ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಕ್ಕರೆಗೆ ಮದ್ದು ಹುಡುಕುತ್ತಾ…

ಸಮತಾ ಆರ್

ಇತ್ತೀಚೆಗೆ ಯಾಕೋ ಹೊಸ ಚಪ್ಪಲಿ ಕಚ್ಚಿ ಕಾಲಿನಲ್ಲಿ ಆದ ಗಾಯ ಎಷ್ಟು ದಿನಗಳಾದರೂ ಮಾಯದೇ ಹೋಯಿತು. ಗುಮಾನಿಯಾಗಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡೆ. ಹೇಗೂ ಪ್ರಿ ಡಯಾಬಿಟಿಕ್ ಅಂತ ಹಲವು ವರ್ಷಗಳಿಂದ ನನ್ನ ಕುಟುಂಬ ವೈದ್ಯರು ಎಚ್ಚರಿಕೆ ನೀಡುತ್ತಲೇ ಇದ್ದರು. ಹಾಗಾಗಿ ಸ್ವಲ್ಪ ಅಳುಕಿನಿಂದಲೇ ಬ್ಲಡ್ ರಿಪೋರ್ಟ್ ಕೈಯಲ್ಲಿ ಹಿಡಿದು ವೈದ್ಯರ ನೋಡಲು ಹೋದೆ.ನನ್ನ ಬ್ಲಡ್ ರಿಫೋರ್ಟ್ ನೋಡುತ್ತಾ ವೈದ್ಯರು ಒಂದರೆಕ್ಷಣ ಸುಮ್ಮನಾದರು.

ನಂತರ ಖಚಿತವಾದ ದನಿಯಲ್ಲಿ, “ನಿಮಗೆ ಶುಗರ್ ಇದೆ ಕಣಮ್ಮ,ಆಗ್ಲೇ ಬಂದು ಮೂರು ತಿಂಗಳಾಗಿದೆ. ಇನ್ನು ಏನೂ ಮಾಡೋಕ್ಕಾಗಲ್ಲ, ಮಾತ್ರೆ ತೊಗೊಳ್ಳೋಕೆ ಶುರು ಮಾಡಿ.” ಎಂದರು. ಇದನ್ನು ನಿರೀಕ್ಷಿಸಿದ್ದ ನಾನು ಬೇರೇನೂ ಹೇಳಲು ತೋಚದೆ ಸುಮ್ಮನೆ ವೈದ್ಯರನ್ನು ದಿಟ್ಟಿಸುತ್ತಾ ಕುಳಿತೆ.’ಮಾತ್ರೆ ತೊಗೊಂಡು, ಪಥ್ಯೆ ಮಾಡಿ, ಹಿತ ಮಿತವಾದ ವ್ಯಾಯಾಮ ಮಾಡಿಕೊಂಡು ಇದ್ದರೆ ರಕ್ತದಲ್ಲಿ ಸಕ್ಕರೆ ನಿಯಂತ್ರಣಕ್ಕೆ ಬರುತ್ತೆ’ ಎಂದು ತಿಳಿಸಿ, ಚಕಚಕನೆ ಒಂದಷ್ಟು ಮಾತ್ರೆ ಚೀಟಿ ಬರೆದು, ಏನೇನು ಆಹಾರ ಪದಾರ್ಥಗಳ ತಿನ್ನಬೇಕು, ಏನೇನು ತಿನ್ನಬಾರದು ಅಂತ ಇದ್ದ ಒಂದು ಮೊಳದುದ್ದದ ಪಟ್ಟಿಯ ಜೊತೆಗೆ ಕೈಗಿತ್ತು,”ನೆಕ್ಸ್ಟ್,” ಎಂದರು. ತೆಪ್ಪಗೆ ಅವರ ಶುಲ್ಕ ಕೊಟ್ಟು, ಚೀಟಿಗಳ ತೊಗೊಂಡು ಎದ್ದು ಬಂದೆ. ವೈದ್ಯರ ಕೊಠಡಿ ಆಚೆ ನಿಂತಿದ್ದ ನನ್ನ ಗಂಡನಿಗೆ ನನ್ನ ಮುಖ ನೋಡಿಯೇ ಪರಿಸ್ಥಿತಿ ಏನಾಗಿದೆ ಅನ್ನೋದು ಗೊತ್ತಾಯಿತು. “ಮಾತ್ರೆ ಶುರು ಮಾಡಬೇಕಾ?” ಎಂದಾಗ “ಹೂಂ” ಗುಟ್ಟಿ ಸುಮ್ಮನಾದೆ. ಮನೆಗೆ ಬರೋವರೆಗೂ ಮಾತಿಲ್ಲ, ಕಥೆಯಿಲ್ಲ.

ಒಮ್ಮೆ ಮನೆ ಹೊಕ್ಕ ಮೇಲೆ ನೋಡಿ ಶುರುವಾಯಿತು ನೋಡಿ ವಾಗ್ಝರಿ. ಪ್ರೀ ಡಯಾಬಿಟಿಕ್ ಅಂದಾಗಲೇ ಬಡ್ಕೊಂಡೆ ನಿಂಗೆ, ಡಯಟ್ ಮೇಲೆ ನಿಗಾ ಇರ್ಲಿ ಅಂತ, ಈಗ್ನೋಡು ಕಾಯಿಲೆ ಹೆಚ್ಚೇ ಆಗೋಯ್ತು.ಇನ್ಮೆಲಾದ್ರೂ ಡಾಕ್ಟ್ರು ಹೇಳ್ದಂಗೆ ಪಥ್ಯೆ ಮಾಡು. ಮಕ್ಳಿನ್ನೂ ಚಿಕ್ಕೋರು, ಏನಾದ್ರೂ ಆದ್ರೆ ಏನ್ಕತೆ! ಹುಷಾರು,” ಎಂದು ಕೊರೆದಿದ್ದೇ ಕೊರೆದಿದ್ದು. ಅವರು ಹೇಳಿದ್ದೆಲ್ಲ ಏನೋ ಅವತ್ತು ಸುಮ್ಮನೆ ಕೇಳ್ಕೊಂಡು, “ಅಯ್ಯೋ ಏನ್ ನನ್ನೊಬ್ಳಿಗಾ ಶುಗರ್ ಬಂದಿರೋದು! ಪ್ರಪಂಚದಲ್ಲಿ ಕೋಟಿಗಟ್ಟಲೆ ಜನಕ್ಕಿಲ್ವ? ಎಲ್ಲಾ ಇರೊಂಗೆ. ಇದ್ರಾಯ್ತು,” ಅನ್ನೋ ಉಡಾಫೆಲಿ ಸುಮ್ಮನಾದೆ. ಆದರೆ ಪಥ್ಯೆ ಶುರುವಾದಾಗಲೇ ಗೊತ್ತಾಗಿದ್ದು ನಾನೆಂಥಾ ಸಂಕಷ್ಟದಲ್ಲಿ ಸಿಕ್ಕಿ ಬಿದ್ದಿದ್ದೇನೆ ಎಂದು.

ಪಥ್ಯೆ ಶುರು ಮಾಡೋ ಮೊದಲು ವೈದ್ಯರು ಕೊಟ್ಟಿದ್ದ ಉದ್ದನೆಯ ಪಟ್ಟಿಯನ್ನು ಪರೀಕ್ಷಿಸಿದಾಗ, ಮೊದಲ ಎರಡು ಸಾಲುಗಳಲ್ಲಿ ಮಾತ್ರ “ಧಾರಾಳವಾಗಿ ಬಳಸಬಹುದಾದ” ಎಂದು ಬರೀ ನೀರಿನಂಶವೇ ಹೆಚ್ಚಾಗಿದ್ದ, ನಾನು ವರ್ಷದಲ್ಲಿಎಲ್ಲೋ ಒಂದೆರಡು ಬಾರಿ ಮಾತ್ರ ಬಳಸುತ್ತಿದ್ದ, ಸೋರೆಕಾಯಿ, ಬೂದಿ ಗುಂಬಳ, ಸೀಮೆ ಬದನೆ, ಪಡುವಲ, ಹಾಗಲಗಳಿದ್ದವು. ತಕ್ಕಮಟ್ಟಿಗೆ ಬಳಸುವವುಗಳ ಪಟ್ಟಿಯಲ್ಲಿ ಸ್ವಲ್ಪ ಪರಿಚಿತವಾದ, ಬೀನ್ಸ್, ಕ್ಯಾರಟ್, ಹಸಿಬಟಾಣಿ, ಮುಂತಾದವು. ಆದರೆ ಬಳಸಲೇಬಾರದು ಎಂದು ಪಟ್ಟಿಯ ಶೇಕಡಾ ಎಂಭತ್ತರಷ್ಟಿದ್ದ ಆಹಾರ ಪದಾರ್ಥಗಳ ನೋಡಿ ನನಗಾದ ನಿರಾಸೆ ಏನಂತ ಹೇಳಲಿ. ಅವುಗಳ ಹೆಸರು ಹೇಳೋಲ್ಲ ಬಿಡಿ, ಕೇಳಿದರೆ ಪಾಪ ನಿಮಗೂ ಕಣ್ಣಲ್ಲಿ ನೀರು ಸುರಿದು ಹೋಗಿ ಬಿಡಬಹುದು.

ಅಂತೂ ಹೇಗೋ ನನ್ನನ್ನು ನಾನು ಸಂಭಾಳಿಸಿಕೊಂಡು ಮೊದಲು ಮಾಡಿದ ಕೆಲಸವೆಂದರೆ ಆ ಪಟ್ಟಿಯನ್ನು ನನ್ನ ಗಂಡನ ಕೈಗೆ ಸಿಗದಂತೆ ಎತ್ತಿಟ್ಟಿದ್ದು. ಆದರೂ ಬಿಡದೆ ಅವರು “ವೈದ್ಯರು ಪಥ್ಯೆ ಮಾಡಲು ಹೇಳಿದ್ದ ಪಟ್ಟಿ ಎಲ್ಲಿ ?” ಎಂದು ಕೇಳಿದಾಗ, “ಅದು ಎದುರು ಮನೆಯವರು ನೋಡಿ ಕೊಡ್ತೀನಿ ಅಂತ ಈಸ್ಕೊಂಡಿದ್ರು, ಎಲ್ಲೋ ಹಾಕಿ ಬಿಟ್ರಂತೆ,” ಎಂದು ಬಚಾವಾದೆ. ಆದರೆ ಇವರು ಬಿಡುವವರೆ! ಕೆಲವರ್ಷಗಳಿಂದ ಮಧುಮೇಹಕ್ಕೀಡಾಗಿ ಚಿಕಿತ್ಸೆ, ಪಥ್ಯೆ ಯಲ್ಲಿರುವ ತಮ್ಮ ಅಕ್ಕನಿಗೆ ಫೋನ್ ಮಾಡಿಕೊಂಡು ಎಲ್ಲ ಮಾಹಿತಿ ಕಲೆ ಹಾಕಿಕೊಂಡು ಬಿಟ್ಟರು.ನಂತರ ಶುರುವಾದ ನನ್ನ ಸಂಕಷ್ಟಗಳ ನಾನೆಂತು ಬಣ್ಣಿಸಲಿ.

ಬೆಳಿಗ್ಗೆ ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜಿದ ಬಳಿಕ ಒಂದು ಲೋಟ ಬಿಸಿ ಬಿಸಿ ಟೀ ಇಲ್ಲವೇ ಕಾಫಿ ಮಾಡಿ ಕುಡಿಯದೇ ಹೋದರೆ ನನ್ನ ಮೆದುಳಿನ ಸ್ವಿಚ್ ಆನ್ ಆಗುವುದಿಲ್ಲ. ಆದರೆ ಪಥ್ಯೆಯ ಮೊಟ್ಟ ಮೊದಲ ಕೆಂಗಣ್ಣು ಬಿದ್ದದ್ದು ನನ್ನ ಬಡಪಾಯಿ ಟೀ, ಕಾಫೀಗಳ ಮೇಲೆಯೇ. ನನ್ನ ಗಂಡ “ನೋಡೆ, ಟೀ, ಕಾಫಿ ಕುಡಿ, ಬೇಡ ಅನ್ನೊಲ್ಲ, ಆದ್ರೆ ಸಕ್ಕರೆ ಹಾಕ್ಕೋ ಬೇಡ, ಖಾಲಿ ಕುಡಿ,” ಎಂದರು. ಹಾಗೆ ಖಾಲಿ ಟೀ ಮೊದಲ ಬಾರಿ ಕುಡಿದಾಗ ಉಕ್ಕಿ ಬಂದ ದುಃಖ ನನಗೆ ಯಾವ ಜನ್ಮದಲ್ಲೂ ಆಗಿರಲಿಲ್ಲ.

ಕುಡಿಯುವ ಕಾಲದಲ್ಲಿ ಲೀಟರ್ಗಟ್ಟಲೆ ಟೀ, ಕಾಫಿ ಕುಡಿದಿರುವ ಈ ಜೀವಕ್ಕೆ ಕುಡಿಯದೆ ಇರಲೂ ಆಗದು.ಆಗ ಯಾರೋ ಹೇಳಿದ ಹಾಗೆ ಶುಗರ್ ಫ್ರೀ ಗುಳಿಗೆಗಳ ತಂದು ಹಾಕಿಕೊಂಡು ಕುಡಿದು ನೋಡಿದೆ.ಖಾಲಿ, ಸಪ್ಪೆ ಕುಡಿಯುವುದು ಬೇಕು, ಇದು ಬೇಡ ಅನ್ನಿಸಿಬಿಟ್ಟಿತು. “ಹಾಳಾಗಿ ಹೋಗ್ಲಿ ಈ ಕಾಫೀ, ಟೀಗಳು” ಎಂದುಕೊಳ್ಳುತ್ತಾ “ಮಾಡುವುದೇ ಬಿಟ್ಟು ಬಿಡೋಣ” ಅನ್ನಿಸಿತು.ಆದರೆ ಬೆಳಗ್ಗಿನ ಉಪಹಾರ ತಯಾರಿಸುವಾಗ ಅಲ್ಲೇ ಸ್ಟೌವ್ ಮೇಲೆ ಪರಿಮಳ ಪಸರಿಸಿಕೊಂಡು ಕಮ್ಮನೆ ಕಾಯುತ್ತಿರುವ ಹಾಲನ್ನು ನೋಡಿ ಚಿತ್ತ ಕೆರಳದೇ ಇರುವುದೇ? ಗಂಡನಿಗೆ ಕಾಣದ ಹಾಗೆ ಟೀ, ಕಾಫಿ ಮಾಡಿಕೊಂಡು, ಅರ್ಧ ಚಮಚ ಸಕ್ಕರೆ ಹಾಕಿಕೊಂಡು ಕುಡಿದೇ ಬಿಡುತ್ತಿದ್ದೆ.”ಹೇಗೂ ಮಾತ್ರೆ ಕುಡಿತಿನಲ್ಲ, ಇಷ್ಟು ಮಾತ್ರ ಸಕ್ಕರೆ ನಿಯಂತ್ರಣವಾಗದೆ ಇರುತ್ತಾ, “ಅನ್ನೋ ಸುಳ್ಳು ಸಮಾಧಾನ ನನಗೆ ನಾನೇ ಕೊಟ್ಟುಕೊಂಡು ಕದ್ದು ಮುಚ್ಚಿ ಕುಡಿದೆ. ಒಮ್ಮೆ ಮಾತ್ರ ನನ್ನ ಗಂಡ ಟೀಗೆ ಸಕ್ಕರೆ ಬೆರೆಸುವಾಗ ನೋಡಿಯೇ ಬಿಟ್ಟರು. “ಇನ್ನು ನಿನಗೆ ಹೇಳಿ ಪ್ರಯೋಜನವಿಲ್ಲ,” ಎಂದು ಗರ್ಜಿಸಿ, ಹಾಲಿನವನಿಗೇ ತಡವಾಗಿ ಬರಲು, ನನ್ನ ಸ್ಕೂಟಿ ಆತನ ಡೈರಿ ದಾಟಿದ ಬಳಿಕ ನೋಡಿಕೊಂಡು ಹಾಲು ತರಲು ಹೇಳಿಬಿಟ್ಟರು. ಅಂತೂ ನನ್ನ ಬೆಳಗಿನ ಮನೋಲ್ಲಾಸದ ಪೇಯಗಳ ಈ ಮಧುಮೇಹ ರಕ್ಕಸಿ ಕಿತ್ತುಕೊಂಡು ಅಟ್ಟಹಾಸ ಹಾಕಿದಳು.

ಟೀ ಕಾಫಿ ಏನೋ ಬಿಟ್ಟು ಬಿಡೋಣ. ಮನೆಯಲ್ಲಿ ಸಿಗದಿದ್ದರೂ ಹೊರಗೆ ಕುಡಿದರಾಯಿತು. ಆದರೆ ತಿಂಡಿ ಊಟದಲ್ಲಿನ ಪಥ್ಯೆ ಮಾತ್ರ ಯಾವ ನನ್ನ ಶತ್ರುವಿಗೂ ಬೇಡ. “ಸಕ್ಕರೆ, ಪಿಷ್ಟದ ಅಂಶ ಕಡಿಮೆ ಇರುವ ಏನನ್ನಾದರೂ ತಿನ್ನಿ, ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತಿನ್ನಿ, ದಿನಕ್ಕೆ ಮೂರು ಬಾರಿ ಆಹಾರ ಸೇವನೆ ಬದಲು, ಅದೇ ಪ್ರಮಾಣವನ್ನು ಐದರಿಂದ, ಆರು ಬಾರಿ ಮಿತ ಪ್ರಮಾಣದಲ್ಲಿ ಸೇವಿಸಿ,” ಎಂದು ವೈದ್ಯರು ಹೇಳಿದ್ದರು. ಮಿತ ಪ್ರಮಾಣದಲ್ಲಿ ಸೇವಿಸಿದರೆ ಹತ್ತೇ ನಿಮಿಷಕ್ಕೆ ಮತ್ತೆ ಹೊಟ್ಟೆ ತಾಳ ಹಾಕಿದರೆ ಏನು ಮಾಡುವುದು? ಐದು ಬಾರಿ ಹೋಗಿ ಹತ್ತು ಬಾರಿ ದಿನದಲ್ಲಿ ತಿನ್ನುವ ಹಾಗಾಯಿತು.

ಇಷ್ಟೆಲ್ಲಾ ಆದ ಮೇಲೆ ವೈದ್ಯರು ಹೇಳಿದ್ದಂತೆ ತಿಂಗಳ ಬಳಿಕ ಮತ್ತೆ ರಕ್ತ ಪರೀಕ್ಷೆ ಮಾಡಿಸಿದೆ. ಫಲಿತಾಂಶ ಮಾತ್ರ ತಿಂಗಳ ಹಿಂದೆ ಏನಿತ್ತೋ ಅದೇ. ವೈದ್ಯರು ರಿಪೋರ್ಟ್ ನೋಡಿ, ಏನೂ ಹೇಳದೆ ಮಾತ್ರೆಯ ಡೋಸೇಜ್ ಹೆಚ್ಚು ಮಾಡಿ,ಹೋದ ಬಾರಿ ನೀಡಿದ್ದ ಸೂಚನೆಗಳನ್ನೇ ಪುನರಾವರ್ತಿಸಿ, “ನೆಕ್ಸ್ಟ್,” ಎಂದಾಗ, ನಾನು “ಇನ್ನೇನೂ ಕೇಳಲು ಅವಕಾಶವಿಲ್ಲ” ಎಂಬ ಅವರ ಮೌನ ಸಂವಹನದ ಸೂಚನೆಯನ್ನು ಅರ್ಥೈಸಿಕೊಂಡು ಎದ್ದು ಬಂದೆ. 

ಈಗ ಆಗ ಕದ್ದು ಮುಚ್ಚಿ ಪಥ್ಯದ ನಿರ್ಬಂಧ ದಾಟುತ್ತಿದ್ದ ನನ್ನ ಮನಸ್ಸನ್ನು ಚೆನ್ನಾಗಿ ನಿಯಂತ್ರಣ ಮಾಡಲೇಬೇಕು ಎನ್ನುವ ದೃಢ ಸಂಕಲ್ಪ ಕೈಗೊಂಡೆ. ಆನಂತರ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಹೆಚ್ಚು, ಕಮ್ಮಿ ಮಾಡುವವುಗಳ ಬಗ್ಗೆ ನನ್ನ ಹುಡುಕಾಟ ಶುರುವಾಯಿತು.

ಒಂದು ದಿನ ಬಸ್ ನಲ್ಲಿ ಆಗೀಗ ಸಿಗುವ ಗೆಳತಿಯೊಬ್ಬಳ ಜೊತೆ ಹರಟುವಾಗ ನನ್ನ ಪಥ್ಯೆಯ ಪ್ರಸ್ತಾಪವಾಯಿತು. ಅವಳು”ಸುಮ್ನೆ ಅವರು ಇವರನ್ನೆಲ್ಲ ಏನೇನೋ ಕೇಳುವ ಬದಲು ಇಂಟರ್ನೆಟ್ ಹುಡುಕಿ, ಯೂ ಟ್ಯೂಬ್ ನಲ್ಲಿ ಎಷ್ಟೊಂದು ಡಯಾಬಿಟಿಸ್ ಬಗೆಗಿನ ವಿಡಿಯೋಗಳಿವೆ ನೋಡಿ,” ಎಂದಾಗ ನನಗೂ “ಹೌದಲ್ಲವಾ” ಅನ್ನಿಸಿತು.

ಅವತ್ತಿನಿಂದಲೆ ಯೂ ಟ್ಯೂಬ್ ಜಾಲಾಡತೊಡಗಿದೆ. ಆದರೆ ಅದರಲ್ಲಿ ಒಬ್ಬರು ಹೇಳಿದ ಹಾಗೆ ಇನ್ನೊಬ್ಬರು ಹೇಳುವುದುಂಟ!. ಕೆಲವರು “ಅನ್ನ ತಿನ್ನಬಹುದು” ಎಂದರೆ,ಮತ್ತೊಬ್ಬರು “ಅನ್ನ ಬಿಟ್ಟ ನಂತರ ನನ್ನ ಆರೋಗ್ಯ ಹೇಗೆ ಸುಧಾರಿಸಿತು” ಅನ್ನುವುದರ ಬಗ್ಗೆಯೇ ಅರ್ಧ ಗಂಟೆಯ ವಿಡಿಯೋ ಮಾಡಿದ್ದರು. “ಡಯಾಬಿಟಿಸ್ ಖಾಯಿಲೆಯೇ ಅಲ್ಲ, ಎಲ್ಲಾ ಔಷಧಿ ಮಾರುಕಟ್ಟೆಯ ಮಾಯಾಜಾಲ” ಎಂದೊಬ್ಬರು ಅಂದರೆ ಇನ್ನೊಬ್ಬರು “ಡಯಾಬಿಟಿಸ್ HIV ಗಿಂತ ಅಪಾಯಕಾರಿ,ಸೈಲೆಂಟ್ ಕಿಲ್ಲರ್” ಎಂದು ಹೆದರಿಸಿದರು. “ಈ ವಿಡಿಯೋಗಳನ್ನು ನೋಡಿ ಆಗುವ ಮಾನಸಿಕ ಒತ್ತಡದಿಂದ ನನ್ನ ಶುಗರ್ ಇನ್ನೂ ಹೆಚ್ಚಾಗುವುದು ನಿಶ್ಚಿತ” ಅನ್ನಿಸಿಬಿಟ್ಟು ಅವತ್ತಿನಿಂದಲೇ ಆ ವಿಡಿಯೋಗಳಿಗೆ ದೊಡ್ಡ ನಮಸ್ಕಾರ ಹಾಕಿಬಿಟ್ಟೆ.

ನನ್ನ ಪರದಾಟಗಳ ನೋಡುತ್ತಿದ್ದ ನನ್ನ ಗಂಡ,”ವೈದ್ಯರನ್ನು ಬದಲಾಯಿಸಿ ನೋಡೋಣವೇ,” ಎಂದರು. “ಇನ್ನೂ ಈಗ ತಾನೇ ಮಾತ್ರೆ ಸೇವಿಸಲು ಶುರು ಮಾಡಿರೋದಲ್ಲವ,ಒಂದಾರು ತಿಂಗಳು ಕಳೆದು ನೋಡುವ ,” ಎಂದೆನಿಸಿತು ನನಗೆ.ಯಾರಿಗೆ ಗೊತ್ತು, ಹೊಸ ವೈದ್ಯರ ಪಥ್ಯೆಯ ಪಟ್ಟಿ ಮೊಳದಿಂದ ಮಾರುದ್ದ ತಲುಪಿ ಬಿಟ್ಟರೆ!
ನನ್ನ ಪಥ್ಯೆಯ ಬಗ್ಗೆ ನನ್ನ ಗಂಡನಷ್ಟೇ ಕಾಳಜಿ ನನ್ನ ಸಹೋದ್ಯೋಗಿಗಳಿಗೆ. “ಮೂರಂಗುಲದ ನಾಲಿಗೆ ಗಾಗಿ, ಅಷ್ಟು ದೊಡ್ಡ ದೇಹಕ್ಕೆ ಶಿಕ್ಷೆ ನೀಡಬೇಡಿ ಮೇಡಂ” ಅನ್ನುವ ಹಿತವಚನದಿಂದ ನನ್ನ ಪಥ್ಯೆಯನ್ನು ಇನ್ನೂ ಕಠಿಣ ಮಾಡಿಬಿಟ್ಟರು.

ಇಷ್ಟರಲ್ಲಿ ಸಂಕ್ರಾಂತಿ ಹಬ್ಬ ಬಂದಿತು. ಈ ಹಬ್ಬ ನನ್ನ ಅತ್ಯಂತ ಪ್ರೀತಿ ಪಾತ್ರ ಹಬ್ಬ. ಮಗಳನ್ನು ಅಲಂಕರಿಸಿ ಮನೆ ಮನೆಗೆ ಎಳ್ಳು ಬೆಲ್ಲ ಬೀರಿಸುವ ಸಂಭ್ರಮ, ಸಡಗರ ಎಷ್ಟೊಂದು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೆ. ಕೆಜಿಗಟ್ಟಲೆ ಎಳ್ಳು ಬೆಲ್ಲ ಮಾಡಿ, ಕೊಡುವವರಿಗೆಲ್ಲಾ ಕೊಟ್ಟು ನಂತರ ಡಬ್ಬದ ಭರ್ತಿ ತುಂಬಿರುತ್ತಿದ್ದದ್ದನ್ನು ದಿನಗಟ್ಟಲೆ ಮುಕ್ಕುವುದು ಇನ್ನೂ ಒಂದು ಸಂಭ್ರಮ.ಆದರೆ ಈ ಬಾರಿ ನನ್ನ ಗಂಡನ ಹದ್ದಿನ ಕಣ್ಣು ಎಳ್ಳು ಬೆಲ್ಲದ ಅಳತೆ ಒಂದು ಕೆಜಿ ಕೂಡಾ ದಾಟಲು ಬಿಡಲಿಲ್ಲ. ಅದನ್ನೂ ಎಲ್ಲಾ ಪೊಟ್ಟಣಗಳಿಗೆ ಹೊಟ್ಟೆ ಬಿರಿಯುವಂತೆ ತುಂಬಿ, “ಪ್ರತಿ ಮನೆಗೂ ಎರಡೆರಡು ಕೊಟ್ಟು ಖಾಲಿ ಮಾಡು,” ಎಂದು ಮಗಳಿಗೆ ಹೇಳಿಕೊಟ್ಟು ಹಬ್ಬದ ದಿನವೇ ಎಳ್ಳು ಬೆಲ್ಲದ ಡಬ್ಬ ಖಾಲಿ ಖಾಲಿ.

ಮಾರನೇ ದಿನ ಕೆಲಸಕ್ಕೆಂದು ಪ್ರಯಾಣಿಸುವಾಗ ಸಹ ಪ್ರಯಾಣಿಕ ಗೆಳತಿಯೊಬ್ಬಳು ಕೊಟ್ಟ ಒಂದು ಸಣ್ಣ ಪ್ಯಾಕ್ ನ ಎಳ್ಳು ಬೆಲ್ಲದಲ್ಲಿ, ಬೆಲ್ಲದ ಚೂರುಗಳ ಆಯ್ದು ಆಯ್ದು ಎಸೆದು ಉಳಿದದ್ದನ್ನು ತಿಂದು ಆಸೆ ತೀರಿಸಿ ಕೊಂಡದ್ದಾಯಿತು. ಅವಳಿಗೆ ನನ್ನ ಪಾಡು ನೋಡಿ ಕನಿಕರವೋ ಕನಿಕರ. “ಮೇಡಂ ಇಂಟರ್ನೆಟ್ ನಲ್ಲಿ ಹುಡುಕಿ, ಗ್ಲೆಸಿಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ ಪದಾರ್ಥಗಳ ನೋಡಿಕೊಂಡು ಬಳಸಿ,” ಎಂದಳು. ಹಾಗೆ ಹುಡುಕಿದಾಗ ಒಂದಷ್ಟುಒಣ ಹಣ್ಣು, ಬೀಜಗಳ ತಿನ್ನಬಹುದು ಎನ್ನೋ ಮಾಹಿತಿ ಸಿಕ್ಕಿತು. ಅವುಗಳನ್ನೇ ಖರೀದಿಸಿ ದಿನಾ ಸಂಜೆ ಉಪಹಾರದ ಬದಲಿಗೆ ಒಂದು ಹಿಡಿ ನಟ್ಸ್ ಗಳನ್ನೇ ತಿನ್ನಲು ಪ್ರಾರಂಭಿಸಿದೆ. ಎರಡೇ ದಿನಕ್ಕೆ ಬೇಸರವಾಯಿತು. ವರ್ಷಗಟ್ಟಲೆ ಷಡ್ರಸಭರಿತವಾಗಿ ತಿಂದು ಈಗ ಈ ಸಪ್ಪೆ ಸಪ್ಪೆ ತಿನ್ನಲು ಕಷ್ಟವೋ ಕಷ್ಟ.

ಈ ಸಪ್ಪೆ ಹೇಗಾದ್ರೂ ತಿನ್ನ ಬಹುದು, ಆದ್ರೆ ಶುಗರ್ ರೋಗಿಗಳಿಗೆ ಕಹಿ ತಿನ್ನಲು ಸಿಗುವ ಸಲಹೆಗಳನ್ನು ನೋಡಬೇಕು.ಕಹಿಯಲ್ಲೂ ಇಷ್ಟೊಂದು ವೈವಿಧ್ಯತೆ ಇದೆ ಎನ್ನುವುದು ಈಗಲೇ ತಿಳಿದಿದ್ದು. “ರಾತ್ರೆ ಒಂದು ಚಮಚೆ ಮೆಂತೆ ಕಾಳು ನೀರಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಆ ನೀರು ಮೆಂತೆ ಕಾಳುಗಳ ಸಮೇತ ಕುಡಿಯಿರಿ, ಐದಾರು ಕಹಿಬೇವಿನೆಲೆಗಳ ದಿನವೂ ಜಗಿಯಿರಿ. ಅಮೃತ ಬಳ್ಳಿ ಎಲೆ ತಿನ್ನಿ, ಅದರ ಕಡ್ಡಿಗಳ ಜಜ್ಜಿ ನೀರಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯಿರಿ. ಬೆಳಿಗ್ಗೆ ಬೆಳಿಗ್ಗೆಯೇ ಹಾಗಲಕಾಯಿ ರಸ ಒಂದು ಲೋಟ ಖಾಲಿ ಹೊಟ್ಟೆಗೆ ಕುಡೀರಿ, ಶುಗರ್ಗೆ ಅದು ರಾಮಬಾಣ. ನಿತ್ಯ ಪುಷ್ಪದ ಎಲೆಗಳ ದಿನಕ್ಕೆ ಐದಾರು ತಿನ್ನಿ, ಶುಗರ್ ಐನೂರರಲ್ಲಿದ್ದರೂ ನೂರಕ್ಕೆ ಇಳಿಯದಿದ್ದರೆ ಹೇಳಿ.” ಇತ್ಯಾದಿ ಹೇಳಿ ಹೇಳಿ “ಜೀವನದಲ್ಲಿ ಜಿಗುಪ್ಸೆ,” ಮಾತಿನ ಅರ್ಥ ಮನದಟ್ಟು ಮಾಡಿಸಿಬಿಟ್ಟರು. “ಸಪ್ಪೆ ಬೇಕಾದ್ರೂ ತಿಂದುಕೊಂಡಿರುವೆ ಆದರೆ ಈ ಕಹಿ ವಿಷ ಕುಡಿಯಲಾರೆ” ಎಂದು ನಾನೂ ಪಣ ತೊಟ್ಟೆ. ಆದರೆ ಒಂದು ಚೂರು ತಲೆ ಸುತ್ತಲು ಶುರುವಾದರೂ, ಅಂಗೈ ಅಂಗಾಲು ಸ್ವಲ್ಪ ಉರಿಯಲು ಶುರುವಾದರೂ, ಶುಗರ್ ಮಟ್ಟ ಜಾಸ್ತಿಯಾಯಿತೋ ಏನೋ ಅನ್ನುವ ಭಯ ಹಿಂದೆಯೇ ಬೆನ್ನಟ್ಟಿ ಬರುತ್ತಿತ್ತು.

ಹಾಗಾಗಿ ಒಂದಿಷ್ಟು ಕಹಿಮದ್ದು ಮಾಡುವ ಎಂದುಕೊಂಡು ಎದುರು ಮನೆಯ ಕಾಂಪೌಂಡ್ ಪಕ್ಕ ಬೆಳೆದಿದ್ದ ನಿತ್ಯಪುಷ್ಪದ ಎಲೆಗಳನ್ನು ಕಿತ್ತುಕೊಂಡು ಬೆಳಿಗ್ಗೆ ಬೆಳಿಗ್ಗೆಯೇ ಖಾಲಿ ಹೊಟ್ಟೆಗೆ ನಾಲ್ಕು ಎಲೆಗಳನ್ನು ತಿನ್ನಲು, ಅಲ್ಲಲ್ಲ ನುಂಗಲು ಶುರು ಮಾಡಿದೆ. ನಿತ್ಯಪುಷ್ಪದ ಎಲೆಯ ಕಹಿಯನ್ನು ಬಣ್ಣಿಸಲು ನನ್ನ ಪದಕೋಶದಲ್ಲಿ ಪದಗಳೇ ಇಲ್ಲ ಬಿಡಿ. ರುಚಿಯ ನೋಡಲು ನನ್ನಿಂದ ಸಾಧ್ಯವೇ ಇಲ್ಲ ಎಂದು ನನ್ನ ನಾಲಿಗೆ ಮುಷ್ಕರ ಹೂಡಿದ ಮೇಲೆ ಬರಿ ಹಲ್ಲುಗಳಿಗೆ ಮಾತ್ರ ಆ ಎಲೆಗಳ ಸಿಕ್ಕಿಸಿ, ಸ್ವಲ್ಪ ಮಾತ್ರ ನುರಿದು ಹಾಗೇ ನುಂಗಿ ಬಿಡುತ್ತಿದ್ದೆ.

ಹೀಗೆ ಸ್ವಲ್ಪ ದಿನ ಕಳೆದವು. ಒಂದು ದಿನ ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆಂದು ಓರ್ವ ವೈದ್ಯರು ಮತ್ತವರ ತಂಡ ಶಾಲೆಗೆ ಭೇಟಿ ನೀಡಿತು. ಮಕ್ಕಳ ತಪಾಸಣೆ ಮುಗಿಸಿ ಶಿಕ್ಷಕರ ಸಮಸ್ಯೆಗಳ ಆಲಿಸುವಾಗ ಅವರ ಬಳಿ ನನ್ನ ಶುಗರ್ ತೊಂದರೆ ಬಗ್ಗೆ ಹೇಳಿಕೊಂಡೆ. ನನ್ನ ಪುಣ್ಯಕ್ಕೆ ಅವರೊಬ್ಬ ಆಯುರ್ವೇದದ ವೈದ್ಯರು. ನನ್ನ ಪಥ್ಯೆ, ಮಾತ್ರೆ ಬಗ್ಗೆ ಎಲ್ಲಾ ಕೇಳಿಕೊಂಡ ಅವರು ಅದನ್ನೇ ಮುಂದುವರಿಸಲು ಹೇಳಿದರು. ನಿತ್ಯ ಪುಷ್ಪದ ಎಲೆಗಳನ್ನು ತಿನ್ನುವ ಬಗ್ಗೆ ಹೇಳಿದಾಗ ಮಾತ್ರ “ತಿನ್ನಲೇಬೇಡಿ, ಅದು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಮಾತ್ರ ಕೊಡುವುದು” ಎಂದರು.

ಆಗ ನನಗಂತೂ ಒಂದು ದೊಡ್ಡ ಗಡ್ಬಡ್ ಐಸ್ಕ್ರೀಮ್ ತಿಂದಷ್ಟೇ ತೃಪ್ತಿ, ಸಮಾಧಾನ, ಸಂತೋಷಗಳು ಉಂಟಾಗಿ ಆ ವೈದ್ಯರು ಸಾಕ್ಷಾತ್ ನಮ್ಮ ಮನೆ ದೇವ್ರು ಚೆಲುವ ನಾರಾಯಣ ಸ್ವಾಮಿಯೇ ಆಗಿ ನನ್ನ ಕಣ್ಣಿಗೆ ಕಂಡು ಬಂದರು.
ಹೀಗೆ ಹೇಗೋ ಸ್ವಲ್ಪ ದಿನಗಳಲ್ಲಿ ಕಷ್ಟಪಟ್ಟು, ಪಥ್ಯೆ, ಮಾತ್ರೆ, ವ್ಯಾಯಾಮಗಳಿಗೆ ಹೊಂದಿಕೊಂಡೆ. ಆದರೆ ಬೇಸಿಗೆ ಕಾಲ ಹತ್ತಿರ ಬಂದ ಹಾಗೆಲ್ಲಾ ಹಲಸು, ಮಾವಿನ ಹಣ್ಣುಗಳ ಕಾಲ ಶುರುವಾದಂತೆಲ್ಲ ನನ್ನ ಮನಸ್ಸು ಕೊರಗಲು ಪ್ರಾರಂಭಿಸಿತು. ಹಣ್ಣುಗಳ ಪರಿಮಳದಿಂದ ಪಾರಾಗಲು ಅರಿ ಷಡ್ವರ್ಗಗಳ ಗೆದ್ದಿರುವ ಸನ್ಯಾಸಿಯೇ ಆಗಿರಬೇಕು ಬಿಡಿ. ಛೆ ಛೆ ಇಲ್ಲ, ಅದೂ ತಪ್ಪು ಗ್ರಹಿಕೆ ಅನ್ನಿಸುತ್ತೆ. ಇಲ್ಲದಿದ್ದರೆ ಸರ್ವಸಂಗ ಪರಿತ್ಯಾಗಿಗಳಾದ ಸನ್ಯಾಸಿಗಳು ಕೇವಲ ಹಣ್ಣು ಹಂಪಲುಗಳನ್ನೇ ಏಕೆ ತಿಂದು ಬದುಕುತ್ತಿದ್ದರು ? ಅಲ್ಲದೇ ಅವರುಗಳು ತಪಸ್ಸಿಗೆ ಕುಳಿತುಕೊಳ್ಳಲು ಆರಿಸಿಕೊಳ್ಳುತ್ತಿದ್ದ ಮರಗಳನ್ನೇ ನೋಡಿ.

ಆಲದ ಮರ ಇಲ್ಲವೇ ಅರಳಿ ಮರದಂತಹ ತಿನ್ನಲಾಗದ ಹಣ್ಣುಗಳ ಮರಗಳೇ. ಹಲಸಿನ ಇಲ್ಲವೇ ಮಾವಿನ ಮರದ ಕೆಳಗೆ ಕುಳಿತು ತಪಸ್ಸು ಮಾಡಿ ಗೆದ್ದಿರುವ ಒಬ್ಬನೇ ಒಬ್ಬ ಸನ್ಯಾಸಿಯ ಹೆಸರು ಹೇಳಿ ನೋಡೋಣ?ತಮಾಷೆಯೇನೇ ಇರಲಿ ನನ್ನ ಹಲಸಿನ ಮೋಹಕ್ಕೆ ಈ ಮಧುಮೇಹ ಎಳ್ಳು ನೀರು ಬಿಡಿಸಿದ್ದಂತೂ ಹೌದು. ನನ್ನ ಬಹು ಪ್ರೀತಿಯ ಹಲಸು ತಿನ್ನಲಾಗದ ನನ್ನ ವೇದನೆಯ ನೋಡಿ ಕರಗಿದ ನನ್ನ ಗಂಡ, “ಯಾರಾದರೂ ಶುಗರ್ ರೋಗಿಗಳನ್ನೆ ಕೇಳಿ ನೋಡು,ಯಾವ ಹಣ್ಣು ತಿನ್ನಬೇಕು, ಯಾವುದು ತಿನ್ನ ಬಾರದು ಎಂದು, ಅದೇನೋ ಹೇಳ್ತಾರಲ್ಲ, ‘ಹೊಸ ವೈದ್ಯನಿಗಿಂತ ಹಳೇ ರೋಗಿ ಉತ್ತಮ’ ಅಂತ,” ಎಂದು ನಕ್ಕರು. ನನಗೂ ಸರಿ ಅನ್ನಿಸಿ, ನನ್ನ ವಾಕ್ ಮೇಟ್ ಆದ ನನ್ನ ಎದುರು ಮನೆ ಗೆಳತಿಯನ್ನು ಕೇಳೋಣ ಎಂದುಕೊಂಡೆ. ಆಕೆಯ ಪತಿ ಕೆಲವು ವರ್ಷಗಳಿಂದ ಮಧು ಮೇಹಕ್ಕೆ ಒಳಗಾಗಿ ಅವರ ಊಟೋಪಚಾರಗಳನ್ನೆಲ್ಲ ಅವಳೇ ನೋಡಿಕೊಳ್ಳುತ್ತಿದ್ದದ್ದು.

ಆ ದಿನ ಸಂಜೆ ವಾಕ್ ಹೋದಾಗ ಅವಳ ಕೇಳಿದಾಗ ಆಕೆ “ನನ್ನ ಗಂಡ ಊಟದಲ್ಲಿ ಅಷ್ಟು ಕಟ್ಟು ನಿಟ್ಟು ಏನೂ ಇಲ್ಲಾ, ಅತಿ ಸಿಹಿಯ ಹಲಸು, ಸಪೋಟ ಬಿಟ್ಟು ಇನ್ನೆಲ್ಲಾ ತಿನ್ನುತ್ತಾರೆ. ಬೆಳಿಗ್ಗೆ ಸಂಜೆ ಆರಾರು ಮೈಲಿ ವಾಕ್ ಮಾಡ್ತಾರೆ, ಮಾತ್ರೆ ತಪ್ಪದೆ ತೋಗೊತಾರೆ, ಹಾಗಾಗಿ ಅವರ ಶುಗರ್ ಮಟ್ಟ ನಿಯಂತ್ರಣದಲ್ಲಿದೆ,” ಎಂದಳು. “ಎಲ್ಲಾ ಸರಿ, ಆದರೆ ಆರಾರು ಮೈಲಿ ವಾಕ್!, ದೇವಾ ಅದಾಗದು, “ಅನ್ನಿಸಿತು. ಮುಂದುವರೆದು ಆಕೆ ಹೇಳಿದ್ದು,” ಎಲ್ಲದಕ್ಕಿಂತ ಮುಖ್ಯ ನನಗೆ ಶುಗರ್ ಇದೆ ಅಂತ ಅವರು ಒಂದು ದಿನ ಕೂಡ ಕೊರಗಿಲ್ಲ, ಔಷಧಿ,ವ್ಯಾಯಾಮ ಮಾಡ್ತಾರೆ, ತಿನ್ನಬೇಕು ಅನಿಸಿದ್ದು ತಿನ್ನುತ್ತಾರೆ. ಪಥ್ಯೆ ಏನೂ ಅತಿ ಮಾಡೋಲ್ಲ.

ಒಟ್ಟಾರೆ ಹಾಗಾಗಿ ಬಿಡುತ್ತೆ, ಹೀಗಾಗಿ ಬಿಡುತ್ತೆ ಅಂತ ಕೊರಗೊಲ್ಲ, ಮುಂದೆ ಆಗೋದು ಕಂಡಿರೋರು ಯಾರು?ಸುಮ್ಮನೆ ಅವತ್ತಿನ ದಿನ ಅವತ್ತು ಚೆನ್ನಾಗಿ ಕಳಿಬೇಕು, ಅತಿ ಚಿಂತೆ ಆರೋಗ್ಯಕ್ಕೆ ಮಾರಕ, ಸುಮ್ಮನೆ ಡಾಕ್ಟರ್ ಹೇಳಿದಂಗೆ ಕೇಳಿಕೊಂಡು ಇರಿ ಅಷ್ಟೇ. ಯಾಕೆ ನೂರೆಂಟು ಜನರ ಸಲಹೆ ಸೂಚನೆ ತೊಗೊಂಡು ಪರಿಪಾಟಲು ಪಡ್ತಿರಾ.”? ಎಂದಳು. ನನಗದೆಷ್ಟೋ ಸಮಾಧಾನವಾಯಿತು. ಈಗ ಆದಷ್ಟು ಪಥ್ಯೆ ಮಾಡ್ಕೊಂಡು, ವಾಕ್ ಮಾಡ್ಕೊಂಡು, ಮಾತ್ರೆ ಕುಡ್ಕೊಂಡು, ಭವಿಷ್ಯದ ಬಗ್ಗೆ ಚಿಂತೆ ಮಾಡೋದು ಬಿಟ್ಬಿಟ್ಟು ಸುಮ್ಮನೆ ತಣ್ಣಗೆ ಇದ್ದೇನೆ.

‍ಲೇಖಕರು Admin

7 May, 2022

2 Comments

  1. Shyamala Madhav

    ನಿಮ್ಮ ನಷ್ಟದಿಂದ ನಮಗೆ ಖುಷಿ ಕೊಟ್ಟಿರಿ.‌ ಸದಾ ಖುಶಿಯಾಗಿರಿ.

  2. Jayakala DL

    ಪತ್ಯೆ ಯಾವುದೇ ಇರಲಿ… ಮನಸು ಹಿಡಿತವಿರಲಿ….. ಮನ ಗಟ್ಟಿಯಾಗಿ.,.. ಉಲ್ಲಾಸದಿಂದ ಇರಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading