ಅಂತಾರಾಷ್ಟ್ರೀಯ ನೃತ್ಯದಿನ ಲಾವಣಿಯ ಲಾವಣ್ಯವತಿಯರನ್ನು ಸ್ಮರಿಸುತ್ತಾ…

ಮಮತಾ ರಾವ್

ಲಾವಣಿ ಮಹಾರಾಷ್ಟ್ರದ ಒಂದು ನೃತ್ಯ ಪ್ರಾಕಾರ. ಲಾವಣ್ಯವತಿಯರು ಮಾಡುವ ನೃತ್ಯ ಪ್ರಾಕಾರವೆಂದೇ ಇದಕ್ಕೆ ಲಾವಣಿ ಎನ್ನಲಾಗುತ್ತದೆ. ಒಂಬತ್ತು ಮೊಳದ ಜರಿತಾರಿ ಪೈಠಣಿ ಸೀರೆಯುಟ್ಟು, ಎತ್ತಿಕಟ್ಟಿದ ತುರುಬಿಗೆ ಘಮಘಮಿಸುವ ಮಲ್ಲಿಗೆಯ ಮಾಲೆ, ಕೈತುಂಬ ಕಿಣಕಿಣ ಸದ್ದುಗೈಯುವ ರಂಗುರಂಗಿನ ಬಳೆಗಳು, ಕೊರಳಲ್ಲಿ ಕಿವಿಗಳಲ್ಲಿ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ, ಮೂಗಿನಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಮುತ್ತಿನ ನತ್ತು ಸಿಲುಕಿಸಿ, ಹಣೆಯಲ್ಲಿ ದುಂಡಗಿನ ಅಗಲವಾದ ಕುಂಕುಮದ ಬೊಟ್ಟು ಕಣ್ಣಿಗೆ ಕಾಡಿಗೆ ತುಟಿಗೆ ಕೆಂಪು ಹಚ್ಚಿ, ಸರ್ವಾಲಂಕಾರಭೂಷಿತೆಯಾಗಿ ಗೆಜ್ಜೆನಾದಗೈಯುತ್ತಾ ಬಳಕುತ್ತಾ ನಸುನಗುತ್ತಾ ಲಾವಣ್ಯವತಿ ವೇದಿಕೆಯನ್ನು ಪ್ರವೇಶಿಸಿದಳೆಂದರೆ ಎಲ್ಲರ ಮೈಯಲ್ಲಿ ಮಿಂಚು ಸಂಚಾರವಾದಂತೆಯೇ ಸೈ. ಸ್ವರ್ಗದಿಂದ ಸಾಕ್ಷಾತ್ ಅಪ್ಸರೆಯೇ ಧರೆಗಿಳಿದಂತೆ. ಅವಳ ಬಿಂಕ-ಬಿನ್ನಾಣಕ್ಕೆ, ವೈಯ್ಯಾರಕ್ಕೆ ಕಣ್ಣೋಟಕ್ಕೆ ಘಾಸಿಗೊಳ್ಳದ ಪುರುಷರೇ ಇರಲಾರರು. ಹೆಣ್ಮಕ್ಕಳೂ ಸಹ ಅವಳ ಸೌಂದರ್ಯ, ಅಲಂಕಾರ ಕಂಡು ಮೂಕರಾಗುತ್ತಾರೆ. ಢೊಲಕಿಯ ಸದ್ದಿಗೆ ತಕ್ಕಂತೆ ತನ್ನ ಗೆಜ್ಜೆನಾದವನ್ನು ಜೊತೆಯಾಗಿಸಿ ನಖಶಿಖಾಂತ ಚಿಮ್ಮುತ್ತಾ ಬಳಕುತ್ತಾ ನರ್ತಿಸುವ ಲಾವಣ್ಯವತಿಯ ಪ್ರತಿಯೊಂದು ಚಲನೆಗೂ ಎದುರು ಕುಳಿತವರ ಪ್ರತಿಕ್ರಿಯೆ ಬೇಕೇ ಬೇಕು. ಶೀಟಿ ಅಥವಾ ಸಿಳ್ಳೆ, ಚಪ್ಪಾಳೆ, ವಾಹ್, ವಾಹ್.. ಎಂಬ ಪ್ರಶಂಸೆಯ ಉದ್ಗಾರಗಳು ನರ್ತಕಿಗೆ ಸ್ಫೂರ್ತಿ ನೀಡುತ್ತಾ ಹೋದಂತೆ ಪ್ರೇಕ್ಷಕರ ಉಸಿರಿನ ಏರಿಳಿತ ವೇಗವಾಗುತ್ತಾ ಹೋಗುತ್ತದೆ. ಇಡಿಯ ವಾತಾವರಣದಲ್ಲಿ ಸಂಭ್ರಮದ ಉತ್ಸಾಹದ ಚಿಲುಮೆಯ ಬುಗ್ಗೆಗಳೇಳುತ್ತವೆ.

ಲಾವಣಿಯ ಪ್ರಭಾವವೇ ಅಂಥದ್ದು. ೧೮-೧೯ನೆಯ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯವು ಯುದ್ಧಪೀಡಿತವಾಗಿದ್ದಾಗ ಯೋದ್ದರಲ್ಲಿ ಸ್ಫೂರ್ತಿಯನ್ನು ತುಂಬಲೆಂದು ಜನಿಸಿದ ಈ ನೃತ್ಯ ಪ್ರಾಕಾರಕ್ಕೆ ಪೇಶ್ವೆಗಳಿಂದ ಪ್ರೋತ್ಸಾಹ ಸಿಕ್ಕಿ ಬಹಳ ಪ್ರಸಿದ್ಧಿಯನ್ನು ಪಡೆಯಿತು. ರಾಜ-ಮಹಾರಾಜರು, ಶೂರ ಸೇನಾನಿಗಳು, ಶ್ರೀಮಂತರು, ಬಲಾಢ್ಯರಿಗೆ ಲಾವಣಿಯನ್ನು ವೀಕ್ಷಿಸುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಮರಾಠಾ ಸಾಮ್ರಾಜ್ಯದ ಅವನತಿಯೊಂದಿಗೆ ಲಾವಣಿಯ ಭವಿಷ್ಯವೂ ಮಸುಕು ಮಸುಕಾಗುತ್ತಾ ಬಂದಿತು. ಲಾವಣಿಗಳಲ್ಲಿ ನಿರ್ಗುಣಿ ಲಾವಣಿಯು ಆಧ್ಯಾತ್ಮಿಕ ವಿಷಯ ಸಂಬಂಧಿತವಾಗಿದ್ದರೆ, ಶೃಂಗಾರ ಲಾವಣಿಯು ಸ್ತ್ರೀ-ಪುರುಷ ಸಂಬಂಧಿತ (ಪ್ರೇಮ, ಕಾಮ, ವಿರಹ ಇತ್ಯಾದಿ). ದೇಶಭಕ್ತಿಯ, ಸಾಮಾಜಿಕ ವಿಷಯಗಳನ್ನಾಧರಿಸಿದ ಲಾವಣಿಗಳು ಇದ್ದರೂ ಮೇಲುಗೈ ಮಾತ್ರ ಶೃಂಗಾರ ಲಾವಣಿಯದ್ದೇ.

ಮಹಾರಾಷ್ಟ್ರದ ಜಾನಪದ ಕಲಾಪ್ರಾಕಾರವಾದ ತಮಾಶಾದ ಭಾಗವಾಗಿ ಲಾವಣಿಯೂ ಬರುತ್ತದೆ. ಆದರೆ ಲಾವಣಿಗೆ ತನ್ನದೇ ಆದ ಅಸ್ತಿತ್ವವೂ ಇದೆ; ಇತಿಹಾಸವೂ ಇದೆ. ಲಾವಣಿಯಲ್ಲಿ ಮಾತ್ರ ಕಲಾವಿದೆಯು ಸಭಿಕರನ್ನು ತನ್ನ ಅಭಿನಯದೊಂದಿಗೆ ಸಂವಾದಕ್ಕೆಳೆಯುತ್ತಾಳೆ; ಪ್ರತಿಕ್ರಿಯಿಸಲು ಪ್ರೊತ್ಸಾಹಿಸುತ್ತಾಳೆ. ಬೇರೆ ಎಲ್ಲಾ ನೃತ್ಯಪ್ರಾಕಾರಗಳಲ್ಲಿ ಸಭಿಕರು ಮೂಕಪ್ರೇಕ್ಷಕರು ಮಾತ್ರ. ಲಾವಣಿಗಳನ್ನೇ ಪ್ರದರ್ಶಿಸುವ ಥಿಯೇಟರ್‌ಗಳಲ್ಲಿ ದೊಡ್ಡ ಮೊತ್ತದ ಟಿಕೆಟ್ ಪಡೆದು ಬಂದ ಜನರ ಮುಂದೆ ಸಾದರಪಡಿಸುವ ನೃತ್ಯವೇ ಪ್ರಾಮುಖ್ಯವಾಗುವ ಲಾವಣಿಯನ್ನು ಪಢಾಚಿ ಲಾವಣಿ ಎನ್ನುತ್ತಾರೆ. ಒಬ್ಬ ಅಥವಾ ಬೆರಳೆಣಿಕೆಯ ಜನರ ಮುಂದೆ ಮಾಡಲಾಗುವ ಖಾಸಗಿ ಲಾವಣಿ ಬೈಠಕ್ ಲಾವಣಿ. ಇಲ್ಲಿ ಹಾಡಿಗೆ ಹೆಚ್ಚು ಪ್ರಾಶಸ್ತ್ಯ. ಒಂದೇ ಥಿಯೇಟರ್‌ನಲ್ಲಿದ್ದು ಒಬ್ಬರ ತರುವಾಯ ಇನ್ನೊಬ್ಬರು ಅಂದರೆ ಬಾರಿಬಾರಿಗೆ ಬಂದು ಲಾವಣಿ ಪ್ರದರ್ಶನ ಮಾಡುವುದಕ್ಕೆ ‘ಸಂಗೀತ ಬಾರಿ’ ಎನ್ನಲಾಗುತ್ತದೆ. ಲಾವಣಿ ನೋಡಲು ಬರುವವರು ಪುರುಷರೇ. ತಮಗಿಷ್ಟವಾದವರ ಮೇಲೆ ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸಲು ನೋಟುಗಳನ್ನು ಸುರಿಯುತ್ತಾರೆ, ಸದ್ಯ ಬಾರ್ ಡ್ಯಾನ್ಸ್ ಗಳಲ್ಲಾಗುವಂತೆ.

ಪುಣೆಯ ಸುಪ್ರಸಿದ್ಧ ಆರ್ಯಭೂಷಣ್ ಥಿಯೇಟರ್ ಒಳಗೊಂಡಂತೆ ಸದ್ಯ ಸುಮಾರು ೫೦ ಲಾವಣಿ ಥಿಯೇಟರ್‌ಗಳು ಮಹಾರಾಷ್ಟ್ರದಲ್ಲಿವೆ. ಅಲೇಮಾರಿ ಬುಡಕಟ್ಟುಗಳಾದ ಡೊಂಬರ ಹಾಗೂ ಭಾತು ಕೊಲಾಟಿ ಜನಾಂಗದವರು ಹಿಂದೂಗಳಾದರೆ, ಕಳವತ್ ಸಮಾಜದವರು ಮುಸಲ್ಮಾನರು. ತಮ್ಮನ್ನು ಮಸ್ತಾನಿಯ ವಂಶಜರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಹೆಣ್ಮಕ್ಕಳು ಮುಸ್ಲಿಮ್ ಸಂಪ್ರದಾಯದೊಂದಿಗೆ ಹಿಂದೂ ರೀತಿನೀತಿಗಳನ್ನು ಸಹ ನಿಷ್ಠೆಯಿಂದ ಪಾಲಿಸುತ್ತಾ ಬಂದವರು. ಹಣೆಗೆ ತಿಲಕವಿಟ್ಟು ತುರುಬಿನಲ್ಲಿ ಮಲ್ಲಿಗೆ ಮಾಲೆ ಮುಡಿದು ಸರ್ವಾಲಂಕಾರಭೂಷಿತೆಯಾಗಿ ಲಾವಣಿ ಹಾಡಲು, ನೃತ್ಯ ಮಾಡಲು ತೊಡಗಿದರೆ ಇವರನ್ನು ಯಾರೂ ಹಿಂದೂಗಳಲ್ಲವೆಂದು ಹೇಳಲು ಸಾಧ್ಯವೇ ಇಲ್ಲ.

ಈ ಮೂರೂ ಸಮಾಜದವರು ಹಲವಾರು ತಲೆಮಾರುಗಳಿಂದ ಲಾವಣಿಯನ್ನೇ ತಮ್ಮ ಬದುಕಿನ ವ್ಯವಸಾಯವನ್ನಾಗಿಸಿಕೊಂಡು ಬಂದಿದ್ದರೂ ಇನ್ನು ಕೆಲವರು ಲಾವಣಿಯ ಆಕರ್ಷಣೆಯಿಂದ ಥಿಯೇಟರ್ ಸೇರಿದವರೂ ಇದ್ದಾರೆ. ಈ ಸಮಾಜದ ಪುರುಷರು ಹೆಚ್ಚಾಗಿ ಪಕ್ಕವಾದ್ಯಗಳನ್ನು ನುಡಿಸಲು, ಇತರ ಮೇಲ್ವಿಚಾರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಥಿಯೇಟರ್‌ನ ಮಾಲಿಕತ್ವ ಮಾತ್ರ ಮಹಿಳೆಯರದ್ದೇ. ಇವರ ಮಕ್ಕಳನ್ನು ಈಗೀಗ ಉನ್ನತ ಶಿಕ್ಷಣ ಪಡೆಯಲು ಕಳುಹಿಸುತ್ತಾ ಬಂದಿರುವುದು ಕೂಡ ಇವರ ಸಂಖ್ಯೆಯಲ್ಲಿ ಇಳಿತಕ್ಕೆ ಕಾರಣವಿರಬಹುದು. ಇವರಲ್ಲಿ ಮದುವೆ ನಿಷಿದ್ಧ. ಗೆಜ್ಜೆಪೂಜೆಯಾದ ಲಾವಣ್ಯವತಿಗೆ ಯಾವುದಾದರೊಬ್ಬ ಶ್ರೀಮಂತ ಯಜಮಾನನಾಗಿ ದೊರಕುತ್ತಾನೆ. ಅವನಿಗೆ ಅವನದೇ ಆದ ಕುಟುಂಬ ಇತರ ಹೆಣ್ಮಕ್ಕಳ ಸಹವಾಸವಿದ್ದರೂ ಆಕೆ ಮಾತ್ರ ಅವನಿಗೆ ನಿಷ್ಠಳಾಗಿರಬೇಕು. ಅವನಿಂದ ಮುಕ್ತಳಾದರೆ ಬೇರೊಬ್ಬನನ್ನು ಯಜಮಾನನನ್ನಾಗಿ ಸ್ವೀಕರಿಸುತ್ತಾಳೆ. ಮಕ್ಕಳನ್ನು ಹೆರುತ್ತಾಳೆ. ಆದರೆ ಮಕ್ಕಳು ಅವಳ ಹೆಸರನ್ನು ಹಚ್ಚಿಕೊಳ್ಳುತ್ತಾರೆ. ಇಲ್ಲಿ ಮಾತೃಪ್ರಧಾನ ವ್ಯವಸ್ಥೆಯಿರುವುದನ್ನು ಕಾಣಬಹುದು.

ಪ್ರತಿಷ್ಠಿತ ಜನರಾಶ್ರಯದಲ್ಲಿದ್ದ ಲಾವಣ್ಯವತಿಯರು ಕಾಲಕ್ರಮೇಣ ಹೊಟ್ಟೆಪಾಡಿಗಾಗಿ ಗಿರಾಕಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಶೃಂಗಾರ ಪ್ರಧಾನ ಲಾವಣಿಯನ್ನೇ ನೆಚ್ಚಿಕೊಂಡರು. ನರ್ತಕಿ ಹಾಗೂ ಗಿರಾಕಿಗಳ ನಡುವೆ ಸಾಕಷ್ಟು ಅಂತರವಿದ್ದು, ದೈಹಿಕ ಸಂಪರ್ಕಕ್ಕೆ ಅವಕಾಶವೇ ಇಲ್ಲದಿದ್ದರೂ ವಿನಾಕಾರಣ ಲಾವಣಿಗೆ ಅಶ್ಲೀಲತೆಯ ಲೇಬಲ್ ಹಚ್ಚಿ ಲಾವಣಿ ನೋಡುವವರು ವೇಶ್ಯಾವಾಟಿಕೆಗೆ ಹೋಗುವವರಷ್ಟೇ ಕೀಳುವರ್ಗದವರೆನ್ನುವ ಅಭಿಪ್ರಾಯ ಜನರಲ್ಲಿ ನೆಲೆನಿಂತಿತು. ಮಾತ್ರವಲ್ಲದೆ ಪ್ರಾರಂಭದಲ್ಲಿ ಮರಾಠಿ ಚಲನಚಿತ್ರಗಳು ಕಾಲಕ್ರಮೇಣ ಹಿಂದಿ ಚಲನಚಿತ್ರಗಳಲ್ಲೂ ಲಾವಣಿಯ ಕಳಪೆ ಚಿತ್ರೀಕರಣದಿಂದಾಗಿ ಲಾವಣಿಯ ಕುರಿತಾದ ಜನಾಭಿಪ್ರಾಯ ಕುಸಿಯಿತು. ಮುಂಬಯಿಯಲ್ಲಿ ಪರೇಲ್-ಲಾಲ್‌ಭಾಗ್ ಪರಿಸರದಲ್ಲಿದ್ದ (ಸುಪ್ರಸಿದ್ಧ ಹನುಮಾನ್ ಥಿಯೇಟರ್) ಮೂರ್ನಾಲ್ಕು ಥಿಯೇಟರ್‌ಗಳೂ ಸೇರಿದಂತೆ ಮಹಾರಾಷ್ಟ್ರದ ಒಂದೊಂದೇ ಥಿಯೇಟರ್‌ಗಳು ಮುಚ್ಚಲ್ಪಟ್ಟವು. ಲಾವಣಿಯನ್ನೇ ತಮ್ಮ ಧರ್ಮವೆಂದು ನಂಬಿಕೊಂಡು ಬಂದಿದ್ದ ಲಾವಣ್ಯವತಿಯರು ಕಂಗಾಲಾದರು.

ಈ ಸಮಯದಲ್ಲಿ ಲಾವಣ್ಯವತಿಯರ ಪಾಲಿಗೆ ದೇವರಂತೆ ಬಂವರೆಂದರೆ ಲಾವಣ್ಯವತಿಯರ ಕುರಿತಾಗಿ ಡಾಕ್ಯುಮೆಂಟರಿ ಮಾಡಬೇಕೆನ್ನುವ ಹಂಬಲದ ಸಾವಿತ್ರಿ ಮೆಧಾತುಲ್ ಹಾಗೂ ಸಂಗೀತ ಬಾರಿಯ ಕುರಿತು ಕೃತಿರಚನೆ ಮಾಡಬಯಸುತ್ತಿದ್ದ ಭೂಷಣ್ ಕೊರಗಾಂವಕರ್. ಸಮಾನ ಆಸಕ್ತಿಯಿದ್ದ ಇವರಿಬ್ಬರೂ ಕೂಡಿ ೨೦೦೪ರಿಂದ ತೊಡಗಿ ಹತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿದರು. ಪುಣೆಯಲ್ಲಿದ್ದ ಏಳು ಸಂಗೀತ್ ಬಾರಿ ಥಿಯೇಟರ್ ಹಾಗೂ ಸೊಲ್ಲಾಪುರ, ಅಹ್ಮದ್ನಗರ, ಮರಾಠವಾಡಾ ಮುಂತಾದ ಕಡೆಯಿದ್ದ ಎಲ್ಲಾ ಸಣ್ಣಪುಟ್ಟ ಥಿಯೇಟರ್‌ಗಳನ್ನು ಕಂಡು ಹಿಡಿದು ಅಲ್ಲಿಯ ಲಾವಣ್ಯವತಿಯರನ್ನು ಸಂದರ್ಶನ ನಡೆಸಿದಾಗ ಲಾವಣಿಯ ಕುರಿತು ಬೇರೆಯೇ ಚಿತ್ರಣ ಅವರ ಕಣ್ಮುಂದೆ ಅನಾವರಣಗೊಂಡಿತು. ಇಷ್ಟು ಕಲಾತ್ಮಕವಾದ ಕಲಾಪ್ರಕಾರವನ್ನು ಅಶ್ಲೀಲತೆಯ ಮಸಿ ಬಳೆದು ಮೂಲೆಗೆಸೆದ ಪರಿ ಅವರನ್ನು ದಿಗಿಲುಗೊಳಿಸಿತು. ಲಾವಣಿಗಾಗಿ ಏನಾದರೂ ಮಾಡಬೇಕೆನ್ನುವ ತುಡಿತ ಶುರುವಾಯಿತು.

ಸಾವಿತ್ರಿಯವರ ಡಾಕ್ಯುಮೆಂಟರಿ ಹಾಗೂ ಪುಣೆಯ ರಾಜಹಂಸ ಪ್ರಕಾಶನದವರು ಪ್ರಕಟಿಸಿದ ಭೂಷಣ್ ಕೊರ್‌ಗಾಂಕರ್ ಬರೆದ ‘ಸಂಗೀತ ಬಾರಿ’ (೨೦೧೪) ಕೃತಿ ಜನರ ಕಣ್ಣಿನಪೊರೆಯನ್ನು ಕಳಚಿತು. ತುಸು ಅರಿವು ಮೂಡಿಸಿ ಕುತೂಹಲ ಕೆರಳಿಸಿತು. ಅದಾಗಲೇ ಸಾವಿತ್ರಿ ಹಾಗೂ ಭೂಷಣ್ ಅವರು ಕೆಲವು ಲಾವಣ್ಯವತಿಯರನ್ನು ಆಯ್ದು ತಮ್ಮ ‘ಸಂಗೀತಬಾರಿ’ ನಾಟಕದ ತಯಾರಿಗೆ ತೊಡಗಿದ್ದರು. ‘ಬಾಲಿವುಡ್ನ ನೃತ್ಯಪ್ರಾಕಾರಗಳಲ್ಲಿ ಕಳೆದುಹೋಗಿದ್ದ ಈ ಕಲಾಪ್ರಾಕಾರದ ನಿಜಸ್ವರೂಪವನ್ನು ಜನರಿಗೆ ಪರಿಚಯಿಸುವ ಹಾಗೂ ಸ್ವತಃ ಲಾವಣ್ಯವತಿಯರು ತಮ್ಮ ಕಥೆಯನ್ನು ಜನರಲ್ಲಿ ನಿವೇದಿಸುವಂತಹ ವೇದಿಕೆಯನ್ನು ನಿರ್ಮಾಣ ಮಾಡಿ ಅಳಿವಿನಂಚಿನಲ್ಲಿರುವ ಅಪರೂಪದ ಲಾವಣಿಗಳನ್ನು ಪ್ರದರ್ಶಿಸುವ ಅದನ್ನು ಪುನರುಜ್ಜೀವಗೊಳಿಸುವ ಅವಶ್ಯಕತೆ ನನಗೆ ಕಾಣಿಸಿತು’ ಎನ್ನುತ್ತಾರೆ ಭೂಷಣ್ ಅವರು. ಯಾಕೆಂದರೆ ಮರಾಠಿ ಜನರಿಗೇ ಲಾವಣಿ ಮತ್ತು ತಮಾಶಾದ ನಿಜಾರ್ಥ ಗೊತ್ತಿರಲಿಲ್ಲ. ಕಾರಣ ಮರಾಠಿ ಚಲನಚಿತ್ರಗಳು ಹಾಗೂ ಸಾಹಿತ್ಯದಲ್ಲಿ ಲಾವಣಿಯನ್ನು ತಮಾಶಾವೆಂದೇ ಪ್ರತಿಬಿಂಬಿಸಲಾಗಿತ್ತು. ತಮಾಶಾ ಎಂದರೆ ಮರಾಠಿ ಕಲಾಪ್ರಾಕಾರ. ಊರಿಂದೂರಿಗೆ ತಿರುಗುತ್ತಾ ಪ್ರದರ್ಶನಗೊಳ್ಳುವ ತಮಾಶಾದಲ್ಲಿ ಗಣಪತಿ ವಂದನೆ, ಗೌಲಣ್ ಅಂದರೆ ಗೋಪಿಯರೊಂದಿಗಿನ ಕೃಷ್ಣನ ಚೆಲ್ಲಾಟ, ಬಟಾವಾಣಿ (ವಿಡಂಬನಾತ್ಮಕ, ಹಾಸ್ಯಲೇಪಿತ ಮಾತುಗಾರಿಕೆ), ಸವಾಲ್-ಜವಾಬ್ (ಪ್ರಶ್ನೋತ್ತರ) ಹಾಗೂ ಲಾವಣಿ ಇರುತ್ತದೆ ಎನ್ನುವ ವಿಷಯ ತಿಳಿದವರು ಬಹಳ ಕಡಿಮೆ.

ಅಷ್ಟರವರೆಗೆ ತಮ್ಮ ತಮ್ಮ ಥಿಯೇಟರ್‌ಗಳಲ್ಲಷ್ಟೇ ಕೇವಲ ಪುರುಷರ ಮುಂದೆ ನರ್ತಿಸುತ್ತಿದ್ದ ಲಾವಣ್ಯವತಿಯರನ್ನು ವಿಭಿನ್ನ ವೇದಿಕೆಗಳ ಮೇಲೆ ಸ್ತ್ರೀ-ಪುರುಷರ ಮುಂದೆ ನರ್ತಿಸುವಂತೆ ಮನವೊಲಿಸಲು ತುಂಬಾ ಕಷ್ಟ ಪಡಬೇಕಾಯಿತವರಿಗೆ. ಆದರೆ ಪರಿಣಾಮ ಸಂಗೀತ ಬಾರಿ ನಾಟಕವು ಹೋದಲ್ಲೆಲ್ಲಾ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿತೆಂದರೆ ತಪ್ಪಿಲ್ಲ. ಸಂಗೀತ ಬಾರಿ ನಾಟಕದ ಹಲವು ಪ್ರಯೋಗಗಳ ನಂತರ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ‘ಲವ್ ಆಂಡ್ ಲಾವಣಿ’, ‘ಲಾವಣಿ ಕೆ ರಂಗ್’ ಹೀಗೆ ವಿಭಿನ್ನ ರೂಪದಲ್ಲಿ ಈ ಲಾವಣಿಗಳ ಪ್ರದರ್ಶನ ದೇಶವಿದೇಶಗಳಲ್ಲಿ ಎಲ್ಲಾ ಭಾಷಿಕರ ಮನಸೂರೆಗೊಂಡಿವೆ. ಜನರ ಆಸಕ್ತಿಯನ್ನು ಗಮನಿಸಿ ಲಾವಣಿಯ ಕಾರ್ಯಗಾರಗಳು, ಮಾಹಿತಿ ಪೂರೈಸುವ ಶಿಬಿರಗಳು, ಲಾವಣ್ಯವತಿಯರೊಂದಿಗೆ ಮುಖಾಮುಖಿ ಮಾತುಕತೆ ಹೀಗೆ ಬೇರೆಬೇರೆ ವಿಧಗಳಲ್ಲಿ ಲಾವಣ್ಯವತಿಯರ ಬದುಕಿನ ಬವಣೆಗಳನ್ನು, ಕಲೆಯ ಬಗ್ಗೆ ಅವರಿಗಿರುವ ಆಸ್ಥೆ, ಅಭಿಮಾನ, ತುಡಿತ ಎಲ್ಲವನ್ನೂ ಸಾಮಾನ್ಯರ ತನಕ ತಲುಪುವಂತೆ ಮಾಡಿ ಲಾವಣಿಯನ್ನು ಒಂದು ಕಲಾಪ್ರಾಕಾರವಾಗಿ ಸ್ವೀಕರಿಸುವ, ಇತರ ನೃತ್ಯಪ್ರಾಕಾರಗಳ ಸಾಲಿನಲ್ಲಿ ಸ್ಥಾನ ದೊರಕುವಂತೆ ಒದ್ದಾಡುವ ಸಾವಿತ್ರಿ ಮೆಧಾತುಲ ಹಾಗೂ ಭೂಷಣ್ ಕೊರಗಾಂವಕರ್ ಅವರ ಪ್ರಯತ್ನಕ್ಕೆ ನೂರು ಸಲಾಮ್‌ಗಳು.

ಮೈಸೂರು ರಂಗಾಯಣದಲ್ಲಿ ೨೦೨೦ರ ಬಹುರೂಪಿ ನಾಟಕೋತ್ಸವದಲ್ಲಿ ಕನ್ನಡಿಗರೊಂದಿಗೆ ‘ಸಂಗೀತ ಬಾರಿ’ ನೋಡಿ ದಂಗಾದವಳಿಗೆ, ನನ್ನ ಮರಾಠಿ ಗೆಳತಿಯರೊಂದಿಗೆ ‘ಲವ್ ಆಂಡ್ ಲಾವಣಿ’ ರೂಪದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಪ್ರತಿಷ್ಠಿತ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ನಲ್ಲಿ ಮಗದೊಮ್ಮೆ ನೋಡುವ ಆವಕಾಶ ದೊರಕಿತು. ಎಲ್ಲರಿಗೂ ಅರ್ಥವಾಗುವಂತೆ ಹಿಂದಿಯಲ್ಲೂ ವಿವರಣೆಯನ್ನು ನೀಡುವ ಕಾರಣ ಪ್ರೇಕ್ಷಕರಲ್ಲಿದ್ದ ಎಲ್ಲಾ ಭಾಷಿಕರೂ ಲಾವಣಿಯನ್ನು ಆನಂದಿಸಿದರು.

ಇಂದು ೨೯ ಎಪ್ರಿಲ್. ಅಂದರೆ ಅಂತಾರಾಷ್ಟ್ರೀಯ ನೃತ್ಯ ದಿನ. ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಕಥಕ್, ಭರತನಾಟ್ಯ, ಕೂಚುಪುಡಿ, ಒಡಿಸಿ, ಮಣಿಪುರಿ, ಮೋಹಿನಿ ಆಟ್ಟಂ, ಕಥಕಳಿಗಳಿರುವಂತೆಯೇ, ಜಾನಪದೀಯ ನೃತ್ಯಪ್ರಾಕಾರಗಳಂತೂ ಅಗಣಿತ. ಕರ್ನಾಟಕದಲ್ಲಿಯೇ ಯಕ್ಷಗಾನ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ… ಇತ್ಯಾದಿ ಇತ್ಯಾದಿ ಎಷ್ಟೊಂದು ಪ್ರಾಕಾರಗಳಿವೆ.

ಭಾರತದ ಹೆಚ್ಚಿನ ನೃತ್ಯಪ್ರಾಕಾರಗಳು ಸುಗ್ಗಿಯ ಸಂಭ್ರಮ, ದೇವಸ್ಥಾನಗಳಲ್ಲಿ ಆರಾಧನೆಯ ಭಾಗವಾಗಿ ಅಂದರೆ ಭಕ್ತಿಪ್ರಧಾನವಾಗಿರುವುದನ್ನು ಕಾಣುತ್ತೇವೆ. ಶೃಂಗಾರರಸವು ಬಹಳ ಸೂಕ್ಷ್ಮವಾಗಿ ನುಸುಳಿದರೂ ಅದು ರಾಧೆ ಮತ್ತು ಕೃಷ್ಣನ ಪ್ರೇಮವಾಗಿ.. ವಿರಹವೂ ದೇವನೊಂದಿಗಿನ ಮಿಲನಕ್ಕಾಗಿ.. ಅಲ್ಲಲ್ಲ ಐಕ್ಯಕ್ಕಾಗಿ ಹಂಬಲಿಸುವ ಭಕ್ತೆಯ ರೂಪದಲ್ಲಿ. ಆದರೆ ನಮ್ಮ ನೆರೆರಾಜ್ಯದ ಲಾವಣಿ ನೃತ್ಯ ಮಾತ್ರ ಇದಕ್ಕೆ ಅಪವಾದ. ಇದು ಹೆಣ್ಣು-ಗಂಡಿನ ನಡುವಿನ ಪ್ರೀತಿ-ವಿರಹದ, ಕಾಮದ ಕಾತುರತೆಯ ಪ್ರತೀಕ. ಎದೆಯೊಳಗೆ ದುಃಖ ಮಡುಗಟ್ಟಿಕೊಂಡಿದ್ದರೂ ತುಟಿಗಳಲ್ಲಿ ನಗುಸೂಸುತ್ತಾ, ಕಣ್ಗಳಲ್ಲಿ ಮಿಂಚಿನ ಹೊಳಪು ಕಾಣಿಸುತ್ತಾ, ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುವ ಲಾವಣ್ಯವತಿಯರಿಗೆ ಶೃಂಗಾರಗೊಳ್ಳುವ ಪ್ರಕ್ರಿಯೆ ಅತ್ಯಂತ ಪ್ರಿಯ. ಹೃದಯದ ಭಾವನೆಗಳನ್ನು ನಿಸ್ಸಂಕೋಚವಾಗಿ ಅಭಿವ್ಯಕ್ತಿಸುವ ಈ ಕಲಾಪ್ರಾಕಾರಕ್ಕೆ ಕಲಾವಿದೆಯರಿಗೆ ಇನ್ನಾದರೂ ಮಾನ್ಯತೆ ದೊರಕಲಿ.

‍ಲೇಖಕರು avadhi

April 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: