ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್.. 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

35

ಜಾರುತ್ತಿದ್ದ ಮಾಸ್ಕ್ ಅನ್ನು ಎಡಗೈಯಿಂದ ಸರಿಪಡಿಸಿಕೊಳ್ಳುತ್ತಾ ಆಸ್ಪತ್ರೆಯಿಂದ ಕಳುಹಿಸಲಾಗಿದ್ದ ದಾಖಲೆಯಲ್ಲಿ ಮುಳುಗಿ ಹೋದ ರಾಜಪ್ಪ ಮೂಲಿಮನೆ. ಆ ನಗರದಲ್ಲಿ ಘಟಿಸುವ ಹುಟ್ಟು-ಸಾವುಗಳ ವಿವರವು ನಿತ್ಯ ಪುರಸಭೆಯ ಜನನ ಮರಣ ದಾಖಲೆಯ ವಿಭಾಗಕ್ಕೆ ಬಂದು ಸೇರುತ್ತಿದ್ದವು. ಅದನ್ನು ಕಛೇರಿಯ ಕಡತದಲ್ಲಿ ನಮೂದಿಸಿ ಪ್ರಮಾಣ ಪತ್ರ ಪಡೆಯಲು ಬರುವವರಿಗೆ ಅದನ್ನು ನೀಡುವ ಕೆಲಸ ರಾಜಪ್ಪನದು. ಈ‌ ಮೊದಲು ಟಪಾಲು ಸೆಕ್ಷನ್ ನೋಡಿಕೊಳ್ಳುತ್ತಿದ್ದ ರಾಜಪ್ಪ ಈಗ ಈ ಹೊಸ ಕೆಲಸಕ್ಕೆ ನಿಯೋಜಿತನಾಗಿದ್ದ. ಇಷ್ಟು ದಿನ ಬಾಯಿ ತುಂಬುವ ಅಡಿಕೆ-ವಿಳ್ಯೆದೆಲೆಯೊಂದಿಗೆ ತನ್ನ ಪಾಡಿಗೆ ತಾನು ಬದುಕುತ್ತಿದ್ದ ಅವನು ಈಗ ಹೊಸ ಸೆಕ್ಷನ್ಗೆ ಬಂದ ಮೇಲೆ ಅವನೊಳಗೆ ಸದ್ದಿಲ್ಲದೆ ಅವಿತುಕೊಂಡಿದ್ದ ಸಣ್ಣ ಕಿಡಿಯೊಂದು ಮಿಸುಕಾಡಲು ಶುರುವಾದ ಅನುಭವವಾಗತೊಡಗಿತ್ತು ಅವನಿಗೆ.

ಕಾಲವು ಎಂದೊ ಹೊರದಬ್ಬಿಹೋದ ಅಥವಾ ಕಾಲದೊಂದಿಗೆ ಓಡಲು ಸಾಧ್ಯವಾಗದೆ ಉಳಿದುಕೊಂಡು ಬದುಕಿನ ಬೆವರು ಒರೆಸಿಕೊಳ್ಳುತ್ತಾ ರಸ್ತೆಯ ಬದಿ ಕೂತ ಅನಾಮಿಕನಂತೆ ಕಾಣುತ್ತಿದ್ದ ರಾಜಪ್ಪ ಮೂಲಿಮನೆ. ಆತನ ಅರವತ್ತು ರೂಪಾಯಿಯ ಹವಾಯಿ ಚಪ್ಪಲಿಯ ಪಟಪಟ ಸದ್ದಿಗೆ ನಿತ್ಯವೂ ಪುರಸಭೆಯ ಕಛೇರಿ ಆಕಳಿಸಿ ಏಳುತ್ತಿತ್ತು. ಎಲ್ಲರಿಗಿಂತ ಮೊದಲು ಬಂದು ಕಛೇರಿಯ ಧೂಳು ಹಿಡಿದ ಹೊರ ಕೊಠಡಿಯಲ್ಲಿ ಉದ್ದ ಸರಳುಗಳ ಕಿಟಕಿ ಎದುರಿಗೆ ಒಂದು ಲೋಹದ ಕುರ್ಚಿಯಲ್ಲಿ ತನ್ನ ಅರವತ್ತೈದು ಕೆಜಿಯ ತೂಕವನ್ನು ಚೆಲ್ಲಿ ಕೂರುತ್ತಿದ್ದ. ಬ್ರಿಟಿಷ್ ಕಾಲದ ಕೆಂಪು ಕಟ್ಟಡವಾದ ಆ ಕಛೇರಿಯು‌ ಇತಿಹಾಸದ ಕತೆಗಳನ್ನು ಬಂದವರ ಕಿವಿಗೆ ಪಿಸುಗುಡುತ್ತಾ ನಿಂತಿರುತ್ತಿತ್ತು. ಉದ್ದ ಸರಳುಗಳ ಕಿಟಕಿಯ ಮೂಲಕ ಉತ್ತರ ದಕ್ಷಿಣಕ್ಕೆ ಬಿದ್ದುಕೊಂಡ ರಸ್ತೆ, ಯಾರೊ ಅಟ್ಟಿಸಿಕೊಂಡು ಬಂದವರಂತೆ ಓಡುವ ವಾಹನಗಳು, ರಸ್ತೆಯ ಅಂಚಲ್ಲೇ ಭರ್ರನೆ ಉರಿಯುವ ಟೀ ಅಂಗಡಿಯ ಒಲೆ, ಅದೇ ಅಂಗಡಿಯವನು ಟೀ ಯನ್ನು ಮೇಲಿಂದ ಕೆಳಕ್ಕೆ ಸುರಿಯುವ ನಾಜೂಕು ಎಲ್ಲವೂ ಕಾಣುತ್ತಿದ್ದವು. ಇಡೀ ಬದುಕ ಕೇವಲ ಈ ಒಂದು ಕಿಟಕಿಯಲ್ಲಿ ತೂರಿಸಬಹುದಾದದ್ದು ನೋಡು ಎಂದು ಆಗಾಗ್ಗೆ ಆತ ತನ್ನೊಂದಿಗೆ ಹೇಳಿಕೊಂಡು ಸುಮ್ಮನಾಗುತ್ತದೆ. ಸಿಕ್ಕ ಚಿಕ್ಕ ಬಿಡುವುನ್ನೂ ಕೂಡ ವ್ಯರ್ಥ ಮಾಡದೇ ಟೀ ಅಂಗಡಿಯ ಬಳಿ ಸಾರಿ ಗಾಜಿನ ಲೋಟದಲ್ಲಿ ಅಂಗಡಿಯಾತ ಕೊಡುವ ಟೀ ಯನ್ನು ‘ಸ್ವರಕ್..’ ಎಂದು ಹೀರುತ್ತಾ ಅದೇ ಸದ್ದನ್ನು ತನಗೆ ದಕ್ಕುವ ಒಂದು ಸಮಾಧಾನ ಎಂದುಕೊಂಡು ಟೀ ಧ್ಯಾನದಲ್ಲಿ ಮುಳುಗಿ ಹೋಗುತ್ತಿದ್ದ. ಆ ಧ್ಯಾನ ದಯಪಾಲಿಸುವ ಒಂದು ಧನ್ಯತೆಯಿಂದ ತನ್ನ ಕೆಲಸವನ್ನು, ತನ್ನ ಬಾಳನ್ನು ಮರೆತು ಅರೆಕ್ಷಣ ಲೋಕದಿಂದ ಬಿಡುಗಡೆ ಪಡೆಯುತ್ತಿದ್ದ..

ನೇರ ಹೆಸರಿಟ್ಟುಕೊಂಡೆ ಬದುಕುವ ಈ ಊರಿನಲ್ಲಿ‌ ‘ಮೂಲಿಮನೆ’ ಎನ್ನುವ ಅಡ್ಡ ಹೆಸರಿನ ರಾಜಪ್ಪ ಆ ಊರಿನವನಲ್ಲ ಎಂದು ಯಾರಾದರೂ ಹೇಳಬಹುದಿತ್ತು. ದೂರದ ಹಾವೇರಿಯಿಂದ ಬಂದವನೆಂದು ಜನ ಮಾತಾಡಿಕೊಳ್ಳುತ್ತಿದ್ದರು. ತಿಂಗಳೊಮ್ಮೆ ಹಾವೇರಿಗೆ ಹೊರಟು ನಿಲ್ಲುತ್ತಿದ ರಾಜಪ್ಪ. ‘ಅಲ್ಲಿ ತಂಗಿ ಮನಿ ಅದಾ ಸಾಮಿ..’ ಅನ್ನುವ ಅವನ ಉತ್ತರವು ‘ತನಗೂ ಈ ಜಗತ್ತಿನ ಪಾಲಿಗೆ ಒಂದು ವಿಳಾಸವಿದೆ’ ಅನ್ನುವ ಹೇಳಲಾಗದ ಒಂದು ವಾದವನ್ನು ಅಡಗಿಸಿಕೊಂಡಿರುತ್ತಿತ್ತು. ಆದರೆ ಈ ನಡುವೆ ಅವನು ಹಾವೇರಿಗೆ ಹೋಗದೆ ಅನೇಕ ವರ್ಷಗಳೇ ಕಳೆದು ಹೋದದ್ದು ತನ್ನ ವಿಳಾಸ ಕಳೆದಕೊಂಡ ಹೊಸ ಊರಿನ ಪ್ರಯಾಣಿಕನಂತಾಗಿದ್ದ. ಎಂದಿನಿಂದ ಅವನು ತಾನು ತನ್ನ ಕೆಲಸವಷ್ಟೆ ಬದುಕು ಎಂದು ಉಳಿದುಕೊಂಡನೊ; ಕಾಲದ ಓಟದೊಂದಿಗೆ ತಪ್ಪಿಸಿಕೊಂಡವನಂತೆ ಆದನೊ ಹೇಳುವುದು ಕಷ್ಟ. ಅವನ ಅವ್ವ ಈತ ಮೂರು ವರ್ಷ ಇದ್ದಾಗಲೇ ಸತ್ತಳೆಂದು, ಅಪ್ಪ ಇನ್ನೊಂದು ಮದುವೆಯಾದನೆಂದು, ಬಂದ ಚಿಕ್ಕಮ್ಮ ಹಿಂಸೆ ಕೊಟ್ಟಳೆಂದು, ತಾನು ಮನೆಬಿಡಬೇಕಾಗಿ ಬರಬೇಕಾಯಿತು ಎಂದು, ಚಿಕ್ಕಮನಿಗೆ ಮಗಳು ಹುಟ್ಟಿದಳೆಂದು ಅವಳೇ ತನ್ನ ಪಾಲಿನ ವಿಳಾಸವೆಂದು.. ರಾಜಪ್ಪ ಆತ್ಮೀಯರ ಬಳಿ ಎಂದೊ ಹೇಳಿಕೊಂಡಿದ್ದ ಮಾಹಿತಿ ಬಿಟ್ಟರೆ ಇನ್ನುಳಿದಂತೆ ಅವನ ಬಗ್ಗೆ ಯಾವ ವಿಚಾರವೂ ಇಲ್ಲಿದ್ದವರಿಗೆ ಗೊತ್ತಿರಲಿಲ್ಲ.

ಹೀಗೇಕೆ ತಾನು ಹಾವೇರಿಗೆ ಹೋಗುತ್ತಿಲ್ಲ? ತನ್ನ ಸಂಸಾರದ ವಿಷಯವಾದರೂ ಏನು? ಜಗತ್ತಿನಿಂದ ತಪ್ಪಿಸಿಕೊಂಡವನಂತೆ ತಾನೇಕೆ ದಿನ ತಳ್ಳುತಿದ್ದೇನೆ ಎಂದು ಆತ ಯಾರಿಗೂ ಹೇಳಿರಲಿಲ್ಲ. ನಗರದ ಇಕ್ಕಟ್ಟಾದ ಓಣಿಯಲ್ಲಿ ಒಂದು ಖೋಲಿ‌ ಹಿಡಿದು ಅಲ್ಲಿಯೇ ರಾತ್ರಿ ಕಳೆಯುತ್ತಿದ್ದ. ರಾತ್ರಿ ಮಲಗಿ ಎದ್ದು ಬರಲು ಮನೆಯ ಅವಶ್ಯಕತೆಯಾದರೂ ಏಕೆಂದು ಆತ ಹತ್ತಾರು ಬಾರಿ ಯೋಚಿಸಿದ್ದ. ಒಮ್ಮೊಮ್ಮೆ ಪದ್ಯದ ಕೊನೆಯ ಸಾಲು ಹೊಳೆಯದೆ ಚಡಪಡಿಸುವ ಕವಿಯಂತೆಯೂ‌ ಮೊಗದೊಮ್ಮೆ ವರ್ಷಾನುಗಟ್ಟಲೆ ತಲೆಯಲ್ಲಿ ಕೊರೆದ ಕತೆಯನು ಬರೆದ ಕಥೆಕಾರನ ನಿರಾಳತೆಯೂ ಅವನಲ್ಲಿ ಕಾಣಿಸುತ್ತಿತ್ತು. ಯಾವ ದುಗುಡಗಳಿಲ್ಲದ ತುಂಬಿದ ನದಿಯ ಶಾಂತತೆಯಲ್ಲಿ ತನ್ನ ದಿನಗಳನ್ನು ಕಳುಹಿಸಿಕೊಡುತ್ತಿದ್ದ. ಮಾತುಗಳನ್ನು ಎಲ್ಲೊ ಕಳೆದುಕೊಂಡವನಂತೆ ಅವುಗಳನ್ನು ಹುಡುಕಿಕೊಳ್ಳುವ ದರ್ದು ಇಲ್ಲದವನಂತೆ ಹೆಚ್ಚು ಮೌನದಲ್ಲೆ ಇದ್ದು ಅದರಲ್ಲೇ ಒಂದು ಗಂಭೀರತೆ ಆವಾಹಿಸಿಕೊಂಡು ಉಳಿದುಹೋಗಿದ್ದ. ದಿನಗೂಲಿ ನೌಕರನಾಗಿ ಸೇರಿಕೊಂಡಿದ್ದ ರಾಜಪ್ಪ ನೌಕರಿಯನ್ನು ಕಾಯಂ ಮಾಡಿಸಿಕೊಳ್ಳಲು ಮಾಡಿದ ಪ್ರಯತ್ನಗಳನ್ನು, ಅದರಲ್ಲಾದ ಸೋಲನ್ನು, ಆರಂಭದ ಐದು ನೂರು ಸಂಬಳದ ವಿಚಾರವನ್ನು, ಅದರಲ್ಲೇ ತಾನೆಷ್ಟು ಖುಷಿಯಾಗಿದ್ದೆ ಎಂಬುದನ್ನು ರೋಚಕ ಕತೆಯನ್ನಾಗಿ ಪರಿವರ್ತಿಸಿಕೊಂಡು ಬಾಯಲ್ಲಿ‌ ಕವಳ ತುಂಬಿಕೊಂಡು‌ ಮಧ್ಯಾಹ್ನ ಊಟದ ತರುವಾಯ ತನ್ನ ಹೊಸ ಸಹೋದ್ಯೋಗಿಗಳಿಗೆ ಹೇಳುವ ಅವರ ಗತ್ತು ಅವರ ಬದುಕಿನ ಪುಟದಲ್ಲಿ ಎಂದೊ ಗಕ್ಕನೆ ನಿಂತು ಹೋಗಿತ್ತು.

ಫೈಲು ಮುಚ್ಚಿದ ರಾಜಪ್ಪ ಚಿಂತೆಗೆ ಜಾರಿದ. ಈ ನಡುವೆ ತನ್ನ ಮನಸ್ಸು ಸರಿ ಇಲ್ಲ ಎಂಬುದು ಅವನಿಗೆ ಅರ್ಥವಾಗಿತ್ತು. ಮರಣ ಪ್ರಮಾಣ ಪತ್ರ ಪಡೆಯಲು ಬಂದವರ ಬಳಿ ತನ್ನವರನು ಕಳೆದಕೊಂಡ ನೋವು ದಿನೇ ದಿನೇ ಕಡಿಮೆಯಾಗಿ ಅವರು ಉಳಿಸಿಟ್ಟು ಹೋದ ಆಸ್ತಿಯ ಬಗ್ಗೆ ಆಸಕ್ತಿ ಹೇಗೆ ಹೆಚ್ಚಾಗುತ್ತಲ್ಲ ಎಂದು ಯೋಚಿಸಿ ತಲ್ಲಣಿಸುತ್ತಿದ್ದ. ಬದುಕಿದ್ದವರು ಹೆಚ್ಚು ಸಂಪಾದಿಸಿ‌ ಸತ್ತು ಹೋದರೆ ಅವನ ಸಂಬಂಧಿಗಳು ಒಳಗೊಳಗೆ ಪಡುವ ಸಂಭ್ರಮಗಳು ಅವನನ್ನು ತೀವ್ರಗಾಗಿ ತಾಕುತ್ತಿದ್ದವು. ಜಗತ್ತು ಕೆಲವರ ಸಾವಿಗಾಗಿಯೇ ಕಾದು ಕೂತಿದೆಯೇನೊ ಎಂದು ಭಾಸವಾಗುತ್ತಿತ್ತು. ಪ್ರಮಾಣ ಪತ್ರ ಪಡೆಯಲು ಬಂದವರು ಸಾವನ್ನು ಲಾಭ ಮಾಡಿಕೊಳ್ಳಲು ಬಂದವರೇ ಆಗಿರುತ್ತಿದ್ದರು. ಏನನ್ನೂ ಕೂಡಿಡದವನ ಪ್ರಮಾಣಪತ್ರ ಮೂಸಲು ಕೂಡ ಯಾರೂ ಬರದಿರುವುದನು ಕಂಡು ಬೇಸರಿಸಿಕೊಳ್ಳುತ್ತಿದ್ದ. ಪ್ರಮಾಣಪತ್ರವು ಸತ್ತವರ ವಾರಸುದಾರಿಕೆಯ ಪಾಲನ್ನು ಅನುಭವಿಸಲು ಪಡೆಯುವ ಅನುಮತಿ ಪತ್ರ ಎಂದೇ ವ್ಯಾಖ್ಯಾನಿಸುತ್ತಿದ್ದ ರಾಜಪ್ಪ. ಸತ್ತವರ ಸಂಬಂಧಿಗಳು ಎರಡ್ಮೂರು ಬಣಗಳನ್ನು ಮಾಡಿಕೊಂಡು ‘ಅವ್ರು ಬಂದ್ ಕೇಳಿದ್ರೆ ಕೋಡ್ಬೇಡಿ ನೋಡಿ..’ ಎಂದು ತಾಕೀತು ಮಾಡುತ್ತಿದ್ದರು. ಇನ್ನೊಂದು ಬಣ ಮತ್ತೊಂದು ಬಣಕ್ಕೆ ಕೊಡಲೇಬೇಡಿ ಎಂದು ಖಡಕ್ ಸೂಚನೆ ನೀಡಿ‌ ಹೋಗುತ್ತಿತ್ತು. ಬಲು ತಲೆನೋವು ಕೊಡುತ್ತಿದ್ದ ಇಂತಹ ಪ್ರಕರಣಗಳನ್ನು ಅಧಿಕಾರಿಯ ಟೇಬಲಿಗೆ ಕಳುಹಿಸಿ‌ ಸುಮ್ಮನಾಗುತ್ತಿದ್ದ.

ದಿನಾ ಒಂದೆರಡು ಸಾವನ್ನು ಮಾತ್ರ ಕಾಣುತ್ತಿದ್ದ ಆ ನಗರ ಕರೋನ ಸಮಯದಲ್ಲಿ ದಿನಕ್ಕೆ ಮೂವತ್ತು‌ ನಲವತ್ತು ಸಾವುಗಳನ್ನು ನೋಡಬೇಕಾಯ್ತು. ಪ್ರತಿದಿನ ಬರುತ್ತಿದ್ದ ಸಾವಿನ ವಿವರಗಳನ್ನು ನೋಡಿಕೊಳ್ಳುತ್ತಿದ್ದ ರಾಜಪ್ಪ ‘ ಒಂದು ಎರಡು ಸಾವು ಆದಾಗ ಅದಕ್ಕಿರುತ್ತಿದ್ದ ಘನತೆ ಹಾಗೂ ಈಗ ನಲವತ್ತು ಐವತ್ತು ಸಾವುಗಳು ಬರೀ ನಂಬರೇ ಆಗಿ.. ಜನ ಲಾಟರಿ ನಂಬರ್ ಕೇಳುವಂತೆ ‘ಎಷ್ಟು ಇವತ್ತು ಸಾವು? ನಲವತ್ತಾ? ಅಷ್ಟೇನಾ ನಿನ್ನೆ ಐವತ್ತಾಗಿತ್ತು ಕಡಿಮೆಯಾಗಿದೆ ಒಳ್ಳೆದು ಒಳ್ಳೆದು’ ಎಂದು ಆದ ನಲವತ್ತು ಸಾವುಗಳಿಗೆ ಯಾವುದೇ ಬೆಲೆ ನೀಡದೆ ಸಾವನ್ನು ಬರೀ ನಂಬರ್ ಆಗಿ ಸ್ವೀಕರಿಸುವಂತೆ ಮಾಡಿದ ಈ ಹೊತ್ತಿನ ಮನಸ್ಥಿಗೆ ಮನಸ್ಸಲೇ ಶಾಪ ಹಾಕುತ್ತಿದ್ದ.

ಸಾವಿನ ಪ್ರಮಾಣ ಪತ್ರ ನೀಡುವ ಇದೇ ಜಾಗದಲ್ಲಿ ಮಗುವಿನ ಜನ್ಮ ಪ್ರಮಾಣಪತ್ರವನ್ನು‌ ಕೊಡುವಾಗ ಅವನ ಕೈಗಳು ಹೆಚ್ಚು ಪುಳಕಿತವಾಗುತ್ತಿದ್ದವು. ನೀಲ, ಶಂಕರ, ಗೌರಿ, ಶಿವ ಎಂಬ ಹೆಸರನ್ನು ಬರೆದುಕೊಟ್ಟ ಅದೇ ಕೈಗಳಿಂದ ಇಂದು ಹನಿ, ಇತಿಹಾಸ್, ನಿಶಾ, ಪ್ರಸಿದ್, ಸೃಷ್ಟಿ ಎನ್ನುವ ವಿಭಿನ್ನವಾದ ಹೆಸರುಗಳನ್ನು ಬರೆಯುವಾಗ ‘ಏನ್ ಹೆಸ್ರೊ, ಏನ್ ಕಾಲನೊ..’ ಅಂತ ಸಣ್ಣಗೆ ಗೊಣಗುತ್ತಿದ್ದ. ಪ್ರತಿ ಜನನ ಪ್ರಮಾಣಪತ್ರ ನೀಡುವಾಗಲೂ ‘ಒಳ್ಳೆದಾಗ್ಲಿ ಒಳ್ಳೆದಾಗ್ಲಿ..’ ಎನ್ನುವ ಒಂದು ಕಾಯಂ ಮಾತನ್ನು ಎಂದೂ ತಪ್ಪದೆ ಆಡುತ್ತಿದ್ದ. ಇಲ್ಲಿಂದಲೇ ಅಧಿಕೃತಗೊಳ್ಳುವ ಹುಟ್ಟೊಂದು ಇಲ್ಲೇ ಅಧಿಕೃತವಾಗಿ ಕೊನೆಯಾಗಿ ಪತ್ರ ತೆಗೆದುಕೊಳ್ಳುವ ಪರಿಗೆ ನಿತ್ಯ ಬೆರಗಾಗುತ್ತಿದ್ದ. ಇಡೀ ಬದುಕು ಇಲ್ಲಿಂದಲೇ ಆರಂಭವಾಗಿ ಹೊರಟು, ಎಲ್ಲೆಲ್ಲೊ ಅಲೆದಾಡಿ ಮತ್ತೆ ಬಂದು ಇಲ್ಲೇ ಮುಗಿಯುವ ಮತ್ತು ಅದನ್ನು ದಾಖಲಿಸುವ ತಾನು ಚಿತ್ರಗುಪ್ತನೊ ಅಂತ ತನ್ನಷ್ಟಕ್ಕೆ ತನಗೆ ಕೇಳಿಕೊಂಡು ಸಣ್ಣಗೆ ನಕ್ಕು ಸುಮ್ಮನಾಗುತ್ತಿದ್ದ. ಈ ಕೆಲಸದಲ್ಲಿ ಒಮ್ಮೊಮ್ಮೆ ಹುರುಪು, ಒಮ್ಮೊಮ್ಮೆ ಕೊರಗು ಅವನನ್ನು ಮೆತ್ತಿಕೊಳ್ಳುತ್ತಿತ್ತು ಅವನ ಬದುಕಿನಂತೆ.

ಇತ್ತೀಚೆಗೆ ತೀವ್ರ ಚಿಂತೆಗಿಳಿದ ರಾಜಪ್ಪನಿಗೆ ಕಾರಣಗಳಿದ್ದವು. ತನ್ನವರು ಯಾರೂ ಇಲ್ಲ ಎಂಬ ಕೊರಗೊಂದು ಅವನನ್ನು ಸದಾ ಬಾಧಿಸುತ್ತಿತ್ತು. ಹಾವೇರಿಯ ಅವನ ಖಾಯಂ ವಿಳಾಸ ಎಂದೊ ಮುಚ್ಚಿ ಹೋಗಿತ್ತು. ತಂಗಿ ಕಮಲ ಮೊದಲ ಹೆರಿಗೆಯಲ್ಲೇ ಮಗುವಿನ ಸಮೇತ ಇಲ್ಲವಾಗಿದ್ದು ಅವನನ್ನು ಒಂಟಿಯಾಗಿಸಿತ್ತು. ಎಂದೊ ಊರ ಬಿಟ್ಟ ಬಂದ ಅವನನ್ನು ಯಾವ ಬಂಧುವೂ ನೆನಪಿಟ್ಟುಕೊಂಡಿರಲಿಲ್ಲ. ಯಾವ ಬಂಧನವೂ ಬೇಡವೊಂದ ರಾಜಪ್ಪ ಎಲ್ಲರಿಂದ ದೂರವೇ ಉಳಿದಿದ್ದ.

ಈ ಇಳಿಗಾಲದಲ್ಲಿ ಯಾರಾದ್ರೂ ನನ್ನವರು ಬೇಕಿತ್ತು ಅನ್ನುವ ಯೋಚನೆ ಬಂದಾಗ ಮುದುಡಿ ಹೋಗುತ್ತಿದ್ದ. ಈ ಸಾವು ಕರೋನದಿಂದಲೇ ಬಂದರೆ ಸಂಸ್ಕಾರವನ್ನೂ ಸರ್ಕಾರವೇ ಮಾಡಿಮುಗಿಸುವುದರಿಂದ ತೀರ ಅನಾಥವಾಗಿ ಸಾಯುವ ಪರಿಯಿಂದ ತಪ್ಪಿಸಿಕೊಳ್ಳಬಹುದೆಂದು ಆಗಾಗ ಯೋಚಿಸುತ್ತಿದ್ದ. ಕರೋನ ಇವನ ಮೇಲೆ ಯಾವ ಕರುಣೆಯನ್ನು ತೋರಿರಲಿಲ್ಲ.

ತಾನು ನಗರದ ಆ ಇಕ್ಕಟ್ಟಾದ ಓಣಿಯ ತನ್ನ ಪುಟ್ಟ ಖೋಲಿಯಲ್ಲಿ ಅಥವಾ ಕಛೇರಿಯಲ್ಲಿ ಇಲ್ಲವೇ ಆ ಟೀ ಅಂಗಡಿಯಲ್ಲಿ ಪ್ರಾಣ ಬಿಡಬಹುದು. ಎಲ್ಲಾ ಪರಿಚಿತರೇ ಇರುವುದರಿಂದ ತನ್ನ ಸಾವೆಂದು ಅನಾಥ ಎನಿಸುವುದಿಲ್ಲ. ತನ್ನ ದೇಹವೂ ಅನಾಥವಾಗಿ ಉಳಿದು ಮುನ್ಸಿಪಲ್ ನವರು ಬಂದು ಎತ್ತಿಕೊಂಡು ಹೋಗುವ ಹಂತಕ್ಕೆಂದೂ ಹೋಗುವುದಿಲ್ಲ. ಬಂಧುಗಳಲ್ಲದಿದ್ದರೂ ಪರಿಚಿತ ಮಿತ್ರರು ತನ್ನ ದೇಹಕ್ಕೆ ನ್ಯಾಯೋಚಿತವಾದ ಸಂಸ್ಕಾರವನ್ನು ಕರುಣಿಸುತ್ತಾರೆ. ಅಷ್ಟಕ್ಕೂ ನನಗೇಕೆ ಸಂಸ್ಕಾರದ ಹಂಬಲ. ಸಾಯುವವರೆಗೂ ಮಾತ್ರ ನನ್ನ ಬದುಕು ಅಮೇಲಾದ್ರೂ ತನ್ನ ಕೈಯಲ್ಲಿ ಏನಿದೆ? ಅದಕ್ಕಾಗಿ ಯೋಚಿಸುವುದರಲ್ಲಿ ಯಾವ ಅರ್ಥವಿದೆ ಎಂದು ಯೋಚಿಸಿ-ಯೋಚಿಸಿ ಟೀ ಕುಡಿದು ನಿರುಮ್ಮಳವಾಗುವ ಪ್ರಯತ್ನಗಳನ್ನು ಸದಾ ಜಾರಿಯಲ್ಲಿಟ್ಟಿರುತ್ತಿದ್ದ.

ಕೆಲಸಕ್ಕೆ ಸೇರಿದ ಆರಂಭದಲ್ಲಿ ಮಾಡಿಸಿದ ಮೂರಾಲ್ಕು ವಿಮಾ ಪಾಲಿಸಿಗಳನ್ನು ಬಿಟ್ಟರೆ ಅವನ ಆಸ್ತಿಯೆಂಬುದು ಯಾವುದೂ ಇರಲಿಲ್ಲ. ಊರಲ್ಲಿ ಅವನಿಗೆ ಸೇರಬೇಕಾದ ಜಮೀನು ಇತ್ತಾದರೂ ಊರು ಬಿಟ್ಟು ಬಂದ ದಿನವೇ ಆ ವಿಚಾರವನ್ನೂ ಅಲ್ಲಿಯೇ ಬಿಟ್ಟು ಬಂದಿದ್ದ. ಪ್ರತಿತಿಂಗಳ ಸಂಬಳ ಅವನ ಖಾತೆಗೆ ಜಮೆಯಾಗುತ್ತಿತ್ತು. ಈ ನಡುವೆ ಅದು ಎಷ್ಟಿದೆ ಎಂಬುದು ಅವನಿಗೆ ಸ್ಪಷ್ಟವಿಲ್ಲ. ಐದಾರು ಲಕ್ಷ ಇರಬಹುದೆಂದು ವರ್ಷದ ಹಿಂದೆ ನೋಡಕೊಂಡ ನೆನಪು ಅವನಿಗೆ. ಪಾಸ್ಬುಕ್ ಎಂಟ್ರಿ ಮಾಡಿಸಿ ಯಾವ ಕಾಲವಾಯಿತೊ ಅದು ಕೂಡ ಅವನಿಗೆ ಖಚಿತವಿಲ್ಲ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಬರೀ ಸೂರ್ಯೋದಯಗಳನ್ನು ಎಣಿಸುತ್ತಾ ದಿನಕಳೆಯುತ್ತಿದ್ದ.

ಯಾರೂ ಕೂಡ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗದವರ ಹೆಸರಿನ ಪಟ್ಟಿಯಲ್ಲಿ ಒಮ್ಮೊಮ್ಮೆ ತನ್ನ ಹೆಸರು ಕಂಡಂತಾಗುತ್ತಿತ್ತು. ಆ ಕ್ಷಣದಲ್ಲಂತೂ ಆತ ತುಂಬಾ ದಿಗಿಲು ಬೀಳುತ್ತಿದ್ದ. ತನ್ನ ಸಾವಿನ ನಂತರ ತನ್ನ ಹೆಸರು ಕೂಡ ಪತ್ರ ಒಯ್ಯದವರ ಪಟ್ಟಿಯಲ್ಲಿ ಉಳಿದುಬಿಡುತ್ತದೆ. ನನ್ನದು ಸ್ವಲ್ಪ ಆಸ್ತಿಯಿದ್ದರೂ ಕೂಡ ಪತ್ರವು ಅನಾಥವಾಗುವ ವಿಚಿತ್ರ ತಳಮಳವೊಂದು ಅವನನ್ನು ತಬ್ಬುತ್ತಿತ್ತು. ನನ್ನ ಈ ಕಿಂಚಿತ್ತು ಆಸ್ತಿಗಾದರೂ ಒಂದು ನಾಮಿನಿ ಮಾಡಿದ್ದರೆ ಆಸ್ತಿ ಮತ್ತು ಸಾವು, ಮರಣ ಪತ್ರ ಅನಾಥವಾಗುವುದನ್ನು ತಪ್ಪಿಸಬಹುದಲ್ಲ ಅಂತ ಯೋಚಿಸಿ ‘ಛೆ ಛೆ.. ಇದ್ಯಾವ ನಮೂನಿ ಬಯಕಿ? ಬದ್ಕೊದೆ ಬದ್ಕತೀನಿ ಒಬ್ನಾ ಅಂತದ್ರಲ್ಲಿ ಸಾವು, ಅಸ್ತಿಗೆಂತ ಚಿಂತಿ ನಂದು? ಸರಿಯಿಲ್ಲ ಇದು’ ಅಂತ ತನ್ನಷ್ಟಕ್ಕೆ ತಾನೇ ಗದರಿಕೊಂಡು ಸುಮ್ಮನಾಗುತ್ತಿದ್ದ.

ರಾಜಪ್ಪ ಅಂತದೊಂದು ಕನಸನ್ನು ಊಹಿಸಿ ಕೂಡ ಇರಲಿಲ್ಲ. ರಸ್ತೆ ಬದಿಯಲ್ಲಿ ಎರಡು ಇಡ್ಲಿ, ಚಿತ್ರಾನ್ನ ತಿಂದು ಹೋಗಿ ತನ್ನ ಖೋಲಿಯಲ್ಲಿ ಮಲಗಿದ್ದವನಿಗೆ ಆ ಕನಸು ದಢಾರನೇ ನುಗ್ಗಿತ್ತು.

ರಾಜಪ್ಪ ಕನಸಲ್ಲಿ ಸತ್ತು ಹೋಗಿದ್ದ. ಮಲಗಿದ್ದ ಖೋಲಿಯಲ್ಲೇ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂರಾಲ್ಕು ದಿನ ಡ್ಯೂಟಿಗೆ ಬರದ ರಾಜಪ್ಪನ ವಿಚಾರಿಸಲು ಬಂದು ಕಛೇರಿಯೊಬ್ಬರು ಬಂದು ಖೋಲಿಯಲ್ಲಿ ಸತ್ತು ಬಿದ್ದಿರುವ ಅವನನ್ನು ನೋಡಿ ಹೌಹಾರಿದ್ದರು. ಕೊನೆಗೆ ಅವನ ದೇಹಕ್ಕೊಂದು ವಿಧಿಬದ್ದ ಸಂಸ್ಕಾರವೂ ಆಗಿತ್ತು.

ಕನಸು ಮುಂದುವರೆದಿತ್ತು..

ಅವನ ಸಾವಿನ ನಂತರ ಮರಣದ ವಿವರ ಜನನ-ಮರಣ ದಾಖಲೆ ವಿಭಾಗಕ್ಕೆ ಬಂತು. ಒಂಟಿಯಾಗಿ ಉಳಿದಿದ್ದ, ವಾರಸುದಾರರಿಲ್ಲದ ಅವನ ಮರಣ ಪತ್ರ ಯಾರಿಗೆ ತಾನೇ ಬೇಕಿತ್ತು? ಅದರಿಂದೇನು ಲಾಭವಿತ್ತು? ಯಾರೂ ಮೂಸದ ಪಟ್ಟಿಯಲ್ಲಿ ಅವನ ಹೆಸರು ಕಾಯಂ ಆಗಲು ಸಿದ್ದವಾಗವ ಸಮಯದಲ್ಲಿ

ಒಂದು ಬೆಳಗ್ಗೆ ಸುಮಾರು ಇಪ್ಪತೈದರ ತರುಣ ಕಛೇರಿಗೆ ಅರ್ಜಿ ಹಿಡಿದು ಬಂದ. ಅರ್ಜಿ‌ ನೋಡಿದ ಗುಮಾಸ್ತ ಅವನನ್ನು ತನ್ನ ಅಧಿಕಾರಿಯ ಬಳಿ‌ ಕಳುಹಿಸಿದ. ಅರ್ಜಿ ಓದಿದ ಅಧಿಕಾರಿಗೆ ನಿಜಕ್ಕೂ ಆಶ್ಚರ್ಯವಾಯಿತು. ಅರ್ಜಿಯಲ್ಲಿ ಹೀಗೆ ಬರೆಯಲಾಗಿತ್ತು. ‘ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಬನ್ನಿಕೊಪ್ಪದ ನಿವಾಸಿಯಾದ ಶಿವುಕುಮಾರ ಸನ್ ಆಫ್ ರಾಜಪ್ಪ ಮೂಲಿಮನೆಯಾದ ನಾನು ಈ ಮೂಲಕ ಕೋರುವುದೇನೆಂದರೆ ನನ್ನ ತಂದೆಯವರು ಇದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ಮೂರು ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದು ಸರಿಯಷ್ಟೆ. ಅವರ ಬ್ಯಾಂಕಿನ ಹಣ, ಜಮೀನು, ಪಾಲಿಸಿಯ ಹಣವನ್ನು ಪಡೆಯಲು ಅವರ ಮಗನಾದ ನಾನು ಹಕ್ಕುವುಳ್ಳವನಾಗಿದ್ದು ಅದನ್ನು ಪಡೆಯಲು ಅವರ ಮರಣ ಪ್ರಮಾಣ ಪತ್ರದ ಅವಶ್ಯಕತೆ ಇದ್ದು ದಯಮಾಡಿ ಅದನ್ನು ನೀಡಬೇಕೆಂದು ಈ ಮೂಲಕ ಕೋರುತ್ತೇನೆ. ವಂದನೆಗಳು ಎಂದು ಬರೆದು ಅದರ ಕೆಳಗೆ ಶಿವಕುಮಾರ ಮೂಲಿಮನೆ ಎಂದು ಸಹಿ ಮಾಡಿದ್ದ. ನಾನೇ ಅವರ ಮಗ ಅನ್ನುವುದಕ್ಕೆ ಪಡಿತರ ಚೀಟಿ, ಆಧಾರ ಕಾರ್ಡ್, ವಂಶವೃಕ್ಷ, ವೋಟರ್ ಐಡಿಯ ನಕಲು‌ ಪ್ರತಿಗಳನ್ನು ಲಗತ್ತಿಸಿರುತ್ತೇನೆ..’ ಎಂದು ಬರೆಯಲಾಗಿದ್ದ ಅರ್ಜಿಯನ್ನು ಅಧಿಕಾರಿ ಎರಡೆರಡು ಬಾರಿ ಓದಿಕೊಂಡ.

ಪತ್ರದಿಂದ ಕಣ್ಣು ಕಿತ್ತು ಅಧಿಕಾರಿಯು ಪತ್ರ ನೀಡಿದವನ ಕಡೆ ನೋಡಿದ. ಅವನ ಮುಖದಲ್ಲಿ ಕಿಂಚಿತ್ತೂ ಅಳಕು ಇರಲಿಲ್ಲ. ‘ರಾಜಪ್ಪ ಏಕೆ ಒಂಟಿಯಾಗಿ ಉಳಿದ? ನೀವ್ಯಾಕೆ ಎಂದೂ‌ ಕೂಡ ಅವನನ್ನು ನೋಡಲು ಬರಲಿಲ್ಲ? ರಾಜಪ್ಪ ಯಾಕೆ ಮದುವೆಯಾಗಿರುವುದನು, ಮಗ ಇರುವುದನ್ನು ಯಾರಿಗೂ ಹೇಳಲಿಲ್ಲ?’ ಮುಂತಾದ ಪ್ರಶ್ನೆಗಳನ್ನು ಕೇಳಬೇಕೆಂದುಕೊಂಡ ಅಧಿಕಾರಿಯು ಸುಮ್ಮನೆ ಅವುಗಳನ್ನು ನುಂಗಿಕೊಂಡ. ಅರ್ಜಿ ಮುಂದಿನ ಟೇಬಲ್ಲಿಗೆ‌ ವಿಲೇವಾರಿಗಾಗಿ ಹೋದದ್ದೆ ಪಟಾರೆಂದು ರಾಜಪ್ಪನ ಎಚ್ಚರವಾಗಿತ್ತು. ಮೈ ಸಣ್ಣಗೆ ಬೆವೆತು ಹೋಗಿತ್ತು.‌

ಮರುದಿನ ಬೆಳಗ್ಗೆ ತನ್ನ ಮಾಮೂಲಿ ಹವಾಯಿ ಚಪ್ಪಲಿಯ ಪಟಪಟ ಸದ್ದಿನೊಂದಿಗೆ ಕಛೇರಿ ತಲುಪಿದ. ಅವನ ಚಪ್ಪಲಿ ಸದ್ದಿಗೆ ಎಂದಿನಂತೆ ಕಛೇರಿ ಎದ್ದು ಕೂತಿತು. ತನ್ನ ರೂಮು ತಲುಪಿ ಲೋಹದ ಕುರ್ಚಿಯ ಮೇಲೆ ಮೈಚೆಲ್ಲಿ ಕೂತ. ರಾತ್ರಿಯಿಂದ ತಲೆ ದಿಮ್ಮೆನ್ನುವ ಅನುಭವಯಿತ್ತಾದ್ರೂ ಅದನ್ನು ಲೆಕ್ಕಿಸದೇ ಬಂದು ಕೂತಿದ್ದ. ರಾತ್ರಿ ಸರಿ ನಿದ್ದೆಯಾಗಿರಲಿಲ್ಲ. ಕನಸು ಮೂಡಿ ಬಂದು ಕಾಡಿತ್ತು. ಕಂಡ ಕನಸಿನಿಂದ ಅವನು ತುಸು ನಿರಾಳನಾದಂತೆ ಕಾಣುತ್ತಿದ್ದ ‘ನಿನ್ನ ಮರಣ ಪ್ರಮಾಣ ಪತ್ರ ನಿನ್ನಂತೆ ಅನಾಥ ಆಗಲ್ಲ ಬಿಡು’ ಅನ್ನುವ ಅವನ ಅಂತರಾಳದ ದನಿಯೊಂದು ಅವನಿಗೆ ಬೆಳಗ್ಗೆಯಿಂದ ಹೇಳುತ್ತಿತ್ತು. ಆ ದನಿಗೆ ಕಿವಿಯಾದಾಗಲೆಲ್ಲಾ ಅವನಿಗೆ ತುಸು ನಿರಾಳ ಎನಿಸುತ್ತಿತ್ತು.

ತನ್ನೆಲ್ಲಾ ತಾಕಲಾಟಗಳನ್ನು ಪಕ್ಕಕ್ಕೆ ಎತ್ತಿಟ್ಟು ಟೇಬಲ್ ಮೇಲೆ ಬಂದಿದ್ದ ಎಲ್ಲಾ ಪೈಲ್ಗಳನ್ನು ಒಮ್ಮೆ ತೆಗೆದು ನೋಡಿದ. ಇಂದು ಕೊಡಬೇಕಾದ ಪ್ರಮಾಣಪತ್ರಗಳು ಸಿದ್ದವಾಗಿದ್ದವು. ಸಾಹೇಬರ ಸಹಿ ಆದ್ರೆ ಮುಗೀತು ಅವುಗಳನ್ನು ಸಂಬಂಧಪಟ್ಟವರಿಗೆ ಮುಟ್ಟಿಸಿದ್ರೆ ಒಂದು ನಿರಾಳ ಎಂದುಕೊಂಡ. ಕಡತವನ್ನು ಸಹಿಗಾಗಿ ಅಧಿಕಾರಿಯ ಮೇಜಿನ ಮೇಲಿಟ್ಟು ಟೀ ಕುಡಿಯೋಣ ಎಂದು ಹೊರ ಹೊರಟ. ಕೊಂಚ ತಲೆ ಸುತ್ತಿದ್ದಂತಾಯ್ತು. ಟೀ ಕುಡಿದರೆ ಸರಿಯಾದೀತು ಎಂದು ಹೆಜ್ಜೆ ಹಾಕಿದ.

ಮಾರು ದೂರ ಹೋಗುತ್ತಲೇ ಎದೆಯೊಳಗೊಂದು ಮಿಂಚು ಸರಿದಂತೆ ‘ಚಳಕ್’ ಎಂದಿತು. ‘ಥೋ ಈ ಹಾಳದ್ ಗ್ಯಾಸ್ಟ್ರಿಕ್‌ ಕಾಲಾಗಾ ಸಾಕಾತು ನೋಡು..’ ಎಂದು ಗೊಣಗುತ್ತಾ ಟೀ ಅಂಗಡಿ ತಲುಪಿದ. ‘ಏನ್ರೀ ರಾಜಪ್ಪರ ಚಲೋ ಇದೀರೊ ಇಲ್ಲೊ.. ಒಂಥಾರ ಕಾಣ್ಸತೀರಲ್ಲ.. ಏನಾತು?..’ ಟೀ ಅಂಗಡಿಯವ ಕಾಳಜಿ ಮಾಡಿದ. ‘ಏನ್ ಇಲ್ರಪೊ.. ಒಂದೀಟು ಚಾಯ್ ಕೊಡ್ರಲಾ. ಇದ್ದದ್ದೆ ಅಲಾ ಈ ಹಾಳು ಗ್ಯಾಸು’ ಅನ್ನುತ್ತಾ ಕುರ್ಚಿಯ ಮೇಲೆ ಕೂತ. ಬಿಸಿ ಬಿಸಿ ಟೀ ಪಡೆದು ತನ್ನ ಎಂದಿನ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಹೀರಿದ. ಹಣ ನೀಡಿ ಕಛೇರಿ ತಲುಪಿದ. ಹೋಗಿ ಕೂತುವನಿಗೆ ಕಣ್ಣು ಮಂಜು ಮಂಜಾಯಿತು. ಬಾಟಲಲ್ಲಿದ್ದ ನೀರನ್ನು ಗಟಗಟ ಕುಡಿದ. ಜೋರು ತಲೆ ತಿರುಗಿ ಕೈಯಲ್ಲಿಡಿದಿದ್ದ ಬಾಟಲಿ ಸಮೇತ ಲೋಹದ ಕುರ್ಚಿಯಿಂದ ದಢಾರನೆ ಕೆಳಗೆ ಬಿದ್ದ. ಆ ಸದ್ದು ಕೇಳಿದ್ದೆ ಕಛೇರಿಯವರೆಲ್ಲಾ ಓಡಿ ಬಂದರು. ರಾಜಪ್ಪನಿಗೆ ಪ್ರಜ್ಞೆ ಇರಲಿಲ್ಲ. ಎತ್ತಿಕೊಂಡು ಆಸ್ಪತ್ರೆಗೆ ಓಡಲಾಯಿತು.

ದಾರಿಯಲ್ಲಿ ರಾಜಪ್ಪ ಅದೇನನ್ನೊ ಬಡಬಡಿಸುತ್ತಿದ್ದ. ಅದೆನೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ಅವನು ಕೈಯಲ್ಲಿ ಏನನ್ನೊ ಸನ್ನೆ ಮಾಡುತ್ತಿದ್ದ.‌ ಅದೂ ಕೂಡ ಯಾರಿಗೂ ತಿಳಿಯಲಿಲ್ಲ.‌ ಇನ್ನೇನು ಆಸ್ಪತ್ರೆ ತಲುಪಬೇಕು ಅನ್ನುವಷ್ಟರಲ್ಲಿ ಆಸ್ಪತ್ರೆಯ ಅಂಗಣದಲ್ಲೆ ರಾಜಪ್ಪನ ಜೀವ ಹಾರಿ ಹೊಯಿತು. ನಗರದ ಒಂಟಿ ಜೀವವೊಂದು ತಣ್ಣಗೆ ಹೊರಟು ಹೊಯಿತು. ಗೆಳೆಯರು, ಕಛೇರಿ ಸಿಬ್ಬಂದಿ ಮಮ್ಮಲ ಮರುಗಿದರು.‌

ಎಲ್ಲರೂ ಸೇರಿ ಅಂತಿಮ ಸಂಸ್ಕಾರ ಪೂರೈಸಿದರು. ರಾಜಪ್ಪನ ಊರು ಹಾವೇರಿ ಕಡೆ ಅಂತ ಗೊತ್ತಿದ್ದರೂ ಯಾರು? ಎಂತ? ಅಂತ ತಿಳಿಯದ ಸಾವಿನ ವಿಚಾರವನ್ನು ಮುಟ್ಟಿಸಲು ಸಾಧ್ಯವಾಗಲಿಲ್ಲ. ಇತ್ತ ಕಛೇರಿಯು ರಾಜಪ್ಪನ ಚಪ್ಪಲಿಯ ಪಟಪಟ ಸದ್ದಿಲ್ಲದೆ ತಾನು ನಾಳೆಯಿಂದ ನಿದ್ದೆಯಿಂದ ಏಳುವುದು ಹೇಗೆ ಅಂತ ಯೋಚಿಸತೊಡಗಿತ್ತು.

ನಾಲ್ಕೈದು ದಿನಗಳ ಬಳಿಕ ರಾಜಪ್ಪ ಕೂರುತಿದ್ದ ಟೇಬಲ್ ಮೇಲೆ ರಾಜಪ್ಪನ ಮರಣ ಪ್ರಮಾಣ ಪತ್ರವು ಒಂದು ಕಡಿತದಲ್ಲಿ ಅವಿತು ಬಂದು ಕೂತಿತು. ಇಂದು ಅಲ್ಲಿ ರಾಜಪ್ಪನಿರಲಿಲ್ಲ. ಅವನ ಪ್ರಮಾಣ ಪತ್ರವಿತ್ತು. ಎಷ್ಟೊ ಜನಕ್ಕೆ ಪ್ರಮಾಣ ಹಂಚಿದ್ದ ರಾಜಪ್ಪನೂ ಕೂಡ ಒಂದು ಪತ್ರವಾಗಿ ಬಂದು ಕೂತಿದ್ದ. ಅವನಂತೆ ಸತ್ತು ಹೋದವರ ಎಷ್ಟೊಂದು ಪ್ರಮಾಣಪತ್ರಗಳು ಕೂಡ ಟೇಬಲ್ ಮೇಲೆ ಬಂದು ಕೂತವು. ಬಂದ ಸಂಬಂಧಿಗಳು ಅವರಿಗೆ ಬೇಕಾದವರ ಪ್ರಮಾಣಪತ್ರ ಪಡೆದು ಪಡೆದು ಹೋಗುತ್ತಿದ್ದರೆ ರಾಜಪ್ಪನ ಪ್ರಮಾಣ ಪತ್ರ ಕೇಳುವವರಿಲ್ಲದೆ ದಿನೇ ದಿನೇ ಕೆಳಗೆ ಸರಿಯತೊಡಗಿತು. ಎಷ್ಟೊ ದಿನದಿಂದ ಕೇಳುವವರಿಲ್ಲದ ಕೆಲವು ಪ್ರಮಾಣಪತ್ರಗಳನ್ನು ತೆಗೆದುಕೊಂಡು ಹೋಗಿ ಒಂದು ಕೊಠಡಿಗೆ ಹಾಕಿದರು. ಅದರಲ್ಲಿ ರಾಜಪ್ಪನ ಪ್ರಮಾಣಪತ್ರವೂ ಇತ್ತು.

ಯಾರಿಗೂ ಬೇಡದ ಆ ಪ್ರಮಾಣಪತ್ರ ಕೊಠಡಿಯಲ್ಲಿ ಮಾತ್ರ ಕೇಳುವವರಿಲ್ಲದೆ ಅನಾಥವಾಗಲಿಲ್ಲ. ಗೆದ್ದಲು ಹುಳುಗಳು ದಿನಕ್ಕೆ ಎರಡು ತುತ್ತಿನಂತೆ ತಿನ್ನಲು ಆರಂಭಿಸಿದವು.

ಇತ್ತ ದೂರದ ಹಾವೇರಿಯ ಬನ್ನಿಕೊಪ್ಪದಲ್ಲಿ ರಾಜಪ್ಪನ ಹೆಂಡತಿ ಸುಮಂಗಲಿ ಮಗ ಶಿವುಕುಮಾರನನ್ನು ಕರೆದುಕೊಂಡು ಬಸ್ಸು ಹತ್ತಿದ್ದಳು. ‘ಮಗನಿಗಾದರೂ ಮನೆಗೆ ಬನ್ನಿ..’ ಎಂದು ಈ ಬಾರಿ ಒಪ್ಪಿಸಿ ಕರೆತರಲೇಬೇಕು ಎಂದು ನಿರ್ಧರಿಸಿಕೊಂಡಳು.‌

ಕೊಠಡಿಯಲ್ಲಿ ರಾಜಪ್ಪ ಪ್ರಮಾಣಪತ್ರ ಈಗಾಗಲೇ ಅರ್ಧ ಭಾಗ ಮುಗಿದು ಹೋಗಿದೆ. ಗೆದ್ದಲು ಹುಳುಗಳು ರಾಜಪ್ಪನನ್ನು ನೆನೆಯುತ್ತಿವೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: