ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’

ಸತೀಶ ಕುಲಕರ್ಣಿ

ನಮ್ಮ ಸುತ್ತ ಸಹಜೀವನ ನಡೆಸುವ ಜೀವಸಂಕುಲ ಒಂದಿದೆ. ಒಂದೇ ಮನೆಯಲ್ಲಿ ಅನೇಕ ಜನ ಇದ್ದರೂ, ಭಿನ್ನ ಮನಸ್ಸುಗಳಿವೆ. ಅಗೋಚರ ಮನೆಗಳೂ ಇವೆ. ಹಲ್ಲಿ, ಜೇಡ, ಜೊಂಡಿಗ . . . ನಾಯಿ, ಬೆಕ್ಕು, ಕೋಳಿ ಹೀಗೆಲ್ಲ. ಇಂಥಹ ಜೀವ ಪ್ರಪಂಚವನ್ನು ನೋಡುವ ಕಣ್ಣುಗಳು ಬೇಕು. ಹೊಸ್ತಿಲು ಹೊರಗೆ ಬಂದರೆ, ಇನ್ನೂ ಒಂದು ಪ್ರಾಣಿಪಕ್ಷಿಗಳ ಲೋಕವಿದೆ. ಇಂಥಹ ಮಾತುಗಳಿಗೆ ಪುಷ್ಠಿ ಕೊಡುವ ಕೃತಿ ‘ಕಾಡು ಮೇಡು’.

ಹಾವೇರಿಯ ಕೌರವ ದಿನಪತ್ರಿಕಯ ಸ್ಥಾನಿಕ ಸಂಪಾದಕ ಮಾಲತೇಶ ಅಂಗೂರರ ಕೃತಿ ಇದು. ಸದಾ ಚಡಪಡಿಕೆಯ ಅಂಗೂರ, ಜೀವಪರ ಜನಪರ ಕಾಳಜಿಗಳನ್ನಿಟ್ಟುಕೊಂಡ ಲೇಖಕ.

ಅಂಗೂರ ಎಂದರೆ
ನೆಲ ಹೊಲ, ಪಿಸುಗುಡುವ ಕಾಲ
ಅಂಗೂರ ಎಂದರೆ
ಮುಂಜಾನೆಯ ಕೊರಳಿಗೆ ನೇತು ಬಿದ್ದ
ಕರುಣೆಯ ಕೌತುಕದ ಕ್ಯಾಮೆರಾ ಕಣ್ಣು

ಇವು ಪ್ರತಿಭಾವಂತ ಕವಿ ಬಿ. ಶ್ರೀನಿವಾಸ ಬರೆದ ಒಳನುಡಿಯ ಕಾವ್ಯ ಸಾಲುಗಳು. ಇಷ್ಟು ಅಂಗೂರರ ಬಗ್ಗೆ ಸಾಂದ್ರವಾಗಿ ಹೇಳಿದರೆ ಸಾಕು ಅನ್ನಿಸುತ್ತೆ,

ಹಾವೇರಿ ಪರಿಸರದ ತಳಮಳವನ್ನೇ ಉಸಿರಾಗಿಸಿಕೊಂಡಿರುವ ಕಾಡು ಮೇಡುವಿನಲ್ಲಿ ೩೧ ಲೇಖನಗಳಿವೆ. ಮುಖ್ಯವಾಗಿ ನಮ್ಮ ಸುತ್ತಲಿನ ಸಾಮಾನ್ಯ ಅನ್ನಬಹುದಾದರೂ, ಕಣ್ಣಿಗೆ ಬೀಳದೆ ಹೋದ ಸಂಗತಿಗಳಿವೆ. ಮನುಷ್ಯ ಮತ್ತು ಪ್ರಾಣಿ, ಪಕ್ಷಿಲೋಕ, ಸಾಮಾನ್ಯತೆಯಲ್ಲಿ ಅಸಮಾನ್ಯತೆ ಹುಡುಕುವ ಯತ್ನದವು. ವೃತ್ತಿಯೊಂದಿಗೆ ಜೀವ ಪ್ರೀತಿಯನ್ನು ಕಾಣುವ ತವಕ ಇವುಗಳದ್ದು. ಎಲ್ಲೋ ದೂರ ಹೋಗದೆ ತನ್ನ ಸುತ್ತ ಕಂಡ ಕೌತುಕದ ಕ್ಷಣಗಳನ್ನು ಅಕ್ಷರಗಳಲ್ಲಿ ಹಿಡಿದಿಟ್ಟವು.

ನಮ್ಮ ಜೊತೆಗೆ ಬದುಕುತ್ತಿರುವ ಜೀವಲೋಕವನ್ನು ಪ್ರೀತಿಸುವ ಗುಣ ಹೊರಹೊಮ್ಮಿಸುವುದೇ ಇಡೀ ಕೃತಿಯ ಆಶಯ. ಸಾಮನ್ಯ ಜ್ಞಾನವಾಹಕದ ಮೂಲಕವೇ ಕಂಡುಕೊಂಡ ಸತ್ಯಗಳು ಇಲ್ಲಿವೆ. ತನ್ನ ಲೋಕಾನುಭವವನ್ನು ನಮ್ಮದಾಗಿಸುವ ಕರುಳಿನ ಬರಹಗಳು.

ಪ್ರಾಣಿ, ಪಕ್ಷಿಗಳಿಗೂ ಬಾಯಾರಿಕೆ ಉಂಟು – ಮೊದಲ ಲೇಖನದಲ್ಲಿ ನೀರಿಗಾಗಿ ಜಿಂಕೆಮರಿಗಳ ಪರದಾಟ, ಬೊಗಸೆ ನೀರಿಗಾಗಿ ನೀರಿನಲ್ಲಿ ಸಿಕ್ಕು ಪರದಾಡುವುದನ್ನು ದಾಖಲಿಸಿದ್ದಾರೆ. ಕೆರೆಕಟ್ಟೆಗಳಿಲ್ಲದೆ ಜಿಂಕೆಗಳು ಪರದಾಡುವ ಚಿತ್ರಣ ಮನಕಲಕುವಂತಹದು.

ಬಾಯಿ ಅಳತೆಗೂ ಮೀರಿದ ಮೀನನ್ನು ತಿನ್ನುವ ಕೆರೆ ಹಾವಿನ ಪ್ರಸಂಗ, ಗಾಯಗೊಂಡ ಕಾಗೆಯೊಂದು ಮನೆ ಹೊಕ್ಕು ಬಿದ್ದಾಗ, ಅಪಶಕುನ ಅನ್ನದೆ ಕಾಗೆಗೆ ಪಶುವೈದ್ಯರ ಬಳಿ ಒಯ್ದು ಚಿಕಿತ್ಸೆ ಕೊಡಿಸುವ ಘಟನೆ, ಬಾಯಾರಿಕೆಗೆ ಕುಸಿದು ದಾರಿಯಲ್ಲಿ ಬಿದ್ದ ಜಿಂಕೆಮರಿಗೆ ಹಾದಿಹೋಕನೊಬ್ಬ ನೀರು ನೀಡುವ ಪ್ರಸಂಗ, ಸತ್ತ ತನ್ನ ಮರಿಯನ್ನು ಕಾಯುವ ತಾಯಿ ನಾಯಿಯ ಜೀವಮಿಡಿತ, ಇಂತಹ ಸತ್ಯ ಪ್ರಸಂಗಗಳನ್ನು ಮಾಲತೇಶ ಕರುಳು ಚರ‍್ರೆನ್ನುವಂತೆ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ.

ಮೇಲಿನವು ಪ್ರಾಸಂಗಿಕ ಘಟನಾವಳಿಗಳಾದರೆ, ಹಾರುವ ಓತಿ ಬೆನ್ನಟ್ಟಿದ ಕರ್ವಾಲೋ ರೀತಿಯ, ಕೆಂದಳಿಲು ಹಾರಿತು, ಏಡಿ ತಿನ್ನುವ ಬೂದು ಬಣ್ಣದ ಮುಂಗುಸಿ, ಗೀಜುಗನ ಗೂಡು ಹೊಕ್ಕ ಹಾವು, ಹರಣಿ ಹಾರಿತು ದೂರ ದೂರ, ಲಾಲಖಾನ ಅವರ ತೋಟದ ಐದು ಮುಶ್ಯಾಗಳ ಹತ್ಯೆ, ಮೀನಿನ ಆಸೆಗೆ ಬಲೆಯಲ್ಲಿ ಸಿಕ್ಕು ಒದ್ದಾಡಿದ ಬಂಧಿಯಾದ ಗರುಡ – ಇಂತಹ ಅನೇಕ ಪ್ರಸಂಗಗಳು ಅಕ್ಷರಗಳಾಗಿವೆ.

ಇಲ್ಲಿ ಉಲ್ಲೇಖಿಸಬಹುದಾದ ಮತ್ತೊಂದು ಬಹುಮುಖ್ಯ ಲೇಖನ ಕೋಳಿ ವಿಷಾದ ಯೋಗ. ಹೊಲದ ಬದುವಿನಲ್ಲಿ ಸಿಕ್ಕ ಎರಡು ನವಿಲಿನ ತತ್ತಿಗಳನ್ನು ತಂದು, ಕೋಳಿ ಕಾವಿಗೆ ಕೊಟ್ಟ ಪ್ರಸಂಗ. ತತ್ತಿ ಒಡೆದು ನವಿಲುಮರಿಗಳು ಕೋಳಿಮರಿಗಳೊಂದಿಗೆ ಜೀವ ಸಾಗಿಸುವ ಕುತೂಹಲದ ಪ್ರಸಂಗವಿದು. ನವಿಲುಮರಿಗಳು ಬೆಳೆದು, ಚಹರೆಯಲ್ಲಿ ಬದಲಾದಾಗ ಅದು ಅನುಭವಿಸುವ ವಿಷಾದ ಯೋಗದ ಬಗ್ಗೆ ಹೃದ್ಯವಾಗಿ ಹೀಗೆ ಹೇಳುತ್ತಾರೆ :

‘ಈಗಲೇ ನವಿಲುಮರಿಗಳ ಹಾವ-ಭಾವದಲ್ಲಿ ಸಾಕಷ್ಟು ವ್ಯಾತ್ಯಾಸಗಳಾಗಿವೆ. ಇನ್ನೂ ವಾರ ಹದಿನೈದು ದಿನಗಳಲ್ಲಿ ನವಿಲಿನಮರಿಗಳು ತಕ್ಕಮಟ್ಟಿಗೆ ದೊಡ್ಡದವುಗಳಾಗಿ, ನವಿಲನ ನೈಜ ಬಣ್ಣಕ್ಕೆ ತಿರುಗಿದರೆ, ಕೋಳಿ ಅನುಭವಿಸುವ ಯಾತನೆ ಎಂತಹದ್ದು ? ಕಾಗೆಗೆ ಕಾಡುವ ವಿಷಾದಯೋಗ ಕೋಳಿಗೂ ಕಾದಿದೆಯೇ ?’

ಕುತೂಹಲ ಮತ್ತು ಜೀವಪರ ಕಾಳಜಿ ಇರುವ ಬರವಣಿಗೆ ಸದಾ ನಿರಾಭರಣ ಸುಂದರಿ ಇದ್ದಂತೆ. ಕೇವಲ ಕುತೂಹಲ ಅಲ್ಲ, ಕಳಕಳಿ ಇರುವ ಇಂತಹ ಕಾಡು ಮೇಡಿನ ಜೀವಚರಿತೆಯನು ಮಾಲತೇಶ ಅಂಗೂರು ಚಿತ್ರಿಸಿದ್ದಾರೆ. ಪುಸ್ತಕ ರಚನೆ ಸುಲಭದ ಕೆಲಸವಲ್ಲ. ಕೇವಲ ವಿದ್ವತ್ತ್ ಇದ್ದರೆ ಸಾಲದು ಲೋಕಜ್ಞಾನದ ಬೆಳಕಿನಲ್ಲಿ ಕಾಣುವ ಚಹರೆಗಳು ಇಲ್ಲಿವೆ.

ಮುಖಪುಟ ವಿನ್ಯಾಸದ ಅಮೃತ ಗುಂಜಾಳ, ಬೆನ್ನುಡಿ ಬರೆದ ಪ್ರವೀಣ ಪೂಜಾರರ ನುಡಿಗಳು ಹಾಗೂ ಅಲಲ್ಲಿ ಬಳಸಿಕೊಂಡ (ಸ್ವತಃ ಲೇಖಕರೇ ಪ್ರಸಂಗದ ಎಲ್ಲ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ) ಚಿತ್ರಗಳು ಸೆಳೆಯುತ್ತವೆ.

‍ಲೇಖಕರು avadhi

15 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading