ಸಂಪು ಕಾಲಂ : ’ನನ್ನೆದೆಯ ಕಡಲುಕ್ಕಿ ಸಾವಿರದ ಸಂತೋಷ’

‘ಪ್ರೀತಿ ಪ್ರಗಾಥ’ – ಒಂದು ಇಣುಕು

“ಎನ್ನ ಪಾಡೆನಗಿರಲಿ ಅದರ ಹಾಡನಷ್ಟೇ ನೀಡುವೆ ರಸಿಕ ನಿನಗೆ” ಎಂಬ ಬೇಂದ್ರೆಯವರ ಸಾಲುಗಳ ಪ್ರತಿಧ್ವನಿಸುವ ಈ ಪ್ರೀತಿ ಪ್ರಗಾಥವು ಕನ್ನದ ಸಾಹಿತ್ಯಲೋಕದ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಕವಿಯ ಸ್ವ-ಅನುಭವದ ಕಥಾನಕದ ಸಿಹಿ-ಕಹಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಷ್ಟೇ ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಪ್ರಗಾಥಗಳ ಬೆಳವಣಿಗೆಗೆ, ಅದರ ಸ್ಥಾನ ಜಾಗೃತಗೊಳ್ಳುವುದಕ್ಕೆ ಪೂರಕವಾಗಿ ಈ ಕೃತಿ ನಿಲ್ಲುತ್ತದೆ. ಇದು ಡಾ|| ದೊಡ್ಡರಂಗೇ ಗೌಡರು ರಚಿಸಿರುವ ‘ಪ್ರೀತಿ ಪ್ರಗಾಥ’.

ಇಂಗ್ಲೀಷ್ ಭಾಷೆಯ ’ಓಡ್’ ಕನ್ನಡದಲ್ಲಿ ಪ್ರಗಾಥವಾಗಿದೆ. ಈ ಪ್ರಗಾಥಗಳು ಭಾವಗೀತೆಯ ಮುಖ್ಯ ರೂಪಗಳಲ್ಲೊಂದು. ಆಂಗ್ಲ ಸಾಹಿತ್ಯದಲ್ಲಿ ‘ಲಿರಿಕ್’ ಮತ್ತು ‘ಓಡ್’ ಗಳನ್ನು ಗೀತೆಗಳ ರೂಪದಲ್ಲಿ ಬರೆಯುತ್ತಿದ್ದರು. ಇದನ್ನು ಕನ್ನಡಕ್ಕೆ ಮೊಟ್ಟಮೊದಲು ಬಿ.ಎಂ.ಶ್ರೀ ರವರು ತಂದರು. ಅವರ ನಂತರ ಕುವೆಂಪು, ಬೇಂದ್ರೆ, ಗೋವಿಂದ ಪೈ, ಡಿವಿಜಿ ಹಾಗೂ ಇತರ ಅನೇಕ ಸಾಹಿತ್ಯ ದಿಗ್ಗಜರು ಪ್ರಸ್ತುತ ಪಡಿಸಿದರು. ಆದರೆ ಅದೇಕೋ ಈ ಪ್ರಗಾಥಗಳು ಹೆಚ್ಚು ಅಭಿಮುಖವಾಗಿರಲಿಲ್ಲ. ಬೆಳಕು ಕಾಣಲಿಲ್ಲ. ಇದನ್ನೇ ಗಮನಿಸಿದ ದೊರಂಗೌಡರು ಪ್ರಗಾಥಗಳ ಸವಿ ಓದುಗರಿಗೆ ನಿಲುಕದೆ ಹೋಗಬಾರದು ಎಂದು ಈ ಪ್ರಾಕಾರದಲ್ಲಿ ಒಂದು ನೂತನ ಶೈಲಿಯ ಪ್ರಯೋಗವನ್ನು ಮಾಡಿದ್ದಾರೆ. ಇದು ಅತ್ಯಂತ ಸುಂದರವೂ, ಯಶಸ್ವಿಯೂ ಆಗಿದೆ. ’ಪ್ರೀತಿ ಪ್ರಗಾಥ’ ಅವರ ಮುಖ್ಯ ಪ್ರಗಾಥಗಳಲ್ಲೊಂದು.

ಭಾಷಾ ಸರಳತೆ, ಪದ ಹೆಣಿಗೆ, ಕಥಾಹಂದರ, ಪ್ರಗಾಥದ ಸೊಗಸುಗಾರಿಕೆ ಇವು ಈ ಕೃತಿಯ ಮೇರು ಗುಣಗಳು. ಪ್ರೀತಿ ಎನ್ನುವುದು ಪ್ರತಿಯೊಬ್ಬ ಮನುಷ್ಯನನ್ನು ಕಾಡುವ, ಕೆಣಕುವ ಒಂದು ಸುಂದರ ಭಾವ. ಕೆಲವರು ಇದರ ಗುಂಗಲ್ಲೇ ತಮ್ಮ ಜೀವನ ಕಳೆಯುತ್ತಾರೆ ಮತ್ತು ಹಲವರು ಪ್ರೀತಿಯನ್ನು ಪಡೆದು ಅದರ ಮೂಲಕ, ಅದರ ಇತ್ಯಾತ್ಮಕ ಗುಣಗಳಿಂದ ಬಾಳಿನ ಅರ್ಥವನ್ನು ಸಾರ್ಥಕ್ಯಗೊಳಿಸಿಕೊಳ್ಳುತ್ತಾರೆ. ಈ ಎರಡನೇ ಪಂಥಕ್ಕೆ ಸೇರುವುದೇ ಈ ಪೃಥ್ವಿ ಪ್ರಗಾಥ. ಈ ಪ್ರಗಾಥವು ಇಪ್ಪತ್ತೈದು ಪರ್ವಗಳನ್ನು ಹೊಂದಿದೆ. ಒಬ್ಬ ಹಳ್ಳಿ ಹೈದ ಪಟ್ಟಣಕ್ಕೆ ಬಂದಾಗ ಪ್ರೀತಿಯ ಭಾವದ ಅಲೆಗೆ ಸಿಲುಕಿ, ಎಲ್ಲರ ವಿರೋಧಗಳನ್ನೂ ಹಿಮ್ಮೆಟ್ಟಿ ಜೀವನದಲ್ಲಿ ಗೆಲುವು, ಸಾರ್ಥಕ್ಯ ಸಾಧಿಸುವುದು ಈ ಪ್ರಗಾಥದ ಜೀವಾಳ.

ಹಳ್ಳಿಯಿಂದ ಪಟ್ಟಣಕ್ಕೆ ಬಂದ ಯುವ ತರುಣ ಕಣ್ಣ ತುಂಬ ಕನಸ ಹೊತ್ತು ಮನದ ತುಂಬ ಬಯಕೆ ತುಂಬಿದ ಹೊತ್ತು. ಈ ಸಂಧರ್ಭದಲ್ಲಿ ನಮ್ಮ ಕಥಾನಾಯಕಿ ಕವಿಯ ಕಣ್ಣಿಗೆ ಕಾಣಿಸುತ್ತಾರೆ.’ನನ್ನೆದೆಯ ಕಡಲುಕ್ಕಿ ಸಾವಿರದ ಸಂತೋಷ’ ಎಂಬ ಸಾಲೊಂದೇ ಕವಿಯ ಮನಸ್ಥಿತಿಯನ್ನು ವಿವರಿಸುತ್ತದೆ. ಪ್ರೀತಿ ಅಂಕುರವಾದದ್ದು ಅದರ ಸವಿಯುಂಡದ್ದು, ಈ ಎಲ್ಲಾ ಸುಂದರ ಭಾವೋಭ್ಯುದಯವೂ ಕವಿ ಮನಸನ್ನು ಒಂದು ಅನುಭಾವೀ ಹಂತಕ್ಕೆ ಸೆಳೆದೊಯ್ಯುತ್ತದೆ.

“ಕೂಡಿಬಂದ ಸ್ನೇಹ ಸಖ್ಯ, ಎಷ್ಟೊಂದು ಅನ್ಯೋನ್ಯ, ಹರಿದ ಹರಿದಾರಿಯಲಿ ಸಾಮರಸ್ಯ, ನೆನೆದಷ್ಟೂ ನಲಿವಿನಾ ನಗೆಯ ಲಾಸ್ಯ” ಈ ಮಾತುಗಳು ಪ್ರೀತಿಯ ರಮ್ಯತೆಗೂ ಅತೀತವಾದದ್ದು. ಇಲ್ಲಿ ನಾವು ಕವಿಯ ಕಥಾಹಂದರದ ಬಗೆಯನ್ನು ಗಮನಿಸಬೇಕು. ಯುವಕ ಪ್ರೀತಿಯ ಅಮಲಿನಲ್ಲಿ, ಅದರ ಜೇನಿನಲ್ಲಿ ತೇಲುತಾ ಸುಖವನನುಭವಿಸುತ್ತಿರುತ್ತಾನೆ. ಈ ಲಘುವಾದ, ಸಂತೋಷಕರ, ಮದೋನ್ಮತ್ತ ಭಾವದಿಂದ ಮುಂದೆ ಜೀವನದಲ್ಲಿ ಅನುಭವಿಸಲಿರುವ ಕಷ್ಟಗಳ ಪರಿಚಯ ಮಾಡುತ್ತಾ ಮುಂದುವರೆಯುತ್ತಾರೆ. ಓದುಗರಲ್ಲಿ ಕೌತುಕವನ್ನು ಮೂಡಿಸುತ್ತಾರೆ. “ಒಂದಾಗುವುದು ಮನಸು, ಅಲ್ಲೇ ನಿಜವಾದ ಪ್ರೀತಿಬೆಳಕು, ಪ್ರೀತಿಯಾವತ್ತೂ ಸೀ ಹಲಸು, ಆದರೆ ಬದುಕು ಮಾತ್ರ ಬಿರುಸು”.

ಈ ಪ್ರೀತಿಯ ಸೊಗವನ್ನು ಹೀರುತ್ತಿದ್ದ ಜೋಡಿಹಕ್ಕಿಗೆ ವಾಸ್ತವದ ಬಿಸಿ ತಟ್ಟಿದ್ದು, ತಮ್ಮಿಬ್ಬರ ವಿವಾಹ ಪ್ರಸ್ತಾಪವಾದಾಗ! ಇಬ್ಬರ ಮನೆಯಲ್ಲೂ ತೀವ್ರ ವಿರೋಧ!

“ನಮ್ಮೆಲ್ಲ ಪ್ರೇಮಕ್ಕೆ ಅಡ್ಡಿಗಳು ಏನೆಲ್ಲ!

ಜಾತಿಯ ಭೂತವೋ! ಅಂತಸ್ತಿನ ಪ್ರೇತವೋ!

ಅರ್ಥವಾಗಲಿಲ್ಲ ಹಿರಿಯರಿಗೆ ನಮ್ಮೊಲವು

ಕೊನೆಗೆ ನಿರ್ಧರಿಸಿ, “ಬಂದದ್ದು ಬರಲೇಳು, ಆದದ್ದು ಆಗಲೇಳು, ಇಷ್ಟವಿದ್ದರೇ ಬಾ ನನ್ನ ಜೊತೆಯೊಳಗೆ” ಎಂದು ಕವಿ ಕರೆಯುತ್ತಾರೆ. ಅದಕ್ಕೆ ಆಕೆ “ಉಟ್ಟ ಬಟ್ಟೆಯಲ್ಲಿ” ಓಡಿ ಬರುತ್ತಾರೆ. ಅವರಿಬ್ಬರ ಭಾಷೆ ಹೀಗಿತ್ತು: “ನಾನು ಗಂಡು ನೀನು ಹೆಣ್ಣು ಪ್ರೀತಿಗಷ್ಟೇ ಸಾಕು ಸಾಕು, ಜಾತಿ ಎಂಬ ಮುಳ್ಳು ತಂತಿ ನಮ್ಮ ಮಧ್ಯೆ ತೊಲಗಬೇಕು”.

ಈ ಸಂದರ್ಭದಲ್ಲಿ, ವಾಸ್ತವದ ಬದುಕಿಗೆ ಕಾಲಿಟ್ಟ ನವದಂಪತಿಗಳಿಗೆ ಸಿಕ್ಕದ್ದೆಲ್ಲಾ ಕಹಿ! ಕಷ್ಟಗಳ ಕೋಟಲೆ!

“ತಿಂದದ್ದು ಒಣರೊಟ್ಟಿ, ಕುಡಿದ್ದದ್ದು ಅರ್ಧ ಟೀ

ನಡೆದದ್ದು ಮೈಲಿ ಮೈಲಿ, ನನ್ನ ಜೊತೆ ನೀ ಅಂಟಿ,

ಎಲ್ಲಾ ಕೈ ಬಿಟ್ಟಾಗ ನೈರಾಶ್ಯವೇ ಮುತ್ತಿದಾಗ

ಉಳಿದದ್ದೂ ಬೆಳೆದದ್ದೂ ನಮ್ಮೊಡಲ ಅನುರಾಗ”

ಈ ಪ್ರಗಾಥದಲ್ಲಿ ಕಥಾನಾಯಕಿಯ ಪಾತ್ರ/ಚಿತ್ರಣ ಪವರ್ಫ಼ುಲ್ ಆಗಿ ಮೂಡಿದೆ. ಆಕೆ ಇಲ್ಲಿ ಮೌನ ಗೌರಿ, ತನ್ನದೇ ಆದ ರೀತಿಯಲ್ಲಿ ಪ್ರೀತಿ ಹೊರಸೂಸುತ್ತಾ ತಾಳ್ಮೆಗೆಡದೆ, ಈ ಯುವಕನ ಕೈ ಹಿಡಿದು, ಸಂತೈಸಿ ಬೆಳೆದು ಬೆಳೆಸಿದ ಚಿತ್ರಣ ಅತ್ಯಂತ ಸೊಗಸಾಗಿ ಮೂಡಿದೆ.

“ನಾ ಬರೆದೆ ನೀ ಹಾಡಿದೆ,

ನನ್ನದು ನುಡಿ ನಿನ್ನದು ದನಿ

ಸಂಕೇತವಾಯ್ತು ಕವಿತೆ

ಅಲ್ಲೆಲ್ಲಾ ನಿನ್ನ ಪ್ರೀತಿ ಒಳಗವಿತೆ”

ಪರ್ವದ ಶೀರ್ಷಿಕೆಯೇ ನುಡಿವಂತೆ ’ಸಂಸಾರ……ಸಂಕಟದ ಉರಿಖಾರ’! ಎಂಬ ಮಾತು ಮನಮುಟ್ಟುವಂತೆ ಚಿತ್ರಿತವಾಗಿದೆ.

“ಬೆಂಗಳೂರೆಂಬೋದು ಬಡವರಿಗೇನಲ್ಲ

ರೊಕ್ಕವಿದ್ದರೆ ಬದುಕು ಇಲ್ಲೆಲ್ಲಾ

ದುಡ್ಡಿರದವರಿಗಿಲ್ಲಿ ಕಿಮ್ಮತ್ತು ಇನಿತಿಲ್ಲ

ಬರಿಗೈ ಬಾಳುವೆಗೆ ಸ್ಥಳವೇ ಇಲ್ಲ”

ಈ ಸಾಲುಗಳು ಅವರ ಪರಿಸ್ಥಿತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಬವಣೆಯಲ್ಲೂ ಕವಿ ಎಂದಿಗೂ ತಮ್ಮ ಮೌಲ್ಯಗಳ ಅಳತೆ ಮೀರಿಲ್ಲ.

“ಹೇಗೆ ಹೇಗೋ ಬದುಕಲು ನನಗೆ ಮನಸ್ಸಿರಲಿಲ್ಲ

ನಾವಂತೂ ಅಡ್ಡ ಹಾದಿಗಿಳಿಯಲಿಲ್ಲ

ನೀಯತ್ತು ಉಸಿರಾಗಿ, ಮೌಲ್ಯಗಳು ಹಸಿರಾಗಿ

ನಡೆದೆವು ಧರ್ಮದಲಿ ಜೊತೆ ಜೊತೆಯಾಗಿ”

ಒಬ್ಬ ವ್ಯಕ್ತಿ ಬದುಕಲ್ಲಿ ಬೆಳೆಯುತ್ತಾ ಹೋದಂತೆ ಬದುಕಿನ ವಾಸ್ತವಿಕತೆಯನ್ನು, ಸೂಕ್ಷ್ಮತೆಗಳನ್ನೂ ಅರಿಯುತ್ತಾ ಹೋಗುತ್ತಾನೆ. ಈ ಕೆಳಕಂಡ ಸಾಲುಗಳಂತೆ:

“ಈ ಬದುಕೆಂಬ ಒಗಟನ್ನು ಬಿಡಿಸುವುದೇ ಸೋಜಿಗ

ಅರಿಯ ಹೊರಟಂತೆಲ್ಲಾ ನಿಗೂಢ ಈ ಜಗ!”

“ಹಮ್ಮೀರ ನಾನಲ್ಲ, ಸುಕುಮಾರಿ ನೀನಲ್ಲ

ನಾ ನಲ್ಲ – ನೀ ನಲ್ಲೆ, ನಮ್ಮ ನಂಟು ಒಂದು ಯುಗದ್ದಲ್ಲ”

ಈ ಸಾಲುಗಳು, ಸರಳ, ನೈಜ ಹಾಗೂ ವಾಸ್ತವವಾಗಿದೆ. ಸಾಕಷ್ಟು ಕಷ್ಟಗಳನ್ನನುಭವಿಸಿದ ಕವಿಗೆ ಸಮಯಕ್ಕಾದವರು ಜೀವದಗೆಳೆಯರು. ಗೆಳೆಯರ ಸಹಾಯದಿಂದ ಇಬ್ಬರೂ ಓದಿ ಪದವೀಧರರಾಗುತ್ತಾರೆ. ಈ ವಿಚಾರವನ್ನು ಕವಿ ಅತ್ಯಂತ ವಿನಮ್ರವಾಗಿ, ಕೃತಜ್ಞತೆಯಿಂದ ನೆನೆಯುತ್ತಾರೆ. ಅವರ ಬವಣೆ ಬೀಡು ಹೆಚ್ಚಾದದ್ದು, ಆಕೆ ತುಂಬು ಗರ್ಭಿಣಿಯಾದಾಗ. ಎಷ್ಟೇ ಕಷ್ಟ ಬಂದರೂ ಕೆಲಸಕ್ಕೆ ಹೋಗಲೇ ಬೇಕಾದಂತಹ ಪರಿಸ್ಥಿತಿ. ಜೊತೆಗೊಬ್ಬರಿಲ್ಲ. ದೋರಂಗೌರವರೇ ಹೇಳಿರುವಂತೆ, ಆಕೆಯ ತುಂಬು ದಿನಗಳಲ್ಲಿ ಕೈಯಲ್ಲಿ ಕವಡೆ ಕಾಸಿಲ್ಲ. ಪಡದ ಪಾಡಿಲ್ಲ!

“ಬಸುರಿ ನೀ ನಗಲಿಲ್ಲ, ನಗೆಯ ನಾ ಕೊಡಲಿಲ್ಲ

ಧೈರ್ಯದೊಳು ಎಂತೆಂತೋ ದಿನದೂಡಿದೆ!”

“ಕೆಲಸಕ್ಕೆ ಹೋಗದಿರೆ ರೊಕ್ಕವಿಲ್ಲ ಅಕ್ಕಿಯಿಲ್ಲ

ಕೆಲಸಕ್ಕೆ ಹೋದರೆ ನಿನ್ನ ನೋಡುವರಿಲ್ಲ

ತೊಳಲಿದೆ ಬಳಲಿದೆ ನನ್ನನೇ ನಾನು ಶಪಿಸಿಕೊಂಡೆ

ನೀನಿಂಥ ಗಂಡನನ್ನ ಏಕೆ ಕಟ್ಟಿಕೊಂಡೆ?”

ಕೊನೆಗೊಮ್ಮೆ ಮನೆಗೆ ಬಂದಾಗ ಆಕೆಯನ್ನು ಕಾಣದ ಈತ ಕಂಗಾಲಾಗುತ್ತಾರೆ. ಹುಡುಕದ ಸ್ಥಳವಿಲ್ಲ. ಆಸ್ಪತ್ರೆಯ ವಾರ್ಡುಗಳೆಲ್ಲ ತಡಕಾಡಿದ ಬಳಿಕ ಒಂದು ಕಾರ್ಪೋರೇಷನ್ ಆಸ್ಪತ್ರೆಯ ವಾರ್ಡಿನಲ್ಲಿ ಆಕೆಯನ್ನು ಕಂಡು, ಜೀವ ಮರುಕಳಿಸಿದಂತೆ ನಿಟ್ಟುಸಿರು ಬಿಟ್ಟು, ಗೊಳೋ ಎಂದು ಅತ್ತ ಸಂದರ್ಭದ ಚಿತ್ರಣ ಹೃದಯವಿದ್ರಾವಕವಾಗಿದೆ.

“ಅಲ್ಲಿಲ್ಲ ಇಲ್ಲಿಲ್ಲ ಎಲ್ಲೆಲ್ಲೂ ನೀನಿಲ್ಲ ನಾ ಗೋಳಾಡಿದೆ

ನನ್ನ ಗೋಳ ಪರಿಕಂಡು ಮುಂದೆ ಬಂದರು ಸ್ವಾಮಿ,

ಹುಡು ಹುಡುಕಿ ಕಟ್ಟಕಡೆಗೆ ನಿನ್ನ ಮುಖ ನಾ ಕಂಡೆ

ತಾರಕದ ಸ್ವರವೆತ್ತಿ ಅತ್ತಿದ್ದೆ ಅಳಲು ಚಿಮ್ಮಿ!”

ಪಾಡೆಲ್ಲ ಹಾಡಾಯಿತು ಎಂಬಂತೆ ಮಗುವಾದ ಘಳಿಗೆ ತಂದಿತು ಇವರೀರ್ವರ ಬಾಳಿಗೆ ಆನಂದದ ಚಿಲುಮೆ. ಕತ್ತಲ ನಂತರ ಬೆಳಕಿದ್ದೇ ಇರುವಂತೆ, ಇವರಿಗೆ ಒಳ್ಳೆಯ ಭವಿಷ್ಯದ ಪ್ರಾರಂಭವಾಗಿತ್ತು. ನೆಂಟರಿಷ್ಟರೆಲ್ಲ ಹತ್ತಿರವಾದರು, ನೌಕರಿಯ ವ್ಯವಸ್ಥೆಯೂ ಆಯಿತು! ಕವಿಯ ಸಂತಸಕ್ಕೆ ಪಾರವೇ ಇಲ್ಲ.

“ಯೋಗಾಯೋಗ ಕೂಡಿಬಂದರೆ

ಹಾವೂ ಹಗ್ಗವಾದೀತು!

ಅದೃಷ್ಟ ರೇಖೆ ಹೊಳೆ ಹೊಳೆದರೆ

ಮುಳ್ಳೂ ಹೂವಾದೀತು!”

ಎಂದು ಕವಿ ಆನಂದಿಸುತ್ತಾರೆ. ಕೊನೆಗೂ ಪ್ರೀತಿಯಲ್ಲಿ ಸೋತು ಗೆದ್ದ ಕವಿಗಳು, ಪ್ರೀತಿಯ ಬಗೆಗೆ ಈ ರೀತಿ ನುಡಿಯುತ್ತಾರೆ.

“ಈ ನೀಳ್ಗತೆಗೆ ಮೀರಿದ್ದು ಪ್ರೀತಿ

ಮಹಾಕಾವ್ಯ ಮೀರಿದ್ದು ಪ್ರೀತಿ

ಮೊಗೆದವರಿಲ್ಲ ಪ್ರೀತಿ ಪೂರಾ

ಬರೆದವರಿಲ್ಲ ಪ್ರೀತಿ ಅಪಾರ”

ಈ ಪ್ರಗಾಥದಿಂದ ಕವಿ ದೊರಕಿಸಿಕೊಡುವ ನೀತಿಯೆಂದರೆ, ಮೈಮರೆತು ಪ್ರೀತಿಸಿ, ಕಷ್ಟ ಬಂದಾಗ ಕೈ ಬಿಡುವ ಸಿನಿಮೀಯ, ಅಪ್ರಬುಧ್ದ ಪ್ರೇಮಾಯಣಕ್ಕೆಲ್ಲಾ ಸೊಲ್ಲು ಹಾಕಿ, ಪ್ರೀತಿಯನ್ನು ಜೀವನವಾಗಿಸಿಕೊಂಡು, ಎಂಥ ಕಷ್ಟವೇ ಬಂದರೂ ಎದುರಿಸಿ, ಮೆಟ್ಟಿ ಮೇಲೆ ಬರಬೇಕು ಎಂಬ ಜೀವನಾಯಣದ ಪರಿ! ಮತ್ತೆ ಇದು ನಮ್ಮ ಯುವ ಪ್ರೇಮಿಗಳೆಲ್ಲ ಓದಬೇಕಾದ ಹೊತ್ತಗೆ.

‍ಲೇಖಕರು G

November 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Badarinath Palavalli

    ಪ್ರಗಾಥ ಪ್ರಕಾರದ ಬಗ್ಗೆ ನನಗೆ ಅರಿವು ಮೂಡಿತು ಸಂಪು. ಧನ್ಯವಾದಗಳು.

    ಡಾ|| ದೊಡ್ಡರಂಗೇ ಗೌಡರು ಅತ್ಯಂತ ಸಂವೇದನಾಶೀಲ ಪ್ರೇರಕ ಕವಿ.

    ಪ್ರತಿಕ್ರಿಯೆ
  2. samyuktha

    ಯವ್ವನದ ಆಕರ್ಷಣೆ ,ಉನ್ಮಾದಗಳು ಬದುಕಿನ ನಿಷ್ಟುರತೆಗೆ ಸಿಲುಕಿ ಮರೆಯಾಗಿ ಮೌನವಾಗಿ ಕರಗಿ ಹೋಗುವುದು ಸಾಮಾನ್ಯ .
    ಅಂಥದ್ದರಲ್ಲಿ ಪ್ರೀತಿ ಗಾಢವಾಗಿ” ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ” ಎಂಬಂತೆ ಪರಸ್ಪರ ಬದುಕನ್ನು ಅಪ್ಪುಕೈಯ್ದು ಬಾಳುವರು ಗಂಧದೊಲು ಜೀವತೆಯ್ದು .
    ಆಗ ಬದುಕಿನ ಒಂದು ಘಟ್ಟ ಸಾರ್ಥಕವಾಗುತ್ತದೆ . ದೋರಂಗೌ ರವರ – ಪ್ರಣಯ ಪಕ್ಷಿಗಳ ಕರುಣಾಜನಕ ಸಂಕಥನವನ್ನು ಅಷ್ಟೇ ಆರ್ದ್ರವಾಗಿ ನೀವೂ ನಿರೂಪಿಸಿದ್ದೀರಿ .
    ಇದೊಂದು ಸತ್ಯಕಥೆ ,ಆದ್ದರಿಂದ ಯುವಕರು ಇದನ್ನು ಓದಬೇಕು ಎಂಬ ನಿಮ್ಮ ಸೂಚನೆಯು ಸಹ ಸೂಕ್ತವಾಗಿದೆ .
    -ಪು .ಸೂ. ಲಕ್ಷ್ಮೀನಾರಾಯಣ ರಾವ್

    ಪ್ರತಿಕ್ರಿಯೆ
  3. ಪು .ಸೂ. ಲಕ್ಷ್ಮೀನಾರಾಯಣ ರಾವ್

    ಯವ್ವನದ ಆಕರ್ಷಣೆ ,ಉನ್ಮಾದಗಳು ಬದುಕಿನ ನಿಷ್ಟುರತೆಗೆ ಸಿಲುಕಿ ಮರೆಯಾಗಿ ಮೌನವಾಗಿ ಕರಗಿ ಹೋಗುವುದು ಸಾಮಾನ್ಯ .
    ಅಂಥದ್ದರಲ್ಲಿ ಪ್ರೀತಿ ಗಾಢವಾಗಿ” ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ” ಎಂಬಂತೆ ಪರಸ್ಪರ ಬದುಕನ್ನು ಅಪ್ಪುಕೈಯ್ದು ಬಾಳುವರು ಗಂಧದೊಲು ಜೀವತೆಯ್ದು .
    ಆಗ ಬದುಕಿನ ಒಂದು ಘಟ್ಟ ಸಾರ್ಥಕವಾಗುತ್ತದೆ . ದೋರಂಗೌ ರವರ – ಪ್ರಣಯ ಪಕ್ಷಿಗಳ ಕರುಣಾಜನಕ ಸಂಕಥನವನ್ನು ಅಷ್ಟೇ ಆರ್ದ್ರವಾಗಿ ನೀವೂ ನಿರೂಪಿಸಿದ್ದೀರಿ .
    ಇದೊಂದು ಸತ್ಯಕಥೆ ,ಆದ್ದರಿಂದ ಯುವಕರು ಇದನ್ನು ಓದಬೇಕು ಎಂಬ ನಿಮ್ಮ ಸೂಚನೆಯು ಸಹ ಸೂಕ್ತವಾಗಿದೆ .

    ಪ್ರತಿಕ್ರಿಯೆ
  4. Prasad V Murthy

    ಒಂದೊಳ್ಳೆಯ ಬರಹ ದೊರಂಗೌ ರವರ ‘ಪ್ರೀತಿ ಪ್ರಗಾಥ’ ವನ್ನಿಟ್ಟುಕೊಂಡು ‘ಪ್ರಗಾಥ’ ಪ್ರಕಾರದ ಬಗ್ಗೆ ಸೂಕ್ಷ್ಮವಾಗಿ ಬೆಳಕು ಚೆಲ್ಲಿದ್ದೀರಿ. ಈ ರೀತಿಯ ನವೀನ ಮಾಧರಿಯ ಸಾಹಿತ್ಯದನ್ವೇಷಣೆಗಳನ್ನು ನೋಡುವಾಗ ನನಗನ್ನಿಸುವುದು ಕನ್ನಡ ಸಾಹಿತ್ಯ ಮತ್ತಷ್ಟು ತೆರೆದುಕೊಳ್ಳಬೇಕು, ಸಾಹಿತಿಗಳು ಮತ್ತಷ್ಟು ಸೃಜನಶೀಲರಾಗಬೇಕು. ಹೊರಗಿನ ಸಾಹಿತ್ಯಗಳನ್ನು ಮತ್ತು ಅವುಗಳ ಪ್ರಕಾರಗಳನ್ನು ಅರಗಿಸಿಕೊಂಡು ಕನ್ನಡ ಸಾಹಿತ್ಯದೊಂದಿಗೆ ಆ ಪ್ರಕಾರಗಳನ್ನು ಅನುಸಂಧಾನಿಸಿ ವಿಭಿನ್ನವಾದ, ನವೀನ ಮಾಧರಿಯ ಸಾಹಿತ್ಯ ಕೃಷಿಗೆ ಮುನ್ನುಡಿಯಾಗಬೇಕು. ಕನ್ನಡಾಂಬೆಯ ಮಡಿಲು ಮತ್ತಷ್ಟೂ ಶ್ರೀಮಂತವಾಗಬೇಕು. ಒಂದು ಉತ್ತಮ ಸಂಕಥನವನ್ನು ಸರಳವಾಗಿ ಬಿಡಿಸಿ ನಮ್ಮೆಲ್ಲರ ಅಸ್ವಾದನೆಯ ನಾಲಿಗೆಗೆ ಉಣಬಡಿಸಿದ ನಿಮಗೆ ಧನ್ಯವಾದಗಳು.

    ಪ್ರತಿಕ್ರಿಯೆ
  5. Anil Talikoti

    ‘ಪ್ರೀತಿ ಪ್ರಗಾಥ’ ದ ಬಗ್ಗೆ ನಿಮ್ಮ ಇಣುಕಿನ ವಿವರಣೆಯೇ ಇಷ್ಟು ಸುಂದರವಾಗಿರುವಾಗ -ಸಂಪೂರ್ಣವಾಗಿ ಓದುವದು ಇನ್ನೆಷ್ಟು ಖುಷಿಯ ವಿಚಾರವಾಗಿರಬಹುದು. excellent write up. ಇದು online ನಲ್ಲಿ ಎಲ್ಲಿಂದಾದರೂ ತರಿಸಬಹುದಾ? ತಿಳಿಸಿದರೆ ಉಪಕೃತ.
    ನನಗೇನೂ ಇದು ಬರಿ ಯುವ ಪ್ರೇಮಿಗಳೆಗೆ ಮಿಸಲಲ್ಲಾ ಎನಿಸುತ್ತದೆ, ಪ್ರೆಮಕೆಲ್ಲಿ ವಯಸ್ಸಿದೆ ಅಂತಲೂ ಕೇಳಬಹುದೇನೋ? ನಿಮ್ಮ ಎಲ್ಲಾ ಲೇಖನಗಳು ಓದಲು ಖುಷಿ ಕೊಡುತ್ತವೆ.
    -ಅನಿಲ

    ಪ್ರತಿಕ್ರಿಯೆ
  6. samyuktha

    ಎಲ್ಲರಿಗೂ ಧನ್ಯವಾದಗಳು.

    ಅನಿಲ್ ಅವರೇ, ಖೇದವೆಂದರೆ ‘ಪ್ರೀತಿ ಪ್ರಗಾಥ’ ವು ಆನ್ಲೈನ್ ನಲ್ಲಿ ಸಿಗುವ ಸೌಲಭ್ಯ ಇನ್ನೂ ಇಲ್ಲ. ಆದರೆ ಯಾವುದೇ ಪುಸ್ತಕದ ಅಂಗಡಿಯಲ್ಲಿ ಸಿಗಬಹುದು.

    ಪ್ರತಿಕ್ರಿಯೆ
  7. Prashanth Parashuram Khatavakar

    ವಿಷಯದ ವಿಚಾರವು ಅತ್ಯಂತ ಆಸಕ್ತಿಯಿಂದ ಓದುವಂತೆ, ಬೇರೊಂದು ಲೋಕದೆಡೆಗೆ ಕರೆದೊಯ್ದಿದೆ … ಈ ಪ್ರಗಾಥಗಳೆಂದರೇನು ಎಂಬುದರ ಮಾಹಿತಿ ಮತ್ತಷ್ಟು ಬೇಕೆನಿಸುತ್ತಿದೆ .. 🙂
    ಪ್ರಶಾಂತ್ ಪರಶುರಾಮ ಖಟಾವಕರ್ (ಪಿಪಿಕೆ)
    ದಾವಣಗೆರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: