ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಣ್ಣಕಥೆ ‘ಕಥೆಗಳು’

ಸವಿರಾಜ್ ಎ ಎಸ್


ಒಂದೊಂದು ಸಲ ಈ ಕಥೆ ಕವನಗಳನ್ನೆಲ್ಲಾ ಯಾವ ಸಂಭ್ರಮಕ್ಕೆ ಬರೆಯಬೇಕು, ಇದನ್ನೆಲ್ಲಾ ಈಗ ಯಾರು ಓದುತ್ತಾರೆ ಎಂದು ಬೇಸರವೆನಿಸುತ್ತದೆ. ಪತ್ರಿಕೆಗಳಿಗೆ ಕಳಿಸಿದರೆ ನಿಮ್ಮ ಕಥೆ ಎರಡು ಸಾವಿರ ಪದಗಳ ಮಿತಿಯನ್ನು ಮೀರುತ್ತದೆ, ಪ್ರಕಟಿಸಲು ಸಾಧ್ಯವಿಲ್ಲ ಎಂಬ ಅಡಿ ಟಿಪ್ಪಣಿಯೊಂದಿಗೆ ಹಿಂದಿರುಗಿಸುತ್ತಾರೆ. ಫೇಸ್‌ಬುಕ್ಕಿಗೋ, ಬ್ಲಾಗಿಗೋ ಹಾಕಿದರೆ ಐದೋ ಆರೋ ಗೆಳೆಯರು ದಾಕ್ಷಿಣ್ಯಕ್ಕೆ ಲೈಕ್ ಮಾಡಿ, ಕಮೆಂಟು ಬಿಸಾಕುತ್ತಾರೆ. ಹೆಂಡತಿಗಾದರೂ ಹೇಳೋಣವೆಂದರೆ ‘ಒಂದನೇ ತಾರೀಖು ಬಂತು, ಗ್ಯಾಸ್ ಮುಗೀತು, ಕರೆಂಟ್ ಬಿಲ್ ಕಟ್ಟಿಲ್ಲ… ಕಥೆ ಬರೆದುಕೊಂಡು ಕೂತಿದ್ದೀರಲ್ಲ, ನಿಮಗೇನು ಜವಾಬ್ದಾರಿಯಿಲ್ಲವೇ? ನಿಮ್ಮ ಕಥೆಗಳೇನು ಹೊಟ್ಟೆ ತುಂಬಿಸುತ್ತವೆಯೇ’ ಎಂದು ರೇಗುತ್ತಾಳೆ. ಕಾರ್ಟೂನು ನೋಡುತ್ತಿರುವ ಮಕ್ಕಳ ಬಳಿ ಹೋದರೆ, ‘ಡ್ಯಾಡ್! ಎಷ್ಟೊಂದು ಹೋಂವರ್ಕ್ ಮಾಡ್ಬೇಕು. ಮ್ಯಾಮ್ ಬಯ್ತಾರೆ ಗೊತ್ತಾ?’ ಎಂದು ಮುಖ ತಿರುಗಿಸುತ್ತವೆ. ಕಾಲೇಜಿನ ದಿನಗಳಲ್ಲಿ ನನ್ನ ಪೋಲಿ ಜೋಕುಗಳನ್ನು ಕೇಳಲು ಹಾತೊರೆಯುತ್ತಿದ್ದ ಗೆಳೆಯರು ಈಗ ಕಥೆ ಬರೆಯಲು ಆರಂಭಿಸಿದ ಮೇಲೆ ಪಾರ್ಟಿಗಳಿಗೆ ಕರೆಯುವುದನ್ನೇ ಬಿಟ್ಟಿದ್ದಾರೆ! ಇದ್ದುದರಲ್ಲಿ ಅಮ್ಮ ಮಾತ್ರ ನನ್ನ ಕಥೆಗಳನ್ನು ಕೇಳುತ್ತಾಳೆ. ಆದರೆ ಹಳ್ಳಿಯಲ್ಲಿಯೇ ಹುಟ್ಟಿ, ಬೆಳೆದು, ಜೀವನ ಸವೆಸಿರುವ ಅವಳಿಗೆ ನನ್ನ ನಗರ ಸಂವೇದನೆಯ ಕಥೆಗಳು ಅರ್ಥವಾಗದೆ, ಎಲ್ಲಿ ನನಗೆ ಬೇಸರವಾಗುತ್ತದೋ ಎಂಬ ಕಾಳಜಿಯಿಂದ ಏನು ಬರೆದರೂ ‘ಚೆನ್ನಾಗಿದೆ ಮಗನೇ’ ಎನ್ನುತ್ತಾಳೆ. ಒಮ್ಮೊಮ್ಮೆ ನನ್ನ ಸಾವಿನ ನಂತರ ನನ್ನ ಕಥೆಗಳೆಲ್ಲವೂ ಯಾವುದೋ ಪ್ರಕಾಶಕನ ಕೈಗೆ ಸಿಕ್ಕಿ ಆತ ಅದನ್ನು ಪ್ರಕಟಿಸಿ, ಓದುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿ ನನ್ನ ಹೆಸರು ಸಾವಿನ ನಂತರ ಅಜರಾಮರವಾಗಬಹುದೇನೋ ಎಂದು ಕನಸು ಕಾಣುತ್ತೇನೆ. ಹೈಸ್ಕೂಲಿನಲ್ಲಿದ್ದಾಗ ನನ್ನ ಮೊದಲ ಕಥೆಯನ್ನು ಓದಿ ‘ಚೆನ್ನಾಗಿ ಬರೀತೀಯಾ, ಬರೆಯುವುದನ್ನು ನಿಲ್ಲಿಸಬೇಡ’ ಎಂದು ಪ್ರೋತ್ಸಾಹದಂತಹ ಶಾಪ ನೀಡಿದ ರಾಜೀವಪ್ಪ ಮೇಷ್ಟರನ್ನು ಹುಡುಕಿ ನಾಲ್ಕು ತದಕಿದರೆ ಈ ಕಥೆ ಬರೆಯುವ ಹುಚ್ಚು ತೊಲಗಿ ನಾನು ಎಲ್ಲರಂತೆಯೇ ಒಬ್ಬ ಮನುಷ್ಯನಾಗಬಹುದು ಎಂದು ಆಸೆಯಾಗುತ್ತದೆ.
ಇಂತಹ ನಿರಾಶೆಯ ಕತ್ತಲೆಯ ನಡುವೆಯೂ, ಭರವಸೆಯ ಆಶಾಕಿರಣದಂತೆ ದೂರದ ಬೆಂಗಳೂರಿನಲ್ಲಿ ನನಗೊಬ್ಬ ಅಭಿಮಾನಿ ಕಂ ಗೆಳೆಯನಿದ್ದಾನೆ. (ಆತನ ಹೆಸರು, ವಿವರ ಬಹಿರಂಗ ಪಡಿಸಿದರೆ ಇದ್ದೊಬ್ಬ ಅಭಿಮಾನಿಯನ್ನು ಕಳೆದುಕೊಳ್ಳಬೇಕಾಗಬಹುದು ಎನ್ನುವ ಭಯದಿಂದ ಆತನ ವಿವರಗಳನ್ನು ಗೌಪ್ಯವಾಗಿರಿಸಲಾಗಿದೆ, ಕ್ಷಮಿಸಿ!) ಆತ ನನ್ನ ಕವಿತೆಗಳು ಎಂದು ಕರೆಯಬಹುದಾದ ರಚನೆಗಳ ಕಟ್ಟಾ ಅಭಿಮಾನಿ. ನಾನು ನನ್ನ ಬ್ಲಾಗಿನಲ್ಲಿ ಏನನ್ನೇ ಗೀಚಿದರೂ ‘ಆಹಾ! ಓಹೋ! ಅದ್ಭುತ!! ಎಂದೆಲ್ಲಾ ಕಮೆಂಟುಗಳನ್ನು ಹಾಕಿ ನನ್ನ ಎದೆಯುಬ್ಬಿಸುವ ಹಾಗೆ ಮಾಡುತ್ತಾನೆ. ನಾನೀಗ ಹೇಳಲು ಹೊರಟಿರುವ ಕಥೆ ಅವನ ಕುರಿತಾದದ್ದೇ.
ಒಂದು ಸಲ ಹೀಗಾಯಿತು. ಯಾವುದೋ ತುರ್ತು ಕೆಲಸದ ಮೇಲೆ ನಾನು ಬೆಂಗಳೂರಿಗೆ ಹೋಗಬೇಕಾಯಿತು. ಕೆಲಸಗಳೆಲ್ಲಾ ಮುಗಿದ ಮೇಲೆ ನನ್ನ ಈ ಗೆಳೆಯನಿಗೆ ಫೋನು ಹಚ್ಚಿದೆ. ‘ಮನೆಯಲ್ಲಿ ಹೆಂಡತಿಯಿಲ್ಲ. ಇವತ್ತು ನಿನ್ನೊಂದಿಗೆ ಗುಂಡು ಹಾಕಲೇಬೇಕು. ಮನೆಗೆ ಬಾ’ ಎಂದು ಪ್ರೀತಿಯಿಂದಲೇ ಆಹ್ವಾನ ನೀಡಿದ. ಎಲ್ಲಿ ಈತನ ಆಹ್ವಾನ ನಿರಾಕರಿಸಿದರೆ ನನ್ನ ಕವಿತೆಗಳನ್ನು ಓದುವುದನ್ನೇ ನಿಲ್ಲಿಸಿಬಿಟ್ಟಾನು ಎಂಬ ಭಯದಿಂದ ನಾನು ತಕ್ಷಣ ಒಂದು ಆಟೋ ಹಿಡಿದು ಅವನ ಮನೆಯತ್ತ ಧಾವಿಸಿದೆ. ಕಾಲಿಂಗ್ ಬೆಲ್ ಒತ್ತಿದ ಒಂದು ನಿಮಿಷದ ನಂತರ ಬಾಗಿಲು ಮೆಲ್ಲನೆ ತೆರೆಯಿತು. ಒಳಗೆ ಕಾಲಿಟ್ಟು ಹಲವು ವರ್ಷಗಳ ನಂತರ ಭೇಟಿಯಾಗುತ್ತಿರುವ ನನ್ನ ಗೆಳೆಯನನ್ನು ಕಾಲಿನಿಂದ ತಲೆಯವರೆಗೆ ಕೂಲಂಕಷವಾಗಿ ಗಮನಿಸಿದೆ. ಕೂದಲು ಕೆದರಿತ್ತು. ಕಣ್ಣುಗಳು ಕೆಂಪಾಗಿ ಮುಖದಿಂದ ಹೊರಗೆ ಉಬುಕಿಕೊಂಡಿದ್ದವು. ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಗಡ್ಡದ ಹಿಂದೆ ಇದ್ದುದು ವಿರಾಗವೋ, ವಿಷಾದವೋ ತಿಳಿಯಲಿಲ್ಲ. ಕೊಳೆಯಾದ ಬನೀನು ಮತ್ತು ಅಲ್ಲಲ್ಲಿ ಹರಿದಿದ್ದ ಹಳೆಯದೊಂದು ಲುಂಗಿ ತೊಟ್ಟಿದ್ದ. ಜ್ವರ ಬಂದವರು ಸುತ್ತಿಕೊಳ್ಳುವ ಹಾಗೆ ಕುತ್ತಿಗೆಯ ಸುತ್ತ ಒಂದು ಮಫ್ಲರು ಸುತ್ತಿಕೊಂಡಿದ್ದ.
ಅಪರಿಚಿತ ಊರಿನಲ್ಲಿ ಬೇಸರ ಕಳೆಯಲು ಪರಿಚಿತನನ್ನು ಹುಡುಕಿ ಬಂದರೆ ಈತ ಅನ್ಯಗ್ರಹ ಜೀವಿಯಂತೆ ಗೋಚರಿಸಿ ಮನಸ್ಸಿಗೆ ಮತ್ತಷ್ಟು ಕಸಿವಿಸಿಯೆನಿಸಿತು. ‘ಒಳಗೆ ಬಾ, ನಾನೇ ರಿಸೀವ್ ಮಾಡಿಕೊಳ್ಳಲು ಬಸ್‌ಸ್ಟ್ಯಾಂಡಿಗೆ ಬರುತ್ತಿದ್ದೆ. ಕಾರು ಸರ್ವೀಸಿಗೆ ಬಿಟ್ಟಿದ್ದೇನೆ. ಏನಿಲ್ಲ ಸಣ್ಣದೊಂದು ಆಕ್ಸಿಡೆಂಟು, ಕಾಲಿಗೆ ಪೆಟ್ಟು ಮಾಡಿಕೊಂಡೆ’ ಎಂದು ಕರೆದು ಕುಂಟುತ್ತಾ ಮುಂದೆ ನಡೆದು ಗೆಸ್ಟ್‌ರೂಮಿನ ಸೋಫಾದ ಮೇಲೆ ನನ್ನ ಕೂರಿಸಿ, ಟಿವಿ ಹಚ್ಚಿದ. ‘ಹಳ್ಳಿಯಲ್ಲೇ ಚೆನ್ನಾಗಿದ್ದೆಯಲ್ಲೋ, ಬೆಂಗಳೂರಿಗೆ ಬಂದು ಏನಾಯ್ತೋ?’ ಎಂದು ಆತ್ಮೀಯತೆಯನ್ನು ಪ್ರಯತ್ನಿಸುತ್ತಾ ಕೇಳಿದೆ. ‘ಅಂಥದ್ದೇನೂ ಆಗಿಲ್ಲಮ್ಮಾ, ಚೆನ್ನಾಗೇ ಇದ್ದೀನಿ. ನೀನು ಮಾತ್ರ ಇದ್ದ ಹಾಗೆ ಇದ್ದೀಯ. ಅದೇ ಧ್ವನಿ, ಅದೇ ಕಮ್ಯುನಿಸ್ಟ್ ಗಡ್ಡ, ಖಾದಿ ಜುಬ್ಬಾ. ಟಿಪಿಕಲ್ ಬುದ್ಧಿಜೀವಿಗಳ ಹಾಗೆ’ ಎಂದು ನಕ್ಕಂತೆ ಮಾಡಿ ಸುಮ್ಮನಾದ. ತುಂಬಾ ವರ್ಷಗಳ ನಂತರ ಭೇಟಿಯಾಗುತ್ತಿರುವ ಕಾರಣದಿಂದಲೋ ಏನೋ ಆತನೊಂದಿಗೆ ಮೊದಲಿನ ಸಲಿಗೆ ಉಳಿದಿಲ್ಲ ಎನ್ನಿಸಿ ಮುಜುಗರ ತಪ್ಪಿಸಿಕೊಳ್ಳಲು ಟಿವಿಯತ್ತ ಕಣ್ಣು ಹಾಯಿಸಿದೆ. ಇಷ್ಟು ವರ್ಷಗಳಲ್ಲಿ ಸಂಸಾರದ ಭಾರಕ್ಕೆ ಸಿಲುಕಿ ಆತನ ವ್ಯಕ್ತಿತ್ವವೇ ಬದಲಾಗಿರಬಹುದು ಎನ್ನುವ ಇನ್ನೊಂದು ಕಾರಣವೂ ಮನಸ್ಸಿನಲ್ಲಿ ಸುಳಿಯಿತು. ಆದರೆ ಮರುಕ್ಷಣವೇ ಅವನೂ ನನ್ನ ಬಗ್ಗೆ ಹೀಗೆಯೇ ಯೋಚಿಸುತ್ತಿರಬಹುದಲ್ಲವೇ ಎನ್ನಿಸಿ ಮನಸ್ಸು ಮುದುಡಿತು. ಮುಂದಿನ ಮಾತನ್ನು ಆತನೇ ಆಡಲಿ ಎಂದು ರಿಮೋಟ್ ಕೈಗೆತ್ತಿಕೊಂಡು ಚಾನೆಲ್‌ಗಳನ್ನು ಬದಲಾಯಿಸುವುದರಲ್ಲಿ ಮಗ್ನನಾಗಿರುವಂತೆ ನಟಿಸಿದೆ. ಅವನೇ ಮೌನ ಮುರಿದು ‘ಟಿವಿ ನೋಡುತ್ತಾ ಕೂತಿರು, ಕಾಫಿ ಮಾಡಿಕೊಂಡು ಬರುತ್ತೇನೆ’ ಎಂದು ಈಸಿ ಚೇರಿನ ತೋಳಿನ ಆಸರೆಯಲ್ಲಿ ಏಳಲು ಹೊರಟಾಗ, ಇದ್ದಕಿದ್ದಂತೆ ಕಡಿದುಹೋಗಿದ್ದ ಆತ್ಮೀಯತೆಯ ತಂತುವೊಂದನ್ನು ಮತ್ತೆ ಜೋಡಿಸಿದಂತಾಗಿ ಮನಸ್ಸು ಉಲ್ಲಾಸಗೊಂಡು ಅವನ ಮೇಲೆ ಅಪಾರವಾದ ಪ್ರೇಮ ಹುಟ್ಟಿತು. ಏಳಲು ಹೊರಟ ಅವನನ್ನು ಬಲವಂತವಾಗಿ ಮತ್ತೆ ಸೋಫಾದ ಮೇಲೆ ಕೂರಿಸಿ ‘ಕಾಫಿ ಗೀಫಿ ಏನೂ ಬೇಡಾ ಮಾರಾಯಾ! ನನಗೊಂದು ಪೆಗ್ ಮಾಡು. ಐದು ನಿಮಿಷದಲ್ಲಿ ಸ್ನಾನ ಮುಗಿಸಿ ಬರುತ್ತೇನೆ’ ಎಂದು ಬಚ್ಚಲ ಮನೆ ಕಡೆ ನಡೆದೆ.

‘ಸ್ನಾನ ಮುಗಿಸಿ ಬರುವಷ್ಟರಲ್ಲಿ ಟೀಪಾಯಿಯ ಮೇಲೆ ಎರಡು ಗ್ಲಾಸುಗಳಿಗೆ ಆಗಲೇ ತುಂಬಿದ್ದ ವಿಸ್ಕಿಗೆ ಸೋಡಾ ಬೆರೆಸುತ್ತಿದ್ದ. ತಿಳಿ ಬಂಗಾರದ ಬಣ್ಣದ ವಿಸ್ಕಿಯ ಪರಿಮಳ ನನ್ನ ಜೀವವನ್ನು ಪ್ರವೇಶಿಸುತ್ತಿದ್ದಂತೆಯೇ ಈ ನನ್ನ ಗೆಳೆಯ ಇನ್ನೂ ಹತ್ತಿರದವನೆನ್ನಿಸಿ, ಒಂದೆರಡು ಪೆಗ್ ಒಳಕ್ಕೆ ಇಳಿದರೆ ನಮ್ಮೊಳಗಿನ ಸಂಕೋಚ, ಮುಜುಗರಗಳ ಪರದೆ ಸರಿದು ಮತ್ತದೇ ಹಳೆಯ ತಮಾಷೆ, ಗೇಲಿಗಳಿಂದ ಕೂಡಿದ ಅಪೂರ್ವವಾದ ಸ್ನೇಹ ಮರುಕಳಿಸಬಹುದು ಎಂಬ ಆಸೆಯುಂಟಾಯಿತು. ಮೊದಲ ಪೆಗ್ ತುಟಿಗೆ ತಾಕಿಸಿದವನು ಚಿಪ್ಸ್ ಚೂರುಗಳನ್ನು ಬಾಯಿಗೆ ತುಂಬಿಕೊಂಡು ಚಪ್ಪರಿಸುತ್ತಾ ‘ನಿನ್ನ ಕವಿತೆಗಳನ್ನು ಓದುತ್ತೇನೆ. ಚೆನ್ನಾಗೇ ಬರೀತೀಯಾ. ಸಿನಿಮಾಗಳಿಗೇಕೆ ಬರೆಯಬಾರದು?’ ಎಂದ. ಸಿನಿಮಾಗಳಲ್ಲಿ ಪ್ರಯತ್ನಿಸಿದರೂ ಅವಕಾಶ ಸಿಗಲಿಲ್ಲ ಎನ್ನುವ ಸತ್ಯ ಹೇಳಲು ಸಾಧ್ಯವಾಗದೆ ‘ಇಲ್ಲ! ಸಿನಿಮಾದವರು ಒಳ್ಳೆಯ ಹಾಡುಗಳ ಜೊತೆಗೆ ಐಟಮ್ ಸಾಂಗುಗಳನ್ನೂ ಬರೆಸುತ್ತಾರೆ. ಸಿನಿಮಾ ಇಷ್ಟವಿಲ್ಲ’ ಎಂದೆ. ‘ಹೂಂ ನೀನು ಹೇಳೋದೂ ಸರಿ!’ ಎಂದು ಚಿಪ್ಸ್ ತುಂಬಿದ ಬಟ್ಟಲ್ಲನ್ನು ನನ್ನೆಡೆಗೆ ತಳ್ಳಿದ. ಮತ್ತೆ ಮೂರನೆಯ ಪೆಗ್ಗಿನವರೆಗೆ ರಾಜಕೀಯ, ಕ್ರಿಕೆಟ್ಟು, ಜನಲೋಕಪಾಲ ಎಂದೆಲ್ಲಾ ಹರಟಿದೆವು. ನಾನು ಅಂದುಕೊಂಡಂತೆಯೇ ಹಳದಿ ದ್ರವ ಒಳಹೋದಂತೆಲ್ಲಾ ನಮ್ಮ ಗಂಟಿಕ್ಕಿಕೊಂಡಿದ್ದ ಮನಸ್ಸುಗಳು ಕರಗಿ ದ್ರವವಾಗಿ ಒಂದರೊಡನೊಂದು ಸರಾಗವಾಗಿ ಬೆರೆತು ಹರಿಯಲಾರಂಭಿಸಿದ್ದವು. ಮಾತು ನನ್ನ ಕಥೆಗಳತ್ತ ತಿರುಗಿತು. ‘ಕಥೆಗಳು?, ಗುಡ್! ಎಂತಹಾ ಕಥೆಗಳನ್ನು ಬರೀತೀಯಾ?’ ಎಂದು ಕೇಳಿದ. ‘ಡಿಗ್ರಿ ಮುಗಿಸಿ ಒಂದೈದು ವರ್ಷ ಬೆಂಗಳೂರಿನಲ್ಲೇ ಕೆಲಸ ಮಾಡಿದ್ದರಿಂದಾಗಿ ಇಲ್ಲಿ ಕಂಡು ಕೇಳಿದ ಅನುಭವಗಳನ್ನೇ ರಾ ಮೆಟಿರಿಯಲ್‌ಗಳನ್ನಾಗಿ ತೆಗೆದುಕೊಂಡು ನನ್ನ ದೃಷ್ಠಿಕೋನಕ್ಕೆ ತಕ್ಕಂತೆ ಮೌಲ್ಡ್ ಮಾಡಿ ಬರೆಯುತ್ತೇನೆ’ ಎಂದು ಅವನ ಇಂಜಿನಿಯರಿಂಗ್ ಭಾಷೆಯಲ್ಲಿಯೇ ವಿವರಿಸಿದೆ.
‘ಇಲ್ಲಿನ ಅನುಭವಗಳು ಅಂದರೆ?’
‘ಬೆಂಗಳೂರಿನಂತಹ ಮಹಾನಗರಗಳಲ್ಲಿನ ಜೀವನಶೈಲಿಯ ಮೇಲೆ ಜಾಗತೀಕರಣ ಬೀರುತ್ತಿರುವ ಪ್ರಭಾವ, ಇಲ್ಲಿಯ ಕೊಳ್ಳುಬಾಕತನ ಸಂಸ್ಕೃತಿ ಮತ್ತು ಸಂಪತ್ತಿನ ಅಸಹ್ಯಕರ ಪ್ರದರ್ಶನ ಪ್ರಾಮಾಣಿಕ ಮನುಷ್ಯನನ್ನೂ ಭ್ರಷ್ಟನನ್ನಾಗಿಸುವ ರೀತಿ, ಗಂಡ ಹೆಂಡತಿ ಇಬ್ಬರೂ ದುಡಿಯುವ ನ್ಯುಕ್ಲಿಯರ್ ಕುಟುಂಬಗಳಲ್ಲಿ ಪರಸ್ಪರರಲ್ಲಿ ಮೂಡುವ ಅಪನಂಬಿಕೆ, ಅಸುರಕ್ಷತೆ, ಅಹಂಕಾರಗಳು.. ಬೆಂಗಳೂರಿಗೆ ವಲಸೆ ಬಂದ ಕುಟುಂಬಗಳಿಗೆ ಎದುರಾಗುವ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಂಘರ್ಷ…’
‘ಪ್ರೆಟಿ ಇಂಟರೆಸ್ಟಿಂಗ್! ನಿನ್ನವೊಂದೆರಡು ಕಥೆಗಳನ್ನು ಹೇಳುತ್ತಾ ಹೋಗುತ್ತೀಯಾ? ಕಥೆ ಕೇಳುತ್ತಿದ್ದರೆ ವಿಸ್ಕಿ ಒಳಗೆ ಸೇರಿದ್ದೇ ಗೊತ್ತಾಗಲ್ಲ’ ಎಂದು ಸುಳ್ಳು ಸುಳ್ಳೇ ನಗತೊಡಗಿದ.
ನನಗೆ ಎಲ್ಲಿಲ್ಲದ ಉತ್ಸಾಹ ಬಂತು. ಇಷ್ಟು ವರ್ಷ ಪತ್ರಿಕೆಗಳು-ಹೆಂಡತಿ-ಮಕ್ಕಳು-ಗೆಳೆಯರ ನಡುವೆ ಅಲೆದಾಡಿ ತಿರಸ್ಕೃತಗೊಂಡು ವಾಪಸಾಗುತ್ತಿದ್ದ ನನ್ನ ಕಥೆಗಳಿಗೆಲ್ಲಾ ಇವನಿಂದ ಮುಕ್ತಿ ಸಿಗುತ್ತದೆಂದು ಬ್ರಹ್ಮಾನಂದವಾಯಿತು.
ಮೊದಲು ಕುತೂಹಲ ಕೆರಳಿಸುವಂತೆ ಪುಟ್ಟದೊಂದು ಕಥೆ ಹೇಳಿ ನಂತರ ಇವನನ್ನು ಆಲೋಚನೆಗೆ ಹಚ್ಚುವಂತಹ ನೀಳ್ಗತೆಗಳನ್ನು ಹೇಳಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ನನ್ನ ಕಥಾಸರಿತ್ಸಾಗರವನ್ನು ಆರಂಭಿಸಿದೆ.
‘ಸರಿ, ’ಒಂದು ರೂಪಾಯಿ’ ಎನ್ನುವ ನನ್ನದೊಂದು ಹಳೆಯ ಕಥೆಯನ್ನು ಹೇಳುತ್ತೇನೆ ಕೇಳು. ಒಂದು ದೊಡ್ಡ ನಗರದಲ್ಲಿ ಈ ಕಥೆ ನಡೆಯುತ್ತದೆ. ಸದ್ಯಕ್ಕೆ ಬೆಂಗಳೂರು ಅಂತಲೇ ಇಟ್ಟುಕೋ.’ ಬೆಂಗಳೂರಿಗೆ ಬರುವ ಆಗಂತುಕನೊಬ್ಬನಿಗೆ ಮೂತ್ರ ವಿಸರ್ಜನೆಗೆ ಇನ್ನಿಲ್ಲದಷ್ಟು ಅವಸರವಾಗುತ್ತದೆ. ಸುಮಾರು ಹೊತ್ತು ಸಾರ್ವಜನಿಕ ಶೌಚಾಲಯವನ್ನು ಹುಡುಕುತ್ತಾ, ಮೂತ್ರ ಕಟ್ಟಿಕೊಂಡು ಮುಖ ಕಿವುಚುತ್ತಾ ಹಲವು ರಸ್ತೆಗಳನ್ನು ಅಲೆದು ಸಾಕಾಗುವಷ್ಟರಲ್ಲಿ, ಕಂಕುಳಲ್ಲಿ ಮಗುವನ್ನು ಕಟ್ಟಿಕೊಂಡು ಭಿಕ್ಷೆ ಬೇಡುತ್ತಿರುವ ಹಸಿ ಬಾಣಂತಿಯೊಬ್ಬಳು ಎದುರಿಗೆ ಸಿಕ್ಕುತ್ತಾಳೆ. ಎಲುಬಿನ ಗೂಡಿನಂತಹ ಆಕೆಯ ಮೈ, ನೀರು ಕಾಣದೆ ಗಂಟಿಕ್ಕಿಕೊಂಡ ತಲೆಕೂದಲು.. ಅಚ್ಚ ಕಪ್ಪು ಬಣ್ಣದ ಮಗು ಬಿಸಿಲಿನ ಝಳಕ್ಕೆ ಮಿರಿ ಮಿರಿ ಮಿಂಚುತ್ತಿತ್ತು. ತಲೆಯಲ್ಲಿ ವಿರಳವಾಗಿದ್ದ ರೇಶಿಮೆಯಂತಹ ನುಣುಪಾದ ಕೂದಲು.. ಹಸಿವಿನಿಂದ ಕಂಗಾಲಾಗಿ ಹಾಲು ಬತ್ತಿಹೋಗಿರುವ ತಾಯಿಯ ಮೊಲೆಗಳಿಗೆ ತನ್ನ ಮುಖವನ್ನು ಗುದ್ದುತ್ತಿರುವ ಮಗು. ಪಾಪ! ಈ ಆಗಂತುಕನಿಗೆ ಸಂಕಟವೆನಿಸಿತು. ಜೇಬಿಗೆ ಕೈ ಹಾಕಿದ. ಐನೂರರ ಗರಿಗರಿ ನೋಟುಗಳ ಮಧ್ಯೆ ನಿಧಿ ಸಿಕ್ಕ ಹಾಗೆ ಒಂದು ರೂಪಾಯಿಯ ಒಂದೇ ಒಂದು ನಾಣ್ಯ ಸಿಕ್ಕಿತು. ಆ ಒಂದು ರೂಪಾಯಿಯನ್ನು ಇನ್ನೇನು ಆಸೆಗಣ್ಣಿನಿಂದ ತನ್ನತ್ತಲೇ ನೋಡುತ್ತಿರುವ ಭಿಕ್ಷುಕಿಯ ಕೈಗೆ ಹಾಕಬೇಕೆನ್ನುವಷ್ಟರಲ್ಲಿ ಥಟ್ಟನೆ ಆತನ ಕಣ್ಣಿಗೆ ರಸ್ತೆಯ ಕೊನೆಯಲ್ಲಿರುವ ‘ಸಾರ್ವಜನಿಕ ಶೌಚಾಲಯ’ ಕಾಣಿಸಿತು. ಅದರ ಮುಂದೆ ತೂಗುಹಾಕಿದ್ದ ‘ಮೂತ್ರ ವಿಸರ್ಜನೆ-೧ ರೂಪಾಯಿ, ಮಲ ವಿಸರ್ಜನೆ-೨ ರೂಪಾಯಿ ಎನ್ನುವ ಬೋರ್ಡು ಸಹಾ’.. ಇತ್ತ ಕಡೆ ಆ ಒಂದು ರೂಪಾಯಿ ನೀಡಿದರೆ ತಾಯಿ ಮತ್ತು ಮಗುವಿಗೆ ಸಹಾಯ ಮಾಡಿದ ತೃಪ್ತಿ. ಅತ್ತ ಕಡೆ ಘಂಟೆಗಳಿಂದ ಕಟ್ಟಿಕೊಂಡಿರುವ ಮೂತ್ರವನ್ನು ಹೊರಬಿಟ್ಟಾಗ ಸಿಗುವ ಮರಣಾನಂದದ ಬೆಲೆಯೂ ಅದೇ ಒಂದು ರೂಪಾಯಿ. ಹೃದಯ ಇತ್ತ ಕಡೆ ಸೆಳೆಯುತ್ತಿದೆ. ಹೃದಯದಿಂದ ಸ್ವಲ್ಪ ಕೆಳಗಿರುವ ಮೂತ್ರಕೋಶ ಅತ್ತ ಎಳೆಯುತ್ತಿದೆ. ಒಂದು ನಿಮಿಷ ಮನಸ್ಸು ತೂಗುಯ್ಯಾಲೆ ಆಡಿ ಏನೂ ಮಾಡಲು ತೋಚದೆ ಹಾಗೆಯೇ ನಿಲ್ಲುತ್ತಾನೆ. ಈತನೆಡೆಗೆ ಕೈಚಾಚಿದ್ದ ಭಿಕ್ಷುಕಿ ಹತಾಶೆಯಿಂದ ತಲೆತಗ್ಗಿಸಿ ಏನನ್ನೋ ಗೊಣಗುತ್ತಾ ಅವನನ್ನು ದಾಟಿ ಮುಂದೆ ಹೋಗುತ್ತಾಳೆ. ಇವನು ಅವಸರವಸರವಾಗಿ ಶೌಚಾಲಯದ ಒಳಕ್ಕೆ ನುಗ್ಗಿ ತಲೆ ಮೇಲಕ್ಕೆತ್ತಿ, ಆ…ಹ್ ಎಂಬ ಸುಖದ ನಿಟ್ಟುಸಿರು ಬಿಡುತ್ತಾ….’
‘ನಿಲ್ಲಿಸು ಗುರುವೇ ನಿನ್ನ ಕಥೆಯನ್ನು. ಹೊಸತೇನಿದೆ ನಿನ್ನ ಕಥೆಯಲ್ಲಿ ಮಣ್ಣು? ಬರೀ ಪಬ್ಲಿಕ್ ಟಾಯ್ಲೆಟ್ಟುಗಳಷ್ಟೇ ಅಲ್ಲ, ಬಿ.ಎಂ.ಟಿ.ಸಿ. ಬಸ್ಸು ಹತ್ತಿದರೂ ಚಿಲ್ಲರೆ ಕೊಡದಿದ್ದರೆ ಕಂಡಕ್ಟರುಗಳು ಸಿಡುಕುತ್ತಾರೆ. ನನ್ನ ವ್ಯಾಲೆಟ್ ನೋಡು, ಅದಕ್ಕೆಂದೇ ಎಂಟಾಣೆ ಚಿಲ್ಲರೆಯನ್ನೂ ವೇಸ್ಟ್ ಮಾಡದೇ ಕೂಡಿಟ್ಟಿದ್ದೇನೆ. ಬೇರೆ ಯಾವುದಾದರೂ ಕಥೆ ಇದ್ದರೆ ಹೇಳು’ ಎಂದು ಅಸಹನೆಯಿಂದ ಗೊಣಗಿದ.
‘ಇರಲಿ ಬಿಡು ಮಾರಾಯಾ! ನನಗೂ ಈ ಕಥೆ ಅಷ್ಟೇನೂ ಇಷ್ಟವಿಲ್ಲ. ’ಅಪಘಾತ’ ಎನ್ನುವ ಟೈಟಲ್ಲಿನ ನನ್ನ ಇನ್ನೊಂದು ಕಥೆಯಲ್ಲಿ ರಸ್ತೆಗಳ ಗುಣಮಟ್ಟ ಪರೀಕ್ಷಿಸುವ ಪಿಡಬ್ಲ್ಯುಡಿ ಇಂಜಿನಿಯರ್ ಒಬ್ಬ ಕಾಂಟ್ರಾಕ್ಟರನೊಬ್ಬನೊಂದಿಗೆ ಶಾಮೀಲಾಗಿ ಆತ ನಿರ್ಮಿಸುವ ಕಳಪೆ ಗುಣಮಟ್ಟದ ರಸ್ತೆಗಳಿಗೆ ಸುಳ್ಳು ಪ್ರಮಾಣಪತ್ರ ನೀಡುತ್ತಾನೆ. ಆ ರಸ್ತೆಗಳು ಒಂದೇ ಮಳೆಗಾಲಕ್ಕೆ ಟಾರು ಕಿತ್ತುಹೋಗಿ ಕೆಸರುಗುಂಡಿಗಳಾಗುತ್ತವೆ. ಕೊನೆಗೆ ಅಂತಹುದೇ ಒಂದು ರಸ್ತೆಯಲ್ಲಿ ಆ ಇಂಜಿನಿಯರ್ ಓಡಿಸುತ್ತಿದ್ದ ಕಾರು ಆಕ್ಸಿಡೆಂಟಾಗಿ ಆತ ಕಾಲು ಮುರಿದುಕೊಳ್ಳುವ ವಿಪರ್ಯಾಸವನ್ನು ಎಷ್ಟು ಚೆನ್ನಾಗಿ ವಿವರಿಸಿದ್ದೇನೆಂದರೆ….’
‘ಸಾಕು ನಿಲ್ಲಿಸು ತಂದೆ ನಿನ್ನ ಹರಿಕಥೆ. ನನ್ನ ಕಥೆಯನ್ನು ನನಗೇ ತಿರುಗಿಸಿ ಹೇಳ್ತೀಯಾ? ನಾನು ನಿರ್ಮಿಸಿದ ಕಳಪೆ ರಸ್ತೆಯಲ್ಲಿಯೇ ಕಾರು ಆಕ್ಸಿಡೆಂಟಾಗಿ ನನ್ನ ಕಾಲು ಮುರಿದಿದ್ದು’ ಎಂದು ಪಿಡಬ್ಲ್ಯುಡಿ ಇಲಾಖೆಯಲ್ಲಿ ಖುದ್ದು ಇಂಜಿನಿಯರ್ ಆಗಿರುವ ಗೆಳೆಯ ಲುಂಗಿ ಎತ್ತಿ ಗಾಯವಾಗಿದ್ದ ಮಂಡಿ ತೋರಿಸಿದ!
‘ಅದಕ್ಯಾಕೆ ಕೋಪ ಮಾಡಿಕೊಳ್ತೀಯಾ? ಹೋಗಲಿ ಬಿಡು. ನಾನು ಟಿವಿ ಸೀರಿಯಲ್‌ಗೆಂದು ಬರೆದಿದ್ದ ’ವಿಚ್ಛೇದನ’ ಎನ್ನುವ ಕಥೆ ಹೇಳುತ್ತೇನೆ ಕೇಳು. ಅದೊಂದು ಗಂಡ, ಹೆಂಡತಿ ಇಬ್ಬರು ಮಕ್ಕಳ ಪುಟ್ಟ ಸಂಸಾರ. ಗಂಡ, ಹೆಂಡತಿ ಇಬ್ಬರೂ ದುಡಿಯುತ್ತಿರುತ್ತಾರೆ. ಸಂಸಾರ ಸುಖವಾಗಿಯೇ ಸಾಗುತ್ತಿರುತ್ತದೆ. ಇದ್ದಕ್ಕಿದ್ದಂತೆ ಹೆಂಡತಿಗೆ ತನ್ನ ಕೆಲಸದಲ್ಲಿ ಪ್ರಮೋಶನ್ ಸಿಕ್ಕಿ ಗಂಡನ ಸಂಬಳಕ್ಕಿಂತ ದುಪ್ಪಟ್ಟು ಸಂಬಳ, ಸವಲತ್ತುಗಳು ಸಿಗುತ್ತವೆ. ಕ್ರಮೇಣ ಗಂಡನಿಗೆ ತಾನು ಮನೆಯ ಯಜಮಾನಿಕೆ ಕಳೆದುಕೊಳ್ಳುತ್ತಿದ್ದೇನೆಂಬ ಅಸುರಕ್ಷತೆ ಕಾಡುತ್ತದೆ. ಮಕ್ಕಳು ತನ್ನನ್ನು ಮೊದಲಿನಷ್ಟು ಗೌರವಿಸುತ್ತಿಲ್ಲ ಎಂದೆನ್ನಿಸುತ್ತದೆ. ಗಂಡ ಹೆಂಡತಿಯ ಮಧ್ಯೆ ಜಗಳಗಳು ಆರಂಭವಾಗಿ ಕೊನೆಗೆ ಒಬ್ಬರಿಗೊಬ್ಬರು ವಿಚ್ಛೇದನ ಕೊಡುವವರೆಗೆ ….’
‘ಲೋಫರ್ ನನ್ಮಗನೆ, ಇಂತಹ ಕಥೆಗಳನ್ನು ಬರೆದ್ರೆ ಯಾರೋ ಓದ್ತಾರೆ? ಸುಖ ಸಂತೋಷದ ಕಥೆಗಳನ್ನು ಬರಿ. ಸಮುದ್ರ ತೀರದಲ್ಲಿ ಗುಡಿಸಲು ಕಟ್ಟಿಕೊಂಡು ಬದುಕುತ್ತಿರುವ ಪ್ರೇಮಿಗಳಿಬ್ಬರು ಬೆಳದಿಂಗಳ ರಾತ್ರಿಯೊಂದರಲ್ಲಿ ಹುಚ್ಚರಂತೆ ಪ್ರೀತಿಸುತ್ತಿದ್ದರು ಎಂದು ಬರಿ. ಒಂದು ತುಂಬಿರುವ ಕುಟುಂಬದ ಕಥೆ ಬರಿ. ನಿನ್ನ ಈ ದರಿದ್ರ ಕಥೆಗಳನ್ನು ಕೇಳಿ ಕಿಕ್ ಎಲ್ಲಾ ಇಳಿದುಹೋಯ್ತಲ್ಲೋ.. ಮೊದಲೇ ನನ್ನ ಹೆಂಡತಿ, ಮಕ್ಕಳನ್ನು ತೌರಿಗೆ ಕಟ್ಟಿಕೊಂಡು ಹೋಗಿ ಇವತ್ತಷ್ಟೇ ಡಿವೋರ್ಸು ನೋಟೀಸ್ ಕಳಿಸಿದ್ದಾಳೆ. ಇವತ್ತೇ ಬಂದು ಕಥೆ ಹೇಳಬೇಕಿತ್ತೇನೋ ನೀನು ನನ್ನ ಹೊಟ್ಟೆ ಉರಿಸೋಕೆ.. ’ ಎಂದು ಕಿಡಿಕಿಡಿಯಾಗುತ್ತಾ ವಿಸ್ಕಿ ಗ್ಲಾಸನ್ನು ಟೀಪಾಯಿಯ ಮೇಲೆ ಕುಟ್ಟಿದನು!
‘ಸಮಾಧಾನ ಮಾಡಿಕೊಳ್ಳಪ್ಪ! ನಿನಗೆ ಬೇಸರವಾಗದ ಹಾಗೆ ಇನ್ನೊಂದು ಕಥೆ ಹೇಳುತ್ತೇನೆ. ಈ ಕಥೆ ನಿನಗೆ ಖಂಡಿತಾ ಇಷ್ಟವಾಗುತ್ತೆ. ಕಥೆಯ ಹೆಸರು ’ಬಿಡುಗಡೆ’ ಅಂತಾ. ಒಂದು ಹಳ್ಳಿಯಲ್ಲೊಬ್ಬ ದೊಡ್ಡ ಕನಸುಗಳಿರುವ ಬಡಹುಡುಗನೊಬ್ಬ ಇರುತ್ತಾನೆ. ಒಂದು ದಿನ ತನ್ನ ಬಡತನದ ಬಗ್ಗೆ ರೇಜಿಗೆ ಹುಟ್ಟಿ ಪಟ್ಟಣ ಸೇರುತ್ತಾನೆ. ಪಾರ್ಟ್‌ಟೈಮ್ ಕೆಲಸ ಮಾಡುತ್ತಾ, ಆ ದುಡ್ಡಿನಲ್ಲಿಯೇ ತನ್ನ ಓದು ಪೂರೈಸಿ ಕೈತುಂಬಾ ಸಂಬಳ ಸಿಗುವ ಉದ್ಯೋಗವೊಂದನ್ನು ಹಿಡಿಯುತ್ತಾನೆ. ಅದೇ ಕೆಲಸದಲ್ಲಿ ಮೇಲೇರುತ್ತಾ ಉನ್ನತ ಹುದ್ದೆಯೊಂದನ್ನು ತಲುಪುತ್ತಾನೆ. ಆದರೆ ಕ್ರಮೇಣ ತನ್ನ ಸುತ್ತಲಿನವರೆಲ್ಲಾ ತನ್ನನ್ನು ಕೇವಲ ಗೌರವಿಸುತ್ತಾರೆ, ಯಾರೂ ತನ್ನನ್ನು ಪ್ರೀತಿಸುವುದಿಲ್ಲ ಎಂದು ಅರಿವಾಗುತ್ತದೆ. ಒಂಟಿತನ ಕಾಡತೊಡಗುತ್ತದೆ. ಏರ್‌ಪೋರ್ಟ್‌ನ ಕ್ರೌಡಿನಲ್ಲಿ, ಗಿಜಿಗುಟ್ಟುವ ಶಾಪಿಂಗ್ ಮಾಲ್‌ಗಳಲ್ಲಿ, ಸಂಜೆಗತ್ತಲಿನ ಭಯಂಕರ ಟ್ರಾಫಿಕ್ಕಿನ ಮಧ್ಯೆ ಹೀಗೆ ಎಲ್ಲೆಲ್ಲಿಯೂ ತಾನು ಒಂಟಿ ಎನ್ನುವ ಅನಾಥ ಭಾವವೇ ಅವನನ್ನು ಕಿತ್ತು ತಿನ್ನುತ್ತದೆ. ಇಷ್ಟು ವರ್ಷ ತಾನು ದುಡಿದಿದ್ದೆಲ್ಲವೂ ನಿರರ್ಥಕ ಎನ್ನಿಸುತ್ತದೆ. ತಾನು ಒಂಟಿಯಾಗಿ ಬಾಳುತ್ತಿರುವ ದೆವ್ವದ ಬಂಗಲೆಯಂತಹ ಮನೆಯೊಳಗೆ ಯಾರಾದರೂ ಬಂದು ಒಂದೇ ಒಂದು ಕ್ಷಣವಾದರೂ ತನ್ನನ್ನು ಪ್ರೀತಿಸಬಾರದೇ ಎಂದು ಹಂಬಲಿಸುತ್ತಾನೆ. ಕೊನೆಗೊಂದು ದಿನ ತನ್ನ ದುಃಖದ ಭಾರವನ್ನು ಹೊರಲಾಗದೇ ಇದ್ದಾಗ ನೇಣು ಹಾಕಿಕೊಂಡು ಆತ್ಮಹತ್ಯೆ….’
ಗೆಳೆಯ ತನ್ನ ಕುತ್ತಿಗೆಗೆ ಸುತ್ತಿದ ಮಫ್ಲರನ್ನು ನಿಧಾನವಾಗಿ ಬಿಚ್ಚಿದ. ಅವನ ಕುತ್ತಿಗೆಯನ್ನು ಯಾರೋ ಬಲವಾಗಿ ಹಿಸುಕಿದ ಹಾಗೆ ರಕ್ತ ಹೆಪ್ಪುಗಟ್ಟಿ ಕಪ್ಪಾಗಿ ಹೋಗಿತ್ತು. ಅದನ್ನು ನೋಡುತ್ತಿದ್ದಂತೆಯೇ ಹೀರುತ್ತಿದ್ದ ವಿಸ್ಕಿಯ ಘಾಟಿಗೆ, ನನ್ನ ಎದೆ, ಕರುಳು, ಹೊಟ್ಟೆ ಬೆಂದು ಹೋದಂತೆನಿಸಿ ಕುರ್ಚಿಯಿಂದ ಎದ್ದೆ. ‘ಇನ್ನೊಂದು ಸಲ ಸಿಕ್ಕಾಗ ನನ್ನ “ಸತ್ತುಹೋದವನು” ಕಥೆಯನ್ನು ನಿನಗೆ ಹೇಳುತ್ತೇನೆ. ನಂಗೆ ಊರಲ್ಲಿ ಅರ್ಜೆಂಟು ಕೆಲಸವಿದೆ. ನಾನಿನ್ನು ಹೊರಡುತ್ತೇನೆ’ ಎಂದು ಅವನತ್ತ ತಿರುಗಿಯೂ ನೋಡದೆ ದಡಬಡಿಸುತ್ತಾ ಅವನ ಮನೆಯಿಂದ ಹೊರಗೆ ಓಡಬೇಕೆನ್ನುವಷ್ಟರಲ್ಲಿ….
 

‍ಲೇಖಕರು G

25 April, 2015

7 Comments

  1. Guruprasad

    creative story , liked the way it began and ended with small stories . the writer has done a good job in building the story . hope he writes more with same zeal , all the best Saviraj

  2. ಅಕ್ಕಿಮಂಗಲ ಮಂಜುನಾಥ

    ಲೇಖನ ಚೆನ್ನಾಗಿದೆ

  3. ಜಯರಾಮಚಾರಿ

    ತುಂಬಾ ಚೆನ್ನಾಗಿದೆ ಇತ್ತೀಚೆಗೆ ಓದಿದ ಒಂದು ಒಳ್ಳೆ ಕತೆ ಇದಾಗಿದೆ

  4. sunilkumar

    ಕಥೆ ಪ್ರಾರ೦ಭ,ಅ೦ತ್ಯ, ಅದರೊ೦ದಿಗೆ ಹಾಸ್ಯ ಲೇಪನ ತು೦ಬಾ ಚೆನ್ನಾಗಿದೆ.

  5. anamika

    ಚೆನ್ನಾಗಿದೆ ಚೆನ್ನಾಗಿದೆ 🙂

  6. ಜೆ.ವಿ.ಕಾರ್ಲೊ

    ತುಂಬಾ ಚೆನ್ನಾಗಿತ್ತು.

  7. Anil Talikoti

    ಕಥಾ ಸಂಗಮ ಚೆನ್ನಾಗಿದೆ , ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading