ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ಐದು ಅಂಕದ ಪ್ರಶ್ನೆ..!

ಸದಾಶಿವ್ ಸೊರಟೂರು

ಸೈನಿಕ, ಪ್ರತಿಬಾರಿ ನೆಲಕ್ಕೆ
ಬೂಟು ತೊಟ್ಟ
ತನ್ನ ಎಡಗಾಲು ಬಡಿಯುವಾಗ
ಯುದ್ಧದ ಬೀಜವೊಂದು
ತನ್ನ ತುಳಿತಕೆ ಸಿಕ್ಕಿ ಸಾಯಲಿ
ಎಂದು ಆಶಿಸುತ್ತಾನೆ..

ಗಡಿಯಂಚಿನ ಗ್ರಾಮದ
ಸಾದಾ ಮನುಷ್ಯನೊಬ್ಬ
ಗಡಿ ದಾಟಿ ಅಲ್ಲಿರುವ
ಗೆಳೆಯನ ಮಗಳ ಲಗ್ನದೂಟ
ಮಾಡಿ
ತಾಂಬೂಲ ಮೆಯ್ಯುತ್ತಾ
ಬರುತ್ತಾನೆ..

ಹೊಲದ ಕೆಲಸಕ್ಕೆ ಬಂದಿದ್ದ
ಅಲ್ಲಿಬ್ಬರು ಹೆಂಗಸರು
ಗಡಿ ಇರುವುದನೆ ಮರೆತು
ಗಂಡ ಕೊಡಿಸಿದ ಸೀರೆ
ಬೆಳಗ್ಗೆಯ ತಿಂಡಿ
ರಾತ್ರಿ ಮಾಡಬೇಕಾದ ಸಾರಿನ
ಕುರಿತು
ಅಲೆ ಅಲೆಯಾಗಿ ಮಾತು
ಹೊಮ್ಮಿಸುತ್ತಾರೆ..

ಕ್ರಿಕೆಟ್ ಅಂಗಣದಲಿ
ಕಾಣುವಂತೆ ಎರಡು ಭಿನ್ನ
ಸಮವಸ್ತ್ರದ ಯೋಧರು
ಗಡಿಯನು ಮರೆಮಾಚಿ
ಕೋಲ್ಯನ ಜೋಕು
ಹೇಳಿಕೊಂಡು ಕ್ವೊಕ್ ಕ್ವೊಕ್
ನಗುತ್ತಾರೆ..

ಆಳುವ ನಾಯಕ ತನ್ನ ಮುಂದೆ
ಇತಿಹಾಸದ ಪುಟಗಳನು ಹರವಿಕೊಂಡು
ತನ್ನ ಹೆಸರು ಹೇಗೆ
ಬರೆಯಲ್ಪಡಬಹುದೆಂದು
ಮಥಿಸಿ ಮಥಿಸಿ
ಯುದ್ಧ ಹಡೆಯುತ್ತಾನೆ..

ಯುದ್ಧದ ಮುಖಕೆ ದೇಶಪ್ರೇಮದ,
ಧರ್ಮದ,
ಜನಕಾಳಜಿಯ, ಸಿರಿತನದ
ಬಣ್ಣಬಣ್ಣದ ಮುಖವಾಡ
ತೊಡಿಸುತ್ತಾನೆ..

ಯುದ್ಧದ ಬೆಂಕಿ ಹತ್ತಿಸಿ
ಇತಿಹಾಸದ ಪುಟದಲಿ
ತನ್ನ ಹೆಸರು ಯಾವ ಶೈಲಿಯ
ಅಕ್ಷರದಲಿ ಬರೆಯಲ್ಪಡುತ್ತದೆ
ಎಂದು ಯೋಚಿಸುತ್ತಾ
ತಣ್ಣನೆಯ ವಿಸ್ಕಿ ಹೀರುತ್ತಾನೆ..

ಸತ್ತ ದೇಹದ ಮೇಲೆ ಸಂಧಾನಗಳು
ನಡೆಯುತ್ತವೆ;
ವಿಶ್ವಸಂಸ್ಥೆಯ ರೂಂ ನಂಬರ್
ಹದಿನೆಂಟರಲ್ಲಿ
ಶಾಂತಿ ನಮ್ಮ ಆಯ್ಕೆ ಎಂದು
ಎಲ್ಲಾ ನಾಯಕರು
ಮೇಜು ತಟ್ಟುತ್ತಾರೆ..

ನೊಬೆಲ್ ಶಾಂತಿಯೊಂದು
ನಾಯಕನ ಮುಡಿಗೇರುತ್ತದೆ
ಅವನ ಕೋಟಿನ ಕಿಸೆಯಲ್ಲಿ
ಕೆಂಪು ಗುಲಾಬಿ
ನಗುತ್ತದೆ;
ಸತ್ತವರ ರಕ್ತದಲಿ ಅದ್ದಿ ತೆಗೆದ
ಆ ಗುಲಾಬಿಗೆ ಈಗ
ಬೇರೆ ದಾರಿಯಿಲ್ಲ!

ವಿಶ್ವಸಂಸ್ಥೆಯ ಶಾಂತಿಪಾಲನೆ
ಬಗ್ಗೆ ಮಕ್ಕಳು
ಐದು ಅಂಕದ ಪ್ರಶ್ನೆಗೆ
ಚೆಂದಗೆ ಉತ್ತರಿಸುತ್ತಾರೆ;
ಅದು ಪರೀಕ್ಷೆಗೆ ಉತ್ತರ
ಬರೆಯಲು ಮಾತ್ರ ಎಂಬುದು
ಈಗ ಅವರಿಗೂ ತಿಳಿದಿದೆ..

ಯುದ್ಧದ ಮರು ದಿನ
ಮತ್ತೆ ಗಡಿಯಲಿ
ಬದುಕಿ ಉಳಿದವರ ಮಾತು ನಗು
ಊಟೋಪಚಾರಗಳು
ಸಾಗುತ್ತವೆ..

‍ಲೇಖಕರು Admin

6 March, 2022

1 Comment

  1. T S SHRAVANA KUMARI

    ತುಂಬಾ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading