'ಮಲೆಗಳಲ್ಲಿ ಮದುಮಗಳು' – ಒಂದು ದೃಶ್ಯಕಾವ್ಯ

– ಶಿವಪ್ರಕಾಶ್

ಕಾದಂಬರಿಯೊಂದನ್ನು ಕೇವಲ ಉದ್ದದ ಕಥೆಯೆಂದುಕೊಂಡು ಓದುವ ಹೈಸ್ಕೂಲು ದಿನಗಳಲ್ಲಿ ಮದುಮಗಳನ್ನು ಮೊದಲ ಬಾರಿಗೆ ಓದಿದ ನೆನಪು. ಕಥನನೇಯ್ಗೆಗೆ ಹೇಳಿ ಮಾಡಿಸಿದ ಕುವೆಂಪು ಅಲ್ಲಲ್ಲಿ ಬರುವ so called ‘ಉಪಕಥೆ’ಗಳನ್ನೂ, ಪ್ರಾಣಿಗಳನ್ನೂ, ‘ಸಸ್ಯವೈವಿಧ್ಯ’ವನ್ನೂ ಪಾತ್ರಧಾರಿಗಳಾಗಿ ಸಂಯೋಗಿಸಬಲ್ಲರು. ಇತ್ತೀಚೆಗೆ ಕಳೆದ ಹತ್ತು ವರ್ಷಗಳಲ್ಲಿ ಮತ್ತೆ ಮತ್ತೆ ಮದುಮಗಳನ್ನು ಓದಿದಾಗ ಬಹುತೇಕ ಸಂದರ್ಭಗಳಲ್ಲಿ, ಈ ಕಾದಂಬರಿಯ ಸಾರ್ವತ್ರಿಕ ಸಮಕಾಲೀನತೆಯನ್ನು ಕಂಡು ಬೆರಗಾಗಿದ್ದೇನೆ. ಇಂಥ ಕುವೆಂಪು ಕಡೆದ ಶಿಲ್ಪಕ್ಕೆ, ಕೆ ವೈ ಎನ್, ಹಂಸಲೇಖ, ಬಸವಲಿಂಗಯ್ಯ ನವರಂಥವರು ಜೀವ ತುಂಬಿರುವುದು ಈ ನಾಡಿನ ಸೌಭಾಗ್ಯ.
ಇಡೀ ಕಾದಂಬರಿಯ ಮೂಲವೈಶಿಷ್ಟ್ಯಗಳಾದ ಜಾತಿವ್ಯವಸ್ಥೆ, ಧರ್ಮಾಂಧತೆ, ಆಧುನಿಕತೆಯ ಸುಖ ಲೋಲುಪತೆ, ಆಗಷ್ಟೇ ಶುರುವಾದ ಜಾಗತೀಕರಣದ ಟಿಸಿಲುಗಳನ್ನು ಒಂದಿಂಚೂ ಅತ್ತಿತ್ತ ಜಾರದಂತೆ ಕೆ ವೈ ಎನ್ ನಿರೂಪಿಸಿದ್ದಾರೆ. ಶಕ್ತಿಯುತವಾಗಿ ಶರೀರ ಮತ್ತು ಶಾರೀರಗಳನ್ನು ಎಲ್ಲೂ ಸಹ ಭಾವಭಂಗ ತರದಂತೆ ರಂಗಕ್ಕೆ ಸಮರ್ಪಿಸಿಕೊಂಡಿರುವ ಅಷ್ಟೂ ನಟ-ನಟಿಯರಿಗೆ ಸಾಷ್ಟಾಂಗ ನಮಸ್ಕಾರಗಳೊಂದಿಗೆ ಅಭಿನಂದಿಸಬೇಕಿದೆ.

ಎಲ್ಲಕ್ಕಿಂತ ನನ್ನನ್ನು ಕಾಡಿದ್ದು ಸಮರ್ಥವಾಗಿ ಬಿಂಬಿತವಾಗಿರುವ ಸಹಜಸದೃಶ ಸ್ತ್ರೀನೋಟ. ನಾಟಕದ ಮೂಲವಸ್ತುವಾಗಿರುವ ‘ಮಗಳು’ ಅನೇಕ ರೂಪಗಳಲ್ಲಿ ಚಿತ್ರಿತವಾದರೂ, ಅಷ್ಟೊಂದು ಪುರುಷ ‘ಪರಜೀವಿ’ಗಳ ನಡುವೆ, ಕಾದಂಬರಿಗಿಂತಲೂ ಒಂದು ತೂಕ ಹೆಚ್ಚಾಗಿಯೇ ನಾಟಕದಲ್ಲಿ ಕೇಂದ್ರಬಿಂದುವಾಗಿ ನಿಲ್ಲುತ್ತಾಳೆ. ವಿಸ್ಮಯವೆಂದರೆ, ನಾಟಕ ನೋಡಿದವರಲ್ಲಿ ಸರಿಸುಮಾರು ಅರ್ಧದಷ್ಟು ಹೆಂಗಳೆಯರೇ ಇದ್ದುದು. ಬಯಲುರಂಗದಲ್ಲಿ ತಿಮ್ಮಿಯ ತಾಯಿ ಸೇಸಿ, ಅಟ್ಟಾಡಿಸಿಕೊಂಡು ಹೊಡೆವ ಗಂಡನಿಗೆ ಗುಟುರು ಹಾಕುವ ಸನ್ನಿವೇಶ ನೋಡುತ್ತಿದ್ದ ಎಲ್ಲ ಸ್ತ್ರೀಸಂಕುಲವೂ ಸಿಳ್ಳೆ ಹಾಕಿ, ಹೋ ಎಂದು ಅವಳಿಗೆ ಬೆಂಬಲಿಸಿದ್ದು, ನಮ್ಮ ದೇಶ ನಿಜಸ್ವಾತಂತ್ರ್ಯದತ್ತ ನಡೆಯುವಂತಿತ್ತು. ಕೆಲವು ವಿಕೃತ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗುವ ಮತ್ತೊಬ್ಬ ಮದುಮಗಳು ಕಾವೇರಿ, ಬಾವಿಗೆ ಹಾರವಾಗುವ ದೃಶ್ಯ ಎಲ್ಲರ ಕಣ್ಣುಗಳಲ್ಲೂ ನಿರ್ಭಯಳನ್ನು ತೋಯಿಸಿದವು.ಅಮುಖ್ಯರೆಂದು ಅಪಕೀರ್ತಿಗೊಳಪಟ್ಟ ಅಕ್ಕ, ತಂಗಿ, ತಾಯಂದಿರ ರಣರೂಪಗಳನ್ನು ಅದ್ಭುತವಾಗಿ ಸಾಕ್ಷಾತ್ಕರಿಸಿರುವ   ಕೆ ವೈ ಎನ್ ರಿಗೂ ಮತ್ತು ಅಭಿನಯಿಸಿರುವ ಎಲ್ಲ ಹೆಣ್ಣುಮಕ್ಕಳಿಗೂ ನನ್ನ ಆಂತರ್ಯದ ನಮನಗಳು.
ಅಚ್ಚರಿಯೆನಿಸಿದ್ದು, ಕುವೆಂಪು ಪದಪದಗಳಲ್ಲೂ ಛಾಪಿಸಿರುವ ಪ್ರಕೃತಿಯ ರಮ್ಯ ವರ್ಣನೆ ನಾಟಕದಲ್ಲಿ ಕಡಿಮೆಯಾದಂತಿರುವುದು. ಕೆಲವು ಗೀತರೂಪಕಗಳಲ್ಲಿ ಕಾಣಸಿಗುವ ಈ ಚಿತ್ರಿಕೆ, ಹಂಸಲೇಖರ ಸ್ಪರ್ಶವಿದ್ದರೂ ಸಹ ಅಷ್ಟೊಂದು ಪರಿಣಾಮಕಾರಿಯಾಗಿ ತಟ್ಟಲಿಲ್ಲ. ಬಹುಷಃ ಇದಕ್ಕಿದ್ದ ಕಾರಣವೆಂದರೆ, ನಾವು ನಾಟಕ ನೋಡಿದ ದಿನ ಸ್ವಲ್ಪ ಮಳೆ ಸುರಿದಿದ್ದರಿಂದಲೋ ಏನೋ, ‘ಧ್ವನಿ’ ವ್ಯವಸ್ಥೆ ಸ್ವಲ್ಪ ಮಂಕಾದಂತಿತ್ತು. ಮೊದಲ ವೇದಿಕೆ ‘ಸಮುಚ್ಚಯರಂಗ’ ಅಂದು ತುಂಬಿ ತುಳುಕಾಡಿ ಹೊರಚೆಲ್ಲಿ, ಆರೆಂಟು ಪ್ರೇಕ್ಷಕ ಸಾಲುಗಳು ಅಕ್ಷರಶಃ ‘ರಂಗಪ್ರವೇಶ’ ಮಾಡಿಬಿಟ್ಟಿದ್ದವು. ನಿಗದಿತ ಸಂಖ್ಯೆಗಿಂತ ಅತಿಯಾಗಿ ಟಿಕೆಟ್ ಗಳನ್ನು ಮಾರಿದ್ದರಿಂದ, ನಾಟಕ ಶುರುವಾಗಿ ಗಂಟೆಯಾದರೂ ‘ಪ್ರವೇಶಿಸಲು’ ಸಾಧ್ಯವಾಗಲಿಲ್ಲ. ಕೆಲವು ಪ್ರೇಕ್ಷಕರ ಸಂವೇದನೆಯ ಕೊರತೆಯೂ ಇದಕ್ಕೆ ಕಾರಣವಾಗಿ ರಂಗಶಂಕರದ ಬೆಲ್ಲಿನ ಶಿಸ್ತು ಬೇಕೆನಿಸುವಂತಾಯಿತು. ಆದರೂ, ಗುತ್ತಿ ಅಕ್ರಮ ರಂಗಪ್ರೇಕ್ಷಕರ ನಡುವೆಯೂ ಹುಲಿಯನನ್ನು ಸಂಭಾಳಿಸಲು ಪ್ರಯತ್ನಿಸುತ್ತಿದ್ದುದು ಅಪ್ಯಾಯಮಾನವಾಗಿತ್ತು.
ಬೆಂಗಾಡಾಗಿದ್ದ ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ನಮ್ಮ ರಂಗಪ್ರೀತಿಯ ಮನಸ್ಸುಗಳು ಅಚ್ಚಕನ್ನಡದ ಮಗಳನ್ನು ಅರಳಿಸಲು ಬಳಸಿಕೊಂಡಿರುವುದು ನಾವು ಬದುಕಿರುವ ಕಾಲಘಟ್ಟದ ಸುಕೃತ. ಎಲ್ಲ ಸಹ-ಸಹಾಯಕ ನಿರ್ದೆಶಕರುಗಳಿಗೂ, ತಂತ್ರಜ್ಞರಿಗೂ, ಕೆರೆ-ದಿಬ್ಬ-ನೆತ್ತಿ ನಿರ್ಮಿಸಿದ ರಂಗಕರ್ಮಿಗಳಿಗೂ, ಅಮಿತೋತ್ಸಾಹದಿಂದ ಕೊರೆವ ಚಳಿಯಲ್ಲಿ ರಾತ್ರಿಯಿಡೀ ನಮ್ಮ ಮನಸ್ಸುಗಳಿಗೆ ಪ್ರಫ಼ುಲ್ಲತೆಯನ್ನೂ, ಆರ್ದ್ರತೆಯನ್ನೂ ತಂದುಕೊಟ್ಟ ಎಲ್ಲ ಮುಖ್ಯಾಮುಖ್ಯ ಅಂತಃಕರಣದ ಅಣುಗಳಿಗೂ, ಸಹಸ್ರ ಸಹಸ್ರ ವಂದನೆಗಳು.
 

‍ಲೇಖಕರು G

March 12, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. R.S.Shashidhar

    shivanna…. superrr….
    but i am waiting to see an article which comes with NIRMOHA…
    yellarroo bahushaha kuvempu avarinda apaaravaagi prabhavitharaagiruvavare.. matthu MMM yennuva eee saahasada pari kandu beragagiruvavare.. nodona.. kaayonaa..

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಸರ್, ನನಗೂ ಮಗಳನ್ನು ನೋಡುವ ಕಾಲ ಸನ್ನಿಹಿತವಾಗಿದೆ..ಧನ್ವವಾದ ಬಹುಶ: ಶನಿವಾರದಂದು ಸಮಯಾವಕಾಶ ಸಾಕಾರವಾದರೆ…..ನಿಮ್ಮ ನೆನೆಕೆ ನಮ್ಮದೂ ಸಹ…

    ಪ್ರತಿಕ್ರಿಯೆ
  3. Venkataswamy

    ಕನ್ನಡಿಗರು ಕಲಾಸಾಹಸಿಗಳು ಅನ್ನುವುದಕ್ಕೆ ಇನ್ನೊಂದು ಉದಾಹರಣೆ ‘ಮಲೆಗಳಲ್ಲಿ ಮದುಮಗಳು’ – ವಿಶಿಷ್ಟ ರಂಗ ಪ್ರಯೋಗ.

    ಪ್ರತಿಕ್ರಿಯೆ
  4. Anonymous

    ಮಲೆಗಳಲ್ಲಿ ಮದುಮಗಳು ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  5. ಮೀನಾವತಿ

    ಮಲೆಗಳಲ್ಲಿ ಮದುಮಗಳು ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: