ಸಂಪು ಕಾಲಂ : ಭೂತಾಯಿ ಮುನಿದರೆ…

“ವೀಕೆಂಡ್ ಕೆಲಸ ಮಾಡಬೇಕು” ಎಂಬ ಸಂದೇಶ ಹೊತ್ತ ಹಂಸವೊಂದು ಬಂದು ಪುಟ್ಟ ಪರದೆಯ ಮೇಲೆ ಕೂತೇ ಬಿಟ್ಟಿತು. ಈ ‘ಶ್ವೇತ ಬಂಗಾರ’ದ ಮುಂದೆ ಇನ್ನು ಹೆಚ್ಚು ಮಾತು ಸಲ್ಲದು ಎಂದು ಬಗೆದು ಶನಿವಾರ ಬೆಳ್ಳಂಬೆಳಗ್ಗೆ ಎಲ್ಲರೂ ಕೆಲಸಕ್ಕೆ ಹಾಜರ್. ತಾವೇನೋ ಬಿಟ್ಟಿ ಸಹಾಯ ಮಾಡುತ್ತಿರುವುದಾಗಿ ಎಲ್ಲರೂ ಬೀಗುತ್ತಿದ್ದರು. ನಾವು ಶನಿವಾರವೂ ಕೆಲಸ ಮಾಡುತ್ತೇವೆ ಎಂಬ ನಿಷ್ಠೆಯ ತೋರ್ಪಡಿಕೆ ಎಲ್ಲರ ಮುಖದಲ್ಲೂ ಸ್ವಲ್ಪ ಹೆಚ್ಚೇ ದರ್ಶಿತವಾಗುತ್ತಿತ್ತು. ಮಾಡಿದ ಕೆಲಸ ಅಷ್ಟರಲ್ಲೇ ಇತ್ತು, ಆದರೆ ಆ ದಿನ ನಮ್ಮಲ್ಲಿ ಅನೇಕರಿಗೆ ಕಣ್ಣು ತೆರೆದ ದಿನ ಎಂದು ಹೇಳಬಹುದು.
ಎಲ್ಲರನ್ನೂ ಕಾನ್ಫ಼ರೆನ್ಸ್ ಹಾಲ್ ಗೆ ಕರೆದಾಗ, ಕೆಲಸವೆಂದು ಕರೆದು ಇದೇನಪ್ಪಾ ಎಂದು ಬೆರಗು ಮನದಿಂದ ಹೋದೆವು. ನಾಲ್ಕೈದು ಜನ ಯುವಕ, ಯುವತಿಯರು ಕತ್ತಲ ಕೋಣೆಯಲ್ಲಿ ದೊಡ್ಡ ಪರದೆ ಮುಂದೆ ನಿಂತು ನಗುತ್ತಾ ನಮ್ಮನ್ನು ಆಹ್ವಾನಿಸಿದರು. ಒಂದಷ್ಟು ಜನ ಒಗ್ಗೂಡುವವರೆಗೂ ಸುಮ್ಮನೆ ಕುಳಿತಿದ್ದು, ನಂತರ “ಈಗ ಪ್ರಾರಂಭಿಸೋಣವೇ” ಎಂದು ಆರಂಭಿಸಿದ್ದೇ ಗೊತ್ತು, ಸುಮಾರು ಎರಡು ಘಂಟೆ ಹೊತ್ತು ಕೂತು, ಬೆವರಿ, ಹೆದರಿ, ನಮ್ಮನ್ನು ನಾವೇ ಬೈದು, ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕು, ಎಂಬ ನಿರ್ಧಾರಕ್ಕೆ ಎಲ್ಲರೂ ಬರುವಂತಾಯಿತು.
ಅಲ್ಲಿ ನಡೆದದ್ದು, ಈ ತಕ್ಷಣದಿಂದ ನಾವೆಲ್ಲರೂ ಒಂದು ಎಚ್ಚರಿಕೆಯ ಕರೆಘಂಟೆಯ ಶಬ್ದಕ್ಕೆ ಓಗೊಟ್ಟುವ ಕೆಲಸ ಮಾಡಬೇಕಾದ ಜಾಗೃತಿ ಜಾಥಾ. ಅವರು ನಮಗೆ ಪರಿಚಯಿಸಿದ್ದು, ಪ್ರಪಂಚದಲ್ಲಿ ಜರುಗುತ್ತಿರುವ ಪ್ರಕೃತಿ ವಿರೋಧೀ, ವಿಲಕ್ಷಣ ಸ್ವರೂಪಗಳು, ಇವುಗಳಿಂದ ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ನಾವು (ನಮ್ಮ ಮುಂದಿನ ಪೀಳಿಗೆ ಮುಖ್ಯವಾಗಿ) ಅನುಭವಿಸಬೇಕಾದ ಅನಾಹುತಗಳು, ಇವುಗಳೆಲ್ಲದರ ಬಿಸಿ ತುಣುಕಿನ ಕಾವು.
ಪ್ರಕೃತಿ ನಮಗೆ ಬೇಕಾದ್ದೆಲ್ಲವನ್ನೂ ನೀಡಿದೆ. ಅತಿಯಾಸೆಯ ಅಮಲಿಗೆ ಈಡಾದ ನಾವು ಇನ್ನೂ ಹೆಚ್ಚು ಹೆಚ್ಚು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ವಿವಿಧ ಕ್ಷೇತ್ರಗಳ ಮೇಲೆ ಬೀರುತ್ತಿರುವ ಪರಿಣಾಮ ಮತ್ತು ಅದಕ್ಕೆ ನಮ್ಮ ಕೈಲಾದ ಪರಿಹಾರವನ್ನು ಸೂಚಿಸುವುದು ಅವರ ಕಾರ್ಯಾಗಾರದ ಉದ್ದೇಶ. ನಮ್ಮ ಎಲ್ಲೆ ಮೀರಿದ ಯಾಂತ್ರಿಕ, ತಾಂತ್ರಿಕ ಮುನ್ನಡೆಗಳ ಮೆಟ್ಟಿಲಿಂದ ಹೊರಕ್ಕೆ ಒಮ್ಮೆ ಇಣುಕಿದಾಗ ನಮಗೆ ಕಾಣಸಿಗುವುದು ಶಿಥಿಲಗೊಳ್ಳುತ್ತಿರುವ ಭೂಮಿ (ಅವರು ಉಪಯೋಗಿಸಿದ ಮೊದಲನೇ ಮತ್ತು ಮಹತ್ವದ ಶಬ್ದ ಎಂದರೆ “Fragile Earth”!). ಈ ಮಾತನ್ನು ಪುಷ್ಟೀಕರಿಸಲು ನಮಗೆ ಕಾಣಸಿಗುವ ಉದಾಹರಣೆಗಳು ಹೀಗಿವೆ: ಬದಲಾಗುತ್ತಿರುವ ತಾಪಮಾನ, ಬರಿದಾಗುತ್ತಿರುವ ಕಾಡುಗಳು, ಸಮುದ್ರ ಮಾಲಿನ್ಯ, ಕೃಷಿಯ ದಾರುಣ, ತಾಂತ್ರಿಕ ವಿಷ ಮತ್ತು ಅಣುಶಕ್ತಿಯ ಅಪಾಯ.
ಈ ವಿಷಯಗಳ ಚರ್ಚೆಯನ್ನು ಪ್ರಾರಂಭಿಸಿದ ಅವರು ಕೊಟ್ಟ ಮೂರು ಮುಖ್ಯ ಅಂಕಿ ಅಂಶಗಳಿಂದ ನಮ್ಮನ್ನು ಉಸಿರುಗಟ್ಟಿಸಿದ್ದರು. ಮೊದಲನೇದಾಗಿ, ಹಲವು ಸಂಶೋಧನೆಗಳ ಪ್ರಕಾರ, ವಿಶ್ವದ ತಾಪಮಾನ (ಗ್ಲೋಬಲ್ ವಾರ್ಮಿಂಗ್) ಹೀಗೇ ಹೆಚ್ಚುತ್ತಾ ಹೋದರೆ, 2030 ರ ಹೊತ್ತಿಗೆ ಭೂಮಿಯ ಅನೇಕ ಭಾಗಗಳಲ್ಲಿ ಬೇಸಿಗೆಯ ತಾಪಮಾನ ಐವತ್ತಕ್ಕಿಂತಲೂ ಹೆಚ್ಚಾಗಿ ಏರುತ್ತದೆ ಮತ್ತು ಇದು ದೀರ್ಘಕಾಲ ಉಳಿಯುತ್ತದೆ. ಎರಡನೆಯದು, 2012 ರ ಒಂದು ಅಂಕಿ ಅಂಶದ ಪ್ರಕಾರ ಕಲ್ಲಿದ್ದಲ ಬಳಕೆಯ ದುಷ್ಪರಿಣಾಮದಿಂದ ಎರಡು ಲಕ್ಷಕ್ಕೂ ಮೀರಿದ ಮರಣಗಳು ಕಂಡು ಬಂದಿವೆ. ಇಷ್ಟಾದರೂ ಸುಮಾರು 2017 ರ ಹೊತ್ತಿಗೆ ಕಲ್ಲಿದ್ದಲು 4.32 ಬಿಲಿಯನ್ ಟನ್ ಗಳಷ್ಟು ಉಪಯೋಗ ಆಗುವ ಸೂಚನೆಗಳು ಕಂಡುಬಂದಿವೆ! ಮತ್ತಿನ್ನು ಕೂತಲ್ಲೇ ಮರಗಟ್ಟಿ ಹೋಗುವ ಮೂರನೆಯ ವಿಚಾರ, ತಳಿವಿಜ್ಞಾನ ಅಥವಾ ಜೀನ್ಗಳ ಬದಲಾವಣೆಯ ಮೂಲಕ ತಯಾರಿಸುವ ಆಹಾರ ಸಾಮಗ್ರಿಗಳು, ಹಣ್ಣು ತರಕಾರಿಗಳು. ಇದರ ಬಗೆಗೆ ಕೇಳಿದ್ದೆ ಹೊರತಾಗಿ ಹೆಚ್ಚಾಗಿ ಮಾಹಿತಿ ದೊರೆತಿರಲಿಲ್ಲ. ದೊರೆತ ಮಾಹಿತಿ ಪ್ರಕಾರ, ಆಹಾರ ಪದಾರ್ಥಗಳನ್ನು ಬೆಳೆಯುವಾಗ ಅದಕ್ಕೆ ಪ್ರಾಣಿಗಳ ಅಥವಾ ಕೀಟಗಳ ವಂಶವಾಹಿಗಳನ್ನು ಇಂಜೆಕ್ಟ್ ಮಾಡುತ್ತಾರಂತೆ. ಹೀಗೆ ಮಾಡಿದಲ್ಲಿ ಆಯಾ ತರಕಾರೀ ಅಥವಾ ಹಣ್ಣು ದುಪ್ಪಟ್ಟು ತಾಜಾತನ ಹಾಗೂ ಪಕ್ವತೆಯನ್ನು ಪಡೆಯುತ್ತದಂತೆ! ನೋಡಲು ಹೊಳೆಯುವ, ಮುಟ್ಟಿದ ಕೂಡಲೇ ತಿನ್ನುವಂತೆ ಮಾಡುವ ಈ ತಳಿಯ ಆಹಾರ ಪದಾರ್ಥಗಳಿಂದ ಅನೇಕ ಮಾರಣಾಂತಿಕ ರೋಗಗಳು ಹರಡುತ್ತವಂತೆ.
‘ಶೆಲ್’ ಅನ್ನುವ ಅತ್ಯಂತ ಪ್ರಸಿದ್ಧ ಇಂಧನ ಉತ್ಪನ್ನವು ಆರ್ಕ್ಟಿಕ್ ಪ್ರದೇಶದ ಹಿಮವನ್ನು ಅಲ್ಲಿ ದೊರೆಯುವ ಇಂಧನ ಸಾಮಗ್ರಿಗಾಗಿ ಡ್ರಿಲ್ ಮಾಡಿಸುತ್ತಿದೆ. ಇದರಿಂದ ಸಧ್ಯದಲ್ಲೇ ಸಾಕಷ್ಟು ಅನಾನುಕೂಲ ಸಂಭವಿಸುವುದು ಖಚಿತ. ಸಮುದ್ರ ಸಾಗರಗಳಲ್ಲಿ ದೊರೆಯುವ ಬೆರಳೆಣಿಕೆಯ ಮೀನು ತಿಮಿಂಗಲಗಳನ್ನು ಸಂಶೋಧನೆಯ ಹೆಸರಿನಲ್ಲಿ ಕೊಚ್ಚಿ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ದೊಡ್ಡ ಪ್ರಮಾಣದ ಕಲುಷಿತ ಪದಾರ್ಥಗಳನ್ನು ಸಮುದ್ರದಲ್ಲಿ ಬಿಡಲಾಗುತ್ತಿದೆ. ಇದರಿಂದ ನಮ್ಮ ಜಲಚರ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆ. ಹೀಗೆ ಕೇಳಲ್ಪಟ್ಟ ಅನೇಕ ಸತ್ಯಗಳು ನಮ್ಮನ್ನು ಭಯಸ್ಮಿತರನ್ನಾಗಿಸಿತ್ತು. “ವಿನಾಶ ಕಾಲೇ ವಿಪರೀತ ಬುದ್ಧಿ” ಎಂಬಂತೆ ನಾವು ಮುಂದುವರೆಯುತ್ತಿರುವ ಇದೇ ಹಾದಿ ಬೆಳೆದರೆ, ನಮಗೆ ವಿನಾಶ ತಪ್ಪಿದ್ದಲ್ಲ. ಇದಕ್ಕಾಗಿ ನಾವು ಮಾಡಬಹುದಾದರೂ ಏನು?
ಇಂಗಾಲದ ಡೈ ಆಕ್ಸೈಡ್ ಅನ್ನು ಹೆಚ್ಚಿಸುವ ಕೈಗಾರಿಕಾ ತ್ಯಾಜ್ಯವನ್ನು ವಿವಿಧ ಕಡಿಮೆ ತ್ಯಾಜ್ಯ ತೆರುವ ವಿಧಾನಗಳನ್ನು ಉಪಯೋಗಿಸಿ ಆದಷ್ಟು ಬೇಗ ಕಡಿಮೆ ಮಾಡುವುದು. ಪುನರ್ಬಳಕೆಯ ಸಾಮರ್ಥ್ಯವಿರುವ ಪದಾರ್ಥಗಳನ್ನು ಬಳಸುವುದು, ಇಂಧನ ಬಳಕೆ ಕಡಿಮೆ ಮಾಡುವುದು, ಟಿಶ್ಯೂ ಪೇಪರ್ ಗಳು, ಕಾಗದ ಪೊಟ್ಟಣಗಳು, ಸುಗಂಧ ದ್ರವ್ಯಗಳು ಇವುಗಳ ಬಳಕೆಗಳ ಜೊತೆಗೆ ಮರ ಕಡಿಯುವುದನ್ನು ಕಡಿಮೆ ಮಾಡುವುದು, ಕಡಿಯಲೇ ಬೇಕಾದ ಪರಿಸ್ಥಿತಿಯಲ್ಲಿ ತಕ್ಷಣ ಒಂದು ಸಸಿ ನೆಡುವುದು, ಯಾವುದೇ ರೀತಿಯ ಪ್ರಾಕೃತವಲ್ಲದ ಆಹಾರ ಪದಾರ್ಥಗಳನ್ನು ಬಳಸದೇ ಇರುವುದು, ಪರಿಸರ ವಿಜ್ಞಾನವರಿಯಲು ಪ್ರಯತ್ನ ಪಡುವುದು, ಯಾವುದೇ ರೀತಿಯ ಅಣುಶಕ್ತಿ ಅಸ್ತ್ರಗಳನ್ನು ಬಳಸದೇ ಇರುವುದು. ಇತ್ಯಾದಿ ಅನೇಕ ಅಳಿಲು ಸೇವೆಗಳು ಕೈಲಾದಂತೆ ಪ್ರತಿಯೊಬ್ಬರಿಂದ ನಡೆದಾಗ ಹನಿ ಹನಿಗೂಡಿದರೆ ಹಳ್ಳ ಎಂಬಂತೆ, ನಮ್ಮ ಶಕ್ಯಾನುಸಾರ ನಮ್ಮ ಭೂತಾಯಿಯನ್ನು ಕಾಪಾಡಲು ಸಹಾಯವಾಗುತ್ತದೆ. ಇದಾಗದೇ ಭೂತಾಯಿ ಮುನಿದರೆ…ಅದರ ಪರಿಸ್ಥಿತಿಯನ್ನು ಎದುರಿಸುವ ಜವಾಬ್ದಾರಿ ನಮ್ಮ ಮೇಲೇ ಇದೆ!

‍ಲೇಖಕರು avadhi

March 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Raghav

    ಕವಾಯತು (ಡ್ರಿಲ್) ??? ಇದು ವ್ಯಾಯಾಮಕ್ಕೆ ಸಂಬಂದಿಸಿದ ಪದ ಅಲ್ಲವೇ ?.. ಇಲ್ಲಿ ನೆಲಕ್ಕೆ ಬೈರಿಗೆ ಇಡುವ ಪದ ಪ್ರಯೋಗ ಇದ್ದಿದರೆ ಸರಿ ಹೋಗುತ್ತಿತ್ತು

    ಪ್ರತಿಕ್ರಿಯೆ
  2. Jayalaxmi Patil

    ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ ಈ ಬರಹ.

    ಪ್ರತಿಕ್ರಿಯೆ
  3. samyuktha

    Raghav mattu JP, houdu kshamisi…..DRILL emba padada kannadaartha tiliyade adannu dictionary sahaayadinda baredaddu….aadare aa dictionary nanage bere DRILL padada artha tiliside 🙂 dayavittu kshame irali. Tiddiddakke dhanyavada.

    ಪ್ರತಿಕ್ರಿಯೆ
  4. ಹರಿ

    What a JOKE!!!! We are planning to save Mother Earth…Nonsense.
    Save yourself…Your Next generation….
    Mother Earth know how save herself.
    “ನಿಸರ್ಗ ಉಳಿಸಿ” ಇದು ನಮ್ಮ ಕೂಗು. ಪ್ರಾಯಶಃ ಎಲ್ಲ ಪರಿಸರವಾದಿಗಳ ಕೂಗು. ಆದರೆ ವಾಸ್ತವ ಬೇರೆಯೇ ಇದೆ. ನಮ್ಮ ಹೋರಾಟ ನಮ್ಮ ಆಲೋಚನೆಯ ದಿಕ್ಕು ಎಲ್ಲಿಯೋ ತಪ್ಪಾಗುತ್ತಿದೆ. ಸುನಾಮಿ, ಭೂಕಂಪ, ಚಂಡಮಾರುತಗಳನ್ನು ಪರಿಗಣಿಸಿದರೆ ಪ್ರಕೃತಿಯ ಮುಂದೆ ಮಾನವ ಎಷ್ಟೊಂದು ಅಸಹಾಯಕ ಎಂಬುದು ಅರಿವಾಗುತ್ತದೆ. ಅತಿವೃಷ್ಟಿ-ಅನಾವೃಷ್ಟಿಗಳಿಂದ ಪ್ರಕೃತಿ ಸೃಷ್ಟಿಸುತ್ತಿರುವ ಅಲ್ಲೋಲ-ಕಲ್ಲೋಲಗಳು ಮುಂದಿನ ದಿನಗಳಿಗೆ ಎಚ್ಚರಿಕೆಯೆ? ನಿಸರ್ಗ ಉಳಿಸಿ ಎಂದು ಕೂಗುತ್ತಿರುವ ಮನುಕುಲಕ್ಕೆ ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ, ನಿನ್ನನ್ನು ನೀನು ರಕ್ಷಿಸಿಕೊಳ್ಳಬಲ್ಲೆಯಾ ಎಂಬ ಪರಿಹಾಸ್ಯವೇ? ಸ್ವ ಹಾಗು ಸಮಾಜದ ಅಭಿವೃದ್ದಿಯ ಹೆಸರಿನಲ್ಲಿ ನಾವು ಇಡುತ್ತಿರುವ ಕೊಡಲಿಯ ಏಟು ಮರದ ಬುಡಕ್ಕೋ ಅಥವ ಮನುಕುಲದ ಬುನಾದಿಗೋ? ದೈತ್ಯಾಕಾರದ ಡೈನೋಸಾರಸ್‍ಗಳನ್ನೇ ಅಳಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಂಡ ನಿಸರ್ಗಕ್ಕೆ ಹುಲುಮಾನವ ಏನೂ ಅಲ್ಲ ಅಲ್ಲವೇ? ಎಚ್ಚೆತ್ತುಕೊಳ್ಳಿ..ನಿಮ್ಮನ್ನು…ನಿಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಿಕೊಳ್ಳಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: