ಸಂವರ್ಥ, ನಿಮ್ಮ ಅಭಿಪ್ರಾಯವನ್ನು ಅಲ್ಲಗಳೆಯುವ ಅಥವಾ ವಿರೋಧಿಸುವ ಉದ್ದೇಶವಿದಲ್ಲ..

ರೋಹಿತ್ ವೇಮುಲ ಆತ್ಮಹತ್ಯೆಗೆ Just Shafi ಪ್ರತಿಕ್ರಿಯಿಸಿದ್ದರು ಆತ್ಮಹತ್ಯೆ ಯಾಕೆ ಎನ್ನುವುದು ಅವರ ಬರಹದ ಮುಖ್ಯ ಪ್ರಶ್ನೆಯಾಗಿತ್ತು.

ಅದು ಇಲ್ಲಿದೆ 

ಅದಕ್ಕೆ ಸಂವರ್ಥ ಸಾಹಿಲ್ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ 

ಸಂವರ್ಥ ಕೊಟ್ಟ ಪ್ರತಿಕ್ರಿಯೆಗೆ ಶಮ ನಂದಿಬೆಟ್ಟ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ 

shama nandibetta1

ಶಮ ನಂದಿಬೆಟ್ಟ 

ಸಂವರ್ಥ,

ನಿಮ್ಮ ಅಭಿಪ್ರಾಯವನ್ನು ಅಲ್ಲಗಳೆಯುವ ಅಥವಾ ವಿರೋಧಿಸುವ ಉದ್ದೇಶವಿದಲ್ಲ. ಚರ್ಚೆಗಾಗಿ ಬರೆದಿದ್ದು ಖಂಡಿತ ಅಲ್ಲ.

ಎಲ್ಲಕ್ಕೂ ಹೆಚ್ಚಾಗಿ ನಮ್ಮನ್ನು ಬಿಟ್ಟು ಹೋದ ತಮ್ಮನಿಗೆ ಮಾತ್ರವೂ ಅಲ್ಲ. ದೇಶಕ್ಕೆ ಹೆಮ್ಮೆಯಾಗಿ ಬೆಳೆಯಬಹುದಾಗಿದ್ದ ಹುಡುಗ ತನ್ನ ಕೊನೆಯನ್ನ ತಂದುಕೊಂಡ ಬಗ್ಗೆ ನನಗೆ ಆಕ್ರೋಶವಾಗಲೀ ವಿಷಾದವಾಗಲೀ ಇಲ್ಲ. ಅವನಂಥದ್ದೇ ಪರಿಸ್ಥಿತಿಗೆ ಸಿಲುಕಿದ ಬೇರೆಯವರಿಗೆ ಇವನು ಆದರ್ಶವಾಗದಿರಲಿ ಎಂಬ ಕಳಕಳಿ. ಭವ್ಯ ಭಾರತದಲ್ಲಿ ಶೋಷಣೆಗಳು ಜಾತಿ ಕಾರಣಕ್ಕೆ ಆಗುವುದು ಎಷ್ಟು ನಿಜವೋ ಅದು ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ಸ್ತರಗಳಲ್ಲಿ ಆಗುತ್ತವೆ ಕೇವಲ ಒಂದೆರಡು ಜಾತಿಯವರಷ್ಟೇ ಶೋಷಣೆಗೆ ಒಳಗಾಗುವುದಲ್ಲ ಅನ್ನುವುದೂ ಅಷ್ಟೇ ನಿಜ. ಅವನು ಅನುಭವಿಸಿದ ನೋವು ಅಪಮಾನಗಳಲ್ಲಿ ಬಹಳಷ್ಟನ್ನು ಸ್ವತಃ ಅನುಭವಿಸಿದವಳು ನಾನು. ಅದೂ ಅವನ ವಯಸ್ಸಲ್ಲಿ ಮಾತ್ರ ಅಲ್ಲ. ಬಹಳ ಎಳೆಯ ವಯಸ್ಸಿನಿಂದ ಕೂಡ. ನಾನು ಅನುಭವಿಸಿದ್ದು ಜಾತಿಯ ಕಾರಣಕ್ಕೂ ಹೌದು; ಬಡತನದ ಕಾರಣಕ್ಕೂ ಹೌದು. ಹೀಗೆ ತಾಜಾ ಉದಾಹರಣೆಯಾಗಿ ನಿಂತ ಕಾರಣ ಇಷ್ಟು ಆತ್ಮವಿಶ್ವಾಸದಿಂದ ಬರೆಯುತ್ತಿದ್ದೇನೆ.

ನಿಮ್ಮ ಭಾವನೆಗಳು ನನಗೆ ಅರ್ಥವಾದವು. ಆದರೆ ನನ್ನ ಮಾತು ನಿಮ್ಮ ಬರಹದಿಂದ ಮಾತ್ರ ಪ್ರೇರಿತವಾದುದಲ್ಲ ಅನ್ನೋದನ್ನ ದಯವಿಟ್ಟು ಗಮನಿಸಿ. ಇತ್ತೀಚಿನ ಯುವ ಸಮೂಹವನ್ನು ನೋಡಿದರೆ “ಆತ್ಮಹತ್ಯೆ” ಅನ್ನುವ Tendency ಬಹಳ ಬೆಳೆಯುತ್ತಿದೆ ಎಂದು ನನಗನಿಸುತ್ತದೆ. ಹೋರಾಟದ ಮನೋಭಾವದ ಕೊರತೆ ಮಾತ್ರ ಇದರ ಕಾರಣವೆಂದಲ್ಲ; ಇಂದಿನ ಮಕ್ಕಳಲ್ಲಿ “No” ಮತ್ತು “Failure” ಗಳನ್ನ ಸ್ವೀಕರಿಸುವುದಕ್ಕೆ ಕಷ್ಟವೆನಿಸುವ ಮನೋಸ್ಥಿತಿ ನಿರ್ಮಾಣವಾಗಿದೆ. ಆವಾಗ ಇಂಥ ಬಾವುಕ ನೆಲೆಯ ನಿರ್ಧಾರಗಳು ಅರಳಬಹುದಾದ ಬದುಕನ್ನು ಕಿತ್ತು ಬಿಸಾಕುತ್ತವೆ. ವಿವೇಕದ ತಲೆ ಮೇಲೆ ಹೊಡೆದು ವಿಷಾದ ವಿಜೃಂಭಿಸುತ್ತದೆ.
S.S.L.C ಯಲ್ಲಿ ನಾಲ್ಕು ಸಲ ಗಣಿತದಲ್ಲಿ ಫೇಲ್ ಆದ ತಮ್ಮ ಇವತ್ತು ಬ್ಯಾಂಕ್ ಆಫೀಸರ್ !!! ಎಲೆಕ್ಟ್ರಿಕಲ್ ಡಿಪ್ಲೋಮಾದಲ್ಲಿ ಕ್ಯಾರಿ ಓವರ್ ಪದ್ಧತಿ ಇದ್ದು ಕೂಡ ಕನಿಷ್ಟ ಜಸ್ಟ್ ಪಾಸ್ ಆಗಲಾರದ ನಾನು ಎಮ್.ಎಸ್ಸಿ ಗೋಲ್ಡ್ ಮೆಡಲ್^ಗೆ tough competitor ಆದೆ !!! ಹೆಚ್ಚುಗಾರಿಕೆಗಾಗಿ ಹೇಳುತ್ತಿಲ್ಲ ಇದನ್ನು. ಯಾವತ್ತೂ ಫಸ್ಟ್ Rank ಆಗಿರುತ್ತಿದ್ದ ನಾನು ಅವತ್ತು ಫೇಲ್ ಆದಾಗ ನಮಗಿಬ್ಬರಿಗೂ ಮೊದಲು ಕಂಡದ್ದು ಕುಣಿಕೆಯ ಚಿತ್ರವೇ !!! ಕಂಡ ತಕ್ಷಣ ಕೊರಳೊಡ್ಡಲಿಲ್ಲ ಅಷ್ಟೇ. ಮನುಷ್ಯನ ಅಸಹಾಯಕತೆ ಅತಂತ್ರ ಅವಮಾನ ಮತ್ತು ಅವು ಮನುಷ್ಯನನ್ನು ಹೇಗೆ ಅಧೃಡಗೊಳಿಸಬಹುದು ಎಂದು ನೀವನ್ನುತ್ತೀರೋ ಅವುಗಳೇ ಮನುಷ್ಯನಿಗೆ ಬಹು ದೊಡ್ಡ ಗುರುವೂ ಆಗಬಹುದು; ಸಾಧನೆಯ ಕೆಚ್ಚನ್ನೂ ತುಂಬಬಹುದು ಎನ್ನುತ್ತಿದ್ದೇನೆ. ಈ ನಿಟ್ಟಿನಲ್ಲಿ ಅವಲೋಕಿಸಿದರೆ ನಮ್ಮ ಜನರೇಷನ್ ಮತ್ತು ಈ ಜನರೇಷನ್ ನಡುವೆ ಬಹು ದೊಡ್ಡ ಗ್ಯಾಪ್ ಕಾಣಿಸುತ್ತಿದೆ. ಕನಸಿನಾಚೆಗೂ ಜಿಗಿದು ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವ ಮನೋಭಾವ, ಮನೋಧಾರ್ಢ್ಯ ಎರಡೂ ಕಾಣೆಯಾದ ಹಾಗೆ ಭಾಸ. ಹೀಗೆ ಜಾತಿ ಪ್ರಶ್ನೆ ಬಂದಾಗ ಇದಕ್ಕೆ ರಾಜಕೀಯ ಮತ್ತಿತರ ಎಲ್ಲ ಬಣ್ಣಗಳನ್ನೂ ಬಳಿದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಹುನ್ನಾರ ನಡೆಸುವವರ ಸಂಖ್ಯೆಯೂ ನಮ್ಮಲ್ಲಿ ಸಣ್ಣದಿಲ್ಲ.

ಇಂಥ ನೋವುಗಳನ್ನ ಬೇರೆ ಬೇರೆ ಕಾರಣಕ್ಕೆ ಅನುಭವಿಸಿ ಸಡ್ಡು ಹೊಡೆದು ಮೇಲೆದ್ದು ಬದುಕು ಬೆಳೆಸಿಕೊಂಡ ಕೆಲವರನ್ನು ವೈಯಕ್ತಿಕವಾಗಿಯೂ ಬಲ್ಲೆ ನಾನು. ಸೋಲು ಯಾವತ್ತೂ ಅನಾಥ; ಗೆಲುವಿಗಷ್ಟೇ ಸಾವಿರ ಅಪ್ಪಂದಿರು. ಅವಮಾನ, ನಿರಾಶೆ, ಸೋಲುಗಳಿಗೆ ಕಾರಣ ಜಾತಿ, ಬಡತನ, ಅಜ್ಞಾನ ಇನ್ನೂ ಅನೇಕವಿರಬಹುದು. ಅವನ್ನು ದಿಟ್ಟತನದಿಂದ ಎದುರಿಸಲು ಸಾಧ್ಯವೇ ಇಲ್ಲದಷ್ಟು ನಮ್ಮ ಸಮಾಜ ಕೆಟ್ಟಿಲ್ಲ. ಅಷ್ಟು ಕೆಟ್ಟಿದ್ದರೆ ಬ್ಯಾಗಲ್ಲಿ ಕೇವಲ ಎಂಟು ನೂರು ರೂಪಾಯಿ ಜತೆಗೆ ಮೈತುಂಬ ಅವಮಾನ, ಸೋಲು, ನಿರಾಶೆಗಳ ಸೇರಿಸಿ ಹೊಲಿದ ಕೌದಿ ಹೊದ್ದುಕೊಂಡು ಬೆಂಗಳೂರಿನ ಬಾಗಿಲು ತಟ್ಟಿದ ಹುಡುಗಿ ಬದುಕು ಕಟ್ಟಿಕೊಂಡು ಹೀಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಭಾವನೆಗಿಂತ ಬದುಕು ದೊಡ್ಡದು, ಬದುಕಿಗಿಂತ ಸಾಧನೆ ದೊಡ್ಡದು. ಸಾವಿಗೆ ಇರುವುದರ ಸಾವಿರ ಪಟ್ಟು ಹೆಚ್ಚು ದಾರಿಗಳಿವೆ ಬದುಕುವುದಕ್ಕೆ. ಇಂದಿನ ಯುವ ಸಮೂಹಕ್ಕೆ ಇದು ಅರಿವಾಗಬೇಕಷ್ಟೇ.

‍ಲೇಖಕರು Admin

January 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

    • ಶಮ, ನಂದಿಬೆಟ್ಟ

      ಧನ್ಯವಾದ. ದೇಶ ಕಟ್ಟಬಲ್ಲ ಮನಸ್ಸುಗಳು ದೃಢವಾಗಲೆಂದು ಕನಸೋಣ.

      ಪ್ರತಿಕ್ರಿಯೆ
  1. Anonymous

    ನಿಮ್ಮ ಮನ ತಟ್ಟುವ ಬರಹ ಓದಿ ಕವಿ ಇಕ‍್ಬಾಲರ ಈ ಶೇರ್ ನೆನಪಾಯಿತು, ಶಮ
    “ತು ಶಾಹೀನ ಹೈ ಪರವಾಜ ಹೈ ಕಾಮ ತೇರಾ
    ತೆರೇ ಸಾಮನೆ ಆಸಮಾ ಅವರ ಭೀ ಹೈ”
    “an eagle you are, born to soar,
    skies galore for you to scale”
    ನಿಮ್ಮ ಅನಮ್ಯ ಚೇತನ, ಅದಮ್ಯ ಕೆಚ್ಚು ಯುವ ಜನಾಂಗವನ್ನು ಎಚ್ಚರಿಸಲಿ.
    keep it up shama.

    ಪ್ರತಿಕ್ರಿಯೆ
  2. Gn Nagaraj

    ಶಫಿ, ಸಂವಾರ್ಥ, ಮತ್ತು ಶಮಾ -ಈ ಮೂರೂ ಜನರ ನಡುವಣ ಸಂವಾದ ಓದಿದೆ. ಇದೇ ಸಂವಾದ ಬೇರೆ ಬೇರೆ ಗುಂಪುಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ನಡೆದಿದೆ. ನಾವೆಲ್ಲರೂ ಇಂತಹ ಪರಿಸ್ಥಿತಿಯನ್ನು ಯಾರೇ ಆಗಲಿ ದಿಟ್ಟತನದಿಂದ ಎದುರಿಸಬೇಕೆಂದು ಬಯಸುತ್ತೇವೆ. ನಿಜ. ಆದರೆ ಮಾನವ ಮನಸ್ಸಿನ ವಾಸ್ತವದ ಬಗ್ಗೆ ಕೂಡ ಅರಿವು ಬೇಕು. ಈ ವಾದಗಳಲ್ಲಿ ಮುಖ್ಯವಾದ ಒಂದು ವಿಷಯ ಗಣನೆಗೆ ಬಂದಿಲ್ಲ. ಅದು ಆತ್ಮಹತ್ಯೆ ಮತ್ತು ಮಾನವ ಮನಸ್ಸು ಮತ್ತು ಮೆದುಳಿನ ರಚನೆಯ ನಡುವಣ ಸಂಬಂಧ. ವ್ಯಕ್ತಿಗಳ ನಡುವೆ ಅನೇಕ ವ್ಯತ್ಯಾಸಗಳಿದ್ದಂತೆ ಅವರ ಮೆದುಳಿನ ರಾಸಾಯನಿಕ ರಚನೆ ಮತ್ತು ಮನಸ್ಸಿನ ಭಾವನೆಗಳ ನಡುವೆ ಬಹಳ ಹತ್ತಿರದ ಸಂಬಂಧ ಇದೆ. ಪ್ರಜ್ಞೆ ಮತ್ತು ಸುಪ್ತ ಪ್ರಜ್ಞೆ ಎಂಬುದೂ ಇದೆ. ಪರಿಸ್ಥಿತಿಯ ವ್ಯತ್ಯಾಸಗಳು ವಿವಿಧ ವ್ಯಕ್ತಿಗಳ ಮೇಲೆ ಕೇವಲ ಸುಪ್ತ ಪ್ರಜ್ಞೆಯ ಮಟ್ಟದಲ್ಲಿ ಹಾಗೂ ರಾಸಾಯನಿಕಗಳ ಉತ್ಪಾದನೆಯ ಮಟ್ಟದಲ್ಲಿ ಮಾನವ ಪ್ರಜ್ಞೆಗೆ ಅರಿವೇ ಇಲ್ಲದಂತೆ ಪರಿಣಾಮಗಳನ್ನು ಉಂಟು ಮಾಡುತ್ತಿರುತ್ತವೆ. ಅದು ಅವನ ವಂಶವಾಹಿಗಳ ಮೇಲೆ , ಬಾಲ್ಯದ ಅನುಭವ ಮತ್ತು ಬೆಳವಣಿಗೆ ಮೇಲೆ ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿ ಪ್ರೌಢನಾದ ಮೇಲೆ ಪಡೆಯುವ ಬೌದ್ಧಿಕ ಬೆಳವಣಿಗೆ ಇದನ್ನು ಪೂರ್ಣವಾಗಿ ನಿವಾರಿಸಿಬಿಡುವುದಿಲ್ಲ.
    ಪರಿಸ್ಥಿತಿಯಲ್ಲಿ ಉಂಟಾಗುವ ಪೂರ್ತಿಯಾದ ನೆಗಟಿವ್ ಆದ ಬೆಳವಣಿಗೆ ಅಂತಹ ವ್ಯಕ್ತಿಗಳಲ್ಲಿ ಮಾನಸಿಕ ಭಾವನೆಗಳನ್ನು ಏರು ಪೇರು ಮಾಡುವಂತಹ ರಾಸಾಯನಿಕಗಳನ್ನು ಉತ್ಪಾದನೆಯನ್ನು ಟ್ರಿಗ್ಗರ್ ಮಾಡುತ್ತದೆ. ಪ್ರತಿಕೂಲ ಪರಿಸ್ಥಿತಿ ಮುಂದುವರೆದಂತೆ ಆ ವ್ಯಕ್ತಿಗೆ ಅರಿವೇ ಇಲ್ಲದಂತೆ ಈ ರಾಸಾಯನಿಕಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅವು ಆ ವ್ಯಕ್ತಿಯ ವರ್ತನೆಯ ಮೂಲಕ ಕೆಲವು ಸಂಜ್ಞೆಗಳನ್ನು ನೀಡುತ್ತವೆ . ಇದು ಆ ವ್ಯಕ್ತಿಗೆ ಅರಿವಿರುವುದಿಲ್ಲ. ಬದಲಾಗಿ ಸುತ್ತ ಮುತ್ತಲಿನವರು ಸೂಕ್ಷ್ಮವಾಗಿದ್ದರೆ ಮಾತ್ರ ಅರಿವಿಗೆ ಬರುತ್ತದೆ.
    ರೋಹಿತ್ ನ ವಿಚಾರದಲ್ಲಿ ಇಂತಹ ಹಲವು ಪ್ರತಿಕೂಲ ಬೆಳವಣಿಗೆಗಳಾಗಿವೆ. ಹಲವು ತಿಂಗಳುಗಳಿಂದ ವಿದ್ಯಾರ್ಥಿ ವೇತನ ಬಾರದೆ ಅವನು ಮತ್ತು ಇತರ ಗೆಳೆಯರಿಗೂ ತೊಂದರೆಯಾಗುತ್ತದೆ.ನಂತರ ೊಂದು ಡಾಕ್ಯುಮೆಂಟರಿ ತೋರಿಸಲಾಗದ ಅಸಹಾಯಕತೆ, ಅದರಿಂದ ಏಬಿವಿಪಿ ನಾಯಕರ ಮೇಲೆ ಹುಟ್ಟಿದ ಕೋಪ ಻ವರ ಟೀಕಾ ಧಾಳಿಯಿಂದ ಮತ್ತಷ್ಟು ಬೆಳೆದು ಸಂಘರ್ಷಕ್ಕೆ ಈ ಡು ಮಾಡಿದ್ದು. ವಿವಿ ಉಪಕುಲಪತಿಯಿಂದ ರಸ್ಟಿಕೇಷನ್ ಮತ್ತು ನಾಲ್ಕಾರು ತಿಂಗಳ ನಂತರ ಹಾಸ್ಟೆಲಿನಿಂದ ಹೊರದಬ್ಬಿದ್ದು. ಿಂತಹ ಪರಿಸ್ಥಿತಿಯಲ್ಲಿ ಮನೆಯಿಂದ ,ಗೆಳೆಯರಿಂದ ಕೂಡ ಯಾವುದೇ ನೆರವು ಸಿಗದ ಸ್ಥಿತಿ. ಅವರ ಪ್ರತಿಭಟನೆಗೆ ಸ್ಪಂದನೆ ಸಿಗದೇ ಹೋದದ್ದು.
    ಈ ಎಲ್ಲ ಸೇರಿ ಅವನು ವಿಷ ಕೊಡಿ ಅಥವಾ ನೇಣು ಹಗ್ಗ ಕೊಡಿ ಎಂದು ವಿಸಿಗೆ ಪತ್ರ ಬರೆದದ್ದು ಅವನಲ್ಲೆ ಬೆಳೆಯುತ್ತಿದ್ದ ಹತಾಶೆಯ ಮೊದಲ ಸೂಚನೆ ಅದನ್ನು ನಿರ್ಲಕ್ಷಿಸಿದಾಗ ಅವನ ಮೆದುಳಿನಲ್ಲಿ ಪ್ರತಿಕೂಲ ರಾಸಾಯನಿಕಗಳ ತಯಾರಿಕೆ ತೀವ್ರಗೊಂಡು ಅದರ ಪ್ರಮಾಣ-ಕಾನ್ಸಂಟ್ರೇಷನ್ ಅವನ ವಿಚಾರಶೀಲತೆಯನ್ನು ಮಂಕುಗೊಳಿಸುವಂತಹ ಪ್ರಮಾಣಕ್ಕೆ ಬೆಳೆಸಿರುತ್ತದೆ. ಅವನ ಜೊತೆ ಯಾರಾದರೂ ಹಿಂದಿನ ದಿನ ಕೂಡ ನಿರಾಶಾ ಭಾವನೆಯ ಮಾತುಗಳನ್ನಾಡಿದ್ದರೆ ಅವನೇ ಅವರಿಗೆ ಧೈರ್ಯ ಹೇಳುವ ಸಂಭವವೇ ಇರುತ್ತಿತ್ತೇನೋ.
    ಅದೇ ಸಮಯದಲ್ಲಿ ಅವನ ಜೊತೆ ಹೊರದೂಡಲ್ಪಟ್ಟ ಇತರರಲ್ಲಿ ಈ ಪರಿಸ್ಥಿತಿ ಕೆಚ್ಚು ಮೂಡಿಸಿ ಮತ್ತಷ್ಟು ಗಟ್ಟಿಯಾಗಿಸಬಹುದು. ಇದು ಆಯಾ ವ್ಯಕ್ತಿಗಳ ಮೆದುಳಿನ ರಚನೆಗೆ ಸಂಬಂಧಿಸಿದ್ದು. ದೊಡ್ಡ ಪ್ರಮಾಣದ ಮತ್ತು ಬಹಳ ಜನರ ಮೇಲೆ ಪರಿಣಾಮ ಬೀರುವ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ರೈತ ಆತ್ಮಹತ್ಯೆಗಳು , ವಿದ್ಯಾರ್ಥಿ ಆತ್ಮ ಹತ್ಯೆಗಳು ಇಂತಹವು ಜರುಗುತ್ತವೆ. ಏಕೆಂದರೆ ಇವು ವಿವಿಧ ರೀತಿಯ ಮೆದುಳಿನ ರಾಸಾಯನಿಕ ರಚನೆಯ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತ ಅವರಲ್ಲಿ ಕೆಲವರ ಮೇಲೆ ಆತ್ಮಹತ್ಯೆಯಂತಹ ವರ್ತನೆಯನ್ನು ಟ್ರಿಗ್ಗರ್ ಮಾಡುವಂತಹ ಪರಿಣಾಮ ಮಾಡುತ್ತದೆ.
    ಅಂತಹ ಸಂದರ್ಭಗಳಲ್ಲಿ ಮಾತ್ರವಲ್ಲ ೆಂತಹುದೇ ಆತ್ಮಹತ್ಯೆಗಳ ಸಂದರ್ಭದಲ್ಲಿಯೂ ಜರಿಯುವುದಕ್ಕಿಂತ ಅರಿಯುವ ಪ್ರಯತ್ನವೇ ವೈಜ್ಞಾನಿಕ ಮತ್ತು ಮಾನವೀಯ . ಪ್ರತಿಯೊಂದನ್ನೂ ತಮ್ಮ ಅನುಭವ ಮಾತ್ರದಿಂದಲೆ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅಳೆಯಲಾಗುವುದಿಲ್ಲ.
    ಿಂತಹ ವರ್ತನೆಗೆ ಕಾರಣವಾದ ಪರಿಸ್ಥಿತಿಯನ್ನು ದೂಷಿಸುವ , ಬದಲಾಯಿಸುವ ಬದಲು ರೈತರನ್ನು, ವಿದ್ಯಾರ್ಥಿಗಳನ್ನು, ಪ್ರೇಮಿಗಳನ್ನು ,ರೋಹಿತ್ ನನ್ನು ದೂರುವುದು ಈ ಆತ್ಮಹತ್ಯೆ ಮಾತ್ರವಲ್ಲ ಮುಂದಿನ ಆತ್ಮ ಹತ್ಯೆಗಳನ್ನೂ ನಿಲ್ಲಿಸಲಾಗುವುದಿಲ್ಲ.
    ಜಾತಿ ವ್ಯವಸ್ಥೆ ಎಂಬ ಬಂಡೆಗಲ್ಲು ಒಂದು ಕಡೆ ಪ್ರೇಂ ವೈಫಲ್ಯ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುವಂತೆಯೇ ಮೀಸಲಾತಿಯ ಬಗ್ಗೆ ದ್ವೇಷ ಮತ್ತು ಅದರ ಪ್ರಯೋಜನ ಪಡೆದ ವಿದ್ಯಾರ್ಥಿಗಲಿಗೆ ನರಕವನ್ನೂ ಸೃಷ್ಠಿಸಿದೆ. ಅದರಲ್ಲಿಯೂ ಮೇಲ್ಜಾತಿ ಹಿಡಿತ ಪ್ರಬಲವಾಗಿರುವ ಉನ್ನತ ಐಐಟಿ,ಐಐಎಂ ಗಳಂತಹ ಸಂಸ್ಥೆಗಳಲ್ಲಿ ಇಂತಹ ಘಟನೆಗಳನ್ನು ಆಗಾಗ್ಗೆ ಕಾನುತ್ತೇವೆ. . ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವರ ರೆಕ್ಕೆಗೆ ನೀರು ತಟ್ಟಿದಂತಾಗಿ ಮತ್ತು ಉನ್ನತ ಹುದ್ದೆಗಳಿಗೆ ಇಂತಹವರ ನೇಮಕಗಳಿಂದ ಈ ಪರಿಸ್ಥಿತಿ ಬಿಗಡಾಯಿಸಿದೆ. ಈ ಮೂಲಭೂತ ಸಂಗತಿಯನ್ನು ಕಡೆಗಿಟ್ಟು ರೋಹಿತನಂತಹ ವ್ಯಕ್ತಿಯನ್ನು ಜರಿಯುವುದು ಸರಿಯಲ್ಲ. ಅವನು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂಬವರ ಭಾವನೆಯನ್ನು ಗೌರವಿಸುತ್ತಲೇ ಈ ವಿವರಣೆ ಕೊಡಬಯಸುತ್ತೇನೆ. ನಮ್ಮ ಗುರಿ ಇಂತಹ ಾತ್ಮಹತ್ಯೆಗಳಿಗೆ ಕಾರಣವಾದ ಪರಿಸ್ಥಿತಿಗಳ ವಿರುಧ್ಧವೇ ಇರಬೇಕಾಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: