ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ- ಎದೆ ಮೇಲೆ ಬರೆದ ರಂಗೋಲಿ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

11

ಹೊಸಿಲಿನ ಮೇಲೆ ಹಾಕಿದ್ದ ರಂಗೋಲಿ ತನ್ನ ಎದೆ ಮೇಲೆ ಹಾಕಿದ ರಂಗೋಲಿಯೆ ಅನ್ನುವಂತೆ ಅವನು ಸಂಭ್ರಮಿಸಿದ. ಆದರೆ ಯಾರಾದ್ರೂ ಈ ರಂಗೋಲಿ ನೋಡಿದರೆ ಏನಾಗಬಹುದು? ಇಷ್ಟು ದಿನ ಇರದ ರಂಗೋಲಿ ಇವತ್ತು ಏಕಾಏಕಿ ಅಂಗಳದಲ್ಲಿ ಮೂಡಿದ್ದು ಹೇಗೆ? ಒಳಗೆ ಯಾರಿರಬಹುದು? ಗುಟ್ಟಾಗಿ ಏನೊ ನಡೆಯುತ್ತಿರಬಹುದಾ? ಎದುರು ಮನೆಯ ಬೋಳು ತಲೆಯ ನರಹರಿ ‘ಏನು ಈ ನಡುವೆ ಡ್ಯೂಟಿ ಮುಗಿಸಿ ಬಂದವರು ಮನೆ ಬಿಟ್ಟು ಕದಲುತ್ತಿಲ್ಲವಲ್ಲ..’ ಎಂದು ಕೇಳಿದ ಮಾತಿನ ಹಿಂದೆ ಯಾವುದೊ ಗುಮಾನಿಯ ವಾಸನೆ ಸಿಕ್ಕಿರಬಹುದಾ..? ಇಷ್ಟು ಯೋಚಿಸುವ ಹೊತ್ತಿಗೆ ಅವನು ಕುಡಿಯುತ್ತಿದ್ದ ಕಾಫಿಯ ಕೊನೆಯ ಗುಟುಕು ಖಾಲಿಯಾಯಿತು.‌ 

‘ನಾನು ಇವಳಿಗೆ ಬೈಯಲೇ? ರಂಗೋಲಿ ಯಾಕೆ ಹಾಕಿದ್ದು? ಇಷ್ಟು ದಿನ ಉಳಿಸಿಕೊಂಡ ಗುಟ್ಟು ಒಡೆದು ಹೋಗಲಿದೆ. ನನಗೂ ತೊಂದರೆ ನಿನಗೂ ತೊಂದರೆ.. ಇನ್ನೊಂದು ತಿಂಗಳು ಹೀಗೆ ಕಳೆದು‌ ಹೋದರೆ ಎಲ್ಲವೂ ಮುಗಿಯುತ್ತಿತ್ತು. ನೀವು ಊರಲ್ಲಿ ಮೊದಲಿನಂತೆ ಇರಬಹುದಿತ್ತು.. ನಾನು‌ ಕೂಡ ಮೊದಲಿನ ದಿನಗಳಿಗೆ ಮರಳುತ್ತಿದ್ದೆ..’ ಎಂದು ತುಸು ಜೋರು ಮಾತಲ್ಲಿ ಹೇಳುವ ಮನಸಾಯಿತು ಅವನಿಗೆ. ಆದರೆ ಮಾತು ಹೊರ ಹಾಕದೆ ಕಾಫಿಯ ಕೊನೆಯ ಗುಟುಕಿನೊಂದಿಗೆ ಅದನ್ನು ನುಂಗಿ, ಕಾಫಿ ಕಪ್ ಇಟ್ಟು ಒಂದು ದೀರ್ಘ ಉಸಿರೆಳೆದ. 

‘ಸ್ನಾನಕ್ಕೆ ನೀರು ರೆಡಿ ಇದೆ’ ಅವಳು ಹತ್ತಿರ ಬಂದು ಕಾಫಿ ಕಪ್ ತೆಗೆದುಕೊಳ್ಳುತ್ತಾ ಹೇಳಿದಳು. ಐದಾರು ತಿಂಗಳಾದರೂ ಅವನು ಅವಳ ಮುಖವನ್ನು ಸರಿಯಾಗಿ ನೋಡಿಯೇ ಇಲ್ಲ. ತುಂಬು ಬಸರಿ. ಹತ್ತಾರು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಮತ್ತೆ ಮತ್ತೆ ಅಂದುಕೊಂಡ. 

ಸ್ನಾನದ ಮನೆಯಲ್ಲಿ ಸುರಿದುಕೊಂಡ ನೀರಿನ ಜೊತೆ ಅವಳು ಮನೆಗೆ ಬಂದ ಅಷ್ಟೂ ನೆನಪುಗಳು ನೀರಾಗಿ ಹರಿದವು.‌   

‘ನಡು ರಾತ್ರಿ ಬಡಿದ ಬಾಗಿಲ ಸದ್ದು, ತೆರೆದಾಗ ಕಂಡ ಇವಳು. ಅವಳ ಗಾಬರಿ, ನಡುಗುವ, ಸಹಾಯಕ್ಕೆ ಯಾಚಿಸಿದ ದನಿ.. ಒಳಗೆ ಕರೆದುಕೊಂಡು ನೀರು ಕೊಟ್ಟು ನಂತರ ಅವಳು ಹೇಳಿದ ಅವಳ ಉಂಡ ಬದುಕು..’ ಎಲ್ಲವೂ ಬಿಸಿನೀರಿನ ಹೊಗೆಯಂತೆ ಮೇಲೇರುತ್ತಿದ್ದವು.‌

‘ಬಡತನ, ಕೆಲಸ ಕೊಡ್ಸತೀನಿ ಅಂತ ಪರಿಚಯದವರೇ ಕರೆದುಕೊಂಡು ಬಂದು ಈ ದೂರದ ನಗರದ ಒಂದು ಕೆಂಪು ಬೆಳಕಿನ ಕೆಳಗೆ ತಳ್ಳಿದ್ದು.. ತನ್ನ ದೇಹದ ಮೇಲೆಯೆ ನಡೆಯುತ್ತಿದ್ದ ಹಗಲು ರಾತ್ರಿಗಳು. ಹೊಟ್ಟೆಯಲ್ಲಿ ಮೂಡಿದ ಮಗು, ತಪ್ಪಿಸಿಕೊಂಡು ಬಂದ ರೀತಿ..’ ಎಲ್ಲವನ್ನು ಹೇಳಿದ್ದಳು. 

ನಂಬಿ ಎನ್ನುವ ಗೋಗೆರೆತ ಇರಲಿಲ್ಲ. ಆ ರಾತ್ರಿ ಸಮಾಧಾನಿಸಿದ.‌ ಅಷ್ಟೆ ಅಲ್ಲ ಅಲ್ಲಿಂದ ಇಲ್ಲಿಯವರೆಗೂ ಪ್ರತಿ ಹಗಲು ರಾತ್ರಿಗಳಲ್ಲಿ ಅವಳಿಗೆ ಸಮಾಧಾನಕೊಟ್ಟ.  ಮಗು ಹುಟ್ಟಿದ ಮೇಲೆ ಊರು ಸೇರ್ತೀನಿ. ಮಗುವನ್ನು ಎಲ್ಲಾದರೂ ಕೊಡುವ ವ್ಯವಸ್ಥೆ ಮಾಡಿ. ಸೋತ ಅಪ್ಪ ಅಮ್ಮ ಇದಾರೆ. ಮಗು ತೆಗೆದುಕೊಂಡು ಹೋಗಿ ಊರಿನ ಮುಂದೆ ಹೇಗೆ ನಿಲ್ಲಲಿ..?’ ಅಂದ ಅವಳ ಮಾತು ಇವನನ್ನು ಪೂರ್ತಿ ಇರಿದಿತ್ತು ‘ನೀವು ಅರಾಮಾಗಿರಿ ಏನಾದ್ರೂ ದಾರಿ ಸಿಗುತ್ತಾ ನೋಡುವ..’ ಅಂತ ಹೇಳಿದ ಮಾತು ಎಲ್ಲವೂ ಅವನಿಗೆ ನೆನಪಾಗುತಿದೆ. ಮೈ ಮೇಲಿ ಬೀಳುವ ನೀರಿನ ಜೊತೆ.‌  

ತಾನು ಒಂಟಿಯಾಗಿದದ್ದು, ಇದ್ದಕ್ಕಿದ್ದ ಹಾಗೆ ಒಬ್ಬ ಹೆಣ್ಣು ಮನೆಯಲ್ಲಿರುವುದು. ಒಬ್ಬ ಹುಡುಗನೊಂದಿಗೆ ಇದ್ದದ್ದನ್ನು ನೋಡಿದರೆ ಅವಳಿಗೆ ಆಗುವ ಅನ್ಯಾಯ..‌ ಇವೆಲ್ಲವನ್ನು ಇಬ್ಬರೂ ಕೂತು ಯೋಚಿಸಿದ್ದರು. ತಾನು ಒಬ್ಬನೇ ಇರುವಂತೆ, ಯಾರಿಗೂ ಅನುಮಾನ ಬರದಂತೆ ನಡೆದುಕೊಳ್ಳುವುದೆಂದು ಇಬ್ಬರೂ ತೀರ್ಮಾನಿಸಿದ್ದರು. 
ತನ್ನ ಜೀವನವಾದರೂ ಇಷ್ಟೊಂದು ‌ಶಿಸ್ತುಬದ್ದವಾದದ್ದು  ಹೇಗೆ ಈ‌ ನಡುವೆ? ಎಂದೊ ನಿದ್ದೆ, ಎಂದೊ ಊಟ, ಎಂದೊ‌ ಮನೆ ಸೇರುವುದು, ತನ್ನನ್ನು ಯಾರೊ ಕಾಯುತಾರೆ ಅನ್ನುವ ಭಾವ ಅನುಭವಿಸುವುದು, ಬದುಕು ಹೊಸತಾಗಿದೆ ಅನಿಸಿದ್ದು.. ಎಲ್ಲವನ್ನು ನೆನಪಿಸಿಕೊಂಡ. ಇದರ ಅಂತ್ಯ ಹೇಗಾದೀತು ಎಂದು‌ ತಲ್ಲಣಿಸಿದ.‌ ಇವತ್ತು ಇವಳು ರಂಗೋಲಿ ಬರೆದದ್ದು ಯಾಕೆ? ನಾನೇಕೆ ಜೋರಾಗಿ ಕೂಗಿ ಬೈದು ಅದನ್ನು ‌ವಿರೋಧಿಸಲಿಲ್ಲ.‌ ಮನಸು ಏಕೆ ಸಂಭ್ರಮಿಸಿತು?’ ಯೋಚನೆಗಳು ಉಳಿದು, ಸ್ನಾನ‌ ಮುಗಿದಿತ್ತು. ತಿಂಡಿ ಮುಗಿಸಿ ‘ಜೋಪಾನ..’ ಪ್ರತಿದಿನ ಹೇಳುವ ಮಾತನ್ನು ಹೇಳಿ ಎಂದಿನಂತೆ ಹೊರಗಡೆಯಿಂದ ಬೀಗ ಹಾಕಿಕೊಂಡು  ಕೆಲಸಕ್ಕೆ ಹೊರಟು ಹೋದ. 
*** 
ಇಂದು ಕೆಲಸ ತಡವಾಗಿತ್ತು. ರಾತ್ರಿ ಎಂಟಾದರೂ ಮುಗಿಯಲಿಲ್ಲ. ಚಡಪಡಿಸತೊಡಗಿದ. ಅವನ ಚಡಪಡಿಕೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಅವಳಿಂದ ಕರೆ ಬಂತು. ಅವಳ‌ ಮಾತಿನಲ್ಲಿ ನೋವಿತ್ತು ‘ನೋವು ಶುರುವಾಗಿದೆ. ಬರ್ತೀರಾ ಪ್ಲೀಸ್..’ ಕೆಲಸ ಅರ್ಧಕ್ಕೆ ಬಿಟ್ಟು ಆಟೋ ತೆಗೆದುಕೊಂಡು ಮನೆ ಹತ್ರ ಓಡಿದ.‌ ಅವಳು ಹೆರಿಗೆ ನೋವಿನಿಂದ ನರಳುತ್ತಿದ್ದಳು.‌ ಊರು ಪೂರ್ತಿ ಮಲಗಿರಲಿಲ್ಲ. ಜನ ಇನ್ನೂ ಓಡಾಡುತ್ತಿದ್ದರು. ಇವಳನ್ನು ಹೊರಗೆ ಕರೆದುಕೊಂಡು ಹೋಗುವುದು ಹೇಗೆ? ಎಂದು ಹೆಚ್ಚು ಯೋಚಿಸದೆ ತಂದ ಆಟೊದಲ್ಲಿ ಅವಳನ್ನು ಎತ್ತಿ‌ಕೂರಿಸಿಕೊಂಡು ಹೊರಟು ಬಿಟ್ಟ. ಊರಿನ ಜನ ಗುಂಪಾಗಿತ್ತು. ಎಲ್ಲರ ಮುಖದಲ್ಲೂ ಆಶ್ಚರ್ಯ. ತಲಾ ಒಂದೊಂದು ಮಾತು. 

ಡಾಕ್ಟರ್ ತಕ್ಷಣ ಸಿಸರಿಯನ್ ಆಗ್ಬೇಕು ಅಂದ್ರು. ಅವನು ಕೌಂಟರನಲ್ಲಿ ಹಣ ಕಟ್ಟಿದ.‌ ಮಗುವನ್ನು ಏನು ಮಾಡಬೇಕು ಅನ್ನುವ ಪ್ರಶ್ನೆಯೊಂದು ತಕ್ಷಣ ಅವನಿಗೆ ನೆನಪಾಯ್ತು. ‌ಕೈ ನಡುಗ ತೊಡಗಿದವು. ಅವರ ಕಡೆಯವರು ಯಾರಿದೀರಿ ಸೈನ್ ಮಾಡಿ ಅನ್ನುವ ಸೂಚನೆ ಬಂತು. ನಡುಗುವ ಕೈಯಲ್ಲೆ ಸೈನ್ ಮಾಡಿದ. ನೀವು ಅವರಿಗೆ ಏನಾಗಬೇಕು ಅಂತ ಕೇಳಿದರೆ ಏನು ಹೇಳುವುದು ಎನ್ನುವ ಗಾಬರಿಯಲ್ಲಿದ್ದ. ಆದರೆ ಅವರು‌ ಕೇಳಲಿಲ್ಲ. 

ಮಗು ಏನು ಮಾಡಬೇಕು? ಮತ್ತೆ ಅದೇ ಯೋಚನೆ. ಯಾರಿಗೆ ಕೇಳುವುದು? ಚಿಂತೆ ವಿಪರೀತವಾಯಿತು. ಅವಳು ಒಳಗಿದ್ದಾಳೆ. ಬಾಗಿಲು ಹಾಕಿಕೊಂಡು ವೈದ್ಯರು ಶ್ರದ್ದೆಯಲ್ಲಿ ಮಗುವನ್ನು ಜಗತ್ತಿಗೆ ತರುವ ಪುಣ್ಯದ ಕೆಲಸದಲ್ಲಿದ್ದಾರೆ.. ತಾನು ಮಗುವನ್ನು ಏನು ಮಾಡಬೇಕು ಅನ್ನುವ ಹೀನ ಯೋಚನೆಯಲ್ಲಿದ್ದೀನಿ. ಒಮ್ಮೆ ಎದ್ದು ಮೈಕೊಡವಿಕೊಂಡ. ಅದೇ ಹೊತ್ತಿಗೆ ಸರಿಯಾಗಿ ಹೆರಿಗೆ ಮನೆಯಿಂದ ಮಗು ಕಿಟಾರೆ ಕಿರುಚಿ ಜಗತ್ತಿಗೆ ಬಂದ ಸಂಭ್ರಮವನ್ನು ಹೊರಹಾಕಿತು. ಆ ದನಿ ಇವನ ದಮನಿಗಳಲಿ ಹರಿದು ಪುಳಕಗೊಂಡ. 

ಮಗು ಎತ್ತಿಕೊಂಡು ದಾದಿಯೊಬ್ಬರು ಆಚೆ ಬಂದರು ‘ಸರ್ ತಗೊಳಿ ನಿಮ್ಮ ಮಗು. ಎಷ್ಟು ಮುದ್ದಾಗಿದೆ ನೋಡಿ. ಗೌರಿ ಬಂದಿದ್ದಾಳೆ. Congratulations’ ಎಂದು ಮಗುವನ್ನು ಅವನ ಕೈಗೆ ನೀಡಿದರು.  ಅವನು ಮಗುವನ್ನು ತನ್ನ ಕೈಗೆ ತೆಗೆದುಕೊಂಡ. ಅವನ ಕೈಯಲ್ಲಿ ಮಗು. ರೋಮಾಂಚನಗೊಂಡ. ತನ್ನ ‌ಎದೆ ತುಂಬಿದೆ ಅನಿಸಿತು. ಎಷ್ಟೊ ಹೊತ್ತು ಮಗುವನ್ನು ನೋಡುತ್ತಲೇ ಇದ್ದ ‘ಕೊಡಿ‌ ಕೊಡಿ ಸರ್ ಸಾಕು..’ ಎಂದು ಮಗವನ್ನು ಮತ್ತೆ ಕೇಳಿದಳು ದಾದಿ. ಆಗ ನೋಡಿದ. ಮಗು ಅವನ ಬೆರಳನ್ನು ಬಿಗಿಯಾಗಿ ಹಿಡಿದುಕೊಂಡಿತ್ತು. ನಿಜಕ್ಕೂ ಅವನಿಗೀಗ ಹೃದಯ ತುಂಬಿ ಬಂದಿತ್ತು. ಮಗುವನ್ನು‌ ಕೊಟ್ಟು ಕಣ್ಣು ಒರೆಸಿಕೊಂಡ. 

‘ಬನ್ನಿ ಇಲ್ಲಿ..’ ಕೌಂಟರ್ ನಿಂದ ಅವನಿಗೆ ಕರೆ ಹೊಯಿತು. ಮಗುವಿನ ಜನ್ಮ ಪ್ರಮಾಣಪತ್ರಕ್ಕೆ ಸರಿಯಾದ ಹೆಸರು‌ ಕೊಡಿ. ಅವರು ನಿಮ್ಮ ಹೆಂಡತಿಯಾ?’ 

ಇಂತಹ ಒಂದು ಪ್ರಶ್ನೆಯನ್ನು ಅವನು ಎಂದೂ ನಿರೀಕ್ಷಿರಲಿಲ್ಲ. ಹೌದು ಅನ್ನಲೆ? ಇಲ್ಲ ಎನ್ನಲೆ? ಅವಳನ್ನು ಕೇಳದೆ ನಾನು ಅವಳ ಗಂಡ ಎಂದು ಹೇಗೆ ಹೇಳುವುದು? ‘ಹಲೊ ಸರ್ ಏನ್ ಯೋಚ್ನೆ ಮಾಡ್ತಿದೀರಿ.‌ ಮಗು ಬಂದ ಖುಷಿಗೆ ಹೆಂಡತಿ ಮರೆತು ಬಿಟ್ರಾ? ಹೇಳಿ ಹೇಳಿ ಹೆಸರು?’ ಒತ್ತಾಯಿಸಿದರು. 
ತಡವರಿಸುತ್ತಾ..
‘ನಂದಿನಿ..’ ಅಂದ. ಅವನ ಉತ್ತರದಲ್ಲಿ ‌ಇಡೀ ಬದುಕಿದ ತೀರ್ಮಾನ ಇತ್ತು.
ನಿಮ್ಮ ಹೆಸರು?
‘ರವೀಶ್..’ ಇವನ ಚುಟುಕು ಉತ್ತರ.
‘ತಗೊಳಿ ಸೈನ್ ಮಾಡಿ..’ 
ಸಹಿ ಮಾಡಲು ಕೈ ಎತ್ತಿದ. ಕೈ ನಡುಗುತ್ತಿತ್ತು.. ಮಗು ಹಿಡಿದ ಕೈ ಬೆರಳಲ್ಲಿ ಪ್ರೀತಿ‌ ಜಿನುಗುತ್ತಿತ್ತು. 

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

8 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading