿಯಾಗಲೀ ಇಲ್ಲದೆ ಲೇಖಕನೊಬ್ಬನನ್ನು ಕೇವಲ ಅವನ ಸಾಹಿತ್ಯ ಸೃಷ್ಟಿಯ ಗುಣಮಟ್ಟಕ್ಕಾಗಿಯೇ ಗೌರವಿಸಿ, ಪ್ರತಿಷ್ಠಾಪಿಸುವ ರೀತಿ ಅದು.
ಅಮೆರಿಕದ ಪ್ರಸಿದ್ಧ ವಿಮರ್ಶಕ ಎಡ್ಮಂಡ್ ವಿಲ್ಸನ್ ಈ ಗ್ರಂಥಮಾಲೆಯನ್ನು ಅದೆಷ್ಟು ಮೆಚ್ಚಿಕೊಂಡನೆಂದರೆ, ಅಮೆರಿಕನ್ ಸಾಹಿತ್ಯವನ್ನು ಕೂಡ ಇಷ್ಟು ಅದ್ದೂರಿಯಾಗಿ ಪ್ರಕಟಿಸುವ ಒಂದು ಪ್ರಕಾಶನ ಸಂಸ್ಥೆಯಿಲ್ಲವಲ್ಲ ಎಂದು ಹಳಹಳಿಸಿದ. ಅವನ ಆಶಯದಂತೆ 1979ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಗ್ರ್ರ್ರಂಥಮಾಲೆ ‘ಲೈಬ್ರರಿ ಆಫ್ ಅಮೆರಿಕ’. ಇದರ ಉದ್ದೇಶ ಅಮೆರಿಕನ್ ಸಾಹಿತ್ಯ ಸಂಪದವನ್ನು ಸದಾ ಮುದ್ರಣದಲ್ಲಿಡುವ ಮೂಲಕ ಅದು ಎಲ್ಲ ಕಾಲದಲ್ಲೂ ಲಭ್ಯವಾಗುವಂತೆ ಮಾಡುವುದು. ಅಮೆರಿಕದ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಹ್ಯುಮ್ಯಾನಿಟೀಸ್ನ ಮತ್ತು ಫೋರ್ಡ್ ಫೌಂಡೇಷನ್ನಿನ ಧನಸಹಾಯದಿಂದ ಪ್ರಾರಂಭವಾದ ಈ ಗ್ರ್ರಂಥಮಾಲೆ ಇದುವರೆಗೆ 200ಕ್ಕೂ ಹೆಚ್ಚು ಗ್ರಂಥಗಳನ್ನು ಸುಲಭವಾಗಿ ಓದುವುದಕ್ಕೆ ಅನುಕೂಲವಾದ ವಿಶೇಷ ಅಕ್ಷರ ವಿನ್ಯಾಸಗಳಲ್ಲಿ ಪ್ರಕಟಿಸಿದೆ. ಪ್ರತಿಯೊಂದು ಪುಸ್ತಕವನ್ನೂ ಹಲವು ಪೀಳಿಗೆಗಳವರೆಗೆ ಸುಭದ್ರವಾಗಿಡಬಲ್ಲ ತೀರ ತೆಳುವಾದ, ಅಷ್ಟೇ ಗಟ್ಟಿಯಾದ ಆಸಿಡ್-ಫ್ರೀ ಕಾಗದದ ಮೇಲೆ ಮುದ್ರಣ; ವಿಶೇಷವೆಂದರೆ ಈ ಕಾಗದ ಕಾಲಕ್ರಮೇಣ ಹಳದಿಯಾಗುವುದಿಲ್ಲ, ಮುಟ್ಟಿದರೆ ಪುಡಿ ಪುಡಿಯಾಗುವ ಸ್ಥಿತಿ ತಲಪುವುದಿಲ್ಲ. 1500ಕ್ಕಿಂತಲೂ ಹೆಚ್ಚು ಪುಟಗಳಿದ್ದರೂ ಪುಸ್ತಕ ಎರಡು ಅಂಗುಲದಷ್ಟೂ ದಪ್ಪವಾಗಿರುವುದಿಲ್ಲ.
ರಾಬರ್ಟ್ ಪೆನ್ ವಾರೆನ್, ಸಿ. ವ್ಯಾನ್ ವುಡ್ವರ್ಡ್, ರಾಬರ್ಟ್ ಕೋಲ್ಸ್, ಅರ್ವಿಂಗ್ ಹೋ, ಯೂಡೊರಾ ವೆಲ್ಟಿ, ಡೇನಿಯಲ್ ಆರಾನ್ ಮೊದಲಾದ ವಿದ್ವಾಂಸರು ಸಲಹಾ ಮಂಡಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಷಯ ತಜ್ಞ ವಿದ್ವಾಂಸರು ಸಂಪಾದಿಸಿ, ಸಿದ್ಧಪಡಿಸಿದ ಈ ಗ್ರಂಥಗಳು ಸಾಹಿತ್ಯ ಕೃತಿಗಳ ಹಿಂದಿನ ಮುದ್ರಣಗಳಲ್ಲಿದ್ದ ತಪ್ಪುಗಳನ್ನು ತಿದ್ದಿವೆ, ಸಂಬಂಧಪಟ್ಟ ಟಿಪ್ಪಣಿಗಳನ್ನು ಒದಗಿಸಿವೆ, ಪಠ್ಯಗಳ ಮೂಲ ಪ್ರತಿಗಳನ್ನು ಪರಿಶೋಧಿಸಿವೆ. ಉದಾಹರಣೆಗೆ ರಿಚಡರ್್ ರೈಟ್ನ ‘ನೇಟಿವ್ ಸನ್’ ಎಂಬ ಕಾದಂಬರಿ. ಇದರ ಹಿಂದಿನ ಮುದ್ರಣಗಳಲ್ಲಿ ಯಾವುದೋ ಕಾರಣದಿಂದ ತೆಗೆದುಹಾಕಲಾಗಿದ್ದ ಅನೇಕ ಭಾಗಗಳನ್ನು ಈ ಮಾಲೆಯ ಆವೃತ್ತಿಯಲ್ಲಿ ಸೇರಿಸಲಾಗಿದೆ.
ನಮ್ಮಲ್ಲಿ ಕೂಡ ಈಗಿಲ್ಲದ ಕೆಲವರ ಸಮಗ್ರ ಕೃತಿಗಳು ಪ್ರಕಟವಾಗಿವೆ. ಉದಾಹರಣೆಗೆ ಸಂಸ, ಕೈಲಾಸಂ, ಡಿ.ವಿ.ಜಿ., ಬಿ.ಎಂ.ಶ್ರೀ, ದ.ರಾ. ಬೇಂದ್ರೆ, ದಿನಕರ ದೇಸಾಯಿ, ಕೆ.ಸದಾಶಿವ, ಬಾಗಲೋಡಿ ದೇವರಾಯ, ಎ.ಕೆ. ರಾಮಾನುಜನ್, ರಾಘವೇಂದ್ರ ಖಾಸನೀಸ…. ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೆಲವರ ಸಮಗ್ರ ಕೃತಿ ಸಂಚಯವನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸುತ್ತಿದೆ. ಆದರೆ ಇವು ಯಾವುವೂ ‘ಬಿಬ್ಲಿಯೋಥೆಕ್ ದ ಲ ಪ್ಲೀಯುದ್’ ಅಥವಾ ‘ಲೈಬ್ರರಿ ಆಫ್ ಅಮೆರಿಕ’ ಆವೃತ್ತಿಗೆ ಸಮನಲ್ಲ.
ಕೊನೆಯ ಮಾತು: ಗ್ವಾಟೆಮಾಲಾದ ಲೇಖಕ ಅಗೂಸ್ತೊ ಮೊಂತೆರ್ರೋಸೋನ ಒಂದು ಕಥಾ ಸಂಕಲನದ ಇಂಗ್ಲಿಷ್ ಭಾಷಾಂತರದ ಹೆಸರು ‘ಕಂಪ್ಲೀಟ್ ವರ್ಕ್ಸ್ ಅಂಡ್ ಅದರ್ ಸ್ಟೋರೀಸ್’. ಅದರಲ್ಲಿ ‘ಕಂಪ್ಲೀಟ್ ವರ್ಕ್’ ಎಂಬುದು ಕೇವಲ ಆರು ಪುಟಗಳ ಒಂದು ಸಣ್ಣಕತೆ ಅಷ್ಟೆ.
’ಸಮಗ್ರ, ಸಂಕಲಿತ, ವಾಚಿಕೆ ಇತ್ಯಾದಿ’ – ಎಸ್ ದಿವಾಕರ್
ನಿಮಗೆ ಇವೂ ಇಷ್ಟವಾಗಬಹುದು…





Very useful writing, Divakar.
a very good write up.
very informative.
thanq diwakar sir.