’ಸಂಸ್ಕೃತಿ ಮತ್ತು ಸಂಪ್ರದಾಯ’ – ಕೆ ವಿ ತಿರುಮಲೇಶ್

ಸಂಸ್ಕೃತಿ ಮತ್ತು ಸಂಪ್ರದಾಯಗಳ ನಡುವಿನ ರೇಖೆ ಮಸುಕಾಗುತ್ತಿರುವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಅವುಗಳ ನಡುವಿನ ವ್ಯತ್ಯಾಸವನ್ನು ಸರಳವಾಗಿ ಹೇಳಿದ್ದಾರೆ.

’ಅವಧಿ’ಯಲ್ಲಿ ಪ್ರಕಟವಾಗಿದ್ದ ’ಅನಂತಮೂರ್ತಿ ನಿಧನಾನಂತರದ ಕೆಲವು ಪ್ರಮಾದಗಳು’ ಲೇಖನ ಓದಿ,

ಡಾ ಮೋಹನ್ ಕೇಳಿದ ಪ್ರಶ್ನೆಗೆ ತಿರುಮಲೇಶ್ ಅವರು ನೀಡಿದ ಉತ್ತರ ಇದು.

ಕೆ ವಿ ತಿರುಮಲೇಶ್

ಸಂಸ್ಕೃತಿ ಮತ್ತು ಸಂಪ್ರದಾಯ ಎಂಬೀ ವಿಷಯಗಳ ವ್ಯತ್ಯಾಸವೇನು? ಡಾ. ಮೋಹನ್ ಅವರು ಬಹಳ ಮುಗ್ಧವಾದ, ಆದರೆ ಯಾರೂ ಸ್ಪಷ್ಟವಾಗಿ ಉತ್ತರಿಸಲಾಗದ ಪ್ರಶ್ನೆಯನ್ನೇ ಕೇಳಿದ್ದಾರೆ. ಅವರಿಗೆ ಗೊಂದಲವಿರುವಂತೆ ನನಗೂ ಇದೆ. ಆದರೂ ನಾನು ಇವನ್ನು ಅರ್ಥಮಾಡಿಕೊಳ್ಳುವ ಬಗೆಯೆಂದರೆ, ಸಂಸ್ಕೃತಿ ಹೆಚ್ಚು ಅಮೂರ್ತವಾದುದು, ಮೌಲ್ಯಗಳಿಗೆ ಸೇರಿದ್ದು. ಉದಾಹರಣೆಗೆ, ಪ್ರೀತಿ, ಗೌರವ, ಪರಿಸರ ಪ್ರೇಮ, ಅಹಿಂಸೆ ಇತ್ಯಾದಿ ಸಂಸ್ಕೃತಿಗೆ ಸೇರಿದ್ದು. ಇವನ್ನು ಅಳವಡಿಸಿಕೊಂಡ ಸಮಾಜ ತನ್ನ ಸಂಸ್ಕೃತಿಯನ್ನು ವಿವಿಧ ರೀತಿಯ ಆಚರಣೆಗಳಲ್ಲಿ, ವರ್ತನೆಗಳಲ್ಲಿ ಪ್ರಕಟಪಡಿಸುತ್ತದೆ. ಉದಾಹರಣೆಗೆ, ವಂದಿಸು ಮೂಲಕ ಗೌರವ ತೋರಿಸುತ್ತೇವೆ. ಇಂಥ ಆಚರಣೆಗಳು ಹಿಂದಿನಿಂದಲೂ ಬಂದಾಗ ಅವು ಸಂಪ್ರದಾಯವಾಗುತ್ತವೆ. ಸಂಪ್ರದಾಯ ಆಟೋಮ್ಯಾಟಿಕ್ ಪ್ರತಿಕ್ರಿಯೆ. ಅದು ಪ್ರಶ್ನೆ ಎತ್ತುವುದಿಲ್ಲ. ಹಿರಿಯರನ್ನು ಕಂಡಾಗ ಸೀಟು ಕೊಡುವುದು ಒಂದು ಸಂಪ್ರದಾಯ, ಆದರೆ ಅದರ ಹಿಂದೆ ಒಂದು ಸಂಸ್ಕೃತಿ ಕೂಡ ಇದೆ.
ಈ ಎರಡು ಆಯಾಮಗಳಿಗೂ ಸಂಬಂಧವಿರುವುದರಿಂದಲೇ ಇವೆರಡೂ ಒಂದೇ ಎಂಬ ಗೊಂದಲ ಉಂಟಾಗುವುದು. ಆದರೆ ಇವನ್ನು ಭಿನ್ನವಾಗಿ ಕಾಣುವುದರಿಂದ ಸಂಪ್ರದಾಯದ ಸಮಸ್ಯೆಗಳನ್ನು ಎದುರಿಸಬಹುದು ಎಂದು ಕಾಣುತ್ತದೆ. ಉದಾಹರಣೆಗೆ, ವಿಧವೆಯರ ಕೇಶಮುಂಡನ ಮಾಡಿಸುವುದು, ಅವರ ಪುನರ್ ವಿವಾಹವನ್ನು ವಿರೋಧಿಸುವುದು, ಬಹಿಷ್ಕಾರ ಹಾಕುವುದು, ಜಾತಿ ಪದ್ಧತಿ, ಸತೀಪದ್ಧತಿ ಇವೆಲ್ಲ ಸಂಪ್ರದಾಯಕ್ಕೆ ಸೇರಿದಂಥವು; ಅವುಗಳ ಹಿಂದೆ ಏನೇನೋ ತತ್ವಗಳಿರಬಹುದು. ಆದರೆ ನಮಗಿಂದು ಅಂಟ ತತ್ವಗಳಲ್ಲಿ ವಿಶ್ವಾಸವಿಲ್ಲ–ಅವು ಹಿಂಸೆಯನ್ನು ಒಳಗೊಂಡಿವೆ ಎಂದು ನಾವು ತಿಳಿಯುತ್ತೇವೆ. ಆದ್ದರಿಂದ ಈ ಸಂಪ್ರದಾಯಗಳನ್ನು ಕೈಬಿಡುವುದು ಅಗತ್ಯವಾಯಿತು. ಇದರಿಂದ ಸಂಸ್ಕೃತಿಗೇನಾದರೂ ತೊಂದರೆಯಾಯಿತೇ ಎಂದರೆ ಇಲ್ಲ, ಸಂಸ್ಕೃತಿಗೆ ಒಳ್ಳೆಯದೇ ಆಯಿತು; ಯಾಕೆಂದರೆ ಮಾನವಸ್ನೇಹ, ಜೀವಪ್ರೀತಿ, ನ್ಯಾಯನಿಷ್ಟೆ ಇವು ಸಂಸ್ಕೃತಿಯ ಅಂಗಗಳು.

ಸಂಪ್ರದಾಯದ ಸಮಸ್ಯೆಯೆಂದರೆ, ಅದು ಕಟುವಾಗಿ ಕನ್ಸರ್ವೇಟಿವ್: ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಾರಣ ಇಂದೂ ಮುಂದೂ ಹಾಗೆ ನಡೆದುಕೊಳ್ಳಬೇಕು ಎನ್ನುತ್ತದೆ, ಒತ್ತಾಯಿಸುತ್ತದೆ, ಒಲ್ಲದವರನ್ನು ದ್ವೇಷಿಸುತ್ತದೆ. ಸಂಸ್ಕೃತಿ ಅದನ್ನು ಮಾಡುವುದಿಲ್ಲ. ಇಡೀ ಮಾನವೇತಿಹಾಸದ ಹಿಂದೆ ಇಂಥ ಸಂಘರ್ಷವೊಂದು ಇರುವಂತೆ ಅನಿಸುವುದಿಲ್ಲವೇ?
ಇದರರ್ಥ ಎಲ್ಲಾ ಸಂಪ್ರದಾಯಗಳೂ ಹಿಂಸೆ ಮತ್ತು ಅನ್ಯಾಯಗಳಿಂದ ಕೂಡಿವೆ ಎಂದಲ್ಲ. ಆದರೆ ಪ್ರಶ್ನಿಸುವ, ವಿವೇಚಿಸುವ ಹಕ್ಕನ್ನು ಅದು ದಮನಿಸಿದಾಗ ಅಲ್ಲಿ ಬೆಳವಣಿಗೆ ಇರುವುದಿಲ್ಲ.
ಇಂದು ಕೆಲವರು ಬುಡಕಟ್ಟು ಜನಾಂಗಗಳ ಜೀವನರೀತಿಗೆ, ಸಮಾಜರಚನೆಗೆ ಮಾರುಹೋಗಿದ್ದಾರೆ. ಇವರಿಗೆಲ್ಲ ಒಂದು ರೊಮ್ಯಾಂಟಿಕ್ ತಪ್ಪು ಕಲ್ಪನೆಯಿದೆ: ಅಂಥ ಸಮಾಜಗಳೇ ಹೆಚ್ಚು ಉತ್ತಮ ಎನ್ನುವುದು. ಆದರೆ ಒಳಹೊಕ್ಕು ನೋಡಿದರೆ ತಿಳಿಯುತ್ತದೆ,ಅಲ್ಲಿ ಬೆಳವಣಿಗೆಗೆ ಆಸ್ಪದವಿಲ್ಲ–ಸಾವಿರಾರು ವರ್ಷಗಳಿದಲೂ ಅವು ಸಂಪ್ರದಾಯವನ್ನೇ ಆಚರಿಸಿಕೊಂಡು ಬಂದಿವೆ. ಅಲ್ಲಿ ಸಂಪ್ರದಾಯ ಮತ್ತು ಸಂಸ್ಕೃತಿ ಅಭೇದವಾಗಿವೆ. ಆದ್ದರಿಂದ `ವಿದ್ಯಾಭ್ಯಾಸ’ ಎಂಬ ಕಲ್ಪನೆಯೇ ಅಲ್ಲಿ ಇರುವುದಿಲ್ಲ. ಬೇಡನೊಬ್ಬ ಬಿಲ್ಲು ವಿದ್ಯೆ ಕಲಿಯಬಹುದು, ಆದರೆ ಬಿಲ್ಲಿನಲ್ಲಿ ಹೊಸ ಆವಿಷ್ಕಾರಗಳನ್ನು ತರಲಾರ, ಅಥವಾ ಬೇಟೆಯನ್ನು ತ್ಯಜಿಸಿ ಬೇರೊಂದು ವೃತ್ತಿಯನ್ನು ಹಿಡಿಯಲಾರ. ಈಗ ಇವೆಲ್ಲ ಬದಲಾಗುತ್ತ ಬಂದಿರುವುದರಿಂದ ಈ ಮಾತಿನ ಅರ್ಥ ಹೊಳೆಯದೆ ಇರಬಹುದು. ಈಗ ಕಿಂಗ್ ಶಿಪ್ ಕೂಡಾ ಹೊರಟುಹೋಗಿದೆ–ಯಾಕೆಂದರೆ ಇಂದಿನ ನಮ್ಮ ಗಣತಂತ್ರ ಮೌಲ್ಯಕ್ಕೆ ಅದು ಹೊಂದುವುದಿಲ್ಲ. ಆದರೂ ಬ್ರಿಟನಿನಂಥ ದೇಶದಲ್ಲಿ ಇನ್ನೂ ನಾಮಕಾವಾಸ್ತೇ ಕಿಂಗ್ ಶಿಪ್ ಉಳಿದುಕೊಂಡಿದೆ; ಅದೊಂದು ಸಂಪ್ರದಾಯವಷ್ಟೆ. ಎಲ್ಲೀ ವರೆಗೆ ರಾಜರು (ರಾಣಿಯರು) ಚುನಾಯಿತ ಸರಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತಾರೋ ಅಲ್ಲೀ ವರೆಗೆ ರಾಜರು (ರಾಣಿಯರು) ಇರುತ್ತಾರೆ; ಸರಕಾರವನ್ನು ಧಿಕ್ಕರಿಸಿ ಅವರು ಉಳಿಯುವಂತಿಲ್ಲ.
ಆದರೂ, ಗಣತಂತ್ರದ ತೊಟ್ಟಿಲೆಂದೇ ಖ್ಯಾತವಾದ ಬ್ರಿಟನ್ ಯಾಕೆ ಇನ್ನೂ ಈ ರಾಜ ಸಂಪ್ರದಾಯವನ್ನು ಇಟ್ಟುಕೊಂಡಿದೆ ಎಂಬ ಪ್ರಶ್ನೆ ಇದೆ. ಬಹುಶಃ ಮಾನವ ಸಮಾಜಗಳಿಗೆ ಕೆಲವೊಂದು ಸಂಪ್ರದಾಯಗಳು, ಎಲ್ಲೀ ವರೆಗೆ ಅವು ಸ್ವೀಕೃತ ಮೌಲ್ಯಗಳಿಗೆ ಮತ್ತು ಕಾನೂನುಗಳಿಗೆ ವಿರುದ್ಧ ಹೋಗುವುದಿಲ್ಲವೋ ಅಲ್ಲೀ ವರೆಗೆ, ಅಗತ್ಯವೆನಿಸುತ್ತವೆ. ಹೀಗೆ ಉಳಿಯಲು ಬಿಟ್ಟ ಸಂಪ್ರದಾಯವನ್ನುವುದು `ವೈಲ್ಡ್’ ಆಗಿರದೆ, `ಪಳಗಿ’ರುತ್ತವೆ.
 

‍ಲೇಖಕರು G

August 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಸುಂದರ ವಿಶ್ಲೇಷಣೆ. ಸಂಸ್ಕೃತಿ – ವಸ್ತು, ಮೂಲ ಮೌಲ್ಯಗಳ ಧಾತು.; ಪರಂಪರೆ : ಕ್ರಿಯೆ, ವಿಧ ವಿಧಗಳ ಆಚರಣೆ ಆದಂತಾಯಿತಲ್ಲವೇ….

    ಪ್ರತಿಕ್ರಿಯೆ
  2. hg malagi

    ಶ್ರೀ ತಿರುಮಲೇಶ್ ಅವರೇ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ತಾವು ನೀಡಿದ ವಿವರಣೆಗಳು ಚಿಂತನಾರ್ಹವಾಗಿವೆ.
    ಸಂಪ್ರದಾಯಗಳು ಆಯಾ ಸಂಸ್ಕೃತಿಯ ಪ್ರತಿಬಿಂಬಗಳೇ ಆಗಿರುತ್ತವೆ. ಸಂಸ್ಕೃತಿಯು ಜೀವನವಿಧಾನದ ಅಡಿಪಾಯ. ಜೀವನವಿಲ್ಲದೇ ಸಂಸ್ಕೃತಿಯಿಲ್ಲ. ಸಂಸ್ಕೃತಿಯಿಲ್ಲದೇ ಸಂಪ್ರದಾಯವಿಲ್ಲ. ಧಾಮರ್ಿಕ ಮೇಲಾಟಗಳು ಸಂಪ್ರದಾಯಗಳನ್ನು ಅತೀಕರಿಸಿದವು ಉದಾ: ಮೊದಲು ಮನೆಯೊಳಗೆ, ಪೂಜಾ ಸ್ಥಳಗಳಲ್ಲಿ ನಿಧಾನ ಸ್ವರದಲ್ಲಿ ನಡೆಯುತ್ತಿದ್ದ ಪಠಣಗಳು ಮೈಕಾಸುರನ ಬಾಯಿಗೆ ಸಿಕ್ಕು ಮಾನಸಿಕ ಶಾಂತಿಯನ್ನು ಕದಡುವಷ್ಟರಮಟ್ಟಿಗೆ ಆವೇಶಕ್ಕೊಳಗಾದವು. ಈಗ ಇದು ಸಂಪ್ರದಾಯವೇ ಅನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮನದಲ್ಲಿಯೇ ಗಂಟೆ ಬಾರಿಸಿದರೆ, ಪಠಣ ಮಾಡಿದರೆ ದೈವಕ್ಕೆ ಕೇಳಿಸದೇನೋ ಅನ್ನುವಷ್ಟರ ಮಟ್ಟಿಗೆ ನಾವು ಕಿವುಡರಾಗಿದ್ದೇವೆ. ಯಾರು ಜನರ ಇಂತಹ ಅತಿರೇಕಗಳನ್ನು ನಿಯಂತ್ರಿಸುವ ಸ್ಥಾನಗಳಲ್ಲಿದ್ದಾರೆಯೋ ಅವರೇ ಇಂತಹ ಸಂಪ್ರದಾಯಗಳ ಪ್ರಾಯೋಜಕರೂ ಆಗುತ್ತಿದ್ದಾರೆಂಬುದು ವಿಷಾದದ ಸಂಗತಿ. ಸತೀ ಪದ್ಧತಿಯನ್ನು ತೊಡೆದು ಹಾಕುವ ಚಳುವಳಿಗಳೂ ಸಂಪ್ರದಾಯದ ತೀವ್ರ ಪ್ರತಿರೋಧವನ್ನು ಎದುರಿಸಿಯೇ ಯಶಸ್ಸು ಸಾಧಿಸಿದ್ದು. ಒಂದು ದೇಶ ಒಂದು ಜನ ಒಂದು ಸಂವಿಧಾನ ಇಂದಿನ ಜರೂರತ್ತು. ಈ ಕಲ್ಪನೆಯ ಸಾಕಾರದಲ್ಲಿ ಸಂಪ್ರಯಾಯವು ತೀವ್ರವಾಗಿ ಪ್ರತಿಭಟಿಸುತ್ತದೆ. ಆದರೆ ವಿವೇಚನೆಯುಳ್ಳ ಸಮಾಜವು ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದ ಇದನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲುತ್ತದೆ. ಇಂತಹ ವಿಶ್ವಾಸಗಳೇ ನಾಗರಿಕತೆಯನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ. ಮನೆಗೆ ಗೋಡೆಗಳು ಕಿಟಕಿ ಬಾಗಿಲುಗಳೂ ಇವೆ. ಅವುಗಳಿಗೆ ತಮ್ಮದೇ ಆದ ಮಹತ್ವ ಹಾಗೂ ಜವಾಬ್ದಾರಿಗಳಿರುತ್ತವೆ. ಹಾಗೆಯೇ ಸಂಪ್ರದಾಯಗಳು. ಕೆಲವು ಒಳಗಿರಬೇಕು. ಕೆಲವು ಬಂದುಹೋಗುತ್ತಿರಬೇಕು. ಕೆಲವು ಹೊಸತನಕ್ಕೆ ತೆರೆದುಕೊಳ್ಳುತ್ತಿರಬೇಕು. ಯಾರೋ ಮಾಡುವ ಆಚರಣೆಗಳು ಗೊತ್ತಿಲ್ಲದವರಿಗೆ ವಿಲಕ್ಷಣ ವಿಚಿತ್ರವಾಗಿ ಕಾಣುವುದು ಸಹಜ. ಆದರೆ ಆಳಕ್ಕಿಳಿದು ನೋಡಿದಾಗ ಅವು ತಮ್ಮದೇ ಪ್ರತಿಬಿಂಬಗಳೆಂದು ತೋರುತ್ತವೆ. ಇದು ವಿಸ್ಮಯವಾದರೂ ಸತ್ಯ. ಒಮ್ಮೆ ಪರಿಶೀಲಿಸಿ ನೋಡಬಾರದೇಕೆ

    ಪ್ರತಿಕ್ರಿಯೆ
  3. kusumabaale

    ಇದನ್ನ fbಲಿ ಹಾಕಿ ಎಲ್ಲರಿಗೂ ಓದಿಸಬೇಕು ಅಂತಿದ್ದೆ.ನೀವೇ ಹೈಲೈಟ್ ಮಾಡಿದ್ದೀರಿ.ಮೂರು ಬಾರಿ ಓದಿದೆ.thank you ತಿರುಮಲೇಶ್ ಸರ್.

    ಪ್ರತಿಕ್ರಿಯೆ
  4. udayakumar habbu

    ಸಂಸ್ಕಾರಗೊಂಡಿದ್ದು ಸಂಸ್ಕೃತಿ ಎಂದು ಹೇಳಬಹುದೆ? ಕೆಲವೊಮ್ಮೆ ಯಾವುದೋ ಕಾರಣಕ್ಕಾಗಿ ಕೆಲವು ಮಾನವವಿರೋಧಿ ಸಂಪ್ರದಾಯಗಳನ್ನು ಪದ್ಧತಿಗಳನ್ನು ರೂಢಿಯಲ್ಲಿ ಬಂದವುಗಳು ಎಂದು ಒಂದು ಕಾಲಕ್ಕೆ ಮಾನ್ಯತೆ ಪಡೆಯುತ್ತವೆ. ಕಾಲಕ್ರಮೇಣ ಈ ಸಂಪ್ರದಾಯಗಳು ಮನುಷ್ಯ ವಿರೋಧಿ ಎಂದು ಅನುಭವ ಹೇಳಿತು. ಉದಾಹರಣೆಗಾಗಿ ಬಾಲ್ಯ ವಿವಾಹ, ವಿಧವೆಯರನ್ನು ಅಮಂಗಳೆಯರೆಂದು ತಿಳಿಯುವುದು, ಅಸ್ಪೃಶ್ಯತೆ ಮುಂತಾದವುಗಳು ಬದಲಾಗುತ್ತಿರುವ ಕಾಲಕ್ಕೆ ಅಮಾನುಷ ಎಂದು ತಿಳಿಯಲಾಯಿತು. ಆದರೂ ಅದರ ಪಳಿಯುಳಿಕೆಗಳು ಇನ್ನೂ ಇವೆ.ಅವನಿಗೆ ಸಂಸ್ಕಾರವಿಲ್ಲ, ಅವನು ಅನಾಗರಿಕ ನಮ್ಮ ತುಳುನಾಡಿನಲ್ಲಿ ಸಂಸ್ಕಾರವಿಲ್ಲ ಎನ್ನಲು ಆಯೆಗ್ ಭಾಸೆ ಇಜ್ಜಿ ಎನ್ನುತ್ತಾರೆ.ಅಂದರೆ ಭಾಷೆ ಎಂದರೆ ಸಂಸ್ಕೃತಿ ಎನ್ನಬಹುದೆ? ಎಲ್ಲ ಸಂಪ್ರದಾಯಗಳೂ ತಿರಸ್ಕರಿಸಲು ಅಥವಾ ನಶಿಸಲು ಯೋಗ್ಯ ಎಂದಲ್ಲ. ಕೆಲವು ಉತ್ತಮ ಸಂಪ್ರದಾಯಗಳೂ ಇರಬಹುದು. ಸಂಪ್ರದಾಯವನ್ನು ಸಂಸ್ಕೃತಿಯ ಲಕ್ಷಗಳೆನ್ನಬಹುದೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: