ಅಮ್ಮನ ಪಟ್ಟೆ ಮತ್ತು ಗೆಳೆಯ ಎನ್.ಮಹೇಶ್
ಕೇಶವರೆಡ್ಡಿ ಹಂದ್ರಾಳ
ಮೊನ್ನೆ ನನ್ನ ಮಗ ಕ್ರಾಂತಿ ತನ್ನ ತೋಳಿನ ಮೇಲೆ ದೊಡ್ಡದೊಂದು ಟ್ಯಾಟೂ ಹಾಕಿಸಿಕೊಂಡು ಬಂದಿದ್ದ . ಅದನ್ನು ನೋಡಿ ನಾನು ನನ್ನ ತೋಳಿನ ಮೇಲೆ ಇದ್ದ ಅಮ್ಮನ ಪಟ್ಟೆಯನ್ನು ತೋರಿಸುತ್ತಾ ” ಈ ಟ್ಯಾಟೂ ಮುಂದೆ ನಿನ್ ಟ್ಯಾಟೂ ಯಾವ್ ಲೆಕ್ಕ ಹೋಗಲೇ …” ಎಂದಿದ್ದೆ .
ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಆರೋಗ್ಯ ಇಲಾಖೆಯವರು ಆರುತಿಂಗಳಿಗೋ ವರ್ಷಕ್ಕೊಮ್ಮೆಯೋ ಎಲ್ಲಾ ಊರುಗಳಲ್ಲಿ ಕ್ಯಾಂಪ್ ಮಾಡಿ ಮಕ್ಕಳಿಗೆ ರೋಗ ನಿರೋಧಕ ಚುಚ್ಚುಮದ್ದು ಹಾಕುತ್ತಿದ್ದರು . ಆ ಚುಚ್ಚುಮದ್ದು ಹಾಕುವಾಗ ನೋವಾಗುತ್ತಿತ್ತಲ್ಲದೆ ವಾರದಲ್ಲಿ ದೊಡ್ಡ ಗಾಯಗಳಾಗುತ್ತಿದ್ದವು .ಅಂಥ ಗಾಯಗಳಿಗೆ ಹಚ್ಚಲು ಔಷಧಿ ಪುಡಿಯನ್ನೂ ಕೊಟ್ಟು ಹೋಗುತ್ತಿದ್ದರು .
ಆ ಚುಚ್ಚುಮದ್ದು ಪ್ರಧಾನವಾಗಿ ಸಿಡುಬು ಖಾಯಿಲೆ ( ಸಿಡುಬು ಖಾಯಿಲೆಯನ್ನು ನಮ್ಮ ಹಳ್ಳಿಗಳ ಕಡೆ ಅಮ್ಮ ಎನ್ನುತ್ತಿದ್ದರು . ಹೆಣ್ಣು ದೇವರು ಸಿಟ್ಟಾದರೆ ಸಿಡುಬು ಬರುತ್ತದೆಂಬ ನಂಬಿಕೆ . ) ನಿಯಂತ್ರಣಕ್ಕೆ ಹಾಕುತ್ತಿದ್ದರು . ಸಾಮಾನ್ಯವಾಗಿ ಮೂರು ಕಡೆ ಚುಚ್ಚುತ್ತಿದ್ದ ಜಾಗಗಳಲ್ಲಿ ಅಗಲವಾದ ಪಟ್ಟೆಗಳಂತೆ ಖಾಯಂ ಆಗಿ ಕಲೆ ಉಳಿದುಕೊಂಡುಬಿಡುತ್ತಿತ್ತು . ಎಂಬತ್ತರ ಮೊದಲ ಭಾಗದವರೆಗೂ ಹುಟ್ಟಿದವರಲ್ಲಿ ಹೆಣ್ಣು ಗಂಡು ಭೇದವಿಲ್ಲದೆ ಇಂಥ ಪಟ್ಟೆಗಳನ್ನು ಕಾಣಬಹುದು . ‘ಅಮ್ಮ’ ಖಾಯಿಲಿಗೆ ಸಂಬಂಧ ಪಟ್ಟಿದ್ದರಿಂದ ಇವನ್ನು ಅಮ್ಮನಪಟ್ಟೆ ಎಂದೇ ಕರೆಯಲಾಗುತ್ತಿತ್ತು.
ಇಂಥ ಕ್ಯಾಂಪ್ ಸಾಮಾನ್ಯವಾಗಿ ಶಾಲೆಯ ಆವರಣದಲ್ಲಿ ಬೀಡು ಬಿಡುತ್ತಿತ್ತಲ್ಲದೆ ಅವರಿಗೆ ಶಾಲೆಯ ಮೇಷ್ಟ್ರುಗಳ ಸಹಾಯ ಅನಿವಾರ್ಯವಾಗುತ್ತಿತ್ತು.ಅವರು ಬಂದ ವಿಷಯ ಊರಿನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಮಕ್ಕಳು ” ಅಯ್ಯಮ್ಮ ಅಮ್ಮುನ್ ಪಟ್ಟೆ ಹಾಕೋರು ಬಂದವ್ರಂತೆ ..” ಎಂದು ವಾಡೆ ಸಂದಿಗಳಲ್ಲಿ ,ಅಟ್ಟಗಳ ಮೇಲೆ , ಬಣವೆ ಇತ್ಯಾದಿ ರಹಸ್ಯ ಸ್ಥಳಗಳಲ್ಲಿ ಬಚ್ಚಿಟ್ಟ ಕೊಳ್ಳುತ್ತಿದ್ದರು . ಇನ್ನೂ ಕೆಲವರು ರಾಗಿ ಹೊಲ ,ಕಬ್ಬಿನ ತೋಟಗಳಲ್ಲೂ ಅಡಗಿ ಕೊಳ್ಳುತ್ತಿದ್ದರು .
ಆದರೆ ಊರಿನ ಹಿರಿಯರು ,ಮೇಷ್ಟ್ರುಗಳು ಮತ್ತು ಯುವಕರು ಅತಳ ,ವಿತಳ ,ಪಾತಳ ಲೋಕದೊಳಗೆ ಅಡಗಿದ ಇಂಥಾ ಮಕ್ಕಳನ್ನು ಎಳೆದು ತಂದು ಅಮ್ಮನ ಪಟ್ಟೆಯನ್ನು ಹಾಕಿಸಿಯೇ ತೀರುತ್ತಿದ್ದರು . ಕೆಲವು ಮಕ್ಕಳಂತೂ ಅಯ್ಯಪ್ಪೊ ,ಅಯ್ಯಮ್ಮೊ ಎಂದು ಅರಚುತ್ತಾ ,ಲಬೋ ಲಬೋ ಬಾಯಿ ಬಡಿದುಕೊಳ್ಳುತ್ತಾ ಅಮ್ಮನ ಪಟ್ಟೆ ಹಾಕುವವರನ್ನು ಒದೆಯುತ್ತಿದ್ದರು. ಅಂಥವರ ಕೈ ಕಾಲುಗಳನ್ನು ಹಿಡಿದು ಪಟಪಟ ಇಕ್ಕಲಾಗುತ್ತಿತ್ತು .ಅವೊತ್ತೆಲ್ಲ ಊರಿನಲ್ಲಿ ಅದೇ ಮಾತುಕತೆ ಮತ್ತು ಕಲರವ . ಈಗ ಹಳ್ಳಿಗಳ ಕಡೆ ಇಂಥ ದೃಶ್ಯಗಳು ಕಾಣುವುದೇ ಇಲ್ಲ . ಈಗ ಹುಟ್ಟುವ ಮೊದಲೇ ,ಗರ್ಭದಲ್ಲಿರುವಾಗಲೇ ಮಕ್ಕಳಿಗೆ ಅನೇಕ ರೀತಿಯ ಚುಚ್ಚುಮದ್ದುಗಳನ್ನು ತಾಯಿಯ ದೇಹದ ಮೂಲಕವೇ ಪೂರೈಸಲಾಗುತ್ತದೆ .
ಅದಿರಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಎನ್. ಮಹೇಶ್ ನನ್ನ ಕ್ಲಾಸ್ಮೇಟು ,ಕ್ಲೋಸ್ ಫ್ರೆಂಡೂ ಹೌದು . ‘ ಮಣೇಯ ‘ ಎಂದಿದ್ದ ಆತನ ಹೆಸರನ್ನು ನಮ್ಮ ಪ್ರೊಫೆಸರ್ ವೆಂಕಟಗಿರಿಗೌಡರ ಸಲಹೆಯಂತೆ ಮಹೇಶ್ ಎಂದು ಬದಲಾಯಿಸಿಕೊಳ್ಳಲಾಯಿತು .
ಸರಳ ವ್ಯಕ್ತಿಯಾಗಿದ್ದ ಮಹೇಶ್ ಮಂಡ್ಯದಲ್ಲಿ ಆಫೀಸರ್ ಆಗಿದ್ದಾಗ ನಾನು ಮದ್ದೂರಿನ ಕೆಸ್ತೂರಿನಲ್ಲಿ ಉಪನ್ಯಾಸಕನಾಗಿದ್ದೆ . ಪ್ರತಿನಿತ್ಯ ಹಾಸ್ಟೆಲ್ ಗಳಿಗೆ ಭೇಟಿ ನೀಡುತ್ತಿದ್ದ ಮಹೇಶ್ ಮಕ್ಕಳಿಗೆ ಎಲ್ಲಾ ಸರ್ಕಾರಿ ಸೌಲಭ್ಯಗಳೂ ಲಭ್ಯವಾಗುವಂತೆ ಶ್ರಮಿಸುತ್ತಿದ್ದ .
ಕೆಲಸ ಬಿಟ್ಟು ರಾಜಕೀಯಕ್ಕೆ ಧುಮಕಿದ ಮಹೇಶ್ ಮೂರು ಸಾರಿ ಸೋತರೂ ಧೃತಿಗೆಡಲಿಲ್ಲ. ಪ್ರೆಸ್ ಕ್ಲಬ್ ನಲ್ಲಿ ಆಗಾಗ ಸಿಗುತ್ತಿದ್ದ ಮಹೇಶ್ ” ಒಳ್ಳೆ ಕಾಲ ಬರ್ತದೆ ಸುಮ್ಮನಿರಣ್ಣ ..” ಎನ್ನುತ್ತಿದ್ದ . ಅದು ನಿಜವಾಗಿದೆ .ಶ್ರಮ ಜೀವಿಯಾದ ಮಹೇಶ್ ಗೆ ಸಮಾಜ ಕಲ್ಯಾಣ ಸಚಿವ ಸ್ಥಾನ ನೀಡಿದ್ದರೆ ಒಳ್ಳೆಯದಿತ್ತು . ಬಡವರ ,ದಲಿತರ ಸೇವೆ ಮಾಡುವ ಅವಕಾಶ ಅಲ್ಲಿ ಜಾಸ್ತಿ ಇತ್ತು . ಇರಲಿ, ಒಳ್ಳೆಯವರು ಎಲ್ಲಿದ್ದರೂ ಒಳ್ಳೆಯ ಕೆಲಸವನ್ನೇ ಮಾಡುತ್ತಾರೆ .
ಗೆಲ್ಲಿಸಿದವರ ಮುಂದೆ ನೆಲಕ್ಕೆ ಬಗ್ಗಿ ನಮಿಸುವುದರ ಮೂಲಕ ಇಡೀ ರಾಜಕೀಯ ವ್ಯವಸ್ಥೆಗೆ ಮಾದರಿಯಾಗಿ ಹೊರಹೊಮ್ಮಿರುವ ಮಹೇಶ್ ಗೆ ಮುಂದೆ ಯಶಸ್ಸು ಸದಾ ಒಡನಾಡುತ್ತಿರಲಿ…






He has just become Minister. His report card, you can give at the end of this Government. Dont jump to the conclusion in one week,