
ಸತೀಶ ಕುಲಕರ್ಣಿ
ಮಕ್ಕಳಿಗಾಗಿ ಬರೆಯುವ ಸಾಹಿತ್ಯ ಹೀಗೇ ಇರಬೇಕೆಂದು ಹೇಳಿದರೆ ತಪ್ಪಾಗಬಹುದು. ಓದಿಸಿಕೊಳ್ಳುವ ಗುಣ, ಆಕರ್ಷಕ ಭಾಷೆ, ಕಚಗುಳಿಯ ಕಥಾತಂತ್ರ, ಇವೆಲ್ಲಕ್ಕಿಂತ ಹೆಚ್ಚಾಗಿ, ಗುಟ್ಟು ಹೇಳಲು ಹೊರಟ ಕುತೂಹಲ ಕಥೆಗೆ ಬೇಕು. ನಾಗರಾಜ ಎಂ. ಹುಡೇದ ಎಂಬ ಯುವ ಲೇಖಕರ ಮೊದಲ ಕಥಾ ಸಂಕಲನ ‘ಅವತಾರ ಮತ್ತು ಹಾರುವ ಕುದುರೆ’ ಬಿಡುಗಡೆ ಮಾಡುವ ಮುನ್ನ ನಾನು ಮಾಡಿಕೊಂಡ ಟಿಪ್ಪಣೆಗಳನ್ನು ವಿಸ್ತರಿಸಿ ಈ ಲೇಖನವನ್ನು ಬರೆಯುತ್ತಿರುವೆ.
ಉತ್ತರ ಕನ್ನಡ ಯಲ್ಲಪೂರ ತಾಲ್ಲೂಕಿ ಬೈಲಂದೂರು ಗೌಳಿವಾಡ ಎಂಬ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜರ ಈ ಕಥಾಸಂಕಲನದಲ್ಲಿ ೧೩ ಕಥೆಗಳಿವೆ. ಓದಲಾರಂಭಿಸಿದರೆ ಮನಸ್ಸನ್ನು ಹೀರಿಕೊಳ್ಳುವ ಸಹಜ ಶೈಲಿಯವು. ಸುಂದರ ಮುಖಪುಟ, ಆಕರ್ಷಕ ಒಳಪುಟಗಳ ವಿನ್ಯಾಸ ಮತ್ತು ರೇಖಾ ಚಿತ್ರಗಳು ಇನ್ನಿಷ್ಟು ಚಂದ್ ಹೆಚ್ಚಿಸಿವೆ.
ಆದರ್ಶವಾದದಿಂದ ವಾಸ್ತವಿಕ ಮಾರ್ಗಕ್ಕೆ ಹೊರಳು ಪಡೆಯುತ್ತಿರುವ ಇಂದಿನ ಮಕ್ಕಳ ಸಾಹಿತ್ಯ ಸಂದರ್ಭದಲ್ಲಿ ನಾಗರಾಜ, ಕಥಾಸಂಕಲನ ಹೊರ ತಂದಿದ್ದಾರೆ. ಸಾಮಾಜಿಕ ಜಾಲ ತಾಣಗಳ ಅಗತ್ಯ, ಅದರ ಸದುಪಯೋಗ ಹಾಗೂ ತನ್ನನ್ನೇ ತಾನು ಹೊಸ ಜಗತ್ತಿಗೆ ಓದು ಬರಹಗಳ ಮೂಲಕ ತೆರೆದುಕೊಳ್ಳುವ ಮನಸ್ಸಿನವರು. ಪ್ರತಿ ಕಥೆ ತನ್ನ ಅಚ್ಚರಿಯ ಟೇಕಾಫ್ ಮೂಲಕ ಸೆರೆ ಹಿಡಿಯುತ್ತದೆ. ಸಹಜ ಸರಳ ಭಾಷೆ, ಫ್ಯಾಂಟಸ್ಸಿಯ ತಂತ್ರಗಾರಿಕೆ ಸಂಕಲನದ ಯಶಸ್ಸಾಗಿವೆ.
ಕಥೆಗಾರ ವಾಸಿಸುವ ಹಳ್ಳಿಯ ಹೆಸರು ಗೌಳಿವಾಡ. ಕನ್ನಡ–ಮರಾಠಿ-ಕೊಂಕಣಿ ಭಾಷಿಕ ಗೌಳಿ ಜನಾಂಗದ ಪ್ರದೇಶ. ಸುತ್ತ ಕಾಡು, ಸುರಿಯುವ ಮಳೆ, ಗಿಡ ಬಳ್ಳಿ ಹಸುರಿನ ಗೌಳಿವಾಡ ಇಲ್ಲಿನ ಕಥಾಭೂಮಿಯೂ ಆಗಿದೆ. ಎಲ್ಲ ಕಥೆಗಳ ಸೂಚ್ಯ ಸಂದೇಶ ಪರಿಸರ ರಕ್ಷಣೆ. ಒಮ್ಮೆ ಓದಲು ಕುಳಿತರೆ ಬಿಟ್ಟು ಬಿಡದೆ ಓದಿಸಿಕೊಳ್ಳುವ ಗುಣವುಳ್ಳವು. ಇದನ್ನೇ ಹಿರಿಯ ಸಾಹಿತಿ ಡಾ. ಆನಂದ ಪಾಟೀಲ ‘.. ಒಂದಾವುದೋ ಉದ್ದೇಶ ಈಡೇರಿಸುವ ಸದ್ಯದ ತುರ್ತಿಗೆ ಕಥೆ ದುಡಿಯುವುದಕ್ಕಿಂತ ಕಥೆಯಾಗಿ ನಮ್ಮನ್ನು ಆವರಿಸಿಕೊಳ್ಳುತ್ತವೆ’. ಎಂದಿದ್ದಾರೆ.

ಪುರಾತನದಲ್ಲಿಯ ಪಾತ್ರಗಳು ಇಂದಿಗೆ ಕನೆಕ್ಟಾಗುವ ರೀತಿ, ಕಥೆಯೊಳಗೆ ಕಥೆ ಮೊಳೆತು ಉಪಯುಕ್ತ ಸಂದೇಶ ನೀಡಿವೆ. ಪ್ರತಿ ಕಥೆ ನಮ್ಮೊಳಗಿಳಿದು, ಯಲ್ಲಾಪುರದ ಮಲೆನಾಡ ಸಸ್ಯ ಪ್ರಾಣಿ ಲೋಕವನ್ನು ಪರಿಚಯಿಸಿವೆ.. ಇಲ್ಲಿ ಬರುವ ಹೆಸರುಗಳು ಕೂಡ ವಿಶಿಷ್ಟ. ಉದಾ : ಗೂಗಲ್ ಭೀಮಜ್ಜ, ಬಕ್ಕು, ಗದುಗಿನ ಗುಂಡಣ್ಣ, ರಾಪಾದಿಬ್ಬ ಎಂಬೆಲ್ಲ ವಿಚಿತ್ರ ಹೆಸರುಗಳು.
ದಿಗ್ಗಜರು ಸೃಷ್ಟಿಸಿದ ಮಕ್ಕಳ ಸಾಹಿತ್ಯವನ್ನು ಮತ್ತೆ ಮತ್ತೆ ಜಪಿಸದೆ, ಸಾಕಷ್ಟು ಕೃಷಿ ಮಾಡುತ್ತಿರುವ ಹೊಸಬರ ಬಗ್ಗೆಯೂ ಚೆರ್ಚೆಯಾಗಬೇಕು. ಮುಖ್ಯವಾಗಿ ಪ್ರಧಾನ ಸಾಹಿತ್ಯದ ‘ಬಾಲಂಗೋಚಿ’ ಮಕ್ಕಳ ಸಾಹಿತ್ಯ ಎಂಬ ಮಾತನ್ನು ಬಿಟ್ಟು, ಹೊಸದಕ್ಕಾಗಿಯೆ ಆವರಣವನ್ನು ಬಿಟ್ಟುಕೊಳ್ಳಬೇಕು.
ಚಂದ್ರಗೌಡ ಕುಲಕರ್ಣಿ, ಬಸೂ ಬೇವಿನಗಿಡದ, ನಿಂಗು ಸೊಲಗಿ, ವಿನಾಯಕ ಕಮತರ, ವೈ. ಜಿ. ಭಗವತಿ, ವಿಶ್ವೇಶ್ವರಿ ಹಾಲಾಡಿ, ನಿರ್ಮಲಾ ಸುರತ್ಕಲ್, ಸೋಮಲಿಂಗ ಜೇಡರ್, ಗುರುನಾಥ ಸುತಾರ್, ಡಾ. ಮಾಧು ಪ್ರಸಾದ, ಡಾ. ಶಿವಲಿಂಗಪ್ಪ ಹಂದಿಹಾಳ, ಗಿರೀಶ ಜಕಾಪುರೆ, ಮಹಾದೇವಪ್ಪ ತಳಗುಂದೆ., ಜಿ. ಎಂ. ಓಂಕಾರಣ್ಣನವರ, ಹ.ಸ. ಬ್ಯಾಕೋಡ, ಅನೇಕರು ಬರೆಯುತ್ತಿದ್ದಾರೆ. ಇವರ ಬಗ್ಗೆ ಚರ್ಚೆ ಕೂಡ ಆಗಬೇಕು.
‘ಅವತಾರ ಮತ್ತು ಹಾರುವ ಕುದುರೆ’ ಸಂಕಲನದ ಕಥೆಗಳ ಹೆಸರೆ ಓದಿಗೆ ಸೆಳೆಯುತ್ತವೆ. ಬಕ್ಕೂ ಅಂದರೆ ಬಕ್ಕೂ , ರಾಪಾ ದಿಬ್ಬ, ಮಾತಾನಾಡುವ ಮರಗಳು, ಹಾಂ.. ಅದೆ ಬಸಪ್ಪ, ಬಂಗಾಳಿ ಮರ, ಗೂಗಲ್ ಭೀಮಪಜ್ಜ, ಈ ಹೆಸರುಗಳನ್ನು ನೋಡಿದಾಕ್ಷಣ ಕಥೆಯಲ್ಲಿ ಏನಿರಬಹುದೆಂದು ಕುತೂಹಲ ಹುಟ್ಟುತ್ತದೆ.
ಎಲ್ಲ ಕಥೆಗಳ ಬಗ್ಗೆ ದೀರ್ಘವಾಗಿ ಬರೆಯುವುದಕ್ಕಿಂತ ‘ಯಾರು ಹೆಚ್ಚು’ ಎಂಬ ಕಥೆ ಸಾರ ಹೀಗಿದೆ. ಫಳ ಫಳನೇ ಹೊಳೆಯುವ ಆಕಾಶದೆರಡು ನಕ್ಷತ್ರಗಳು ‘ನಾನೇ ಶ್ರೇಷ್ಠ’ ಎಂದು ಜಗಳಾಡಿ ಕೊನೆಗೆ ಒಂದು ರಾತ್ರಿ ವಿಶಾಲ ಸಮುದ್ರದ ಮೇಲಿಂದ ಕೋಟಿ ಕೋಟಿ ನಕ್ಷತ್ರಗಳ ಪ್ರತಿಫಲನ ನೋಡಿದಾಗ ತಮ್ಮ ಅಹಂಕಾರ ಕಳೆದುಕೊಂಡು ಅನೇಕ ಶ್ರೇಷ್ಠರು ಇಲ್ಲಿದ್ದಾರೆ ಎಂಬ ನಿಲುವಿಗೆ ಬರುತ್ತವೆ.
ರೈತ ಹೋರಾಟ, ಕನ್ನಡದ ರಕ್ಷಣೆ, ಅನ್ಯಾಯದ ವಿರುದ್ಧ ಪ್ರತಿನಿತ್ಯ ಸಂಘಟಿತವಾಗಿ ದೊಡ್ಡವರು ಹೋರಾಟ ಮಾಡುತ್ತಾರೆ. ಆದರೆ ಮಕ್ಕಳು ಸಂಘಟಿತರಾಗಿರುವುದಿಲ್ಲ. ಅವರಿಗಾಗಿ ಬರೆದು ತಿಳುವಳಿಕೆ ನೀಡಿ ಆತ್ಮವಿಶ್ವಾಸ ತುಂಬುವ ಸಾಹಿತ್ಯ ರಚನೆ ಮತ್ತು ಸಂಘಟಿತ ಹೋರಾಟಗಳಾಗಬೇಕು. ಕಾರಣ, ಮಕ್ಕಳೇ ನಮ್ಮ ಕಣ್ಣ ಮುಂದಿನ ಬೆಳಕು. ಇಂತಹದೊಂದು ಮುಗ್ಧ ಜಗತ್ತಿಗೆ ಕೈ ಜೋಡಿಸ ಬೇಕಾಗಿದೆ. ನಾಗರಾಜ ಹುಡೇದರ ‘ಅವತಾರ ಮತ್ತು ಹಾರುವ ಕುದುರೆ’ ಒಂದು ಸಣ್ಣ ಕಿರಣ ಮಾತ್ರ.






ಅವತಾರ್ ಮತ್ತು ಹಾರುವ ಕುದುರೆ ಮಕ್ಕಳ ಕಥಾ ಸಂಕಲನ ಕುರಿತು ಅಮೂಲ್ಯ ಮಾತುಗಳನ್ನಾಡಿ ರುವ ಸತೀಶ್ ಕುಲಕರ್ಣಿ ಅವರಿಗೆ ಧನ್ಯವಾದಗಳು.