ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಣ್ಣಕಥೆ ’ಅಂತರಾಳ’

– ಆದರ್ಶ ವಸಿಷ್ಟ

ಮುಂಜಾವಿನ ಸೂರ್ಯರಶ್ಮಿ ಹೆಮ್ಮರಗಳ ಎಲೆಯ ಹಂದರವನ್ನು ಸೀಳಿಕೊಂಡು, ಕಿಟಕಿಯಿಂದ ಹೊರಚಾಚಿದ್ದ ನನ್ನ ಕೈಗಳ ಮೇಲೆ ತೊಗಲುಗೊಂಬೆ ಆಟ ಆಡುತಿತ್ತು. ತಿರುವನಂತಪುರದಲ್ಲಿರುವ ನನ್ನ ಗೆಳೆಯನನ್ನು ಭೇಟಿಯಾಗಿ ರೈಲಿನಲ್ಲಿ ಹಿಂತಿರುಗುತ್ತಿದ್ದೆ. ಹೊರಡುವಾಗ ಇದ್ದ ಉತ್ಸಾಹ ಬತ್ತಿ ಹೋಗಿತ್ತು, ನೆನಪಿನ ಮೂಟೆ ಬೆನ್ನು ಹತ್ತಿತ್ತು. ಕಿಟಕಿಯಿಂದಾಚೆ ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ ನೆನಪಿನ ಲಹರಿಯನ್ನು ಹರಿಯಬಿಟ್ಟಿದ್ದೆ. ಅರೆಮನಸ್ಕನಾಗಿದ್ದ ನನ್ನನ್ನು ಯಾರೋ ಕೂಗಿ ಕರೆದಂತಾಗಿ ಎಚ್ಚರಗೊಂಡೆ. ಎದುರು ನಿಂತಿದ್ದ ಹುಡುಗ, ನಾಸ್ಟಾ ಸಾರ್….. ಅಂದ. ಹಾ!!!…..ಕೊಡು ಎಂದು ಇಸಿದುಕೊಂಡು, ನಾನೇ ಆರ್ಡರ್ ಮಾಡಿದ್ದರೂ ಮರತುಹೋಗಿದ್ದ ಇಡ್ಲಿ ತಿಂದು, ಮತ್ತೆ ನೆನಪಿನ ದೋಣಿಯನ್ನು ತೇಲಿಬಿಟ್ಟೆ. ರೈಲಿನ ಹೊರಗೆ ಕಾಣುತ್ತಿದ್ದ ಸುಂದರ ಮರಗಳ ಸಾಲಿನ ಮೇಲೆ ಗಮನ ಹರಿಯಿತು. ನೂರಾರು ವಸಂತಗಳ ಗಾಳಿ, ಮಳೆಯ ಹೊಡೆತ ತಿಂದರೂ ಜಗ್ಗದೆ, ಕುಗ್ಗದೆ ನಿಂತಿರುವ ಅವುಗಳ ತಾಳ್ಮೆ, ಸ್ಥಿರತೆ ಕಂಡು ಮನಸ್ಸಿನಲ್ಲಿ , ನಾವೇಕೆ ಹೀಗಿಲ್ಲ… ಕಷ್ಟಗಳು ನಮಗಷ್ಟೆಯೇ? ಮರಗಳೂ ನಮ್ಮಂತೆಯೇ ಅಲ್ಲವೇ… ಅವುಗಳ ಗೋಳು ಕೇಳೋರು ಯಾರು? ಎಂದುಕೊಂಡೇ ಕಿಟಕಿಗೆ ಒರಗಿ ಹಾಗೇ ಕಣ್ಣು ಮುಚ್ಚಿದೆ.
ಇದ್ದಕ್ಕಿದ್ದಂತೆ ರೈಲು ‘ಧಢಕ್’ ಎಂದು ನಿಂತುಹೋಯಿತು. ಇದೇಕಪ್ಪಾ… ಈ ಹಾಳು ರೈಲು ಕಾಡ ಮಧ್ಯೆ ಹೀಗೆ ನಿಂತುಕೊಂಡಿತು ಎಂದು ಗೊಣಗುತ್ತಾ ಎದ್ದು ಬೋಗಿಯ ಬಾಗಿಲ ಬಳಿ ಬಂದೆ. ಗಾರ್ಡ್ನ ಮಾತು ಕಿವಿಗೆ ಬಿತ್ತು…. , ಅಯ್ಯೋ…. engine breakdown ಆಗೋಗಿದೆ…. ಸಕಲೇಶಪುರದಿಂದ engine ಬರಬೇಕು…. ಅಲ್ಲಿವರೆಗೂ ಇಲ್ಲೇ…. ಎಂದು ಗೊಣಗುತ್ತಿದ್ದ. ನನಗೇನೂ ಣಡಿಡಿಥಿ ಇರಲಿಲ್ಲ. ಆದಷ್ಟು ಟೈಮ್ ಆಗ್ಲಿ ಬಿಡು, ಈ ಪ್ರಕೃತಿ ಸೌಂದರ್ಯವನ್ನಾದರೂ ಸ್ವಲ್ಪ ಹೊತ್ತು ಸವಿಯೋಣ ಅಂತ ರೈಲಿನಿಂದ ಕೆಳಗಿಳಿದು ನಿಧಾನವಾಗಿ ಕಾಡಿನತ್ತ ಹೆಜ್ಜೆ ಹಾಕತೊಡಗಿದೆ. ಸ್ವಲ್ಪ ಹೊತ್ತಿನಲ್ಲೇ, ಅಮ್ಮಾ….. ಎನ್ನುತ್ತಾ ನೆರಳುವ ಧ್ವನಿ ಕೇಳಿಸಿತು. ಇದೇನಪ್ಪಾ ಕಾಡಲ್ಲಿ ನೆರಳುವ ಧ್ವನಿಯೇ…..!!!! , ಎಂದು ಮೊದಲು ಅದರತ್ತ ಲಕ್ಷ್ಯ ಕೊಡಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಅದೇ ಪುನರಾವರ್ತನೆ…. ಈ ಬಾರಿ ಇನ್ನೂ ಜೋರು ಧ್ವನಿಯಲ್ಲಿ. ನಾನು ಯಾರೋ ಗಾಯಗೊಂಡು ಬಿದ್ದಿರಬೇಕು, ಏನಿದು ನೋಡೇಬಿಡೋಣ ಎಂದು ಹೊರಟೆ. ಧ್ವನಿಯ ಜಾಡು ಹಿಡಿದು ಹೊರಟಿದ್ದ ನನಗೆ ಒಂದು ಆಶ್ಚರ್ಯ ಕಾದಿತ್ತು. ಬುಡಕಡಿದು ಬಿದ್ದಿದ್ದ ಮರವೊಂದು, ಅಮ್ಮಾ…… ಎಂದು ನರಳುತಿತ್ತು. ಅಯ್ಯೋ!!!!!, ಇದೇನಪ್ಪಾ….. ಮರ ಎಲ್ಲಾದರೂ ಮಾತನಾಡುವುದುಂಟೇ!!!, ಥೂ….. ನನಗೆಲ್ಲೋ ಭ್ರಾಂತಿ, ಎಂದುಕೊಂಡೆ. ಆದರೂ, ಕುತೂಹಲ…. ಬಿಡಬೇಕಲ್ಲ…. ಏನದು ನೋಡೇಬಿಡೋಣ, ಅಂತ ಹತ್ತಿರ ಹೋಗಿ ಖಾತ್ರಿ ಪಡಿಸಿಕೊಡ ಮೇಲಷ್ಟೇ ತಿಳಿದಿದ್ದು, ಹೌದು….. ಮರ ಮಾತನಾಡುತ್ತಿದೆ. ಧೀರ್ಘವಾದ ರೆಂಬೆ, ಕೊಂಬೆಗಳಿಂದ ಕೂಡಿದ ಮುದಿ ವೃಕ್ಷದ ಹತ್ತಿರ ಹೋಗುತ್ತಿರುವಾಗಲೇ, ಬಂದೆಯಾ…… ಮತ್ತೆ ಬಂದೆಯಾ…., ಇನ್ನೆಷ್ಟು ನಾಶ ಮಾಡಬೇಕು ಎಂದು ಭಾವಿಸಿದ್ದೀಯಾ…. ಎಲ್ಲಾ ಮುಗಿಯಿತಲ್ಲಾ….. ನಿನ್ನ ದುರಾಸೆಗೆ ನಾನೂ ಬಲಿಯಾದೆನಲ್ಲಾ….. ಎಂದು ಗೋಳಿಟ್ಟಿತು. ನನಗೆ ಆಶ್ಚರ್ಯ, ಗಾಬರಿ, ಹೆದರಿಕೆ ಎಲ್ಲಾ ಒಮ್ಮಲೇ ಆದವು. ಹತ್ತಿರ ಹೋಗಿ ಮಂಡಿಯೂರಿ ಕುಳಿತು, ಸಮಾಧನಕರ ರೀತಿಯಲ್ಲಿ ಕೇಳತೊಡಗಿದೆ. ಸ್ವಲ್ಪ ಹೊತ್ತಿನ ಮಾತುಕತೆಯಿಂದ ಗೊತ್ತಾಗಿದ್ದಿಷ್ಟು…..

ಅವನದು ಅದ್ಭುತ ಪ್ರಪಂಚ. ತನ್ನೊಡನೆ ಹುಟ್ಟಿದ ಒಡನಾಡಿಗಳ ಜತೆ ಸುಂದರ ಸ್ನೇಹ. ಅವನ ವಿಶಾಲ ರೆಂಬೆಗಳಲ್ಲಿ ನೂರಾರು ಪಕ್ಷಿಗಳ ವಾಸ. ಜೀವನದ ಮಧುರ ವೀಣೆಯನ್ನು ಮೃದುವಾಗಿ ಮೀಟುತ್ತಾ ಸಾಗುತ್ತಿತ್ತು, ಅವರ ಜೀವನ. ಇದ್ದಕ್ಕಿದ್ದಂತೆ ಅವರ ಜೀವನದ ಮೇಲೆ ದುಷ್ಟ ಕಾರ್ಮೋಡಗಳು ಕವಿತುಕೊಳ್ಳಲಾರಂಭಿಸಿದವು. ನೆಲದಲ್ಲಿನ ಥಂಢಿ ಹೆಚ್ಚಾಗತೊಡಗಿತು. ಸ್ವಲ್ಪ ದಿನಗಳ ನಂತರ, ನೆಲದ ಮೇಲೆ ನೀರು ನಿಲ್ಲಲು ಆರಂಭವಾಯಿತು. ಆ ಶೀತಕ್ಕೆ ತನ್ನ ಸಹೋದರರನ್ನು ಕಳೆದುಕೊಳ್ಳಬೇಕಾಗಿ ಬಂತು. ನೂರಾರು ಮರಗಳು ಬೇರು ಕೊಳೆತು ನೆಲಕ್ಕೆ ಬಾಗಿದವು. ಇದು ಪಕ್ಕದಲ್ಲೇ ಹರಿಯುವ ಕೆಂಪುಹೊಳೆ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟಿನ ಪರಿಣಾಮ. ಅದರ ಹಿನ್ನೀರಿನಲ್ಲಿ ಹೆಕ್ಟೇರುಗಟ್ಟಲೆ ಅರಣ್ಯನಾಶ ಆಯಿತು. ಇಷ್ಟಕ್ಕೇ ನಿಲ್ಲಲಿಲ್ಲ….. ಇನ್ನಷ್ಟು ದಿನಗಳ ಬಳಿಕ, ಢಮಾರ್….. ಎನ್ನುವ ಆಸ್ಫೋಟನೆಯ ಶಬ್ದ ಕೇಳತೊಡಗಿತು. ದಿನಗಳೆದಂತೆ ಅದು ಹೆಚ್ಚಾಗುತ್ತಾ ಸಾಗಿತು. ದೂರದಲ್ಲಿನ ಗ್ರಾನೈಟ್ ಗಣಿಗಾರಿಕೆಯ ಡೈನಮೈಟ್ ಆಸ್ಫೋಟನೆಯ ಶಬ್ದವದು. ಇದು ಅವನ ಮಕ್ಕಳನ್ನು ಬಲಿತಗೆದುಕೊಂಡಿತು. ಈ ಎಲ್ಲಾ ಜೀವಹಿಂಡುವ ಕೃತ್ಯಗಳಿಂದ ಜರ್ಝರಿತವಾಗಿದ್ದ ಮುದಿ ಜೀವ, ಇಂದು ಮರಕಡಿಯುವ ಧೂರ್ತನ ಕೊಡಲಿಯಂಚಿಗೆ ಆಹುತಿಯಾಗಿ ಹೋಗಿತ್ತು. ಗದ್ಗದಿತ ಧ್ವನಿಯಲ್ಲಿ ತನ್ನ ವ್ಯಥೆ ಬಿಚ್ಚಿಟ್ಟ ಮರರಾಯ ಕೊನೆಯುಸಿರೆಳೆದ. ಮನುಷ್ಯನ ಈ ಧೂರ್ತತನವನ್ನು ನೆನೆದ ನನ್ನ ಕಣ್ಣಂಚಲ್ಲಿ ನೀರಿತ್ತು.
ಸಾರ್…. ಸಾರ್…. ಸಕಲೇಶಪುರ ಬಂತು….. ಇಳಿಯಲ್ವಾ ಸಾರ್….., ಎಂದು ಎದುರು ಸೀಟಿನಲ್ಲಿ ಕೂತಿದ್ದ ಹುಡುಗಿ ಎಬ್ಬಿಸುತ್ತಿದ್ದಾಳೆ. ನನಗೆ ಏನು ನಡೆಯುತ್ತಿದೆ ಎಂದೇ ತೋಚಲಿಲ್ಲ. ಹಾಗಾದರೇ ನಾನು ಕಂಡದ್ದೆಲ್ಲಾ ಕನಸೇ??? ಎಂದುಕೊಂಡೇ ರೈಲಿನಿಂದ ಕೆಳಗಿಳಿದೆ. ರೈಲುಗಾಡಿ ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ನಿಂತಿತ್ತು. ಒಮ್ಮೆ ಕಾಡಿನತ್ತ ಕಣ್ಣು ಹಾಯಿಸಿದೆ. ಕಾಡು ನನ್ನತ್ತ ಬರಬೇಡಿ ಎಂದು ಕೈ ಬೀಸುತ್ತಿರುವಂತೆ ಭಾಸವಾಯಿತು. ಮನುಷ್ಯ ತನ್ನ ದುರಾಸೆಗಾಗಿ ಕಾಡನ್ನು ಇಷ್ಟರಮಟ್ಟಿಗೆ ದುರುಪಯೋಗಪಡಿಸಿಕೊಳ್ಳುತ್ತಾ ಬಂದಿರುವುದನ್ನು ನೆನೆದೆ, ಒಮ್ಮೆ ಮುಖದ ಮೇಲೆ ಅಸಹಾಯಕತೆಯ, ಕ್ರೋಧದ ಹುಸಿ ನಗು ಮಿಂಚಿ ಮರೆಯಾಯ್ತ. ನನ್ನ ಬಗ್ಗೆ ನನಗೇ ಅಸಹ್ಯ ಉಂಟಾಯ್ತು. ಕೈಗಡಿಯಾರ ನೋಡಿಕೊಂಡೆ. ಸಂಜೆ 4:15 ತೋರಿಸುತ್ತಿತ್ತು. ಸಣ್ಣಗೆ ಜಿನುಗುವ ಮಳೆಯಲ್ಲೇ ನನ್ನ ಬ್ಯಾಗು ಹಿಡಿದು, ಅಣ್ಣಾವ್ರ ಹಾಡು,
ಏನೆಂದು ನಾ ಹೇಳಲೀ……
ಮಾನವನಾಸೆಗೆ ಕೊನೆಯೆಲ್ಲಿ…..
ಗುನುಗುತ್ತಾ ಮನೆ ಕಡೆ ಹೆಜ್ಜೆ ಹಾಕತೊಡಗಿದೆ. ಕಾಡಿನ ನೀರವ ಮೌನ ನನ್ನ ಮನಸ್ಸಿಗೂ ಆವರಿಸಿತ್ತು.
 
 

‍ಲೇಖಕರು G

12 March, 2015

1 Comment

  1. nishkala gorur

    ಮರ ಮಾತಾಡುವ ನಿಮ್ಮ ಪರಿಕಲ್ಪನೆ ಸೊಗಸಾಗಿದೆ….. ನಾವು ಪ್ರಕೃತಿಯನ್ನು ನಮ್ಮ ಕೈಲಾದಷ್ಟು ಹಾಳುಗೆಡವಿದ್ದಾವೆ…. ಒಂದು ಜೀವಿ ತನ್ನ ಮೇಲೆ ಆಗುವ ದೌಜಱನ್ಯವನ್ನು ಎಷ್ಟು ಸಹಿಸ ಬಹುದು…. ಒಂದಲ್ಲ ಒಂದು ದಿನ ಅದು ತಿರುಗಿಬೀಳದೇ ಇರದು…. ಹಾಗೇ ಮನುಷ್ಯನ ಈ ಅತಿರೇಕದ ಹಿಂಸೆ ತಾಳಲಾರದೇ ಮರವೂ ಕೊಡ ಮಾತಾಡುವುದರಲ್ಲಿ ಏನು ಆಶ್ಚರ್ಯವಿಲ್ಲ……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading