ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ- ಇನ್ಬಾಕ್ಷಿನಿಂದ ಕದ್ದು ನೋಡಿದ ಸಾಲು…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

40

ಕಣ್ಣಿಗೆ ಸರಿಯಾಗಿ ನಿದ್ದೆ ಕವಿದು ಮೂರಾಲ್ಕು ದಿನಗಳಾದವು.. ನಿದ್ದೆ, ಕಣ್ಣ ಬೀದಿಯ ಯಾವ ತಿರುವಿನಲ್ಲಿ ಹಾದಿ ತಪ್ಪಿತೊ ಗೊತ್ತಿಲ್ಲ.. ‌ಕಿಟಕಿ ಪಕ್ಕದಲ್ಲಿ ಅಂಗಾತ ಮಲಗಿ ಹೊರಗೆ ನೋಡುತ್ತಿದ್ದೆ. ಚಂದ್ರನನ್ನು ಯಾರೋ ಅರ್ಧ ತಿಂದು ಮಿಕ್ಕರ್ಧ ಉಳಿಸಿ ಹೋಗಿದ್ದರು. 

ಪಕ್ಕದಲ್ಲಿ ಆ ಮೊಬೈಲ್ ಇತ್ತು.. ಆ ಕತ್ತಲೆಯಲ್ಲಿ ಅದರ ಮೇಲ್ಗಡೆಯ ಸೆನ್ಸರ್‌ನ ಮಿಣಿ ಮಿಣಿ ಬೆಳಕು..‌ ಅದು ಕನಲುತ್ತಿತ್ತೊ.. ನಗುತ್ತಿತ್ತೊ ಹೇಗೆ ಅಂದಾಜಿಸಲಿ ನಾನು? 

ಅದು ಮೂರಾಲ್ಕು ದಿನಗಳ ಹಿಂದಷ್ಟೆ ಅಚಾನಕ್ಕಾಗಿ ಸಿಕ್ಕ ಮೊಬೈಲ್.. ನೋಡಿದರೆ ಅದು ದುಬಾರಿ ಬೆಲೆಯದು ಅನಿಸುತ್ತಿತ್ತು. ಅಚ್ಚ ಬಿಳಿ ಬಣ್ಣದ ಮತ್ತು ಗಿಟಾರ್ ಚಿತ್ರ ಇರುವ ಹಿಂಬದಿ ಪೌಚು ಕೂರಿಸಿದ್ದ ಮೊಬೈಲ್ ಅದು. 

ಬದುಕಿನಲ್ಲಿ ಏನಾದ್ರು ಕಳೆದುಕೊಂಡಾಗ ತಲ್ಲಣಿಸಿದ್ದು ಗೊತ್ತು ನನಗೆ.. ಆದರೆ ಈ ಏನಾದ್ರೂ ಸಿಕ್ಕ ಮೇಲೆ ಅದಕ್ಕಿಂತ ಹೆಚ್ಚು ತತ್ತರಿಸಬೇಕಾಗುತ್ತದೆ.. ‌ಎಂದು ಇದೆ ಮೊದಲ ಬಾರಿ ಅನಿಸಿಬಿಟ್ಟಿತು. ಒಮ್ಮೆ ಅದರ ಕಡೆ ನೋಡಿದೆ.. ಅದು ಯಾವುದೋ ನಿಗೂಢತೆ ಹೊತ್ತುಕೊಂಡು, ಅದರ ಹೊರೆಯನ್ನು ಹೊರಲಾಗದೆ ಸಂಕಟಪಡುತ್ತಿದ್ದ ಹಾಗೆ ಕಂಡಿತು.

ಮೊಬೈಲ್ ಮಾಲೀಕ ಇದನ್ನು ಕಳೆದು ಕೊಂಡು ನಿರಾಳನಾದನೊ.. ಈಗ ನಾನು ಪಡೆದುಕೊಂಡು ಪೇಚಾಡುತ್ತಿದ್ದೇನೊ ನನಗೆ ಏನೊಂದು ಗೊತ್ತಾಗುತ್ತಿರಲಿಲ್ಲ..!

ಅದನ್ನು ಕಳೆದುಕೊಂಡ ಆ ಅಸಾಮಿ ಒಂದು ಫೋನೂ ಮಾಡಿಲ್ಲ.. ಈ ಮೊಬೈಲ್ ಸಿಕ್ಕಾಗ ‘ಅರೇ.. ಯಾರೋ ಬೀಳಿಸಿಕೊಂಡು ಹೋಗಿದ್ದಾರೆ.. ತಲುಪಿಸಬೇಕು ಅವರಿಗೆ’ ಅಂದುಕೊಳ್ಳುತ್ತಾ ಎತ್ತಿಕೊಂಡೆ. ಅರ್ಧ ಗಂಟೆ ಕಾದೆ.. ಒಂದು ಗಂಟೆ ಕಾದೆ.. ಒಂದು ದಿನ‌ ಕಾದೆ.. ಹೀಗೆ ಕಾಯುತ್ತಲೇ ಇದ್ದೀನಿ.. ಇಂದು ನಾಲ್ಕನೆ ದಿನ. ಫೋನ್ ಬಂದಿಲ್ಲ.. ಅದರ ಮಧ್ಯೆ ಯಾರೋ ಅವನನ್ನು ಕೇಳಿಕೊಂಡು ಮಾಡಿದ್ದು ಎರಡೇ ಫೋನು.. ಅವರಾದರೂ ಏನೋ ಅವಸರದಲ್ಲಿದ್ದರು. ಒಂದೇ ಮಾತಿಗೆ ಕರೆ ಕತ್ತರಿಸಿಕೊಂಡು ಎದ್ದು ಹೋದರು..  

ಇಷ್ಟೇನಾ ಇವನ ಜಗತ್ತು? ಒಬ್ಬ ಮನುಷ್ಯ ಇಷ್ಟೇ ಇಷ್ಟು ಜಗತ್ತಿನಲ್ಲಿ ಬದುಕಲು ಸಾಧ್ಯವಾ? ತೊರೆದು ಜೀವಿಸಬಹುದೆ ಎಲ್ಲರನ್ನೂ? ಅವನಿಗೂ ಅವನ ಜಗತ್ತಿನ ನಡುವೆ ಯಾವ ಮುನಿಸೋ? ಇಂತಹ ಪ್ರಶ್ನೆಗಳನ್ನು ಹುಟ್ಟಿಸಲೆಂದೆ ಈ ಮೊಬೈಲ್ ನನ್ನ ಬಳಿ ಬಂತೊ ಏನೋ?

ಅದನ್ನು ಬಸ್‌ನಿಲ್ದಾಣದ ಒಂದು ಕಲ್ಲು ಬೆಂಚಿನ ಮೇಲೆ ಅನಾಥವಾಗಿ ನೋಡಿದಾಗ ಖುಷಿಯಾಗಿತ್ತು. ನನ್ನೊಳಗಿನ ಸ್ವಾರ್ಥಿ ಗರಿಬಿಚ್ಚಿದ್ದ. ಮೊಬೈಲ್ ಎತ್ತಿಕೊಂಡು ತಕ್ಷಣ ಆಫ್ ಮಾಡಿ.. ಸಿಮ್ ತೆಗ್ದು ಎಸೆದು, ರಿಸೆಟ್ ಮಾಡಿ ಬಳಸಿ ಬಿಡಬೇಕು ಅಂದುಕೊಂಡೆ.. ಹಾಗೆ ಮಾಡುತ್ತಿದ್ದೇನೊ ಏನೋ.. ಮೊಬೈಲ್ ಎತ್ತಿಕೊಂಡು ಅವಸರದಲ್ಲಿ ಡ್ಯೂಟಿಗೆ ಹೊರಟವನು ಅದನ್ನು ಸ್ವಿಚ್ ಆಫ್ ಮಾಡುವುದು ಮರೆತು ಬಿಟ್ಟಿದ್ದೆ. 

ಮೊಬೈಲ್ ಕಳೆದುಕೊಂಡವರು ಪರದಾಡಿಕೊಂಡು ನೂರಾರು ಕರೆ‌ ಮಾಡಿರುತ್ತಾರೆ.. ಬೇರೆ ನಂಬರ್‌ನಿಂದನೂ ಮಾಡಿಸಿರುತ್ತಾರೆ ಅಂತ ನಾನು ಯೋಚಿಸುತ್ತಿದ್ದೆ.. ಅರ್ಧ ದಿನ ಕಳೆದರೂ ಒಂದೇ ಒಂದು ಕರೆ ಬರಲಿಲ್ಲ.. ಆ ಕ್ಷಣಕ್ಕೆ ನನ್ನೊಳಗಿನ ಸ್ವಾರ್ಥಿ‌ ಸತ್ತು ಹೋದ. ಮೊಬೈಲ್ ಕಳೆದುಕೊಂಡವನ ಬಗ್ಗೆ ಕುತೂಹಲ ಹೆಚ್ಚಾಯಿತು. ಅವನ ವ್ಯಕ್ತಿತ್ವವನ್ನು ತಿಳಿಯುವ ಬಗ್ಗೆ ಆಸೆ ಆಯಿತು.. 

ನನಗೆ ಮೊಟ್ಟ ಮೊದಲ ಬಾರಿಗೆ ವಿಚಿತ್ರ ಪ್ರಶ್ನೆಯೊಂದು ಮೂಡಿತು..

ಅವನು ನಿಜಕ್ಕೂ ಮೊಬೈಲ್ ಕಳೆದುಕೊಂಡನೋ ಅಥವಾ

ಬೇಕು ಅಂತಲೇ ಬಿಟ್ಟು ಹೋದನೋ..

ಯಾರಾದರೂ ಹಾಗೆ ಬಿಟ್ಟು ಹೋಗಲು ಸಾಧ್ಯವಾ? ಬೇಕಾದರೂ ಚಚ್ಚಿ ಹಾಕುತ್ತಾರೆ, ನದಿಗೋ, ಹೊಳೆಗೋ ಎಸೆಯುತ್ತಾರೆ.. ಅದಕ್ಕೊಂದು ಏನಾದ್ರೂ ಗತಿ ಕಾಣಿಸಿ ಸುಮ್ಮನಾಗುತ್ತಾರೆ.. ಆದರೆ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗುವಂತೆ ಅವನು ಮೊಬೈಲ್ ಬಿಟ್ಟು ಹೋದನೇ? ಪಕ್ಕೆಲುಬಿನಿಂದ ಅನುಮಾನ ಎಡೆಯೆತ್ತಿತ್ತು.‌ 

ಆ ಮೊಬೈಲಿನ ವಾಟ್ಸಪ್‍ಗೆ ಎಂದಾದರೊಮ್ಮೆ ಬಂದು ಬೀಳುತ್ತಿದ್ದ ಮೆಸೇಜ್‍ಗಳು ನನ್ನ ಗಮನಕ್ಕಿದ್ದವು. ನನಗೆ ಆ ಮೊಬೈಲಿನೊಳಗೆ ನುಗ್ಗುವ ಯಾವ ಕುತೂಹಲವೂ ಇರಲಿಲ್ಲ. ಮೊಬೈಲ್ ಮಾಲೀಕ ಯಾಕೆ ಕರೆ ಮಾಡಿಲ್ಲ.. ಅನ್ನುವುದೇ ನನ್ನ ತಲೆಯೊಳಗಿತ್ತು. ಯಾರೋ ಸಮಾಜಘಾತಕ ಕೆಲಸಕ್ಕೆ ಬಳಸಿ.. ಎಸೆದಿರಬಹುದಾ..? ಯಾರಿಗೆ ಸಿಗುತ್ತೋ ಅವರೇ ಸಿಕ್ಕಿ ಹಾಕಿಕೊಳಲಿ ಎಂಬುದಿರಬಹುದಾ ಎಂಬ ಯೋಚನೆಯೂ ಬಂದು ಭಯವಾಯಿತು. ಬಹುಶಃ ಹಾಗೇನು ಆಗಿರಲಾರದು ಎಂದು ನನಗೆ ನಾನೇ ಸಮಾಧಾನಿಸಿಕೊಂಡೆ. 

ಈಗ ಮೊಬೈಲ್ ಮಾಲೀಕ ಯಾರೆಂದು ಹುಡುಕುವುದೋ ಬಿಡವುದೋ ನನಗೆ ತಿಳಿಯಲಿಲ್ಲ. ಅದರೊಳಗಿರುವ ಸಂಪರ್ಕ ಸಂಖ್ಯೆ, ವಾಟ್ಸಪ್ ಮೆಸೇಜ್ ಇವುಗಳನ್ನು ನೋಡಿದ್ರೆ ಏನಾದ್ರೂ ಮಾಹಿತಿ ಸಿಗಬಹುದು ಅನಿಸಿ.. ಮೊಬೈಲ್ ಎತ್ತಿಕೊಂಡೆ. 

ಸ್ಕ್ರೀನ್ ಆನ್ ಆಗಲಿಲ್ಲ.. ಆಗುವಂತೆಯೂ ಇರಲಿಲ್ಲ. ಅದನ್ನು ಒಂದು ಪಿನ್‌ಕೋಡ್ ಬಳಸಿ ಲಾಕ್ ಮಾಡಲಾಗಿತ್ತು..‌ ಒಂದಷ್ಟು ಸಾಮಾನ್ಯ ಪಿನ್‌ಕೋಡ್‌ಗಳನ್ನು ಬಳಸಿ ಅದನ್ನು ತೆರೆಯಲು ನೋಡಿದೆ. ಆಗಲಿಲ್ಲ. ಅದನ್ನು ರಿಸೆಟ್ ಮಾಡಬಹುದು.. ಆದರೆ ಅದರೊಳಗಿನ ಡೇಟಾ ಸಿಗುವುದಿಲ್ಲ..‌ ಏನು ಮಾಡುವುದೆಂದು ನನಗೆ ತೋಚಲಿಲ್ಲ.. 

ಅವತ್ತೂ ಇಡೀ ದಿನ ಅದೇ ತಳಮಳದಲ್ಲಿ ಕಳೆದೆ. ಸಂಜೆ ಮತ್ತೆ ಎತ್ತಿಕೊಂಡು ಮನಸ್ಸಿಗೆ ಬಂದ ನಂಬರ್ ಹಾಕಿ ಟ್ರೈ ಮಾಡುವಾಗ ನನ್ನ ಮನಸ್ಸಿಗೆ 0000 ನಂಬರ್ ಅಚಾನಕ್ಕಾಗಿ ಹೊಳೆಯಿತು. ಈ ಸಂಖ್ಯೆ ಮಾಲೀಕನ ಮನಃಸ್ಥಿತಿ ಹೇಳುತ್ತಿತ್ತೋ ಏನೋ.. ಆ ಸಂಖ್ಯೆಗೆ ಸ್ಕ್ರೀನ್ ತನ್ನ ಗುಟ್ಟು ಬಿಟ್ಟುಕೊಟ್ಟಿತು.. ಒಂದು ಕ್ಷಣ ಖುಷಿಯಾಯಿತು ಕೂಡ. ನನ್ನ ಸಂಭವನೀಯತೆ ಬಗ್ಗೆ ನನಗೇ ಹೆಮ್ಮೆಯಾಯಿತು. 

ಈಗ ಸಲೀಸಾಗಿ ಮೊಬೈಲ್ ಒಳಗೆ ನುಗ್ಗಲು ಅನುಮತಿ ಸಿಕ್ಕಿತು.. ನುಗ್ಗಿದೆ ಕೂಡ..  ಆದರೆ ನನಗೆ ಯಾಕೋ ಸಮಾಧಾನವಾಗಲಿಲ್ಲ.. ವಾಪಸ್ ಬಂದು ಬಿಟ್ಟೆ.. 

ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮೊಬೈಲ್ ಅವರವರ ಖಾಸಗಿ ಜಾಗಗಳು. ಗಂಡ-ಹೆಂಡತಿ, ಅಷ್ಟೇ ಏಕೆ ಪ್ರೇಮಿಗಳ ಮಧ್ಯೆಯೂ ಮೊಬೈಲಿನ ಖಾಸಗಿ ಲೋಕಕ್ಕೆ ಮುಕ್ತ ಅನುಮತಿ ಇಲ್ಲ. ಅವರವರ ಎಲ್ಲಾ ಹೆಗ್ಗಳಿಕೆಗಳು ಮತ್ತು ಅವರ ದೌರ್ಬಲ್ಯಗಳು ಅವರವರ ಮೊಬೈಲಿನಲ್ಲಿರುತ್ತದೆ. ಈಗೀಗ ಯಾರು ಏನು ಬೇಕಾದರೂ ಹಂಚಿಕೊಳ್ಳಲು ಸಿದ್ಧ. ಆದರೆ ಮೊಬೈಲೊಳಗಿನ ಖಾಸಗಿತನವನ್ನು ಮಾತ್ರ ಹಂಚಿಕೊಳ್ಳಲಾರರು.. ಅದು ಸರಿಯೂ ಕೂಡ. ಯಾರಿಗೂ ಯಾಕೆ ಹಂಚಿಕೊಳ್ಳಬೇಕು? 

ನಾನೀಗ ಆ ಮೊಬೈಲ್ ಮಾಲೀಕನ ತೀರಾ ಖಾಸಗಿ ಜಗತ್ತಿಗೆ ನುಗ್ಗುವುದು ಹೇಗೆ? ನನಗೆ ತುಂಬಾ ಇರಿಸು ಮುರಿಸಾಯಿತು. ಅವನ ಮೊಬೈಲ್ ಒಳಗೆ ಏನಿದೆ ಎಂದು ಹುಡುಕುವ ಯಾವ ಕುತೂಹಲಗಳೂ ಇರಲಿಲ್ಲ. ಅವನು ಮೊಬೈಲ್ ಬಿಟ್ಟು ಹೋಗಿದ್ದು ನನಗೆ ಕಾಡುತ್ತಿತ್ತು.. ಅವನ್ಯಾರು ಎಂದು ತಿಳಿದು, ಅದನ್ನು ಅವನಿಗೆ ತಲುಪಿಸುವ ಕಾರಣಕ್ಕಾದರೂ ನಾನು ಅವನ ಮೊಬೈಲ್ ಒಳಗೆ ಇಣುಕಬೇಕಾಗಿತ್ತು.. ಆದರೆ ನನ್ನ ಮನಸು ಸುಲಭಕ್ಕೆ ಒಪ್ಪುವಂತಿರಲಿಲ್ಲ.. 

ಮನುಷ್ಯ ತನಗೆ ಕೆಲವು ಜನರ ಪೀಡನೆಯಿಂದ ಬದುಕೇ ಬೇಡ ಅನ್ನುವ ಸಂದಿಗ್ಧತೆ ಬಂದಾಗ ಜನರ ಸಂಪರ್ಕ ಕಡೆದುಕೊಳ್ಳುತ್ತಾನೆ. ಮೊಬೈಲ್ ಕಾಟ ಕೊಡುತ್ತಿದ್ದರೆ ಅದನ್ನು ಕಡಲಿಗೆ ಎಸೆದು ವಾಪಸ್ ಬಂದು ತನ್ನ ಜಗತ್ತಿನೊಳಗೆ ಕಳೆದು ಹೋಗುತ್ತಾನೆ ಇದು ಸರಿ.. ‌ಆದರೆ ಈತ ಮೊಬೈಲ್ ಅನ್ನು ಜಗತ್ತಿನೊಳಗೆ ಎಸೆದು ತಾನು ಮಾತ್ರ ಕಡಲೊಳಗೆ ಹೋಗಿ ಅವಿತುಕೊಂಡನೆ..? ನನಗೆ ಈ ಯೋಚನೆಯೆ ಮನಕಲಕಿಸಿತು. 

ಮತ್ತೆ ಎರಡು ದಿ‌ನ ಕಾದೆ. ನನ್ನ ಸಂಕಟದಲ್ಲಿ ಯಾವುದೇ ಬದಲಾವಣೆಗಳು ಆಗಲಿಲ್ಲ. ನಾನು ಇನ್ನಷ್ಟು ಯೋಚಿಸತೊಡಗಿದೆ. ಮೊಬೈಲ್ ಎಲ್ಲಿ ಸಿಕ್ಕಿತೋ ಅಲ್ಲಿಯೇ ಇಟ್ಟು ಬರುವ ಬಗ್ಗೆ ಯೋಚಿಸಿದೆ.. ನಾನು ಇಟ್ಟು ಬರಬಹುದು. ಆದರೆ ನನ್ನೊಳಗೆ ಹೊಕ್ಕ ಈ ಯೋಚನೆ, ಈ ತಾಕಲಾಟವನ್ನು ಮೊಬೈಲ್ ಅನ್ನು ಆಚೆ ಇಟ್ಟಂತೆಯೇ ಇಟ್ಟು ಬರಬಹುದೇ..? 

ಅದೊಂದು ಬೆಳಗ್ಗೆ ಕೂತು, ಮೊಬೈಲ್ ತೆರೆದು ಅದರ ಒಳಗೆ ಹೋದೆ. ನನಗದು ಅನಿವಾರ್ಯವಾಗಿತ್ತು.  ಒಂದಷ್ಟು ಮೊಬೈಲ್ ನಂಬರ್‌ಗಳಿದ್ದವು. ಅಪರಿಚಿತ ಹತ್ತು ಅಂಕೆಗಳ ಆ ನಂಬರ್‌ಗಳಲ್ಲಿ ಏನು ಹುಡುಕುಲು ಸಾಧ್ಯವಿತ್ತು..? ಫೇಸ್ಬುಕ್ ಇತ್ತು ತೆರೆಯಲಿಲ್ಲ. ವಾಟ್ಸಪ್ ಇತ್ತು. ಬಹುಶಃ ಇದನ್ನು ತೆರೆದು ನೋಡಿದರೆ ಒಂದಷ್ಟು ವಿಚಾರ ಖಂಡಿತ ತಿಳಿಯುತ್ತದೆ. ಈಗಿನ ಕಾಲದಲ್ಲಿ ಕೇವಲ ವಾಟ್ಸಪ್ ಖಾತೆ ಸಾಕು ಆ ವ್ಯಕ್ತಿ ಏನೆಂದು ಅಳೆದು ಬಿಡಲು. 

ವಾಟ್ಸಪ್ ತೆರೆದೆ.. ಅವರ ಡಿಪಿ ನೋಡಿದೆ. ಇಪ್ಪತ್ತು  ವಸಂತ ಕಳೆದುಕೊಂಡ ವಯಸ್ಸು ಅನಿಸುತ್ತೆ.. ಬಲ ಕೆನ್ನೆ ಮೇಲೆ ಒಂದು ಕಪ್ಪು ಢಾಳ ಕಲೆಯಿದೆ. ಮಧ್ಯಕ್ಕೆ ಬಾಚಿದ ಕ್ರಾಪು. ಮುಖದಲ್ಲಿ ಕಳೆ ಇದೆ. ಫೋಟೋದ ಕೆಳಗೆ ಆದಿ ಅಂತ  ಬರೆಯಲಾಗಿದೆ. ಬಹುಶಃ ಅದು ಅವನ ಹೆಸರಿರಬಹುದು. ಅಲ್ಲಿಂದ ಇನ್ಬಾಕ್ಸಿಗೆ ಕಡೆ ಹೋದೆ. ಒಂದಷ್ಟು ಗ್ರೂಪ್‌ಗಳಲ್ಲಿ ಬಂದ ಮೆಸೇಜ್‌ಗಳಿದ್ದವು. ಎರಡ್ಮೂರು ಚಾಟ್‌ಗಳನ್ನು ಮೇಲಿಂದ ನೋಡಿದೆ. ಓಪನ್ ಮಾಡಲಿಲ್ಲ. ಕೆಳಗೊಂದು ಚಾಟ್ ಹೆಡ್ ಕಾಣಿಸಿತು.. ಅದರ ಹೆಸರು ‘ಪಾರು’ ಅಂತ ಇತ್ತು. ಡಿಪಿಯಲ್ಲಿ ಯಾರು ಯಾರದೋ ಬೆರಳು ಹಿಡಿದುಕೊಂಡು ನಡೆಯುತ್ತಿರುವ ಚಿತ್ರ. ಆ ಹೆಸರು ಮತ್ತು ಡಿಪಿಯೇನು ನನ್ನ ಸೆಳೆಯಲಿಲ್ಲ. ಇನ್ಬಾಕ್ಷಿನಿಂದ ಕದ್ದು ಹೊರಗೆ ನೋಡುತ್ತಿರುವ ಒಂದು ಪುಟ್ಟ  ಸಾಲು ‘There are so many ways here..!’ ಕಾಣಿಸಿತು. 

ಯಾರಿರಬಹುದು? ಯಾವ ದಾರಿಯ ಮಾತಿದು. ಕೈ ಹಿಡಿಯುವ  ದಾರಿಯೋ..? ಕೈ ಬಿಡುವ ದಾರಿಯೋ..? ಇದಲ್ಲದೆ ಮತ್ತೆ ಯಾವ ದಾರಿ ಇರಬಹುದು.. ಇದು ಇಬ್ಬರಿಗೂ ಸಂಬಂಧಿಸಿದ್ದೋ.. ದಾರಿಗಳಿರುವುದು ಅವನಿಗೋ..? ಅವಳಿಗೋ..? ಅಥವಾ ಪೂರ್ತಿ ಇದು ಅವಳ ಖಾಸಗಿಯದೋ..? ಪ್ರಶ್ನೆಗಳು ಮಾತ್ರ ಯಥೇಚ್ಛ.. ಆದರೆ ಒಂದೂ ಉತ್ತರ ಸಿಗಲಿಲ್ಲ…

ಅಂದು ಇಂತಹ ಮೆಸೇಜ್ ಮಾಡಿದವರು ಇಂದಿಗೂ‌ ಮತ್ತೊಂದು ಮೆಸೇಜ್ ಮಾಡಿಲ್ಲ.. ಇತ್ತ ಕಡೆಯಿಂದ ಮೆಸೇಜ್ ಕೂಡ ಹೋಗಿಲ್ಲ.. ಅವಳ ಕಡೆಯಿಂದ ಕರೆ ಕೂಡ ಬಂದಿಲ್ಲ..‌ ಇತ್ತ ಕಡೆಯಿಂದ ಕರೆ ಹೋಗಿಯೂ‌ ಇಲ್ಲ. ಕರೆಗಾಗಿ ಅವಳು ಕಾದಳೋ.. ‌ಕಾಯಲಿಲ್ಲವೋ..? ಕರೆ ಮಾಡಲು ‌ಕಾರಣಗಳಿರುವಂತೆ ಕರೆ ಮಾಡದಿರಲು ಕಾರಣಗಳಿರುತ್ತವೆ.. ಅಂಥದೊಂದು ಕಾರಣ ಅವಳಿಗಿತ್ತಾ? ಓಹ್ ಹಾಗಾದರೆ ಅದು ಯಾವ ಕಾರಣ.. ಅಯ್ಯೋ ನನ್ನ ತಲೆ ಕೆಟ್ಟು ಹೋಗ ತೊಡಗಿತು. 

ನಾನು ಆ ಚಾಟ್ ಓಪನ್ ಮಾಡಿ ಇನ್ಬಾಕ್ಷಿಗೆ ನುಗ್ಗಿದ್ರೆ  ಖಂಡಿತ ಏನಾದ್ರು‌ ವಿಷಯ ಸಿಕ್ಕಿರೋದು.. ಆದರೆ ನನಗೆ ಅಲ್ಲಿ ಇಣುಕಲು ಮನಸಾಗಲಿಲ್ಲ.. ಇದೆಲ್ಲಾ ಸರಿ ಅಲ್ಲ ಅನಿಸಿತು. ಬೇರೆಯವರ ಬದುಕು ನಮಗೇಕೆ? ಅವರಿಬ್ಬರು ಮಾತಾಡಿಕೊಂಡ ಮಾತುಗಳು ನನಗೇಕೆ?  ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವೂ ಹೌದು.. ಮೊಬೈಲ್ ಎತ್ತಿಟ್ಟೆ..‌

ಇನ್ ಒಂದೇ ಒಂದು ಕರೆ ಬಂದರೂ.. ಯಾರು? ಏನು? ಅಂತ ಕೇಳಿ ಬಿಡಬೇಕು..‌ ಮೊಬೈಲ್ ಅವರಿಗೆ ತಲುಪಿಸಬೇಕು.. ಅವರು ಬೇಕಾದರೆ ಅದರ ಮಾಲೀಕನಿಗೆ ಕೊಡಲಿ.. ಬಿಡಲಿ ಎಂದು ತೀರ್ಮಾನಿಸಿಕೊಂಡೆ.. ಯಾಕೋ ಮನಸ್ಸಿಗೆ ತುಸು ನಿರಾಳ ಎನಿಸಿತು.. 

ಅವತ್ತೂ ಇಡೀ ನಿರಾಳದಲ್ಲೆ ಕಳೆದೆ. ಮೊಬೈಲ್ ಬಿಟ್ಟು ಬಿಡಲು ನಿರ್ಧರಿಸಿದ ಮೇಲೆ ನನಗೆ ಈ ನಿರಾಳತೆ..! 

ಸಂಜೆಗೆ ಮೊಬೈಲ್ ಎತ್ತಿಕೊಂಡು ಮನೆಯಿಂದ ಹೊರಟೆ.. ಇನ್ನೇನು ಬಸ್‌ನಿಲ್ದಾಣ ತಲುಪಬೇಕು.. 

ಮನಸು ಎರಡು ಭಾಗವಾಯಿತು.. ಇಟ್ಟು ಹೋಗು ಅಂತ ಒಂದು ಮನಸು.. ಇಡಬೇಡ ನಾಳೆಯೋ ನಾಡಿದ್ದೋ ಒಬ್ಬರ ಸಮಸ್ಯೆ ಬಗೆಹರಿಯಬಹುದು ನಿನ್ನಿಂದ.. ಯಾಕೆ ಅಷ್ಟು ಅವಸರ ಅಂದಿತು.. 

ಆ ತೊಳಲಾಟದಲ್ಲೇ ತುಂಬಾ ಹೊತ್ತು ಅಲ್ಲಿ ಕೂತಿದ್ದೆ.. ‌ಮೊಬೈಲ್ ಸಿಕ್ಕ ಜಾಗವನ್ನು ನೋಡಿದೆ.. ಅದರ ಪಕ್ಕವೇ ತುಂಬಾ ಹೊತ್ತು ಕೂತೆ.. ಸಮಾಧಾನವಾಗಲಿಲ್ಲ.. ಎದ್ದು ಮನೆಕಡೆ ಹೊರಟೆ.. ಅಲ್ಲಿ ಮೊಬೈಲ್ ಇಡಲಿಲ್ಲ. ಇಡಲು ಮನಸ್ಸಾಗಲಿಲ್ಲ. ರಸ್ತೆ ಬದಿಯಲ್ಲಿ ಒಂದು ಕಾಫಿ‌ ಕುಡಿದೆ, ತುಸು ನಿರಾಳ ಎನಿಸಿತು. ಮನೆ ಕಡೆ ಹೆಜ್ಜೆ ಹಾಕಿದೆ. 

ಅವತ್ತು ರಾತ್ರಿಯ ನಿದ್ದೆ ಕೂಡ ಇದೇ ಚಡಪಡಿಕೆಗೆ ಅರ್ಪಿತವಾಯಿತು..  ಹೊರಳಿ ಹೊರಳಿ.. ಬೆಳಗು ಬರುವುದನ್ನೇ ಕಾದೆ.. ಮುಂಜಾನೆಗೆ ಸಣ್ಣ ನಿದ್ದೆ ಸುಳಿಯಿತು.. ನನಗಾಗಿ ಎಷ್ಟೋ ದಿನಗಳಿಂದ ಕಾದಂತಿದ್ದ ಒಂದು ಕನಸು ನುಗ್ಗಿ ಬಂತು.. ಓಹ್ ಅದಂತೂ ತುಂಬಾ ವಿಚಿತ್ರವಾದ, ಭಯಂಕರವಾದ ಕನಸು.. ನೆನೆಸಿಕೊಂಡರೆ ಮೈ ನಡುಗುತ್ತಿತ್ತು.. 

ಎದ್ದು ಕೂತೆ. ಕನಸು ನೆನಪಿಸಿಕೊಂಡರೆ ಭಯವಾಗುತ್ತಿತ್ತು.. 

ಕಾಫಿ ಮಾಡಿಕೊಂಡು.. ಅದನ್ನು ಲೋಟದಲ್ಲಿ ಹಾಕಿಕೊಂಡು ಬಂದು ಕೂತೆ.. ಆಗ ತಾನೇ ಬಂದ ಬಿಸಿ ಬಿಸಿ ಪತ್ರಿಕೆ ಮುಂದಿತ್ತು..‌

ಕಾಫಿ ಹೀರುತ್ತಾ ಪತ್ರಿಕೆ ಎತ್ತಿಕೊಂಡೆ.. 

ಮೊದಲ ಪುಟ ಬರೀ ರಾಜಕೀಯ.. ಥತ್ ಎನ್ನುತ್ತಾ ಎರಡನೇ ಪುಟ ತೆರೆದೆ.. ಸ್ಥಳಿಯ ಸುದ್ದಿಗಳ‌ ಕಡೆ ಕಣ್ಣು ಹಾಯಿಸತೊಡಗಿದೆ..  ಓದುತ್ತಾ ಓದುತ್ತಾ ಹೋದಂತೆ ಕೆಳಗೆ ಒಂದು ಮೂಲೆಯಲ್ಲಿ ಒಂದು ಸಾವಿನ ಸುದ್ದಿ.. 

ಅಪರಿಚಿತ ಶವ ಪತ್ತೆ.. ಆತ್ಮಹತ್ಯೆ ಶಂಕೆ ಅಂತ ಇತ್ತು.. ಮುಂದೆ ಓದಿದೆ.. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತನ ಶವವೊಂದು ಪತ್ತೆಯಾಗಿದೆ. ಸುಮಾರು ಇಪ್ಪತ್ತು ವಯಸ್ಸು. ಬಲ ಕೆನ್ನೆ ಮೇಲೆ ಢಾಳ ಕಲೆಯಿದೆ. ಮಧ್ಯೆಕ್ಕೆ ಕ್ರಾಪ್ ಬಾಚಿದ ಕೂದಲು.. ತೆಳು ನೀಲಿ ಟಿಶರ್ಟ್ ಮತ್ತು ಕಪ್ಪು ಜೀನ್ಸ್ ಪ್ಯಾಂಟ್ ತೊಟ್ಟಿರಿತ್ತಾನೆ. ಜೇಬಿನಲ್ಲಿದ್ದ ಒಂದು ರಶೀದಿಯಿಂದ ಅವನ ಹೆಸರನ್ನು ಆದಿ ಎಂದು ಗುರುತಿಸಲಾಗಿದೆ..  ಎಂದು ಬರೆಯಲಾಗಿತ್ತು.. 

ನನಗೆ ತಲೆಸುತ್ತಲು ಆರಂಭಿಸಿತು.. ಮೈ ಬೆವೆತು ಹೊಯಿತು. ದಢದಢ ಮೊಬೈಲ್ ಎತ್ತಿಕೊಂಡು.. ವಾಟ್ಸಪ್ ತೆರೆದು ಅವನ ಡಿಪಿ ನೋಡಿದೆ.. ಓಹ್ ಎಲ್ಲವೂ ಸರಿ ಇದೆ.. ಕಲೆ, ಕೂದಲು, ವಯಸ್ಸು.. ‌ಎದೆ ಬಡಿದುಕೊಳ್ಳತೊಡಗಿತು..

ನನ್ನ ಸಂಕಟವನ್ನು ಕೊಲ್ಲುವಂತೆ ಜೋರಾಗಿ ಮೊಬೈಲ್ ರಿಂಗಾದ ಸದ್ದು.. ನನ್ನ ಮೊಬೈಲ್ ಅಲ್ಲ.. ಸಿಕ್ಕಿದ್ದ ಆ ಅಪರಿಚಿತ ಮೊಬೈಲ್..

ಪಾರು ಇಸ್ ಕಾಲಿಂಗ್…

ಆ ಮೊಬೈಲಿಗೆ ಕರೆ ಬರತೊಡಗಿತ್ತು..

Yes, she is the right person to say this… ಅಂದುಕೊಂಡು.. ಕರೆ ಸ್ವೀಕರಿಸಿ ಕಿವಿಗಿಟ್ಟುಕೊಂಡೆ..

‘ಹಲೋ ಆದಿ..’ ಅವಳ ದನಿಯಲ್ಲಿ ನಡುಕು, ಭಯ, ಆತಂಕಗಳಿದ್ದವು.. 

ನನಗೇನು ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗಲ್ಲಿಲ್ಲ.. ಹೋಗಲಿ ಏನನ್ನು ಹೇಳಲಿ.. ಒಂದು ಸಾವನ್ನು ತಲುಪಿಸುವುದು ಅಷ್ಟು ಸುಲಭವಾ?

ಹಲೋ ಆದಿ ಹಲೋ, ಹಲೋ.. ಕೇಳ್ಸತಾ ಇಲ್ವ.. ತುಂಬಾ ದುಃಖಿತ ದನಿ ಅತ್ತ ಕಡೆಯಿಂದ ಬರುತ್ತಿತ್ತು.. 

ಅದು 

ಅಮ್ಮ ಕರೆದಂತಿತ್ತೋ.. 

ಅಕ್ಕ ಕರೆದಂತೆಯೋ.. 

ಪ್ರೀತಿಸಿದ ಹುಡುಗಿ ಕರೆದಂತೆಯೋ.. 

ಗೆಳತಿ ಕರೆದಂತೆಯೋ….

ನನಗೆ ಯಾವುದೂ ಗೊತ್ತಾಗುತ್ತಿರಲಿಲ್ಲ; ಆ ಗಾಬರಿಯಲ್ಲಿ!

ನನಗೆ ಏನೂ ಅರ್ಥವಾಗುತ್ತಿರಲಿಲ್ಲ..

‘ಹಲೋ ಆದಿ ಪ್ಲೀಸ್ ಮಾತಾಡು..’ ಅತ್ತ ಕಡೆಯ ದನಿ ಗದ್ಗಿತವಾಗಿತ್ತು..

ಏನು ಮಾತಾಡಲಿ..?

ಯೋಚಿಸ ತೊಡಗಿದೆ

ಸಾವನ್ನು ಹೇಗೆ ಬಿತ್ತಲಿ‌ ಕಂಗಾಲಾದ ಆ ದನಿಯ ಎದೆಗೆ.. 

ದನಿ ಕೇಳುತ್ತಲೇ ಇತ್ತು..

ಉತ್ತರ ಕಣ್ಣೀರಿನ ಮೂಲಕ ಹರಿಯುತ್ತಿತ್ತು.. 

ಇಬ್ಬರ ಕಣ್ಣೀರು ಹರಿದು ಮುಂದೆ ಬಿಂದುವಿನಲಿ ಸಂಧಿಸಬಹುದೋ.. ಏನೋ..! ಅದರ ಪರಿವೆಯಿಲ್ಲದೆ ಕೂತಿದ್ದೆ.. ಹರಿವ ಕಣ್ಣೀರನು ಹರಿಯಲು ಬಿಟ್ಟು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

29 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading