ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೆಂದರೆ ನಾನೀಗ ಕಿಟಕಿಯಾಗಿಬಿಟ್ಟಿದ್ದೇನೆ..

ಕಿಟಕಿ

ರವಿಕುಮಾರ ಹಂಪಿ

ನಾನೂ ಮುಂದೊಂದು ಜನ್ಮ ಎತ್ತಿ ಬರುವುದಾದರೆ ಒಂದು ಕಿಟಕಿ ಆಗಿ ಹುಟ್ಟಬೇಕೆಂಬುದು ನನ್ನ ಆಸೆ. ಯಾವ ದೈವದ ಆಶೀರ್ವಾದವೋ ನನಗೂ ಕಿಟಕಿಗೂ ಮಧ್ಯ ಗೆಳೆತನ ಹೇಗೆ ಬೆಳೆಯಿತೋ ಗೊತ್ತಿಲ್ಲ, ಆದರೆ ಮಾತುಕತೆ ಮುಗಿಸಿ ಜಗಳದವರೆಗೂ ಮುಂದುವರೆದಿದ್ದೇವೆ. ಇಲ್ಲಿಯತನಕ ನಾನ್ಯಾರಿಗೂ ಈ ವಿಷಯವನ್ನೇ ತಿಳಿಸಿದ್ದಿಲ್ಲ. ತಿಳಿಸಿದ್ದರೆ ಹುಚ್ಚ ಅಂತ ಅನ್ನುತ್ತಿದ್ದರೇನೋ, ನೀವೋ ಸಹೃದಯರು, ಮೇಲಾಗಿ ನನ್ನನ್ನು ನಂಬಿ ನಾನು ಹೇಳುವುದರಲ್ಲಿ ಸತ್ಯ ಇರುವುದೆಂದೇ ನನ್ನ ಕಥೆಯನ್ನ ಓದುತ್ತಿದ್ದೀರಿ. ನಿಮ್ಮೊಂದಿಗೆ ನನ್ನಂತರಂಗ ತೆಗೆದಿಡದೆ ಯಾರೊಂದಿಗೆ ಹೇಳಲಿ ಹೇಳಿ?
ನಿಮಗೇ ಗೊತ್ತಲ್ಲ ನನಗೋ ಮೊದಲಿನಿಂದಲೂ ಜನರೆಂದರೆ, ಜನರ ಗುಂಪೆಂದರೆ, ಹಬ್ಬ ಹರಿದಿನಗಳೆಂದರೆ, ಟಿ.ವಿ ಎಂದರೆ, ಜೋರಾದ ಮಾತೆಂದರೆ, ಗಮ್ಮತ್ತಿನ ಹೆಸರಿನ ಗಲಾಟೆಯೆಂದರೆ ಅಲರ್ಜಿ ಎಂದು. ನಾನು ವಾಸಿಸುವ ರೂಮು ಎರಡನೇ ಅಂತಸ್ಥಿನಲ್ಲಿ ಇರುವುದರಿಂದ ರಸ್ತೆಯ ಗಲಾಟೆಯಿಂದ ಕೊಂಚ ದೂರವೇ ಇದ್ದುದು ನೆಮ್ಮದಿಗೆ ಕಾರಣವಾಗಿತ್ತು. ಮಳೆ ಬಿದ್ದಾಗ, ದೆವ್ವದ ಗಾಳಿ ಎದ್ದಾಗ, ಡೊಳ್ಳು ಹೊಟ್ಟೆಯ ಗಣಪ ಢೊಳ್ಳಿನ ಗಲಾಟೆಯೊಂದಿಗೆ ಸಾಯಲು ಹೊರಟಾಗ, ಯಾವುದೋ ವೇಶ್ಯೆಯೊಬ್ಬಳು ತನಗೆ ಮಾತಾಡಿದಷ್ಟು ರೊಕ್ಕ ಕೊಡಲಿಲ್ಲವೆಂಬ ಕಾರಣಕ್ಕೆ ತನ್ನ ಲಂಗವನ್ನೆತ್ತಿ ಕಟ್ಟಿ ವಿಟಪುರುಷನೊಂದಿಗೆ ರೋಡಿನಲ್ಲೇ ಜಗಳವಿಟ್ಟುಕೊಂಡಾಗ, ಮಗುಗೊಂದು ರಸ್ತೆಯ ಕಲ್ಲೆಡವಿ ಬಿದ್ದು ರಕ್ತ ಸುರಿಯುವ ಕಾಲನ್ನು ನೋಡಿಕೊಂಡು ಅಳುತ್ತ ಕುಳಿತಿರುವಾಗ ತಮಗೇನೂ ಸಂಬಂಧವೇ ಇಲ್ಲದಂತೆ ತಮ್ಮ ಪಾಡಿಗೆ ತಾವು ಜನರು ಹೊರಟಿರುವಾಗ ಈ ಎಲ್ಲದಕ್ಕೂ ಈ ಕಿಟಕಿಯ ಸಾಕ್ಷಿಯಾಗಿಯೇ ನನ್ನ ಪಂಚೇಂದ್ರಿಯಗಳ ಗಮನಕ್ಕೆ ಬಂದವುಗಳಾಗಿವೆ.

ಒಂದೊಂದು ಸಲ ಕಿಟಕಿಯ ಹತ್ತಿರ ಸರಳುಗಳನ್ನು ಹಿಡಿದುಕೊಂಡು ಆಚೆ ಬದುಕನ್ನು ಬೆರಗುಗಣ್ಣುಗಳಿಂದ ನೋಡುತ್ತಿರುವಾಗ ಆದ್ಯಾತ್ಮವೇ ಸಾಕ್ಷಾತ್ಕಾರವಾಗಿಬಿಡುತ್ತಿತ್ತು. ಎರಡೂ ಕಾಲುಗಳನ್ನು ಕಳೆದುಕೊಂಡ ನಾಯಿಯೊಂದು ಎರಡೇ ಕಾಲುಗಳನ್ನು ಎಳೆದುಕೊಂಡು ಆಹಾರ ಹುಡುಕುತ್ತಿತ್ತು, ಇತರೆ ನಾಯಿಗಳೊಂದಿಗೆ ಕಾಲೆಳೆಯುತ್ತ ಚಿನ್ನಾಟವಾಡುತ್ತಿರುವುದನ್ನು ನೋಡುತ್ತಿದ್ದರೆ ಮಗಳ ಫೀಸು ಕಟ್ಟಲಾಗದೆ ಒಂದೊಂದು ಕ್ಷಣ ಸತ್ತುಬಿಡಬೇಕೆಂದು ಅನ್ನಿಸುವ ಬಯಕೆಯನ್ನು ಕೊಂದು ಬಿಡುತ್ತಿತ್ತು. ಹಣ್ಣು ಹಣ್ಣು ಮುದುಕಿಯೊಬ್ಬಳು ನಾಲ್ಕು ನಿಂಬೆಕಾಯಿ, ಒಂದಿಷ್ಟು ಹುರಿಗಡಲೆ, ಒಂದಿಷ್ಟು ಸಂಡಿಗೆಗಳನ್ನು ಇಟ್ಟುಕೊಂಡು ಐದು ರೂಪಾಯಿಯ ವ್ಯಾಪಾರಕ್ಕಾಗಿ ಮುಂಜಾನೆಯಿಂದ ಸಂಜೆಯವರೆಗೆ ಶಾಲಾ ಮಕ್ಕಳಿಗಾಗಿ ಕಾಯುವ ಅವಳ ಸಹನೆ ನನ್ನ ವ್ಯಕ್ತಿತ್ವವನ್ನೇ ನಡುಗಿಸಿಬಿಡುತ್ತದೆ. ಸಣ್ಣ ಪುಟ್ಟ ಕಾರಣಗಳಿಗಾಗಿ ಹೆಂಡತಿ ಮಕ್ಕಳ ಮೇಲೆ ರೇಗಿ ದೂರ್ವಾಸನಿಗಿಂತ ಕೀಳಾಗಿ ವರ್ತಿಸಿದ ರೀತಿಗಳು ನೆನಪಾಗಿ ಕಣ್ಣುಗಳು ಹನಿಗೂಡುತ್ತವೆ. ನನಗೆ ಬದುಕನ್ನು ಕಲಿಸಿದ್ದು ಈ ಕಿಟಕಿಯಾ? ಅದಕ್ಕೇ ಹಿರಿಯರು ಹೇಳಿದ್ದರೇನೋ, ಜ್ಞಾನ ಯಾವ ದಿಕ್ಕಿನಿಂದಲೇ ಬರಲಿ ನಿಮ್ಮ ಕಿಟಕಿಗಳನ್ನು ತೆರೆದಿಡಿ ಎಂದು.
ಬಹುಬುದ್ದಿವಂತ ಮನುಷ್ಯನೂ ಕೆಲಕಾಲ ನಿದ್ದೆ ಮಾಡುತ್ತಾನೆ. ಎಚ್ಚರವಿರುವಾಗಲೂ ಕ್ಷಣ ಕಾಲ ಎಚ್ಚರ ತಪ್ಪುತ್ತಾನೆ. ಭಾವನೆಗಳ ಭಾರ ಹೆಚ್ಚಾದಾಗ ಕಣ್ಣುಮುಚ್ಚಿ ಹೆಣದಂತಾಗುತ್ತಾನೆ. ಎಂಥೆಂಥಾ ದೈತ್ಯ ಮಷೀನುಗಳೂ ಕೆಲ ದಿನಗಳ ಕಾಲ ಕೆಟ್ಟು ತಾಳ್ಮೆ ಪರೀಕ್ಷೆ ಮಾಡುತ್ತವೆ. ಎಲ್ಲವೂ ಒಂದಿಲ್ಲೊಂದಿಷ್ಟು ಕಾಲ ಜಡತ್ವ ತಾಳುತ್ತವೆ. ಆದರೆ ಸೋಜಿಗವೆಂದರೆ, ಎಷ್ಟೋ ಸಾರೆ ದಿನಗಟ್ಟಲೆ, ಮುಂಜಾನೆಯಿಂದ ಸಂಜೆಯವರೆಗೆ, ರಾತ್ರಿಯವರೆಗೆ, ರಾತ್ರಿಯಿಂದ ಮುಂಜಾನೆಯವರೆಗೆ ನಾನು ಕಿಟಕಿಯ ಬಳಿ ಕುಳಿತದ್ದುಂಟು. ಆದರೆ ಕಿಟಕಿ ಎಂದೂ ಜಡತ್ವ ತೋರಿದ್ದೇ ಇಲ್ಲ. ಮುಂಜಾನೆ ಐದುಗಂಟೆಗೆಲ್ಲಾ ಎದ್ದುಬಿಡುವ ನಾನು ಕೆಲವು ಸೋಮಾರಿ ಜನರ ಮುಂದೆ ಹೆಮ್ಮೆಯಿಂದ ಬೀಗಿದ್ದುಂಟು. ಒಂದೊಮ್ಮೆ ರಾತ್ರಿ ನನಗಿಂತ ಮುಂಚೆ ಯಾರು ಏಳುತ್ತಾರೆ ನೋಡಿಯೇ ಬಿಡೋಣವೆಂದು ರಾತ್ರಿ ಪೂರ್ತಿ ಕುಳಿತಾಗ ನಾಚಿಕೆ ಪಡುವ ಸರದಿ ನನ್ನದಾಗಿತ್ತು.

ಪೇಪರ್ ಹಾಕುವ ಹುಡುಗ ರಾತ್ರಿ ಎರಡು ಗಂಟೆಗೆ ಬಸ್ ಸ್ಟ್ಯಾಂಡಿನ ಕಡೆಗೆ ಹೊರಟಿದ್ದ, ಬೆಳಿಗ್ಗೆ ಮೂರು ಗಂಟೆಗೆಲ್ಲ ಆ ಬೀದಿ ಬದಿಯ ಮುದುಕಿ ಸೆಗಣಿಗಾಗಿ ಎದ್ದು, ಲಗುಬಗನೆ ಅಲ್ಲಲ್ಲಿ ಬೀದಿಗಳಲ್ಲಿ ಮಲಗಿದ್ದ ದನಕರುಗಳನ್ನೆಲ್ಲಾ ಎಬ್ಬಿಸಿ ಅವುಗಳು ಹಾಕುವ ಸೆಗಣಿಯನ್ನೆಲ್ಲ ಒಂದು ಬುಟ್ಟಿಯಲ್ಲಿ ಒಟ್ಟು ಮಾಡಿ ತನ್ನ ಮನೆಯ ಗೋಡೆಗೆ ಕುಳ್ಳುಗಳನ್ನಾಗಿ ತಟ್ಟಿ , ನೆನ್ನೆಯ ಒಣಗಿದ ಕುಳ್ಳುಗಳನ್ನು ಮಾರಲೆಂದು ಚೀಲಗಳಲ್ಲಿ ತುಂಬಿಟ್ಟು ಒಳಗೆ ಹೋಗುತ್ತಾಳೆ. ಅವಳು ಒಳಗೆ ಹೋದ ಹತ್ತೇ ಕ್ಷಣಗಳಲ್ಲಿ ರೊಟ್ಟಿ ಬಡಿಯುವ ಸದ್ದು ನನ್ನ ಕೆನ್ನೆಯ ಮೇಲೆ ಬಾರಿಸಿದಂತಾಗುತ್ತದೆ. ವೇಶ್ಯೆಯೊಬ್ಬಳು ದಿನದ ಸಂಪಾದನೆ ಎಣಿಸಿಕೊಳ್ಳುತ್ತ ಬೆಳಗಿನ ಜಾಗ ಮನೆಗೆ ಹೋಗುತ್ತಾಳೆ. ಅರೆ ನಾನು ಬೆಳಿಗ್ಗೆ ಎಳುವ ವಿಚಾರ ಮಾಡುತ್ತಿದ್ದೇನೆ. ಆದರೆ ಕೆಲವೊಬ್ಬರು ನಾನು ಏಳುವ ಸಮಯವಾದರೂ ಅವರಿನ್ನೂ ಹಾಸಿಗೆಯೇ ಸೇರಿಲ್ಲ. ಕ್ಷಣಕಾಲ ನಾನು ಕುಬ್ಜನೆನ್ನಿಸಿಕೊಂಡುಬಿಡುತ್ತೇನೆ.
ನನ್ನನ್ನು ಬೆತ್ತಲೆ ಮಾಡುವ ಕಿಟಕಿಯನ್ನು ನಾನು ದ್ವೇಷಿಸುತ್ತೇನೆ. ಎಷ್ಟೋ ಸಾರೆ ಕಂಡದಕ್ಕೆ ಮರಗಿದ್ದುಂಟು, ಕೊರಗಿದ್ದುಂಟು, ಮನಸ್ಸಿನಲ್ಲೇ ಬಯ್ದದ್ದುಂಟು. ಬಿದ್ದ ಮಗುವನ್ನು ಎತ್ತದ ಬೀದಿ ಹೋಕರು, ರಸ್ತೆಯಲ್ಲಿ ಹಾರಲಾಗದೆ ತೆವಳುತ್ತ ಹೋಗುತ್ತಿರುವ ಕಾಗೆಯ ಮರಿಯನ್ನು ಮುಟ್ಟದ ಜನರು, ಹರಿಯುತ್ತಿರುವ ನೀರಿನ ನಲ್ಲಿಯನ್ನು ಬಂದು ಮಾಡದೆ ಹಾಗೆ ಹೋಗುವ ಜನರು, ಏನೂ ಮಾಡದೆ ತಮ್ಮ ಪಾಡಿಗೆ ತಾವು ಆಡುತ್ತಿರುವ ಮಕ್ಕಳನ್ನು ಹಿಡಿದು ಜಜ್ಜುತ್ತಿರುವ ಧಾಂಡಿಗರು. ಇವರನ್ನೆಲ್ಲ ಕಂಡು ಜಿಗುಪ್ಸೆ ಹೊಂದಿ ರಪ್ಪನೆ ಕಿಟಕಿ ಮುಚ್ಚುತ್ತೇನೆ. ಇವರೆಲ್ಲರ ಕೆಟ್ಟತನವನ್ನೇಕೆ ನನಗೆ ತೋರಿಸುತ್ತಿ ಎಂದು ಕಿಟಕಿಯ ಮೇಲೆ ರೇಗಿದ್ದುಂಟು, ದಪ್ಪನೆಯ ಮಾರ್ಕರ್ ಪೆನ್ನಿನಿಂದ ನೀಚ ಕಿಟಕಿ, ಸೆನ್ಸಾರ್ಲೆಸ್ ಕಿಟಕಿ, ಕೆಟ್ಟ ಕಿಟಕಿ, ಪಾತಕಿ ಕಿಟಕಿ ಎಂದೆಲ್ಲಾ ಬರೆದು ಸೇಡು ತೀರಿಸಿಕೊಂಡದ್ದುಂಟು.
ಕಿಟಕಿ ಮುಚ್ಚಿದಾಗ ಅದರ ಸಂಧಿಯಿಂದ ಬಂದ ಒಂದು ಕಿರಣ ನನ್ನ ಮುಚ್ಚಿದ ಎವೆಗಳ ಮೇಲೆ ಬಿದ್ದು, ಸಿನಿಮಾಗಳಲ್ಲಿ ರೀಲು ಬಿಟ್ಟಂತೆ ಮತ್ತೆ ದೃಶ್ಯಾವಳಿಗಳು ಪ್ರಾರಂಭಗೊಂಡಾಗ ಮತ್ತೆ ಮತ್ತೆ ಬೆಚ್ಚಿ ಬೀಳುತ್ತೇನೆ. ಅಲ್ಲಿ ನಾನು ಕಿಟಕಿಯಲ್ಲಿ ಇರುವುದಿಲ್ಲ ಬದಲಿಗೆ ರಸ್ತೆಯಲ್ಲಿ ಇರುತ್ತೇನೆ. ನನ್ನ ಪ್ರೇಕ್ಷಕನ ಸ್ಥಾನದಲ್ಲಿ ಬೇರೊಬ್ಬರು ಇರುತ್ತಾರೆ. ಆ ಕಿಟಕಿಯ ಪ್ರೇಕ್ಷಕ ನನ್ನಂತೆ ಎಲ್ಲವನ್ನೂ ನೋಡುತ್ತಾ ಕುಳಿತಿರುತ್ತಾನೆ. ಆಗ ನನ್ನ ವಿಚಾರಗಳು ಉಲ್ಟಾ ಪಲ್ಟಾ ಆಗಿರುತ್ತವೆ. ಅಲ್ಲಾ ಕಿಟಕಿಯಲ್ಲಿ ಕುಳಿತುಕೊಂಡು ಅವೆಲ್ಲವನ್ನು ನೋಡುತ್ತಿರುವ ಅವನು ಒಂದು ಸಾರೆಯಾದರೂ ಕಿಟಕಿ ಬಿಟ್ಟು ಕೆಳಗಿಳಿದು ಬಂದು ಒಬ್ಬರಿಗಾದರೂ ಸಹಾಯ ಮಾಡಿದ್ದುಂಟಾ? ಮೂಲಿ ಮನೆಯ ಸಂಧಿಯಲ್ಲಿ ಎರಡು ಬುಟ್ಟಿಗಾಗುವಷ್ಟು ಸೆಗಣಿ ಬಿದ್ದುದನ್ನು ಆ ಮುದುಕಿಗೆ ಹೇಳಿದ್ದುಂಟಾ? ಬಲಿಯದ ರೆಕ್ಕೆಗಳನ್ನು ಕಟ್ಟಿಕೊಂಡು ರಸ್ತೆಯಲ್ಲಿ ಅಂಜುತ್ತ ತೆವಳುವ ಆ ಕಾಗೆಯ ಮರಿಯನ್ನು ಒಮ್ಮೆಯಾದರೂ ಎತ್ತಿಕೊಂಡು ಅದರ ಗೂಡಿನಲ್ಲಿ ಬಿಟ್ಟುದ್ದುಂಟಾ? ಗಿರಾಕಿಯಾಗದ ದಿನ ಅಳುತ್ತ ಮನೆಯೆಡೆಗೆ ಹೋಗುತ್ತಿರುವ ವೇಶ್ಯೆಯನ್ನು ಕರೆದು ಒಮ್ಮೆಯಾದರೂ ಚಹಕೊಟ್ಟು ಸಾಂತ್ವನದ ನುಡಿಗಳನ್ನು ಆಡಿದ್ದುಂಟಾ? ಬಿದ್ದು ಗಾಯ ಮಾಡಿಕೊಂಡ ಮಗುವನ್ನೆತ್ತಿಕೊಂಡು ಅದರ ಗಾಯಕ್ಕೆ ಅರಿಷಿಣ ಪುಡಿ ಸವರಿದ್ದುಂಟಾ? ಹೀಗೆ ನನ್ನ ಮನಸ್ಸು ಯೋಚಿಸುತ್ತಿದ್ದಾಗ ಆಶ್ಚರ್ಯವಾಗುತ್ತದೆ.
ನಾನು ಮತ್ತು ಕಿಟಕಿ ಎಷ್ಟೊಂದು ಆತ್ಮಿಯರಾಗಿಬಿಟ್ಟಿದ್ದೆವೆಂದರೆ ನನ್ನ ಊಟ, ನಿದ್ದೆ, ವಿರಾಮ ಎಲ್ಲವೂ ಕಿಟಕಿಯಲ್ಲಿಯೇ ಆಗುತ್ತಿತ್ತು. ಒಂದೊಂದು ಸಲ ಕಿಟಕಿಯ ತುಕ್ಕು ಹಿಡಿದ ಸರಳುಗಳನ್ನು ಸವರುತ್ತ ನನ್ನ ಬೆರಳುಗಳನ್ನು ನೋಡಿಕೊಂಡಾಗ ನನ್ನ ಅಸ್ತಿತ್ವ ನನಗೆ ತಿಳಿಯುತ್ತಿತ್ತು. ವೀಕ್ಷಣೆ ಕಿಟಕಿಯ ಕೆಲಸವಾದರೆ ಮನಸ್ಸಿಗೆ ಅನ್ನಿಸಿದ್ದನ್ನು ಮಾಡುವ ಶಕ್ತಿ ಇರುವ ನಾನು ಕಿಟಕಿಯಾಗಬಾರದು ಅನ್ನಿಸಿ ಕೆಲಬಾರಿ ಕೆಳಗಿಳಿದು ಬಂದು ಮನಸ್ಸಿಗೆ ಅನ್ನಿಸಿದ್ದನ್ನು ಮಾಡಿಬಿಡುತ್ತಿದ್ದೆ. ಆದರೆ ಚಿಕ್ಕಮಕ್ಕಳು ತಮಗೆ ಅನ್ನಿಸಿದಂತೆ ಡಾಕ್ಟರ್ ಆಟವೋ, ಅಡಿಗೆ ಆಟವೋ ಯಾವುದೋ ಆಟವನ್ನು ಆಡುತ್ತಿರುವಾಗ ದೊಡ್ಡವರು ಅವರನ್ನು ಗಮನಿಸುತ್ತಿರುವುದು ಅವರು ಕಂಡರೆ ಸಾಕು ತಕ್ಷಣ ನಾಚಿಕೊಂಡು ಆಟಬಿಟ್ಟು ಸುಮ್ಮನಾಗುವಂತೆ ನನ್ನ ಪರಿಸ್ಥಿತಿ ಆಗಿಬಿಡುತ್ತಿತ್ತು.
ಒಂದು ಸಲ ಹೀಗಾಯಿತು. ಆ ಹೀರಾಬಾಯಿ ಮುದುಕಿಯು ದಿನಾ ಬೆಳಿಗ್ಗೆ ಎದ್ದು ಸೆಗಣಿ ಹಿಡಿಯುತ್ತಿದ್ದುದು ಗಮನಕ್ಕೆ ಬಂದು ಒಂದು ದಿನ ಅವಳಿಗೆ ಸಹಾಯ ಮಾಡಿದರಾಯಿತೆಂದು ರಾತ್ರಿ ಒಂದು ಗಂಟೆಗೆಲ್ಲಾ ಎದ್ದು ರೋಡಿನಲ್ಲಿ ಮಲಗಿದ್ದ ದನಗಳನ್ನೆಲ್ಲ ಎಬ್ಬಿಸಿ ಅವುಗಳು ಹಾಕಿದ ಸೆಗಣಿಯನ್ನೆಲ್ಲ ಒಟ್ಟು ಮಾಡಿ ಅವಳ ಕಣ್ಣಿಗೆ ಕಾಣುವಂತೆ ಒಂದು ಕಡೆ ಹೊಂದಿಸಿ ನಾನು ಕೈ ತೊಳೆದುಕೊಂಡು ಮತ್ತೆ ಕಿಟಕಿಯ ಹತ್ತಿರ ಹೋಗುವಷ್ಟರಲ್ಲಿ ರಾತ್ರಿ ಎರಡೂವರೆಗಂಟೆ ಆಗಿಬಿಟ್ಟಿತ್ತು. ಆಗ ಎದ್ದ ಮುದುಕಿ ಮತ್ತೆ ಒಂದೊಂದೇ ದನಗಳನ್ನು ಎಬ್ಬಿಸುತ್ತ ಬಂದಳು. ಆಗತಾನೇ ಸೆಗಣಿ ಹಾಕಿದ ದನಗಳು ಎಷ್ಟು ಬಾರಿ ಸೆಗಣಿ ಹಾಕಿಯಾವು? ಅವು ಉಚ್ಚೆ ಒಯ್ದು ಮತ್ತೆ ಮಲಗಿಬಿಟ್ಟವು. ಆ ಮುದುಕಿ ರಸ್ತೆಯನ್ನೆಲ್ಲ ಗಮನಿಸಿ ಈಗ ತಾನೆ ಹಾಕಿದ ಫ್ರೇಶ್ಶಾದ ಸೆಗಣಿಯನ್ನು ಯಾರೋ ಬಳಿದುಕೊಂಡು ಹೋಗಿರುವುದನ್ನು ಕಂಡಾಗಲಂತೂ ಉಗ್ರ ರೂಪ ತಾಳಿ ಇಡೀ ಓಣಿಯ ಮಂದಿಯೇ ಏಳುವಂತೆ ನಾಯಿಯಂತೆ ಬೊಗಳಹತ್ತಿದಳು. ‘ಯಾವಳವಳು ಸೂಳೆ, ನನ್ ಅನ್ನಕ್ಕ ಕಲ್ ಹಾಕ್ಯಾಳ. ಅವಳೌವನ ಹಡಾ, ಅವ್ಳ ತಟ್ಯಾಗ ಸೆಗಣಿ ಹುಳಾ ಬೀಳಾ, ಅವ್ಳ ಕಾಲಾಗ ಹುಳಾ ಬೀಳಾ, ಸೆಟಿಬ್ಯಾನಿ ರೋಗ ಬರಾ, ಛಿನಾಲಿ, ಹಾದರಗಿತ್ತಿ, ರಂಡಿಯಂಥಾಕಿ, ನಿಂದ್ರಾಗ ……….. ಇಟ್ ತಿರವಾ, ನಿನ್ ಬಾಯಾಗ ನನ್ ಹೇಲಾಕ, ದರಿದ್ರ ಸೂಳೆ ನಾಳೆ ಬಾ ನಿನ್ ನಡಾ ಮುರದಬಿಡ್ತೀನಿ. ಈ ರೋಡೇನ್ ನಿಮ್ಮಪ್ಪಂದಂತ ತಿಳ್ಕಂಡಿಯೇನು ರಂಡೀ ಹತ್ ವರ್ಷಾತು ನಾನಾ ಸೆಗಣಿ ಹಿಡ್ಯಾಕ….’ ಹೀಗೆ ಏನೇನೋ ಬೈಯುತ್ತ ಬರುತ್ತಿರುವವಳಿಗೆ ರಸ್ತೆ ಬದಿಯಲ್ಲಿ ನಾನು ಕೂಡಿ ಹಾಕಿದ ಸೆಗಣಿಯ ಕುಪ್ಪೆಯನ್ನು ಕಂಡಾಕೆಯೇ ‘ರಂಡೀ ಬಾಯಾಗ ನನ್ ಹೇಲಿಡ್ಲಿ, ಇಲ್ಲೇ ಬಿಟ್ ಹೋಗ್ಯಾಳ, ನಾನಾ ಒಯ್ತೀನಿ ಬರ್ಲಿಅವ್ಳು ಅವ್ಳ ಕೂದ್ಲಾ ಕಿತ್ತಿ ಕೈಯಾಗ ಕೊಡ್ತೀನಿ’ ಎಂದು ತಾನು ತಂದಿದ್ದ ಸೆಗಣಿ ಬುಟ್ಟಿಯಲ್ಲಿ ಸೆಗಣಿಯನ್ನು ತುಂಬಿಕೊಂಡು ಹೋಗೇಬಿಟ್ಟಳು.
ಬೆಚ್ಚಿ ಬೀಳುವ ಸರದಿ ನನ್ನದಾಗಿತ್ತು. ಕಿಟಕಿಯಂತೆ ಸುಮ್ಮನಿರದೆ ನಾನು ಕಿಟಕಿಯಂಥಲ್ಲ ಎಂದುಕೊಂಡು ಹೋಗಿ ಅವಳಿಗೆ ಸಹಾಯ ಮಾಡಿ ಬಂದದ್ದಕ್ಕೆ ಈ ಪ್ರಶಸ್ತಿ ಸಿಕ್ಕಿತ್ತು. ಆದರೆ ನನಗೆ ಒಂದು ಸಂಗತಿ ಮಾತ್ರ ತಿಳಿಯಲಿಲ್ಲ. ಅವಳು ಈ ರೋಡೇನು ಅವಳಪ್ಪಂದೇನು ಅಂಥಾ ಬೈಯ್ತಾಳಲ್ಲ ಅದು ಇವಳಪ್ಪಂದು ಯಾವಾಗ ಆಗಿದ್ದು? ದೇವರು ರಾತ್ರಿ ಒಂದಕ್ಕೆ ಎದ್ದು ಸೆಗಣಿ ಬಳಿವಷ್ಟು ಕಷ್ಟ ಕೊಟ್ಟಾಗ್ಯೂ ಇನ್ನೊಬ್ಬಳು ಒಂದೇ ದಿನ ಸೆಗಣಿ ಒಯ್ದರೂ ಅದೆಷ್ಟು ಕಠೋರವಾಗಿ ಬಯ್ದಳಲ್ಲ? ಬೈಯುವಂತೆ ಮಾಡಿದ್ದು ಅವಳ ಬಡತನವಾ? ರಾತ್ರಿ ನಿದ್ದೆಗೆಟ್ಟ ಪರಿಣಾಮವಾ? ಅವಳ ಕೆಟ್ಟ ಗುಣವಾ? ಅದಿರಲಿ ಬೇರೊಬ್ಬಳಿಗೆ ಒಂದು ದಿನವೂ ಸಹಾಯ ಮಾಡುವ ಗುಣ ಅವಳಿಗಿಲ್ಲವಾ? ಸೆಗಣಿಯನ್ನೇ ಬಿಟ್ಟುಕೊಡದ ಇವಳು ಬೇರೇನನ್ನು ದಾನ ಮಾಡಿಯಾಳು?. ಎಲ್ಲವನ್ನೂ ನೋಡಿ, ಎಲ್ಲವನ್ನೂ ಕೇಳಿ ಕಿಟಕಿಯಂತೆ ಸ್ಥಿತಪ್ರಜ್ಞನಂತೆ ಇರುವುದು ನನಗೇಕೆ ಸಾಧ್ಯವಾಗಲಿಲ್ಲ. ಆ ಮುದುಕಿಯ ಬಗ್ಗೆ ದಿನವೂ ಮರುಕಪಡುವ ನನ್ನ ಮನಸ್ಸು ಇವತ್ತು ಅವಳ ಸಾವನ್ನು ನೋಡಲು ಬಯಸಿದ್ದು ಎಷ್ಟು ಸರಿ. ನನಗರ್ಥವಾಗಲಿಲ್ಲ. ಕಿಟಕಿಯು ‘ನನ್ನಂತೆ ಸುಮ್ಮನಿರು ಮಾರಾಯಾ’ ಅಂಥ ಹೇಳಿದ್ದು ಕೇಳಿಸದಂತೆ ಮಲಗಿಕೊಂಡೆ.
ಮಲಗಿದ್ದೆನಾದರೂ ನಿದ್ದೆಬಾರದೆ ಹೊರಳಾಡತೊಡಗಿದೆ. ಗಂಟೆ ಮೂರಾಯಿತು. ಕಿಟಕಿಯನ್ನು ಹೇಗಾದರೂ ಸೋಲಿಸಬೇಕಲ್ಲ, ನಾನು ಕಿಟಕಿ ಅಲ್ಲ, ನಾನು ಮನುಷ್ಯ, ‘ಏ ಕಿಟಕಿ ನಾನು ಮನಸ್ಸು ಮಾಡಿದರೆ ಇನ್ನೊಬ್ಬರ ಬದುಕಿಗೆ ಆಸರೆ ಆಗಬಲ್ಲೆ, ನನಗೆ ನಿನ್ನಂತೆ ಕಣ್ಣು ಮಾತ್ರ ಅಲ್ಲ, ಕಿವಿ, ಬಾಯಿ ಇದೆ’ ಎಂದು ಹೇಳಿ ಮಲಗಿದೆನಾದರೂ ನಿದ್ದೆ ಹತ್ತಲಿಲ್ಲ. ಅಷ್ಟರಲ್ಲಿ ಬಳೆಗಳ ಸದ್ದು ಕೇಳಿ ಮತ್ತೆ ಕಿಟಕಿಯ ಕಡೆಗೆ ಕಣ್ಣು ಹಾಯಿಸಿದೆ. ವೇಶ್ಯೆ ಹೋಗುತ್ತಿರುವುದು ಕಂಡಿತು. ಅವಳ ಹೆಸರೇನೋ ಗೊತ್ತಿರಲಿಲ್ಲ. ಇವತ್ತು ಅವಳನ್ನು ಕರೆದು ಒಂದು ಕಪ್ಪು ಚಹ ಕುಡಿಸೋಣ ಅನ್ನಿಸಿತು. ಅವಳನ್ನು ಹೇಗೆ ಕರೆಯುವುದೆಂದು ತಿಳಿಯದೆ, ‘ಹಲೋ….. ಹಲೋ …. ಮೇಡಂ’ ಎಂದು ಕೂಗಿದೆ. ಅವಳು ನನ್ನೆಡೆಗೆ ನೋಡಿದವಳೇ ತನ್ನ ಎದೆಯ ಮೇಲಿನ ಸೆರಗು ಜಾರಿಸಿ ತನ್ನ ಮೊಲೆಗಳು ನನಗೆ ಸರಿಯಾಗಿ ಕಾಣಲೆಂದು ಬೆಳಕಿರುವ ಭಾಗಕ್ಕೆ ಬಂದು ಏನು ಎಂಬತೆ ಕೈ ಸನ್ನೆ ಮಾಡಿದಳು.
ನಾನು ‘ಬನ್ನಿ ಒಂದ್ ಕಪ್ ಚಹ ಕುಡಿಯೋಣ’ ಎಂದು ಸನ್ನೆ ಮಾಡಿದೆ. ನನ್ನ ಸನ್ನೆ ಅರ್ಥ ಮಾಡಿಕೊಂಡವಳಂತೆ ಹೇಗೆ ಬರಬೇಕೆಂದು ನನ್ನ ಕೈ ಸನ್ನೆಯಿಂದಲೇ ತಿಳಿದುಕೊಂಡು ನನ್ನ ರೂಮಿಗೆ ಬಂದಳು. ಲಗುಬಗೆಯಿಂದ ಅತ್ತಿತ್ತ ನೋಡುತ್ತ ಭರಕ್ಕನೆ ನನ್ನ ರೂಮೊಳಗೆ ತೂರಿಕೊಂಡು ಅವಳು ತಾನೇ ಬಾಗಿಲ ಚಿಲಕ ಹಾಕಿದಳು. ಅವಳು ವೇಶ್ಯೆ ಆಗಿರುವುದರಿಂದ ನಾನು ‘ಅದಕ್ಕೇ’ ಕರೆದಿರಬಹುದೆಂದು ತಿಳಿದುಕೊಂಡು ಹೀಗೆ ಮಾಡುತ್ತಿದ್ದಾಳೆ ಅನ್ನಸಿತು. ಅವಳು ಕುಳಿತುಕೊಳ್ಳಲು ಕಿಟಕಿ ತೋರಿಸಿದೆ. ಅವಳು ಕಿಟಕಿಯಲ್ಲಿ ಕುಳಿತಾಕ್ಷಣ ನಾನು ಕಿಟಕಿಗೆ ಕಣ್ಣು ಹೊಡೆದೆ. ಅವಳು ತನಗೇ ನಾನು ಕಣ್ಣು ಹೊಡೆದಿದ್ದೆಂದು ತಿಳಿದು ತಾನೂ ನನ್ನೆಡೆಗೆ ಕಣ್ಣು ಹೊಡೆದಳು.
ನಾನು ಮೂಲೆಯಲ್ಲಿದ್ದ ಸ್ಟವ್ ಹಚ್ಚಿ, ಹಾಲಿನ ಪುಡಿ ಹಾಕಿ ಗಟ್ಟಿಯಾಗಿ ಚಹ ಸೋಸಿ ಅವಳಿಗೊಂದು ಕಪ್ ಚಹ ಕೊಟ್ಟೆ. ಅವಳು ಚಹ ಕುಡಿಯುತ್ತ, ‘ನೀವ~ ನೋಡ್ರಿ ಮೊದಲ ಸಲಾ ನನಗೆ ಕೆಲಸಕ್ ಮೊದ್ಲ ಚಾ ಕುಡಿಸಿದ್ದು, ಮೂಳಗುಳು ನಾ ಬಂದ್ ತಕ್ಷಣಾ ಎದೀಗಿ ಕೈ ಹಾಕಿ ಕುಬಸದ ಗುಂಡೀ ಬಿಚ್ಚಾಕೂ ಕೊಡದಾ ಬಟನ್ ಹರದು ಕೈಲಿ ಹಿಚಿಕಿ ಬಾಯ್ಲಿ ಕಡದು ನನ್ನ ಮಲಗೀಸಿ ಹಿಂಡಿ ಹಿಪ್ಪಿ ಮಾಡಿಬಿಡ್ತಿದ್ವು, ದರಿದ್ರಗೋಳು ಐದ್ ನಿಮಿಷ ಆದ ಮ್ಯಾಲ ನರಾಸತ್ತವ್ರಂಗ ಬಿದ್ಕಂಡು ಎದ್ ರೊಕ್ಕಾ ಕೊಡಾಕೂ ತ್ರಾಣ ಇರಲಾರದ ಕೈ ಮಾಡಿ ತೂಗಿ ಹಾಕಿದ ಅಂಗೀಯಿಂದ ರೊಕ್ಕಾ ತಕ್ಕೋ ಅಂತಿದ್ವು. ನಾನೋ ಭಡಕ್ಕನ ಎದ್ದು ರೊಕ್ಕಾ ತಕ್ಕೊಂಡು ಮುಂದಿನ ಗಿರಾಕಿ ಹುಡ್ಕೋತಾ ಹೋಗಿಬಿಡ್ತಿದ್ಯ. ನಿಮ್ಗ ಗೊತ್ತಲ್ಲ ಒಂದೈದ ನಿಮ್ಷ ಅಲ್ಲಿದ್ರ, ಮತ್ತ ಎದ್ದವ್ರಾ ನನ್ ಕೈ ಹಿಡದ ಜಗ್ಗಿದ್ರ ಮುಗೀತು ನಾ ಸಾಯ್ತೀನಿ ಅಂದ್ರೂನು ಬಿಡ್ದ ಹಿಂಡಿ ಹಿಪ್ಪೀ ಮಾಡಿಬಿಡ್ತಾರ. ನೀವ್ ಅಂಗ್ ಇಲ್ ಬಿಡ್ರೀ ನಾ ಬಂದ ಹತ್ ನಿಮ್ಷ ಆದ್ರೂನೂ ಮಗೂ ಕುಂತಾಂಗ ಕುಂತೀರಿ. ಎದ್ದೇಳ್ರಿ ಎದ್ದೇಳ್ರಿ ಬೆಳಗಾಗಕತೈತಿ ಮಂದಿ ಎದ್ ಬಿಡ್ತಾರ ಜಲ್ದಿ ಮಾಡಿಬಿಡ್ರಿ, ನಾ ಹೋಗ್ತೀನಿ. ನೀವು ಒಳ್ಳೆಯವ್ರಾಗಿದ್ದಕ್ಕ ಐವತ್ರುಪಾಯಿ ಕೊಡ್ರಿ ಸಾಕು’ ಎಂದು ಹೇಳಿ ಅಲ್ಲೇ ಮೂಲ್ಯಾಗ ಇದ್ದ ಚಾಪಿ ಬಿಚ್ಚಿ ಹಾಸಿ,  ಮಲಗಿ ನನ್ನೆಡೆಗೆ ನೋಡತೊಡಗಿದಳು.
ನಾನಾಗ ‘ನೋಡ್ರೀ, ನಾ ನಿಮ್ಗ ಅದಕ್ಕ ಕರ್ದಿಲ್ಲ, ನೀವು ದಿನಾ ನಿದ್ದಿಗಣ್ಣಾಗ ಅಲ್ಲಿ ಕಂಬಕ್ಕ ನಿಂತ್ಗೊಂಡು ತೂಕಡಸ್ತಿದ್ರಿ, ಅದಕ್ಕ ಒಂದ್ ಕಪ್ ಚಾ ಕುಡಿಸಿ ಕಳಸಬೇಕನ್ನಸ್ತು, ಅದಕಾ ಕರದ್ಯರಿ. ನೀವು ಈಗ ನಿಮ್ ಕೆಲಸಕ್ಕ ಹೋಗಬೌದ್ರಿ, ನನಗ ಅದರ ಅಗತ್ಯಾ ಇಲ್ರೀ’ ಅಂದು ಕಿಟಕಿಯ ಬಳಿ ಕುಳಿತುಕೊಂಡೆ. ನನ್ನ ಮಾತುಗಳನ್ನು ಕೇಳಿ ನಂಬದವಳಂತೆ ಎದ್ದ ಆಕೆ ‘ಅಲ್ರೀ ನಮಗ ತೂಕಡಿಕಿ ಬಂದ್ರ, ನಾವು ತೂಕಡಸ್ತೀವಿ ಇಲ್ಲಾಂದ್ರ ರಸ್ತೇನಾಗ ನಿದ್ದೀನರಾ ಮಾಡ್ತೀವಿ ನಿಮಗ್ಯಾಕ ಬೇಕ್ರಿ ನಮ್ ಉಸಾಬರಿ? ನಾನ್ ಬಂದು ಅರ್ಧಾ ಗಂಟಿ ಆತು, ಈಗ ಬೆಳಗಾಗಾ ಕತೈತಿ, ಚೊಲಾ ಗಿರಾಕಿ ಸಿಕ್ಕಿದ್ರ ಒಂದ್ಯಾಡ್ನೂರು ರೂಪಾಯಿ ಆದ್ರೂ ನಾ ಗಳಸ್ತಿದ್ಯ, ಚಾ ಏನ್ರಿ ಯಾಡ್ರುಪಾಯಿ ಕೊಟ್ರ ಎಲ್ಲಂದ್ರಲ್ಲಿ ಸಿಗ್ತಾದ. ಜೋಕುಮಾರ ಸ್ವಾಮಿ, ನನಗ ಚಾ ಕುಡ್ಯಾಕ ಕರ್ದಾನಂತ, ತೆಗಿ ತೆಗಿ ಬಾಗ್ಲಾ ತೆಗಿ, ನಿನಗ ‘ಅದು’ ಐತೋ ಇಲ್ಲೋ ನನಗರ ಡೌಟ್ ಬಂದೈತಿ, ಹೋಗ್ಲಿ ಇಪ್ಪತ್ರುಪಾಯರ ಕೊಟ್ ಮಾಡಿಬಿಡು’ ಎಂದಾಗ ನನಗೆ ಸಿಟ್ಟು ಬಂದು ಅವಳ ತೋಳಿಡಿದು ಹೊರಗೆ ಹಾಕಿ ಬಾಗಿಲು ಹಾಕಿಕೊಂಡೆ. ಕಿಟಕಿ ನನ್ನನ್ನು ನೋಡಿ ಗಹಗಹಿಸಿ ನಕ್ಕಂತಾಯಿತು.
ಕಿಟಕಿಯೊಂದಿಗೆ ಜಿದ್ದಿಗೆ ಬಿದ್ದು ಮಾಡಿಕೊಂಡ ಆವಾಂತರಗಳು ಸಾಕೆನ್ನಿಸಿ ನಾನೂ ಕಿಟಕಿಯಂತಾದೆ. ಮನೆಯಲ್ಲಿ ಶಾಲೆಯಲ್ಲಿ, ಆಫೀಸಿನಲ್ಲಿ, ಸಂಘದಲ್ಲಿ, ಗ್ರೌಂಡಿನಲ್ಲಿ, ಮದುವೆಯಲ್ಲಿ, ಲಾಡ್ಜಿನಲ್ಲಿ, ಸಂತೆಯಲ್ಲಿ, ಜಾತ್ರೆಯಲ್ಲಿ ನಾನು ನೋಡಿದ್ದು ಒಂದೇ ಎರಡೆ, ಲಂಚ, ಹಾದರ, ಸುಳ್ಳು, ಮೋಸ, ವಂಚನೆ ಎಲ್ಲವನ್ನೂ ನೋಡಿ ಮನಸ್ಸಿನಲ್ಲಿ ಏನು ಅನ್ನಸಿದರೂ ಕಿಟಕಿಯಂತಿದ್ದೆ, ಕೆಲವೇ ದಿನಗಳಲ್ಲಿ ನನಗೆ ಸಜ್ಜನ ಎಂಬ ಬಿರುದು ಬಂದು ಬಿಟ್ಟಿತು. ಸ್ವಲ್ಪೇ ದಿನಗಳಲ್ಲಿ ‘ಉತ್ತಮ ನಾಗರೀಕ’, ‘ರಾಜ್ಯೋತ್ಸವ ಪ್ರಶಸ್ತಿ’ ಬಂದಿತು. ನಾನು ಮತ್ತು ಕಿಟಕಿ ಇಬ್ಬರ ಗೆಳೆತನ ಹಾಗೇ ಮುಂದುವರೆದಿದೆ. ಈಗ ಸ್ವಲ್ಪ ಬದಲಾವಣೆ. ಈ ಮೊದಲು ಕಿಟಕಿಯೊಂದಿಗೆ ಮಾತಾಡುತ್ತಿದ್ದೆ, ಹಾಡುತ್ತಿದ್ದೆ, ಜಗಳ ಆಡುತ್ತಿದ್ದೆ, ಈಗ ಅವೆಲ್ಲ ಸಾದ್ಯವಾಗುತ್ತಿಲ್ಲ, ಯಾಕೆಂದರೆ ನಾನೀಗ ಕಿಟಕಿಯಾಗಿಬಿಟ್ಟಿದ್ದೇನೆ.
 

‍ಲೇಖಕರು avadhi

6 June, 2013

3 Comments

  1. Parameshwara.K

    ಗೆಳೆಯ ರವಿ ಹಂಪಿಯವರೆ ತುಂಬಾ ಆಳವಾದ ಚಿಂತನೆಯುಳ್ಳ ಬರಹ ಓದಿದ ಸಾರ್ಥಕತೆ ಉಂಟಾಯಿತು. ಧನ್ಯವಾದಗಳು.

  2. Santhoshkumar LM

    ರವಿಯವರೇ, ನಿಮ್ಮ ಈ ಲೇಖನ ಬಹಳ ಇಷ್ಟವಾಯಿತು. ಸುತ್ತಲಿನ ಜಗತ್ತಿನೆಡೆಗೆ ನಾವು ಅದೆಂತಹ ನಿರ್ಲಿಪ್ತ ಭಾವದಿಂದಿರಬೇಕೆಂಬ ಕಿಟಕಿಯ ಸಂದೇಶವನ್ನು ನಮ್ಮೆಲರಿಗೂ ಅತ್ಯಂತ ಮಾರ್ಮಿಕವಾಗಿ ಹೇಳಿದಿರಿ. ಧನ್ಯವಾದಗಳು.

  3. subbanna mattihalli

    badukina nagnateyalli soundarya kaanabekagide. drushti hego haage anubhava. baduku kitakiya haageye iddare nirliptavaagi anubhavisabahudu allave???
    kathe chennaagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading