ಸಂಪು ಕಾಲಂ : ಸಿಕ್ಸ್ ಸಿಗ್ಮಾ ಮತ್ತು ಬಾಂಬೆಯ ಡಬ್ಬಾವಾಲ..

ಸಿಫ಼ು ಮತ್ತು ಸಿಕ್ಸ್ ಸಿಗ್ಮಾ

ಇತ್ತೀಚೆಗೆ ನನ್ನ ಆಫ಼ೀಸಿನಲ್ಲಿ ಒಂದು ಹೊಸ ಪ್ರಾಜೆಕ್ಟ್ ಬಂದಿತ್ತು, ಕಾರ್ಪೊರೇಟ್ ಲೋಕದಲ್ಲಿ ಈ ಕಂಪನಿ ದೊಡ್ಡಣ್ಣ. ಮತ್ತಿನ್ನು ಕೇಳಬೇಕೆ, ನಮ್ಮ ಇಡೀ ಆಫ಼ೀಸು, ’ಸಕುಟುಂಬ ಸಮೇತ’ರಾಗಿ ಈ ಯೋಜನೆಗಾಗಿ ತಮ್ಮ ಜೀವವನ್ನು ಅರ್ಪಿಸುವ ಪಣತೊಟ್ಟಿದ್ದೆವು. ನಮ್ಮಲ್ಲಿ ಕೆಲವರಿಗಂತೂ ಮನೆ-ಮಠಗಳೆಲ್ಲಾ ಮರೆತು ಅಹರ್ನಿಷಿ ದುಡಿದರು. ಕೊನೆಗೂ ಆ ಪ್ರಾಜೆಕ್ಟ್ ಕಳಿಸಿ ಉಸ್ಸಪ್ಪಾ ಅಂತ ನಿಟ್ಟುಸಿರು ಬಿಡುವಂತಿಲ್ಲ, ಹೋದ್ಯಾ ಜೀವ ಅಂದ್ರೆ ಬಂದೆ ನಿನ್ ಹಿಂದೆ ಅನ್ನೋ ಹಾಗೆ, ಧುತ್ತೆಂದು ಮರುಕಳಿಸಿತ್ತು ಒಂದು ಖಾರವಾದ ಈ-ಮೇಲ್!

ಅದರ ಸಾರಾಂಶ, ಸಣ್ಣ ಸಣ್ಣ, ಕಂಡರೂ ಕಾಣದಷ್ಟು ನಿರ್ಲಕ್ಷಿಸಬಹುದಾದಂತಹ ತಪ್ಪುಗಳನ್ನು ಎತ್ತಿ ಹಿಡಿದು ತೋರಿ, ನಿಮ್ಮ ಕೆಲಸ ಕೆಲಸವೇ ಅಲ್ಲ ಅನ್ನುವ ಮಟ್ಟಿಗೆ ಕಡೆಗಣಿಸಿರುವುದು. ನನ್ನನೂ ಸೇರಿ ಕೆಲವರಿಗಂತೂ ಸಿಕ್ಕಾಪಟ್ಟೆ ಕೋಪ ಬಂದಿತ್ತು! ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ, ನಾನಂತೂ ರೇಸಿಸಮ್ಮು, ಕಾರ್ಪೋರೇಟ್ ಕಲ್ಚರ್ರು, ಕ್ಯಾಪಿಟಲಿಸಮ್ಮು, ಎಂದು ನನಗೆ ಗೊತ್ತಿದ್ದ ಕಾನ್ಸೆಪ್ಟುಗಳನ್ನೆಲ್ಲಾ ನೆನೆದು ಹಿಡಿ ಶಾಪ ಹಾಕುತ್ತಿದ್ದೆ.

ಯಥಾಪ್ರಕರ ನಮ್ಮ ಮೆನೇಜರಿಂದ “ಟೀಮ್ ಮೀಟಿಂಗ್” ಎಂದು ಸಂದೇಶ ಬಂತು. ಇನ್ನು ಶುರು ಹೊಸ ಬಗೆಯ ವ್ಯಾಖ್ಯಾನಗಳು, ಯೋಜನೆಗಳು ಎಂದು ಬಗೆದು ಮೀಟಿಂಗ್ ಹಾಜರಾದೆವು. ಆಗಲೇ ನನಗೆ ಪರಿಚಯವಾದದ್ದು ಈ ’ಸಿಕ್ಸ್ ಸಿಗ್ಮ’ ಪರಿಕಲ್ಪನೆ. ಬಹುಪಾಲು ಸರಿ, ಸಾಕಷ್ಟು ನಿಖರವಾದದ್ದು ಎಂದು ನಾವು ಸುಮ್ಮನಾಗುತ್ತೇವೆ. ಒಂದು ಸ್ವಲ್ಪ ಸಣ್ಣ ತಪ್ಪಿದ್ದರೆ “ನಡಿಯತ್ತೆ” ಅಂತ ನಮ್ಮ ಭಾವನೆ. ಆದರೆ ಅದರ ತದ್ವಿರುಧ್ದ ಈ ಸಿಕ್ಸ್ ಸಿಗ್ಮ. ಸಂಪೂರ್ಣ ನಿಖರತೆಯತ್ತ ಗಮನವಿಡುವ ಈ ತತ್ವ, ಇಂದು ಅನೇಕ ಯಶಸ್ವೀ ಪ್ರಪಂಚದ ಒಳಗುಟ್ಟು.

ಇದನ್ನು ಅರಿಯಲು ಯಾವುದೋ ಬಹುರಾಷ್ಟ್ರೀಯ ಕಂಪನಿಯು ಬೇಕಿಲ್ಲ ರೀ, ನಮ್ಮ ಮುಂಬೈನ ಗಲ್ಲಿ ಗಲೀಲಿ ತಿರುಗುವ ಡಬ್ಬಾವಾಲಾಗಳು ಸಾಕು. ಈ ಡಬ್ಬಾವಾಲಾಗಳ ಬಗ್ಗೆ ನೀವೀಗಾಗಲೇ ಕೇಳಿರಬಹುದಲ್ಲವೇ? ಈ ಅನಕ್ಷರಸ್ಥ, ಕಡು ಬಡತನ ಅನುಭವಿಸುವ ಜನ, ಜಗತ್ತಿನ ಅತಿ ಯಶಸ್ವೀ ಬುಸಿನೆಸ್ ಮನ್ ಗಳು ಅನ್ನುವುದನ್ನು ಕೇಳುವುದೇ ಸ್ವಾರಸ್ಯಕರ ಮತ್ತು ಹೆಮ್ಮೆಯ ವಿಷಯ.

ಸಮಯಕ್ಕೆ ಸರಿಯಾಗಿ ಸ್ವಲ್ಪವೂ ಆಚೀಚೆ ಆಗದೇ ಶುಚಿಯಾದ ಬಿಸಿ ಹಾಗೂ ರುಚಿಕರ ಊಟವನ್ನು ಒದಗಿಸುವುದು ಈ ಡಬ್ಬಾವಾಲಾಗಲ ಕೆಲಸ. ಇವರ ಕೆಲಸದ ಅಚ್ಚುಕಟ್ಟು ಮತ್ತು ನಿಖರತೆ ಎಷ್ಟೆಂದರೆ, ಆರು ಮಿಲಿಯನ್ ಡಬ್ಬಾಗಳು (ಅಥವಾ ಟಿಫ಼ನ್ ಬಾಕ್ಸ್ ಗಳು) ಇವರಿಂದ ಕಳುಹಿಸಲ್ಪಟ್ಟರೆ ಅದರಲ್ಲಿ ಒಂದು ತಪ್ಪಿರಬಹುದು! ಇಂತಹ ಖಚಿತತೆ, ಕಾರ್ಯನಿಷ್ಟತೆ ನಿಜಕ್ಕೂ ನಮ್ಮಲ್ಲಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಈ ಡಬ್ಬಾವಾಲಾಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಈ ವಿಷಯ ಕೇಳಿದ ನಂತರ ಮನವರಿಕೆಯಾಯಿತು. ತತ್ತಕ್ಷಣವೇ ನೆನಪಾದದ್ದು ಮನೆಯಲ್ಲೇ ಆ ಹೆಸರಿನ ಪುಸ್ತಕ ಒಂದಿದೆ! ಆದರೆ ಅದರ ಕಡೆ ಗಮನವೇ ಹರಿಸಿಲ್ಲ ಎಂದು. ಅದೇ ಸಂಜೆ ಮನೆ ತಲುಪಿ ಆ ಪುಸ್ತಕ ಹುಡುಕಿ ಓದಿದೆ.

ಇದು ಅವರಿಂದ ಹೇಗೆ ಸಾಧ್ಯವಾಯಿತು, ಓದು ಬರಹ ಬರದ ನಿರಕ್ಷರಕುಕ್ಷಿಗಳು ಎಂದು ನಾವು ತಿಳಿದು ಬೀಗುವ ಇಂತಹ ಅತೀ ಸಾಮಾನ್ಯ ಜನ ಜಾಗತಿಕ ಮಟ್ಟಕ್ಕೆ ಏರುವ ಸಾಧ್ಯತೆಯಾದರೂ ಹೇಗಾಯಿತು ಎಂದು ಆಲೋಚಿಸಿ ಗೆಳೆಯರೇ, ಇದಕ್ಕೆ ಉತ್ತರ ಇಷ್ಟೇ: ಅವರ ಕಠಿಣ ಪರಿಶ್ರಮ ಮತ್ತು ಶ್ರದ್ಧೆ. ನಮ್ಮೂರಲ್ಲಿ ಕೆಲಸ ಮಾಡೋ ಒಬ್ಬ ಹೆಂಗಸಿನ ಬಗ್ಗೆ ನಮ್ಮಜ್ಜಿ ತೆಲುಗಲ್ಲಿ ಹೇಳೋರು “ಓ ಅಂಟೆ ಟಾ ರಾದು, ಎಂತ ಬಾಗ ಪನಿ ಚೇಸ್ತುಂದಿ ತೆಲ್ಸಾ” (ಓ ಅಂದ್ರೆ ಟಾ ಬರಲ್ಲ, ಎಷ್ಟು ಚೆನ್ನಾಗಿ ಕೆಲಸ ಮಾಡ್ತಾಳೆ ಗೊತ್ತಾ) ಅಂತ. ಈ ಡಬ್ಬಾವಾಲಾಗಳ ಬಗ್ಗೆ ಕೇಳಿದಾಕ್ಷಣ ನನಗೆ ನಮ್ಮ ಅಜ್ಜಿಯ ಆ ’ಸ್ನೇಹಿತೆ’, ಮೌನವಾಗಿ ತನ್ನ ಕೆಲಸ ತಾನು ಮಾಡುತ್ತಾ, ಕಂಡಾಗ ಒಂದು ಮಂದಹಾಸ ಬೀರಿ “ಸೆಂದಾಗಿದೀಯಾ?” ಎಂದು ಕೇಳಿ ಮತ್ತೆ ತನ್ನ ಕೆಲಸದತ್ತ ಮರಳುತ್ತಿದ್ದ ಚಿತ್ರಣ ಮೂಡಿತು. ಕಾಯಕವೇ ಕೈಲಾಸ ಎಂದ ಬಸವಣ್ಣನ ನೆನೆದು, ಆ ಖಾರದ ಸಂದೇಶಕ್ಕೆ ಅಡ್ಡಮುಖ ಮಾಡಿದ ನನ್ನ ಬಗ್ಗೆ ಕೆಟ್ಟೆನಿಸಿತು. ಸತತ ಪರಿಶ್ರಮ, ಗಮನ, ಶ್ರದ್ಧೆಗಳಿದ್ದರೆ ಯಾವುದೇ ಕೆಲಸ ಸಾಧ್ಯ ಎಂಬುದಕ್ಕೆ ಈ ಡಬ್ಬಾವಾಲಾಗಳೊಂದು ಮಾದರಿ ಎನಿಸಿತು.

ಸ್ಟ್ರೀಮ್ ಆಫ಼್ ಕಾನ್ಶಿಯಸ್ ನೆಸ್ ಥರ, ಈ ಎಲ್ಲ ಘಟನೆ, ನೆನಪು, ಅನಿಸಿಕೆಗಳ ನಡುವೆ ಇಣುಕಿದ್ದು, ತುಂಬಾ ಹಿಂದೆ ಕೇಳಿದ/ಓದಿದ (ನೆನಪಿಲ್ಲ) ಒಂದು ಚೈನೀಸ್ ಕಥೆ.

ಹೀಗೇ ಸಿನೆಮಾ ನೋಡುತ್ತಿದ್ದ ಒಬ್ಬ ಚೈನೀಸ್ ಹುಡುಗನಿಗೆ, ಆ ಸಿನೆಮಾದಲ್ಲಿ ಕಂಡಂತೆ ತಾನೂ ಕುಂಗ್ ಫ಼ೂ ಕಲಿಯಬೇಕು, ಆ ನಟನಂತೆ ತಾನೂ “ಯಾ ಹೂ” ಎಂದು ಷಾಟ್ ಹೊಡೆಯಬೇಕು ಎಂದು ತುಂಬಾ ಆಸೆಯಾಯಿತು. ಅದರಲ್ಲಿ ಕಂಡ ಆ ನಾಯಕ ಒಂದೇ ಉಸಿರಿನಲ್ಲಿ, ಒಂದೇ ಹೊಡೆತಕ್ಕೆ ಮುರಿದ ಮರದ ಬೆಂಚನ್ನು ಕಂಡು ಪುಳಕಗೊಂಡು ತಾನೂ ಪ್ರಯತ್ನಿಸಿದ. ಕೈ ಇನ್ನಿಲ್ಲಲಾರದಷ್ಟು ಪೆಟ್ಟಾಯಿತೇ ಹೊರತು, ಆ ಮೇಜಿಗೆ ಏನೂ ಆಗಲಿಲ್ಲ. ನೋವು, ನಿರಾಶೆಗಳಿಂದ ಅಳುತ್ತಾ ಕೂತ ಪುಟ್ಟ ಪೋರನನ್ನು ಕಂಡು ವಿಷಯವರಿತ ತಂದೆ, ಮಗನನ್ನು ಕುಂಗ್ ಫ಼ೂ ತರಗತಿಗೆ ಸೇರಿಸುವುದಾಗಿ ತಿಳಿಸಿದ.

ಆ ಹುಡುಗನನ್ನು ಸಿಫ಼ು (ಚೈನೀಸ್ ಭಾಷೆಯಲ್ಲಿ ಗುರು) ಒಬ್ಬನ ಹತ್ತಿರ ಬಿಟ್ಟು ಬಂದ. ಹುಡುಗ ಅತ್ಯಂತ ಹುರುಪಿನಿಂದ ತನ್ನ ಸಿಫ಼ುವಿಗೆ ವಂದಿಸಿ ತಾನೇನು ಮಾಡಬೇಕೆಂದು ಕೇಳಿದ. ಅದಕ್ಕೆ ಆ ಗುರು, “ಒಂದು ಪಾತ್ರೆಯ ತುಂಬ ನೀರು ತುಂಬಿ ತಂದು ಅದನ್ನು ನಿನ್ನ ಕೈಯಿಂದ ಹೋಡಿ. ಹೊಡೆದು ಹೊಡೆದು ನೀರು ಆ ಪಾತ್ರೆಯಿಂದ ಖಾಲಿಮಾಡು” ಎಂದ. ಉತ್ಸಾಹದಿಂದ ಹುಡುಗ ಅದನ್ನೇ ಮಾಡಿದ. ಪಾತ್ರೆಯ ನೀರು ಮುಗಿದ ನಂತರ ಮತ್ತೇನು ಮಾಡಬೇಕೆಂದು ಕೇಳಿದ. ಸಿಫ಼ು, “ಅದನ್ನೇ ಪುನರಾವರ್ತಿಸು” ಎಂದ. ಈ ಹುಡುಗ ಬೇಗ ಮಾಡಿ ಮುಂದೇನೆಂದು ಕೇಳಿದ. ಸಿಫ಼ುವಿನ ಉತ್ತರ ಮತ್ತೆ ಅದೇ! ಹೀಗೇ ಒಂದು ವಾರ ಪೂರ್ತಿ ಕಳೆಯಿತು. ಕೆಲಸದಲ್ಲಿ ವ್ಯತ್ಯಾಸವಿಲ್ಲ. ಈ ಹುಡುಗನಿಗೆ ಆಶ್ಚರ್ಯವಾಯಿತು. ತನ್ನ ಸಿಫ಼ುವಿನ ಬಗ್ಗೆ ಸಿಟ್ಟಾಯಿತು. ಈತನಿಗೆ ಕಲಿಸಲು ಆಲಸಿತನ ಎಂದು ಶಪಿಸಿದ. ಒಂದು ತಿಂಗಳಾಯಿತು, ಆರು ತಿಂಗಳು, ಒಂದು ವರ್ಷ ಕಳೆದೇ ಹೋಯಿತು. ಹುಡುಗನ ಕೆಲಸ ಬದಲಾಗಿಲ್ಲ! ನಿರಂತರವಾಗಿ ಪಾತ್ರೆಯಲ್ಲಿ ನೀರು ತುಂಬುವುದು ಅದನ್ನು ಹೊಡೆದು ಹೊರಚೆಲ್ಲುವುದು, ಅಷ್ಟೇ!

ತನ್ನ ಸಿಫ಼ುವಿನ ಬಗೆಗೆ ಪೂರ ಅನುಮಾನ. ಈತ ಸಿಫ಼ುವಾಗಲು ಲಾಯಕ್ಕೇ ಅಲ್ಲ, ತನ್ನ ಒಂದು ವರ್ಷ ಸಂಪೂರ್ಣ ನಿಸ್ಸಾರವಾಯಿತು ಎಂದು ಖಿನ್ನನಾಗಿ, ತಾನು ಮನೆಗೆ ಮರಳುವುದೆಂದು ನಿರ್ಧರಿಸಿದ. ತನ್ನ ಸಿಫ಼ುವಿಗೆ ತಿಳಿಸಿ ಮನೆಗೆ ಮರಳಿದ. ಮನೆಯ ಬಳಿ ಎಲ್ಲರಿಗೂ ಈತ ಕಲಿತಿರಬಲ್ಲ ಕುಂಗ್ ಫ಼ೂ ವಿದ್ಯೆಯ ಬಗೆಗೆ ಕೌತುಕ! “ಹೇಗಿತ್ತು? ಏನೆಲ್ಲ ಕಲಿತೆ? ನೀನು ಗೋಡೆ ಮುರಿಯಬಲ್ಲೆಯಾ? ಯಾವ ಯಾವ ಪ್ರಾಕರಗಳನ್ನು ಕರಗತಗೊಳಿಸಿದ್ದೀ?” ಹೀಗೆ ಹತ್ತು ಹಲವಾರು ಪ್ರಶ್ನೆಗಳು. ಈ ಹುಡುಗನಿಗೋ ಓಡಿ ಹೋಗಿ ಮುಖ ಮರೆಮಾಚುವಾ ಎಂಬ ಪ್ರಮೇಯ. ಮತ್ತಷ್ಟು ವಿಷಣ್ಣನಾಗಿ, ಏನೂ ಮಾತಾಡದೇ ಊಟಕ್ಕೆ ಕೂತ. ತನ್ನ ಸಹಪಾಠಿಗಳೆಲ್ಲಾ ತಮ್ಮ ಸಂದೇಹಗಳೊಂದಿಗೆ ಮತ್ತೆ ಪೀಡಿಸಲಾರಂಭಿಸಿದರು.

ಸಿಟ್ಟಿಗೆದ್ದ ಹುಡುಗ, “ನನಗೇನೂ ಬರುವುದಿಲ್ಲ” ಎಂದು ತನ್ನ ಊಟದ ಮೇಜಿನಮೇಲೆ ಬಡಿದ. ಆ ಮೇಜು ಎರಡು ಹೋಳಾಗಿತ್ತು! ತನ್ನನ್ನೂ ಸೇರಿ ಸ್ನೇಹಿತರಿಗೆಲ್ಲಾ ಆಶ್ಚರ್ಯ! “ಒಂದೇ ವರ್ಷದಲ್ಲಿ ಎಷ್ಟೆಲ್ಲಾ ಕಲಿತೆಯೋ ಮಗನೇ” ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. ಒಂದು ವರ್ಷದ ಹಿಂದೆ ಸಿನೆಮಾದ ನಾಯಕನನ್ನು ನಕಲು ಮಾಡಲು ಹೋಗಿ ಕೈ ಮುರಿದುಕೊಂಡ ನೆನಪಾಗಿ, ಆ ಹುಡುಗ ತನ್ನ ಸಿಫ಼ುವಿಗೆ ಮನದಲ್ಲೇ ವಂದಿಸಿದ. ತಕ್ಷಣವೇ ಸಿಫ಼ುವಿನ ಬಳಿ ಮರಳಲು ಅನುವಾದ.

ಈ ಕಥೆಯಲ್ಲೂ ಕಾಣಬರುವುದು, ಆ ಹುಡುಗನ ಅಸಾಧಾರಣ ಪರಿಶ್ರಮ ಮತ್ತು ಶ್ರದ್ಧೆ. ಕೆಲಸ ಎಷ್ಟು ಏಕತಾನತೆಯಿಂದ ಕೂಡಿದ್ದರೂ ಶ್ರದ್ಧೆಯಿಂದ ಪರಿಪಾಠಿಸಿದರೆ ಅದರ ಫಲ ಖಂಡಿತ. ಬರಿಯ ಫಲವಷ್ಟೇ ಅಲ್ಲ ಅದರ ಸಿಕ್ಸ್ ಸಿಗ್ಮಾ ಗರಿಮೆ ಕೂಡ ಅನ್ನುವುದು ಅರಿವಾಯಿತು. ನಮಗೆ ಬಂದಿದ್ದ ಆ ಖಾರದ ಸಂದೇಶವನ್ನು ಮೂಗು ಮುರಿಯದೆ ಮತ್ತೊಮ್ಮೆ ಗಮನವಿಟ್ಟು ಓದಲು ಮುಂದಾದೆ!

 

‍ಲೇಖಕರು G

October 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Santosh Mulimani

    ಚೆನ್ನಾಗಿದೆ ಲೇಖನ..ಧನ್ಯವಾದಗಳು !

    ಪ್ರತಿಕ್ರಿಯೆ
  2. Gopaal Wajapeyi

    ನಮ್ಮಲ್ಲೂ ಒಬ್ಬ ‘ಬಾಸ್’ ಇದ್ದರು. 63 ವರ್ಷ ನಮ್ಮ ಸಂಸ್ಥೆಯಲ್ಲೇ ದುಡಿದು ಹಣ್ಣಾದವರು. ನಮ್ಮನ್ನೂ ‘ಹಣ್ಣಾಗಿಸಿ’ದವರು. ಯಾವ ಕೆಲಸವನ್ನೂ ಯಾರನ್ನೂ ‘ಚೆನ್ನಾಗಿದೆ’ ಎಂದು ಯಾವತ್ತೂ ಪ್ರಶಂಶಿಸಿದವರೇ ಅಲ್ಲ. ನಮ್ಮನ್ನೆಲ್ಲಾ ಸಾರಾಸಗಟಾಗಿ ಬೈಯೋರು. ಅವರು ಹಾಗೆ ಬೈಯುತ್ತಿದ್ದುದರಿಂದಲೇ ನಾವೆಲ್ಲ ಮನವಿಟ್ಟು-ಗಮನವಿಟ್ಟು ಕೆಲಸ ಮಾಡುವಂತಾಯಿತು.
    ಡಬ್ಬಾವಾಲಾಗಳ ಕಾರ್ಯಶ್ರದ್ಧೆಯನ್ನು ನಾನು ಕಣ್ಣಾರೆ ಕಂಡು ಅಚ್ಚರಿಪಟ್ಟವನು.
    ನೀವು ಹೇಳಿದ ಆ ಚಿತ್ರ ಬ್ರೂಸ್ ಲೀಯದೆ ಇರಬೇಕು…
    ಲೇಖನ ಇಡಿಯಾಗಿ ಇಷ್ಟವಾಯಿತು.

    ಪ್ರತಿಕ್ರಿಯೆ
  3. Badarinath Palavalli

    ಇದು ನನಗೂ ಪಾಠವಾಗುವ ಕಥನ. ಅಚಲ ವಿಶ್ವಾಸ ಮತ್ತು ಕೆಲಸದಲ್ಲಿ ಶ್ರದ್ಧೆ ಬದುಕನ್ನು ರೂಪಿಸುತ್ತದೆ.

    ಪ್ರತಿಕ್ರಿಯೆ
  4. ಮಂಜುಳಾ ಬಬಲಾದಿ

    ಇನ್ನೊಂದು ವಿಚಾರ.. ಈಗಷ್ಟೇ ನೆನಪಾದದ್ದು..ನನ್ನ ಮಗ ನಂದನ್ ಹೆಚ್ಚೆಂದರೆ ಒಂದು ವರ್ಷದಿಂದ Balancing wheels ಇರುವ ಸೈಕಲ್ ಓಡಿಸುತ್ತಿದ್ದ.. ಮೊನ್ನೆಯಷ್ಟೇ ಆ Balancing wheels ತೆಗೆಸಿಬಿಟ್ಟೆವು. ಹತ್ತುವಾಗ-ಇಳಿಯುವಾಗ ಸ್ವಲ್ಪ ಕಷ್ಟವಾಯಿತೇ ಹೊರತು. ಎರಡೇ ದಿನದಲ್ಲಿ ಅವನು 2 ಗಾಲಿ ಸೈಕಲ್ ಆರಾಮಾಗಿ ಓಡಿಸಿಬಿಟ್ಟ.. ಸತತ ಅಭ್ಯಾಸದ ಬಲವೇ ಅಂಥದು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: