ಸಣ್ಣ ಕಥೆ ’ಕಪ್ಪು ಬಣ್ಣದ ಪರ್ಸು’

ಕಾ. ಹು. ಚಾನ್‌ಪಾಷ

ಆ ಬೀದಿಯಲ್ಲಿ ಅನಾಥವಾಗಿ ಬಿದ್ದಿತ್ತು ಒಂದು ಕಪ್ಪು ಬಣ್ಣದ ಪರ್ಸು. ದಷ್ಟ ಪುಷ್ಟವಾಗಿ ಮೈ ಕೈ ಬೆಳೆಸಿಕೊಂಡಿದ್ದರಿಂದ ಅದರ ಹೊಟ್ಟೆ ತುಂಬಿದೆ ಎಂಬುದು ಎಂಥವರಿಗೂ ಆರಿವು ಮೂಡಿಸುವಂತಿತ್ತು. ಯಾರೋ ಒಬ್ಬಿಬ್ಬರು ಓಡಾಡುವ ಈ ಬೀದಿಯ ಎರಡೂ ಬದಿಗಳಲ್ಲಿ ಇಕ್ಕಟ್ಟಿಕ್ಕಟ್ಟಾಗಿ ಬೆಳೆದು ನಿಂತಿರುವ ಸಾಲುಮರಗಳು ತನ್ನ ವಿಶಾಲ ಬಾಹುಗಳನ್ನು ಸುತ್ತಲೂ ಚಾಚಿರುವುದರಿಂದ ಎಂಥಹ ಉರಿಬಿಸಿಲಿನಲ್ಲೂ ತಂಪನ್ನು ಸೂಸುತ್ತಿದ್ದವು. ಆದ್ದರಿಂದಲೇ ಏನೋ ಹಕ್ಕಿಗಳ ಹಿಂಡು ಹಿಂಡೇ ಈ ಮರಗಳಲ್ಲಿ ಠಿಕಾಣಿ ಹೂಡಿದ್ದವು. ಇಲಿಗಳ ಬಿಲದಿಂದ ಹೊರತೆಗೆದ ಬಟ್ಟೆಯಂತೆ ಕಾಣುತ್ತಿದ್ದ ಟಾರು ರೋಡಿನ ಮೈ ತುಂಬ ಹಕ್ಕಿಗಳು ಹಿಕ್ಕೆಗಳಿಂದ ಚಿತ್ತಾರ ಬಿಡಿಸಿದ್ದವು. ‘ಹಕ್ಕಿಗಳು ಪ್ರಸಾದ ನೀಡುತ್ತವೆ’ ಎಂಬ ಹಿಂಜರಿಕೆಯಿಂದ ಬಹಳಷ್ಟು ಮಂದಿ ಈ ಬೀದಿಯಲ್ಲಿ ಅಷ್ಟಾಗಿ ಓಡಾಡುತ್ತಿರಲಿಲ್ಲ. ಹೀಗಾಗಿ ಈ ಬೀದಿ ಎಲ್ಲರ ಬಾಯಿಂದ ‘ಹಿಕ್ಕೆಗಳ ಬೀದಿ’ ಎನಿಸಿಕೊಂಡಿತ್ತು. ತಾಯಿ ತನ್ನ ಮಗುವಿಗೆ ದೃಷ್ಟಿಯಾಗಬಾರದೆಂದು ಮುದ್ದು ಮುಖಕ್ಕೆ ಇಡುವ ಕಾಡಿಗೆಯ ಚುಕ್ಕೆಯಂತೆ ಬೆಳ್ಳಬೆಳ್ಳಗಾಗಿ ಕಾಣುತ್ತಿದ್ದ ಹಿಕ್ಕೆಗಳ ಬೀದಿಯಲ್ಲಿ ಆ ಕಪ್ಪು ಬಣ್ಣದ ಪರ್ಸು ಶೋಭಿಸುತ್ತಿತ್ತು.
ಉಗ್ರರೂಪದಿಂದ ಶಾಂತವಾಗುತ್ತಿದ್ದ ಸೂರ್ಯ ಪಡುವಣದ ಕಡೆಗೆ ತನ್ನ ಪ್ರಯಾಣ ಬೆಳೆಸಿದ್ದ. ಷರೀಫಜ್ಜ ಅಸ್ಸರ್ ನಮಾಜ್ ಮುಗಿಸಿಕೊಂಡು ತನ್ನ ಸಂಗಾತಿಯಂತಿದ್ದ ಛತ್ರಿಯನ್ನು ಬಿಚ್ಚಿ ಹೆಗಲೇರಿಸಿ ಅತ್ತ ಇತ್ತ ದಿಕ್ಕು ನೋಡುತ್ತ ಮಂದಗತಿಯ ಹೆಜ್ಜೆಗಳನ್ನಿಡುತ್ತ ಈ ಹಿಕ್ಕೆಗಳ ಬೀದಿಯ ಕಡೆಗೆ ಬಂದರು.
ಸೂರ್ಯ ತನ್ನ ಪಥವನ್ನು ಬದಲಿಸಬಹುದೆನೋ. ಆದರೆ ಷರೀಫಜ್ಜ ಮಾತ್ರ ಈ ಬೀದಿಯನ್ನುಬಿಟ್ಟು ಬೇರೆ ಬೀದಿಯಲ್ಲಿ ಹೋಗುತ್ತಿರಲಿಲ್ಲ. ಪ್ರತಿ ದಿನ ಅಸ್ಸರ್ ನಮಾಜ್ ಮುಗಿಸಿಕೊಂಡು ಮಸೀದಿಯಿಂದ ನೇರವಾಗಿ ಈ ಹಿಕ್ಕೆಗಳ ಬೀದಿಗೆ ಬಂದು ಸ್ವಲ್ಪ ಹೊತ್ತು ಕಾಲ ಕಳೆದ ನಂತರವೇ ಮನೆ ಸೇರುವ ವಾಡಿಕೆಯನ್ನು ಬೆಳೆಸಿಕೊಂಡಿದ್ದರು. ಬಳಲಿ ಬೆಂದಿದ್ದ ಒಂಟಿಜೀವ; ಪ್ರಶಾಂತವಾದ ಈ ವಾತಾವರಣದಲ್ಲಿ ತಂಗಾಳಿಗೆ ಮೈಯೊಡ್ಡಿ ಹಕ್ಕಿಗಳ ಕಲರವ ಕೇಳುತ್ತ ಆನಂದದಿಂದ ಪುಲಕಿತಗೊಂಡು ತನ್ನೆಲ್ಲಾ ನೋವುಗಳನ್ನು ಮರೆಯುತ್ತಿದ್ದರು. ಇವರು ದಿನವೂ ಈ ಬೀದಿಯಲ್ಲಿ ಬರಲು ಮೂಲ ಕಾರಣ ಫಾತೀಮ; ಸ್ವರ್ಗಸ್ತಳಾದ ತನ್ನ ಪ್ರೇಯಸಿ ಫಾತೀಮಳನ್ನು ಮೊದಲ ಬಾರಿ ಕಂಡಿದ್ದು, ಪ್ರೇಮ ಪ್ರಸ್ತಾಪ ಮಾಡಿದ್ದು ಇದೇ ಬೀದಿಯಲ್ಲಿ. ಆಗಿನ್ನು ಇದು ಹಿಕ್ಕೆಗಳ ಬೀದಿ ಎನಿಸಿಕೊಂಡಿರಲಿಲ್ಲ. ಮದುವೆಯ ನಂತರ ಕೈ ಕೈ ಹಿಡಿದು ದಿನವೂ ಈ ಬೀದಿಯಲ್ಲಿ ಅಡ್ಡಾಡುವುದನ್ನು ಕಂಡು ನಾಚುತ್ತಿದ್ದದ್ದನ್ನು ಈ ಮರಗಳು ಇನ್ನೂ ಮರೆತಿಲ್ಲ. ತನ್ನ ಹಚ್ಚಹಸರಿನ ನೆನಪುಗಳನ್ನು ಜೀವಂತಗೊಳಿಸಲು ಷರೀಫಜ್ಜ ದಿನವೂ ಇದೇ ಬೀದಿಯಲ್ಲಿ ಬರುತ್ತಿದ್ದರು.

ಎಂದಿನಂತೆ ತಮ್ಮದೇ ಆದ ಠೀವಿಯಲ್ಲಿ ಹಿಕ್ಕೆಗಳ ಬೀದಿಗಿಳಿದು ಬಂದರು. ಸವೆದ ಚಪ್ಪಲಿಗಳು, ಮೊಣಕಾಲಿಗಿಂತ ಸ್ವಲ್ಪ ಕೆಳಗಿನವರೆಗೆ ಕಟ್ಟಿರುವ ಲುಂಗಿ, ಕೊಳೆಯಿಂದ ಚಿತ್ತಾರ ಮೂಡಿರುವ ಉದ್ದನೆಯ ಜುಬ್ಬ, ಹೆಗಲ ಮೇಲೆ ಸದಾ ರಾರಾಜಿಸುವ ಹರಕು ಶಾಲು, ಕಪ್ಪು ಮುಖಕ್ಕೆ ಉದ್ದನೆಯ ಬೆಳ್ಳಿಗಡ್ಡ, ನೆತ್ತಿಯ ಮೇಲೊಂದು ಅಂಗೈಯಗಲದ ಟೋಪಿ, ಉತ್ಸವ ಮೂತರ್ಿಯ ಪ್ರಭಾವಳಿಯಂತೆ ಕಾಣುವ, ವಿಶಾಲ ಬಾಹುಗಳನ್ನು ಚಾಚಿರುವ, ಹಿಕ್ಕೆಗಳಿಂದ ಚಿತ್ತಾರ ಮೂಡಿರುವ ಛತ್ರಿಯನ್ನು ಗದೆಯಂತೆ ಹಿಡಿದು ಬರುವ ಇವರನ್ನು ಒಮ್ಮೆ ನೋಡಿದರೆ ಕಣ್ಣ ಕ್ಯಾಮರದಲ್ಲಿ ಸ್ತಬ್ಧ ಚಿತ್ರವಾಗಿ ಮನದಲ್ಲಿ ಅಚ್ಚಾಗಿ ಬೇರೂರಿ ಬಿಡುತ್ತಿದ್ದರು. ಇವರ ಮಂದಗತಿಯ ನಡಿಗೆಯೇ ಒಂದು ರೀತಿಯ ಶೋಭೆಯನ್ನು ತರುತ್ತಿತ್ತು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುತ್ತಿದ್ದ ಇವರ ಹದ್ದಿನ ಕಣ್ಣಿಗೆ ಆ ಕಪ್ಪು ಬಣ್ಣದ ಪರ್ಸು ಕಾಣಿಸಿತು.
ಎಂದೂ ಕಂಡಿರದ ಅದ್ಭುತವನ್ನು ಕಾಣುವಂತೆ ಆ ಪರ್ಸನ್ನೇ ದಿಟ್ಟಿಸಿ ನೋಡಿದರು. ಐದಾರು ಅಂಗುಲದ ಆ ಪಾಕೆಟ್ ಪರ್ಸು ತನ್ನನ್ನೇ ಸ್ವಾಗತಿಸುತ್ತಿರುವಂತೆನಿಸಿತು. ಇನ್ನೂ ಸಮೀಪ ಬಂದು ‘ಪಿಳ ಪಿಳ’ ಎಂದು ಕಣ್ಣು ಮಿಟಿಕಿಸಿ ನೋಡುತ್ತ ಇದು ಕನಸೋ! ನನಸೋ! ಅರ್ಥವಾಗದೆ ತಮ್ಮ ಕೈಯನ್ನು ಗಿಲ್ಲಿ ನೋಡಿಕೊಂಡರು. ಕನಸಲ್ಲವೆಂಬುದು ಅರಿವಾಗುತ್ತಿದ್ದಂತೆ ಮನದೊಳಗೆ ಏನೋ ಒಂದು ರೀತಿಯ ಆನಂದ ಸಂಭ್ರಮಗಳು ಉಕ್ಕಿ ಹರಿದಾಡತೊಡಗಿದವು. ಪರ್ಸಿನ ತುಂಬ ನೋಟುಗಳು ಇದೆ ಎಂಬುದು ಅದರ ಒಂದು ನೋಟದಲ್ಲಿಯೇ ಅರಿವಾಗುತ್ತಿತ್ತು. ಅಲ್ಲದೆ ಹೊರಗೆ ಇಣುಕುತ್ತಿದ್ದ ಒಂದೆರಡು ನೋಟುಗಳು ಇದಕ್ಕೆ ಸಾಕ್ಷಿಯಾಗಿದ್ದವು. ಬೀದಿಯ ಉದ್ದಗಲಕ್ಕೂ ನಾಲ್ಕೈದು ಬಾರಿ ದೃಷ್ಟಿ ಹರಿಸಿದರು. ಇವರ ಹೊರೆತು ಬೇರೆ ಯಾವ ನರಪ್ರಾಣಿಯೂ ಅಲ್ಲಿ ಕಾಣಿಸಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ನಿಂತು ಮತ್ತೆ ಅತ್ತ ಇತ್ತ ನೋಡಿದರು. ಯಾರೂ ಕಾಣಿಸದಾದಾಗ ಇನ್ನು ತಾನೇ ಇದರ ಒಡೆಯನೆಂದುಕೊಳ್ಳುತ್ತ ಪರ್ಸಿನತ್ತ ಕೈ ಚಾಚಿದರು. ಮುಂದೆ ಚಾಚಿದ ಕೈಯನ್ನು ಯಾರೋ ಒಮ್ಮೆಲೆ ಹಿಂದಕ್ಕೆ ಎಳೆದಂತಾಯಿತು. ತಾನು ತಪ್ಪು ಮಾಡುತ್ತಿದ್ದೇನೇನೊ ಎಂದೆನಿಸಿತು. ತನಗರಿವಿಲ್ಲದೆಯೆ ಮೈ-ಮನದೊಳಗೆ ಭಯ, ನಡುಕ ಆವರಿಸಿಕೊಂಡಿತು. ಎದೆ ಬಡಿತ ತೀವ್ರವಾಗಿ ಬೆವರಿಂದ ಜಳಕಮಾಡುತ್ತ ಕಕ್ಕಾವಿಕ್ಕಿಯಗಿ ನಿಂತುಬಿಟ್ಟರು.
ಪಾಪ! ಯಾರು ಕಳೆದುಕೊಂಡರೋ, ಏನೋ?…… ಇದು ಎಷ್ಟು ದಿನಗಳ ಶ್ರಮದ ಫಲವೋ…… ಯಾವ ಪುಣ್ಯಕಾರ್ಯಕ್ಕಾಗಿ ವಿನಿಯೋಗಿಸಲ್ಪಡುತ್ತಿತ್ತೋ?…. ಕಳೆದುಕೊಂಡಾತ ಎಷ್ಟು ದುಃಖದಲ್ಲಿದ್ದಾನೋ?…. ಆ ಅಜ್ಞಾತ ವ್ಯಕ್ತಿಯ ಅನ್ನ ಕಸಿದುಕೊಂಡು ತಾನು ಸುಖಿಸುವುದೇ?….. ಆ ನಿಭರ್ಾಗ್ಯನ ಗೋರಿಯ ಮೇಲೆ ನನ್ನ ಕನಸಿನ ಮಹಲು ಕಟ್ಟಿ ಬದುಕಿದರೆ ‘ಅಲ್ಲಾ’ ಮೆಚ್ಚುತ್ತಾನೆಯೇ?……. ಎಂಬ ಹಲವಾರು ಪ್ರಶ್ನೆಗಳು ಕಾಡಹತ್ತಿದವು. ‘ಪರರ ಸೊತ್ತು ಪಾಷಾಣ; ಮುಟ್ಟುವುದು ಬೇಡ’ ಎಂದುಕೊಳ್ಳುತ್ತಿದ್ದ ಬೆನ್ನಹಿಂದೆಯೇ ಮೊಮ್ಮಗ ಸದ್ದಿಖ್ನ ಆರ್ತಕೂಗು ಕೇಳಿಸಿದಂತಾಗಿ ಸ್ತಬ್ಧಚಿತ್ರದಂತೆ ನಿಂತುಬಿಟ್ಟರು.
ಸಿದ್ಧಿಖ್ನನ್ನು ಕಂಡರೆ ಇವರಿಗೆ ಪಂಚಪ್ರಾಣ. ಆಟ-ಪಾಠಗಳಲ್ಲಿ ಬಹಳ ಚೂಟಿಯಾಗಿದ್ದ ಹತ್ತು ವರ್ಷದ ಪೋರನ ಉಜ್ವಲ ಭವಿಷ್ಯತ್ತಿನ ಕನಸು ಕಂಡು ಮಗನನ್ನು ಕಾಡಿ ಬೇಡಿ ಕಾಮರ್ೆಂಟ್ ಸ್ಕೂಲಿಗೆ ಸೇರಿಸಿದ್ದರು. ಸದಾ ಹೆಂಡತಿಯ ಸೆರಗು ಹಿಡಿದುಕೊಂಡು ಓಡಾಡುವ ಮಗನಿಂದ ‘ಛೀ’….. ‘ಥೂ’….. ಎನಿಸಿಕೊಂಡು ಎರಡು ಹೊತ್ತಿನ ಕೂಳಿಗಾಗಿ ಬೀದಿನಾಯಿಯಂತೆ ಕಾದು ಕುಳಿತುಕೊಳ್ಳುತ್ತಿದ್ದ ಇವರ ಹೆಗಲಿಗೆ ಮೊಮ್ಮಗನ ಭಾರವು ಬಿತ್ತು.
ತಾತ, ಅಪ್ಪ ಅಮ್ಮನ ಮಾತು ಕೇಳಿ ನನ್ನನ್ನ ಕೆಲ್ಸಕ್ಕೆ ಕಳಿಸ್ಬೇಡ. ನಾನು ಓದ್ಬೇಕು. ಏನಾದರೂ ಮಾಡಿ ನನ್ನ ಓದ್ಸು ತಾತ…. ನಾನು ಚೆನ್ನಾಗಿ ಓದಿ ದೊಡ್ಡ ಕೆಲ್ಸಕ್ಕೆ ಸೇರ್ಕೊಂಡು ನಿನ್ನ ಚೆನ್ನಾಗಿ ಸಾಕ್ತೀನಿ……. ಎನ್ನುತ್ತಿದ್ದ ಮೊಮ್ಮಗನ ಮುದ್ದು ಮಾತುಗಳಿಗೆ ತಲೆದೂಗಿ ನಕ್ಕು ಬಿಡುತ್ತಿದ್ದರು.
ಶಾಲೆಗಳ ಮುಂದೆ ಬಟಾಣಿ ಮಾರಿ ತರುತ್ತಿದ್ದ ಪುಡಿಗಾಸಿನಿಂದ ಸ್ಕೂಲ್ ಫೀಜು, ಟ್ಯೂಷನ್ ಫೀಜು, ಯೂನಿಫಾರಂ, ಷೂಗಳು ಮೊದಲಾದವುಗಳನ್ನ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಷೂಗಳಿಗಾಗಿ ಎರಡು ತಿಂಗಳುಗಳಿಂದ ದಿನವೂ ಕೇಳುತ್ತ ಕಣ್ಣೀರಿಡುತ್ತಿದ್ದ ಅವನ ಅಳಲಿಗಿಂದು ಮಂಗಳ ಹಾಡಬಹುದೆನಿಸಿ ಪರ್ಸಿನ ಕಡೆಗೆ ಆನಂದದಿಂದ ನೋಡಿದರು. ಗಬಕ್ಕನೆ ಹಾರಿ ಬಾಚಿಕೊಂಡು ಹೋಗಿ ಮೊಮ್ಮಗನಿಗೆ ಬೇಕಾದ ಷೂ, ಬಟ್ಟೆ ಬರೆ ಏನೇನು ಬೇಕೋ ಎಲ್ಲವನ್ನೂ ಕೊಡಿಸಿ ಮುದ್ದು ಮುಖದಲ್ಲಿ ಮುಗ್ಧನಗೆಯನ್ನು ಕಾಣಬಯಸಿ ಮತ್ತೆ ಕೈ ಮುಂದೆ ಚಾಚಿದರು.
ಸಾಲಾಗಿ ನಿಂತಿದ್ದ ಮರಗಳು ತನ್ನನ್ನೇ ದಿಟ್ಟಿಸಿ ನೋಡಿದಂತೆ ಭಾಸವಾಯಿತು. ಮರದ ರೆಂಬೆ ಎಲೆಗಳು ತಂಗಾಳಿಗೆ ತೂಗಾಡುವುದನ್ನು ಮರೆತು ತನ್ನ ಕಡೆಗೆ ತಿರುಗಿ ಕಣ್ಣರಳಿಸಿ ನೋಡುತ್ತ ಸಣ್ಣಗೆ ನಕ್ಕಂತಾಯಿತು. ಹಕ್ಕಿಗಳು ತಮ್ಮ ಬಳಗವನ್ನು ಕೂಗಿ ಕರೆದು ಏನೋ ಹೇಳುತ್ತಿದ್ದಂತೆ ಅನಿಸಿತು. ಚಾಚಿದ ಕೈಯನ್ನು ಮುಂದಕ್ಕೆ ಚಾಚಲಾಗಲಿಲ್ಲ. ಏನೋ ಕೊಂದುಕೊಳ್ಳುವ ಅನುಭವ ಕಾಡತೊಡಗಿತು. ಹೆಜ್ಜೆಗಳು ಹಿಂದಕ್ಕೆ ಮುಂದಕ್ಕೆ ಚಲಿಸತೊಡಗಿದವು. ಬಹಳ ಹೊತ್ತಿನವರೆಗೂ ಕತ್ತಲೆ-ಬೆಳಕಿನ ಹೊಯ್ದಾಟ ಗುದ್ದಾಟಗಳು ನಡೆದವು. ಫಾತೀಮ ಮುಸ್ಸಂಜೆಯ ಆ ತಂಗಾಳಿಯಲ್ಲಿ ಅಳಕುತ್ತ ಒಂಟಿಯಾಗಿ ನಡೆದು ಹೋದಂತಾಯಿತು. ಅವಳಾಡಿದ ಮಾತುಗಳು ನೆನಪಾಗಿ ಒಮ್ಮೆ ಬೆಚ್ಚಿಬಿದ್ದರು. ನನ್ ಫಾತೀಮಾ ಕಲಿಸಿಕೊಟ್ಟ ಆದರ್ಶವನ್ನ ನಾನು ಎಂದಿಗೂ ಬಿಡೋಲ್ಲಾ…….. ಎಂದುಕೊಂಡು ಧೃಡಮನಸ್ಕರಾದರು. ತಮ್ಮ ಮನೆಯ ದಾರಿಯತ್ತ ಮುಖ ತಿರುಗಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದರು. ಪರ್ಸು ಬಿದ್ದಲ್ಲಿಯೇ ಇತ್ತು.
ಹತ್ತಾರು ಹೆಜ್ಜೆಗಳು ಹಾಕಿ ಅಷ್ಟು ದೂರ ನಡೆದ ಬಳಿಕ ಮನಸ್ಸಿಗೆ ಏನೋ ಹೊಳೆದಂತಾಗಿ ಒಮ್ಮೆಲೆ ನಿಂತುಬಿಟ್ಟರು. ಹಿಂದಕ್ಕೆ ತಿರುಗಿ ನೋಡಿದರು. ಪರ್ಸು ತನ್ನಷ್ಟಕ್ಕೆ ತಾನು ಅಲ್ಲಿಯೇ ಬಿದ್ದಿರುವುದನ್ನು ಕಂಡು ನಾನಲ್ಲದಿದ್ದರೆ ಬೇರೆಯವರು ಯಾರಾದರೂ ಇದಕ್ಕೆ ಒಡೆಯರಾಗಬಹುದು! ನನ್ನಿಂದಲ್ಲದಿದ್ದರೂ ಬೇರೆಯವರಿಂದ ಆ ವ್ಯಕ್ತಿಗೆ ಅನ್ಯಾಯವಾಗಬಹುದೆಂದು ಆಲೋಚಿಸಿದರು. ಹಣವನ್ನು ಕಳೆದುಕೊಂಡ ಆ ವ್ಯಕ್ತಿ ಎಷ್ಟು ದುಃಖದಲ್ಲಿದ್ದಾನೋ? ಯಾವ ಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾನೋ?………. ಇದರ ಅವಶ್ಯಕತೆ ಎಷ್ಟಿತ್ತೋ? ಏನೋ?……….. ಬೇರೆಯವರ ಪಾಲಾದರೆ ಆ ವ್ಯಕ್ತಿಗೆ ಅನ್ಯಾಯವಾಗುತ್ತದೆ! ಎಂದು ಮರುಗಿದರು.
ದಾರಿಯುದ್ದಕ್ಕೂ ಮತ್ತೆ ದೃಷ್ಟಿ ಹರಿಸಿದರು. ಪರ್ಸಿನ ಬಳಿಗೆ ಹಿಂತಿರುಗಿ ಬಂದು ಅತ್ತ ಇತ್ತ ನೋಡಿದರು. ಪರ್ಸು ಕಳೆದುಕೊಂಡಾತ ಹುಡುಕಿಕೊಂಡು ಬರಬಹುದೆಂದು ಊಹಿಸಿ ದಾರಿಯಲ್ಲೇ ದೃಷ್ಟಿನೆಟ್ಟು ಕಾದರು. ಮುಂಜಾವಿನಿಂದ ಪ್ರಯಾಣ ಬೆಳೆಸಿ ಕಾದು ಕಾದು ಕೆಂಪೇರಿದ್ದ ಸೂರ್ಯ ಪಡುವಣದಲ್ಲಿ ಮರೆಯಾಗುತ್ತಿದ್ದ . ಬಾನೆಲ್ಲಾ ಕೆಂಪೇರಿದ್ದರಿಂದ ಅದರ ಕಾವು ಬಂದು ಎದೆಗೆ ತಟ್ಟಿತೋಯೆಂಬಂತೆ ಕಾದು ಕಾದು ಇವರ ಮನಸ್ಸು ಕೆಂಪೇರುತಿತ್ತು. ಹಕ್ಕಿಗಳು ಹಗಲ ವ್ಯವಹಾರ ಮುಗಿಸಿಕೊಂಡು ಬಂದು ತಮ್ಮ ಗೂಡು ಸೇರಿ ಚಿಲಿಪಿಲಿಯ ಸಂಗೀತ ಕಛೇರಿ ಶುರುಮಾಡಿದ್ದವು. ನಿಶಾಸುಂದರಿ ತನ್ನ ಕಪ್ಪು ಸೀರೆಯ ಸೆರಗನ್ನು ಹಾಸುತ್ತಿದ್ದಳು. ಬೀದಿ ದೀಪಗಳು ಪ್ರಕಾಶಮಾನವಾಗಿ ಬೆಳಗುತ್ತಿದ್ದರೂ ಮಂದಬೆಳಕು ಸೂಸುತ್ತಿದ್ದಂತೆ ತೋರುತ್ತಿದ್ದವು. ಪ್ರತಿದಿನವೂ ಈ ಹೊತ್ತಿಗೆಲ್ಲಾ ತಮ್ಮ ಮನೆ ಸೇರಿಬಿಡುತ್ತಿದ್ದ ಷರೀಫಜ್ಜ ಇಂದು ಬಿಸಿತುಪ್ಪವನ್ನು ಬಾಯಿಗೆ ಸುರಿದುಕೊಂಡು ಒದ್ದಾಡುವಂತೆ ಸಂಕಟಪಟ್ಟರು. ಬಯಲು ದಾರಿಯಲ್ಲಿ ಏಕಾಂಗಿಯಾಗಿ ಚಡಪಡಿಸುವಂತೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕೆಳಗೆ ಬಿದ್ದಿದ್ದ ಪರ್ಸನ್ನು ಕೈಗೆತ್ತಿಕೊಂಡರು. ಎದೆಯಲ್ಲಿ ಉದ್ಭವಿಸಿದ ಭಾರಕ್ಕಿಂತ ನೂರುಪಟ್ಟು ಅಧಿಕ ಭಾರವನ್ನು ಹೊತ್ತಂತೆ ಭಾಸವಾಯಿತು. ಮುಂದೇನು ಮಾಡುವುದು? ದಿಕ್ಕು ತೋಚಲಿಲ್ಲ. ಜೇಬಿನಲ್ಲಿಟ್ಟಿಕೊಳ್ಳಲು ಮನಸ್ಸಿಲ್ಲದೆ, ಬಿಟ್ಟು ಬರಲಾಗದೆ ಉಭಯಸಂಕಟದಿಂದ ನೆಲನೋಡುತ್ತ ನಿಂತರು.
ಪಕ್ಕದಲ್ಲಿ ಯಾರೋ ಸುಳಿದಂತಾಯಿತು. ತಲೆ ಎತ್ತಿ ನೋಡಿದರು. ಒರಟುಕಾಯದ ವ್ಯಕ್ತಿಯೊಬ್ಬ ಸರಸರನೆ ಇವರ ಬಳಿ ಬಂದು ಪರ್ಸನ್ನೇ ದಿಟ್ಟಿಸಿ ನೋಡಿದ. ಪರ್ಸು ಕಳೆದುಕೊಂಡ ವ್ಯಕ್ತಿ ಇವನೇ ಇರಬೇಕು, ಹುಡುಕಿಕೊಂಡು ಬಂದಿರಬಹುದೆನಿಸಿ ಅವನ ಕಡೆಗೆ ಕೈ ಚಾಚಿ ಇದು ನಿಮ್ಮದೇನಾ?…… ಎಂದು ಪರ್ಸುತೋರಿಸುತ್ತ ಕೇಳಿದರು.
ಹೌದು. ಇದು ನಂದೇ!………. ಇದು ನಂದೇ!………. ನನ್ನ ಪರ್ಸು ನನ್ಗೆ ಸಿಕ್ತು! ಎಂದು ಖುಷಿಯಿಂದ ತೆಗೆದುಕೊಂಡು ಅವಸವಸರವಾಗಿ ಬಿಚ್ಚಿ ನೋಡಿದ. ಪರ್ಸಿನ ತುಂಬ ಬರೀ ಐನೂರರ ನೋಟುಗಳೇ ತುಂಬಿದ್ದವು. ಅದರ ಜೊತೆಗೆ ಒಂದೆರಡು ಆಸ್ಪತ್ರೆಯ ಚೀಟಿಗಳೂ ಇದ್ದವು. ಒಮ್ಮೆ ನೋಟುಗಳ ಮೇಲೆ ಕೈಯಾಡಿಸಿ ಕಣ್ಣು ತುಂಬ ನೋಡಿದ.
ನನ್ದುಡ್ಡು ನನ್ಗೆ ಸಿಕ್ತು. ಥ್ಯಾಕ್ಸ್ ಅಜ್ಜ……… ಎಂದು ಸಂತೋಷದಿಂದ ಹೇಳಿದ.
ಅವನ ಮಾತು ಕೇಳುತ್ತಿದ್ದಂತೆ ವನವಾಸದಿಂದ ಮುಕ್ತರಾದಂತಾದರು. ಉರಿಬೆಂಕಿ ಉಗುಳುತ್ತಿದ್ದ ಮರುಭೂಮಿ ನಂದನವನವಾಗಿ ತಂಪು ನೀಡುವಂತಾಯಿತು. ಎದೆಯ ಮೇಲಿನ ಭಾರ ತನ್ತಾನೆ ಮಾಯವಾಗತೊಡಗಿತು. ಆನಂದಸಾಗರ ಉಕ್ಕಿಹರಿಯಿತು. ಮೈ-ಮನಗಳು ಹಗುರವಾಗಿ ನೆಮ್ಮದಿಯ ಉಸಿರು ಬಿಟ್ಟರು. ‘ಅನ್ಯಾಯವಾಗುತ್ತಿದ್ದ ಒಬ್ಬ ನಿಭರ್ಾಗ್ಯನಿಗೆ ಸಹಾಯಮಾಡಿದೆ, ತನ್ನಿಂದಾಗುತ್ತಿದ್ದ ತಪ್ಪಿನಿಂದ ಜಾಗೃತಗೊಂಡಿದ್ದಲ್ಲದೆ ಒಬ್ಬ ವ್ಯಕ್ತಿಗೆ ನ್ಯಾಯವನ್ನು ಒದಗಿಸಿಕೊಟ್ಟೆ’ ಎಂದು ತಮ್ಮೊಳಗೆ ಸಂತೋಷಪಟ್ಟರು. ಅವನ ಸ್ವತ್ತನ್ನು ಅವನಿಗೇ ಸಿಗುವಂತೆ ಮಾಡಿದ್ದು; ಹಸಿವಿನಿಂದ ಒದ್ದಾಡುತ್ತಿದ್ದವನಿಗೆ ಅನ್ನವನ್ನು ಉಣ್ಣಿಸಿದಂತೆ, ನೀರಿನಲ್ಲಿ ಮುಳುಗುತ್ತಿದ್ದವನನ್ನು ಎಳೆದು ದಡಕ್ಕೆ ತಂದು ಮರುಜನ್ಮ ನೀಡಿದಂತೆ ಎಂದು ಹೆಮ್ಮೆಯಿಂದ ಬೀಗತೊಡಗಿದರು.
ಮುಖದ ಮೇಲೆ ನಗೆ ಚಿಮ್ಮಿಸಿಕೊಂಡ ಆ ವ್ಯಕ್ತಿ ನೋಟುಗಳ ಕಂತೆಯಿಂದ ಎರಡು ನೋಟುಗಳನ್ನು ಎಳೆದು ಇವರ ಜೇಬಿಗೆ ತುರುಕಿದ. ‘ಬೇಡ ಬೇಡ’ ಎಂದು ಎಷ್ಟು ನಿರಾಕರಿಸಿದರೂ ಬಲವಂತದಿಂದ ತುರುಕುತ್ತ ನೀವು ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯೋದಿಲ್ಲ………. ಇದು ನನ್ನ ಸಂತೋಷಕ್ಕೆ……….. ಎಂದು ಹೇಳಿ ಹೊರಟುಹೋದ. ‘ಬೇಡ….. ಬೇಡ…..’ ಎಂಬ ಇವರ ಕೂಗು ಗಾಳಿಯಲ್ಲಿ ಬೆರೆಯುವ ಮೊದಲೆ ಆ ಆಗಂತುಕ ಮುಂದಕ್ಕೆ ಹೆಜ್ಜೆಹಾಕಿ ಕತ್ತಲೆಯಲ್ಲಿ ಕರಗಿಹೋಗಿದ್ದ.
ಹಿಂತಿರುಗಿಸಲು ಜೇಬಿನಿಂದ ಹೊರತೆಗೆದ ನೋಟುಗಳ ಕಡೆಗೆ ದೃಷ್ಟಿ ಹರಿಸಿದರು. ಐನೂರರ ಎರಡು ನೋಟುಗಳು ರಾರಾಜಿಸುತ್ತಿದ್ದವು. ಮೊಮ್ಮಗನಿಗೆ ಸ್ಕೂಲ್ ಷೂಗಳನ್ನು ಕೊಡಿಸಿ ಶಾಲೆಗೆ ಕರೆದುಕೊಂಡು ಹೋಗುವ ದೃಶಾವಳಿಗಳು ನೋಟುಗಳ ಮೇಲೆ ಕಾಣಿಸಿಕೊಂಡವು. ಮನಸ್ಸು ಆನಂದದಿಂದ ತೇಲಾಡತೊಡಗಿತು.
ಅಜ್ಜ…….. ಅಜ್ಜ……. ಎಂಬ ನೋವಿನ ಧ್ವನಿ ಕೇಳಿಸಿತು. ತನ್ನ ಬೆನ್ನಹಿಂದೆ ಯಾರು ಈ ರೀತಿ ಕೂಗುತ್ತಿರುವುದೆಂದು ಹಿಂತಿರುಗಿ ನೋಡಿದರು. ಬಡತನದ ಬಡಬಾಗ್ನಿಯಲ್ಲಿ ತನ್ನನ್ನೇ ತಾನು ಸುಟ್ಟುಕೊಂಡಿದ್ದಾನೆನೋ ಎಂಬಂತೆ ಒಬ್ಬ ಯುವಕ ನಿಂತಿದ್ದ. ಅವನ ದೀನ ಸ್ಥಿತಿಯನ್ನು ಒಮ್ಮೆ ನೋಡಿದರೆ ಎಂಥವರಿಗೂ ಅಯ್ಯೋ! ಎನಿಸಿ ಕರುಳು ಕಿವಿಚಿದಂತಾಗುತ್ತಿತ್ತು. ಕಣ್ಣಸಾಗರಗಳು ತುಂಬಿ ಹರಿಯಲು ಉಕ್ಕುತ್ತಿದ್ದವು. ಜ್ವಾಲಾಮುಖಿಗಳನ್ನು ಎದೆಗೂಡಲ್ಲೇ ಅದುಮಿಡಲು ಪ್ರಯತ್ನಿಸುವಂತಿದ್ದ. ದುಃಖವೆಲ್ಲವನ್ನೂ ತಾನೊಬ್ಬನೇ ಅನುಭವಿಸುತ್ತಿರುವಂತೆ ಕಾಣುತ್ತಿದ್ದ. ಏನೇನೋ ಹೇಳಲು ಚಡಪಡಿಸಿ ಹೇಳಲಾಗದೆ ಮೂಕನಾಗಿ ಒದ್ದಾಡುತ್ತಿದ್ದ. ಮೈಯೆಲ್ಲಾ ಕಣ್ಣಾಗಿಸಿಕೊಂಡು ಏನೋ ಹುಡುಕಾಡುತ್ತಿದ್ದವನ ದೀನ ಸ್ಥಿತಿಯನ್ನು ನೋಡಲಾಗಲಿಲ್ಲ ಇವರಿಗೆ. ತನ್ನ ಕೈಯಲ್ಲಿದ್ದ ನೊಟುಗಳನ್ನು ಕೊಟ್ಟು ಸಹಾಯ ಮಾಡೋಣವೆನಿಸಿತು. ಆದರೆ ಮೊಮ್ಮಗನ ಅಳಲು? ಅವನ ಕಣ್ಣೀರು ಒರೆಸಲು ಆ ‘ಅಲ್ಲಾ’ ಬೇರೆ ಮಾರ್ಗ ಇಟ್ಟಿರಬೇಕು. ಈ ಹಣ ಇವನಿಗೆ ಕೊಡುವುದೇ ಸರಿಯೆನಿಸಿ ಎರಡು ಹೆಜ್ಜೆ ಮುಂದೆ ಬಂದು ನೋಟುಗಳನ್ನು ಇವನ ಕಡೆ ಚಾಚಲು ಮುಂದಾದರು. ಅಷ್ಟರಲ್ಲಿ ಆ ಯುವಕ ಅಜ್ಜ….. ಅಜ್ಜ….. ಎಂದು ಏನೋ ಹೇಳಲು ಆರಂಭಿಸಿ ಹೇಳಲಾಗದೆ ಚಡಪಡಿಸಿದ. ಒಂದೆರಡು ಕ್ಷಣ ಮೌನವಾದ. ಬಹಳ ಪ್ರಯತ್ನ ಪಟ್ಟು ಮತ್ತೆ ಹೇಳಿದ; ಅಜ್ಜ…….. ಅಜ್ಜ…….. ಈ ದಾರಿಯಲ್ಲಿ ನೀವೇನಾದ್ರು ಒಂದು ಕಪ್ಪು ಬಣ್ಣದ ಪರ್ಸನ್ನ ನೋಡಿದ್ರ?…….. ಎಂದು.
ಷರೀಫಜ್ಜನ ಎದೆಗೆ ಸಿಡಿಲು ಬಡಿದಂತಾಯಿತು. ಮಾತುಗಳು ಹೊರಬರದೆ ಮೂಕರಂತಾದರು.
ಯುವಕ ಬಹಳ ಕಷ್ಟಪಟ್ಟು ತಾನೇ ಮಾತು ಮುಂದುವರಿಸಿದ. ಬೆಂಗಳೂರ್ನಲ್ಲಿ ಎರ್ಡು ವರ್ಷದಿಂದ ಹಗಲು ರಾತ್ರಿ ಕೆಲಸಮಾಡಿ ಯಜಮಾನ್ರ ಹತ್ರ ಹಣ ಕೂಡಿಟ್ಟಿದ್ದೆ. ನನ್ ತಾಯಿ ಆಪರೇಷನ್ಗೆ ಅಂತ ಇವತ್ತು ಹಣ ತಗೊಂಡು ಬಂದೆ. ಬರೀ ಐನೂರು ರೂಪಾಯಿ ನೋಟ್ಗಳು. ಆಸ್ಪತ್ರೆ ಬಿಲ್ಲು, ಔಷಧಿ ಚೀಟಿಗಳೆಲ್ಲಾ ಅದ್ರಲ್ಲೇ ಇದ್ವು. ಬೆಳಿಗ್ಗೆ ಬರುವಾಗ ಕಳೆದುಕೊಂಡೆ. ಈ ದಾರಿಯಲ್ಲಿ ನೀವೇನಾದ್ರೂ ನೋಡಿದ್ರ ಅಜ್ಜ…….. ಎಂದು ರೊದಿಸುತ್ತಲೇ ಹೇಳಿದ.
ಷರೀಫಜ್ಜ ಪಾತಾಳಕ್ಕೆ ಕುಸಿದರು. ಯುವಕನ ಒಂದೊಂದು ಮಾತು ಸಹ ಚೂರಿಯಿಂದ ಇರಿದಂತಾಗುತ್ತಿತ್ತು. ಏನು ಹೇಳಬೇಕು? ಏನು ಮಾಡಬೇಕು? ಒಂದೂ ತೋಚದೆ ದಿಕ್ಕು ದಿಕ್ಕು ನೋಡಿದರು. ತಾನು ಮೋಸಹೋದೆನೆ? ಅಥವಾ ಮೋಸ ಮಾಡಿದೆನೆ? ಎಂಬುದು ಕಿಚ್ಚಾಗಿ ಕಾಡತೊಡಗಿತು. ದೋಚಿಕೊಂಡು ಹೋದ ಆ ಆಗಂತುಕನ ನಗು; ವೇದನೆ ಅನುಭವಿಸುತ್ತಿರುವ ಈ ಯುವಕನ ಅಳಲು ಹುಚ್ಚು ಹಿಡಿಸುತ್ತಿದ್ದವು. ತಾನು ಮಾಡಿದ್ದು ಸರಿಯೇ? ತಪ್ಪೇ? ಅರ್ಥವಾಗದೆ ಕಂಗಾಲಾಗಿನಿಂತರು. ಆ ಒರಟುಕಾಯದ ವ್ಯಕ್ತಿ ಹೋದ ಕಡೆಗೆ ದೃಷ್ಟಿಹರಿಸಿ ನಾಲ್ಕೈದು ಹೆಜ್ಜೆ ಹಾಕಿ ಹುಡುಕಿದರು. ಕತ್ತಲೆಯಲ್ಲಿ ಕಾಣಿಸದೆ ತೊಳಲಾಡಿದರು. ಏನೂ ಸಿಗಲಿಲ್ಲ. ಜೀವಹೋದಂತಾಗಿ ಎಡವಿ ಕೆಳಕ್ಕೆ ಬಿದ್ದುಬಿಟ್ಟರು. ಛತ್ರಿ, ಶಾಲು ದಿಕ್ಕಾಪಾಲಾದವು.
ಮುಗ್ಧ ಮಗುವಿನಂತೆ ಗೋಳಾಡುತ್ತಿದ್ದ ಯುವಕನ ರೋದನೆ, ಮೌನಗರ್ಭದಲ್ಲಿ ಹುದುಗಿ ಮೂಕರಂತಾದ ಷರಿಫಜ್ಜನ ವೇದನೆಯನ್ನು ಕಂಡು ಸಹಿಸಲಾಗದೆ ಹಕ್ಕಿಗಳು ತಮ್ಮ ಸಂಗೀತ ಕಛೇರಿ ನಿಲ್ಲಿಸಿ ಮೂಕವಾದವು. ಬೀದಿ ದೀಪಗಳು ಬೆಳಗಲು ಮನಸ್ಸಿಲ್ಲದೆ ಕುಂದಿದವು. ತಂಗಾಳಿ ಚಲಿಸುವುದನ್ನೇ ಮರೆಯಿತು. ನಿಶಾಸುಂದರಿ ಮುಖಕ್ಕೆ ಕರಿಸೆರಗು ಹೊದ್ದುಕೊಂಡಳು.
 

‍ಲೇಖಕರು G

June 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: