ಸಂಪು ಕಾಲಂ : ಮರೆತೇನಂದ್ರ ಮರೆಯಲಿ ಹ್ಯಾಂಗ…?

ಮರೆತೇನೆಂದರೆ ಮರೆಯಲಿ ಹ್ಯಾಂಗ!

– ಸಂಯುಕ್ತಾ ಪುಲಿಗಲ್

ಸರಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಯಾರದೋ ಮದುವೆಯಂತೆ, ಅಮ್ಮ ನನಗಾಗಿ ನವಿಲಿನ ಬಣ್ಣದ ಲಂಗ ಅದಕ್ಕೆ ಗುಲಾಬಿ ಬಣ್ಣದ ಜಾಕೆಟ್, ಪುಟ್ಟ ಪುಟಾಣಿ ಜುಮ್ಕಿಗಳು, ಘಲ್ಲೆನ್ನುವ ಕಾಲ್ಗೆಜ್ಜೆಗಳನ್ನು ತಂದಿದ್ದಳು. ಆ ಎಳೆ ವಯಸ್ಸಿನಲ್ಲಿ ಇವನ್ನೆಲ್ಲ ಹಾಕಿ ಮೆರೆಯುವುದೇ ಒಂದು ಹಬ್ಬ. ಅಮ್ಮನಿಗೆ ನನಗಿಂತಲೂ ದೊಡ್ಡ ಹಬ್ಬ. ತನ್ನ ಉಡುಗೆ ತೊಡುಗೆಯ ಬಗ್ಗೆ ಎಂದೂ ಗಮನ ಕೊಡದ ಅಮ್ಮ, ತನ್ನ ಮಕ್ಕಳ ವಿಷಯದಲ್ಲಿ ಹಾಗಲ್ಲ. ಸರಿ, ಆಕೆಗೆ ನನ್ನನಲಂಕರಿಸುವುದು ದಿಬ್ಬಣಕ್ಕೆ ಹೋಗುವುದಕ್ಕಿಂತ ಹೆಚ್ಚಿನ ವಿಷಯ. ಮುತುವರ್ಜಿಯಿಂದ ನನ್ನನ್ನು ತಯಾರು ಮಾಡಿದಳು. ನಿಜ ಹೇಳಬೇಕೆಂದರೆ, ಅಮ್ಮನಿಗಿಂತ ಹೆಚ್ಚು ತಾಳ್ಮೆಯಿಂದ, ಚೆಂದವಾಗಿ ನನ್ನನ್ನು ಅಣಿ ಮಾಡುತ್ತಿದ್ದುದು ಅಪ್ಪ. ತಲೆಗೆ ತೆಳುವಾದ, ಘಮ್ಮೆನ್ನುವ ಕೊಬ್ಬರಿ ಎಣ್ಣೆ ಸವರಿ, ನೇರವಾಗಿ ಬೈತಲೆ ತೆಗೆದು ತುಂಬ ಅಚ್ಚು ಕಟ್ಟಾಗಿ ಬಾಚಿ ಒಮ್ಮೆ ನನ್ನ ಮುಖ ನೋಡಿ, ನಕ್ಕು, ಕೆನ್ನೆ ಸವರಿ ಹೊರಡು ಎನ್ನುವುದು ಅಪ್ಪನ ವಾಡಿಕೆಯಾಗಿತ್ತು. ಎಲ್ಲರೂ ಸಿಧ್ಧಗೊಂಡ ಮೇಲೆ ಪ್ರಾರಂಭವಾಯಿತು ನಮ್ಮ ಮದುವೆಮನೆ ಸವಾರಿ. ಗಂಡಿನ ಕಡೆಯವರು, ನಮಗೇನಂತೆ ತಿಂಡಿ ಎಂದು ನನ್ನ ಸೋದರ ಮಾವ ಮದುಮಗನನ್ನು ಛೇಡಿಸುತ್ತಿದ್ದುದು ಮಸುಕಾದ ನೆನಪು. ಗುಟ್ಟೊಂದು ಗೊತ್ತೆ! ನನಗೆ ಆಗ ಅತ್ಯಂತ ಆಕರ್ಷಕವಾದ, ಅದಕ್ಕಾಗಿ ನಾನು ’ಜೀವ ಬೇಕಾದರೂ ಕೊಟ್ಟೇನು’ ಎಂಬ ತೀವ್ರತೆಯುಳ್ಳ ’ಕ್ರಶ್’ ಒಂದಿತ್ತು. ಅದೇನೆಂದರೆ, ಮದುವೆ ಮಂಟಪದೆದುರು ಕಾಣುವ ಬೆಲೂನ್ ಗಾಡಿ! ಎಷ್ಟು ವರ್ಣಮಯ, ವಿಧವಿಧವಾದ ತವಾರರಿ ಆಟಿಕೆಗಳು. ಒಂದಕ್ಕಿಂತ ಒಂದು ಸುಂದರ. ಅದರ ಮುಂದೆ ನಿಂತು ಬೆಲೂನು ಪೀಪಿಗಳು ಕೊಂಡು ಆಟವಾಡುವ ಮಕ್ಕಳನ್ನು ಕಂಡು ನನ್ನಪ್ಪನ ಕಡೆ ಸಿಟ್ಟಿನಿಂದ ನೋಡಿದ ಘಳಿಗೆಗಳೆಷ್ಟೋ! ಆ ಸಮಯದ ನನ್ನ ಬೆಸ್ಟ್ ಫ಼್ರೆಂಡ್, ಹಿತೈಶಿ, ರೋಲ್ ಮಾಡೆಲ್ ಎಲ್ಲವೂ ನನ್ನಣ್ಣನೇ ಆಗಿದ್ದ. ಅವನೂ ಸಣ್ಣವ, ನನ್ನ ಹಾಗೇ ಎಳಸು. ದೊಡ್ಡಮ್ಮನ ಮಗ, ಭೇಟಿ ಮಾಡುವುದೇ ಆಗೊಮ್ಮೆ ಈಗೊಮ್ಮೆ ಇಂತಹ ಮದುವೆ ಮುಂಜಿ ಸಮಾರೋಪಗಳಲ್ಲಿ. ದೂರದಿಂದಲೇ ಅವನನ್ನು ಕಂಡು ನನಗಾದ ಸಂತೋಷ ಅಷ್ಟಿಷ್ಟಲ್ಲ! ಕಂಡ ಕೂಡಲೇ ಅವನೊಟ್ಟಿಗೆ ಓಡಿದ್ದೇ ತಡ, ಅಪ್ಪ, ಅಮ್ಮ ಯಾರೂ ಬೇಡ. ಇಬ್ಬರೂ ಚೆಂದ ಮನೆ ಮನೆ ಆಟ, ಡಾಕ್ಟರ್ ಡಾಕ್ಟರ್ ಆಟ ಎಲ್ಲಾ ಆಡುತ್ತಿದ್ದೆವು. ವಿಶಾಲವಾದ ಮಂಟಪದ ಆವರಣದಲ್ಲಿ ನಾನೂ ಅವನೂ ಆಡುತ್ತಿದ್ದೆವು, ಸಮಯವಾದುದೇ ತಿಳಿಯದು. ನಮ್ಮಾಟವನ್ನು ಯಾರು ಗಮನಿಸುತ್ತಿದ್ದಾರೆ, ಯಾರೆಲ್ಲ ಬರುತ್ತಿದ್ದಾರೆ, ಹೋಗುತ್ತಿದ್ದಾರೆ ಯಾವುದರ ಪರಿವೆಯೇ ಇಲ್ಲ. ಮಣ್ಣಿನಲ್ಲಿ ಆಡುತ್ತಿದ್ದ ನಮ್ಮ ಲೋಕವೇ ಬೇರೆ! ನಿಜವಾಗಿಯೂ ಈಗ ಕಿಚ್ಚಾಗುತ್ತದೆ. ಎಂತಹ ಸುಂದರ ದಿನಗಳು ಆ ಬಾಲ್ಯದ ದಿನಗಳು! ಯಾರದೇ ಜೀವನದಲ್ಲೂ ಕಳೆದು ಹೋದ ಬಂಗಾರವಾಗಿ ನೆನಪಾಗಿ ಉಳಿದುಬಿಡುತ್ತದೆ. ಎಂದೋ ಓದಿದ ’ಬಾರ್ ಬಾರ್ ಆತೀಹೆ ಮುಜ್ಕೋ, ಮಧುರ ಯಾದ್ ಬಚ್ಪನ್ ತೇರೀ’ ಆಗಾಗ ನೆನಪಾಗಿ ಕಾಡುತ್ತದೆ. ಕಳೆದು ಹೋದ ಬಂಗಾರವೆಂದೆನೆ?! ನಮ್ಮಿಬ್ಬರ ಕಣ್ಣುಗಳು ನಮಗೇ ತಿಳಿಯದಂತೆ ಅದೆಷ್ಟು ಬಾರಿ ಆ ಬೆಲೂನಂಗಡಿಯತ್ತ ಸಾಗಿತ್ತೋ, ಆ ಮುಗ್ಧ ನೋಟ ಆ ಬೆಲೂನು ಮಾರುವ ಹುಡುಗನಿಗೆ ಏನನ್ನು ತಿಳಿಸಿತ್ತೋ ಕಾಣೆ. “ಲೇ ಸಂಯು, ನಿನಗೆ ನಿನ್ನಣ್ಣ ಸಿಕ್ಕಿ ಬಿಟ್ಟರೆ ಬೇರೆ ಏನೂ ಬೇಡ, ಬಾ ಬೇಗ ಸ್ವಲ್ಪ ಊಟ ಮಾಡುವಂತೆ” ಎಂಬ ಅಮ್ಮನ ಬೈಗುಳದಿಂದ ಊಟದ ವ್ಯವಹಾರ ಮುಗಿಸಿ, ಮತ್ತೆ ಮೈದಾನಕ್ಕೆ ಓಡು, ಆಗಲೇ ಆದದ್ದು ನೋಡು! ಅಲ್ಲೊಬ್ಬ, ತರುಣ ಕಟ್ಟೆಯ ಮೇಲೆ ಕೂತು ಕೈಯಲ್ಲಿ ವಾಟರ್ ಗನ್ ಹಿಡಿದಿದ್ದ. ಅರೆ ಆತ ಅದೇ ಬೆಲೂನಂಕಲ್ ಅಲ್ಲವೆ ಎಂದು ನಾವಿಬ್ಬರೂ ಕಾತುರದಿಂದ ಅವನ ಕೈಯನ್ನು ಗಮನಿಸಿದೆವು. ಅವನು ಇನ್ನೂ ಸ್ಟೈಲ್ ನಲ್ಲಿ, ಜೋರು ಜೋರಾಗಿ, ವಿಧವಿಧ ರೀತಿಯಲ್ಲಿ ಆ ಹಸಿರು ವಾಟರ್ ಗನ್ ನಿಂದ ನೀರ ಬಿಡುತ್ತಿದ್ದ! ಎಷ್ಟು ಚೆಂದ ಕಾಣುತ್ತಿತ್ತು! ಆ ಗನ್ ನಿಂದ ನೀರು, ಚೂರುಚೂರೇ ಚಿಮ್ಮಿ, ಆಕಾಶದೆಡೆಗೆ ಹಾರಿ, ಬಿಲ್ಲಿನಂತೆ ನೆಲವನ್ನು ಚುಂಬಿಸುತ್ತಿತ್ತು. ಅದರ್ ನೋಟವೇ ನಮ್ಮಿಬ್ಬರಿಗೆ ಸೋಜಿಗ. ವ್ಹಾ! ಕ್ಯಾ ಬಾತ್ ಹೈ ಅಂತ ಅಣ್ಣ ಮಣ್ಣಿನಿಂದ ಕೈ ಒರೆಸಿಕೊಂಡು ನಿಂತ, ಅವನೊಡನೆ ನಾನೂ. ನಾವಿಬ್ಬರೂ, ಆ ಬೆಲೂನಂಕಲ್ ನ ಸನಿಹಕ್ಕೆ ಹೋಗಿ ವಾಟರ್ ಗನ್ ನನ್ನು ಇನ್ನೂ ಚೆನ್ನಾಗಿ ನೋಡ ತೊಡಗಿದಾಗ, ಆತ ನಮ್ಮನ್ನು ಕರೆಯಬೇಕೆ! ಹಸಿದಾಗ ಊಟಕೊಡಲು ಅಮ್ಮ ಕರೆದಾಗ ಓಡುವಂತೆ ಓಡಿದ್ದೆವು. ಎಳೆ ಮನಸಿನ ಮುಗ್ಧತೆಗೆ ಸಲಾಮ್ ಎಂದು ಸಾಕಷ್ಟು ಬಾರಿ ಅನಿಸಿ ನಗುತ್ತೇನೆ! “ಇದು ನಿಮಗೂ ಬೇಕಾ?” ಆತ ಕೇಳಿದ. ಅಣ್ಣನ ಸಂತೋಷ ಹೇಳ ತೀರದು! “ಏ ಅವನು ಅದನ್ನು ನಮಗೆ ಕೊಡುತ್ತಾನೇನೋ ಕಣೆ!” ಎಂದ. “ಹೂಂ” ಎಂದ. “ನನ್ನ ಜೊತೆ ಬನ್ನಿ” ಎಂದು ಕರೆದಾಗ ಶುರುವಾದದ್ದು ಭಯ ನನಗೆ. ಆದರೆ ನನ್ನಣ್ಣ ಹೀರೋ ಅಲ್ವೆ! “ಇಲ್ಲ ಕಣೇ, ಏನೂ ಹೆದರಿಕೆಯಿಲ್ಲ. ನಾನಿದೀನಲ್ಲ, ಬಾ ಹೋಗೋಣ. ತೊಗೊಂಡು ಬೇಗ ಬಂದು ಬಿಡೋಣ. ಎಷ್ಟೆಲ್ಲ ಆಟವಾಡಬಹುದು. ನಾ ನಿನಗೆ, ನೀ ನನಗೆ ನೀರು ಬಿಡಬಹುದು ಅಲ್ಲವೆ”. ಹಮ್ ಸಿಕ್ಕಿತ್ತು ಆಸೆಯ ಲಂಚ. ಹೊರಟೆವು ಅವನ ಹಿಂದೆ. ನಡೆದೂ ನಡೆದೂ ಸುಸ್ತು, ಬಿಸಿಲ ಝಳ. ವಾಟರ್ ಗನ್ ನ ಆಸೆಯಲ್ಲಿ, ಆತುರದಲ್ಲಿ ಕಾಲಿಗೆ ಚಪ್ಪಲಿಯನ್ನೂ ತೊಡದೆ ಒಡಿದ್ದು ತಿಳಿದದ್ದು, ಪುಟ್ಟ ಕಾಲಿಗೆ ಕಲ್ಲು ಮುಳ್ಳು ಚಿಚ್ಚಿದ್ದಾಗ! ಅದೊಂದು ಗುಡ್ಡ (ಆಗ ಅದ್ಯಾವುದೂ ಎಂದೂ ತಿಳಿಯದು), ದ ಫ಼ೇಮಸ್ ರಾಮಾಂಜನೇಯ ಗುಡ್ಡ. ಗುಡ್ಡದ ಯಾವುದೋ ಕಡೆಗೆ ಕರೆದೊಯ್ದು, ಈಗಾದರೂ ವಾಟರ್ ಗನ್ ಕೊಡುತ್ತಾನೇನೋ ಎಂದರೆ, “ಇಲ್ಲೆಲ್ಲೂ ವಾಟರ್ ಗನ್ ಕಾಣದು, ಹೋಗಲಿ ಇದನ್ನೇ ಕೊಡುತ್ತೇನೆ. ಇದರಲ್ಲಿ ನೀರು ತುಂಬಿಸಿಕೊಂಡು ಬಾ” ಅಂತ ನನ್ನಣ್ಣನನ್ನು ಕಳಿಸಿ ಬಿಡುವುದೇ! ಅದಕ್ಕಿಂತ ತಮಾಷೆಯೆಂದರೆ, ಅವನೂ ಹೊರಟೇ ಬಿಟ್ಟ, ನನಗೂ ಏನೂ ಹೆದರಿಕೆಯಿಲ್ಲ! ಆನಂದ, ವಾಹ್ ಹಸಿರು ವಾಟರ್ ಗನ್ ನಮ್ಮದಾಯಿತು, ಇನ್ನು ನಾವಿಬ್ಬರೂ ಚೆಂದ ಆಟವಾಡಬಹುದು, ಅವನು ಬಂದ ತಕ್ಷಣ! ಹೀಗೆಯೇ ಯೋಚನೆ. “ನಿನ್ನ ಕಿವಿ ಓಲೆ ಸಡಿಲವಾಗಿದೆ, ಬಿಗಿ ಮಾಡುತ್ತೇನೆ”, ಎಂದು ಆ ಬೆಲೂನಂಕಲ್ ಕಿವಿ ತಿರುಚಿದಾಗ, ಈ ಅಂಕಲ್ ಎಷ್ಟು ಒಳ್ಲೆಯವರು ಎನಿಸಿತ್ತು. “ಕಾಲ್ಗೆಜ್ಜೆಯೂ ಸಹ ಸಡಿಲ, ಯಾಕೆ ನಿಮ್ಮಮ್ಮ ಸರಿಯಾಗಿ ಹಾಕಿಲ್ಲ!” ಎಂದಾಗ ಗೊತ್ತಿಲ್ಲ ಅಂಕಲ್ ಎನ್ನುವಷ್ಟರಲ್ಲೇ, ಗೋಡೆ ಹಾರಿ ಓಡಿ ಹೋಗಿದ್ದ. ನಾನು ಅಣ್ಣನಿಗಾಗಿ ಕಾದು ಕುಳಿತಿದ್ದೆ. ಅಣ್ಣ ಬರಲೇ ಇಲ್ಲ, ಬೆಲೂನಂಕಲ್ ಕೂಡ! ಆಗ ಹೆದರಿಕೆಯೊಂದಿಗೆ ಅಳು. ಕೊನೆಗೂ ಅಣ್ಣ ಬಂದ, “ಇಲ್ಲೆಲ್ಲೂ ನೀರಿಲ್ಲ ಕಣೇ” ಅಂತ. ಅಬ್ಬ ಬಂದನಲ್ಲ ಎಂದು “ಸರಿ ಬೇಗ ನಡೀ ಅಮ್ಮ ಬೈತಾಳೆ” ಎಂದಿದ್ದೆ. ಆಗ ಅವನು “ನಿನ್ನ ಕಿವಿ ಓಲೆ ಎಲ್ಲೇ” ಎಂದಾಗಲೇ ನಮಗೆ ಅರಿವಿಗೆ ಬಂದದ್ದು, ಆತ ಒಬ್ಬ ಕಳ್ಳ ಎಂದು. ಆಗ ನಮ್ಮಿಬ್ಬರಿಗಾದ ಆತಂಕ, ಭಯ ಈಗಲೂ ಕಂಪನ ಹುಟ್ಟಿಸುತ್ತದೆ. ಇಷ್ಟರಲ್ಲಿ, ಅಮ್ಮ ಅಪ್ಪ ಎಲ್ಲ ಸಂಬಧಿಕರು ಎಲ್ಲರಿಗೂ “ಇವರಿಬ್ಬರೂ ಕಾಣಿಸುತ್ತಿಲ್ಲ” ಎಂಬ ಸುದ್ದಿ, ಗಾಬರಿ. ಎಲ್ಲರೂ ನಮ್ಮ ಹುಡುಕುತ್ತಾ ಬೀದಿಗಿಳಿದಿದ್ದರು. ಸಾಕಷ್ಟು ಸಮಯವಾದ ನಂತರ ದೂರದಲ್ಲಿ ಅಮ್ಮ ಕಾಣಿಸಿದ್ದಳು. ಅಬ್ಬ, ಹೋದ ಜೀವ ಬಂದಂತೆ ಇಬ್ಬರೂ ಅತ್ತಿದ್ದೆವು, ಅವರ ಬಳಿ ಓಡಿ! ಈ ಘಟನೆಯಾದ ನಂತರ ಅಮ್ಮ ಶಾಕ್ ನಿಂದ ಹೊರಬರಲು ಒಂದು ತಿಂಗಳು ಬೇಕಾಯಿತು. ಈಗಲೂ ಈ ಬಗ್ಗೆ ಮಾತು ಬಂದರೆ ಅವಳ ಮುಖದಲ್ಲಿ ಒಂದು ಸೀರಿಯಸ್ ನೆಸ್ ನ ಛಾಯೆ! ಅಣ್ಣನಿಗೆ ತನ್ನಿಂದ ಹೀಗಾಯಿತು ಎಂಬ ಗಿಲ್ಟ್, ನನಗೆ ಇವೆಲ್ಲ ಒಂದು ಒಳ್ಳೆಯ ಅನುಭವ, ಪಾಠ ಎಂಬ ಸಮಾಧಾನ. ಈಗಲೂ ಇದನ್ನು ನೆನೆದರೆ ಮುಖದಲ್ಲಿ ನಗೆ ಮೂಡದೆ ಇರದು. ಬಾಲ್ಯ ಒಂದು ಸುಂದರ ಅನುಭೂತಿ. ಒಳ್ಳೆಯ, ಕೆಟ್ಟ ಎಂತಹ ಘಟನೆಯೇ ಆಗಲಿ, ಒಂದು ಲರ್ನಿಂಗ್ ಆಗಿ, ಜೀವನ ರೂಪುಗೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಆ ಮುಗ್ಧತೆ, ಆ ನಿಷ್ಕಳಂಕ ಮನಸ್ಸು, ಆ ಧೈರ್ಯ, ಸಾಹಸ ಈಗ ಬೇಕು ಎಂದರೂ ಸಿಗಲಾರದ ಬಂಗಾರ. ಅದಕ್ಕೇ ಹೇಳುದ್ದು, ಬಾಲ್ಯ ಒಂದು ಕಳೆದು ಹೋದ ಬಂಗಾರ ಎಂದು. ಇತ್ತೀಚೆಗೆ, “ಅಣ್ಣ ಅಮೆರಿಕಾದಿಂದ ಬರುತ್ತಿದ್ದಾನಂತೆ ರೀ” ಎಂದಾಗ, ನನ್ನ ಗಂಡನ ಉತ್ತರ “ಅವರಿಗೆ ಒಂದು ವಾಟರ್ ಗನ್ ಗಿಫ಼್ಟ್ ಮಾಡೋಣ!” ಎಂದು. ಕೇಳುತ್ತಲೇ ಒಂದು ಸಣ್ಣ ನಗು ಮೂಡಿತ್ತು, ಮನದಲ್ಲಿ ಆ ಬೆಲೂನಂಕಲ್ ಬಿಲ್ಲಿನಂತೆ ನೀರ ಚುಮುಕಿಸುತ್ತಿದ್ದ ಚಿತ್ರ ಕನವರಿಸಿತ್ತು.  ]]>

‍ಲೇಖಕರು G

August 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nataraju S M

    ಬಾಸ್, ನಿಮ್ಮ ಬರಹಗಳು ಹೀಗೆಯೇ ಚಂದವಾಗಿ ಮೂಡಿಬರುತ್ತಿರಲಿ.. ಶುಭವಾಗಲಿ ನಿಮಗೆ..

    ಪ್ರತಿಕ್ರಿಯೆ
  2. ಸಂದೀಪ್ ಕಾಮತ್

    ಈಗಿನ ಮಕ್ಕಳನ್ನು ಅಷ್ಟು ಸುಲಭದಲ್ಲಿ ಮೂರ್ಖರಾಗಿಸಲು
    ಸಾಧ್ಯ ಇಲ್ಲ. ಬಹುಷಃ ಅದಕ್ಕಾಗಿ ಖುಷಿ ಪಡಬೇಕು. ಸುಂದರ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: