ಸಂಪು ಕಾಲಂ : ದುರ್ದರ್ಶನ ಅಂದ್ರೆ…

ನಮಗೆ ಒಬ್ಬರು ಹಿಂದೀ ಅಧ್ಯಾಪಕರಿದ್ದರು.
ಅವರಿಗೆ ಹುದ್ದೆ ಹೊಸತು, ಸ್ವಲ್ಪ ಗಾಬರಿ ಹೆಚ್ಚು. ಆದ್ದರಿಂದ ಮಾತುಗಾರಿಕೆ ಇರಲಿಲ್ಲ. ತರಗತಿಗೆ ಬಂದ ಕೂಡಲೇ ಪುಸ್ತಕ ನೋಡಿ, ಕರಿ ಹಲಗೆಯ ತುಂಬಾ ಒಂದು ಪ್ರಬಂಧವನ್ನು ಗುಂಡಾಗಿ ಬರೆದು, ಇದನ್ನು ಬರೆದುಕೊಳ್ಳಿ ಎನ್ನುತ್ತಿದ್ದರು.
ಅದರ ವಿಷಯ दूरदर्शन (ದೂರದರ್ಶನ).
ಇದು ಒಂದು ಬಾರಿ ಅಲ್ಲ ಪದೇ ಪದೇ ಹೀಗೆಯೇ ಮಾಡುತ್ತಿದ್ದರು. ಶಾಲಾ ದಿನಗಳಲ್ಲಿ ಹಿಂದಿ ಆಗಲೀ, ಕನ್ನಡ ಅಥವಾ ಇಂಗ್ಲಿಷೇ ಆಗಲಿ ‘ಪ್ರಬಂಧ’ ಎಂದ ಕೂಡಲೇ ನೆನಪಿಗೆ ಬರುತ್ತಿದ್ದದ್ದು ‘ದೂರದರ್ಶನ’.
ಅಪ್ಪಿ ತಪ್ಪಿ ಚರ್ಚಾಸ್ಪರ್ಧೆ ಎಂದು ಬಿಟ್ಟರೆ, ಸಾಧಾರಣವಾಗಿ “ದೂರದರ್ಶನದ ಒಳಿತು, ಕೆಡುಕುಗಳು”
ವಿಷಯವಾಗಿರುತ್ತಿತ್ತು.
ಮತ್ತಿನ್ನು ಹಲವರು, ನಿಮ್ಮ ಹವ್ಯಾಸ ಏನು ಎಂದು ಕೇಳಿದರೆ… “ವಾಚಿಂಗ್ ಟಿವಿ” ಎಂದು ಬಿಡುತ್ತಾರೆ. ಏನೂ ತೋಚದೆ ಇದ್ದರೆ, ಆ ಟಿವಿ ರಿಮೋಟಿನ ಗತಿ ಅಧೋಗತಿ, ಒತ್ತಿ ಒತ್ತಿ ಅದರ ಉಸಿರನ್ನೆಲ್ಲ ಬಸಿದಿರುತ್ತೇವೆ.
ಈ ರೀತಿ ದೂರದರ್ಶನ ನಮಗೆ ಚಿಕ್ಕಂದಿನಿಂದಲೂ ಒಂದು ಆಘಾತಕಾರೀ ಸುಖವನ್ನು ಉಂಟುಮಾಡಿದೆ. ನಾವು ಭೌತಿಕವಾಗಿಯೂ, ಮಾನಸಿಕವಾಗಿಯೂ ಈ ಟೀವಿಗೆ ಮಾರುಹೋಗಿ, ಪರವಾಗಿಯೋ, ವಿರೋಧವಾಗಿಯೋ ಅಂತೂ ಇದರ ಪ್ರಭಾವಳಿಯಿಂದ ಬೆರಗಾಗಿದ್ದೇವೆ. “ಅಯ್ಯೋ ನಿನ್ನನ್ನು ಯಾಕಾದರೂ ಕಟ್ಟಿಕೊಂಡೆನೋ” ಎಂದು ಹಳಿಯುತ್ತಲೇ ಗಂಡ ಅಥವಾ ಹೆಂಡತಿ ಒಬ್ಬರನ್ನೊಬ್ಬರು ಅತ್ಯಂತ ಪ್ರೀತಿಸುವಂತೆ, ಈ ಟಿವಿಯನ್ನು ಮೂರ್ಖರ ಪೆಟ್ಟಿಗೆ ಎಂದು ಕರೆದು, ಅದನ್ನೇ ಮನೆಯ ಮುದ್ದು ಮಗುವಾಗಿಸಿದ್ದೇವೆ.
ಈ ದೂರದರ್ಶನದ ಬಗೆಗಿನ ಚರ್ಚೆ ಈಗಾಗಲೇ ಬಿಸಿ ಕಳೆದುಕೊಂಡು ಹಳಸಿದ್ದು, ಗೋರ್ಕಲ್ಲ ಮೇಲೆ… ಎಂಬಂತೆ ಆಗಿದ್ದರೂ ತಡೆಯಲಾಗದೆ ಮತ್ತೆ ಇದರ ಬಗ್ಗೆ ಮಾತು ತೆಗೆದುದರ ಕಾರಣ, ಇತ್ತೀಚಿಗೆ ಕಂಡು ಮನಸು ರೋಸಿ ಹೋದ ಕೆಲ ‘ದುರ್ದರ್ಶನಗಳು’.
ಅದೊಂದು ಕಾಲವಿತ್ತು,
ಕೇಬಲ್ ಚಾನೆಲ್ಲುಗಳ ಪದಾರ್ಥ ಗೊತ್ತಿಲ್ಲದ್ದು. ವಾರಕ್ಕೆ ಬರುತ್ತಿದ್ದ ಎರಡೇ ಸಿನೆಮಾಗಳನ್ನು ನೋಡಲು ಮನಸ್ಸು ಕಾಯುತ್ತಿತ್ತು. ರಂಗೋಲಿ, ಚಿತ್ರಮಂಜರಿಗಳು ರುಚಿಸುತ್ತಿದ್ದವು. ವಾರಕ್ಕೆ ಒಮ್ಮೆ ಬರುವ ಒಳ್ಳೆಯ ಧಾರಾವಾಹಿಗಳನ್ನು ಕಥೆ ನೆನಪಿಟ್ಟುಕೊಂಡು ನೋಡುತ್ತಿದ್ದೆವು.
ಅನೇಕ ಮಾಹಿತಿಯುಕ್ತ ಕಾರ್ಯಕ್ರಮಗಳು, ನಡು ನಡುವೆ ಕ್ರಿಯಾತ್ಮಕವಾದ ಕೆಲವೇ ಜಾಹೀರಾತುಗಳು.
ಒಮ್ಮೆ ಆ ದಿನಗಳನ್ನು ರಿವೈಂಡ್ ಮಾಡಿ ನೋಡಿ, ಈ “ಟಿವಿ ವಾಚಿಂಗ್” ಅನ್ನೋದು ಎಷ್ಟೋ ಗಂಭೀರವಾಗಿ, ಶಾಂತವಾಗಿ ಇತ್ತು, ‘ಇನ್ಫೋಟೈನ್ ಮೆಂಟ್’ ಎಂಬ ಪದದ ನಿಜ ಬಳಕೆ ಆಗುತ್ತಿತ್ತು. ಈಗ, ತಿರುವಿ ತಿರುವಿ ನೋಡಿ ಕೈ-ಕಣ್ಣು ಸೋಲುವ ನೂರೆಂಟು ಚಾನೆಲ್ಲುಗಳು. ವಾರ್ತಾಪ್ರಸಾರದಿಂದ ಮೊದಲಾಗಿ, ಎಲ್ಲದರಲ್ಲಿಯೂ ಕಾಮನ್ ಫ್ಯಾಕ್ಟರ್ ಎಂದರೆ ಗದ್ದಲ, ಆರ್ಭಟ, ರಂಜಕತೆ. ಜಾಹೀರಾತುಗಳ ನಡುವೆ ಬಿಕ್ಕುವ ‘ಬ್ರೇಕ್ ಕೆ ಬಾದ್’ ಕಾರ್ಯಕ್ರಮಗಳು. ಪ್ರತಿ ಚಾನೆಲ್ಲೂ ಪೈಪೋಟಿಯಿಂದ ದುಂಬಾಲು ಬೀಳುತ್ತಾ ‘ಮನ-ರಂಜನೆ’ ಮಾಡುವ ವಾಸ್ತು, ಸಂಖ್ಯಾಭವಿಷ್ಯ,
ಜ್ಯೋತಿಷ್ಯ ಜ್ಞಾನಭಂಡಾರಗಳು!

ಮೊನ್ನೆ ಹೀಗೆ ಕೆಲಸ ತೋಚದೆ ಟಿವಿ ಮುಂದೆ ಕೂತೆ. ಆಗ ಒಂದು ಚಾನೆಲ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ‘ಅಜ್ಜ-ಅಜ್ಜಿ ಯಂತ್ರ’ದ ಸಾಫಲ್ಯಗಳ ಬಗ್ಗೆ. ಬದಲಾಯಿಸಿ ನೋಡಿದರೆ ಅಲ್ಲಿ ಕಂಡದ್ದು ‘ನಿಮ್ಮ-ಜಯ-ಶ್ರೀನಿ-ವಾಸನ್’. ನಿಟ್ಟುಸಿರು ಬಿಟ್ಟು ಮತ್ತೆ ಬಟನ್ ಒತ್ತಿದರೆ “ಬುರೀ ನಸರ್ ಸುರಕ್ಷಾ ಕವಚ್”, ಹೀಗೆ ಮೂಢನಂಬಿಕೆಗಳ ಭಯದ ಪರಿಧಿಯಲ್ಲಿ ಬೇಯುತ್ತಿರುವ ನಮ್ಮನ್ನು ಮತ್ತಷ್ಟು ಮೂಢರನ್ನಾಗಿಸಿ ಹಣಗಳಿಸುವ ತಂತ್ರಗಳಿಗೆ ನಮ್ಮ ಜವಾಬ್ಧಾರೀ ಮಾಧ್ಯಮಗಳು ಸನ್ಮಾನಿಸುವ ಪರಿ. ಇಷ್ಟಕ್ಕೆ ಮುಗಿದೀತೇ, ಇನ್ನೊಂದರಲ್ಲಿ ನಿಮ್ಮ ಕಪ್ಪು ಚರ್ಮವನ್ನು ಒಂದೇ ವಾರದಲ್ಲಿ ಬಿಳುಪಾಗಿಸುತ್ತೇವೆ ಎಂಬ ಸತ್ಯಾನ್ವೇಷಣೆ, ನೀವು ಹೇಗೆ ಒಂದು ಬ್ರಾಂಡಿನ ಒಳ ಕುಪ್ಪಸವನ್ನು ಧರಿಸಿ ಎದುರಿಗಿರುವ ಹುಡುಗನ ಮನಸೂರೆಗೊಳಿಸಬಹುದು ಎಂಬ ಗುಟ್ಟು, ಪಕ್ಕದ ಮನೆಯವರಿಗಿಂತ ಒಳ್ಳೆ ಪೀಠೋಪಕರಣ ಉಪಯೋಗಿಸಿ ಅವರನ್ನು ಈರ್ಷ್ಯೆಗೆ ಗುರಿಪಡಿಸಬಹುದು ಎಂಬ ಉಪಾಯ. ಪುಟ್ಟ ಹುಡುಗ ಒಂದು ಪೇಯ ಕುಡಿದು ಹೇಗೆ ತಿಂಗಳಲ್ಲೇ ಎಲ್ಲರಿಗಿಂದ ಉದ್ದ ಬೆಳೆದು ಬಿಟ್ಟ ಎಂಬ ಮ್ಯಾಜಿಕ್. ಇನ್ನು ನ್ಯೂಸ್ ಚಾನೆಲ್ಲುಗಳು ನೋಡಲು ಕೂತರೆ ಒಬ್ಬ ಪ್ರೇಯಸಿ ಹೇಗೆ ತನ್ನ ಪ್ರಿಯಕರನಿಗಾಗಿ ಗಂಡನನ್ನು ಕೊಂದಳು, ಈ ಘಟನೆಯಿಂದ ಸಮಾಜದ ಕೆಲ ‘ಘನತೆವೆತ್ತ’ ಜನರಿಗೆ ಏನನಿಸುತ್ತದೆ ಎಂಬುದರ ದಿನಗಟ್ಟಲೆ ಲೈವ್ ಕವರೇಜು.
ಕೆಲವರಿಗೆ ನಾನು ಭಾವನೆಗಳ ಅಪಹಾಸ್ಯ ಮಾಡುತ್ತಿದ್ದೇನೆ ಎನಿಸಬಹುದು.
ಇಲ್ಲಿ ನನ್ನ ಉದ್ದೇಶ ಅದಲ್ಲ. ಖ್ಯಾತ ದೂರದರ್ಶನ ಪರಿಚಾರಕ ವೂಡಿ ಆಲೆನ್: “Life doesn’t imitate art, it imitates bad television” ಎಂದು ಹೇಳುತ್ತಾರೆ. ಇದು ನಮ್ಮೆಲ್ಲರ ಮಟ್ಟಿಗೆ ಸತ್ಯ. ಸಾಕಷ್ಟು ಬಾರಿ ತೆರೆಯ ಮೇಲೆ ನಮ್ಮನ್ನು ನಾವೇ ನೋಡಿಕೊಂಡಿರುತ್ತೇವೆ. ಆ ಟಿವಿ ಪರದೆಯ ನಟ ನಟಿಯರು ನಮ್ಮ ಜೀವನದಲ್ಲಿ ಒಮ್ಮೆ ಇಣುಕಿರುತ್ತಾರೆ. ನಮಗರಿವಿಲ್ಲದೆಯೇ ನಾವು ಕೆಲವು ಬೇಡದ ವಿಚಾರಗಳನ್ನು ನಮ್ಮದಾಗಿಸಿ ಬಿಡುತ್ತೇವೆ. ಮತ್ತಿದು ಮಕ್ಕಳಲ್ಲಿ ಇನ್ನೂ ಘಾಢವಾಗಿ ಪಸರಿಸಿಬಿಡುತ್ತದೆ. ತೆರೆಯ ಮೇಲೆ ಕಂಡ ಆ ಥಳುಕು ನಿಜ ಎಂದು ನಂಬುತ್ತಾರೆ,
ಹಾಗೆಯೇ ಬೆಳೆದು ಬಿಡುತ್ತಾರೆ.
ಈ ಮಾತುಗಳನ್ನು ಹೇಳುವಾಗ ನಾನು ಸಿನಿಕಳಾಗಿ ಮಾತನಾಡುತ್ತಿಲ್ಲ. ಇಂದಿಗೂ ದೂರದರ್ಶನದಲ್ಲಿ ಕೆಲವಾರು ಒಳ್ಳೆಯ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ. ಇದನ್ನು ಅಲ್ಲಗಳೆದರೆ ತಪ್ಪಾಗುತ್ತದೆ. ಆದರೆ ಹಿಂದೆ ಇದ್ದ ಟಿವಿಯ ಪ್ರಮಾಣ, ಗುಣಮಟ್ಟಗಳನ್ನು ಕಂಡರೆ ಈಗ ಕಡಿಮೆಯಾಗಿರುವುದು ಖಂಡಿತ ಹೌದು. ಇದು ನಮ್ಮ ಕನ್ಸ್ಯೂಮರಿಸಮ್ ನ ಪ್ರಣಯ ಪ್ರಸಂಗ ಎಂದೂ ಹೇಳಬಹುದು. ಈಗ ನಮಗೆ ಲಭ್ಯವಿರುವ ಉನ್ನತ ಮಟ್ಟದ ತಂತ್ರಜ್ಞಾನ ಬಳಸಿ ದೂರದರ್ಶನವನ್ನು ನಿಜಕ್ಕೂ ಆದರ್ಶದಾಯಕ, ಪ್ರಿಯವಾಗುವಂತೆ ಮಾಡಬಹುದೇ? ಇದಕ್ಕೆ ಟಿವಿ ಚಾನೆಲ್ಲುಗಳ ಪರಿಚಾರಕರು, ನಮ್ಮನ್ನು ತಮ್ಮ ಬಲೆಗೆ ಬೀಸುವ ಬಂಡವಾಳಶಾಹಿಗಳು ಹಾಗೂ ನಾಡಿನ ಜನತೆಯಾದ ನಾವು ತಯಾರಿದ್ದೇವೆಯೇ?

‍ಲೇಖಕರು avadhi-sandhyarani

February 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಗುಡ್ , ಒಳ್ಳೆ ಕೆಲಸ ಮಾಡಿದಿರಿ . ದೂರದರ್ಶನದ ಅವಾಂತರ ಎಲ್ಲರಿಗು ಗೊತ್ತಿದ್ದರು ಅದರ ಹಿಂದಿರುವ ಬಂಡವಾಳಶಾಹಿಗಳ ಸ್ವಾರ್ಥದ ಆಶಯಗಳು
    ನಿಜಕ್ಕೂ ಬಹಳ ಅಪಾಯಕಾರಿ ಎಂದೇ ಹೇಳಬಹುದು . ಗಾಂಧೀಜಿ ,ರಾಜಾರಾಮಮೊಹನರಾಯ್ ,ದಯಾನಂದಸರಸ್ವತಿ ,ವಿವೇಕಾನಂದ ,ಬುದ್ಧ ,ಬಸವಣ್ಣ ,ಅಂಬೇಡ್ಕರ್ ಮುಂತಾದ ಅನೇಕ ಸುಧಾರಕರ ಪ್ರಯತ್ನಗಳನ್ನೆಲ್ಲ ಕುಟ್ಟಿ ಪುಡಿ ಮಾಡುತ್ತಿರುವ ಇಂದಿನ ಜಾಗತೀಕರಣದ ಸಂಚಿನ ಪ್ರಬಲ
    ಅಸ್ತ್ರವಾಗಿದೆ ಈ ದೂರದರ್ಶನ . ಇದನ್ನು ಅರ್ಥಮಾಡಿಕೊಳ್ಳದೆ ಹೋದರೆ ಇಡೀ ಮಾನವತೆ ನೀಚ ಮಟ್ಟವನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ .

    ಪ್ರತಿಕ್ರಿಯೆ
  2. Gopaal Wajapeyi

    ನಾನು TVಯಲ್ಲಿ ANIMAL PLANET, NATIONAL GEOGRAPHICSಗಳನ್ನು ಆಸ್ಥೆಯಿಂದ ನೋಡುತ್ತೇನೆ. ಸೀರಿಯಲ್ಲುಗಳನ್ನು ನೋಡೋದೇ ಇಲ್ಲ. ಬೇರೆ ಬೇರೆ ದೇಶಗಳ ಪರ್ಯಟನದ ಕಾರ್ಯಕ್ರಮಗಳು ಎರಡನೆಯ ಆಯ್ಕೆ. ಮನೆಯಾಕೆ ಮಾಡಿದ ಅಡಿಗೆ ಬೇಸರವೆನಿಸಿದರೆ ಬೇರೆ ಬೇರೆ ರಾಜ್ಯಗಳ ಅಡಿಗೆಗಳ ಕಾರ್ಯಕ್ರಮಗಳತ್ತ ಗಮನ ಹರಿಸೋದು. ತೆಲುಗಿನ ‘ಮಾ ಊರಿ ಒಂಟ’ ನನಗೆ ತುಂಬ ಇಷ್ಟ. ನ್ಯೂಸ್ ಚಾನಲ್ಲುಗಳನ್ನು ನೋಡೋದೇ ಇಲ್ಲ. ಟೈಮ್ ವೇಸ್ಟ್.
    ಇನ್ನು ನಮ್ಮ ‘ಚಂದನ’ದ ‘ಥಟ್ ಅಂತ ಹೇಳಿ’ ತಪ್ಪಿಸಿಕೊಳ್ಳೋದಿಲ್ಲ.

    ಪ್ರತಿಕ್ರಿಯೆ
  3. Vasuki

    ವುಡೀ ಅಲ್ಲೇನ್ ಅವರ ‘ಆನೀ ಹಾಲ್’ ಚಿತ್ರದಲ್ಲಿ ಹೀಗೊಂದು ಡೈಲಾಗ್ ಬರುತ್ತದೆ:
    (‘ವಾಹ್, ಕಾಲಿಫೋರ್ನೀಯ ಎಷ್ಟು ಕ್ಲೀನ್ ಆಗಿ ಚನ್ನಾಗಿ ಇದೆ’ ಅಂತ ಆನೀ ಹೇಳಿದಾಗ, ನ್ಯೂಯೋರ್ಕ್ ಅನ್ನು ತುಂಬಾ ಇಷ್ಟ ಪಡೋ ಆಲ್ವೀ ಹೀಗೆ ಹೇಳುತ್ತಾನೆ)
    This city is clean because they dont throw their garbage out, they turn them into television shows! 🙂

    ಪ್ರತಿಕ್ರಿಯೆ
  4. Subrahmanya

    ಚಂದದ ಲೇಖನ , ಎಲ್ಲರ ಮನಸ್ಸಿನ ಮಾತು ಇದು. ದೂರದರ್ಶನ (DD National) ಮಾತ್ರ ಬರುತ್ತಿದ್ದಾಗಿನ ಕಾಲವೇ ಉತ್ತಮ ಎನ್ನಿಸುತ್ತದೆ. ಈಗಲೂ DD ೧ ನೋಡಿದಾಗಲೆಲ್ಲ ಬಾಲ್ಯದ ನೋಸ್ಟಾಲ್ಜಿಯಾ ಬರುತ್ತದೆ. ಆ ಮಹಾಭಾರತ, ಆ ಶಕ್ತಿಮಾನ್ ಎಲ್ಲವೂ ಎಷ್ಟು ಸುಂದರವಾಗಿ ಬರುರ್ರಿದ್ದವು ಅಲ್ಲ ಎನ್ನಿಸುತ್ತದೆ. ನೀವು ಹೇಳಿದ ಹಾಗೆ ಈಗ ನೂರೆಂಟು ಚಾನೆಲ್ ಗಳು ಬಂದರೂ ಒಂದನ್ನೂ ನೋಡಬೆಕೆನ್ನಿಸುವುದಿಲ್ಲ. ನಾನು ನಮ್ಮ ನ್ಯೂಸ್ ಚಾನೆಲ್ ಗಳನ್ನೂ ನೋಡಿದಾಗಲಂತೂ ನಮ್ಮ ರಾಜಕಾರಣಿಗಳನ್ನು ಕಂಡಷ್ಟೇ ಅಸಹ್ಯ ಪಟ್ಟುಕೊಳ್ಳುತ್ತೇನೆ. ಮಸಾಲ ನ್ಯೂಸ್ ಗಳು , ತಕ್ಕ ಥೈ ಕುಣಿತಗಳು , ಅರ್ಥವಿರದ ಚರ್ಚೆಗಳು , ಕೆಲಸವಿಲ್ಲದವರ ಲೈವ್ ಸಂದರ್ಶನಗಳು, ಹತ್ತಾರು ವರ್ಷಗಳಿಂದ ಬರುತ್ತಿರುವ ಅದೇ ಅತ್ತೆ ಸೊಸೆ ಮೆಗಾ ಧಾರಾವಾಹಿಗಳು ಇವೆಲ್ಲ ಸೇರಿಕೊಂಡು ಟಿ. ವಿ. ಯನ್ನು ಮಾರುದೂರ ಇಡುವಂತೆ ಮಾಡಿಬಿಡುತ್ತವೆ ಈಗಲೂ ಸ್ವಲ್ಪ ಅರ್ಥವನ್ನು (though with their eternal lameness) ಉಳಿಸಿಕೊಂಡಿರುವ ಚಾನೆಲ್ ಗಳೆಂದರೆ ದೂರದರ್ಶನ್ ಚಾನೆಲ್ ಗಳು (ಚಂದನ, DD ೧ ಇತ್ಯಾದಿ) . ಸಕಾಲಿಕ ಬರಹ.

    ಪ್ರತಿಕ್ರಿಯೆ
  5. Pramod

    ಚಾನೆಲ್ ಗಳಿರುವುದೇ ಚೇ೦ಜ್ ಮಾಡೋದಿಕ್ಕೆ. ನೋಡೋದಿಕ್ಕಲ್ಲ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: