ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಓದಿದ ‘ದೇವರಿಗೂ ಬೀಗ’

ಸತೀಶ ಕುಲಕರ್ಣಿ

ಒಂದೊಂದು ಕಡೆ ಒಂದೊಂದು ರೀತಿಯ ಭಕ್ತಿ ಬೇಡಿಕೆಯ ನಿವೇದನೆಗಳಿರುತ್ತವೆ. ಮುಗ್ಧತೆಯಲ್ಲಿ ಮನೋಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ಜನಸಮುದಾಯವೂ  ಇರುತ್ತವೆ. ಹೀಗೆಲ್ಲದರ ನಡುವೆ ನಮ್ಮ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ನಾಕೂರು ಕತ್ರಿ (ನಾಲ್ಕು ಊರುಗಳ ಕತ್ರಿ) ಭೂತಪ್ಪ ದೇವರು ಒಂದು. ಭೂತಪ್ಪ, ಭೂತನಾಥ, ಭೂತದೇವ ಅಂತಲೂ ಕರೆಯುತ್ತಾರೆ. ಭೂತಪ್ಪನಿಗೆ ಬೀಗ ಹಾಕುವ ಮೂಲಕ ಇಷ್ಠಾರ್ಥ ಸಿದ್ಧಿ ಈಡೇರಿಸಿಕೊಳ್ಳುತ್ತಾರೆ.

ಇಷ್ಟು ಓದಿದರೆ ಸಾಕು, ಒಂದಿಷ್ಟು ಕುತೂಹಲ ಹುಟ್ಟುತ್ತದೆ. ಇದರ ಪೂರ್ತಿ ವಿವರಗಳ ತಿಳಿಯಬೇಕೆಂದರೆ ‘ದೇವರಿಗೂ ಬೀಗ’ –ಎಂಬ ಪುಸ್ತಕ ಓದಬೇಕು. ನಮ್ಮ ಭಾಗದ ಪ್ರತಿಭಾವಂತ ಲೇಖಕ ನಾಮದೇವ ಕಾಗದಗಾರ ಬರೆದ ಮೊದಲ ಪುಸ್ತಕವಿದು. ಲೇಖಕ, ಕಲಾವಿದ, ಛಾಯಾಗ್ರಾಹಕ, ಪ್ರಕಾಶಕ, ಸಂಘಟಿಕ ಹೀಗೆಲ್ಲ ಇರುವ ಕಾಗದಗಾರ ನಮ್ಮ ಅನೇಕ ಲೇಖಕರ ಪುಸ್ತಕಗಳಿಗೆ ಮುಖಪುಟ, ಒಳಪುಟಗಳಲ್ಲಿನ ರೇಖಾ ಚಿತ್ರಗಳನ್ನು ಬರೆದು ಚೆಂದಗೊಳಿಸಿದ ಪ್ರತಿಭಾವಂತ.

ಜೀವ ಜಗತ್ತು ಮತ್ತು ಜಡ ಜಗತ್ತಿನ ಚಿತ್ರಗಳು ಕಮರಿ ಹೋಗುತ್ತಿರುವ ಈ ದಿನಗಳಲ್ಲಿ ಮನಸ್ಸು ಮುದಗೊಂಡು, ಜೀವನೋತ್ಸಾಹ ತುಂಬ ಬಲ್ಲ  ೩೯ ಲೇಖನಗಳಿವೆ. ಹೆಚ್ಚಿನವು ನಮ್ಮ ಹಾವೇರಿ ಆಸುಪಾಸಿನ ನೆಲದ ಚಿತ್ರಗಳೇ ಆಗಿವೆ. ಪ್ರತಿ ಊರು, ಪ್ರದೇಶ ಯಾವುದೇ ಇರಲಿ, ಅಲ್ಲಿಷ್ಟು ಅಲ್ಲಲ್ಲಿಯವೇ ಖಾಸಿಯತ್ ಇರುತ್ತವೆ. ಅವನ್ನು ನೋಡಿ ತಿಳಿದು, ಅಧ್ಯಯನ ಮಾಡಿ, ಅಕ್ಷರ ರೂಪ ಕೊಟ್ಟಾಗ ಇರುವ ನೆಲಕ್ಕೆ ಒಂದು ಬಲ ಮತ್ತು ಬೆಲೆ ಬರುತ್ತದೆ.

ಇಂಥ ಮಾತನ್ನು ಸಾಬೀತುಗೊಳಿಸುವ ಲೇಖನಗಳಿವು. ಈಗಾಗಲೇ ನಾಡಿನ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡಿಯಾಗಿ ಓದುವುದಕ್ಕಿಂತ ಇಡಿಯಾಗಿಓದುಸಿಕೊಳ್ಳುವ  ರುಚಿಯವು. ಪುಸ್ತಕ ರೂಪದಲ್ಲಿ ಸಂಗ್ರಹಿತವಾದ ಇವನ್ನು ಓದಿದಾಗ, ಬೇರೆಯವರಿಗೂ ಓದಿಸಬೇಕೆಂಬ ಹಂಬಲ ಮೂಡಿಸುತ್ತವೆ.

ಬೆವರು ಬದುಕು, ನೆಲ ನಕ್ಷತ್ರ, ವಿಶಿಷ್ಟ ವಿಭಿನ್ನ, ಧರ್ಮಸಿರಿ, ನೆಲಸಿರಿ ಹಾಗೂ ತೇಜ ಎಂಬ ಆರು ವಿಭಾಗಗಳನ್ನು ಲೇಖಕರು ಮಾಡಿಕೊಂಡಿದ್ದಾರೆ.

ಮೇಡ್ಲರಿ ಎಂಬ ಕಂಬಳಿ ಗ್ರಾಮದ ೨೫೦ ನೇಕಾರ ಕುಟುಂಬದ ಬಗ್ಗೆ ಬೆವರು ಬದುಕು ಭಾಗದಲ್ಲಿ ಬರೆಯುತ್ತಾರೆ. ಉದ್ದದ ಕೂದಲಿನ ಹಳ್ಳಿ ಎಂಬ ಮನಸೆಳೆಯುವ ಇನ್ನೊಂದು ಲೇಖನವಿದೆ. ನೆಲದ ನಕ್ಷತ್ರ ಭಾಗದಲ್ಲಿ  ಬೇಲಿ ಹೂಗಳು ಎಂಬ ಲೇಖನ ನಮ್ಮ ದೃಷ್ಠಿ ಮತ್ತು ಅರಿವನ್ನು ಬದಲಿಸುತ್ತದೆ. ಕಾಡು ಮೇಡು ಹಾದಿ ಪಕ್ಕದ ಬೇಲಿಯಲ್ಲಿ ತಂತಾವೇ ಅರಳಿ ಮುಕ್ಕಾಗುವ ಹೂಗಳ ಬಗ್ಗೆ ಬರೆದುದ ಓದಿದರೆ ‘ಹೌದಲ್ಲ,  ನೋಡಿಯೂ ನೋಡಿಲ್ಲವಲ್ಲ’ ಅನ್ನಿಸದೆ ಇರಲಾರದು.

‘ದೇವರಿಗೇ ಗಡಿಪಾರು’ ವಿಶಿಷ್ಟ ವಿಭಿನ್ನ ಎಂಬ ಭಾಗದ ಮತ್ತೊಂದು ಲೇಖನ ಕುತೂಹಲ ಹುಟ್ಟಸುತ್ತದೆ. ಚಿತ್ರ ವಿಚಿತ್ರವಾಗಿ ಅಲಂಕೃತವಾದ ಗಡಿಮಾರೆಮ್ಮನ ಕುರಿತಾದದ್ದು. ಗ್ರಾಮಕ್ಕೆ ರೋಗ ರುಜಿನ, ಬರಗಾಲ ಕೇಡು ಬರದಂತೆ ಆರಾಧಿಸುವ ಗಡಿ ದುರ್ಗವ್ವ ಮಲೆನಾಡಿನಲ್ಲಿ ಹೆಚ್ಚು ಕಾಣಸಿಗುವುದು. ತುಂಬ ಚಿತ್ರವತ್ತಾಗಿ ಲೇಖಕರು ಬರೆಯುತ್ತಾರೆ.

ಇನ್ನುಳಿದಂತೆ ಈ ಭಾಗದ ವಿಶಿಷ್ಟ ಅನ್ನಬಹುದಾದ ದೇವಸ್ಥಾನ, ಶಿಕ್ಷಣ ಸಂಸ್ಥೆ, ಸಾಧಕರ ಕುರಿತಾದ ಲೇಖನಗಳಿವೆ. ಸರಳ ಸುಂದರವಾಗಿ, ಯಾವ ತಲೆ ತಾಪವಿಲ್ಲದೆ ಚಿಕ್ಕ ಚಿಕ್ಕ ಸಾಲುಗಳ ಮೂಲಕ ಕಟ್ಟಿಕೊಟ್ಟ ಲೇಖನಗಳು. ಅಗತ್ಯ ಇರುವಷ್ಟೇ ವಿವರಣೆ ಎಷ್ಟು ಬೇಕಷ್ಟೇ ಪರಿಚಯಿಸುವ ಶೈಲಿಯವು. ಯಾರೇ ಓದಿದರೂ ಒಂದಿಷ್ಟು ಉಪಯುಕ್ತ ಅನ್ನಿಸುವ ಯಶಸ್ಸು, ದೇವರಿಗೂ ಬೀಗ ಪುಸ್ತಕದ್ದು. ಯಾವುದೇ ಲೇಖನ ಓದಿದರೂ ಮನಸ್ಸಿನಲ್ಲಿ ಒಂದು ಸುಂದರ ನೆನಪಾಗಿ ಉಳಿಯಬಲ್ಲ ಚಿತ್ರಕ ಶಕ್ತಿಯವು.

‘ನಾಮದೇವ ಕಾಗದಗಾರ  ಹಳ್ಳಿ ಮೂಲದ ದೇಶಿ ಪ್ರತಿಭೆ. ಮಾನವೀಯ ಗುಣದಾಳದೊಂದಿಗೆ ಬೆಳೆದು ಬಂದಿರುವ ನಾಮದೇವ ನೆಲಮೂಲದ ಜನರ ಬದುಕು ಬಲು ಹತ್ತಿರದಿಂದ ನೋಡಿದವರು. ಸಿರಿತನ ಬಡತನಗಳ ಒಳ ಮರ್ಮಗಳನ್ನು ತಿಳಿದವರು. ಹೀಗಾಗಿ ಈ ಜೀವ, ಕುಂಚ, ಬರೆಹ ಹಾಗೂ ಕ್ಯಾಮರಾದಲ್ಲಿ ಎಲ್ಲವೂ ಎರಕಗೊಂಡಿರುವ ವ್ಯಕ್ತಿತ್ವದ್ದು. ಚಿತ್ರದ ಬದುಕಿಗೆ ನುಡಿ ಸೇರಿದಾಗ, ಆ ಬರಹದ ಹೊಳಪು ಇನ್ನಿಷ್ಟು ಸೊಗಸಾಗಿರಯತ್ತದೆ. ಅಂತಹ ಹಲವು ಬಣ್ಣಗಳ ನೂಲಿನ ಚೆಲುವು ದೇವರಿಗೂ ಬೀಗ ಕೃತಿಯದು’ ಎಂದು ಲೇಖಕ ಮಂಜುನಾಥ ಎಂ ಬೊಮ್ಮನಕಟ್ಟಿ ಹೇಳಿದ್ದು ಅಕ್ಷರಶಃ ಸತ್ಯವಾಗಿದೆ.

‍ಲೇಖಕರು Admin

5 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading