ಸನಾತನಿಗಳೂ ಮತ್ತವರ ಸೀರೆಯೂ…

 

ಶ್ರೀಪತಿ ಗೋಗಡಿಗೆ

(ಪಿಸುಮಾತು)

ಈ ಗಂಡಸರು ಹೆಂಗಸರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಚಪಲ ಇನ್ನೂ ಬಿಟ್ಟಿಲ್ಲ. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾ, ಬೇರೆ ಬೇರೆ ನೀತಿಗಳನ್ನು ಹೇರುತ್ತಾ ಸಾವಿರಾರು ವರ್ಷಗಳಿಂದಲೂ ಗಂಡಿನ ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆ ‘ವಸ್ತ್ರ ಸಂಹಿತೆ’ ಎಂಬ ನಾಲಾಯಕ್‌ ನೀತಿ.
ಕೆಲವೇ ದಶಕಗಳ ಹಿಂದೆ ಕೇರಳದಲ್ಲಿ ನಂಬೂದರಿಗಳು (ಇವರು ಅಂದಿನ ಪ್ರಭಲ ಜನಾಂಗ) ಒಂದು ನೀತಿ ರೂಪಿಸಿದ್ದರಂತೆ. ಅದೇನೆಂದರೆ “ವಿದೇಶಿಯರ ಮೂಲಕ ಭಾರತಕ್ಕೆ ಬಂದ ಕುಪ್ಪಸವನ್ನು ನಂಬೂದರಿ ಹೆಂಗಸರುಗಳಲ್ಲದೇ ಬೇರೆ ಜಾತಿಯ ಹೆಂಗಸರು ಧರಿಸಬಾರದು” ಎಂದು! ಇದರರ್ಥ ತಮ್ಮ ಮನೆ ಹೆಣ್ಣು ಮಕ್ಕಳು ಬೀದಿಯಲ್ಲಿ ಎದೆ ಮುಚ್ಚಿಕೊಂಡು ಮರ್ಯಾದೆಯುತವಾಗಿ ಓಡಾಡಲಿ, ಬೇರೆ ಜಾತಿಯ ಹೆಣ್ಣು ಮಕ್ಕಳು ಬೀದಿಯಲ್ಲಿ ಎಲ್ಲರಿಗೂ ಎದೆ ತೋರಿಸಿಕೊಂಡು ಓಡಾಡಲಿ ಎಂದಲ್ಲವೇ ? ಇನ್ನೂ ಹೇಳಬೇಕೆಂದರೆ ಇತರೆ ಹೆಣ್ಣುಮಕ್ಕಳ ಎದೆ ಸೌಂದರ್ಯವನ್ನು ತಾವು ಸವಿಯೋಣ, ನಮ್ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಡೋಣ ಎಂಬ ಮುಲ್ಲಾಗಳ ವಾದಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ. ಬ್ರಿಟೀಷರು ಬರುವ ಮುನ್ನ ಹೆಂಗಸರ ಮೇಲುಡುಗೆಗಳೇ ಇರಲಿಲ್ಲ ಅನ್ನೋದು ಕೂಡಾ ಒಪ್ಪಿಕೊಳ್ಳಲಾಗದ ಧರ್ಮಾಂಧತೆಯಲ್ಲಿ ಈ ಸನಾತನಿಗಳಿದ್ದಾರೆ.
ಇತ್ತೀಚಿನ ಬೆಳವಣಿಗೆ ಎಂದರೆ ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುತ್ತಿರುವ “ವಸ್ತ್ರ ಸಂಹಿತೆ”. ನೆನಪಿರಲಿ, ಇದನ್ನು ರೂಪಿಸುವವರು ಗಂಡಸರು ಮತ್ತು ಇದು ಅನ್ವಯವಾಗುವುದು ಹೆಂಗಸರಿಗೆ, ಹುಡುಗಿಯರಿಗೆ! ಅಂದರೆ ಹೆಣ್ಮಕ್ಕಳು ಯಾವ ಉಡುಗೆ ಹಾಕಬೇಕು ಅನ್ನೋದನ್ನ ಇಂದಿಗೂ ಗಂಡಸರೇ ನಿರ್ಧರಿಸುತ್ತಾರೆ ಎಂದರೆ ಎಂತಹ ವಿಷಮ ಸ್ಥಿತಿಯಲ್ಲಿ ಸ್ತ್ರೀಯರು ಬದುಕುತ್ತಿರಬಹುದು ? “ಹುಡುಗಿಯರು ಹೇಗೆ ಹೇಗೋ ವಸ್ತ್ರ ಧರಿಸುವುದರಿಂದಲೇ ಹುಡುಗರು ಕೆರಳಿ ಅತ್ಯಾಚಾರ ಮಾಡುತ್ತಾರೆ” ಎಂದು ವಾದಿಸುವ ಅವಿವೇಕಿಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಅಂದು ಇಂದ್ರ ಹೋಗಿ ಅಹಲ್ಯೆಯನ್ನು ಅತ್ಯಾಚಾರ ಮಾಡುವಾಗ ಆಕೆ ಯಾವ ಉದ್ರೇಕಕಾರಿ ಉಡುಗೆ ಧರಿಸಿದ್ದಳು ? ಕೀಚಕ ದ್ರೌಪದಿಯನ್ನು ಸರಸಕ್ಕೆ ಕರೆಯುವಾಗ ಆಕೆ ಯಾವ ಬ್ರಾಂಡ್‌ನ ಜೀನ್ಸ್‌ಪ್ಯಾಂಟ್‌ ಧರಿಸಿದ್ದಳು ? ಸ್ವಂತ ತಮ್ಮನ ಹೆಂಡತಿಯನ್ನು ವಾಲಿ ಹೊತ್ತೊಯ್ದು ಅರಮನೆಯಲ್ಲಿಟ್ಟು ಅತ್ಯಾಚಾರ ಮಾಡಬೇಕಾದರೆ ಆಕೆ ಯಾವ ಮಾಡರ್ನ್‌ ವಸ್ತ್ರ ಧರಿಸಿದ್ದಳು ? ಇವುಗಳಿಗೆಲ್ಲಾ ಉತ್ತರ ನೀಡಿಯಾರೇ ಸನಾತನಿಗಳು ? ಇವರದು ಕೂಡಾ ಒಂದು ಬಗೆಯ ಭಯೋತ್ಪಾದನೆಯೇ ಆಗಿದೆ.
ಸೆಕ್ಸಿ ಸೀರೆ !
ಇಂದಿನ ಪ್ರಜಾವಾಣಿಯಲ್ಲಿ (೨೦ ಜುಲೈ ೨೦೧೫) ಇಬ್ಬರು ಶಿಕ್ಷಕಿಯರು ಸೀರೆಯಿಂದ ಆಗುತ್ತಿರುವ ಕಿರಿಕಿರಿಯ ಬಗ್ಗೆ ಮನೋಜ್ಞವಾಗಿ ಬರೆದುಕೊಂಡಿದ್ದಾರೆ. ಅವೆರಡು ಪತ್ರಗಳನ್ನು ಓದಿದರೆ ಸಾಕು, ಸನಾತನಿಗಳ ಕುತಂತ್ರ ಸೀರೆಯ ಹೆಸರಲ್ಲಿ ಹೆಂಗಸರನ್ನು ಹೇಗೆ ನರಕದಲ್ಲಿ ಇಟ್ಟಿದೆ ಎಂಬುದನ್ನು ಅರಿಯಬಹುದು.
ಸೀರೆ ಉಟ್ಟೊಡನೆಯೇ ಹೆಂಗಸರು ಮಹಾ ಮರ್ಯಾದೆಯುತವಾಗಿ ಕಂಡು ಬಿಡುತ್ತಾರೆ ಎಂಬ ಬೊಗಳೆ ವಾದವನ್ನು ಒಪ್ಪಲು ಸಧ್ಯವೇ ಇಲ್ಲ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಮೇಡಂಗಳು ಸೀರೆಯುಟ್ಟು ಬಂದು ಅವಸ್ಥೆ ಪಡುವುದನ್ನು ಗಮನಿಸಿದ್ದೆ. ಎಷ್ಟೇ ನಾಜೂಕಾಗಿ ಸೀರೆಯುಟ್ಟು ಬಂದರೂ ಒಂದೆರಡು ತರಗತಿಗಳಲ್ಲಿ ಪಾಠ ಮಾಡುವ ಹೊತ್ತಿಗೆ ಅದು ಸಾಕಷ್ಟು ವ್ಯತ್ಯಾಸಗೊಂಡಿರುತ್ತದೆ. ಓಡಾಡಿಕೊಂಡು ಪಾಠ ಮಾಡುವಾಗ ಆ ಕಡೆ ಈ ಕಡೆ ತಿರುಗುವಾಗ ಎಡ ಭಾಗದಿಂದ ಕಾಣಿಸುವ ಹೊಟ್ಟೆ – ಸ್ತನಗಳ ಗಾತ್ರವನ್ನು ಮರೆ ಮಾಚಲಾಗದೇ, ಪಡ್ಡೆ ಹುಡುಗರ ಕಳ್ಳ ನೋಟವನ್ನು ಎದುರಿಸಲಾಗದೇ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಸ್ವಲ್ಪ ದೊಡ್ಡ ಸ್ತನಗಳಿರುವವರಾದರೆ ಅವರ ಅವಸ್ಥೆಯನ್ನು ನಾವು ವರ್ಣಿಸಲಾಗದು. ಸ್ವಲ್ಪ ಹಳಬರು ಹೇಗೋ ಸುಧಾರಿಸಿಕೊಳ್ಳುತ್ತಿದ್ದರಾದರೂ ಹೊಸ ಶಿಕ್ಷಕಿಯರು ಬಹಳ ತೊಂದರೆ ಅನುಭವಿಸುವುದು ಕಂಡು ಬರುತ್ತಿತ್ತು. ಒಂದೆಡೆ ಅನುಭವ ಇಲ್ಲದೇ ಉಟ್ಟು ಬರುವ ಸೀರೆಯ ಕಿರಿಕಿರಿಯಾದರೆ ಮತ್ತೊಂದೆಡೆ ಯಾವ ಭಾಗದಿಂದ ಏನು ಕಾಣಿಸುತ್ತದೋ, ಸೊಂಟದಲ್ಲಿ ಯಾವಾಗ ಜಾರುತ್ತದೋ ಎಂಬ ತಳಮಳದಲ್ಲೇ ಅವರು ಇರಬೇಕು. ಎಡಗೈ ಎತ್ತುವುವಾಗಲೂ ಯೋಚಿಸಿ, ಬಲಗೈ ಇಂದ ಸೆರಗನ್ನು ಸರಿಯಾಗಿ ಎಳೆದು ಹಿಡಿದುಕೊಂಡು ಎತ್ತಬೇಕು. ಎಷ್ಟೋ ಸಮಯ ಇದನ್ನೆಲ್ಲಾ ಮರೆತು ತನ್ಮಯರಾಗಿ ಪಾಠ ಮಾಡುತ್ತಾ ಓಡಾಡುವಾಗ, ಹಲಗೆಯ ಮೇಲೆ ಬರೆಯುವಾಗ ಕಾಣಿಸುವ ಒಂದು ಬದಿಯ ನೋಟವನ್ನು ತಡೆಯಲು ಸಾಧ್ಯವಾಗುವುದೇ ಇಲ್ಲ. ಒಬ್ಬರು ಮೇಡಂ ಅಂತೂ ಅದೆಷ್ಟೋ ಉದ್ದದ ಸೀರೆಯಿಂದ ಹೊಟ್ಟೆ ಮತ್ತು ಸ್ತನದ ಭಾಗಕ್ಕೆ ಮತ್ತೊಂದು ಸುತ್ತು ಬರುವಂತೆ ಸುತ್ತಿಕೊಂಡು ಬಿಗುಮ್ಮಾಗಿ ಪಿನ್‌ ಹಾಕಿಕೊಂಡು ಬರುತ್ತಿದ್ದರು!
ಹಾಗೆಯೇ ನಾನು ಫೋಟೋ ಸ್ಟುಡಿಯೋ ಮಾಡಿದ್ದ ಸಮಯದಲ್ಲಿ ಅನೇಕ ಮದುವೆ ಸಮಾರಂಭಗಳಿಗೆ ಫೋಟೋ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಅಲ್ಲಿಯೂ ಇದೇ ಸಮಸ್ಯೆ ಎದುರಾಗುತ್ತಿತ್ತು. ಆರತಕ್ಷತೆ ಸಮಯದಲ್ಲಿ ಮದುಮಕ್ಕಳ ಕೈ ಮೇಲೆ ತೆಂಗಿನ ಕಾಯಿ ಇರಿಸಿ ಹಾಲು ಸುರಿಯುವಾಗ, ಬಾಗಿ ಆರತಿ ಎತ್ತುವಾಗ ಅನೇಕ ಹೆಂಗಸರು ಉಟ್ಟು ಬರುವ ಸೀರೆಯ ಬದಿಯಿಂದ ಕಾಣಿಸುವ ನೋಟ ಚಿತ್ರೀಕರಿಸುವುದು ಮುಜುಗರ ಉಂಟು ಮಾಡುತ್ತಿತ್ತು. ಅಲ್ಲಿ ಸುತ್ತಲೂ ಜನರು ಮುತ್ತಿಕೊಂಡು ಸಾಕಷ್ಟು ಸ್ಥಳವೂ ಇರುವುದಿಲ್ಲ. ಅವರು ಮದುಮಕ್ಕಳಿಗೆ ಹತ್ತಿರದ ಸಂಬಂಧಿಗಳಾಗಿರುವುದರಿಂದ ಚಿತ್ರಿಸದೇ ಬಿಡುವಂತೆಯೂ ಇಲ್ಲ. ಅದನ್ನು ಅಲ್ಲಿ ಹೇಳುವಂತೆಯೂ ಇಲ್ಲ.
ಸೀರೆಗೂ ಮೊದಲು ಏನಿತ್ತು ?
ಹೆಂಗಸರಿಗೆ ಸೀರೆಯನ್ನೇ ಉಡಿ ಎಂದು ಹೇಳುವ ಯಾವನಾದರೂ ತಾನು ಪಂಚೆ ಉಟ್ಟು ಬರುವುದನ್ನು ನೋಡಿದ್ದೀರಾ ? ಪ್ಯಾಂಟ್‌ ಏನು ಭಾರತೀಯ ಸಂಸ್ಕೃತಿಯೇ ? ಕೂತರೆ ತೊಡೆ ಕಾಣಿಸುವ ದೊಗಲೆ ಚೆಡ್ಡಿ ಭಾರತದ್ದೇ ? ಹೆಂಗಸರ ಮೇಲೆ ಮಾತ್ರ “ವಸ್ತ್ರ ಸಂಹಿತೆ” ಹೇರುವ ಇವರುಗಳ ಮಕ್ಕಳು ಇನ್ಯಾವುದೋ ಕಾಲೇಜಿಗೆ ಜೀನ್ಸ್‌ ತೊಟ್ಟು ಹೋಗುವುದೂ ಇದೆ. ಸೀರೆ ಉಡುವುದನ್ನು ಇವರುಗಳು “ಭಾರತೀಯ ಸಂಸ್ಕೃತಿ” ಎಂದು ಬೊಗಳೆ ಹೊಡೆದು ಪ್ರಚಾರ ಮಾಡುತ್ತಾರೆ. ಸೀರೆ ಇದ್ದಕ್ಕಿದ್ದಂಗೆ ಭಾರತದಲ್ಲಿ ಶುರುವಾದದ್ದಲ್ಲ. ಅದಕ್ಕೂ ಮೊದಲು ಮಾನವರು ತಮ್ಮ ಮರ್ಮಾಂಗ ಮುಚ್ಚಿಕೊಳ್ಳಲು ಪ್ರಾಣಿಗಳ ಚರ್ಮ, ಎಲೆ, ಮರದ ತೊಗಟೆಗಳನ್ನು ಉಪಯೋಗಿಸುತ್ತಿದ್ದರು. ಅದು ಮಾನ ಮುಚ್ಚಿಕೊಳ್ಳುವುದಕ್ಕಲ್ಲ, ಹುಳ ಹುಪ್ಪಟೆಗಳಿಂದ ತೊಂದರೆ ನಿವಾರಿಸಲು ಮಾತ್ರ. ಕಾಲ ಕಳೆದಂತೆ ಅವುಗಳು ಅಭ್ಯಾಸವಾಗುತ್ತಾ ಹೋಗಿ ಮರ್ಮಾಂಗಕ್ಕೆ ಏನಾದರೂ ಮರೆ ಇಲ್ಲದಿದ್ದರೆ ಸಂಕೋಚ ಪಡುವಂತಹ ಭಾವನೆ ಬೆಳೆಯಿತು. ಇದು ಮುಂದೆ ‘ಮಾನ ಮುಚ್ಚುವ’ ವಸ್ತ್ರ ಧರಿಸಲು ಕಾರಣವಾಯ್ತು. ತೀರಾ ಇತ್ತೀಚಿನ ದಶಕಗಳ ವರೆಗೂ ಹಳ್ಳಿಯ ಹೆಂಗಸರು ಕುಪ್ಪಸವನ್ನು ದಿನನಿತ್ಯ ಧರಿಸುತ್ತಿರಲಿಲ್ಲ. ತಮಿಳುನಾಡಿನ ಹಲವಾರು ಹಳ್ಳಿಗಳಲ್ಲಿ ಮುದುಕಿಯರು ಮೇಲುಡುಗೆ ಧರಿಸದೇ ಬರೇ ಸೀರೆ ಸುತ್ತಿಕೊಂಡು ಓಡಾಡುವುದನ್ನು ನೋಡಬಹುದು. ಹಾಗೆಯೇ ಅಮೆಜಾನ್‌ ಕಾಡುಗಳಲ್ಲಿರುವ ಟ್ರೈಬ್‌ ಮಾನವರು ಇಂದಿಗೂ ಯಾವುದೇ ಉಡುಪು ಧರಿಸುವುದಿಲ್ಲ, ಮತ್ತು ಅವರಿಗೆ ಸಂಕೋಚವೂ ಇಲ್ಲ. ಅಂದರೆ ಇದರರ್ಥ ವಸ್ತ್ರ ಅನ್ನುವುದು ಆಧುನಿಕ ಮಾನವನ ಬಳಕೆಯ ಒಂದು ವಸ್ತು ಮಾತ್ರ. ಅದನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಅನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ.
 

‍ಲೇಖಕರು G

July 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. vasu

    ನಿಮ್ಮಂತೆ ನಮ್ಮಗೌರವಾನ್ವಿತ ಗಂಡು ಸಮಾಜ ಯೋಚಿಸುವುದಾದಲ್ಲಿ,
    ಸನಾತನ ಭಾರತಕ್ಕೆ ಇನ್ನಷ್ಟು ಗೌರವವಲ್ಲವೇ..ಉತ್ತಮ ವೈಚಾರಿಕ ಲೇಖನ.

    ಪ್ರತಿಕ್ರಿಯೆ
  2. Niveditha

    Ellaa vasthragala paadoo ide… So called modernist galige mathra severe meleye kannu. Chudidar haki kkunileya hage katthige dupatta haakuvaaga kaadadiruva edeya pradarshanada mujugara … Edeya mele oppavaagi seragu koorisuva seereya mele mathra yake? Sariyagi udalu baradavara paadu shochaniya haagendu kaalantharadinda ellaroo oppuva oppiruva seereyannu maryadegedu uduge emba hanepattiyadi tharuvudu buddhigedi varthane… Jeans adaroo ashte, long top hakidre comfortable fashion gaagi Short n shortest top hakidre asahya… Hokkalu kanadanthe sontadamele katti bennu sonta kadanthe swalpa udda ravike hakidare ellavoo sariye ennuva common sense severe haliyuvarige dorakali… Ide nanna savinaya prarthane…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: