
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
4
ಕಥೆಯನ್ನು ಮುಲಾಜಿಲ್ಲದೆ ಎತ್ತಿ ಪಕ್ಕಕ್ಕಿಡಲಾಯಿತು. ತೀರ್ಪುಗಾರರು ಯಾಕ್ಹೀಗೆ ಮಾಡಿದರು ಎಂಬುದು ಸ್ಪರ್ಧೆಯ ಆಯೋಜಕರಿಗೆ ತಿಳಿಯಲಿಲ್ಲ. ಬಂದ ಕಥೆಗಳಲ್ಲಿ ಇದೇ ಅದ್ಬುತವಾಗಿದೆ ಆದರೂ ಯಾಕೆ ಪಕ್ಕಕ್ಕೆ ಜಾರಿತು ಎಂಬುದು ತಿಳಿಯಲಿಲ್ಲ. ಇವರು ಕೇಳುವ ಗೊಡವೆಗೂ ಹೋಗಲಿಲ್ಲ. ತೀರ್ಪುಗೆ ಅಂತ ಕರೆದು ಕಥೆಯ ವಿಚಾರದಲ್ಲಿ ಪ್ರಶ್ನಿಸುವುದು ಸರಿಯಲ್ಲ ಅಂತ ಸುಮ್ಮನಾದರು.
ಎಲ್ಲಾ ಮುಗಿದ ಮೇಲೆ ತೀರ್ಪುಗಾರರು ಕಥೆಗಾರನಿಗೆ ಪೋನ್ ಮಾಡಿ ಹೇಳಿದರು. ಕಥೆ ಚೆನ್ನಾಗಿದೆ. ಆದರೆ ಆ ಕಥೆಯಲ್ಲಿ ಬೆಕ್ಕು ಯಾವಾಗಲೂ ಹಾಲಿಗೆ ಹಂಬಲಿಸುತ್ತೆ. ನೀವು ಮಾಂಸಹಾರದ ವಿರುದ್ದವೊ? ಕೇಳಿದರು.
ಕಥೆ ಬರೆಯುವಾಗ ಅಂತಹ ಯಾವುದೇ ಉದ್ದೇಶ ಇಲ್ಲದ ಅವನಿಗೆ ಕಸವಿಸಿಯಾಯಿತು. ಏನೇನೊ ಹೇಳಿ ಪೋನಿಟ್ಟ.
ಕಥೆಯನ್ನು ತಿದ್ದಿ. ಹಾಲು ಇರುವ ಕಡೆ ಇಲಿ ಹಾಕಿ. ಬೆಕ್ಕನ್ನು ಸಂಪೂರ್ಣ ಮಾಂಸಾಹಾರಿಯನ್ನಾಗಿ ಮಾಡಿ. ಸ್ವಲ್ಪ ದಿನದ ನಂತರ ಇನ್ನೊಂದು ಕಥಾ ಸ್ಪರ್ಧೆಗೆ ಕಳುಹಿಸಿದ.
ಅಲ್ಲಿಯೂ ಬಹುಮಾನ ಬರಲಿಲ್ಲ. ಬದಲಿಗೆ ದೂರವಾಣಿ ಕರೆ ಬಂತು. ಬೆಕ್ಕು ಬರೀ ಮಾಂಸಾಹಾರಿಯೊ? ಅಥವಾ ನೀವು ಮಾಂಸಾಹಾರಿ ಆಗಿದ್ದಕ್ಕೆ ಬೆಕ್ಕಿಗೆ ಸದಾ ಮಾಂಸ ತಿನ್ನುವ ಕೆಲಸವೊ? ಎಂದು ಕೇಳಿದರು. ಇವನು ಬೇಸರ ಮಾಡಿಕೊಂಡು ಪೋನಿಟ್ಟ.

ಯಾರದೊ ಬಳಿ ಕಥೆಯನ್ನು ಮುಂದಿಟ್ಟು ಸಲಹೆ ಕೇಳಿದ. ಅವರು ಒಂದು ಅದ್ಬುತ ಸಲಹೆ ಕೊಟ್ಟರು. ಹಾಲು ಬೇಡ; ಇಲಿಯೂ ಬೇಡ ಬದಲಿಗೆ ಸುಮ್ಮನೆ ಆಹಾರ ಅಂತ ಹಾಕು ಅಂದರು. ಇದು ಎಷ್ಟೊಂದು ಒಳ್ಳೆಯ ಸಲಹೆ..! ನಾವೇಕೆ ಬೆಕ್ಕು ತಿನ್ನುವ ಆಹಾರವನ್ನು ನಿರ್ಧರಿಸಬೇಕು. ಅದರ ಊಟ ಅದರ ಇಷ್ಟ ಎಂದುಕೊಂಡ. ಕೂತು ಮತ್ತೊಮ್ಮೆ ಕಥೆ ತಿದ್ದಿದ. ಕಥೆಯನ್ನು ಪದೇ ಪದೇ ಓದಿದ. ತುಂಬಾ ಖುಷಿ ಆಯ್ತು. ಹಾಲು ಮತ್ತು ಇಲಿ ಎರಡನ್ನೂ ತೆಗೆದು ಆಹಾರ ಎಂದು ಬದಲಾಯಿಸಿ ಇನ್ನೊಂದು ಕಥಾಸ್ಪರ್ಧೆಗೆ ಕಳುಹಿಸಿದ.
ಸ್ವಲ್ಪ ದಿನದ ಬಳಿಕ ಅವನಿಗೊಂದು ಕರೆ ಬಂತು. ಅದು ಸ್ಪರ್ಧೆಯ ಆಯೋಜಕರದ್ದಾಗಿತ್ತು. ತನಗೆ ಪ್ರಶಸ್ತಿ ಬಂದಿರುವುದು ದಿಟವೆಂದು ಖುಷಿಯಿಂದ ಕರೆ ಸ್ವೀಕರಿಸಿದ.
ಆ ಕಡೆಯಿಂದ ತೀರ್ಪುಗಾರರು ಮಾತಾಡುತ್ತಿದ್ದರು. ‘ಕಥೆಗಾರ ತಿಪ್ಪೆ ಸಾರಿಸಬಾರದು ಅವನಿಗೆ ನಿರ್ಧಿಷ್ಟತೆ ಇರಬೇಕು. ಬೆಕ್ಕಿನ ಆಹಾರದ ಬಗ್ಗೆಯೇ ಕಥೆ ಇದೆ. ನೀವು ಬರೀ ಆಹಾರ, ಆಹಾರ ಅಂತ ಬರೆದರೆ ಅದು ಯಾವ ಆಹಾರ? ನಿರ್ಧಿಷ್ಟತೆ ಬೇಕಲ್ವ..? ಕಥೆ ಚೆನ್ನಾಗಿದೆ. ಅದೊಂದು ಸರಿ ಮಾಡಿಕೊಳ್ಳಿ..’ ಅಂದು ಪೋನಿಟ್ಟರು.
ಇವನು ಕಥೆಯನ್ನು ಹರಿದು ತುಂಡು ತುಂಡಾಗಿ ಮಾಡಿ ಬಿಸಾಕಿದ ಮತ್ತು
ಇನ್ನೆಂದೂ ಕಥೆ ಬರೆಯಬಾರದೆಂದು ನಿರ್ಧರಿಸಿದ..
| ಇನ್ನು ಮುಂದಿನ ವಾರಕ್ಕೆ |






0 Comments