ಸಂಪು ಕಾಲಂ : ದೊಡ್ಡ ಆಶಯದ "ಚಿಕ್ಕಪ್ಪ"

ಚಿಕ್ಕಂದಿನಲ್ಲಿ ಯಾರಾದರೂ ಛೇಡಿಸಲು “ನೀನು ಯಾರನ್ನು ಮದುವೆ ಆಗ್ತೀಯ?” ಅಂತ ರೇಗಿಸಿದರೆ, “ನನ್ನ ಚಿಕ್ಕಪ್ಪನನ್ನು” ಎಂದು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತಿದ್ದೆ! ಒಂದು ಆಪಲ್ ಜ್ಯೂಸು ಕೊಡಿಸಿ, ಬಾಡಿಗೆ ಸೈಕಲ್ಲಿನ ಮೇಲೆ ಕಬ್ಬನ್ ಪೇಟೆ ಬೀದಿಯಲ್ಲಿ ರೌಂಡ್ ಹೊಡಿಸಿ ಒಂದಷ್ಟು ಹೊತ್ತು ಆಟವಾಡಿದ ಮೇಲೂ ಪಕ್ಕದಲ್ಲಿ ಚಿಕ್ಕಮ್ಮ ಬಂದರೆ ನನಗೆ ಅಳು ಮುಖ. ಹೀಗೆ ಚಿಕ್ಕಪ್ಪ ಅನ್ನೋ ಹೆಸರೇ ಮೊದಲಿನಿಂದ ಸಲಿಗೆಯದು!
ಇಂತಹ ಹೆಸರಿನ ಪುಸ್ತಕಕ್ಕೆ ಅಪಾರ ಅವರು ಒಂದು ಗಂಭೀರ, ನಿಷ್ಠುರ, ನಿಗೂಢ ನೋಟದ ವ್ಯಕ್ತಿಯ ಮುಖಪುಟ ಚಿತ್ರಿಸಿದ್ದು, ಜೊತೆಗೆ ಪುಸ್ತಕ ಬಿಡುಗಡೆಯ ಸಮಯದಲ್ಲಿ ಕುಂವೀ ಅವರು ಈ ಕಥೆಯನ್ನು ಸಿನೆಮಾ ಮಾಡಿಸಬೇಕು, ನಾಯಕ ದೇವರಾಜ್ ಆಗಬೇಕು ಎಂದು ಹೇಳಿದ್ದು, ನನ್ನ ಕಲ್ಪನೆಯ ಚಿಕ್ಕಪ್ಪನನ್ನು ನಾನು ಇಲ್ಲಿ ಕೂರಿಸಿದ್ದು. ಇವೆಲ್ಲವೂ ಸೇರಿ ಈ ಪುಸ್ತಕ ಓದಲೇ ಬೇಕು ಎಂಬ ಒಂದು ವಿಚಿತ್ರ ಕುತೂಹಲ ನನ್ನಲ್ಲಿ ಮೂಡಿತ್ತು. ಒಂದು ಕಡೆ ಸಲುಗೆಯ ಚಿಕ್ಕಪ್ಪ, ಮತ್ತೊಂದು ಕಡೆ ದೇವರಾಜ್ ಎಂಬ ಪಾತ್ರದ ಖಳನಾಯಕನ ಚಿತ್ರಣ, ಇವುಗಳೊಂದಿಗೆ ಪ್ರಾರಂಭವಾಗಿತ್ತು ಜೋಗಿಯವರ “ಚಿಕ್ಕಪ್ಪ”ನ ಓದು.
ಕಥೆಯ ಪ್ರಾರಂಭದಲ್ಲೇ ಉಪ್ಪಿನಂಗಡಿಯನ್ನು ಒಂದು ಫುಲ್ ಆನ್ ರೌಂಡ್ ಹಾಕಿಸಿ, ಆ ಊರಿನ ಬಗ್ಗೆ ಒಂದು ನೆಂಟಸ್ತಿಕೆ ಬೆಳೆಸಿಕೊಳ್ಳುವಷ್ಟು “ಚಿಕ್ಕಪ್ಪ” ನಮ್ಮನ್ನು ಆವಾಹಿಸಿಕೊಳ್ಳುತ್ತಾನೆ. ಓದುತ್ತಾ ಓದುತ್ತಾ ನನ್ನ ಪರಿಕಲ್ಪನೆಯ ಚಿಕ್ಕಪ್ಪ ಕಳೆದುಹೋಗಿ ಅನೇಕ ಸಂಕೀರ್ಣ, ಸಮಕಾಲೀನ ವಿಷಯಗಳನ್ನು, ಅದಕ್ಕೂ ಮೀರಿದ ಭಾವನೆಗಳ ಜಟಿಲತೆಗಳನ್ನೂ ಚಿಕ್ಕಪ್ಪ ಪ್ರತಿಬಿಂಬಿಸುತ್ತಾ, ಪರಿಚಯಿಸುತ್ತಾ ಹೋಗುತ್ತಾನೆ. ಕೆಲವೊಮ್ಮೆ ಈ ಸಂಕೀರ್ಣತೆಯು ಸ್ಪಷ್ಟವಾಗಿ ಮೂಡಿಬರುವಲ್ಲಿ ವಿಫಲತೆ ಕಂಡಿರುವುದು ಇದ್ದರೂ, ಪ್ರಾಮಾಣಿಕ ಕೃಷಿ ಸಾಕಷ್ಟು ನಡೆದಿದೆ ಎಂಬುದು ಸುಸ್ಪಷ್ಟ.
ಬಹುಶಃ ಇಡೀ ಕಥೆಯನ್ನು ಒಂದು ನಿರೂಪಣೆ ಎಂದು ಹೇಳಬಹುದು. ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಣ್ಣ ಒಂದಷ್ಟು ಮಂದಿಗೆ ಇಡಿ ರಾತ್ರಿ ಕೂತು ಹೇಳಿದ ಕಥೆಯ ನಿರೂಪಣೆ ಈ “ಚಿಕ್ಕಪ್ಪ”. ಪ್ರಾರಂಭದಲ್ಲಿರುವ ನಿಗೂಢತೆ, ಕಾತರತೆ, ಕೌತುಕತೆಯ ಒಂದು ಹಿಡಿತ ಕಥೆ ಬೆಳೆದಂತೆ ಕಥಾ ಹಂದರಕ್ಕೆ ಅನುಗುಣವಾಗಿ ಸಡಿಲವಾಗುತ್ತಾ ಹೋಗುತ್ತದೆ. ಇದು ಉದ್ದೇಶ ಪೂರ್ವಕವೋ ಅಥವಾ ಅನಿವಾರ್ಯವೋ ತಿಳಿಯದು. ತಾವಾಯ್ತು ತಮ್ಮ ಬದುಕಾಯ್ತು ಎಂದು ಜೀವನ ಸಾಗಿಸುತ್ತಿರುವ ಮುಗ್ಧ ಊರಿನಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಪ್ರವೇಶಗೊಂಡು ಇಡೀ ಊರನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಸರ್ವಾಧಿಕಾರ ಚಲಾಯಿಸುತ್ತಾನೆ. ಹುತ್ತದೊಳಗಿನ ಹಾವಂತೆ ಹಂತ ಹಂತವಾಗಿ ಊರಿನ ಪ್ರತಿಯೊಬ್ಬರ ಜೀವನವೂ ಈತನ ಉಸಿರಿನಿಂದಲೇ ಎಂಬಷ್ಟು ಪಸರಿಸಿಬಿಡುತ್ತಾನೆ. ಹೀಗೆ ಜೀವನ ನಡೆಸುತ್ತಾ ಕೊನೆಯಲ್ಲಿ ತನ್ನ ತಪ್ಪುಗಳು ಅರಿವಾಗಿ ಪರಿತಪಿಸುವ ಕ್ಷಣಗಳೂ ಕಾಣಸಿಗುತ್ತವೆ.
ಒಂದು ಸಿದ್ಧ ವಿನ್ಯಾಸ, ಕಟ್ಟುಪಾಡುಗಳಿಗೆ ಒಳಗಾಗದ ಈ ಕಥೆಯ ಒಂದು ಮೇಲ್ನೋಟದ ಓದು ನಮಗೆ ನಿರಾಶೆಯನ್ನು ಮೂಡಿಸಬಹುದು. ಯಾವ ನಿರ್ಧಾರಿತ ಕೊನೆಯನ್ನೂ ಮುಟ್ಟದ ಕಥೆ ನಮಗೆ ಒಂದು ಸಂದೇಶವನ್ನು ನೀಡುತ್ತಿದೆ ಎಂಬುದು ಕಾಣದೆ ಹೋಗಬಹುದು. ಆದರೆ ಈ ಕಥೆ ಹಲವಾರು ಮಜಲುಗಳಲ್ಲಿ ಪ್ರಸ್ತುತವಾಗಿ ಕಾಣಿಸುತ್ತದೆ. ಬಹುಶಃ ನಾವು ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಎಂಬ ವಿವಿಧ ಜಗುಲಿಗಳಲ್ಲಿ ಕೂತು ಈ ಕಥೆಯನ್ನು ಅರ್ಥೈಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಒಂದು ಮುಗ್ಧ ಊರಿನ ಚಿತ್ರಣ, ಅದರಲ್ಲಿ ಒಬ್ಬ ಅಪರಿಚಿತನ ಪಾತ್ರ, ಅಪರಿಚಿತ ವ್ಯಕ್ತಿಯಿಂದ ಇಡೀ ಊರಿನ ಸಾಮಾಜಿಕ ಸ್ಥಿತಿಯೇ ಅಸ್ಥವ್ಯಸ್ಥವಾಗಬಲ್ಲ ಪರಿಸ್ಥಿತಿ ಹೀಗೆ ಅನೇಕ ದೃಷ್ಟಿಕೋನದ ಸಾಮಾಜಿಕ ರೀತಿನೀತಿಗಳು ಇಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಹಿಂದೂ ಸಂಸ್ಕೃತಿ, ಹಿಂದುತ್ವ ಎಂಬ ತೀವ್ರ ಮತಾಭಿಮಾನವನ್ನು ಕ್ಯಾಶ್ ಮಾಡಿಕೊಳ್ಳುವ ರಾಜಕೀಯ ಉದ್ದೇಶಗಳು, ಈ ರಾಜಕೀಯ ಕೃತ್ರಿಮತೆಗಳನ್ನು ಅರ್ಥಮಾಡಿಕೊಳ್ಳಲಾಗದ ಹಲಕೆಲವು ಜನಸಾಮಾನ್ಯರು “ಕೇಸರೀ” ಎಂಬ ಅಂಧತ್ವದಲ್ಲಿ ಮುಳುಗಿ ಅದಕ್ಕಾಗಿ, ಅದರ ಉದ್ದೇಶ ಸಫಲತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಸಿ ತಾವೂ ಹಾಳಾಗಿ, ತಮ್ಮ ಸುತ್ತಲ ಪರಿಸರವನ್ನೂ ಕೆಡಿಸುವ ಸರ್ವಾಧಿಕಾರೀ ಮನೋಭಾವ, ಈ ಕೇಸರೀಕರಣದ ವಿಷಬೀಜ ಬಿತ್ತುವ ಹಾನಿಕಾರಕ ಪರಿಸರದ ರೆಂಬೆಕೊಂಬೆಗಳು. ಇವೆಲ್ಲವೂ ನನಗೆ ಈ ಪುಸ್ತಕದಲ್ಲಿ ಕಂಡುಬಂದ ವಾಸ್ತವಿಕ ಚಿತ್ರಣದ ಛಾಯೆಗಳು. ಚಿಕ್ಕಪ್ಪನಂತಹ ನಿಷ್ಠುರ, ಕಟು ಜೀವನ ಶೈಲಿಗಳೂ, ಊರಿನ ಪತ್ರಕರ್ತ ರಾಧಾಕೃಷ್ಣನಂತಹ ಪಲಾಯನವಾದಿ ಮತ್ತಿತರ ಕೆಲವು ಪಾತ್ರಗಳು ಪ್ರಬಲವಾಗಿ, ಫಲಪ್ರದವಾಗಿ ಮೂಡಿಬಂದಿದ್ದರೂ ಸೀತಾರಾಮ ಯರ್ಮುಂಜ, ಸುಧೀಂದ್ರ ಗುತ್ತಿ ಇವರ ಪಾತ್ರಗಳ ಆಳವನ್ನು, ತೂಕವನ್ನೂ ಪರಿಚಯಿಸುವಲ್ಲಿ ಕಥೆ ವಿಫಲವಾಗಿದೆ ಎಂದೇ ಹೇಳಬಹುದು.

ಇವೆಲ್ಲಕ್ಕೂ ಮೀರಿ ಕಥೆಯಲ್ಲಿ ನನ್ನನ್ನು ಕಾಡಿದ ಅಂಶ, ಮಾನವೀಯತೆ ಮತ್ತು ಮಾನಸಿಕ ತುಮುಲತೆಗಳ ಚಿತ್ರಣ. ಇದು ಕಂಡೂ ಕಾಣದಷ್ಟು ಸೂಕ್ಷ್ಮವಾಗಿ ರಚಿತಗೊಂಡಿದ್ದರೂ, ಕಥೆಯ ಸಾರವರಿಯಲು ಇದನ್ನು ಗಮನಿಸುವುದು ಬಹಳ ಮುಖ್ಯ. ತನ್ನ ನಂಬಿಕೆಗಳೇ ಸತ್ಯ ಎಂದು ಅದೇ ಆಧಾರವಾಗಿ ಜೀವನ ಪೂರ್ತಿ ಕಳೆದನ ಚಿಕ್ಕಪ್ಪ, ತಾನು ಪರಾವಲಂಭಿಯಾದಾಗ ತನ್ನ ಏಕಮುಖೀ ಧೋರಣೆಗಳು ಅರಿವಾಗುತ್ತದೆ. ತನ್ನ ಪ್ರಬಲ ನಂಬಿಕೆಗಳು, ಜೀವನ ರೀತಿ ಎಲ್ಲವೂ ಒಂದು ದೊಡ್ಡ ಸುಳ್ಳು, ಭ್ರಮೆ ಎಂಬ ಅರಿವು ಮೂಡುತ್ತದೆ. ಆಗ ಚಿಕ್ಕಪ್ಪ (ಅಥವಾ ಅಂತಹ ಯಾರೇ) ಅನುಭವಿಸುವ ಮನಸ್ತಿತಿ ಬಹಳ ಘೋರ! ತಾವು ನಂಬಿ ನಡೆದದ್ದು ಹುಸಿ ಗೋಡೆ ಹಿಡಿದು ಎಂಬ ಸತ್ಯ ಅರಿವಾದಾಗ ಮನುಷ್ಯ ಆಂತರಿಕವಾಗಿ ಕುಸಿದು ಬಿಡುತ್ತಾನೆ. ಈ ಒಂದು ರಿಯಲೈಸೇಶನ್ ಚಿಕ್ಕಪ್ಪನಿಗೆ ತನ್ನ ಪರಾವಲಂಭೀ ಪರಿಸ್ಥಿತಿಯಲ್ಲಿ ಉಂಟಾದದ್ದು ಎಂಬುದು ಗಮನಾರ್ಹ. ಅಂದರೆ, ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಹಂಕಾರ ಎಂಬ ಪೊರೆ ಕಳಚಿಬಿದ್ದಾಗ, ತಾನು, ತನ್ನ ನಂಬಿಕೆಗಳು ಎಂಬ ಸ್ವಾ(ದುರ)ಭಿಮಾನ ಅಥವಾ ಅಹಂಗೆ ಪೆಟ್ಟು ಬಿದ್ದರೆ ಮನುಷ್ಯ ಸರಳನಾಗುತ್ತಾನೆ, ನಂಬಿಕೆಗಳಿಗೂ ಮೌಲ್ಯಗಳಿಗೂ ಮೀರಿದ ಮಾನವೀಯತೆಗಳನ್ನು ಅರ್ಥೈಸಿಕೊಂಡು ಅದರ ಸವಿಯನ್ನು ಅನುಭವಿಸುತ್ತಾನೆ. ಚಿಕ್ಕಪ್ಪ ಕಥೆಯ ಕೊನೆಯ ಭಾಗದಲ್ಲಿ ರಶೀದ್ ಮಗನ ಹಣೆ ಕುಂಕುಮ ಅಳಿಸಿ ಕಣ್ಣ ಹನಿ ಹನಿಸುವುದು ಇದಕ್ಕೆ ಒಂದು ನಿದರ್ಶನ.
ಹೀಗೆ, ಸಾಕಷ್ಟು ವಿಷಯಗಳು, ಸಾಕಷ್ಟು ಅಂಶಗಳನ್ನು ಒಂದು ಪುಟ್ಟ ಕಾದಂಬರಿಯಲ್ಲಿ ಹೇಳಲು ಪ್ರಯತ್ನಿಸಿರುವ ಜೋಗಿಯ “ಚಿಕ್ಕಪ್ಪ”ನ ಉದ್ದೇಶ, ಆಶಯಗಳು ಸಾಕಷ್ಟು ದೊಡ್ಡದಾಗಿವೆ. ಆದರೆ ಈ ಸಾಕಷ್ಟು ವಿಷಯಗಳ ತುಂಬಿಸುವಿಕೆ ಎಂಬ ಅಂಶವೇ ಕಥೆಯ ಆಶಯ ಪರಿಣಾಮಕಾರಿಯಾಗಿ ಹೊರಬಿಂಬಿಸುವಲ್ಲಿ ಒಂದು ಬಿಕ್ಕಳಿಕೆ ಕಂಡಿದೆಯೇ ಎಂದೂ ಅನಿಸುತ್ತದೆ. ಅದು ಏನೇ ಇರಲಿ, “ಚಿಕ್ಕಪ್ಪ” ಒಂದು ಸಕಾಲಿಕ, ಸಮಯೋಚಿತ ಬರಹ ಎಂಬುದರಲ್ಲಿ ಎರಡು ಮಾತಿಲ್ಲ.
 

‍ಲೇಖಕರು avadhi

July 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸತೀಶ್ ನಾಯ್ಕ್

    ನಾನೂ ಚಿಕ್ಕಪ್ಪನನ್ನ ಓದಿದೆ.. ಉಪ್ಪಿನಂಗಡಿಯ ಊರಿನ ಸೌಂದರ್ಯ ಪರಿಚಯದ ಜೊತೆ.. ಅಲ್ಲಿನ ಜನರ ಜೀವನ ಶೈಲಿ ಮತ್ತು ನಂಬಿಕೆಗಳ ಕುರಿತಾದ ಮಾಹಿತಿಗಳ ಕುರಿತು ರೋಚಕನಾದೆ. ಜೋಗಿ ಸಾರ್ ಕಥೆಗಳನ್ನ ಕಟ್ಟುವುದರಲ್ಲೋ ಪಾತ್ರಗಳನ್ನ ಪೋಷಿಸುವುದರಲ್ಲೋ ಅನಾಯಾಸ ಗೆಲುವು ಕಂಡು ಬಿಡ್ತಾರೆ.. ಚಿಕ್ಕಪ್ಪ ಆ ಊರಿಗೆ ಬಂದದ್ದು.. ಅವನು ಬೆಳೆದದ್ದು.. ಅವನ ಸಾರ್ವಭೌಮತ್ವ ಸಾಗಿದ್ದು.. ಎಲ್ಲೋ ಒಂದು ಕಡೆ ಹೀರೋ ಅನ್ನಿಸಿಕೊಂಡ ಚಿಕ್ಕಪ್ಪ ಇದ್ದಕ್ಕಿದ್ದ ಹಾಗೆ ವಿಲನ್ ಹಾಗೆ ಕಾಣಿಸಿಕೊಳ್ಳೋದು.. ಹಿಂದುತ್ವ ಪ್ರಚಾರ ಮಾಡುವುದಕ್ಕಾಗಿ, ಕೇಸರಿಕರಣದ ಸಲುವಾಗಿ.. ಅವರವರುಗಳ ನಡುವೆ ಜಿದ್ದಾ ಜಿದ್ದಿಗಳಿಂದಾಗಿ.. ಉಪ್ಪಿನಂಗಡಿಯಂಥ ಊರು ಈಗಲೂ ಇಂಥಾ ಚಕ್ರವ್ಯೂಹ ಗಳ ನಡುವೆ ಸಿಲುಕಿರುವುದರ ಕುರಿತಾಗಿ ಜೋಗಿ ಸಾರ್ ಅವತ್ತು ಸುಚಿತ್ರದ ಸಮಾಲೋಚನೆಯಲ್ಲಿ ಹೇಳಿ ಕೊಳ್ತಾರೆ.. ಅವರೇ ಹೇಳಿದ ಹಾಗೆ (ಅಥವಾ ನಾನು ಹಾಗೆ ಗ್ರಹಿಸಿದ್ದೂ ಕೂಡಾ ಇರಬಹುದು) ಇಲ್ಲಿ ಉಪ್ಪಿನಂಗಡಿಯ ಪೂರ್ಣ ಚಿತ್ತಾರ ಬಿತ್ತರ ಅಷ್ಟರ ಮಟ್ಟಿಗೆ ಆಗಲಿಲ್ಲವಂತೆ. ಕಾದಂಬರಿಯನ್ನ ಕೆಲವೊಂದು ಕಟ್ಟು ಪಾಡಿಗೆ ಬಿದ್ದು ಮುಗಿಸೋ ಪ್ರಯತ್ನ ಮಾಡಿದ್ದು ನಿಜ ಅನ್ನಿಸ್ತದೆ. ಕಥೆಯ ಕೊನೆಗೆ ಮನುಷ್ಯತ್ವದ ಉಳಿವು ಮತ್ತು ಗೆಲುವು ಖುಷಿ ಕೊಡುತ್ತದೆ. ಉಪ್ಪಿನಂಗಡಿಗೆ ಬಂದ ಆ ಸರ್ಕಾರಿ ಡಾಕ್ಟರ್ ರ ವ್ಯಕ್ತಿತ್ವ ಹಿಡಿಸುತ್ತದೆ. ಚಿಕ್ಕಪ್ಪನಂಥ ವ್ಯಕ್ತಿತ್ವವನ್ನ ಮೀರಿ ನಿಲ್ಲೋ ಅವರ ಹೀರೋಯಿಸಂ ಮನಸ್ಸಿನಾಳದಲ್ಲಿ ಬೇರೂರಿ ನಿಲ್ಲುತ್ತದೆ. ಹಾಗೆ ಕೊನೆಗಾಲದಲ್ಲಿ ಅವರು ಚಿಕ್ಕಪ್ಪನಿಗೆ ನೆರವಾಗುವ ಮನುಷ್ಯತ್ವದ ಚಿತ್ರಣ ಕೂಡಾ. ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದರೂ ಮನಸ್ಸಿನಲ್ಲಿ ಉಳಿಯುವಂಥಹ ವ್ಯಕ್ತಿತ್ವ ಚಿಕ್ಕಪ್ಪ ಮತ್ತು ಆ ಪುಸ್ತಕ.
    ನನ್ನೊಳಗೂ ಇದ್ದ ಹಲಾವರು ಗೊಂದಲಗಳನ್ನ ಬಿತ್ತರಿಸಿರೋ ನಿಮ್ಮ ಲೇಖನ ಇಷ್ಟವಾಯ್ತು. ಒಂದರ್ಥದಲ್ಲಿ ಚಿಕ್ಕಪ್ಪ ನಮ್ಮನ್ನ ಆವಾಹಿಸಿ ಕೊಳ್ಳುವುದು ನಿಜ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: