ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಧ್ಯ…! ನಾನು ದೇವರಾಗಲಿಲ್ಲಪ್ಪಾ!

ರಾಜೇಶ್ವರಿ ಹುಲ್ಲೇನಹಳ್ಳಿ

ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲಿಯೂ ಒಂದಲ್ಲಾ ಒಂದು ಅಪಾಯಗಳಲ್ಲಿ ವಿಸ್ಮಯಕಾರಿಯಾಗಿ ಬಚಾವಾಗಿರುವ ಘಟನೆಗಳು ಜರುಗಿರುತ್ತವೆ. ಒಮ್ಮೊಮ್ಮೆ ಅವು ಅಚ್ಚರಿ, ವಿಸ್ಮಯವೆನಿಸುತ್ತದೆ. ಅಂತಹ ವಿಸ್ಮಯಗಳಲ್ಲಿ ಪ್ರಾಣಕ್ಕೆ , ಜೀವಕ್ಕೆ, ಏನಾದರೂ ತೊಂದರೆಯಾಗದೆ ಉಳಿದು ಬಚಾವಾದಾಗ ಅಬ್ಬಾ ! ಆ ದೇವರ ದಯೆಯಿಂದ ಕೂದಲೆಳೆಯಷ್ಟರಲ್ಲಿ ಬಚಾವಾದೆವು. ಸಧ್ಯ ಆಗುವ ತೊಂದರೆ ತಪ್ಪಿತು ಎನ್ನುತ್ತೇವೆ. ಅಂತಹ ಒಂದಲ್ಲಾ ಒಂದು ಪ್ರಸಂಗಗಳು ಸಾಮಾನ್ಯವಾಗಿ ಎಲ್ಲರ ಬದುಕಲ್ಲೂ ನಡೆದಿರುತ್ತವೆ. ಒಮ್ಮೆ ನನ್ನ ಒಬ್ಬನೇ ತಮ್ಮ ತುಂಬಾ ಚಿಕ್ಕವನಿರುವಾಗ ಅಮ್ಮನೊಂದಿಗೆ ಅಜ್ಜಿಯ ಊರಿಗೆ ಹೋದಾಗ ಹಿರಿಯರ ಕಣ್ತಪ್ಪಿಸಿ ಆಟವಾಡುತ್ತಾ ಮನೆಯ ಹಿಂದಿದ್ದ ಒಂದು ಸೇದೋ ಬಾವಿಗೆ ಇಣುಕಿ ನೋಡುತ್ತಾ ಮುಕ್ಕಾಲು ಭಾಗ ದೇಹ ಬಾಗಿದ್ದು ಇನ್ನೇನು ಕ್ಷಣಾರ್ಧದಲ್ಲಿ ಬಾವಿಯೊಳಗೆ ಮಗುಚಿಕೊಳ್ಳಬೇಕು ದೇವರೇ ಕಳಿಸಿದಂತೆ ಅದನ್ನು ಕಂಡ ಸಂಬಂಧಿಯೊಬ್ಬರು ಓಡಿ ಹೋಗಿಸದ್ದು ಮಾಡದಂತೆ ಒಮ್ಮಗೇ ಬಾಚಿ ತಬ್ಬಿಕೊಂಡು ಬಚಾವು ಮಾಡಿದ ಘಟನೆ. ಒಂದೇ ಒಂದು ಕ್ಷಣ ತಡವಾಗಿದ್ದರೆ ಆಗುತ್ತಿದ್ದ ಅನಾಹುತವನ್ನು ಕಲ್ಪಿಸಿಕೊಂಡು ಅಮ್ಮನ ತವರಿನವರೆಲ್ಲಾ ತತ್ತರಿಸಿ ಹೋಗಿದ್ದರು. ಆಂತೆಯೇ ನಾನೂ ಕೂಡ ಪ್ರಾಣಾಪಾಯದಿಂದ ಬಚಾವಾದ ಹಲವು ಘಟನೆಗಳು ಕಣ್ಮುಂದೆ ತೇಲಿ ಬರುತ್ತವೆ.

ಬಾಲ್ಯದ ರಜಾದಿನಗಳಲ್ಲಿ ಹಾಸದಿಂದ ನಮ್ಮ ಹಳ್ಳಿಗೆ ಹೋಗಿದ್ದಾಗ ಅಲ್ಲಿಂದ ಸುತ್ತ ಮುತ್ತಲಿದ್ದ ನೆಂಟರಿಷ್ಟರ ಹಳ್ಳಿಗಳಿಗೆ ಹೋಗುವುದಾದರೆ ತುಸು ಹತ್ತಿರದ ಹಳ್ಳಿಗಳಿಗೆ ಕಾಲು ನಡಿಗೆ, ದೂರವಾದರೆ ಎತ್ತಿನ ಗಾಡಿಯ ಪಯಣ. ನಾವು ಬಹಳಷ್ಟು ಸಮಯ ಎತ್ತಿನ ಗಾಡಿಯಲ್ಲೇ ಹೋಗಿರುವ ಅನುಭವ. ಹೀಗೆ ಒಮ್ಮೆ ಬೇಸಿಗೆ ರಜೆಯಲ್ಲಿ ನಮ್ಮೂರಿಗೆ ಹೋದಾಗ ಅದೇ ಸಮಯದಲ್ಲಿ ಪಕ್ಕದಲ್ಲಿದ್ದ ನಮ್ಮಜ್ಜಿಯ ಊರಿನ ಗ್ರಾಮದೇವತೆ ಕೋಡಿಯಮ್ಮನ ಜಾತ್ರೆ. ಸಾಮಾನ್ಯವಾಗಿ ಜಾತ್ರೆಗಳು ನಡೆಯುತ್ತಿದ್ದುದೇ ಯುಗಾದಿ ಕಳೆದು ಬೇಸಿಗೆಯಲ್ಲಿ , ಮಕ್ಕಳ ಬೇಸಿಗೆ ರಜೆಯಲ್ಲಿ, ರೈತರ ಬಿಡುವಿನ ಕಾಲದಲ್ಲಿ. ಮೊಮ್ಮಕ್ಕಳಾದ ನಮ್ಮನ್ನು ನಮ್ಮೂರು ಹುಲ್ಲೇನಹಳ್ಳಿ ಯಿಂದ ನಮ್ಮಜ್ಜಿಯ ಊರು ಹೊನ್ನಾವರಕ್ಕೆ ಕರೆದುಕೊಂಡು ಹೋಗಲು ಸೋದರ ಮಾವ ಜೊಡೆತ್ತಿನ ಗಾಡಿ ಹೂಡಿಕೊಂಡು ಬಂದಿದ್ದರು. ನಮ್ಮೂರಿನಿಂದ ಸುಮಾರು ಒಂದೂವರೆ ಮೈಲಿಯಷ್ಟೇ ನಮ್ಮಜ್ಜಿಯ ಊರು. ನಮ್ಮೂರ ಬೋರೆ ಹತ್ತಿ, ಆ ಊರಿನ ಬೋರೆ ಇಳಿದು, ಮಳೆ ಬಂದು ನೀರು ತುಂಬಿದ್ದರೆ ಕೆರೆಯ ಏರಿಯ ಮೇಲೆ ಇಲ್ಲವೆ ನೀರಿಲ್ಲದಿದ್ದರೆ ಕೆರೆಯಂಗಳದಲ್ಲೇ ಹೋಗುತ್ತಿದ್ದರು.

ಹೀಗೇ ಕೆರೆಯಂಗಳ ದಾಟಿ ಊರ ಮುಂದೆ ಹೊಗುವಾಗ ಒಂದು ದೊಡ್ಡ ಕಲ್ಯಾಣಿಯ ಪಕ್ಕದಲ್ಲೇ ಹಾದು ಹೋಗಬೇಕಿತ್ತು. ಕೆರೆಯಲ್ಲಿ ಹೆಚ್ಚು ನೀರಿರದ ಕಾರಣ ಮಾವ ನಮ್ಮನ್ನೆಲ್ಲಾ ಕೂರಿಸಿಕೊಂಡ ಗಾಡಿಯನ್ನು ಕೆರೆಯಂಗಳದಲ್ಲೇ ಹೊಡೆದುಕೊಂಡು ಊರ ಮುಂದಿದ್ದ ಇಂದು ದೊಡ್ಡ ಕಲ್ಯಾಣಿಯ ಪಕ್ಕದಲ್ಲೇ ಹಾದು ಕಲ್ಯಾಣಿಯಿಂದ ಸುಮಾರು ನಾಲ್ಕಾರು ಮಾರು ದೂರವಿದ್ದ ಅಜ್ಜಿಯ ಮನೆಯ ಎದುರಿನ ಮೈದಾನದಲ್ಲಿ ಗಾಡಿ ನಿಲ್ಲಿಸಿ ನೊಗದಿಂದ ಎತ್ತುಗಳನ್ನ ಬಿಚ್ಚಿ ಮೂಕಿಯನ್ನು ಇಳಿಸಬೇಕು..! ಅಷ್ಟರಲ್ಲಿ ಧಡ್ಡನೆ ಗಾಡಿಯ ಒಂದು ಚಕ್ರ ಕಳಚಿ ಗಾಡಿ ಒಂದೆಡೆ ವಾಲಿದೊಡನೆ ಗಾಡಿಯಲ್ಲಿದ್ದ ನಾವೆಲ್ಲ ಒಂದೇ ಬದಿಗೆ ವಾಲಿ ಒಬ್ಬರ ಮೇಲೊಬ್ಬರು ಬಿದ್ದಂತಾಗಿ ಎಲ್ಲರೂ ಹೋ ಎಂದು ಕಿರುಚಿಕೊಂಡೆವು. ಬೀದಿಯ ಜನರೆಲ್ಲ ಕೂಗುತ್ತಾ ಓಡಿ ಬಂದರು . ಇದನ್ನು ಕಂಡ ಅಜ್ಜಿ ಬಿದ್ದ ಮಕ್ಳು ಮೊಮ್ಮಕ್ಕಳನ್ನು ನೋಡಿ ಜೋರಾಗಿ ಬೊಬ್ಬೆ ಹಾಕುವಾಗ ಎಲ್ಲರೂ ಗಾಡಿಯ ಬಳಿಗೆ ಓಡೋಡಿ ಬಂದು ಎಲ್ರನ್ನೂ ಇಳಿಸಿಕೊಂಡು ಯಾರಿಗೂ ಪೆಟ್ಟಾಗಿಲ್ಲವೆಂದು ಖಾತ್ರಿ ಮಾಡಿಕೊಂಡ ಮೇಲೆ ಚಕ್ರ ಕಳಚಿ ಹೋಗಲು ಕಾರಣವೇನೆಂದು ನೋಡಿದರೆ ಗಾಡಿಯ ಒಂದು ಚಕ್ರದಲ್ಲಿ ಕಡಾಣಿಯೇ ಇರಲಿಲ್ಲ. “ಅಬ್ಬಾ! ಅಯ್ಯೋ ಬೋರಮ್ಮಕ್ಕಾ ಯಾವುದೋ ಪುಣ್ಯ ಎಲ್ಲಾರ್ನೂ ಕಾಪಾಡೈತೆ ಅಪ್ಪಿ ತಪ್ಪಿ ಕಲ್ಯಾಣಿತವ ಬರ್ವಾಗ ಕಡಾಣಿ ಇಲ್ದಲೆಯ ಚಕ್ರ ಕಳಿಚ್ಕ್ಯಂಡ್ ಬಿದ್ದಿದ್ರೆ ಏನಾಗಬೇಕಾಗಿತ್ತು ಇವತ್ತು ” ಎನ್ನುತ್ತಾ ಎಲ್ಲರೂ ಅಚ್ಚರಿ ಹಾಗೂ ಭಯದಿಂದ ನಡುಗಿ ಹೋದರು.

ಪಾಪ ! ಅಕ್ಕ ತಂಗಿಯರ ಮಕ್ಕಳನ್ನೆಲ್ಲ ಜಾತ್ರೆಗೆಂದು ಎತ್ತಿನ ಗಾಡಿಯಲ್ಲಿ ಕರೆತಂದ ಮಾವನ ಮುಖ ಬೆವೆತು ಹೋಗಿತ್ತು. ಇಡೀ ಊರಿಗೂರೇ ಬಂದು ಸೇರಿದರು. ಎಲ್ಲರೂ “ಅಯ್ಯೋ ದೇವ್ರೇ ಮಕ್ಳು ಮರಿ ಎಲ್ಲಾ ಇದ್ವು ಏನಾರ ಎಚ್ಚು ಕಮ್ಮಿ ಆಗಿದ್ರೆ ಏನು ಗತಿ. ಯಾವುದೋ ಪುಣ್ಯ ಆ ತಾಯಿ ಕೋಡಮ್ಮನೇ ಕಾಪಾಡಿದ್ಲು ಬುಡು, ನಾಳಿಕ್ ಜಾತ್ರೆ ಇಟ್ಕಂಡು ಏನಾರ ಆಗಿದ್ರೆ ಏನ್ಮಾಡ್ಬೇಕಾಗಿತ್ತು? ಏನೋ ಆತಾಯಿ ದಯೆ” ಎಂದರು. ಅಂತೂ ನಾವೆಲ್ಲರೂ ಎತ್ತಿನ ಗಾಡಿಯ ಒಂದು ಚಕ್ರದ ಕಡಾಣಿಯಿಲ್ಲದೆ ಒಂದೂರಿನಿಂದ ಒಂದೂರಿಗೆ ಪಯಣಿಸಿ ಯಾವುದೇ ಅನಾಹುತ ಪ್ರಾಣಾಪಾಯವಿಲ್ಲದೆ ಬಂದದ್ದು ಒಂದು ವಿಸ್ಮಯವೇ ಸರಿ!. ಹೀಗೊಮ್ಮೆ ಸಾವಿನಂಚಿನಿಂದ ಪಾರಾಗಿದ್ದೆವು. “ಕಡಾಣಿ ಇಲ್ಲ ಅಂತ ಗೊತ್ತಾಗಿದ್ರೆ ಕಡಾಣಿ ಹಾಕ್ಕಂಡು ಬರ್ಬೌದಾಗಿತ್ತು ” ಅದ್ಕೆಯಾ ಗಾಡಿ ಹೂಡೋ ಮನ್ಸ ಗಾಡಿ ಹೂಡೋ ಮೊದ್ಲು ಎತ್ತು ಗಾಡಿನೆಲ್ಲಾ ಒಂದ್ಸತಿ ಸರಿಯಾಗಿ ನೋಡ್ಕ್ಯಬೇಕು., ಗಾಡಿ ಚಕ್ರಕ್ಕೆ ಎಣ್ಣೆ ಹಾಕೈತಾ ಇಲ್ಲವಾ, ಎತ್ತಿನ ಕೊರಳ ಜೊತ್ಗೆ ಸರ್ಯಾಗ್ಯವೋ ಇಲ್ವೋ ಅಂತ ನೋಡ್ಕ್ಯಂಡು ಗಾಡಿ ಹೂಡ್ಬೇಕು” ಎಂದರು ಮತ್ತೊಬ್ಬ ಹಿರಿಯರು.

ಈ ಘಟನೆಯನ್ನು ನೆನೆದಾಗ ಇದೇ ರೀತಿ ಯುದ್ಧ ಭೂಮಿಯಲ್ಲಿ ದಶರಥನ ರಥದ ಚಕ್ರಕ್ಕೆ ಕಡಾಣಿ ಇಲ್ಲದಿರುವಾಗ ಕೈಕೇಯಿ ತನ್ನ ಕೈ ಬೆರಳನ್ನೇ ಕಡಾಣಿಯಂತೆ ಹಿಡಿದ ಸಲುವಾಗಿ ದಶರಥ ಆಕೆಗೆ ತನಗಿಷ್ಟವಾದ ಮೂರು ವರಗಳನ್ನು ಕೇಳೆಂದು ಹೇಳಿದಾಗ ” ಸೂಕ್ತ ಸಮಯ ಬಂದಾಗ ಪಡೆಯುವೆನೆಂದು” ಕೈಕೇಯಿ ಹೇಳಿದ್ದಲ್ಲವೇ?!. ಅದೇ “ಕಡಾಣಿಯ ವರ ” , ರಾಮ ಸೀತೆಯರಿಗೆ ವನವಾಸದ ಶಾಪವಾಗಿ, ದಶರಥನ ಸಾವಿಗೆ ಕಾರಣವಾಗಿ, ರಾಮಾಯಣಕ್ಕೆ ಮೂಲವಾಯಿತಲ್ಲವೇ ?. ಕಡಾಣಿಯಿಲ್ಲವೆಂದ ಮೇಲೆ ಗಾಡಿ ಅಥವಾ ರಥ ಚಲಸಿದರೆ ಮುರಿಯದಿರುವುದೇ?. ಹೌದು ಯಾವುದೇ ದೊಡ್ಡ ರಥ ಇಲ್ಲವೇ ಗಾಡಿಗೆ ಪುಟ್ಟದೊಂದು ಕಡಾಣಿಯ ಪ್ರಾಮುಖ್ಯತೆ ಅದೆಷ್ಟೊಂದು!. ಅಪ್ಪಾ ………ಎಂದು ಜೋರಾಗಿ ಕೂಗಿದೆ ಕಣ್ಣು ಕತ್ತಲಿಟ್ಟು ಜೋಲಿ ಹೊಡೆದಂತಾಗಿ ಪಕ್ಕದಲ್ಲಿದ್ದವರನ್ನು ಗಟ್ಟಿಯಾಗಿ ಹಿಡಿದುಕೊಂಡದ್ದಷ್ಟೇ , ಪಕ್ಕದಲ್ಲಿದ್ದವರು ಕೂಡ ಕೂಗಿಕೊಂಡರು ಮುಂದೆ ಸಾಗುತ್ತಿದ್ದವರು ಒಮ್ಮೆಗೇ ಗಾಭರಿಯಿಂದ ನಿಂತುಬಿಟ್ಟರು. ಹಿಂದೆ ಬರುತ್ತಿದ್ದವರು ಓಡೋಡಿ ಹತ್ತಿರ ಬಂದರು. ಅಯ್ಯೋ ಏನಾಯ್ತು? ಏನಾಯ್ತು? ಎಂಬ ಉಧ್ಗಾರಗಳು! ಎಲ್ಲರ ಬಾಯಲ್ಲಿ . ಕ್ಷಣಾರ್ಧದಲ್ಲಿ ನಡೆದ ಘಟನೆ ಎಲ್ಲರಿಗೂ ಗಾಬರಿ ತರಿಸಿತ್ತು. ಪಕ್ಕದಲ್ಲಿದ್ದವರು ಕುಸಿಯುತ್ತಿರುವ ನನ್ನನ್ನು ಕೆಳಗೆ ಕೂರಿಸಿದರು. ಎಲ್ಲರೂ ನನ್ನೆಡೆಗೆ ಓಡೋಡಿ ಬಂದರು. ತಲೆಯ ಮೇಲೆ ಧಡ್ ಎಂದು ಬಿದ್ದ ಏಟಿಗೆ ತತ್ತರಿಸಿ ಹೋಗಿ ತಲೆ ಜುಂ ಎಂದಿದ್ದಷ್ಟೇ!. ಒಂದೇ ಒಂದು ಕ್ಷಣದಲ್ಲಿ ಏನಾಯಿತೆಂದು ಊಹಿಸಲೂ ಆಗಲಿಲ್ಲ ” ತಲೆಗೆ ನೀರು ತಟ್ಟಿ , ಎನಾಗ್ತಿದೆ ಸ್ವಲ್ಪ ಕೂತ್ಕೊಳಿ, ಸುಧಾರಿಸ್ಕೊಳಿ ನೀರು ಕುಡಿಯಿರಿ ” ಎಂಬ ಹಲವರ ಮಾತುಗಳು ಕಿವಿಗೆ ಬೀಳುತ್ತಿದ್ದರೂ ಆಗುತ್ತಿದ್ದ ನೋವಿಗೆ ಅವ್ಯಾವೂ ನನ್ನ ಗಮನಕ್ಕೆ ಬಾರದಂತಾಗಿತ್ತು.

ಅಯ್ಯೋ ಅಪ್ಪಾ…. ಅಪ್ಪಾ….. ಎಂಬ ಸಂಕಟದ ಶಬ್ಧ ಮಾತ್ರ ಬಾಯಿಂದ ಬರುತ್ತಿತ್ತು. “ಅಯ್ಯೋ ಪಾಪ , ತುಂಬಾ ಏಟಾಗಿದೆಯೇನೋ “ಎಂದರೆ ಕೆಲವರು “ಅಯ್ಯೋ ರಕ್ತ ಏನಾದರೂ ಬರುತ್ತಿದೆಯಾ ನೋಡಿ” ಎಂದು ತಲೆಗೂದಲನ್ನು ಸರಿಸಿ ಏಟು ಬಿದ್ದ ಜಾಗವನ್ನು ಪರಿಶೀಲಿಸಿದರು. ರಕ್ತ ಬಂದಿರಲಿಲ್ಲ ಏಟು ಬಿದ್ದ ಜಾಗದಲ್ಲಿ ಉಬ್ಬಿಕೊಂಡಿತ್ತು. ಅಲ್ಲಿಯೇ ಇದ್ದ ಮೈಸೂರಿನ ಗುಂಪಿನಲ್ಲಿದ್ದ ಡಾಕ್ಟರೊಬ್ಬರು ಪರೀಕ್ಷಿಸಿ “ಏನೂ ಆಗುವುದಿಲ್ಲ ಸ್ವಲ್ಪ ಒದ್ದೆ ಬಟ್ಟೆ ಹಾಕಿದರೆ ಸಾಕು , ಎಂದು ತಮ್ಮೊಂದಿಗೆ ತಂದಿದ್ದ ಒಂದು pain killer tablet ನುಂಗಿಸಿದರು ಅಲ್ಲಿಯೇ ಇದ್ದ ತೋಟದ ಯಜಮಾನರು ಮಾತ್ರ “ಏನಿಲ್ಲಬಿಡಿ ಇದೆಲ್ಲಾ ಸಣ್ಣ ಪೆಟ್ಟು ಏನಾಗಲ್ಲ ಇದುವರೆಗೆ ಹಲವಾರು ಮಂದಿ ಬಂದಿದ್ದಾರೆ ಯಾರಿಗೂ ಹೀಗಾಗಿಲ್ಲ, ಏನೋ ಅನಿರೀಕ್ಷಿತ ಬಿಡಿ” ಎಂದು ನಿರ್ಲಿಪ್ತವಾಗಿ ನುಡಿದರು. ಏಕೆಂದರೆ ಇಂತಹದ್ದೊಂದು ಘಟನೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡರೆ ನಾಳೆ ಬರುವ ಪ್ರವಾಸಿಗರು ಕಡಿಮೆಯಾಗಿ ಅವರ ಬ್ಯುಸಿನೆಸ್ಸಿಗೆ ಏಟು ಬೀಳಬಹುದೆಂಬ ಚಾಣಾಕ್ಷತೆ!. ತೋಟ ಸುತ್ತುವಿಕೆಯನ್ನು ಮೊಟಕುಗೊಳಿಸಿ ಎಲ್ಲರೂ ತೋಟದ ಮನೆಗೆ ಹಿಂದಿರುಗಿದೆವು.

ಈ ಘಟನೆ ನಡೆದದ್ದು ತುಮಕೂರಿನ ಕ್ಯಾತ್ಸಂದ್ರದ ಬಳಿ ಇರುವ ಅಜ್ಜಿ ಮನೆಯೆಂದೇ ಕರೆಸಿಕೊಳ್ಳುವ “ಧಾತ್ರಿ ವನ” ವೆಂಬ ರೆಸಾರ್ಟಿನಲ್ಲಿ. ನಾವು ಅಕ್ಕತಂಗಿಯರು ಹಾಗೂ ಗೆಳತಿ ಕುಸುಮಾಳ ಬಳಗ ಒಂದು ದಿನದ ಪ್ರವಾಸ ಹೋಗಿದ್ದೆವು. ಅದೊಂದು ಹೋಮ ಹವನ ಮಾಡುವ ಬ್ರಾಹ್ಮಣರ ಹಳೆಯ ಕಾಲದ ಮನೆಯಿರುವ ತೆಂಗು ಮತ್ತು ಅಡಿಕೆಯ ತೋಟ. ಅಲ್ಲೊಂದು ಅವರ ಪೂರ್ವಜರು ಕಟ್ಟಿ ವಾಸಿಸಿದಂತಹ ಹಳೆಯದಾದ ಹಳ್ಳಿ ಮನೆ. “ಅಜ್ಜಿ ಮನೆಯೆಂದೂ ಧಾತ್ರಿ ವನವೆಂದೂ” ಕರೆಯುವರು. ಅವರ ಪೂರ್ವಜರು ಅಲ್ಲಿ ಹೋಮ ಹವನಾದಿಗಳನ್ನು ಮಾಡುತ್ತಿದ್ದರಂತೆ. ಮನೆಯ ಮುಂದೆ ಹೋಮ ಹವನದ ಮಂಟಪ ಕೂಡ ಇದೆ. ನಗರ ಪ್ರದೇಶಗಳಲ್ಲಿ ಅದರಲ್ಲೂ ಬೆಂಗಳೂರು ಮೈಸೂರು ನಗರಗಳಲ್ಲಿ ವಾಸಿಸುವ ನಗರಿಗರು ಹಳ್ಳಿಯ ವಾತಾವರಣ ಹಾಗೂ ಅಲ್ಲಿ ಸಿಗುವ ದೇಸೀ ವೆಜಿಟೇರಿಯನ್ ಊಟದ ಸವಿ ಹಾಗೂ ದೇಸೀ ಹಾಗೂ ಗ್ರಾಮೀಣ ಆಟಗಳನ್ನು ಆಡಿ ಸಂಭ್ರಮಿಸಲು ಅಲ್ಲಿಗೆ ಹೋಗುತ್ತಿದ್ದರು. ಅದೇ ಅದರ ವಿಶೇಷ ಆಕರ್ಷಣೆ. ನಾವು ಏನೋ ವಿಶೇಷವೆಂದು ಹೋದೆವು. ತೋಟ ನೋಡಿದೊಡನೆ ಜೊತೆಗೆ ಬಂದ ಗೆಳತಿಯರು ಈ ತೋಟ ನೋಡಕ್ಕೆ ಇಲ್ಲಿಗೆ ಬರಬೇಕಿತ್ತಾ ?ನಮ್ಮ ತೋಟಗಳೇ ಇರಲಿಲ್ಲವಾ? ಎಂದು ಸೋ ರಾಗ ಎಳೆದದ್ದೂ ಉಬೆಳಗ್ಗೆ ಹೋದೊಡನೆ ಎಲ್ಲ ಅತಿಥಿಗಳನ್ನು ಸ್ವಾಗತಿಸಿ, ದೇವರ ಮುಂದೆ ಒಂದು ಪೂಜೆ ಮಾಡಿ ನಮ್ಮಲ್ಲರಿಗೂ ಮಂಗಳಾರತಿ ಕೊಟ್ಟು ಮೊದಲಿಗೆ ಒಂದು ಕಷಾಯವನ್ನು ಕುಡಿಯಲು ಕೊಟ್ಟು, ನಂತರ ಅಡಿಕೆ ಪಟ್ಟೆಯ ಎಲೆಗಳಲ್ಲಿ ದೇಸೀ ಹಾಗೂ ಆರೋಗ್ಯದಾಯಕವಾದ ತಿಂಡಿಯನ್ನು ಹಂತ ಹಂತವಾಗಿ ಬಡಿಸಿ ಅದರ ತಯಾರಿ, ವಿಶೇಷ, ಉಪಯೋಗ ಎಲ್ಲವನ್ನೂ ತಿಳಿಸುತ್ತಾ ಹೊಟ್ಟೆ ತುಂಬಾ ಬಡಿಸಿ ನಂತರ ತೋಟವನ್ನು ಒಂದು ಸುತ್ತು ಹಾಕಲು ಜೊತೆಗೆ ಕರೆದೊಯ್ದರು. ಹೀಗೆ ಒಬ್ಬರ ಹಿಂದೆ ಒಬ್ಬರು ಮಾತನಾಡುತ್ತಾ ಸಾಗುತ್ತಿರುವಾಗ ದೊಡ್ಡದೊಂದು ತೆಂಗಿನ ಹಸಿ ಹೆಡೆ ಮೊಟ್ಟೆಯೊಂದು ಮರದಿಂದ ನನಗಾಗಿಯೇ ಕಾದು ಕುಳಿತಿದ್ದಂತೆ ದೊಪ್ಪನೆ ತಲೆಯ ಮೇಲೆ ಬೀಳುವುದೆ! ಹೆಡೆಯ ಭಾಗ ನನ್ನ ತಲೆಯ ಮೇಲೆ ಬಿದ್ದರೆ ನನ್ನೊಂದಿಗೇ ಬರುತ್ತಿದ್ದ ನಿರುಪಮಾಳ ಕೈ ಮೇಲೆ ಹೆಡೆಮೊಟ್ಟೆಯ ನಡು ಭಾಗ ಕುಸುಮಾಳ ತುಟಿಯ ಮೇಲೆ ತುದಿ ಬಿದ್ದು, ಅವರಿಗೂ ತುಸು ಪೆಟ್ಟಾಯ್ತು. ತೋಟದಿಂದ ಮನೆಗೆ ಹಿಂದಿರುಗುವಷ್ಟರಲ್ಲಿ ಅಲ್ಲಿಯ ಕೆಲಸಗಾರರಿಗೆಲ್ಲಾ ಸುದ್ಧಿ ಮುಟ್ಟಿ ಗುಸು ಗುಸು ಪಿಸು ಪಿಸು ಶುರುವಾಗಿತ್ತು. ಎಲ್ಲರೂ ಏಟು ಬಿದ್ದವರನ್ನು ನೋಡುವ ಕುತೂಹಲದಲ್ಲಿದ್ದರು.

ಎಲ್ಲರೊಂದಿಗೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗ ಅಡುಗೆ ಮಾಡುವವರು ಬಡಿಸುವವರೆಲ್ಲಾ ಒಬ್ಬರಿಗೊಬ್ಬರು ಗುಸು ಗುಸು, ಪಿಸು ಪಿಸು ಜೊತೆಗೆ ” ಅಯ್ಯೋಪಾಪ”. ಎಂಬ ಪದ ಬಳಕೆಯೊಂದಿಗೆ ಬಡಿಸಲು ಬಂದ ಒಬ್ಬೊಬ್ಬರೂ ಯಾರಿಗೆ ಹಂಗಾಗಿದ್ದು? ಎಲ್ಲರೂ ಎಂದರೆ ನನ್ನೆಡೆಗೆ ತೋರಿಸಿದರು. ಬಂದವರೇ ನಿಮಗಾ ಹಂಗಾಗಿದ್ದು, ಪಾಪ ಚನ್ನಾಗಿದಿರಾ? ಹೆಂಗಾಯ್ತು? ಒಂಚೂರು ನೋಡ್ಕಂಡು ಹೋಗ್ಬೇಕಾಗಿತ್ತು ಪಾಪ ಬಿಡಿ” ಎಂದರೆ ಮತ್ತೊಬ್ಬರು “ಅಯ್ಯೋ ನೋಡ್ಕಂಡು ಓಗ್ಬೇಕಾಗಿತ್ತು ಅಂದ್ರೆ ಅವ್ರೇನ್ ಜಾರಿ ಬಿದ್ದವ್ರಾ? ಮ್ಯಾಲಿಂದ ಎಡೆಮಟ್ಟೆ ಬೀಳುತ್ತೆ ಅಂತ ಅವ್ರಿಗೇನಾನ ಕನ್ಸ್ ಬಿದ್ದಿತ್ತಾ ನಡಿ ನಡಿ” ,ಎಂದು ಮತ್ತೊಬ್ಬರೆಂದಾಗ ” ಅಲ್ಲಾ ಅದು ತನೆಯ ಆಗ್ಲೇಯ ಬೀಳ್ಬೇಕಾ?ಅಯ್ಯೋ ಆ ದೇವ್ರೇ ಕಾಪಾಡವ್ನೆ. ಏನೋ ಯಾರ್ದೋ ಪುಣ್ಯ ಇರ್ಬೇಕು ಬುಡಿ ಬೆಳಗ್ಗೆ ಯಾರ ಮಕ ನೋಡಿದ್ರಿ?.” ಹೀಗೆ ಹಲವರ ಅನುಕಂಪ ಕರುಣೆ ನನ್ನ ಮೇಲೆ ಬೀಳುತ್ತಿತ್ತು. ಮೂಲೆಯಲಿ ಹೋಗಿ ನಿಂತು ಒಬ್ಬರಿಗೊಬ್ಬರು ನನ್ನೆಡೆಗೆ ತೋರಿಸಿಕೊಂಡು ಅನುಕಂಪಿಸುತ್ತಿದ್ದರು . ಹಲವರ ಮುಖದಲ್ಲಿ ಅದೇನೋ ದುಗುಡ ಏನೋ ಅನಾಹುತದ ಸಂಕೇತ, ಏನೋ ಆಪತ್ತಿನ ಸೂಚನೆ ಎಂಬಂತೆ ಆತಂಕದ ಮುಖ ಹೊತ್ತು ಗುಸು ಗುಸು ಪಿಸು ಪಿಸು ಮಾತುಗಳು. ಊಟ ಮುಗಿಸಿ ಕೈ ತೊಳೆಯಲು ಹೋದಾಗ ಒಂದಿಬ್ಬರು “ಜೋಪಾನ ಯಾವ್ದಾದ್ರೂ ದೇವ್ರಿಗೆ ಹೋಗಿ” ಎಂದರು “ಯಾಕೆ ” ಎಂದೆ ” ಇಲ್ಲ ಹಿಂಗಾಗ್ಬಾರ್ದು ಇದು ಅಪಶಕುನ ಹೆದ್ರುಕಬೇಡಿ ದೇವಸ್ಥಾನಕ್ಕೆ ಹೋಗಿ ಬಿಡಿ ಏನೂ ಆಗಲ್ಲ” ಎಂದರು ಮತ್ತೊಬ್ಬರು “ಅಯ್ಯೋ ಇಲ್ಲ ಬಿಡಿ ಇದು ಒಳ್ಳೆ ಸೂಚನೆ ನಿಮಗೇನೋ ಒಳ್ಳೇದು ಕಾದೈತೆ, ಎಡೆ ಮೊಟ್ಟೆ ಬಿದ್ದು ಬದುಕಿದ್ರೆ ಅದೃಷ್ಟ ಎಂದರು. ಹೌದಲ್ಲವಾ? ಎತ್ತರದ ತೆಂಗಿನ ಮರದಿಂದ ಹೆಡಮೊಟ್ಟೆ ಬಿದ್ದು ಸಾಯದೆ ಬದುಕುವುದೇ ಅದೃಷ್ಟವಿರಬೇಕು! ಎನಿಸಿತು ನನಗೆ ಮತ್ತೊಬ್ಬರು “ಇದೇನೋ ಪುಣ್ಯ ಬಿಡಿ ನಿಮ್ಮ ಹೆತ್ತೋರ ಪುಣ್ಯದಿಂದ ಪಾರಾಗಿದೀರ.” ಎಂದರು.

ಒಟ್ಟಾರೆಯಾಗಿ ಅಲ್ಲಿಯ ಅಂದಿನ ಕೇಂದ್ರ ಬಿಂದು ಅಲ್ಲಲ್ಲಾ ಅನುಕಂಪಿತ ಕೇಂದ್ರ ಬಿಂದು ನಾನಾಗಿದ್ದೆ!. ಎಲ್ಲರ ಅನುಕಂಪದ ನೋಟ ನನ್ನನ್ನು ಕೊಂದಂತಾಗಿ ಒಳಗೆ ನೋವಿದ್ದರೂ ಸುಧಾರಸಿಕೊಂಡು ತುಸು ಗೆಲುವಾದಂತೆ ನಟಿಸಿದೆ. ಊಟದ ನಂತರ ಆಡಿಸಿದ ರಾಗಿ ಬೀಸೋ , ನೀರು ಸೇದೋ, ಸ್ಥಳದಲ್ಲೇ ದೊರೆಯುವ ಕಸದಿಂದ ರಸವನ್ನಾಗಿಸುವ ನಮ್ಮ ಸೃಜನಶೀಲತೆಯನ್ನು ತೋರುವ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನಗಳನ್ನು ಪಡೆದೆ. ಈ ಘಟನೆಯಿಂದ ಗತಿಸಿ ಹೋದ ನನ್ನ ಬಾಲ್ಯದ ಗೆಳತಿಯ ಸಾವಿನ ಘಟನೆ ನನ್ನ ಕಣ್ಣ ಮುಂದೆ ತೇಲಿ ಬಂತು.

ನಾನಾಗ ಹಾಸನದ ವಾಣಿವಿಲಾಸ ಶಾಲೆಯಲ್ಲಿ ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿದ್ದೆ. ಅದೊಂದು ದಿನ ಶಾಲೆಯಲ್ಲಿರುವಾಗಲೇ ವಿಪರೀತ ಜೋರಿನ ಗುಡುಗು ಸಿಡಿಲಿನ ಅಬ್ಬರದ ಮಳೆ. ಹೇಗೋ ತುಸು ಕಡಿಮೆಯಾದಂತೆ ನಾವು ಒದ್ದೆಯಾದರೂ ಸರಿಯೆ ಪುಸ್ತಕ ಬ್ಯಾಗು ಒದ್ದೆಯಾಗಬಾರದೆಂದು ಫ್ರಾಕಿನಿಂದ ಬ್ಯಾಗ್ ಮುಚ್ಚಿಕೊಂಡು ಹತ್ತಿರವೇ ಇದ್ದ ಮನೆ ತಲುಪಿದೆವು. ಮಳೆ ನಿಲ್ಲಲೇ ಇಲ್ಲ ಮಳೆಯ ಅಬ್ಬರ ಜೋರಾಯ್ತು ಗಾಳಿ ಸುಯ್ ಸುಯ್ ಎಂದು ಬೀಸಲಾರಂಭಿಸಿ ಗಿಡ ಮರಗಳೆಲ್ಲಾ ಜೋರಾಗಿ ಅಲ್ಲಾಡತೊಡಗಿದವು. ಇಡೀ ರಾತ್ರಿ ಮಳೆ ಬರುತ್ತಲೇ ಇತ್ತು. ಬೆಳಾಗಾದರೆ ಅಕ್ಕ ಪಕ್ಕದ ಹಿರಿಯರೆಲ್ಲಾ “ಅಯ್ಯೋ ಪಾಪ ತೆಂಗಿನ ಮರ ಬಿದ್ದು ಒಂದು ಹುಡುಗಿ ಸತ್ತು ಹೋಯ್ತಂತೆ ಅದು ಬೃಂದಾವನ ಹೋಟ್ಲೋರ್ ಮನೆ ಹುಡುಗಿ ಅಂತೆ” ಅಂದೊಡನೆ ಅಯ್ಯೋ ಅದು ನಮ್ಮ ಶಾಲೆಯಲ್ಲಿ ನಮ್ಮೊಂದಿಗೆ ಕಲಿಯುತ್ತಿದ್ದ ಜಯಂತಿ ಎಂದು ತಿಳಿದು ತುಂಬಾ ದುಖಃವಾಯಿತು. ಅವಳು ತುಂಬಾ ಜಾಣೆ ಹೇಳಿ ಕೇಳಿ ಮಂಗಳೂರಿನ ಮೂಲದವಳು. ಆಗೆಲ್ಲ ಹೆಚ್ಚಿನ ಮಾಧ್ಯಮಗಳು ಇರಲಿಲ್ಲ ಯಾವುದೇ ಸುದ್ಧಿ ಥಟ್ಟನೆ ತಿಳಿಯಲು. ಆದರೆ ಊರಿನ ವಿಸ್ತೀರ್ಣವೇ ಕಡಿಮೆಯಾದ್ದರಿಂದ ಬೇಗನೆ ತಿಳಿಯುತ್ತಿತ್ತು. ಅವಳು ವಾಣಿ ವಿಲಾಸ ಶಾಲೆಯಿಂದ ಇಂದಿನ B.E.O ಆಫೀಸಿನಿಂದ ಸಿಟಿ ಬಸ್ ಸ್ಟ್ಯಾಂಡಿನ ಮೇಲಿನ ಕಸ್ತೂರ ಬಾ ರೋಡಿನಿಂದ (ಇಂದಿನ ಕಲ್ಯಾಣ್ ಜ್ಯುವೆಲ್ಲರ್ಸ ಬಳಿ ಇದ್ದ ) ಅವರ ಮನೆಗೆ ನಡೆದುಕೊಂಡು ಹೋಗುವಾಗ ಬಸ್ ಸ್ಟ್ಯಾಂಡಿನ ಮೇಲಿನ ರಸ್ತೆಯಲ್ಲಿದ್ದ ತೆಂಗಿನ ಮರವೊಂದು ಆ ಪುಟ್ಟ ಜೀವದ ತಲೆಯ ಮೇಲೆ ಬಿದ್ದು ಅಸು ನೀಗಿದ್ದಳಶಾಲೆಗೆ ಹೋದರೆ ಅದೇ ಮಾತು. ಆಕೆ ತುಂಬಾ ಜಾಣೆ ಗುರುಗಳ ಅಚ್ಚುಮೆಚ್ಚಿನ ಶಿಷ್ಯೆ ಗುರುಗಳಿಗೆ ಅವಳ ಕುರಿತು ತುಂಬಾ ಹೆಮ್ಮೆಯಿತ್ತು .

ನಮ್ಮ ಶಾಲೆಯ ಟೀಚರ್ ರಮಾದೇವಿಯವರ ಕಣ್ಣಲ್ಲಿ ನೀರು ತುಂಬಿತ್ತು ತರಗತಿಯಲ್ಲಿ ದುಖಃ ದಿಂದಲೇ ಅವಳ ಗುಣಗಾನ ಮಾಡಿದರು . ಯಾವುದೇ ಗುರುಗಳ ಮೆಚ್ಚುಗೆ ಗಳಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಜಯಂತಿಯ ಕುಟುಂಬದ್ದು ಮೂಲತಹ ಮಂಗಳೂರು . ಈಗಿನ ಕಲ್ಯಾಣ್ ಜ್ಯುವೆಲರ್ಸ್ ಇರುವ ಕಾರ್ನರಿನಲ್ಲಿ ಅವರ ಕುಟುಂಬ ಬೃಂದಾವನ ಹೋಟೆಲ್ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದರು. ಹೋಟೆಲಿನ ಹಿಂಬದಿಯಲ್ಲಿಯೇ ಹೋಟೆಲಿಗೇ ಅಂಟಿಕೊಂಡಂತೆ ಪಕ್ಕದ ಬೀದಿಗೆ ಮುಖವಾಗಿ ಅವರ ಮನೆಯಿತ್ತು. ಅದು ದೊಡ್ಡ ಗರಡಿ ಬೀದಿ. ಅವರ ಹೋಟೆಲಿಗೆ ನಮ್ಮ ಅಜ್ಜಿ ಮನೆಯಿಂದ ಹಾಲು ಕೊಳ್ಳುತ್ತಿದ್ದರು. ಆ ಸಾವಿನ ಕುರಿತು ಒಬ್ಬೊಬ್ಬರದು ಒಂದೊಂದು ಮಾತು. “ಅಯ್ಯೋ ಪಾಪ ಪುಟ್ಟ ಹುಡುಗಿ ಆ ದೇವರಿಗೆ ಕಣ್ಣಿಲ್ಲ. ಇಂಥಾ ಸಣ್ಣ ಮಕ್ಕಳನ್ನ ಬಲಿ ತಗೋಬೇಕಾ, ಪಾಪಿ ದೇವರು” ಎಂದು ಒಬ್ಬರೆಂದರೆ, “ಆ ಹುಡುಗಿ ಪುಣ್ಯವಂತೆ ತೆಂಗಿನ ಮರ ಬಿದ್ದು ಸತ್ತರೆ, ದೇವರಾಗ್ತಾರಂತೆ” ಎಂದು ಹೇಳುತ್ತಿದ್ದರು ಮತ್ತೊಬ್ಬರು. ಅವರ ಕುಟುಂಬವನ್ನು ಸಮಾಧಾನಿಸಲು ಈ ಮಾತಿರಬಹುದು. ಮರ ಬಿದ್ದರೆ ಮರು ಬದುಕುಂಟೇ?.ಬದುಕಿದರೂ ಅಂಗಾಂಗಳನ್ನು ಕಳೆದುಕೊಂಡು ಊನವಾಗಿ ಪರರಿಗೆ ಭಾರವಾಗುವ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಒಮ್ಮೆಗೇ ಹೋದರೆ ಒಳಿತು ಎಂಬ ಕಾರಣದಿಂದ ಹೀಗೆ ಹೇಳುತ್ತಿದ್ದರು ಎನಿಸುತ್ತದೆಯಲ್ಲವೆ?. ಏನಾದರಾಗಲಿ ಬಾಲ್ಯದಲ್ಲಿನ ಅವಳ ಸಾವು ಶಾಲೆಯ ಶಿಕ್ಷಕರನ್ನೊಳಗೊಂಡು ಎಲ್ಲ ಮಕ್ಕಳನ್ನೂ ಕಣ್ಣೀರ ಕಡಲಲ್ಲಿ ತೇಲಿಸಿತ್ತು. ಈಗಲೂ ಅವಳ ಬಟ್ಟಲು ಕಣ್ಣುಗಳು ಗುಂಗುರು ಕೂದಲಿನ ಎರಡು ಜಡೆ ನನ್ನ ಕಣ್ಣಮುಂದೆ ಬರುತ್ತದೆ.

ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಯಾರೋ ಮೇಲಿಟ್ಟ ಸೂಟ್ ಕೇಸ್ ನನ್ನ ತಲೆಯ ಮೇಲೆ ಬಿದ್ದಿದ್ದು ಕೂಡ ನೆನಪಾಯ್ತು. “ಆಯಸ್ಸು ಗಟ್ಟಿ ಇದ್ರೆ ತಲೆ ಮೇಲೆ ಕಲ್ಲು ಎತ್ತಾಕಿದ್ರೂ ಸಾಯಲ್ವಂತೆ” ಎಂಬ ಮಾತು ಸತ್ಯವೆನಿಸಿತು. ತೆಂಗಿನ ಮರ ತಲೆಯ ಮೇಲೆ ಬಿದ್ದುಗೆಳತಿ ಸಾವನ್ನಪ್ಪಿದಾಗ, ಯಾರೋ ಒಬ್ಬರು “ತೆಂಗಿನ ಮರ, ಹೆಡೆ ಮೊಟ್ಟೆ ಬಿದ್ದು ಸತ್ತರೆ ಮತ್ತೆ ಸಿಡಿಲು ಹೊಡೆದು ಸತ್ತರೆ ಅದೃಷ್ಟವಂತೆ, ಸತ್ತವರು ಸ್ವರ್ಗಕ್ಕೆ ಹೋಗ್ತಾರಂತೆ ದೇವರಾಗುತ್ತಾರಂತೆ “. ಎಂದದ್ದು ನೆನಪಾಯ್ತು . ಹೆಡೆ ಮೊಟ್ಟೆ ಬಿದ್ದಾಗಲೇ ಆದ ನೋವಿಗೆ ತತ್ತರಿಸಿದ್ದ ನನಗೆ ಗೆಳತಿಗೆ ಮರವೇ ತಲೆಯ ಮೇಲೆ ಬಿದ್ದಾಗಹೇಗಾಗಿರಬಹುದೆಂದು ನೆನಸಿಕೊಂಡು ಮತ್ತೊಮ್ಮೆ ಕಣ್ತುಂಬಿ ಬಂತು. ನನ್ನ ತಲೆಗೆ ಬಿದ್ದದ್ದು ಹೆಡೆಮೊಟ್ಟೆ. ಹೆಡೆ ಮೊಟ್ಟೆ ಬಿದ್ದರೂ ಸಾಯಲಿಲ್ಲವಾಗಿ ಸ್ವರ್ಗಕ್ಕೆ ಹೋಗಿ ನಾನು ದೇವರಾಗುವ ಛಾನ್ಸ್ ಕೈತಪ್ಪಿ ಹೋಯ್ತು !!!

‍ಲೇಖಕರು avadhi

7 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading